ಅಲ್ಲಮನ ಅನನ್ಯ ಪದಪ್ರಯೋಗಗಳು | ಅಲ್ಲಮನ ಪ್ರಾಣಪೂಜೆಗೆ ಮೌನವೇ ಘಂಟೆ

Date:

Advertisements
ಅಲ್ಲಮನು ಬಳಸಿರುವ ಪದ 'ಮೌನವೇ ಘಂಟೆ' ಬಹಳ ವಿಶಿಷ್ಟವಾಗಿದ್ದು ಗಮನ ಸೆಳೆಯುತ್ತದೆ. ಘಂಟೆ ಎಂಬ ವಸ್ತುವೇ ನಾದ ಹೊಮ್ಮಿಸುವ ಮೂಲ ಪರಿಕರ. ಅಂತಹ ಘಂಟಾನಾದವನ್ನು ಮೌನಕ್ಕೆ ಸಮೀಕರಿಸಿ ನೋಡುವ ಅಲ್ಲಮನ ಪದಪ್ರಯೋಗ ಅತ್ಯಂತ ಅನನ್ಯವಾದದ್ದು.

ಎನ್ನ ಹೃದಯಕಮಲ
ಮಧ್ಯದಲ್ಲಿ ಮೂರ್ತಿಗೊಂಡಿಪ್ಪ
ಎನ್ನ ಪ್ರಾಣೇಶ್ವರಂಗೆ
ಎನ್ನ ಕ್ಷಮೆಯೆ ಅಭಿಷೇಕ,
ಎನ್ನ ಪರಮವೈರಾಗ್ಯವೆ ಪುಷ್ಪದಮಾಲೆ
ಎನ್ನ ಸಮಾಧಿ ಸಂಪತ್ತೆ ಗಂಧ,
ಎನ್ನ ನಿರಹಂಕಾರವೆ ಅಕ್ಷತೆ,
ಎನ್ನ ಸದ್ವಿವೇಕವೆ ವಸ್ತ್ರ,
ಎನ್ನ ಸತ್ಯವೆ ದಿವ್ಯಾಭರಣ
ಎನ್ನ ವಿಶ್ವಾಸವೆ ಧೂಪ,
ಎನ್ನ ದಿವ್ಯಜ್ಞಾನವೆ ದೀಪ,
ಎನ್ನ ನಿಭ್ರಾಂತಿಯೆ ನೈವೇದ್ಯ,
ಎನ್ನ ನಿರ್ವಿಷಯವೆ ತಾಂಬೂಲ
ಎನ್ನ ಮೌನವೆ ಘಂಟೆ,
ಎನ್ನ ನಿರ್ವಿಕಲ್ಪತೆಯೆ ಪ್ರದಕ್ಷಿಣೆ,
ಎನ್ನ ಶುದ್ಧಿಯೆ ನಮಸ್ಕಾರ,
ಎನ್ನ ಅಂತಃಕರಣದಿಂದ ಮಾಡುವ ಸೇವೆಯೆ ಉಪಚಾರಂಗಳು-ಈ ಪರಿಯಲ್ಲಿ
ಎಮ್ಮ ಗುಹೇಶ್ವರಲಿಂಗಕ್ಕೆ ಪ್ರಾಣಪೂಜೆಯೆ ಮಾಡಿ ಬಾಹ್ಯಕ್ರೀಯ ಮರೆದನು
ಕಾಣಾ ಸಂಗನಬಸವಣ್ಣಾ.

ವಚನಾರ್ಥ:
ಈ ವಚನದಲ್ಲಿ ಅಲ್ಲಮಪ್ರಭು ದೇವರು ಪೂಜೆಯ ಪರಿಕರಗಳನ್ನು ಪಟ್ಟಿ ಮಾಡುತ್ತಾ ಹೋಗುತ್ತಾರೆ. ಅಭಿಷೇಕಕ್ಕೆ ಬಳಸುವ ಜಲ, ಹೂವು, ಗಂಧ, ಅಕ್ಷತೆ, ವಸ್ತ್ರ, ಆಭರಣ, ಧೂಪ, ದೀಪ, ಅರ್ಪಿಸುವ ನೈವೇದ್ಯ, ತಾಂಬೂಲ, ಘಂಟೆ ಇವೆಲ್ಲಾ ಪೂಜೆಯಲ್ಲಿ ಉಪಯೋಗಿಸುವ ಪರಿಕರಗಳು. ಅಂತಿಮವಾಗಿ ಪೂಜೆಯು ಪ್ರದಕ್ಷಿಣೆ ಮತ್ತು ನಮಸ್ಕಾರದ ಉಪಚಾರದೊಂದಿಗೆ ಸಮಾಪ್ತಿಯಾಗುತ್ತದೆ. ಇಂತಹ ಪೂಜಾ ಪ್ರಕ್ರಿಯೆಯು ಬಾಹ್ಯದಲ್ಲಿ ಮಾಡುವ ತೋರಿಕೆಗೆ ಕಂಡುಬರುವ ಸಾಂಪ್ರದಾಯಿಕ ಪೂಜಾಕ್ರಮ. ಆದರೆ ಅಲ್ಲಮಪ್ರಭುದೇವರು ಇಲ್ಲಿ ಪ್ರಸ್ತಾಪಿಸಿರುವುದು ಆಂತರಿಕ ಪೂಜೆ, ಅರಿವಿನ ಪೂಜೆ. ಬಹಿರಂಗವಾಗಿ ಗೋಚರಿಸುವ ಪೂಜಾವಿದಿಯಲ್ಲ. ತನ್ನದೇ ಹೃದಯದಲ್ಲಿ ಪ್ರತಿಷ್ಠಾಪಿಸಲ್ಪಟ್ಟು ಸದಾ ಪ್ರಜ್ವಲಿಸುತ್ತಿರುವ ಪ್ರಾಣಶಕ್ತಿಗೆ ಪ್ರಾಣೇಶ್ವರನೆಂದು ಕರೆದು ತನ್ನ ಮನಸ್ಸು ಬುದ್ಧಿ ಆಂತರ್ಯಗಳನ್ನೇ ಪೂಜಾ ಪರಿಕರಗಳನ್ನಾಗಿ ಮಾಡಿ ಪೂಜಿಸಿಕೊಳ್ಳುವ ಕ್ರಿಯೆಯೇ ಪ್ರಾಣಪೂಜೆ.

ಇಲ್ಲಿ ಬಳಸುವ ಪೂಜಾ ಪರಿಕರಗಳು ಹೊರಗಿನಿಂದ ಆಯ್ದು ತಂದ ವಸ್ತುಗಳಲ್ಲ, ಅಂತರಂಗದಲ್ಲಿ ಉದಯಿಸಿದಂತಹವು. ಪ್ರಾಣೇಶ್ವರನಿಗೆ ಮೊದಲು ಕ್ಷಮಾಭಾವವೇ ಅಭಿಷೇಕವಾಗುತ್ತದೆ. ಇಹಪರಗಳ ಒಲ್ಲೆನೆಂಬ ವೈರಾಗ್ಯವೇ ಹೂಮಾಲೆ. ಧ್ಯಾನದಂಥ ಸಮಾಧಿಸ್ಥಿತಿಯೇ ಶ್ರೀಗಂಧದ ಪರಿಮಳ. ವಿನಯಯೇ ಅಕ್ಷತೆ. ವಿವೇಕವೇ ವಸ್ತ್ರದುಡಿಗೆ. ಸತ್ಯನಿಷ್ಠೆಯೇ ತೊಡಿಸುವ ಆಭರಣ. ಅಂತರಂಗದಲ್ಲಿ ಮೂಡುವ ಆತ್ಮವಿಶ್ವಾಸವೇ ಧೂಪಾರತಿ. ಸದಾ ಜಾಗೃತವಾಗಿರುವ ಜ್ಞಾನಪ್ರಭೆಯೇ ಬೆಳಗುವ ನಂದಾದೀಪ. ಅಸಂಬದ್ಧ ಭ್ರಮೆಗಳಿಲ್ಲದ ಸ್ಪಷ್ಟ ನಿಲುವೇ ನೈವೇದ್ಯ. ವಿಷಯಾಸಕ್ತಿಗಳಿಲ್ಲದ ನಿರ್ಮಲ ಮನಸ್ಸೇ ತಾಂಬೂಲ. ಮೌನವಾಗಿ ಆರಾಧಿಸುವುದೇ ಘಂಟಾನಾದ. ನಿರ್ವಿಕಲ್ಪ ಮನಸ್ಸಿನಿಂದ ತನ್ನನ್ನು ತಾನು ಸುತ್ತಿಕೊಳ್ಳುವುದೇ ಪ್ರದಕ್ಷಿಣೆ. ಪರಿಶುದ್ಧ ವ್ಯಕ್ತಿತ್ವವೇ ನಮಸ್ಕಾರ.

Advertisements

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿಜವನರಿದ ನಿಶ್ಚಿಂತ

ಹೀಗೆ ಅಂತಃಕರಣಪೂರ್ವಕವಾಗಿ ಪ್ರಾಣೇಶ್ವರನಿಗೆ ಪೂಜೆಗೈಯುವ ಪರಿಯೇ ಪ್ರಾಣಪೂಜೆಯೆಂದೂ ಅಂತಹ ಆಂತರಿಕ ಪೂಜೆಯಿಂದ ಬಾಹ್ಯ ಪೂಜಾಕ್ರಿಯೆಯ ಅಗತ್ಯವನ್ನು ಮೀರಬಹುದು ಎಂದು ಅಲ್ಲಮಪ್ರಭು ಬಸವಣ್ಣನಿಗೆ ಬೋಧಿಸುವ ಸನ್ನಿವೇಶ ಈ ವಚನದಲ್ಲಿದೆ.

ತನ್ನನ್ನು ತಾನೇ ಸ್ವಯಂ ಪೂಜಿಸಿಕೊಳ್ಳುವ ವಿಶಿಷ್ಟ ಬಗೆಯ ಪ್ರಾಣಪೂಜೆಯನ್ನು ಆದ್ಯಾತ್ಮಿಕ ಪರಿಭಾಷೆಯಲ್ಲಿ ಸರ್ವೋಚ್ಚ ಸ್ಥಿತಿ ಎಂದು ಹೇಳಲಾಗಿದ್ದು ರಾಮಕೃಷ್ಣ ಪರಮಹಂಸರು ಇಂತಹ ಪ್ರಾಣಪೂಜೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು ಎಂಬ ವೃತ್ತಾಂತಗಳು ಶ್ರೀ ರಾಮಕೃಷ್ಣ ವಚನವೇದದಲ್ಲಿ ಉಲ್ಲೇಖವಾಗಿವೆ.

ಮೌನವೇ ಘಂಟೆ ಎಂಬ ಪದಪ್ರಯೋಗ:
ಇಲ್ಲಿ ಅಲ್ಲಮನು ಬಳಸಿರುವ ಪದ ‘ಮೌನವೇ ಘಂಟೆ’ ಬಹಳ ವಿಶಿಷ್ಟವಾಗಿದ್ದು ಗಮನ ಸೆಳೆಯುತ್ತದೆ. ಸಾಂಪ್ರದಾಯಿಕ ಪೂಜೆಯ ಸಂದರ್ಭದಲ್ಲಿ ಕೊನೆಗೆ ಘಂಟಾನಾದದ ಮೂಲಕವೇ ಒಂದು ರೀತಿಯ ಪೂಜನೀಯ ವಾತಾವರಣ ಸೃಷ್ಟಿಯಾಗಿ ಭಕ್ತಿಭಾವ ತಾರಕಕ್ಕೇರಿ ಧನ್ಯತೆ ತಳೆಯುತ್ತದೆ. ಘಂಟೆ ಎಂಬ ವಸ್ತುವೇ ನಾದ ಹೊಮ್ಮಿಸುವ ಮೂಲ ಪರಿಕರ. ಅಂತಹ ಘಂಟಾನಾದವನ್ನು ಮೌನಕ್ಕೆ ಸಮೀಕರಿಸಿ ನೋಡುವ ಅಲ್ಲಮನ ಪದಪ್ರಯೋಗ ಅತ್ಯಂತ ಅನನ್ಯವಾದದ್ದು. ತಪಸ್ಸಿನ ಗಾಢ ಮೌನದ ಮನಸ್ಸಿನಾಳದಲ್ಲಿ ರಿಂಗಣಿಸುವ ಓಂಕಾರ ನಾದ ಇಲ್ಲಿ ಅಲ್ಲಮನ ಮಾತಿನಲ್ಲಿ ಘಂಟಾನಾದ ಆಗಿದೆ. ಮೌನಕ್ಕೂ ಮಾತಿನ ದನಿಯಿದೆ ಎಂದು ಪೂರ್ಣಚಂದ್ರ ತೇಜಸ್ವಿ ಹೇಳುತ್ತಿದ್ದರು. ತೇಜಸ್ವಿಯವರ ಈ ಮಾತನ್ನು ಅಲ್ಲಮನ ‘ಎನ್ನ ಮೌನವೇ ಘಂಟೆ’ ಎಂಬುದಕ್ಕೆ ಸಮೀಕರಿಸಿ ನೋಡುವುದು ಅತ್ಯಂತ ಸಮಂಜಸವಾಗಿದೆ.

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

ದಿಲ್ಲಿ ಮಾತು | ಜಾತಿ ತಾರತಮ್ಯ ಹಾಗೂ ದಲಿತ ಹೋರಾಟವನ್ನು ಚಿತ್ರಿಸುವ ಧಡಕ್ 2

2016 ರಲ್ಲಿ ನಾಗರಾಜ್ ಮಂಜುಳೆ ನಿರ್ದೇಶಿಸಿದ ’ಸೈರಾಟ್ ಚಿತ್ರವನ್ನು ನೋಡಿದವರಿಗೆ ಧಡಕ್ ಅರ್ಥವಾಗುತ್ತದೆ....

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

Download Eedina App Android / iOS

X