ಮೂರನ್ನು ಮೂವತ್ತೆರಡು ಸಾವಿರವಾಗಿ ತೋರಿಸಿದ ನಿರ್ದೇಶಕನ 'ದಿ ಕೇರಳ ಸ್ಟೋರಿ'ಯ ಮುಂದೆ, ನಾನು ಬರೀ ಈ ಮೂರು ಕೇರಳ ಸ್ಟೋರಿಯನ್ನು ಬರೆದಿದ್ದೇನಷ್ಟೆ. ಇಂತಹ ಮೂವತ್ತು ಸಾವಿರ ಸ್ಟೋರಿಗಳು ಕೇರಳದ ನಿತ್ಯ ಬದುಕು. ಇಂತಹ ಮನುಷ್ಯ ಪ್ರೇಮ ಸಾವಿರ ಸಾವಿರವಾಗಲಿ ಎಂದೇ ಆಶಿಸುವೆ.
ಸಾಮರಸ್ಯ ಸಹಜವೇ ಆಗಿಹೋಗಿರುವ ಕೇರಳದ ಜನಜೀವನದೊಳಗೆ ಹಲವಾರು ಕಥೆಗಳನ್ನು ಕಾಣಬಹುದು. ಜನಸಾಮಾನ್ಯರ ನಿತ್ಯ ಬದುಕಿಗೆ ಸಾಮರಸ್ಯ ಎನ್ನುವುದು ಜೀವಾಳ. ಒಡೆದು ಆಳುವ ಬ್ರಿಟಿಷ್ ರಾಜಕೀಯ ತಂತ್ರವನ್ನು ಪ್ರಸ್ತುತ ರಾಜಕೀಯ ವ್ಯವಸ್ಥೆ ಮುಂದುವರಿಸಿರುವುದು ಜನರನ್ನು ರೋಸಿ ಹೋಗುವಂತೆ ಮಾಡಿದೆ. ದುರಿತ ಕಾಲದ ಕರ್ತವ್ಯವೆನ್ನುವಂತೆ ಸಾಮರಸ್ಯದ ಘಟನೆಗಳನ್ನು ಈ ಕಾಲದಲ್ಲಿ ಮೆಲುಕು ಹಾಕಿಕೊಳ್ಳುವುದು ಅನಿವಾರ್ಯವೂ ಹೌದು. ಪ್ರಪಗಾಂಡ ಸಿನಿಮಾ ಎಂದು ಕೇರಳಿಗರಿಂದಲೂ, ಇತರ ಸಿನಿಮಾಭಿಮಾನಿಗಳಿಂದಲೂ ಛೀಮಾರಿ ಹಾಕಿಸಿಕೊಂಡ ‘ದಿ ಕೇರಳ ಸ್ಟೋರಿ’ ಎನ್ನುವ ಸಿನಿಮಾ, ಕೇರಳವನ್ನು ತೋರಿಸಿದ ರೀತಿಯನ್ನು ಸ್ವತಃ ಕೇರಳಿಗರೇ ಅಪಹಾಸ್ಯ ಮಾಡಿ ಟ್ರೋಲ್ ಮಾಡಿದ್ದು ನೆನಪಿರಬಹುದು. ಆದರೆ ನಿಜವಾದ ಕೇರಳ ಸ್ಟೋರಿ ಯಾವುದು?
ನಿಜವಾದ ಕೇರಳವೆಂದರೆ ಹೇಗಿರುತ್ತದೆ ಎನ್ನುವುದಕ್ಕೆ ಮಲಯಾಳಂ ಸಿನಿಮಾರಂಗದೊಳಗಿನ ದಿಗ್ಗಜರ ನಡುವಿನ ಮನುಷ್ಯ ಪ್ರೀತಿಯ ಸನ್ನಿವೇಶಗಳ ಘಟನೆಗಳನ್ನು ಇಲ್ಲಿ ದಾಖಲಿಸಿರುವೆ. ಇವು ಸ್ವತಃ ನಟರೇ ಹಲವು ಬಾರಿ ಮಲಯಾಳಂ ಸಂದರ್ಶನಗಳಲ್ಲಿ, ವೇದಿಕೆಗಳಲ್ಲಿ ಪ್ರಸ್ತಾಪಿಸಿದ ವಿಷಯಗಳೇ ಆಗಿವೆ. ಕನ್ನಡದ ಓದುಗರಿಗಾಗಿ ಅವನ್ನು ಅಕ್ಷರವಾಗಿಸಿರುವೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ʼದಿ ಕೇರಳ ಸ್ಟೋರಿʼ ಚಿತ್ರದ ನಿಷೇಧಕ್ಕೆ ಸುಪ್ರೀಂ ತಡೆ
- ‘ಶ್ರೀನಿವಾಸ ಕಲ್ಯಾಣ’
ಮಲಯಾಳಂನ ಪ್ರಸಿದ್ಧ ನಿರ್ದೇಶಕ, ನಟ ಶ್ರೀನಿವಾಸನ್ ಅವರ ಮದುವೆ ಪ್ರಸಂಗ ಇದು. ರಿಜಿಸ್ಟರ್ ಆಫೀಸಿನಲ್ಲಿ ನಾಳೆ ಮದುವೆ. ಊರಿಗೆ ಹೊರಡಬೇಕು. ಕೈಯಲ್ಲಿ ದುಡ್ಡಿಲ್ಲ. ಇನ್ನೊಬ್ಬ ಪ್ರಸಿದ್ಧ ಹಾಸ್ಯನಟ ಇನ್ನಸೆಂಟ್ ಬಳಿ ಮದುವೆ ವಿಚಾರ ತಿಳಿಸಿ, ಊರಿಗೆ ಹೋಗ್ತಿದ್ದೇನೆ ಅಂತ ಹೇಳಿದ್ದರು. ಸಂಜೆಯ ಹೊತ್ತಿಗೆ 400 ರುಪಾಯಿ ತಂದು ಶ್ರೀನಿವಾಸನ್ ಕೈಗಿತ್ತರು ಇನ್ನಸೆಂಟ್. ‘ನಿನ್ನ ಕೈಯಲ್ಲಿ ದುಡ್ಡೇ ಇರ್ಲಿಲ್ಲ. ಇದು ಎಲ್ಲಿಂದ ಬಂತು’ ಅಂತ ಶ್ರೀನಿವಾಸನ್ ಕೇಳಿದಾಗ, ‘ಪತ್ನಿ ಅಲೀಸ್‌ಳ ಎರಡು ಬಳೆಗಳನ್ನು ಅಡವಿಟ್ಟೆ. ಆ ಬಳೆಗಳಿಗೆ, ಅಗತ್ಯ ಬಂದಾಗೆಲ್ಲ ಹೀಗೆ ಅಂಗಡಿಯಲ್ಲಿ ಕೂತು ರೂಢಿಯಿದೆ’ ಎಂದರು ಇನ್ನಸೆಂಟ್.
ಇಷ್ಟಕ್ಕೆ ಕಷ್ಟ ಪರಿಹಾರ ಆಗಲಿಲ್ಲ. ಹುಡುಗಿಗೆ ಕನಿಷ್ಟ ಚಿನ್ನದ ತಾಳಿಯನ್ನಾದರೂ ಕಟ್ಟಲೇಬೇಕು ಎನ್ನುವುದು ತಾಯಿಯ ಒತ್ತಾಯ. ಕೊನೆಗೆ ಆ ಕಾಲದಲ್ಲೇ ಸ್ಟಾರ್ ನಟನಾಗಿದ್ದ ಮಮ್ಮುಟ್ಟಿ ಬಳಿ ಹೋಗಿ, ‘ನಾಳೆ ನನ್ನ ಮದುವೆ. 2 ಸಾವಿರ ರೂಪಾಯಿ ಅಗತ್ಯವಿದೆ’ ಎಂದಾಗ ಮಮ್ಮುಟ್ಟಿ ಹಣ ಕೊಟ್ಟರು. ಶ್ರೀನಿವಾಸನ್ ಮಮ್ಮುಟ್ಟಿ ಬಳಿ, ‘ಮದುವೆಗೆ ನೀನು ಬರಬೇಡ. ನಿನ್ನನ್ನು ನೋಡಲು ಜನ ಮುಗಿಬಿದ್ದು ಬಂದರೆ ಅವರಿಗೆ ಊಟ ಹಾಕಲು ನನ್ನ ಬಳಿ ಕಾಸಿಲ್ಲ’ ಎಂದರು. ಮನವಿಯಂತೆ ಮಮ್ಮುಟ್ಟಿ ಮದುವೆಗೆ ಹೋಗಲೂ ಇಲ್ಲ.

ಶ್ರೀನಿವಾಸನ್ ಈ ಘಟನೆಯನ್ನು ಹಲವು ಬಾರಿ ವೇದಿಕೆಗಳಲ್ಲಿ, ಸಂದರ್ಶನಗಳಲ್ಲಿ ನೆನಪಿಸಿಕೊಂಡು, ‘ಒಬ್ಬ ಕ್ರೈಸ್ತ ಕೊಟ್ಟ 400 ರೂ., ಒಬ್ಬ ಮುಸಲ್ಮಾನ ಕೊಟ್ಟ 2000 ರೂ ನೆರವಿನಿಂದ ಹಿಂದೂ ಹೆಣ್ಣುಮಗಳ ಕೊರಳಿಗೆ ನಾನು ತಾಳಿ ಕಟ್ಟಿದೆ’ ಎಂದು ಹೇಳಿದ್ದರು.
- ಸಲೀಂ ಕುಮಾರನ ಹಜ್ ಯಾತ್ರೆ
‘ಆದಮಿಂಡೆ ಮಗನ್ ಅಬು’ ನಟ ಸಲೀಂ ಕುಮಾರ್ ಅವರಿಗೆ, ಅತ್ಯುತ್ತಮ ನಟನೆಗಾಗಿ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸಿನಿಮಾ. ಹಜ್ ಯಾತ್ರೆಯ ಕನಸು ಕಾಣುವ ಬಡ ಕುಟುಂಬದ ವೃದ್ಧ ದಂಪತಿಯ ಹೃದಯಕಲಕುವ ಕಥೆ ಅದು. ಸಿನಿಮಾ ಕೆಲಸ ಕಾರ್ಯಗಳೆಲ್ಲ ಮುಗಿದ ನಂತರ, ನಿರ್ದೇಶಕ ಸಲೀಂ ಅಹ್ಮದ್ ಬಳಿ, ‘ಮುಸ್ಲಿಮರಲ್ಲದವರಿಗೆ ಹಜ್ ನಿರ್ವಹಿಸಲು ಅವಕಾಶ ಇದೆಯಾ?’ ಅಂತ ಪ್ರಶ್ನಿಸುತ್ತಾರೆ ಸಲೀಂ ಕುಮಾರ್. ‘ಇಲ್ಲ. ಆದರೆ ಮುಸ್ಲಿಮರೊಬ್ಬರು ಹಜ್‌ಗೆ ಹೊರಡುವುದಾದರೆ ಅವರಿಗೆ ನೆರವಾಗಬಹುದು. ಅದಕ್ಕೂ ಪುಣ್ಯವಿದೆ’ ಎನ್ನುತ್ತಾರೆ ಸಲೀಂ ಅಹ್ಮದ್.

ಕೆಲ ದಿನಗಳ ನಂತರ, ಊರಿನ ಬಡ ಕುಟುಂಬದ ವ್ಯಕ್ತಿಯೊಬ್ಬರ ಹಜ್ ಯಾತ್ರೆಯ ಸಂಪೂರ್ಣ ಖರ್ಚು ಭರಿಸುತ್ತಾರೆ ಸಲೀಂ ಕುಮಾರ್.
ಅಷ್ಟೆ ಅಲ್ಲ, ಕೊಚ್ಚಿನ್ ಹನೀಫ ಅವರ ತಾಯಿಯ ಅಂತಿಮ ಯಾತ್ರೆಯಲ್ಲಿ ಶವಮಂಚದ ಒಂದು ಬದಿಯಲ್ಲಿ ಹೆಗಲು ಕೊಟ್ಟು ಮಸೀದಿವರೆಗೆ ಹೆಜ್ಜೆ ಹಾಕಿದ್ದರು ಸಲೀಂ ಕುಮಾರ್. ಎಲ್ಲರೂ ‘ಲಾ ಇಲಾಹ ಇಲ್ಲಲ್ಲಾಹ್’ ಎನ್ನುವುದನ್ನು ಕೇಳಿಸಿಕೊಂಡು ತಾನೂ ಯಾತ್ರೆಯುದ್ದಕ್ಕೂ ಅದನ್ನು ಜಪಿಸುತ್ತ ಸಾಗಿದ್ದರು. ಮಯ್ಯಿತ್ ನಮಾಝ್‌ಗೆ (ಪಾರ್ಥಿವ ಶರೀರವನ್ನು ಮಸೀದಿಯೊಳಗೆ, ಎದುರಿನಲ್ಲಿ ಇರಿಸಿ ಅಂತಿಮ ಗೌರವದಂತೆ ಸಲ್ಲಿಸುವ ನಮಾಝ್) ಮೊದಲು ಎಲ್ಲರೂ ವುಝೂ (ಕೈಕಾಲು ಮುಖ ತೊಳೆದು ಶುದ್ಧಿಯಾಗುವುದು) ಮಾಡುತ್ತಿದ್ದದ್ದು ನೋಡಿ, ತಾನು ಕೂಡ ವುಝೂ ಮಾಡಿ ಮಸೀದಿಯೊಳಗೆ ಹೊರಟ ಸಲೀಂ ಕುಮಾರ್‌ರನ್ನು ದೂರದಿಂದಲೇ ಕಂಡ ಕೊಚ್ಚಿನ್ ಹನೀಫ, ಕೈಸನ್ನೆ ಮೂಲಕ, ‘ಬೇಡ’ ಎಂದು ಮನವಿ ಮಾಡಿದ್ದರಿಂದ ಹೊರಗಡೆ ನಿಂತರು. ನಮಾಝ್ ಮುಗಿದ ಬಳಿಕ ಹೊರಗಡೆ ಬಂದು ಸಲೀಮರನ್ನು ತಬ್ಬಿಕೊಂಡು, ‘ನಿನಗೆ ಹೇಗೆ ಕೃತಜ್ಞತೆ ಹೇಳಲಿ ನಾನು’ ಅಂತ ಅಳುತ್ತ ಕೇಳಿದರು. ಅದಕ್ಕೆ ಸಲೀಂ, ‘ಏನೂ ಬೇಡ, ನಾನು ಸತ್ತಾಗ ನನ್ನ ಹೆಣಕ್ಕೆ ಹೆಗಲು ಕೊಡು. ಅದೇ ಸಾಕಲ್ಲ’ ಎಂದು ಹೇಳಿದಾಗ, ಹಾಗೆಲ್ಲ ಹೇಳಬಾರದು ಅಂತ ಬೈದಿದ್ದರು. ಹನೀಫ ನಿಧನರಾಗಿ ಹದಿನಾರು ವರ್ಷಗಳಾದ್ವು. ಸಲೀಂ ಕುಮಾರ್ ಕೂಡ ಇತ್ತೀಚೆಗೆ ಇಲ್ಲವಾದರು.
3.ಕುರಾನ್‌ನೊಳಗಿದ್ದ ಆ ಹತ್ತು ರೂಪಾಯಿ
ಮಲಯಾಳಂ ಚಿತ್ರರಂಗದಲ್ಲಿ ಮರೆಯಲಾಗದ ಹೆಸರು ಕೊಚ್ಚಿನ್ ಹನೀಫ ಅವರದ್ದು. ಅಸಾಧಾರಣ ಪ್ರತಿಭೆಯ ಹಾಸ್ಯನಟ. ಅತ್ಯಂತ ಬಡತನದ ಬದುಕು ಸಾಗಿಸಿದ ಕೊಚ್ಚಿನ್ ಹನೀಫ, ಬೆಳಿಗ್ಗೆ ಟಿಫಿನ್ ಮಾಡುತ್ತಿರಲಿಲ್ಲ. ನೇರವಾಗಿ ಮಧ್ಯಾಹ್ನ ಹೋಟೆಲಿಗೆ ಹೋಗಿ ಪರೋಟ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.
ಇನ್ನೊಬ್ಬ ನಟ ಮಣಿಯಾನ್’ಪಿಳ್ಳ ರಾಜು ಒಮ್ಮೆ ಕೊಚ್ಚಿನ್ ಹನೀಫರ ಬಳಿ ಹೋಗಿ, “ಹಸಿವಾಗ್ತಿದೆ. ಏನಾದರೂ ತಿಂದು ಬರ್ತೇನೆ. ದುಡ್ಡಿದ್ದರೆ ಕೊಡು” ಅಂತ ಹೇಳಿದಾಗ, ಕಪಾಟಿನಲ್ಲಿದ್ದ ಕುರಾನ್ ಪುಸ್ತಕದ ಎಡೆಯಲ್ಲಿದ್ದ ಹತ್ತು ರೂಪಾಯಿಯ ನೋಟು ತೆಗೆದು ರಾಜು ಕೈಗಿತ್ತರು ಹನೀಫ. ನೇರವಾಗಿ ಹೋಟೆಲ್ ಕಡೆ ಹೆಜ್ಜೆ ಹಾಕಿದ ರಾಜು ಹಸಿವು ನೀಗಿಸಿಕೊಂಡು ಹನೀಫರ ಬಳಿ ಬಂದರು. ಮಧ್ಯಾಹ್ನದ ಹೊತ್ತು ಕಳೆದರೂ ಹೋಟೆಲ್ ಕಡೆ ಹೋಗದೆ ಸುಮ್ಮನೇ ಕೂತಿದ್ದ ಹನೀಫರನ್ನು ಕಂಡು, “ನೀನೇನು ಇವತ್ತು ಹೋಟೆಲ್‌ಗೆ ಹೋಗ್ತಿಲ್ಲ?” ಅಂತ ಕೇಳಿದರು. ಕೊಚ್ಚಿನ್ ಹನೀಫ ನಗುತ್ತ, “ನನ್ನ ಬಳಿ ಇದ್ದದ್ದೇ ಆ ಹತ್ತು ರೂಪಾಯಿ. ಅದನ್ನು ನಿನಗೆ ಕೊಟ್ಟೆ. ನಿನಗೆ ಹಸಿವು ತಡೆದುಕೊಳ್ಳಲು ಸಾಧ್ಯವಿಲ್ಲ ಅಂತ ನನಗೆ ಗೊತ್ತು. ಆದರೆ ನನಗದು ಅಭ್ಯಾಸ” ಎಂದರು.

2010ರಲ್ಲಿ ಕೊಚ್ಚಿನ್ ಹನೀಫ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದಾಗ, ಅಂತಿಮ ದರ್ಶನಕ್ಕೆ ಬಂದ ಮಮ್ಮುಟ್ಟಿಯನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುವ ಮಣಿಯಾನ್ ಪಿಳ್ಳ ರಾಜು ಅವರ ಫೋಟೊ ಇದು. ಅಂದು ಹನೀಫರ ಮಾತು ಕೇಳಿದಾಗ ಬರಬೇಕಿದ್ದ ಅಳು, ಹನೀಫರು ಹೊರಟಾಗ ಧಾರೆಯಾಗಿ ಹರಿದದ್ದು. ಮಮ್ಮುಟ್ಟಿಯ ಅತ್ಯಾಪ್ತನಾಗಿದ್ದ ಹನೀಫರ ನಿಧನಕ್ಕೆ ಮಮ್ಮುಟ್ಟಿ ಕೂಡ ಮಕ್ಕಳಂತೆ ಅಳುತ್ತ ನಿಂತಿದ್ದರು. ಆಸ್ಪತ್ರೆ ಖರ್ಚಿಗೆ ದುಡ್ಡಿಲ್ಲದೆ, ಇತರರ ಮುಂದೆ ಕೈಚಾಚಲು ಮನಸ್ಸೂ ಇಲ್ಲದೆ ಅನಾರೋಗ್ಯದ ವಿಚಾರ ಗುಟ್ಟಾಗಿಟ್ಟಿದ್ದ ಹನೀಫ, ಸಾವನ್ನು ಒಪ್ಪಿಕೊಂಡಿದ್ದರೇನೊ. ಅದೇ ನೋವಿನಲ್ಲಿ, ‘ಕನಿಷ್ಟ ನನ್ನ ಬಳಿ ಒಂದು ಮಾತಾದರೂ ಹೇಳಬಹುದಿತ್ತು. ಯಾವುದಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆ. ಆತ ಏನೂ ಹೇಳಲೇ ಇಲ್ಲ’ ಅಂತ ಅಂದು ಜೋರಾಗಿ ಅತ್ತಿದ್ದರು ಮಮ್ಮುಟ್ಟಿ.

ಮೂರನ್ನು ಮೂವತ್ತೆರಡು ಸಾವಿರವಾಗಿ ತೋರಿಸಿದ ನಿರ್ದೇಶಕನ ‘ದಿ ಕೇರಳ ಸ್ಟೋರಿ’ಯ ಮುಂದೆ, ನಾನು ಬರೀ ಈ ಮೂರು ಕೇರಳ ಸ್ಟೋರಿಯನ್ನು ಬರೆದಿದ್ದೇನಷ್ಟೆ. ಇಂತಹ ಮೂವತ್ತು ಸಾವಿರ ಸ್ಟೋರಿಗಳು ಕೇರಳದ ನಿತ್ಯ ಬದುಕು. ಇಂತಹ ಮನುಷ್ಯ ಪ್ರೇಮ ಸಾವಿರ ಸಾವಿರವಾಗಲಿ ಎಂದೇ ಆಶಿಸುವೆ.

ಶರೀಫ್ ಕಾಡುಮಠ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸದ್ಯ ಸೌದಿ ಅರೇಬಿಯಾದ ರಿಯಾಧ್ ನಲ್ಲಿದ್ದಾರೆ. ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ.



