ಇಂದು ಗ್ರಾಮೀಣ ಉದ್ಯೋಗ ಮತ್ತು ಆರ್ಥಿಕತೆ ಪೊರೆಯುತ್ತಿರುವುದು ಪಶುಪಾಲನಾ ಕ್ಷೇತ್ರ. ಇದೇ ಕ್ಷೇತ್ರದ ಆಡು, ಕುರಿಗಳ ಮಾಂಸ, ಚರ್ಮ, ಹಾಲು, ಗೊಬ್ಬರ, ಉಣ್ಣೆ ಇತ್ಯಾದಿಗಳಿಗೆ ಕುರಿಯನ್ ದೂರದೃಷ್ಟಿ ಅಳವಡಿಸಿಕೊಂಡರೆ, ವಿಸ್ತರಿಸಿದರೆ, ಸರಿಸುಮಾರು ಒಂದು ಲಕ್ಷ ಕೋಟಿ ರೂ.ಗಳ ಆರ್ಥಿಕತೆಯನ್ನು ಕರ್ನಾಟಕದಲ್ಲಿ ಸೃಷ್ಟಿಸಬಹುದಾಗಿದೆ.
ಕರ್ನಾಟಕದಲ್ಲಿ, 1983ರಲ್ಲಿ ಜನಪರ ಚಳವಳಿಗಳ ಆಕ್ರೋಶಕ್ಕೆ ಕಾಂಗ್ರೆಸ್ ಧೂಳಿಪಟವಾಗಿ ಜನತಾ ಪಕ್ಷ ಅಧಿಕಾರಕ್ಕೆ ಬಂತು. ದೆಹಲಿ ನಾಯಕರ ಪ್ರಭಾವದಿಂದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ಅಂದಿನ ಲಂಕೇಶ್ ಪತ್ರಿಕೆಯ ಸಂಪಾದಕ ಲಂಕೇಶ್ ಆದಿಯಾಗಿ ಚಳವಳಿಗಳ ನೇತಾರರ ಕೆಂಗಣ್ಣಿಗೆ ಹೆಗಡೆ ಗುರಿಯಾದರು. ಆಗ ಇದನ್ನೆಲ್ಲ ತೇಪೆ ಹಾಕಲು ಪ್ರಗತಿಪರರ ಡಾರ್ಲಿಂಗ್ ಆಗಿದ್ದ ನಜೀರ್ ಸಾಬರನ್ನು ಮಹತ್ವದ ಖಾತೆಗೆ ಮಂತ್ರಿ ಮಾಡಲು ಹೆಗಡೆ ಹವಣಿಸಿದರು. ಗುಂಡ್ಲುಪೇಟೆ ಬಸ್ ಹತ್ತಿದ್ದ ನಜೀರ್ ಸಾಬರಿಗೆ ಕರೆ ಹೋಯಿತು; ಹಣಕಾಸು, ಗೃಹ, ಕಂದಾಯ ಇಲಾಖೆಗಳನ್ನು ಕೊಡಲು ಆಹ್ವಾನ ನೀಡಿತು. ಆದರೆ, ಅಂದಿಗೆ ಯಾರಿಗೂ ಬೇಡವಾದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ನಜೀರ್ ಸಾಬರು ಆಯ್ಕೆ ಮಾಡಿಕೊಂಡರು. ಹೆಗಡೆ ಪರಿಪರಿಯಾಗಿ ವಿನಂತಿಸಿಕೊಂಡರೂ, ನಜೀರ್ ಸಾಬ್ ಒಪ್ಪಲಿಲ್ಲ. ಇದು ಇತಿಹಾಸ.
ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಂಪದ್ಭರಿತ ಖಾತೆ ಎನಿಸಿಕೊಂಡಿದೆ. ಮಹತ್ವದ ಖಾತೆಯಾಗಿ ಉನ್ನತೀಕರಣಗೊಂಡಿದೆ. ಕೆಲಸಗಾರ ರಾಜಕೀಯ ನಾಯಕನಿಗೆ ಇಚ್ಛಾಶಕ್ತಿ ಇದ್ದರೆ, ಜನಪರ ಕೆಲಸಗಳನ್ನು ಮಾಡುವ ಮನಸ್ಸಿದ್ದರೆ, ಈ ಖಾತೆಯಲ್ಲಿ ವಿಪುಲ ಅವಕಾಶಗಳಿವೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಈಗ ಇದೆಲ್ಲಾ ಯಾಕೆ ಎಂದು ಕೇಳಬಹುದು. ಪಶುಪಾಲನಾ ಇಲಾಖೆಯೂ ಈಗ ಇದೇ ರೀತಿ, 1983ರಲ್ಲಿದ್ದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಂತೆಯೇ ಇದೆ. ಹೊಸಬರ ಕೈಗೆ ಕೊಡಲಾಗಿದೆ. ನಜೀರ್ ಸಾಬರಂತೆ ಅದನ್ನು ಮಹತ್ವದ ಖಾತೆಯನ್ನಾಗಿ ಮಾಡುವರೋ… ಎಂದು ನೋಡಬೇಕಿದೆ.
ಏಕೆಂದರೆ, ಪಶುಪಾಲನೆ ಜನರ ಜೀವನಾಡಿ. ಭೂಹೀನ ಸಮುದಾಯಗಳ ಮೊದಲ ಆಯ್ಕೆ. ಇವತ್ತು ನಿರುದ್ಯೋಗಿ ತರುಣ-ತರುಣಿಯರು ಆಸಕ್ತಿ ತೋರುತ್ತಿರುವುದು, ಆಯ್ಕೆ ಮಾಡಿಕೊಳ್ಳುತ್ತಿರುವುದು ಆಡು, ಕುರಿ, ಕೋಳಿ, ದನಗಳ ಲಾಲನೆ ಪಾಲನೆಯನ್ನು. ಅತ್ಯಂತ ಹೆಚ್ಚು ಉದ್ಯೋಗ ನೀಡುತ್ತಿರುವ ಈ ವಲಯ ಗ್ರಾಮೀಣ ಲೋಕದ ಆರ್ಥಿಕತೆಗೆ ಕೊಡುತ್ತಿರುವ ಕೊಡುಗೆ ಅಪಾರ. ಕರ್ನಾಟಕ ಹಾಲು ಒಕ್ಕೂಟ(KMF) ಸರಿಸುಮಾರು 20,000 ಕೋಟಿ ರೂ.ಗಳ ಆರ್ಥಿಕತೆ ಹೊಂದಿದೆ. ಲಕ್ಷಾಂತರ ಮಂದಿ ಹಾಲು ಉತ್ಪಾದಕ ಸಹಕಾರ ಸಂಘಗಳ ಮೂಲಕ ಕರ್ನಾಟಕದ 26 ಸಾವಿರ ಹಳ್ಳಿಗಳನ್ನು ತಲುಪಿದೆ.
ಕುರಿಯನ್ ಮಹಾತ್ಮ ಅಂದು ಹಾಲಿಗೆ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಎಂಬ ಮೂರು ಮಂತ್ರಗಳನ್ನು ಜೋಡಿಸಿದ್ದಕ್ಕೆ ಹಾಲಿನ ಕ್ರಾಂತಿ ಸಾಧ್ಯವಾಯಿತು. ಕುರಿಯನ್ ಅವರ ದೂರದೃಷ್ಟಿ ಇಂದು ಇದೇ ಕ್ಷೇತ್ರದ ಆಡು, ಕುರಿಗಳ ಮಾಂಸ, ಚರ್ಮ, ಹಾಲು, ಗೊಬ್ಬರ, ಉಣ್ಣೆ ಇತ್ಯಾದಿಗಳಿಗೆ ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆಯತ್ತ ವಿಸ್ತರಿಸಲ್ಪಟ್ಟರೆ, ಸರಿಸುಮಾರು ಒಂದು ಲಕ್ಷ ಕೋಟಿ ರೂ.ಗಳ ಆರ್ಥಿಕತೆಯನ್ನು ಕರ್ನಾಟಕದಲ್ಲಿ ಸೃಷ್ಟಿಸಬಹುದಾಗಿದೆ. ಇನ್ನು ನಾಟಿ ಕೋಳಿ, ಹಂದಿ ಬಾಡು ಇದೆಲ್ಲಾ ಸೇರಿದರೆ ಕರ್ನಾಟಕ ಸರ್ಕಾರದ ಬಜೆಟ್ಟನ್ನು ಬಹುತೇಕ ನಿಭಾಯಿಸಬಲ್ಲ ಶಕ್ತಿ ಈ ಪಶುಪಾಲನಾ ರಂಗಕ್ಕಿದೆ.
ಕನಿಷ್ಠ ನೀರನ್ನೇ ಬಳಸಿಕೊಂಡು ಗ್ರಾಮೀಣ ಉದ್ಯೋಗ ಮತ್ತು ಆರ್ಥಿಕತೆ ಪೊರೆಯುತ್ತಿರುವ ಏಕೈಕ ಕ್ಷೇತ್ರ ಇದಾಗಿದೆ. ಕರ್ನಾಟಕದಲ್ಲಿ ಇಲ್ಲಿಯವರೆಗೂ ಯಾವುದೇ ಪಶುಪಾಲಕ, ಎಂಥ ಬರಗಾಲದಲ್ಲೂ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇಲ್ಲ. ಪಶುಪಾಲನಾ ಸಮುದಾಯಗಳು ಬದುಕಿರುವುದೇ ಮಳೆಯಾಶ್ರಿತ ಪ್ರದೇಶಗಳಲ್ಲಿ. ಇವರಿಗೆ ಯಾವುದೇ ನೀರಾವರಿ ಯೋಜನೆ ಬೇಡ. ತೋಟಗಾರಿಕೆ ಕ್ಷೇತ್ರ ಇಂದು ವಾಣಿಜ್ಯ ಬೆಳೆಗೆ ಆದ್ಯತೆ ನೀಡುತ್ತಿದೆ. ನೀರಾವರಿ ಕ್ಷೇತ್ರ ಕೇವಲ ಕಬ್ಬು, ಶುಂಠಿ, ಮೆಕ್ಕೆಜೋಳದಂತಹ ವಾಣಿಜ್ಯ ಬೆಳೆಗಳನ್ನು ಬೆಳೆದು ಭೂಮಿಯನ್ನು ಬರಡು ಮಾಡಲಾಗುತ್ತಿದೆ.
ಆದರೆ, ಪಶುಪಾಲನಾ ಕ್ಷೇತ್ರವೂ ಮಳೆಯಾಶ್ರಿತ ಪ್ರದೇಶಗಳ ಕೃಷಿಯೂ ಒಂದರೊಳಗೊಂದು ಹೆಣೆದುಕೊಂಡು ಪೂರಕವಾಗಿ ಸಹಬಾಳ್ವೆ ನಡೆಸುತ್ತಿವೆ. ಸುಮ್ಮನೆ ಗಮನಿಸಿ: ತುಮಕೂರು ಜಿಲ್ಲೆಯಿಂದ ಬೀದರ್ ಜಿಲ್ಲೆಯವರೆಗೆ ಆಡು, ಕುರಿಗಳ ದಟ್ಟ ಸಾಂದ್ರತೆ ಇದೆ. ಹಾಗೆಯೇ ಅಲ್ಲಿ ಪೌಷ್ಟಿಕಾಂಶ ಪೂರಿತ ಪ್ರೊಟೀನ್ ಬೆಳೆಗಳಾದ ಶೇಂಗಾ, ಕಡಲೆ, ಹುರುಳಿ, ಹಲಸಂದೆ, ತೊಗರಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತದೆ. ಪಶುಪಾಲನಾ ಸಮುದಾಯಗಳು ಇರುವ ಕಡೆ ಸಸ್ಯ ಮೂಲದ ಪ್ರೊಟೀನ್, ಪ್ರಾಣಿಮೂಲದ ಪ್ರೊಟೀನ್ ಎರಡೂ ಒಂದೆಡೆಯೇ ಸಿಗುತ್ತಿರುವುದು ಪ್ರಕೃತಿಯ ಸೋಜಿಗ! ಪ್ರೊಟೀನ್ ಕೊರತೆಯನ್ನು ಆಹಾರ ತಜ್ಞರು ಗುಪ್ತ ಹಸಿವು(Hidden hunger) ಎನ್ನುತ್ತಾರೆ. ಈಗ ಕರ್ನಾಟಕ ಗುಪ್ತ ಹಸಿವಿನಿಂದ ತೀವ್ರವಾಗಿ ಬಳಲುತ್ತಿದೆ. ಗುಪ್ತ ಹಸಿವಿನಿಂದ ಸಾಯುವುದಿಲ್ಲ. ಕೃಶಗೊಂಡ ದೇಹ ಹಲವು ಕಾಯಿಲೆಗಳ ಗೂಡಾಗುತ್ತದೆ. ಹಾಗಾಗಿ ಹಾಲಿನ ಕೇಂದ್ರಿತ(Milk centric)ವಾಗಿರುವ ಪಶುಪಾಲನಾ ಇಲಾಖೆಯನ್ನು ಮಾಂಸ ಕೇಂದ್ರಿತ(Meat centric) ಮಾಡಬೇಕಿದೆ.

ಯಾಕೆಂದರೆ, ಬೆಂಗಳೂರಿಗೆ ಒಂದು ಭಾನುವಾರದ ಬಾಡೂಟಕ್ಕೆ 50,000 ಆಡು-ಕುರಿಗಳು ಬೇಕಿದೆ. ಆದರೆ ನಮ್ಮಲ್ಲಿರುವುದು ಒಂದು ಮುಕ್ಕಾಲು ಕೋಟಿ ಆಡು-ಕುರಿಗಳು. ಈಗ ಬೆಂಗಳೂರಿಗೆ ರಾಜಸ್ತಾನ, ಗುಜರಾತ್, ಮಹಾರಾಷ್ಟ್ರಗಳಿಂದ ನಿತ್ಯವೂ ಗೂಡ್ಸ್ಗಳಲ್ಲಿ ಆಡು-ಕುರಿಗಳು ಬರುತ್ತಿವೆ. ಅಂದಾಜಿನ ಪ್ರಕಾರ ಕರ್ನಾಟಕದ ಬೇಡಿಕೆಗೆ ಇನ್ನೂ ಐದು ಪಟ್ಟು ಆಡು-ಕುರಿಗಳನ್ನು ಸಾಕಾಣಿಕೆ ಮಾಡಬೇಕಿದೆ. ಅದಕ್ಕಾಗಿ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(NRML)ದಡಿ ಬರುವ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟಕ್ಕೆ ಪಶುಪಾಲಕಿಯರ ಸ್ವಸಹಾಯ ಸಂಘಗಳನ್ನು ಜೋಡಿಸಿ ಆಡು-ಕುರಿಗಳ ಸಾಕಾಣಿಕೆ, ನಾಟಿ ಕೋಳಿ ಸಾಕಾಣಿಕೆ ಅವುಗಳ ತಳಿ ಅಭಿವೃದ್ಧಿ, ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಇವುಗಳನ್ನು ನಿರ್ವಹಿಸಲು ನೆಟ್ವರ್ಕ್ ಬಿಲ್ಡ್ ಮಾಡಿದರೆ, ಅದರ ಅಭಿವೃದ್ಧಿಯನ್ನು ಕಣ್ಮುಂದೆಯೇ ಕಾಣಬಹುದಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಮುಖ್ಯ ಪಾಲು ನೀಡುತ್ತಿದೆ. ವಿಶೇಷ ತರಬೇತಿ ಕೊಟ್ಟು ಬ್ಯಾಂಕ್ಗಳೊಡನೆ ಲಿಂಕ್ ಮಾಡಬಹುದಾಗಿದೆ. ಆಧುನಿಕ ಕೌಶಲ್ಯಗಳನ್ನು ಕಲಿಸಲು ಫೆಸಿಲಿಟೇಟರ್ ಆಗಿ ಅರ್ಹ ಏಜೆನ್ಸಿ ಎನ್ಜಿಒಗಳನ್ನು ನೇಮಿಸಿಕೊಳ್ಳಬಹುದಾಗಿದೆ.
ಕರ್ನಾಟಕದಲ್ಲಿ ಈಗಿರುವ 700 ಕುರಿ ಸೊಸೈಟಿ(ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ)ಗಳನ್ನು ಜಿಲ್ಲಾಮಟ್ಟದ ಡಿಸಿಸಿ ಬ್ಯಾಂಕುಗಳಿಗೆ ಸದಸ್ಯರನ್ನಾಗಿ ಮಾಡಿ ಅವುಗಳಿಗೆ ಆರ್ಥಿಕ ಶಕ್ತಿ ತುಂಬಬಹುದಾಗಿದೆ. ಅಲ್ಲದೆ ಅವುಗಳಿಗೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಕೆಡಿಪಿ ಸಭೆಗಳಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸಿಕೊಡಬಹುದಾಗಿದೆ.
ಕರ್ನಾಟಕದಲ್ಲಿ ಈಗಿರುವ 142 ಕುರಿ ಸಂತೆಗಳಿಗೆ ಆಧುನಿಕ ಸೌಲಭ್ಯ ನೀಡಿ, ತೂಕ ಆಧಾರಿತ ಮತ್ತು ಡಿಜಿಟಲ್ ಆಧಾರಿತ ಮಾರುಕಟ್ಟೆಯನ್ನಾಗಿ ಪರಿವರ್ತಿಸಬೇಕಾಗಿದೆ. ತಾಲೂಕಿಗೆ ಒಂದರಂತೆ ಪುಟ್ಟ ವಧಾಗಾರಗಳು(ಕಸಾಯಿಖಾನೆ), ಮಾಂಸದ ಅಂಗಡಿಗಳು ಸ್ಥಾಪನೆಯಾಗಬೇಕಾಗಿದೆ. ಮಾಂಸ ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಕುರಿತಾದ ಡಿಪ್ಲೋಮೋ ಕೋರ್ಸ್ಗಳನ್ನು ಆರಂಭಿಸಬೇಕಾಗಿದೆ.

ಚೆನ್ನೈ ಕಾಲೇಜಿನಲ್ಲಿರುವಂತೆ ರಾಜ್ಯದ ಪಶು ವಿವಿಯಲ್ಲಿಯೂ ಮೀಟ್ ಸೈನ್ಸ್ ವಿಭಾಗವನ್ನು ತೆರೆಯಬೇಕಾಗಿದೆ. ಜಾಗತಿಕ ಮಟ್ಟದ ಸಂಶೋಧನಾ ಮತ್ತು ವಿಸ್ತರಣಾ ಭಾಗವಾಗಿ ಪರಿವರ್ತಿಸಬೇಕಾಗಿದೆ. ಪ್ರತಿ ಮೂರು ನಾಲ್ಕು ವರ್ಷಗಳಿಗೆ ಒಮ್ಮೆ ತಪ್ಪದೇ ಬರಲಿರುವ ಬರಗಾಲವನ್ನು ಎದುರಿಸಲು ಜಾನುವಾರುಗಳಿಗೆ ಅಗತ್ಯವಾದ ಮೇವು ಪೂರೈಕೆ ಮಾಡಲು ಮೇವಿನ ನೀತಿ(Fodder policy) ಜಾರಿಗೆ ತರಬೇಕಿದೆ. ಪಶು ಉತ್ಪನ್ನಗಳ ಉತ್ಪಾದನಾ ವೆಚ್ಚ ತಗ್ಗಿಸಲು ಮೇವಿನ ಉತ್ಪಾದನಾ ಕ್ರಾಂತಿ ನಡೆಯಬೇಕಿದೆ. ಇದಕ್ಕೆ ಇಲಾಖೆಯ ಫಾರಂಗಳು ಸೇರಿ ಸಾಮಾಜಿಕ, ಅರಣ್ಯ, ತೋಟಗಾರಿಕೆ ಇಲಾಖೆಗಳು ಒಗ್ಗೂಡಿ ಕಾರ್ಯ ನಿರ್ವಹಿಸಬೇಕಿದೆ. ಹಾಲಿನಂತೆ ಇತರ ಪಶು ಉತ್ಪನ್ನಗಳಾದ ಮಾಂಸ, ಚರ್ಮ, ಗೊಬ್ಬರ, ಆಡು-ಕುರಿಯ ಹಾಲು ಮುಂತಾದವುಗಳ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಗೆ ಒತ್ತು ನೀಡಿ ಪಶುಪಾಲಕರಿಗೆ ತರಬೇತಿ ನೀಡಬೇಕಿದೆ.
ತರುಣ, ತರುಣಿಯರು ಅಪಾರ ಆಸಕ್ತಿ ವಹಿಸಿ ಪಶುಪಾಲನಾ ಕ್ಷೇತ್ರಕ್ಕೆ ತರಬೇತಿಗಾಗಿ ಬರುತ್ತಿರುವುದರಿಂದ ಆಧುನಿಕ ತರಬೇತಿಯ ಕೇಂದ್ರಗಳನ್ನು ರಾಜ್ಯದ ನಾಲ್ಕು ವಿಭಾಗಗಳಲ್ಲಿ ಪ್ರಾರಂಭಿಸಬೇಕಾಗಿದೆ. ಇಲಾಖೆಯ ಕಾರ್ಯಕ್ರಮಗಳನ್ನು ಸಾಲ ಸೌಲಭ್ಯಗಳನ್ನು ಕೇವಲ ಜಾನುವಾರುಗಳನ್ನು ಸಾಕಾಣಿಕೆ ಮಾಡುವುದಕ್ಕೆ ನೀಡದೆ, ಮೌಲ್ಯವರ್ಧಿತ ಉತ್ಪನ್ನಗಳಿಗೆ ನೀಡಬೇಕಾಗಿದೆ. ಪ್ರತಿ ಪಶುವೈದ್ಯಕೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿವಿಧ ತಳಿಯ ಮೇವು, ಮೇವು ಕಟಾವು ಯಂತ್ರ, ಮಾದರಿ ಗೊಬ್ಬರ ಗುಂಡಿಗಳನ್ನು ಹೊಂದಿರುವ ಕೇವಲ ಸೀಮೆಹಸುಗಳನ್ನಲ್ಲದೆ ಆಡು, ಕುರಿ, ಹಂದಿ, ಕೋಳಿ ಹೊಂದಿರುವ ಸಮಗ್ರ ಸುಸ್ಥಿರ ಪಶುಪಾಲಕನನ್ನು ಸೃಷ್ಟಿಸಿ ಆ ಮಾದರಿಯನ್ನು ಎಲ್ಲೆಡೆ ಪ್ರಚುರಪಡಿಸಿ ವಿಸ್ತರಿಸಬೇಕಾಗಿದೆ.
ನಾಟಿ ತಳಿಯ ಜಾನುವಾರುಗಳ ಉತ್ಪನ್ನಗಳಿಗೆ ಮಾರುಕಟ್ಟೆಯ ಬೇಡಿಕೆ ಹೆಚ್ಚುತ್ತಿರುವ ಹೊತ್ತಿನಲ್ಲಿ ಈ ಕುರಿತು ನೀತಿ ನಿರೂಪಣೆ ಮಾಡಬೇಕಿದೆ. ಉದಾಹರಣೆಗಾಗಿ ನಾಟಿ ಹಸುವಿನ ಹಾಲಿಗೋಸ್ಕರ ವಿಶೇಷವಾದ ಲೈನ್ ಒಂದನ್ನು ಕೆಎಂಎಫ್ ಸಹಕಾರದೊಂದಿಗೆ ಮಾಡಬೇಕಿದೆ. ಕರ್ನಾಟಕದಲ್ಲಿ ಅಲೆಮಾರಿ ಪಶುಪಾಲಕ ಸಮುದಾಯಗಳಾದ ಮ್ಯಾಸಬೇಡರು, ಕಾಡುಗೊಲ್ಲರು, ಗೌಳಿಗರು, ಕೃಷ್ಣಗೊಲ್ಲರು, ಬೇಡಕಂಪಣರು ಇತ್ಯಾದಿ ಸಮುದಾಯಗಳು ಜಾನುವಾರುಗಳನ್ನು ಸಾಕಿರುವುದರಿಂದ ಆ ಸಮುದಾಯಗಳ ಸಬಲೀಕರಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಸಂಘಟನೆ ಮಾಡಬೇಕಿದೆ.
ಈ ಅಲೆಮಾರಿ ಪಶುಪಾಲಕ ಸಮುದಾಯಗಳ ಅಸ್ತಿತ್ವ, ಅಭಿವೃದ್ಧಿ, ಸಂರಕ್ಷಣೆಗಾಗಿಯೇ ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ಕ್ಷೇಮಾಭಿವೃದ್ಧಿ, ದೌರ್ಜನ್ಯಗಳ ವಿರುದ್ಧ ರಕ್ಷಣೆ ಅಧಿನಿಯಮ-2025ನ್ನು ವಿಧಾನಸಭೆಯಲ್ಲಿ ಮಂಡಿಸಿ ಕಾಯ್ದೆಯಾಗಿ 2025ರ ಸೆಪ್ಟೆಂಬರ್ನಲ್ಲಿ ಗೆಜೆಟ್ ಪ್ರಕಟಣೆಯೂ ಹೊರಬಿದ್ದಿದೆ. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಕುರಿತು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ.
ಪಶುವೈದ್ಯಕೀಯ(ರೋಗಗಳ ಚಿಕಿತ್ಸೆ ನಿಯಂತ್ರಣ) ಸೇವಾ ಕೇಂದ್ರಿತ ಬೋಧನೆ ಹೊಂದಿರುವ ಪಶು ಯೂನಿವರ್ಸಿಟಿಯ ನೋಟವನ್ನು ಬದಲಾಯಿಸಬೇಕಿದೆ. ಆಡು-ಕುರಿ ಬದುಕಿನ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಆಯಾಮಗಳನ್ನು ಸಂಶೋಧನೆ ಮಾಡಲು ಅಧ್ಯಯನ ಕೇಂದ್ರ ಸ್ಥಾಪನೆ ಮಾಡಬೇಕಿದೆ. ಇದನ್ನೆಲ್ಲಾ ಮಾಡುವ ಇಚ್ಛಾಶಕ್ತಿ ಇದ್ದರೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಮೂಲ ರಚನೆಯನ್ನು ಬದಲಾಯಿಸಬೇಕಿದೆ.
ಆರೋಗ್ಯ ಇಲಾಖೆಯಂತೆ ಪಶು ಇಲಾಖೆಯಲ್ಲೂ ಕನಿಷ್ಠ ಎರಡು ನಿರ್ದೇಶನಾಲಯಗಳನ್ನು ಪುನರ್ ರೂಪಿಸಬೇಕಿದೆ. ಒಂದು ಪಶುವೈದ್ಯಕೀಯ ಸೇವೆಗೆ ಮೀಸಲಾದರೆ, ಈಗ ಮಾಡುವ ಹೊಸ ನಿರ್ದೇಶನಾಲಯ ಪಶುಪಾಲನೆಗೆ ಸೀಮಿತಗೊಳಿಸಬೇಕಿದೆ.
ಹೊಸ ಪಶುಸಂಗೋಪನಾ ನಿರ್ದೇಶನಾಲಯದಲ್ಲಿ ಕೆಳಗಿನ ಹಂತದಿಂದ ರಾಜ್ಯ ಮಟ್ಟದವರಿಗೂ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಬಹುದಾಗಿದೆ. ಸಾಕಾಣಿಕಾ ತರಬೇತಿ, ಪಶು ಆಹಾರ ತಿಳಿವಳಿಕೆ, ಮೇವಿನ ಬೆಳೆಗಳ ಅರಿವು, ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ, ಸ್ತ್ರೀಶಕ್ತಿ ಸಂಘಗಳ, ಕುರಿ ಸೊಸೈಟಿಗಳ ಸಂಘಟನೆ ಮುಂತಾದ ವಿಸ್ತರಣಾ ಚಟುವಟಿಕೆಗಳನ್ನು ಈ ನಿರ್ದೇಶನಾಲಯಕ್ಕೆ ವಹಿಸಿದರೆ ಮಾತ್ರ ಜನರಿಗೆ ಸಾಕಾಣಿಕಾ ಜ್ಞಾನ ತಲುಪುತ್ತದೆ.
ಇದಕ್ಕೆಲ್ಲಾ ಮುಕುಟಪ್ರಾಯದಂತೆ ಈ ಒಂದು ಕ್ರಮ ಭಾರೀ ಮುಖ್ಯವಾದುದಾಗಿದೆ. ಅದೆಂದರೆ ಪಶುಪಾಲಕರ ಸಮಸ್ಯೆಗಳು ಒಂದು ಇಲಾಖೆಗೆ ಸೀಮಿತವಾಗಿಲ್ಲ. ಅವುಗಳ ಪರಿಹಾರಕ್ಕೆ, ಸುಧಾರಣೆಗಳಿಗೆ ಬೇಕಿರುವುದು ಪಶುಪಾಲನೆ, ಕಂದಾಯ, ಸಹಕಾರ, ಅರಣ್ಯ, ಜಲಾನಯನ, ಕೌಶಲ್ಯಾಭಿವೃದ್ಧಿ ಇಲಾಖಾ ಕಾರ್ಯದರ್ಶಿಗಳ ಕಮಿಟಿ ಮಾಡಬೇಕಿದೆ. ನಿರಂತರವಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇದರ ಮೀಟಿಂಗ್, ರಿವ್ಯೂ ಆಗಬೇಕು. ಇಷ್ಟು ಬಿಟ್ಟರೆ ಹಣಕಾಸಿನ ನೆರವು ಬೇಕಾಗಿಲ್ಲ. ಈ ಎಲ್ಲವನ್ನೂ ಸಾಧಿಸಲು ರಾಜಕೀಯ ಇಚ್ಛಾಶಕ್ತಿಯುಳ್ಳ ವ್ಯಕ್ತಿ ಈ ಇಲಾಖೆಗೆ ಬೇಕಿದೆ.

ಕೆ.ಎನ್. ನಾಗೇಗೌಡ, ಎ. ಮಂಜು ಅವರಂಥ ಕೆಲವರು ಈ ದಿಕ್ಕಿನಲ್ಲಿ ಕೆಲಸ ಮಾಡಲು ಪ್ರಯತ್ನಿಸಿದರು. ಆದರೆ ತಾರ್ಕಿಕ ಹಂತಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಈಗಿನ ಪ್ರಜಾಸೇವಾ ಇಲಾಖೆಯ ಕಾರ್ಯದರ್ಶಿಗಳಾದ ಹರ್ಷಗುಪ್ತ ಅವರು ತಮಗೆ ಸಿಕ್ಕ ಅಲ್ಪ ಅವಧಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಪ್ರಯತ್ನಿಸಿದರೂ ಆಗಿನ ಸರ್ಕಾರ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಿತು.
ಈ ಇಲಾಖೆಯ ದುರದೃಷ್ಟವೇ ಹೀಗಿದೆ. ಒಂದು ರಾಜಕೀಯ ಪಕ್ಷ ಗೋಸೇವೆ ಎನ್ನುತ್ತ, ಭಾವನಾತ್ಮಕವಾಗಿ ಈ ರಂಗವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತ ಪಶುಪಾಲಕ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡುತ್ತ ಬಂದಿದೆ. ಮತ್ತೊಂದು ಪಕ್ಷವಂತೂ ಪ್ರತಿಸಾರಿ ಗೆದ್ದಾಗಲೂ ಪಶುಪಾಲಕರ ಕೈಗೆ ತುಪ್ಪ ಸವರಿ ಜಾರಿಕೊಂಡಿದೆ. ಪಶುಪಾಲಕ ಸಮುದಾಯಗಳು ಸ್ವಾತಂತ್ರ್ಯ ಬಂದಾಗಿನಿಂದಲೂ ಈ ಪಕ್ಷದ ಕೈ ಬಲಪಡಿಸುತ್ತಲೇ ಬಂದಿವೆ. ಪಶುಪಾಲಕ ಸಮುದಾಯಗಳ ಕೈಹಿಡಿದು ಎತ್ತುವ ದೀರ್ಘಕಾಲಿಕ ದೂರದೃಷ್ಟಿಯುಳ್ಳ ಪ್ರಯತ್ನಗಳು ಈ ಕೈ ಪಕ್ಷದಿಂದಲೂ ಆಗಿಲ್ಲ.
ಇದನ್ನೂ ಓದಿದ್ದೀರಾ? ಅರಣ್ಯದ ಕಟ್ಟುಪಾಡು, ಭೀಕರ ಬರಕ್ಕೆ ಹನೂರಿನ ಕಾಲ್ನಡೆಗಳು ತತ್ತರ: ಕೃಷ್ಣ ಗೊಲ್ಲರಿಗೆ ನೆರವಾಗುವುದೇ ಸರ್ಕಾರ?
ಆದರೂ, ಈಗ ಬಂದಿರುವ ನೂತನ ಸಚಿವ ಪುಟ್ಟರಂಗಶೆಟ್ಟರಲ್ಲಿ ಬೆಂಗಾಡಿನಿಂದ, ಮಳೆಯಾಶ್ರಿತ ಪ್ರದೇಶದಿಂದ, ಕಾಡಿನಂಚಿನ ಪ್ರದೇಶದಿಂದ ಬಂದಿರುವ ಪಶುಪಾಲಕ ಸಮುದಾಯಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿವೆ. ಅರೆಬರೆ ಜಮೀನು ಹೊಂದಿರುವ, ಭೂರಹಿತರೇ ಹೆಚ್ಚಿರುವ ಪಶುಪಾಲಕರ ಸ್ಥಿತಿಗತಿ ಅರಿವಾಗುತ್ತದೆ ಎನ್ನುವ ಆಶಾಭಾವನೆ ಎಲ್ಲೆಡೆಯೂ ಇದೆ.
‘ಸೀಮೆಹಸು’ ಇಲಾಖೆಯನ್ನು ಕುರಿ-ಆಡು, ದನ-ಕರು, ಕೋಳಿ-ಹಂದಿಗಳ ಉತ್ಪನ್ನಗಳ ಇಲಾಖೆಯಾಗಿ ಮಾಡುತ್ತಾರೆ ಎನ್ನುವ ಭರವಸೆ ಹೊಂದಲಾಗಿದೆ. ಇದೇ ಸೀಮೆಯಿಂದ ಬಂದ, ದನಗಳ ಮೇಲೆ ಅಪಾರ ಪ್ರೀತಿ ಇದ್ದ ದೇವರಾಜ ಅರಸರಂತೆ ಪಶುಪಾಲನೆ ಇಲಾಖೆಯನ್ನು ಗಂಭೀರವಾಗಿ ತೆಗೆದುಕೊಂಡು, ಸುಧಾರಣೆಗಳ ಮೂಲಕ ಕಾಯಕಲ್ಪ ನೀಡಿ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಚಿತ್ರಣವನ್ನು ಬದಲಾಯಿಸಬಹುದೆಂದು, ಇಡೀ ಕರ್ನಾಟಕದ ಪಶುಪಾಲಕರು ನಿರೀಕ್ಷಿಸಬಹುದೇ?

ಡಾ.ರಘುಪತಿ ಪಶುವೈದ್ಯರು.
ಡಾ ರಘುಪತಿ. ವೃತ್ತಿಯಲ್ಲಿ ಪಶು-ವೈದ್ಯ. ಊರು ಚಿಕ್ಕನಾಯಕನಹಳ್ಳಿ, ತುಮಕೂರು ಜಿಲ್ಲೆ
ಇವರು ಪರ್ಯಾಯ ಸಾಧ್ಯತೆಗಳ ಚಿಂತಕ, ಬರಹಗಾರ ಹಾಗೂ ಅವಿರತ ಅಲೆಮಾರಿ ಸಂಗಾತಿ.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ 'ಕುರಿಮಿತ್ರ' ಪತ್ರಿಕೆಗೆ ಸಂಪಾದಕರಾಗಿದ್ದರು.
ಆದಿಯಿಂದಲೂ ಪಶುಪಾಲನೆಯನ್ನೇ ಉದ್ಯೋಗವನ್ನಾಗಿ ಮಾಡಿಕೊಂಡು ಬರುತ್ತ ದೇಶದ ʼಜಿಡಿಪಿ'ಯಲ್ಲಿ ದೊಡ್ಡಮಟ್ಟದ ಕೊಡುಗೆ ನೀಡುತ್ತಿರುವ ಆಡು-ಕುರಿ ಸಾಕುವ ಎಲ್ಲ ಹಿಂದುಳಿದ ಜಾತಿ-ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ 'ಪಶುಪಾಲಕ-ಕರ್ನಾಟಕ' ಹೆಸರಿನಲ್ಲಿ ದೊಡ್ಡಮಟ್ಟದ ಯೋಜನೆಯೊಂದನ್ನು ರೂಪಿಸಿ, ಅದರ ಸಾಕಾರದಲ್ಲಿ ಕಾರ್ಯನಿರತರಾಗಿದ್ದಾರೆ!




