ಸಲೀಂ ಕುಮಾರ್, ವ್ಯಂಗ್ಯವನ್ನೇ ಭಾಷೆಯಾಗಿಸಿ, ಭಾಷೆಯನ್ನೂ ವ್ಯಂಗ್ಯವಾಗಿಸಿ ಹಾಸ್ಯದ ರುಚಿ ಹೆಚ್ಚಿಸಿದ ಕಲಾವಿದ. ಮಾಯಾವಿ ಚಿತ್ರದಲ್ಲಿ, ಮಾಯಾವಿ ಎನ್ನುವುದು ಸಲೀಂ ಉಚ್ಚರಿಸುವಾಗ 'ಮ್ಯಾಯಾವಿ' ಆಗುತ್ತದೆ. ಡೈಮಂಡ್ ನೆಕ್ಲೇಸ್ ಎನ್ನುವುದು 'ರೈಮನ್ ನಕ್ಸಲೈಟ್' ಆಗುತ್ತದೆ. ಅವರ ಇಂಗ್ಲಿಷ್ ಮಿಶ್ರಿತ ಮಲಯಾಳಂ ಡೈಲಾಗ್ಗಳಂತೂ ಬಹಳ ಜನಪ್ರಿಯ. ಕಣ್ಣಿನ ಮೂಲಕ ನಟಿಸುವವರ ನಡುವೆ ಧ್ವನಿಯ ಮೂಲಕ ನಟಿಸುತ್ತಿದ್ದ ಸಲೀಂ, ತಮ್ಮ ಧ್ವನಿಯನ್ನೇ ದುಡಿಸಿ ಗೆದ್ದವರು.
ರಾತ್ರಿ ಬೆಳಗಾಗುವುದರೊಳಗೆ, ನಗುವೊಂದು ಮರೆಯಾಯಿತು. ತಾರೆಯಾಗಿ ಮಿನುಗುತ್ತಲೇ, ಸದಾ ಕಣ್ಣಂಚಲ್ಲಿ ವಾಸ್ತವತೆಯ ಅರಿವಿನ ಹನಿಯೊಂದು ಜಿನುಗುತ್ತಲೇ ರೆಪ್ಪೆ ಮುಚ್ಚಿಕೊಂಡು ಮುತ್ತಾಯಿತು. ಮೂರು ದಶಕಗಳ ಕಾಲ ಮಲಯಾಳಂ ಚಿತ್ರರಂಗದಲ್ಲಿ ಹಲವು ಮರೆಯಲಾಗದ ಪಾತ್ರಗಳಲ್ಲಿ ಜೀವಿಸಿ, ಅಚ್ಚಳಿಯದ ಹೆಜ್ಜೆಗಳನ್ನು ಅಚ್ಚೊತ್ತಿದ ಹಾಸ್ಯನಟ ‘ಸಲೀಂ ಕುಮಾರ್'(57), ಹೃದಯಾಘಾತದಿಂದ ಭಾನುವಾರ ತಡರಾತ್ರಿ (ಜೂನ್ 6) ನಿಧನರಾದರು. ಅವರಿಗೆ ಪತ್ನಿ ಸುನಿತಾ ಕುಮಾರ್, ಪುತ್ರರಾದ ಯುವ ನಟ ಚಂದು, ಆರೊಮಲ್ ಕುಮಾರ್ ಇದ್ದಾರೆ.
ಎರ್ನಾಕುಲಂ ಜಿಲ್ಲೆಯ ಪರವೂರ್ ತಾಲ್ಲೂಕಿನ ಚಿತ್ತಾಟ್ಟುಕರ ಎಂಬಲ್ಲಿ ತಂದೆ ಗಂಗಾಧರನ್- ಕೌಸಲ್ಯಾ ದಂಪತಿಯ ಮಗನಾಗಿ 1969ರ ಅಕ್ಟೋಬರ್ 10ರಂದು ಜನನ. ನಾಸ್ತಿಕರಾಗಿದ್ದ ಗಂಗಾಧರನ್, ತಮ್ಮ ಮಗನಿಗೆ ‘ಸಲೀಂ’ ಎಂದು ಹೆಸರಿಟ್ಟರು. ನಂತರ, ಶಾಲೆಗೆ ಸೇರಿಸುವಾಗ ಗೊಂದಲ ನಿವಾರಿಸಲು ಹೆಸರಿನ ಮುಂದೆ ‘ಕುಮಾರ್’ ಸೇರಿಸಿದರು. ಸ್ವತಃ ಸಲೀಂ ಕೂಡ ನಾಸ್ತಿಕರಾಗಿಯೇ ಬದುಕಿದವರು.
ಇದನ್ನು ಓದಿದ್ದೀರಾ? ಕನ್ನಡದ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ
‘ಜೀವನ ಒಂದು ಪ್ರವಾಸ ಅಷ್ಟೆ. ಒಂದು ನಿರ್ದಿಷ್ಟ ದಿನ ಭೇಟಿ ಕೊಟ್ಟು, ಕೊನೆಗೊಮ್ಮೆ ಹೊರಟುಹೋಗುತ್ತೇವೆ. ಈ ವಾಸ್ತವದ ಅರಿವಿದ್ದ ಮೇಲೆ ಬದುಕಿನ ಪ್ರತಿ ಹೆಜ್ಜೆಯನ್ನೂ ಬಹಳಷ್ಟು ಎಚ್ಚರದಿಂದ ಇಟ್ಟು ಬದುಕಬೇಕು ಎಂದು ಏಕೆ ಭಾವಿಸಬೇಕು. ಇದ್ದಷ್ಟು ದಿನ ನಿರಾಳವಾಗಿ ಬದುಕಬೇಕು. ನನ್ನ ಬದುಕಿನ ಯಾತ್ರೆ ಎಲ್ಲಿ ಮುಗಿಯುತ್ತದೆ ಎನ್ನುವುದು ನನಗೆ ಖಚಿತವಾಗಿ ಗೊತ್ತಿದೆ. ರಾಷ್ಟ್ರ ಪ್ರಶಸ್ತಿ ಗಳಿಸಿದರೂ, ಆಸ್ಕರ್ ಗಳಿಸಿದರೂ, ಬದುಕಿಗೊಂದು ಕೊನೆ ಇದ್ದೇ ಇದೆ. ಅದು ಐ.ಸಿ.ಯು ಎನ್ನುವ ಮೂರಕ್ಷರದ ಬಾಗಿಲಿನೊಳಗೆ ಮುಗಿಯುತ್ತದೆ’ ಎಂದು ಸಂದರ್ಶನವೊಂದರಲ್ಲಿ ಸಲೀಂ ಹೇಳಿದ್ದರು. ಮಾತಿನಂತೆ, ಕೊಚ್ಚಿಯ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಭಾನುವಾರ ಬೆಳಿಗ್ಗೆ ದಾಖಲಾಗಿದ್ದ ಅವರು, ತಡರಾತ್ರಿಯ ವೇಳೆಗೆ ಬದುಕಿನ ಪಯಣ ಮುಗಿಸಿದರು. ಹಲವು ವರ್ಷಗಳಿಂದ ವಂಶವಾಹಿಯಾಗಿ ಬಾಧಿಸಿದ್ದ ಲಿವರ್ ಸಂಬಂಧಿ ಕಾಯಿಲೆಯಿಂದ ಅವರು ಬಳಲುತ್ತಿದ್ದರು.
ಸಾವಿನ ಬಗ್ಗೆ ಹತ್ತು ಬಾರಿ ಸುಳ್ಳು ಸುದ್ದಿ
ಸಲೀಂ ಅನಾರೋಗ್ಯದ ಬಗ್ಗೆ ಕೇರಳಿಗರಿಗೆ ಮೊದಲೇ ಗೊತ್ತಿತ್ತು. ಹಾಗಾಗಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೂ ಅವರು ಆಸ್ಪತ್ರೆಗೆ ದಾಖಲಾದಾಗ ಅವರು ಸತ್ತರೆಂಬ ಸುದ್ದಿ ಹಬ್ಬಿಸಲಾಗುತ್ತಿತ್ತು. ಐ.ಸಿ.ಯುನಲ್ಲಿ ಕಳೆದ ಅನುಭವಗಳ ಬಗ್ಗೆ ನೆನಪಿಸುತ್ತ ಭಾವುಕರಾಗುತ್ತಿದ್ದ ಸಲೀಂ, ನನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಜನ ಹತ್ತು ಬಾರಿ ಕೊಂದಿದ್ದಾರೆ. ನಾನು ಆಸ್ಪತ್ರೆಗೆ ಹೋದಾಗೆಲ್ಲ ಸಾವಿನ ಸುದ್ದಿ ಹಬ್ಬಿಸುತ್ತಾರೆ. ಮಲಯಾಳಿಗಳಿಗೆ ಇನ್ನೊಬ್ಬರ ಸಾವು ಎಂದರೆ ಅಷ್ಟು ಇಷ್ಟ’ ಎಂದು ವ್ಯಂಗ್ಯಭರಿತ ನೋವಿನೊಂದಿಗೆ ನುಡಿದಿದ್ದರು.
ಹಾಸ್ಯನಟರೇ ಮಲಯಾಳಂ ಚಿತ್ರರಂಗವನ್ನು ಆಳುತ್ತಿದ್ದ 90ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಸಲೀಂ ಕುಮಾರ್, ಭಾಷೆಯನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಆಡುವ ಮೂಲಕ, ಹಲವು ಹಾಸ್ಯ ದಿಗ್ಗಜರ ನಡುವೆ ತಮ್ಮದೇ ಸ್ಥಾನವನ್ನು ಕಂಡುಕೊಂಡರು. 1996ರಲ್ಲಿ ಬಿಡುಗಡೆಯಾದ ‘ಇಷ್ಟಮಾನು ನೂರುವಟ್ಟಂ’ ಅವರ ನಟನೆಯ ಮೊದಲ ಚಿತ್ರವಾದರೂ, ಹೆಸರು ತಂದುಕೊಟ್ಟ ಮೊದಲ ಸಿನಿಮಾ 2000ದಲ್ಲಿ ತೆರೆಕಂಡ ‘ತೆಂಗಾಶಿಪಟ್ಟಣಂ’. ಸುರೇಶ್ ಗೋಪಿ, ಲಾಲ್, ದಿಲೀಪ್, ಕಾವ್ಯ ಮಾಧವನ್ ಮುಂತಾದವರು ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ, ಮುತ್ತುರಾಮನ್ ಪಾತ್ರದ ಮೂಲಕ ಸಲೀಂ ಕುಮಾರ್ ಪ್ರೇಕ್ಷಕರ ಗಮನ ಸೆಳೆದರು.
ಸಿನಿಮಾ ರಂಗಕ್ಕೆ ಕಾಲಿಡುವ ಮೊದಲು, ಖಾಸಗಿ ಟಿವಿ ವಾಹಿನಿಯೊಂದರಲ್ಲಿ ಹಾಸ್ಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಅವರ ಹಾಸ್ಯ ಕಾರ್ಯಕ್ರಮಗಳನ್ನು ಗಮನಿಸಿದ ಚಿತ್ರ ನಿರ್ದೇಶಕರೊಬ್ಬರು ಸಿನಿಮಾದಲ್ಲಿ ಅವಕಾಶ ಕೊಟ್ಟರು. ನಟನೆಗಾಗಿ ಚಿತ್ರೀಕರಣದ ಸ್ಥಳಕ್ಕೆ ಹೋಗಿ ನಟಿಸಲು ಶುರು ಮಾಡಿದಾಗ, ‘ನಿನಗೆ ನಟಿಸಲು ಬರುವುದಿಲ್ಲ’ ಎಂದು ಹಿಂದಕ್ಕೆ ಕಳುಹಿಸಿದರು. ಬಾಲ್ಯದಲ್ಲಿ ಗಾಯಕನಾಗಬೇಕೆಂದು ಕನಸು ಕಂಡಿದ್ದ ಸಲೀಂಗೆ, ಶಾಲೆಯ ವಾರ್ಷಿಕ ಸ್ಪರ್ಧೆಯಲ್ಲಿ ತೃತೀಯ ಸ್ಥಾನವೂ ಸಿಗದೆ ಇದ್ದಾಗ, ಶಿಕ್ಷಕಿಯೊಬ್ಬರು ಕರೆದು, ಹಾಡು ಮೆಚ್ಚಿಗೆಯಾಗದ ವಿಷಯ ತಿಳಿಸಿದ್ದರು. ನೋವು ನುಂಗಿಕೊಂಡ ಹುಡುಗ, ಮತ್ತೆ ಮುಖ ಮಾಡಿದ್ದು ಮಿಮಿಕ್ರಿ ಕಡೆಗೆ. ಪ್ರಾಣಿ, ಪಕ್ಷಿ, ವಾಹನಗಳ ಶಬ್ಧ ಅನುಕರಿಸುತ್ತ, ಕಾಲೇಜಿನಲ್ಲಿ ತಮ್ಮ ಹೆಸರು ಅಚ್ಚೊತ್ತುವಂತೆ ಬೆಳೆದರು.
ರಂಗಭೂಮಿಯ ಕಡೆ ಹೊರಳಿದಾಗ, ಮೊದಲ ನಾಟಕದಲ್ಲಿ ಸಿಕ್ಕಿದ್ದು ಪೊಲೀಸ್ ವೇಷ. ಅದೂ, ನಾಟಕದ ಕೊನೆಯಲ್ಲಿ ವೇದಿಕೆಗೆ ಬಂದು, ನ್ಯಾಯಾಧೀಶನ ಆದೇಶದಂತೆ ಆರೋಪಿಯನ್ನು ಬಂಧಿಸಿ ಕರೆದೊಯ್ಯುವ ಒಂದೇ ಒಂದು ದೃಶ್ಯ. ದುರಂತ ಹೇಗಿತ್ತೆಂದರೆ, ನ್ಯಾಯಾಧೀಶನ ಪಾತ್ರಧಾರಿ, ‘ಆರೋಪಿಯನ್ನು ಬಂಧಿಸಿ’ ಎಂಬ ಡೈಲಾಗು ಹೇಳುವುದನ್ನೇ ಮರೆತುಬಿಟ್ಟ. ಮೊದಲ ನಾಟಕಕ್ಕೆ ತೆರೆ ಬೀಳುವಾಗ, ಸಲೀಂ ಪೊಲೀಸ್ ವೇಷ ಧರಿಸಿ ವೇದಿಕೆಯ ಹಿಂದೆ ತನ್ನ ಸರದಿಗಾಗಿ ಕಾಯುತ್ತ ನಿಂತುಕೊಂಡೇ ಇದ್ದ.
ಇದನ್ನು ಓದಿದ್ದೀರಾ? ಮಲಯಾಳಂನ ಹಿರಿಯ ನಟ ಮಾಮುಕೋಯ ಇನ್ನಿಲ್ಲ
ನಿರಾಸೆ, ಅವಮಾನ, ಅವಕಾಶ ವಂಚನೆಗಳ ನಡುವೆ ಕನಸುಗಳನ್ನು ಸುಟ್ಟುಕೊಂಡು ಬೆಳೆದ ಹುಡುಗ, ನಂತರ ಕೊಚ್ಚಿಯ ಕಲಾಭವನ್, ಆರತಿ ಥಿಯೇಟರ್ ನೊಂದಿಗೆ ರಂಗಭೂಮಿಯ ನಂಟು ಬೆಳೆಸುತ್ತಾನೆ. ನಾಲ್ಕು ಜನ ಗುರುತಿಸುವಂತೆ ಬೆಳೆಯಬೇಕೆಂಬ ಹಸಿವು ಆತನನ್ನು ಬೆಳೆಸುತ್ತದೆ. ಅಂದು ಮುಖಕ್ಕೆ ಹೊಡೆದಂತೆ ಟೀಚರ್ ನುಡಿದಿದ್ದ ಕಹಿಸತ್ಯ, ಬಡಪಾಯಿ ಹುಡುಗನನ್ನು ರಾಷ್ಟ್ರಪ್ರಶಸ್ತಿ ವಿಜೇತ ನಟ ಸಲೀಂ ಕುಮಾರ್ ಆಗಿ ರೂಪಿಸಿತು.
ಸಲೀಂ, ವ್ಯಂಗ್ಯವನ್ನೇ ಭಾಷೆಯಾಗಿಸಿ, ಭಾಷೆಯನ್ನೂ ವ್ಯಂಗ್ಯವಾಗಿಸಿ ಹಾಸ್ಯದ ರುಚಿ ಹೆಚ್ಚಿಸಿದ ಕಲಾವಿದ. ‘ಪುಲಿವಾಲ್ ಕಲ್ಯಾಣಂ’ನ ಮಣವಾಲನ್, ಕಲ್ಯಾಣರಾಮನ್ ಚಿತ್ರದ ‘ಪ್ಯಾರಿ’, ಸಿಐಡಿ ಮೂಸ’ ಚಿತ್ರದ ಹುಚ್ಚನ ಪಾತ್ರ, ‘ಮಾಯಾವಿ’ ಕಣ್ಣನ್ ಸ್ರಾಂಕ್, ಚದಿಕ್ಕಾತ ಚಂದುವಿನ ಡಾನ್ಸ್ ಮಾಸ್ಟರ್, ‘ಮೀಸ ಮಾಧವನ್’ ಚಿತ್ರದ ಅಡ್ವಕೇಟ್ ಮುಕುಂದನ್ ಉನ್ನಿ ಪಾತ್ರಗಳು ಮಲಯಾಳಂ ಸಿನಿಪ್ರೇಕ್ಷಕರು ಮನದಲ್ಲಿ ಎಂದಿಗೂ ನೆಲೆಯೂರಿ ನಿಲ್ಲುವಂಥವು. ಮಾಯಾವಿ ಚಿತ್ರದಲ್ಲಿ, ಮಾಯಾವಿ ಎನ್ನುವುದು ಸಲೀಂ ಉಚ್ಚರಿಸುವಾಗ ‘ಮ್ಯಾಯಾವಿ’ ಆಗುತ್ತದೆ. ಡೈಮಂಡ್ ನೆಕ್ಲೇಸ್ ಎನ್ನುವುದು ‘ರೈಮನ್ ನಕ್ಸಲೈಟ್’ ಆಗುತ್ತದೆ. ಅವರ ಇಂಗ್ಲಿಷ್ ಮಿಶ್ರಿತ ಮಲಯಾಳಂ ಡೈಲಾಗ್ಗಳಂತೂ ಬಹಳ ಜನಪ್ರಿಯ. ಕಣ್ಣಿನ ಮೂಲಕ ನಟಿಸುವವರ ನಡುವೆ ಧ್ವನಿಯ ಮೂಲಕ ನಟಿಸುತ್ತಿದ್ದ ಸಲೀಂ, ತಮ್ಮ ಧ್ವನಿಯನ್ನೇ ದುಡಿಸಿ ಗೆದ್ದವರು.
ಗಂಭೀರ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ
ಮಲಯಾಳಂ ಚಿತ್ರರಂಗದಲ್ಲಿ ಅತ್ಯುತ್ತಮ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದ ಮಮ್ಮುಟ್ಟಿ, ಮೋಹನ್ ಲಾಲ್ ಅವರಂತಹ ದೈತ್ಯ ನಟರ ನಡುವೆ ಇಬ್ಬರು ಹಾಸ್ಯನಟರು ತಮ್ಮ ಗಂಭೀರ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಸಲೀಂ ಕುಮಾರ್ ಹಾಗೂ ಸುರಾಜ್ ವೆಂಜಾರಮೂಡ್. ‘ಆದಮಿಂಡೆ ಮಗನ್ ಅಬು’ ಸಿನಿಮಾದ ಅಬುವಿನ ಪಾತ್ರದಲ್ಲಿ ಸಲೀಂ ಅವರ ಮನೋಜ್ಞ ನಟನೆ ಇಡೀ ಚಿತ್ರರಂಗವನ್ನು ಬೆರಗುಗೊಳಿಸಿತ್ತು. ಹಾಸ್ಯನಟನೊಬ್ಬ ಗಂಭೀರ ಪಾತ್ರವನ್ನು ಇಷ್ಟು ಪರಿಣಾಮಕಾರಿಯಾಗಿ ನಟಿಸಿದ್ದು ಅಚ್ಚರಿ ಮೂಡಿಸಿತ್ತು. ಅಂದಹಾಗೆ, ಭಾರತದಿಂದ ಆಸ್ಕರ್ ಪ್ರವೇಶ ಪಡೆದ ಎರಡನೇ ಮಲಯಾಳಂ ಸಿನಿಮಾ ಇದು.
ಅಚ್ಚನುರಙಾತ್ತ ವೀಡು, ಪೆರುಮಝಕ್ಕಾಲಂ ಸಲೀಂ ಕುಮಾರ್ ನಟಿಸಿದ ಗಂಭೀರ ಪಾತ್ರದ ಸಿನಿಮಾಗಳು. ಹಾಸ್ಯ ಪಾತ್ರಗಳ ಸಿನಿಮಾಗಳಲ್ಲಿಯೂ, ನಗಿಸುತ್ತಲೇ ಕಣ್ಣೀರಾಗಿಸುವ ಭಾವುಕ ನಟನೆಯ ದೃಶ್ಯಗಳೂ ಗಮನಾರ್ಹ. ‘101 ವೆಡ್ಡಿಂಗ್ಸ್’ ಸಿನಿಮಾದಲ್ಲಿ ಚಿತ್ರದುದ್ದಕ್ಕೂ ನಗಿಸುತ್ತ ಸಾಗುವ ಸಲೀಂ, ಕೊನೆಯ ಒಂದು ಡೈಲಾಗ್ನಲ್ಲಿ ಪ್ರೇಕ್ಷಕರನ್ನು ಮೌನವಾಗಿಸುತ್ತಾರೆ. ರಾಷ್ಟ್ರಪ್ರಶಸ್ತಿ, ಕೇರಳ ಫಿಲಂಫೇರ್ ಪ್ರಶಸ್ತಿ, ನಾಲ್ಕು ಬಾರಿ ಕೇರಳ ರಾಜ್ಯ ಪ್ರಶಸ್ತಿ ಸೇರಿದಙತೆ ಹಲವು ಪ್ರಶಸ್ತಿ ಗಳಿಸಿರುವ ಅವರು, 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕದಲದ ರಾಜಕೀಯ ನಿಲುವು
ಸಲೀಂ ಕುಮಾರ್, ಸಾಮಾಜಿಕ ಜೀವನದಲ್ಲಿ ಮೊದಲಿನಿಂದಲೂ ತಮ್ಮ ರಾಜಕೀಯ ನಿಲುವುಗಳನ್ನು ವ್ಯಕ್ತಪಡಿಸುತ್ತಲೇ ಬಂದವರು. ಕಳೆದೆರಡು ದಶಕಗಳಿಂದ ಕಾಂಗ್ರೆಸ್ ಬೆಂಬಲಿಗರಾಗಿಯೇ ಗುರುತಿಸಿಕೊಂಡ ಅವರು ಕೇರಳದ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಪರವಾಗಿ ಅವರ ರಾಜಕೀಯ ಜೀವನದ ಆರಂಭದ ಅವಧಿಯಿಂದ ಮುಖ್ಯಮಂತ್ರಿ ಪಟ್ಟಕ್ಕೇರುವವರೆಗೂ ಪ್ರಚಾರ ನಡೆಸಿದ್ದರು. ಈಚೆಗೆ ಯುಡಿಎಫ್ ಪರ ಪ್ರಚಾರ ನಡೆಸಿದ್ದರಿಂದ ಕೇರಳ ಕಮ್ಯುನಿಸ್ಟ್ ಪಕ್ಷದ ಬೆಂಬಲಿಗರಿಂದ ತೀವ್ರ ಟ್ರೋಲ್ಗೆ ಒಳಗಾದರು.
‘ನನ್ನ ರಾಜಕೀಯ ನಿಲುವು ವೈಯಕ್ತಿಕ. ಅದಕ್ಕೂ ನನ್ನ ಗೆಳೆತನಕ್ಕೂ, ಸಿನಿಮಾಗಳಿಗೂ ಸಂಬಂಧವಿಲ್ಲ. ರಾಜಕೀಯ ನಿಲವಿನ ಕಾರಣಕ್ಕೆ ಒಂದು ಸಿನಿಮಾ ಅವಕಾಶ ಸಿಗದೆ ಇದ್ದರೆ ಅಂತಹ ಸಿನಿಮಾಗಳಲ್ಲಿ ನಟಿಸುವ ಅಗತ್ಯ ನನಗೂ ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದರು ಸಲೀಂ.
ಸಲೀಂ, ಕೇವಲ ನಟರಷ್ಟೇ ಅಲ್ಲ, ಯಶಸ್ವಿ ನಿರ್ದೇಶಕ ಕೂಡ ಹೌದು. ಕರುತ್ತ ಜೂದನ್, ದೈವಮೇ ಕೈತೋಝಂ ಕೆ.ಕುಮಾರಾಕಣಂ ಹಾಗೂ ಕಂಪಾರ್ಟ್ಮೆಂಟ್ ಎನ್ನುವ ಮೂರು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಅತ್ಯುತ್ತಮ ಕಥೆ ವಿಭಾಗದಲ್ಲಿ ಕರುತ್ತ ಜೂದನ್ ರಾಜ್ಯ ಪ್ರಶಸ್ತಿ ಪಡೆದಿದೆ. ಹಲವಾರು ಟಿವಿ ವಾಹಿನಿಯ ಹಾಸ್ಯ ಕಾರ್ಯಕ್ರಮಗಳಲ್ಲಿ, ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದರು.

ಶರೀಫ್ ಕಾಡುಮಠ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸದ್ಯ ಸೌದಿ ಅರೇಬಿಯಾದ ರಿಯಾಧ್ ನಲ್ಲಿದ್ದಾರೆ. ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ.




