ಕನ್ನಡ ಕಿರುತೆರೆ ಹಾಗೂ ಸಿನಿಮಾ ರಂಗದ ಜನಪ್ರಿಯ ನಟ, ನಿರ್ಮಾಪಕ ದಿಲೀಪ್ ರಾಜ್ (47) ಅವರು ಇಂದು (ಮೇ 13) ನಸುಕಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಳಗಿನ ಜಾವ ಮನೆಯಲ್ಲಿದ್ದಾಗ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ತುರ್ತು ನಿಗಾ ಘಟಕದಲ್ಲಿ ನೀಡಲಾದ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 2, 1978ರಂದು ಜನಿಸಿದ್ದ ದಿಲೀಪ್ ರಾಜ್, ‘ನಟರಂಗ’ ಮತ್ತು ‘ದೃಷ್ಟಿ’ಯಂತಹ ರಂಗಭೂಮಿ ತಂಡಗಳ ಮೂಲಕ ತಮ್ಮ ನಟನಾ ಬದುಕನ್ನು ಆರಂಭಿಸಿದ್ದರು. ‘ಕಂಬದ ಮನೆ’ ಎಂಬ ಟೆಲಿಫಿಲ್ಮ್ ಮೂಲಕ ಕಿರುತೆರೆ ಪ್ರವೇಶಿಸಿದ ಅವರು, ತರುವಾಯ ‘ಜನನಿ’, ‘ಅರ್ಧಸತ್ಯ’, ‘ರಂಗೋಲಿ’, ‘ಕುಂಕುಮ ಭಾಗ್ಯ’, ‘ಮಾಂಗಲ್ಯ’ ಹಾಗೂ ಇತ್ತೀಚಿನ ‘ಹಿಟ್ಲರ್ ಕಲ್ಯಾಣ’ದಂತಹ ಯಶಸ್ವಿ ಧಾರಾವಾಹಿಗಳ ಮೂಲಕ ಕರ್ನಾಟಕದ ಮನೆಮಾತಾಗಿದ್ದರು.
ಇದನ್ನು ಓದಿದ್ದೀರಾ? ದಿಲ್ಲಿಯಿಂದ ಬಂಗಾಳದವರೆಗೆ… ಪ್ರಜಾಪ್ರಭುತ್ವ ಕೊಂದವರಿಗೆ ಆಯಕಟ್ಟಿನ ಹುದ್ದೆ!
ಬೆಳ್ಳಿಪರದೆಯ ಮೇಲೂ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದರು. ದಿ. ಪುನೀತ್ ರಾಜ್‌ಕುಮಾರ್ ಅಭಿನಯದ ‘ಮಿಲನ’, ‘ಯು-ಟರ್ನ್’ ಹಾಗೂ ಇತ್ತೀಚಿನ ‘ಲವ್ ಮಾಕ್‌ಟೈಲ್ 3’ ಚಿತ್ರಗಳಲ್ಲಿನ ಅವರ ಪಾತ್ರಗಳು ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದವು. ಇದೇ ವರ್ಷದ ಆರಂಭದಲ್ಲಿ ತೆರೆಕಂಡಿದ್ದ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಅವರು ಅಭಿನಯಿಸಿದ್ದ ಇತ್ತೀಚಿನ ಸಿನಿಮಾವಾಗಿತ್ತು.
ನಟನಾಗಿ ಮಾತ್ರವಲ್ಲದೆ, ನಿರ್ಮಾಪಕ, ನಿರ್ದೇಶಕ ಹಾಗೂ ಡಬ್ಬಿಂಗ್ ಕಲಾವಿದರಾಗಿಯೂ ಅವರು ಕನ್ನಡ ಮನರಂಜನಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ದಿಲೀಪ್ ರಾಜ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಸಹನಟರು ಹಾಗೂ ಅಪಾರ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.




