ಸುಪ್ರೀಂ ಕೋರ್ಟ್‌ನಲ್ಲಿ ಈ ಪದ್ಧತಿಯನ್ನು ನಿಷೇಧಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್) ಸಲ್ಲಿಕೆಯಾಗಿವೆ. ಸುಪ್ರೀಂ ಶಬರಿಮಲೆ ಪ್ರಕರಣದ ವಿಚಾರಣೆಯೊಂದಿಗೆ ಈ ಅರ್ಜಿಯನ್ನೂ ಸೇರಿಸಿದೆ. ಅನೇಕ ಬೋಹ್ರಾ ಮಹಿಳೆಯರೇ 'WeSpeakOut' ನಂತಹ ಸಂಘಟನೆಗಳ ಮೂಲಕ ಈ ಪದ್ಧತಿಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ.
ಸ್ತ್ರೀ ಜನನಾಂಗ ಛೇದನ (Female Genital Mutilation – FGM) ಸದ್ಯ ನಮ್ಮ ದೇಶದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಮಹಿಳೆಯರನ್ನು ನಿಯಂತ್ರಿಸಲೆಂದೇ, ಹೆಣ್ಣಿನ ಬಯಕೆಗಳ ಹರಣಗೊಳಿಸಲೆಂದೇ ಈ ಪುರುಷ ಪ್ರಧಾನ ಸಮಾಜ ಕಟ್ಟಿಕೊಂಡಿರುವ ಈ ಪದ್ಧತಿ ವಿರುದ್ಧವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಸುನ್ನತಿ, ಜನನಾಂಗ ಊನಗೊಳಿಸುವಿಕೆ ನಡುವೆ ವ್ಯತ್ಯಾಸವಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಈ ಅರ್ಜಿ ವಿಚಾರಣೆಯನ್ನು ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕೆ ನಿಷೇಧ, ಮುಸ್ಲಿಂ ಮಹಿಳೆಯರಿಗೆ ಮಸೀದಿ ಪ್ರವೇಶ ನಿಷೇಧ ಸೇರಿದಂತೆ ಇತರೆ ಮಹಿಳಾ ಹಕ್ಕುಗಳ ಸಂಬಂಧಿಸಿದ ಅರ್ಜಿಗಳ ವಿಚಾರಣೆಯೊಂದಿಗೆ ಸೇರಿಸಿ ವಿಚಾರಣೆ ನಡೆಸಲು ನಿರ್ಧರಿಸಿದೆ.
ಮಾನವ ಹಕ್ಕುಗಳ ಉಲ್ಲಂಘನೆಯ ಅತ್ಯಂತ ಕ್ರೂರ ರೂಪಗಳಲ್ಲಿ ಒಂದು ಸ್ತ್ರೀ ಜನನಾಂಗ ಛೇದನ. ದೇಶದಲ್ಲಿ ‘ಖತ್ನಾ’ ಅಥವಾ ‘ಫೀಹಾದ್’ ಎಂದು ಕರೆಯಲಾಗುವ ಈ ದುಷ್ಕೃತ್ಯವು ಕಂಡೂ ಕಾಣದಂತೆ ನಡೆಯುತ್ತಿದೆ. ಮಹಿಳೆಯರ ಲೈಂಗಿಕತೆ ಮತ್ತು ದೇಹದ ಮೇಲಿನ ನಿಯಂತ್ರಣವನ್ನು ಸಾಧಿಸಲು ಈ ಪುರುಷ ಪ್ರಧಾನ ವ್ಯವಸ್ಥೆ ರೂಪಿಸಿದ ಈ ಆಚರಣೆಯು ಹೆಣ್ಣುಮಕ್ಕಳನ್ನು ಜೀವನದುದ್ದಕ್ಕೂ ದೈಹಿಕ ಮತ್ತು ಮಾನಸಿಕ ಹಿಂಸೆಗೆ ದೂಡುವಂತದ್ದು.
ಇದನ್ನು ಓದಿದ್ದೀರಾ? ಶಬರಿಮಲೆ ಪ್ರಕರಣ | ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಿದರೆ ಧರ್ಮಕ್ಕೆ ಅಡ್ಡಿಯಾಗಬಹುದು: ಸುಪ್ರೀಂ ಕೋರ್ಟ್
ಏನಿದು ಸ್ತ್ರೀ ಜನನಾಂಗ ಛೇದನ (FGM)?
ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, ವೈದ್ಯಕೀಯೇತರ ಕಾರಣಗಳಿಗಾಗಿ ಸ್ತ್ರೀ ಜನನಾಂಗದ ಭಾಗಗಳನ್ನು ಭಾಗಶಃ ಅಥವಾ ಸಂಪೂರ್ಣವಾಗಿ ತೆಗೆದುಹಾಕುವ ಅಥವಾ ಗಾಯಗೊಳಿಸುವ ಪ್ರಕ್ರಿಯೆಯನ್ನು ಸ್ತ್ರೀ ಜನನಾಂಗ ಛೇದನ ಅಥವಾ FGM ಎಂದು ಹೇಳಲಾಗುತ್ತದೆ. ಸುನ್ನತಿ (ಪುರುಷರ ಜನನಾಂಗದ ತುದಿ ಚರ್ಮ ತೆಗೆಯುವುದು) ಮತ್ತು ಎಫ್‌ಜಿಎಂ ಪ್ರಕ್ರಿಯೆ ಇವೆರಡೂ ವಿಭಿನ್ನವಾದುದ್ದು. ಸುನ್ನತಿಯಿಂದ ಸೋಂಕು ತಡೆಗಟ್ಟಲು ಸಹಾಯವಾಗುತ್ತದೆ. ಆದರೆ ಸ್ತ್ರೀ ಜನನಾಂಗ ಛೇದನದಿಂದ ಯಾವ ಪ್ರಯೋಜನವೂ ಇಲ್ಲ ಬದಲಾಗಿ ಆರೋಗ್ಯದ ಮೇಲೆ ದುಷ್ಪರಿಣಾಮಗಳೇ ಹೆಚ್ಚು.
ಪ್ರಮುಖವಾಗಿ ನಾಲ್ಕು ರೀತಿಯಲ್ಲಿ ಸ್ತ್ರೀ ಜನನಾಂಗ ಛೇದನ ಮಾಡಲಾಗುತ್ತದೆ.
- ಕ್ಲಿಟೊರಿಡೆಕ್ಟಮಿ (Clitoridectomy): ಯೋನಿಯಲ್ಲಿರುವ ಕ್ಲಿಟೋರಿಸ್‌ನ (ಸ್ತ್ರೀ ಜನನಾಂಗದ ಅತ್ಯಂತ ಸೂಕ್ಷ್ಮವಾದ, ಲೈಂಗಿಕ ಆನಂದವನ್ನು ನೀಡುವ ಪ್ರಮುಖ ಅಂಗ) ಭಾಗಶಃ ಅಥವಾ ಪೂರ್ಣವಾಗಿ ತೆಗೆಯುವುದು.
- ಎಕ್ಸಿಸನ್ (Excision): ಕ್ಲಿಟೋರಿಸ್ ಮತ್ತು ಲ್ಯಾಬಿಯಾ ಮಿನೋರಾ (ಎರಡು ತೆಳುವಾದ ಚರ್ಮದ ಒಳ ಮಡಿಕೆಗಳು) ಭಾಗಶಃ ಅಥವಾ ಪೂರ್ಣವಾಗಿ ತೆಗೆಯುವುದು.
- ಇನ್ಫಿಬ್ಯುಲೇಷನ್ ( Infibulation): ಯೋನಿ ದ್ವಾರವನ್ನು ಕಿರಿದುಗೊಳಿಸುವುದು. ಅಕ್ಕಪಕ್ಕದ ಅಂಗಾಂಶಗಳನ್ನು ಕತ್ತರಿಸಿ ಅವುಗಳನ್ನು ಹೊಲಿದು ಮೂತ್ರ ವಿಸರ್ಜಿಸಲು ಒಂದು ಸಣ್ಣ ರಂಧ್ರವನ್ನು ಮಾತ್ರ ಉಳಿಸುವುದು.
- ಯೋನಿಯನ್ನು ಕೆರೆದು ಗಾಯ ಮಾಡುವುದು, ಸುಡುವುದು ಅಥವಾ ಯೋನಿಗೆ ಲೋಹವನ್ನು ಚುಚ್ಚುವುದು
ಈ ಪದ್ಧತಿ ಆರಂಭವಾಗಿದ್ದು ಎಲ್ಲಿ?
ಹೆಣ್ಣುಮಕ್ಕಳ ‘ಲೈಂಗಿಕ ಆಸೆಯನ್ನು ಹತ್ತಿಕ್ಕಲು’ ಮತ್ತು ಆಕೆ ತನ್ನ ಪತಿ ಬಿಟ್ಟು ಬೇರೆ ಯಾರೊಂದಿಗೂ ಲೈಂಗಿಕ ಆಕರ್ಷಣೆಗೆ ಒಳಗಾಗಬಾರದು, ಲೈಂಗಿಕ ಕ್ರಿಯೆ ನಡೆಸಬಾರದು ಎಂಬ ಉದ್ದೇಶದಿಂದ ಈ ಪುರುಷ ಪ್ರಧಾನ ವ್ಯವಸ್ಥೆಯು ‘ಸ್ತ್ರೀ ಜನನಾಂಗ ಛೇದನ’ವನ್ನು ಸಂಪ್ರದಾಯದ ನೆಪದಲ್ಲಿ ನಡೆಸುತ್ತಿದೆ.
ಈ ಪದ್ಧತಿಯ ಮೂಲವು ನಿಖರವಾಗಿ ತಿಳಿದಿಲ್ಲವಾದರೂ, ಇದರ ಇತಿಹಾಸವು ಸಾವಿರಾರು ವರ್ಷಗಳಷ್ಟು ಹಳೆಯದು. ಇದು ಪ್ರಾಚೀನ ಕಾಲದಿಂದಲೂ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಆಚರಣೆಯಲ್ಲಿದೆ ಎಂದು ಇತಿಹಾಸಕಾರರು ನಂಬಿದ್ದಾರೆ. ಈ ಆಚರಣೆಯು ಇತಿಹಾಸಪೂರ್ವದ ಆಫ್ರಿಕಾ ಖಂಡದಲ್ಲಿ, ಮುಖ್ಯವಾಗಿ ಈಜಿಪ್ಟ್ ಅಥವಾ ನೈಲ್ ಕಣಿವೆಯ ಪ್ರದೇಶಗಳಲ್ಲಿ ಆರಂಭವಾಗಿರಬಹುದು ಎಂದು ನಂಬಲಾಗಿದೆ.
ಇದನ್ನು ಓದಿದ್ದೀರಾ? ಪುರುಷರಿಗಿಂತ ಅಧಿಕ ಮಹಿಳೆಯರನ್ನು ಕಾಡುತ್ತದೆ ಮೈಗ್ರೇನ್: ವೈದ್ಯರು ಹೇಳುವುದೇನು?
ಸಂಶೋಧನೆಗಳ ಪ್ರಕಾರ, ಪ್ರಾಚೀನ ಈಜಿಪ್ಟ್‌ನ ‘ಮಮ್ಮಿ’ಗಳಲ್ಲಿ ಈ ಪದ್ಧತಿಯ ಕುರುಹುಗಳು ಕಂಡುಬಂದಿವೆ. ಹಾಗಾಗಿ ಇದನ್ನು ‘ಫೇರೋನಿಕ್ ಸುನ್ನತಿ’ ಎಂದೂ ಕರೆಯಲಾಗುತ್ತದೆ. ಹಾಗೆಯೇ ಇದು ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಸೀಮಿತವಾಗಿದ್ದು ಅಲ್ಲ. ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕಿಂತಲೂ ಮುಂಚಿತವಾಗಿಯೇ ಈ ಪದ್ಧತಿ ಅಸ್ತಿತ್ವದಲ್ಲಿತ್ತು. ಕಾಲಾನಂತರದಲ್ಲಿ ಇದನ್ನು ಧಾರ್ಮಿಕ ಚೌಕಟ್ಟಿನೊಳಗೆ ತರುವ ಪ್ರಯತ್ನ ನಡೆದಿದೆ. ಪ್ರಮುಖವಾಗಿ ಆಫ್ರಿಕಾದ 30ಕ್ಕೂ ಹೆಚ್ಚು ದೇಶಗಳಲ್ಲಿ, ಮಧ್ಯಪ್ರಾಚ್ಯ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಇಂದಿಗೂ ನಡೆಯುತ್ತಿದೆ.
ದೇಶದಲ್ಲಿ ‘ಖತ್ನಾ’ ಅಥವಾ ‘ಫೀಹಾದ್’
ದೇಶದಲ್ಲಿ ‘ಖತ್ನಾ’ ಅಥವಾ ‘ಫೀಹಾದ್’ ಎಂಬ ಈ ಅಮಾನುಷ ಪದ್ಧತಿಯು ದಾವುದಿ ಬೊಹ್ರಾ ಸಮುದಾಯದಲ್ಲಿ ಕಂಡುಬರುತ್ತದೆ. ಇದು ಶಿಯಾ ಮುಸ್ಲಿಂ ಪಂಥದ ಒಂದು ಉಪಪಂಗಡವಾಗಿದೆ. ಈ ಸಮುದಾಯದ ನಂಬಿಕೆಯ ಪ್ರಕಾರ, ಇದು ಧಾರ್ಮಿಕ ವಿಧಿ. ದಾವುದಿ ಬೊಹ್ರಾ ಸಮುದಾಯದ ಸಂಖ್ಯೆ ಭಾರತದಲ್ಲಿ ಅತಿ ಕಡಿಮೆ. ಭಾರತದಲ್ಲಿ ಸುಮಾರು 10 ಲಕ್ಷದಿಂದ 15 ಲಕ್ಷ ದಾವುದಿ ಬೊಹ್ರಾಗಳು ಇದ್ದಾರೆ ಎಂದು ಅಂದಾಜಿಸಲಾಗಿದೆ. ಮಹಾರಾಷ್ಟ್ರದ ಮುಂಬೈ, ಗುಜರಾತ್‌ನ ಸೂರತ್, ಅಹಮದಾಬಾದ್ ಮತ್ತು ಜಾಮ್‌ನಗರ, ರಾಜಸ್ಥಾನದ ಉದಯಪುರ ಮತ್ತು ಸುತ್ತಮುತ್ತಲಿನ ಪ್ರದೇಶ, ಮಧ್ಯಪ್ರದೇಶದ ಇಂದೋರ್ ಮತ್ತು ಉಜ್ಜಯಿನಿ ನಗರಗಳಲ್ಲಿ ಈ ಸಮುದಾಯ ನೆಲೆಸಿದೆ. ಸಮುದಾಯವು ಈ ಪದ್ಧತಿಯನ್ನು ಅತಿ ರಹಸ್ಯವಾಗಿ ಮನೆಗಳಲ್ಲಿ ಅಥವಾ ಖಾಸಗಿ ಕ್ಲಿನಿಕ್‌ಗಳಲ್ಲಿ ನಡೆಸುತ್ತಾ ಬಂದಿದೆ, ಇಂದಿಗೂ ಸದ್ದಿಲ್ಲದೆ ನಡೆಸುತ್ತಿದೆ!
ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಈ ಪದ್ಧತಿಯನ್ನು ನಿಷೇಧಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್) ಸಲ್ಲಿಕೆಯಾಗಿವೆ. ಅನೇಕ ಬೋಹ್ರಾ ಮಹಿಳೆಯರೇ ‘WeSpeakOut’ ನಂತಹ ಸಂಘಟನೆಗಳ ಮೂಲಕ ಈ ಪದ್ಧತಿಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಭಾರತೀಯ ದಂಡ ಸಂಹಿತೆ (IPC) ಮತ್ತು ಪೋಕ್ಸೊ ಕಾಯಿದೆಯಡಿ ಮಕ್ಕಳ ಮೇಲೆ ಇಂತಹ ಕೃತ್ಯವೆಸಗುವುದು ಶಿಕ್ಷಾರ್ಹ ಅಪರಾಧವಾಗಿದ್ದರೂ, ಸ್ತ್ರೀ ಜನನಾಂಗ ಛೇದನಕ್ಕಾಗಿಯೇ ಪ್ರತ್ಯೇಕವಾದ ವಿಶೇಷ ಕಾನೂನು ಭಾರತದಲ್ಲಿ ಇನ್ನೂ ಜಾರಿಯಾಗಿಲ್ಲ. ಈ ವಿಶೇಷ ಕಾನೂನು ರಚನೆಗೆ ಆಗ್ರಹ ಕೇಳಿಬಂದಿದೆ.
ತಪ್ಪು ಕಲ್ಪನೆಗಳು, ದುಷ್ಪರಿಣಾಮಗಳು
ಮಹಿಳೆಯರ ‘ಪವಿತ್ರತೆ’ ಮತ್ತು ‘ಶೀಲ’ ಕಾಪಾಡಲು ಈ ಸ್ತ್ರೀ ಜನನಾಂಗ ಛೇದನ ಮುಖ್ಯ, ಮದುವೆಗೆ ಅರ್ಹತೆ ಪಡೆಯಲು ಇದು ಅನಿವಾರ್ಯ ಎಂಬ ನಂಬಿಕೆಯಿದೆ. ಇದು ಸೌಂದರ್ಯ ಮತ್ತು ನೈರ್ಮಲ್ಯಕ್ಕೆ ಪೂರಕ ಎಂಬ ತಪ್ಪು ಕಲ್ಪನೆಯೂ ಇದೆ. ಆದರೆ ಈ ಕೆಟ್ಟ ಪದ್ಧತಿಯಿಂದ ಹೆಣ್ಣು ಮಕ್ಕಳು ಪಡುವ ಪಾಡು ಅಷ್ಟಿಷ್ಟಲ್ಲ.
ಸ್ತ್ರೀ ಜನನಾಂಗ ಛೇದನದ ನಂತರ ಗಾಯಗಳು ಸರಿಯಾಗಿ ವಾಸಿಯಾಗದೆ, ನರಗಳ ಹಾನಿಯಿಂದಾಗಿ ಜನನಾಂಗದ ಭಾಗದಲ್ಲಿ ಜೀವನಪೂರ್ತಿ ನೋವು ಉಂಟಾಗಿರುವ ಅದೆಷ್ಟೋ ಪ್ರಕರಣಗಳಿವೆ. ಶುಚಿಯಿಲ್ಲದ ಬ್ಲೇಡ್ ಬಳಸುವುದರಿಂದ ಮೂತ್ರನಾಳದ ಸೋಂಕುಗಳು (UTI) ಮತ್ತು ಜನನಾಂಗದ ಸೋಂಕುಗಳು ಪದೇ ಪದೇ ಬಾಧಿಸುತ್ತವೆ. ಇದು ದೀರ್ಘಕಾಲದ ಕಿಡ್ನಿ ಸಮಸ್ಯೆಗಳಿಗೂ ಕಾರಣವಾಗಬಹುದು. ಜನನಾಂಗದ ಭಾಗವನ್ನು ಭಾಗಶಃ ಮುಚ್ಚುವುದರಿಂದ ಮುಟ್ಟಿನ ರಕ್ತ ಸರಾಗವಾಗಿ ಹೊರಹೋಗಲು ಸಾಧ್ಯವಾಗದೆ ತೀವ್ರವಾದ ಹೊಟ್ಟೆ ನೋವು ಮತ್ತು ಸೆಳೆತ ಉಂಟಾಗುತ್ತದೆ. ಮೂತ್ರ ವಿಸರ್ಜಿಸುವಾಗ ನೋವು ಉಂಟಾಗುವುದು ಅಥವಾ ಮೂತ್ರವು ಹನಿ ಹನಿಯಾಗಿ ಹೋಗುವ ಸಮಸ್ಯೆಯೂ ಹಲವು ಹೆಣ್ಣುಮಕ್ಕಳನ್ನು ಕಾಡುತ್ತಿದೆ.
ಇವಿಷ್ಟು ಮಾತ್ರವಲ್ಲದೆ ಲೈಂಗಿಕ ಸುಖ ಎಂಬುದು ಬರೀ ಪುರುಷನಿಗೆ ದಕ್ಕುವಂತೆ ಮಾಡುವ ಅಮಾನುಷ ಕೃತ್ಯ ಇದಾಗಿದೆ. ಜನನಾಂಗ ಛೇದನಕ್ಕೆ ಒಳಗಾಗಿರುವ ಮಹಿಳೆಯರಿಗೆ ಲೈಂಗಿಕ ಕ್ರಿಯೆಯ ಸಮಯದಲ್ಲಿ ವಿಪರೀತ ನೋವು ಉಂಟಾಗುತ್ತದೆ. ಇದರಿಂದಾಗಿ ದೈಹಿಕ ಅಸ್ವಸ್ಥತೆಯ ಜೊತೆಗೆ ಮಾನಸಿಕವಾಗಿಯೂ ಲೈಂಗಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಹಿಳೆಗೆ ಲೈಂಗಿಕ ಆನಂದವನ್ನು ನೀಡುವ ಕ್ಲಿಟೋರಿಸ್‌ನ ಅನ್ನು ತೆಗೆದುಹಾಕುವುದರಿಂದಾಗಿ ಮಹಿಳೆಗೆ ಲೈಂಗಿಕ ಆನಂದವನ್ನು ಪಡೆಯಲು ಕಷ್ಟವಾಗುತ್ತದೆ.
ಇದನ್ನು ಓದಿದ್ದೀರಾ? ಹಬ್ಬದ ದೀಪಗಳ ಹಿಂದೆ ಮೌನದ ನೋವುಗಳು
ಇವಿಷ್ಟು ಮಾತ್ರವಲ್ಲದೆ ಹೆರಿಗೆಯ ಸಮಯದಲ್ಲಿ ಅಪಾಯ ಉಂಟಾಗುತ್ತದೆ. ಜನನಾಂಗದ ದಾರಿ ಕಿರಿದಾಗಿರುವುದರಿಂದ ಹೆರಿಗೆಯ ಸಮಯದಲ್ಲಿ ತೀವ್ರವಾದ ಸಂಕಷ್ಟ ಎದುರಾಗುತ್ತದೆ. ರಕ್ತಸ್ರಾವ ಹೆಚ್ಚಾಗಬಹುದು ಅಥವಾ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಅಗತ್ಯ ಬರಬಹುದು. ಕಷ್ಟಕರವಾದ ಹೆರಿಗೆಯಿಂದಾಗಿ ಜನನಾಂಗ ಮತ್ತು ಮೂತ್ರಕೋಶ ಅಥವಾ ಮಲದ್ವಾರದ ನಡುವೆ ರಂಧ್ರ ಉಂಟಾಗಬಹುದು (Obstetric Fistula), ಇದು ಜೀವನಪೂರ್ತಿ ಮೂತ್ರ ಅಥವಾ ಮಲ ಸೋರಿಕೆಯ ಸಮಸ್ಯೆಗೆ ಕಾರಣವಾಗಬಹುದು.
ಇವೆಲ್ಲವನ್ನೂ ದಾಟಿ ಹೆಣ್ಣುಮಗು ತನ್ನ ದೇಹವನ್ನು ಅರಿಯುವ ಮುನ್ನವೇ ಸಣ್ಣ ವಯಸ್ಸಲ್ಲೇ ಆಕೆಯ ದೇಹಕ್ಕೆ ಮಾಡುವ ಈ ಹಾನಿಯು ಮಾನಸಿಕ ಮತ್ತು ಭಾವನಾತ್ಮಕ ಆಘಾತವನ್ನುಂಟು ಮಾಡುತ್ತದೆ. ಹಲವು ಮಹಿಳೆಯರಿಗೆ ಜೀವನದುದ್ದಕ್ಕೂ ಭಯ, ಆತಂಕ ಮತ್ತು ಖಿನ್ನತೆಗೆ ಈ ಅಮಾನುಷ ಸಂಪ್ರದಾಯ ಕಾರಣವಾಗಿದೆ. ಅದೆಷ್ಟೋ ಮಹಿಳೆಯರಿಗೆ ತನ್ನ ದೇಹದ ಮೇಲಿನ ನಿಯಂತ್ರಣ ಕಳೆದುಕೊಂಡ ಭಾವನೆ ಮತ್ತು ಸಾಮಾಜಿಕ ಕೀಳರಿಮೆ ಕಾಡುತ್ತಿದೆ.
ಸ್ತ್ರೀ ಜನನಾಂಗ ಛೇದನಕ್ಕೆ ಒಳಗಾದ ಮಹಿಳೆ ಅನುಭವಿಸುವ ನೋವನ್ನು ನಮಗೆ ಕಲ್ಪಿಸಲು ಅಸಾಧ್ಯ. ಇದು ಪುರುಷ ಪ್ರಧಾನ ಸಮಾಜದಲ್ಲಿ ಬೇರೂರಿರುವ ಲಿಂಗ ಅಸಮಾನತೆಯ ತುತ್ತತುದಿ. ಸಂಪ್ರದಾಯದ ಹೆಸರಲ್ಲಿ ಮಹಿಳೆಯರನ್ನು ಹತ್ತಿಕ್ಕುವ ಈ ಪದ್ಧತಿಯನ್ನು ಕೇವಲ ಸಾಂಸ್ಕೃತಿಕ ಅಥವಾ ಧಾರ್ಮಿಕ ಆಚರಣೆಯೆಂದು ನೋಡುವುದು ತಪ್ಪಾಗುತ್ತದೆ. ಮೂಲಭೂತವಾಗಿ ಇದು ಮಹಿಳೆಯರ ಸ್ವಾಯತ್ತತೆಯನ್ನು ಹತ್ತಿಕ್ಕುವ ಒಂದು ಸಾಧನ ಎಂದರೆ ತಪ್ಪಾಗಲಾರದು.
ಅನೇಕ ಸಮುದಾಯಗಳಲ್ಲಿ ಈ ಪ್ರಕ್ರಿಯೆಗೆ ಒಳಗಾಗದ ಮಹಿಳೆಯರನ್ನು ‘ಅಶುದ್ಧ’ ಎಂದು ಕರೆಯಲಾಗುತ್ತದೆ. ಅವರಿಗೆ ಮದುವೆಯ ಮಾರುಕಟ್ಟೆಯಲ್ಲಿ ಬೆಲೆಯೂ ಇರುವುದಿಲ್ಲ. ಈ ಸಾಮಾಜಿಕ ಬಹಿಷ್ಕಾರದ ಭಯದಿಂದ ಅದೆಷ್ಟೋ ತಾಯಂದಿರೇ ತಮ್ಮ ಹೆಣ್ಣುಮಕ್ಕಳಿಗೆ ಈ ನೋವಿನ ಪ್ರಕ್ರಿಯೆಯನ್ನು ಮಾಡಿಸುವಂತೆ ಪ್ರೇರೇಪಿಸುತ್ತದೆ. ಪುರುಷ ಪ್ರಧಾನ ಮೌಲ್ಯಗಳು ಹೇಗೆ ಮಹಿಳೆಯರ ಮನಸ್ಥಿತಿಯನ್ನೂ ಆಕ್ರಮಿಸಿವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮಹಿಳೆಯು ತನ್ನ ದೇಹದ ಮೇಲೆ ಸಂಪೂರ್ಣ ಅಧಿಕಾರವನ್ನು ಹೊಂದಿದಾಗ ಮತ್ತು ಸಮಾಜವು ಅವಳನ್ನು ಒಬ್ಬ ಸ್ವತಂತ್ರ ವ್ಯಕ್ತಿಯಾಗಿ ಗೌರವಿಸಿದಾಗ ಮಾತ್ರ ಇಂತಹ ಪದ್ಧತಿಗಳು ಇತಿಹಾಸದ ಪುಟ ಸೇರಲು ಸಾಧ್ಯ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



