ಕಳೆದ ವರ್ಷ (2024) ಅತ್ಯಧಿಕ ತಾಪಮಾನ ಹೊಂದಿದ್ದ ವರ್ಷ ಎಂದು 2025ರ ಜನವರಿಯಲ್ಲಿ ವಿಶ್ವ ಹವಾಮಾನ ಸಂಸ್ಥೆಯ ತಜ್ಞರುಗಳು ತಿಳಿಸಿದ್ದಾರೆ. 2024ರಲ್ಲಿ ದಾಖಲೆಯ ತಾಪಮಾನವಿತ್ತು ಎಂದು ಹೇಳಿರುವ ಹವಾಮಾನ ಸಂಸ್ಥೆಯು, ಈ ವರ್ಷ (2025) ಕಳೆದ ವರ್ಷಕ್ಕಿಂತಲೂ ಅಧಿಕ ತಾಪಮಾನವಿರಲಿದೆ ಎಂದು ಮುನ್ಸೂಚನೆ ನೀಡಿದೆ. ಅದರಂತೆ ನಾವು ಈಗಾಗಲೇ ಬಿಸಿಲಿನ ಬೇಗೆಯಲ್ಲಿ ಬೇಯುತ್ತಿದ್ದೇವೆ. ನಿರ್ಜಲೀಕರಣ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಬಿಟ್ಟಿದೆ.
ಇವೆಲ್ಲದಕ್ಕೂ ಪ್ರಮುಖ ಕಾರಣ ಜಾಗತಿಕ ತಾಪಮಾನ ಏರಿಕೆ. ಈ ಹವಾಮಾನ ವೈಪರೀತ್ಯಕ್ಕೆ ಖಂಡಿತವಾಗಿಯೂ ಮಾನವನೇ ಕಾರಣ. ಅಭಿವೃದ್ಧಿ ನೆಪದಲ್ಲಿ ಕೈಗಾರಿಕೀಕರಣಕ್ಕೆ ಒತ್ತು ನೀಡುತ್ತಾ ಸಾಗಿದಂತೆ ಧರೆಗುರುಳಿದ ಮರಗಳು ಅಗಣಿತ. ಕಲುಷಿತಗೊಂಡ ಗಾಳಿ ಶುದ್ಧವಾಗಲು ಅವಕಾಶವೇ ಇಲ್ಲ. ಇವೆಲ್ಲವುದರ ನಿಮಿತ್ತ ಇದೀಗ ಬಿಸಿಗಾಳಿಗೆ ನಾವು ಮೈಯೊಡ್ಡಬೇಕಾದ, ಆ ಗಾಳಿಯನ್ನೇ ಉಸಿರಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಇದನ್ನು ಓದಿದ್ದೀರಾ? ಹಸಿರಾಗುತ್ತಿದೆ ಅಂಟಾರ್ಟಿಕ; ಸಕಲ ಜೀವ ಸಂಕುಲಕ್ಕೆ ಅಪಾಯದ ಸಂಕೇತ!
ಹಿಂದೆಂದೂ ಕಾಣದ ತಾಪಮಾನ 2025ರಲ್ಲಿ ದಾಖಲು
2024ರಲ್ಲಿ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದ ತಾಪಮಾನವು 2025ರಲ್ಲಿಯೂ ಏರುಗತಿಯಲ್ಲೇ ಸಾಗಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಹೇಳಿದೆ. ಹಸಿರುಮನೆ ಅನಿಲಗಳು ಅಧಿಕವಾಗಿ ಜಾಗತಿಕವಾಗಿ ತಾಪಮಾನ ಏರಿಕೆ ಮುಂದುವರೆಯಲಿದೆ ಎಂದಿದೆ. 2024ರಲ್ಲಿ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮೊದಲ ಬಾರಿಗೆ ಕೈಗಾರಿಕಾ ಪೂರ್ವ ಅವಧಿಗಿಂತ (1850-1900) ಹೆಚ್ಚಿನ ತಾಪಮಾನ ದಾಖಲಾಗಿದೆ. 2023ರಲ್ಲಿ 1.45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ವರ್ಷ ಕಳೆದಂತೆ ತಾಪಮಾನ ಹೆಚ್ಚಾಗುತ್ತಲೇ ಸಾಗಿದೆ. ಅದರಲ್ಲೂ 2015ರಿಂದ-2024ರವರೆಗಿನ ಹತ್ತು ವರ್ಷವೂ ನಿರಂತರವಾಗಿ ಏರಿಕೆಯ ಹಾದಿಯಲ್ಲಿಯೇ ಇದೆ.
ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್‌ನಂತೆ ಜನವರಿಯಲ್ಲಿಯೂ ಕೊಂಚ ತಂಪಿನ ವಾತಾವರಣ ಇರುತ್ತದೆ. ಆದರೆ 2025ರ ಜನವರಿಯಲ್ಲಿ ಅತ್ಯಧಿಕ ತಾಪಮಾನ ದಾಖಲಾಗಿದೆ. 1991-2020ರವರೆಗೆ ಜನವರಿಯಲ್ಲಿ ದಾಖಲಾದ ತಾಪಮಾನದ ಮಟ್ಟಕ್ಕಿಂತ ಅಧಿಕ ತಾಪಮಾನ 2025ರ ಜನವರಿಯಲ್ಲಿ ವಿಶ್ವ ಎದುರಿಸಿದೆ.
ತಾಪಮಾನ ಮತ್ತು ಸಾಗರಮಟ್ಟ ಏರಿಕೆ
ಮಾನವನಿರ್ಮಿತ ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ಈಗಾಗಲೇ ಸಮುದ್ರದ ಮೇಲೆ ಉಂಟಾಗಿದೆ. ಸಾಗರವು ಹಸಿರುಮನೆ ಅನಿಲ ಹೊರಸೂಸುವಿಕೆಯಿಂದಾಗಿ ಬಿಡುಗಡೆಯಾಗುವ ಹೆಚ್ಚುವರಿ ಶಾಖವನ್ನು ಹೀರಿಕೊಳ್ಳುತ್ತದೆ. ಈಗ ತಾಪಮಾನ ಏರಿಕೆಯಿಂದಾಗಿ ಹಸಿರುಮನೆ ಅನಿಲ ಹೊರಸೂಸುವಿಕೆ ಅಧಿಕವಾಗಿದ್ದು, ಉತ್ಪತ್ತಿಯಾಗುವ ಶಾಖದ ಶೇಕಡ 90ರಷ್ಟನ್ನು ಸಾಗರ ಹೀರಿಕೊಳ್ಳುತ್ತದೆ. ಶಾಖ ಹೆಚ್ಚಾಗಿ ಸಾಗರದಲ್ಲಿ ತಾಪಮಾನ ಹೆಚ್ಚಾಗುತ್ತಿದ್ದಂತೆ ಮಂಜುಗಡ್ಡೆ ಕರಗುವ, ಸಮುದ್ರ ಮಟ್ಟ ಏರಿಕೆ, ಸಮುದ್ರ ಪ್ರದೇಶದಲ್ಲಿ ಬಿಸಿಗಾಳಿ ಮೊದಲಾದ ಸಮಸ್ಯೆಗಳು ಉಂಟಾಗುತ್ತಿದೆ.
ಇದನ್ನು ಓದಿದ್ದೀರಾ? 1901ರ ಬಳಿಕ 2024 ದೇಶದಲ್ಲಿ ಅತೀ ಹೆಚ್ಚು ತಾಪಮಾನವಿದ್ದ ವರ್ಷ: ಹವಾಮಾನ ಇಲಾಖೆ
ಈ ಬದಲಾವಣೆಯು ಪ್ರಮುಖವಾಗಿ ಸಮುದ್ರದ ಜೀವವೈವಿಧ್ಯತೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಕರಾವಳಿ ಸಮುದಾಯಗಳು, ಮೀನುಗಾರಿಕೆ ನಂಬಿ ಬದುಕಿರುವ ಜನರ ಜೀವನೋಪಾಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಹಲವು ಮೀನಿನ ತಳಿಗಳು, ಸಮುದ್ರ ಜೀವಿಗಳು ನಾಶವಾಗುತ್ತವೆ, ಈಗಾಗಲೇ ನಾಶವಾಗುತ್ತಿವೆ. ಇನ್ನು ನೀರಿನ ಮಟ್ಟ ಏರಿಕೆಯಾದರೆ, ಪ್ರವಾಹದ ಭೀತಿ ಅಧಿಕವಾಗುತ್ತದೆ.
ನಿರೀಕ್ಷೆಗೂ ಮುನ್ನ ಬಿಸಿಗಾಳಿ ಆರಂಭ
ಜಾಗತಿಕವಾಗಿ ತಾಪಮಾನ ಹೆಚ್ಚಾಗುತ್ತಿರುವ ನಡುವೆ ಈ ವರ್ಷ ಭಾರತದಲ್ಲಿ ನಿರೀಕ್ಷೆಗೂ ಮೊದಲೇ (ಫೆಬ್ರವರಿ 27) ಬಿಸಿಗಾಳಿ ಅಪ್ಪಳಿಸಿದೆ. ಅವಧಿಪೂರ್ವವಾಗಿ ಬಿಸಿಗಾಳಿ ಅಪ್ಪಳಿಸಿದ ಕಾರಣದಿಂದಾಗಿ ಚಳಿಗಾಲದ ಅವಧಿಯಲ್ಲಿ ಅತೀವ ಮಳೆ ಕೊರತೆ ಉಂಟಾಗಿದೆ. ಕರ್ನಾಟಕ, ಗುಜರಾತ್‌ನ ಕರಾವಳಿ ಭಾಗದಲ್ಲಿ ಅತ್ಯಧಿಕ ಬಿಸಿಗಾಳಿ ಕಾಣಿಸಿಕೊಂಡಿದೆ, ಹಾಗೆಯೇ ಮುಂದುವರೆದಿದೆ. 2025ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ 74 ವರ್ಷಗಳಲ್ಲೇ ಅಧಿಕ ತಾಪಮಾನ ದಾಖಲಾಗಿದೆ. ದೆಹಲಿಗಿಂತ ಅಧಿಕ ತಾಪಮಾನ ಬೆಂಗಳೂರಿನಲ್ಲಿ ದಾಖಲಾಗಬಹುದು ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದಕ್ಕೆ ತಕ್ಕುದಾಗಿ ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.
ಬಿಸಿಗಾಳಿ- ಏನು ಮಾಡಬೇಕು, ಏನು ಮಾಡಬಾರದು?
“ಅಯ್ಯೋ ಬರೀ ಬಿಸಿಗಾಳಿ ಏನಾಗುತ್ತೆ? ಏನೂ ಆಗಲ್ಲ ಬಿಡಪ್ಪ. ಬಿಸಿಲಲ್ಲಿ ಆಡಿ ಬೆಳೆದ ನಮಗೇನಾಗುತ್ತೆ? ಎಲ್ಲವನ್ನೂ ತಡೆಯುವ ಶಕ್ತಿ ನಮ್ಮಲ್ಲಿದೆ” ಎಂದು ಹೇಳಿಕೊಳ್ಳುವ ಅದೆಷ್ಟೋ ಜನರು ಇದ್ದಾರೆ. ಆದರೆ ಇಂದಿನ ತಾಪಮಾನ ಏರಿಕೆಯು ನಾವು ಬಾಲ್ಯದಲ್ಲಿ ಆಡಿ ಬೆಳೆದಂತಹ ಬಿಸಿಲಲ್ಲ. ಹವಾಮಾನ ಇಲಾಖೆಯೇ ಹೇಳುವಂತೆ ದಾಖಲೆಯ ಪ್ರಮಾಣದ ಬಿಸಿಲು. ಈ ತಾಪಮಾನದಿಂದಾಗಿ ಸಾವು ಕೂಡ ಸಂಭವಿಸಬಹುದು. ಅದಕ್ಕಾಗಿ ಕೆಲವು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವುದು ಅತ್ಯಗತ್ಯ.
- ಬಿಸಿಲಲ್ಲಿ ಅದರಲ್ಲೂ ಮುಖ್ಯವಾಗಿ ಮಧ್ಯಾಹ 12 ಗಂಟೆಯಿಂದ 3 ಗಂಟೆಯವರೆಗೆ ಹೊರಗೆ ಹೋಗುವುದನ್ನು ತಪ್ಪಿಸಿ
ಸಾಧ್ಯವಾದಷ್ಟು, ನಿಮಗೆ ಬಾಯಾರಿಕೆ ಆಗದಿದ್ದರೂ ನೀರು ಕುಡಿಯಿರಿ - ಕಡಿಮೆ ತೂಕದ, ಮಂದ ಬಣ್ಣದ, ನಿಮ್ಮ ದೇಹಕ್ಕಿಂತ ಅಗಲವಾದ, ಹತ್ತಿಯ (ಕಾಟನ್) ಬಟ್ಟೆಯನ್ನು ಧರಿಸಿ.
- ಅಗತ್ಯವಿದ್ದರೆ ಸನ್ ಗ್ಲಾಸ್ ಬಳಸಿ. ಛತ್ರಿ, ಟೋಪಿ ಇಟ್ಟುಕೊಳ್ಳಿ. ಹೊರ ಹೋಗುವಾಗ ಶೂ ಅಥವಾ ಚಪ್ಪಲಿ ಬಳಸಿ.
- ಬಿಸಿಲು ಅಧಿಕವಾಗಿರುವಾಗ ಕಠಿಣ ಕೆಲಸಗಳನ್ನು ಮಾಡಬೇಡಿ. ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಕೆಲಸ ಮಾಡುವುದನ್ನು ತಪ್ಪಿಸಿ.
- ಹೊರ ಭಾಗದಲ್ಲಿ, ಬಿಸಿಲಿನಲ್ಲಿ ಕೆಲಸ ಮಾಡುವವರಾದರೆ ಟೋಪಿ, ಛತ್ರಿ, ಅಥವಾ ಬಟ್ಟೆಯನ್ನು ಬಳಸಿ. ನಿಮ್ಮ ಮುಖ, ಕತ್ತು, ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ.
- ಪ್ರಯಾಣಿಸುವಾಗ ನೀರಿನ ಬಾಟಲಿ ಇಟ್ಟುಕೊಳ್ಳಿ.
- ಮದ್ಯಪಾನ ಮಾಡಬೇಡಿ. ಕಾಫಿ, ಚಹಾ, ಇತರೆ ತಂಪು ಪಾನೀಯಗಳನ್ನು ಕುಡಿಯಬೇಡಿ. ಇವೆಲ್ಲವೂ ನಿಮ್ಮ ದೇಹದಲ್ಲಿನ ನೀರಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
- ವಾಹನ ನಿಲ್ಲಿಸಿದ ಪ್ರದೇಶದಲ್ಲಿ ಮಕ್ಕಳನ್ನು, ಪ್ರಾಣಿಗಳನ್ನು ಬಿಡಬೇಡಿ. ಬಿಸಿಲಿನ ತಾಪಕ್ಕೆ ವಾಹನ ಹೊತ್ತಿ ಉರಿಯುವ ಸಾಧ್ಯತೆ ಇರುತ್ತದೆ.
- ಒಆರ್‌ಎಸ್ ಇಟ್ಟುಕೊಳ್ಳಿ ಅಥವಾ ಮನೆಯಲ್ಲೇ ತಯಾರಿಸಿ ಲಸ್ಸಿ, ಮಜ್ಜಿಗೆ, ನಿಂಬೆ ಪಾನಕ, ಮೊದಲಾದವುಗಳನ್ನು ಕುಡಿಯಿರಿ
- ಬಿಸಿಲಿನಿಂದ ತಲೆ ಸುತ್ತು, ವಾಂತಿ ಮೊದಲಾದವು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ
#ಬಿಸಿಗಾಳಿ ಅಲೆ ಅಥವಾ ವಿಪರೀತ ತಾಪಮಾನದಿಂದ ನಿಮ್ಮನ್ನು ರಕ್ಷಿಸಲು ಈ ಸಾರ್ವಜನಿಕ ಜಾಗೃತಿ ವಿಡಿಯೋಗಳನ್ನು ವೀಕ್ಷಿಸಿ & ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.#ಬಿಸಿಗಾಳಿ_ಎಚ್ಚರಿಕೆಗಳು @KarnatakaVarthe
— Karnataka State Natural Disaster Monitoring Centre (@KarnatakaSNDMC) February 25, 2025
Watch this public awareness video to ensure your safety and others during #Heatwave/Maximum temperature pic.twitter.com/Pf0P8BQU3L
ನೀರಿನ ಮೂಲದ ರಕ್ಷಣೆಯ ಸವಾಲು
ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕುಡಿಯುವ, ಇತರೆ ಕಾರ್ಯಗಳಿಗೆ ಬಳಸುವ ನೀರಿನ ಅಭಾವ ಕಾಣಿಸಿಕೊಳ್ಳುತ್ತಿದೆ. ಸ್ಥಳೀಯವಾಗಿ ಹೇಳುವುದಾದರೆ ಬೆಂಗಳೂರು, ಮಂಗಳೂರು ಸೇರಿದಂತೆ ಹಲವೆಡೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನೀರಿನ ಕೊರತೆ ಹೆಚ್ಚಾಗಿ ಕಾಡುತ್ತದೆ. ಇದೇ ರೀತಿಯ ಸಮಸ್ಯೆಗಳು ಜಾಗತಿಕವಾಗಿಯೂ ಇದೆ. ಈವರೆಗೂ ಒಂದು ದಿನವೂ ನೀರಿನ ಸಮಸ್ಯೆ ಕಾಣದ ದೇಶಗಳಲ್ಲಿ ಇತ್ತೀಚೆಗೆ ನೀರಿನ ಮೂಲಗಳು ಬತ್ತಿಹೋಗುತ್ತಿವೆ. ಹಾಗಾಗಿ 2025ರಲ್ಲಿ ತಾಪಮಾನ ಏರಿಕೆ ಸಮಸ್ಯೆಯ ಜೊತೆಗೆ ನೀರಿನ ಮೂಲದ ರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಇದನ್ನು ಓದಿದ್ದೀರಾ? ಬೆಂಗಳೂರಿನಲ್ಲಿ ಹೆಚ್ಚಾಗಲಿರುವ ತಾಪಮಾನ
ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಮತ್ತು ವಿಶ್ವ ಹವಾಮಾನ ಸಂಸ್ಥೆ (WMO), ಜನರಿಗೆ ಸಿಹಿನೀರನ್ನು ಒದಗಿಸುವ ಪ್ರಮುಖ ನೀರಿನ ಮೂಲಗಳನ್ನು ರಕ್ಷಿಸಲು ವಿಶ್ವಾದ್ಯಂತ ಜನರು ಒಗ್ಗೂಡಿ ಪ್ರಯತ್ನಿಸುವ ಅಗತ್ಯವಿದೆ ಎಂದು ಹೇಳುತ್ತದೆ. ಹಿಮನದಿಗಳು ಮತ್ತು ಮಂಜುಗಡ್ಡೆಗಳು ವಿಶ್ವದ ಶುದ್ಧ ನೀರಿನ ಶೇಕಡ 70ರಷ್ಟು ಭಾಗವನ್ನು ಹೊಂದಿದೆ. ಆದರೆ ಈ ನೀರಿನ ಮೂಲಗಳು ತ್ವರಿತವಾಗಿ ನಾಶವಾಗುತ್ತಿದೆ. ಇದರಿಂದಾಗಿ ಪರಿಸರ ಮತ್ತು ಮಾನವೀಯ ಬಿಕ್ಕಟ್ಟು ಎದುರಾಗಲಿದೆ ಎಂಬ ಆತಂಕವನ್ನು ವಿಶ್ವ ಹವಾಮಾನ ಸಂಸ್ಥೆ ವ್ಯಕ್ತಪಡಿಸಿದೆ.
“ಕರಗುತ್ತಿರುವ ಮಂಜುಗಡ್ಡೆ ಮತ್ತು ಹಿಮನದಿಗಳು ಲಕ್ಷಾಂತರ ಜನರಿಗೆ ನೀರಿನ ಭದ್ರತೆಗೆ ಅಪಾಯ ಉಂಟು ಮಾಡುತ್ತಿದೆ. ಈ ವರ್ಷವು ಜಗತ್ತಿಗೆ ಎಚ್ಚರಿಕೆಯ ಕರೆಗಂಟೆ” ಎನ್ನುತ್ತಾರೆ WMO ಪ್ರಧಾನ ಕಾರ್ಯದರ್ಶಿ ಸೆಲೆಸ್ಟ್ ಸೌಲೊ. 2023ರಲ್ಲಿ ಹಿಮನದಿಗಳು 50 ವರ್ಷದಲ್ಲೇ ಅಧಿಕ ನೀರಿನ ನಷ್ಟವನ್ನು ಕಂಡಿದೆ. ಅದಾದ ಬಳಿಕ ನಿರಂತರವಾಗಿ ನೀರಿನ ಮೂಲಗಳು ಬತ್ತಿಹೋಗುತ್ತಲೇ ಇದೆ. ಸ್ವಿಝರ್‌ಲ್ಯಾಂಡ್‌ನಲ್ಲಿ 2022-23ರ ನಡುವೆ ಶೇಕಡ 10ರಷ್ಟು ಹಿಮನದಿಗಳು ನಾಶವಾಗಿದೆ. ಇದೇ ರೀತಿ ಸಾಗಿದರೆ ತಾಪಮಾನ ಜಾಗತಿಕವಾಗಿ ನೀರಿನ ಅಭಾವ ಅತೀ ದೊಡ್ಡ ಸಮಸ್ಯೆಯಾಗಲಿದೆ.
ಇದನ್ನು ಓದಿದ್ದೀರಾ? ಹವಾಮಾನ | ರಾಜ್ಯದಲ್ಲಿ ಅತೀವ ಬಿಸಿಲು; ಮಧ್ಯಾಹ್ನ 12ರಿಂದ 3ರವರೆಗೆ ಹೊರ ಹೋಗದಂತೆ ಆರೋಗ್ಯ ಇಲಾಖೆ ಸೂಚನೆ
ಇವೆಲ್ಲವುದರ ನಡುವೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನೀರಿನ ಮೂಲಗಳಾದ ಕೆರೆ, ಬಾವಿ, ನದಿಗಳು ತಾಪಮಾನ ಏರಿಕೆಯಿಂದಾಗಿ ಬತ್ತಿ ಹೋಗುವುದು ಮಾತ್ರವಲ್ಲ, ಮಾಲಿನ್ಯದಿಂದಾಗಿ ಕಲುಷಿತಗೊಳ್ಳುತ್ತಿವೆ. ಹಲವು ರಾಜ್ಯಗಳಲ್ಲಿ ಸ್ನಾನ ಮಾಡಲು ಕೂಡ ಯೋಗ್ಯವಿಲ್ಲದ ಹಂತಕ್ಕೆ ನದಿಗಳ ನೀರು ತಲುಪಿದೆ.
ಪರಿಸರ ರಕ್ಷಿಸಿ, ನಿಮ್ಮನ್ನು ನೀವು ರಕ್ಷಿಸಿ
ವಿಶ್ವದಲ್ಲಿ ಅದೆಷ್ಟೋ ದೇಶಗಳ ಜನರು ಮೂರು ಋತುಗಳನ್ನು (ಮಳೆಗಾಲ, ಚಳಿಗಾಲ, ಬೇಸಿಗೆಗಾಲ) ಮರೆತಿದ್ದಾರೆ. ನಮ್ಮ ಮುಂದಿನ ಪೀಳಿಗೆಗೆ “ಈ ಹಿಂದೆ ವರ್ಷದಲ್ಲಿ ಮೂರು ತಿಂಗಳು ಮಳೆ ಬರುತ್ತಿತ್ತು, ಆದರೆ ಈಗ ಮೂರು ಬಾರಿ ಮಳೆ ಬರುತ್ತದೆ” ಎಂದು ಹೇಳಬೇಕಾದ ಪರಿಸ್ಥಿತಿ ಎದುರಾದೀತು. ಇಂದು ನಿರ್ಜಲೀಕರಣ ಸಾಮಾನ್ಯವಾಗಿರುವಂತೆ, ಮುದೊಂದು ದಿನ ಬಿಸಿಲಿನಿಂದ ಸಾವು ಎಂಬುದು ಸಾಮಾನ್ಯ ವಾರ್ತೆಯಾಗಬಹುದು.
ಇವೆಲ್ಲವುದರ ಮಧ್ಯೆ ಸಾಮಾನ್ಯವಾಗಿಯೇ ಜಗತ್ತಿನ ಈ ಸ್ಥಿತಿಗೆ ಕಾರಣವಾದ ನಾವು ಮುಂದೇನು ಮಾಡುವುದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಶ್ನೆ ಬಂದಾಗ ಪರಿಸರ ಉಳಿಸುವ, ಬೆಳೆಸುವ ಪ್ರಹಸನವೂ ಆರಂಭವಾಗುತ್ತದೆ. ವರ್ಷಕ್ಕೊಮ್ಮೆ, ಒಂದು ದಿನ, ವನಮಹೋತ್ಸವ. ಅದಾದ ಬಳಿಕ ಮುಂದಿನ ವರ್ಷ ಮತ್ತೆ ಗಿಡ ನೆಟ್ಟು ಫೋಟೋಗೆ ಫೋಸ್ ನೀಡುವುದು. ಅಸಮತೋಲನಗೊಂಡಿರುವ ಪರಿಸರದ ಸಮತೋಲನಕ್ಕೆ ತರಲು ಬರೀ ಗಿಡ ನೆಟ್ಟರೆ ಸಾಲದು. ಆ ಗಿಡದ ಪೋಷಣೆಯೂ ನಮ್ಮ ಕರ್ತವ್ಯ. ತಾಪಮಾನ ಹೆಚ್ಚಾಗುತ್ತಿರುವಾಗ ನಾಶವಾಗುತ್ತಿರುವ ಜಲಮೂಲವನ್ನು ಕೂಡಾ ಉಳಿಸಲು ಅಗತ್ಯ ಕ್ರಮಕೈಗೊಳ್ಳುವುದು, ಯೋಜನೆ ರೂಪಿಸುವುದು ಅನಿವಾರ್ಯ. ಹಾಗೆಯೇ ನಿರ್ಲಕ್ಷಿಸದೆ ತಾಪಮಾನದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಿ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.