ಜನಸಂಖ್ಯಾ ನಿಯಂತ್ರಣದ ಅಗತ್ಯವಿದ್ದಾಗ 'ಕುಟುಂಬ ಯೋಜನೆ'ಯ ಭಾರವನ್ನು ಮಹಿಳೆಯರ ಮೇಲೆಯೇ ಹಾಕಲಾಯಿತು. ಈಗ ಜನಸಂಖ್ಯೆ ಬೇಕೆಂದಾಗಲೂ "ಹೆಚ್ಚು ಹೆರಿ" ಎಂಬ ಒತ್ತಡವನ್ನು ಮಹಿಳೆಯರ ಮೇಲೆಯೇ ಹೇರಲಾಗುತ್ತಿದೆ. ಇದು ಮಹಿಳೆಯ ಸ್ವಾಯತ್ತತೆ ಮತ್ತು ಆಕೆಯ ಸಂತಾನೋತ್ಪತ್ತಿಯ ಹಕ್ಕಿನ ಮೇಲಿನ ಹಸ್ತಕ್ಷೇಪವಲ್ಲವೇ?
ಮಹಿಳೆ ಎಲ್ಲಿದ್ದರೂ ಬರೀ ಸರಕಾಗಿಯೇ ಕಾಣುವ ಸಮಾಜವಿದು. ಒಂದು ಸಣ್ಣ ವಸ್ತುವನ್ನು ಮಾರಾಟ ಮಾಡಬೇಕಾದರೂ ಅಲ್ಲಿ ಮಹಿಳೆಯ ದೇಹವನ್ನು ಪ್ರದರ್ಶಿಸಿ ಗ್ರಾಹಕರನ್ನು ಆಕರ್ಷಿಸುವ ತಂತ್ರಗಾರಿಕೆ ನಡೆಯುತ್ತದೆ. ಇಂದಿಗೂ ಹಲವೆಡೆ ಮದುವೆ ಎನ್ನುವುದು ಇಬ್ಬರು ಮನಸ್ಸುಗಳ ಮಿಲನಕ್ಕಿಂತ ಹೆಚ್ಚಾಗಿ ಕೊಡು-ಕೊಳ್ಳುವಿಕೆಯ ವ್ಯವಹಾರವೇ ಆಗಿ ಉಳಿದಿದೆ. ಇವೆಲ್ಲವುದರ ನಡುವೆ ಮಹಿಳೆ ಇಂದಿಗೂ ಹೆರುವ ಮಿಷನ್! ಈಗಿನ ಆಂಧ್ರಪ್ರದೇಶ ಸರ್ಕಾರ ಮಾಡುತ್ತಿರುವುದು ಅದನ್ನೇ!
ಇತ್ತೀಚೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸರ್ಕಾರ ‘ಪಿಳ್ಳಲ ಸಂಪದ’ (ಮಕ್ಕಳೇ ಆಸ್ತಿ) ಜನಸಂಖ್ಯಾ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಸಿಎಂ ಚಂದ್ರಬಾಬು ನಾಯ್ಡು ಅವರು “ಹೆಚ್ಚು ಮಕ್ಕಳನ್ನು ಹೆರಿ” ಎಂದು ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. ಅದಕ್ಕಾಗಿ ಪ್ರೋತ್ಸಾಹಧನದ ಯೋಜನೆ ಜಾರಿಗೆ ತರಲು ಸಜ್ಜಾಗಿದ್ದಾರೆ. ಆದರೆ ಇಲ್ಲಿ ಸರ್ಕಾರ ಮಾಡಲು ಮುಂದಾಗಿರುವುದೂ ಮಹಿಳೆಯ ಶೋಷಣೆಯನ್ನೇ!
ಇದನ್ನು ಓದಿದ್ದೀರಾ? 2ಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವ ದಂಪತಿಗಳಿಗೆ 25,000 ರೂ. ಪ್ರೋತ್ಸಾಹ ಧನ: ಆಂಧ್ರ ಸಿಎಂ
ದೇಶದ ಭವಿಷ್ಯದ ಆರ್ಥಿಕತೆ ಅಥವಾ ರಾಜಕೀಯ ಪ್ರಾತಿನಿಧ್ಯಕ್ಕಾಗಿ “ಹೆಚ್ಚು ಮಕ್ಕಳನ್ನು ಹೆರಿ” ಎಂದು ಆಂಧ್ರಪ್ರದೇಶ ಸರ್ಕಾರ ಕರೆ ನೀಡಿ. ಆದರೆ ಈ ಯೋಜನೆ ಮೂಲಕ ಮಹಿಳೆಯ ದೇಹವನ್ನು ಕೇವಲ ಜನಸಂಖ್ಯೆ ಹೆಚ್ಚಿಸುವ ‘ಉತ್ಪಾದನಾ ಯಂತ್ರ’ದಂತೆ ನೋಡುವುದಲ್ಲವೇ? ಹೆಚ್ಚು ಮಕ್ಕಳನ್ನು ಹೆರಿ ಎಂದು ಹೇಳುವ ಸರ್ಕಾರವು ಮಹಿಳೆಯ ವೈಯಕ್ತಿಕ ಆರೋಗ್ಯ, ಮಾನಸಿಕ ಸಿದ್ಧತೆ, ಆಕೆಯ ಆಯ್ಕೆ ಅಥವಾ ಕಷ್ಟ-ಸುಖಗಳ ಬಗ್ಗೆ ಚಿಂತನೆ ನಡೆಸಿದೆಯೇ? ಅಷ್ಟಕ್ಕೂ ಹೆರುವವರ ಕಷ್ಟ ನೀವು ಬಲ್ಲಿರಾ?
ಹೆರುವವರ ಕಷ್ಟ ನೀವು ಬಲ್ಲಿರಾ?
ಇದು ಬರೀ ಒಂದು ಸಾಲಿನ ಪ್ರಶ್ನೆಯಲ್ಲ. ಶತಶತಮಾನಗಳಿಂದ ಮಹಿಳೆಯರ ದೇಹ, ಶ್ರಮ ಮತ್ತು ಆರೋಗ್ಯದ ಮೇಲಾಗುತ್ತಿರುವ ಸಾಮಾಜಿಕ ಮತ್ತು ರಾಜಕೀಯ ಒತ್ತಡಗಳ ಆಳವಾದ ಪ್ರತಿಫಲನ. ಒಂದೆಡೆ ಸರ್ಕಾರ ಹೆಚ್ಚು ಮಕ್ಕಳನ್ನು ಹೆರಿ ಎಂಬ ಕರೆ ನೀಡುತ್ತದೆ. ಇನ್ನೊಂದೆಡೆ ತಾಯ್ತನದ ನೈಜ ಕಷ್ಟಗಳು, ದೈಹಿಕ-ಮಾನಸಿಕ ಸವಾಲುಗಳು ಮತ್ತು ಹಕ್ಕುಗಳ ಬಗ್ಗೆ ಮಹಿಳಾ ಸಮುದಾಯದಿಂದ ಧ್ವನಿ ಕೇಳಿಬರುತ್ತಿದೆ. ಈ ಎರಡು ಭಿನ್ನ ದೃಷ್ಟಿಕೋನಗಳ ನಡುವಿನ ಸಂಘರ್ಷ ಪ್ರಸ್ತುತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆಂಧ್ರಪ್ರದೇಶ ಸರ್ಕಾರ ಈ ಕರೆ ನೀಡಿದ್ದೇಕೆ?
ಕಳೆದ ಕೆಲವು ದಶಕಗಳಿಂದ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸರ್ಕಾರದ ಕುಟುಂಬ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಿವೆ. ಆದರೆ ಆಂಧ್ರಪ್ರದೇಶದ ಒಟ್ಟು ಜನನ ಪ್ರಮಾಣ (TFR) ಈಗ 1.5 ಕ್ಕೆ ಕುಸಿದಿದೆ (ಸ್ಥಿರ ಜನಸಂಖ್ಯೆಗೆ ಇದು 2.1 ಇರಬೇಕು). ಇದೇ ಅವಧಿಯಲ್ಲಿ ಉತ್ತರ ಪ್ರದೇಶ, ಬಿಹಾರದಂತಹ ಉತ್ತರದ ರಾಜ್ಯಗಳಲ್ಲಿ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಜನನ ಪ್ರಮಾಣ ಕುಸಿಯುತ್ತಿರುವುದರಿಂದ ಭವಿಷ್ಯದಲ್ಲಿ ಯುವ ಶ್ರಮಶಕ್ತಿಯ ಕೊರತೆ ಎದುರಾಗಬಹುದು ಮತ್ತು ವೃದ್ಧರ ಸಂಖ್ಯೆ ಹೆಚ್ಚಾಗಬಹುದು ಎಂಬ ಆತಂಕವಿದೆ.
ಇನ್ನೊಂದೆಡೆ ಜನಸಂಖ್ಯೆಯ ಆಧಾರದ ಮೇಲೆ ಮರುವಿಂಗಡಣೆ ನಡೆದರೆ, ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣದ ರಾಜ್ಯಗಳು ತಮ್ಮ ಲೋಕಸಭಾ ಸೀಟುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರದ ರಾಜ್ಯಗಳ ಸೀಟುಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ಕೇಂದ್ರ ರಾಜಕಾರಣದಲ್ಲಿ ದಕ್ಷಿಣ ಭಾರತದ ಧ್ವನಿ ಮತ್ತು ರಾಜಕೀಯ ಪ್ರಾತಿನಿಧ್ಯ ತೀರಾ ದುರ್ಬಲಗೊಳ್ಳುತ್ತದೆ. ಅಷ್ಟು ಮಾತ್ರವಲ್ಲದೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ನಿರ್ಧರಿಸುವಾಗಲೂ ಜನಸಂಖ್ಯೆಯನ್ನು ಒಂದು ಪ್ರಮುಖ ಮಾನದಂಡವಾಗಿ ಬಳಸುತ್ತದೆ. ಜನಸಂಖ್ಯೆ ಕಡಿಮೆಯಾದಷ್ಟೂ ಆಂಧ್ರಪ್ರದೇಶದಂತಹ ರಾಜ್ಯಗಳಿಗೆ ಕೇಂದ್ರದಿಂದ ಬರುವ ಹಣಕಾಸಿನ ನೆರವೂ ಕಡಿಮೆಯಾಗುತ್ತಾ ಹೋಗುತ್ತದೆ.
ಇದನ್ನು ಓದಿದ್ದೀರಾ? ದೇಹ ಹೆಣ್ಣಿನದು, ನಿಯಂತ್ರಣ ಗಂಡಿನದು: ಹೆಣ್ಣಿನ ಬಯಕೆಗಳ ಹರಣ, ‘ಸ್ತ್ರೀ ಜನನಾಂಗ ಛೇದನ’
ಈ ಎಲ್ಲ ಕಾರಣಗಳಿಂದಾಗಿ ದಕ್ಷಿಣ ಭಾರತದ ರಾಜ್ಯಗಳು ಈ ಕ್ಷೇತ್ರ ಮರುವಿಂಗಡಣೆಯನ್ನು ಜನಸಂಖ್ಯೆ ಆಧಾರದಲ್ಲಿ ಮಾಡುವುದನ್ನು ವಿರೋಧಿಸುತ್ತಾ ಬಂದಿದೆ. ಆದರೆ ಕೇಂದ್ರದಲ್ಲಿ ಎನ್ಡಿಎ ಒಕ್ಕೂಟದ ಭಾಗವಾಗಿರುವ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಕೇಂದ್ರದ ಈ ಕ್ರಮವನ್ನು ವಿರೋಧಿಸುವ ಬದಲು ತಮ್ಮ ನಾಗರಿಕರ ಮೇಲೆ ಹೊರೆ ಹಾಕಲು ಮುಂದಾಗಿದೆ. ಅದಕ್ಕಾಗಿ ಹೆಚ್ಚು ಮಕ್ಕಳನ್ನು ಹೆರಿ ಎಂದು ಸರ್ಕಾರ ಘೋಷಿಸುತ್ತಿದೆ. ಅದಕ್ಕಾಗಿ ₹30,000 ಪ್ರೋತ್ಸಾಹಧನ ನೀಡಲು ಮುಂದಾಗಿದೆ. ಆದರೆ ಇಂದಿನ ದುಬಾರಿ ಶಿಕ್ಷಣ ಮತ್ತು ಜೀವನ ವೆಚ್ಚಕ್ಕೆ 30 ಸಾವಿರ ರೂಪಾಯಿ ಸಾಕಾಗುತ್ತದೆಯೇ ಎಂಬ ಪ್ರಶ್ನೆಯೂ ಇದೆ. ಅಷ್ಟು ಮಾತ್ರವಲ್ಲದೆ ಈ ಗರ್ಭಧಾರಣೆಯಿಂದಾಗಿ ಉಂಟಾಗುವ ದೈಹಿಕ ವೇತನೆ, ಆರೋಗ್ಯದ ಹಾನಿ ಮತ್ತು ಉದ್ಯೋಗ ಕಳೆದುಕೊಳ್ಳುವ ಭೀತಿಯ ಬಗ್ಗೆ ಸರ್ಕಾರ ಚಿಂತನೆಯೇ ನಡೆಸಿಲ್ಲ.
ಈಗ ಮಹಿಳೆಯರ ವಾದವೇನು?
ಸರ್ಕಾರಗಳು ಜನಸಂಖ್ಯೆಯನ್ನು ಕೇವಲ ಅಂಕಿ-ಅಂಶಗಳಾಗಿ ನೋಡಿದರೆ, ಮಹಿಳೆಯರು ಅದನ್ನು ತಮ್ಮ ಜೀವ ಮತ್ತು ಜೀವನದ ಹೋರಾಟವಾಗಿ ನೋಡುತ್ತಾರೆ. ಗರ್ಭಧಾರಣೆ, ಹೆರಿಗೆಯ ವೇದನೆ ಮತ್ತು ಹೆರಿಗೆಯ ನಂತರದ ಆರೋಗ್ಯದ ಏರುಪೇರುಗಳನ್ನು ಅನುಭವಿಸುವವಳು ಮಹಿಳೆ. ಸೂಕ್ತ ಪೌಷ್ಟಿಕಾಂಶ ಮತ್ತು ಆರೋಗ್ಯ ಸೌಲಭ್ಯಗಳಿಲ್ಲದೆ ಹೆಚ್ಚು ಮಕ್ಕಳನ್ನು ಹೆರುವುದು ಆಕೆಯ ಜೀವಕ್ಕೆ ತರುವ ಅಪಾಯ.
ಮಕ್ಕಳನ್ನು ಕೇವಲ ಹೆತ್ತರೆ ಸಾಲದು, ಅವರನ್ನು ಸಾಕಿ ಸದುದ್ದೇಶದ ಪ್ರಜೆಗಳನ್ನಾಗಿ ಮಾಡುವ ಸಂಪೂರ್ಣ ಜವಾಬ್ದಾರಿ, ಆರೈಕೆಯ ಶ್ರಮ ಹೆಚ್ಚಾಗಿ ತಾಯಂದಿರ ಮೇಲೆಯೇ ಬೀಳುತ್ತದೆ. ಇದಕ್ಕೆ ಸರ್ಕಾರ ಬೇಕಾದಷ್ಟು ಆರ್ಥಿಕ ಸಹಾಯ ಮಾಡುತ್ತದೆಯೇ? ಅಷ್ಟಕ್ಕೂ ದೇಶದ ಅಥವಾ ರಾಜ್ಯದ ಭವಿಷ್ಯಕ್ಕಾಗಿ ಮಹಿಳೆಯರ ಗರ್ಭಾಶಯಗಳನ್ನು ನೀತಿ ನಿರೂಪಣೆಯ ಸಾಧನಗಳನ್ನಾಗಿ ಬಳಸುವುದು ಎಷ್ಟು ಸರಿ ಎಂಬುದು ಇಂದಿನ ಮುಖ್ಯ ಪ್ರಶ್ನೆ.
ಜನಸಂಖ್ಯಾ ನಿಯಂತ್ರಣದ ಅಗತ್ಯವಿದ್ದಾಗ “ಕುಟುಂಬ ಯೋಜನೆ”ಯ ಭಾರವನ್ನು ಮಹಿಳೆಯರ ಮೇಲೆಯೇ ಹಾಕಲಾಯಿತು. ಈಗ ಜನಸಂಖ್ಯೆ ಬೇಕೆಂದಾಗಲೂ “ಹೆಚ್ಚು ಹೆರಿ” ಎಂಬ ಒತ್ತಡವನ್ನು ಮಹಿಳೆಯರ ಮೇಲೆಯೇ ಹೇರಲಾಗುತ್ತಿದೆ. ಇದು ಮಹಿಳೆಯ ಸ್ವಾಯತ್ತತೆ ಮತ್ತು ಆಕೆಯ ಸಂತಾನೋತ್ಪತ್ತಿಯ ಹಕ್ಕಿನ ಮೇಲಿನ ಹಸ್ತಕ್ಷೇಪವಲ್ಲವೇ? ಅಷ್ಟ,ಕ್ಕೂ ಹೆರಿಗೆ ಎಂಬುದು ಕೇವಲ ದೇಶದ ಜನಸಂಖ್ಯೆಯ ಲೆಕ್ಕಾಚಾರವಲ್ಲ, ಅದು ಒಬ್ಬ ಮಹಿಳೆಯ ವೈಯಕ್ತಿಕ ಹಕ್ಕು ಮತ್ತು ಆಕೆಯ ದೇಹದ ಮೇಲಿನ ಅಧಿಕಾರ.
ಜನಸಂಖ್ಯಾ ಸಮತೋಲನ ಕಾಯ್ದುಕೊಳ್ಳುವುದು ಸರ್ಕಾರದ ದೃಷ್ಟಿಯಿಂದ ಮುಖ್ಯವಾಗಿರಬಹುದು. ಆದರೆ, ಮಹಿಳೆಯರ ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಮಕ್ಕಳನ್ನು ಬೆಳೆಸಲು ಬೇಕಾದ ಗುಣಮಟ್ಟದ ಜೀವನೋಪಾಯವನ್ನು ಖಾತರಿಪಡಿಸದೆ, ಕೇವಲ “ಹೆಚ್ಚು ಮಕ್ಕಳನ್ನು ಹೆರಿ” ಎಂದು ಕರೆ ನೀಡುವುದು ಏಕಪಕ್ಷೀಯ ನಿಲುವು. ಹೆರುವವರ ಕಷ್ಟವನ್ನು ಅರಿತು, ತಾಯ್ತನವನ್ನು ಗೌರವಿಸಿ, ಮಹಿಳೆಗೆ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ನೀಡಿದಾಗ ಮಾತ್ರ ಈ ಚರ್ಚೆಗೆ ನ್ಯಾಯ ಸಿಗಲು ಸಾಧ್ಯ.
ಮೂಲ: ಇಂಡಿಯನ್ ಎಕ್ಸ್ಪ್ರೆಸ್ (ಪತ್ರಕರ್ತೆ ನಿಖಿಲಾ ಹೆನ್ಸಿ ವರದಿ)

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




