ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಊರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ಪದವಿ ಪೂರ್ವ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ವಿಜಯಪುರ ಜಿಲ್ಲೆಯಲ್ಲಿ ಪ್ರಸಕ್ತ 2026-27ನೇ ಶೈಕ್ಷಣಿಕ ಸಾಲಿನಲ್ಲಿ 8 ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸಲಾಗಿದೆ. ಇದರ ಜೊತೆಗೆ ಒಂದು ಪಿಯು ವಸತಿ ಕಾಲೇಜು ಹಾಗೂ ಅಲ್ಪಸಂಖ್ಯಾತರ ಮಹಿಳಾ ಪಿಯು ಕಾಲೇಜು ಕೂಡ ಆರಂಭವಾಗಿದ್ದು, ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಅವಕಾಶ ವಿಸ್ತರಿಸಿದಂತಾಗಿದೆ.
ಈ ಮೊದಲು ಜಿಲ್ಲೆಯಲ್ಲಿ 36 ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದವು. ಪ್ರಸಕ್ತ ಸಾಲಿನಲ್ಲಿ ಎಂಟು ಹೊಸ ಕಾಲೇಜುಗಳ ಸೇರ್ಪಡೆಯೊಂದಿಗೆ ಸರ್ಕಾರಿ ಪಿಯು ಕಾಲೇಜುಗಳ ಸಂಖ್ಯೆ 44ಕ್ಕೆ ಏರಿಕೆಯಾಗಿದೆ.
ಯಾವೆಲ್ಲ ಗ್ರಾಮಗಳಲ್ಲಿ ಹೊಸ ಕಾಲೇಜು?
ಪ್ರಸಕ್ತ ಸಾಲಿನಲ್ಲಿ ಇಂಡಿ ತಾಲೂಕಿನ ಶಿರಶ್ಯಾಡ, ಹಡಲಸಂಗ ಹಾಗೂ ಬಸನಾಳ; ಕೊಲ್ಹಾರ ತಾಲೂಕಿನ ಮಲಘಾಣ ಮತ್ತು ಕೂಬಕಡ್ಡಿ; ತಾಳಿಕೋಟೆ ತಾಲೂಕಿನ ಆಸ್ಕಿ; ಸಿಂದಗಿ ತಾಲೂಕಿನ ಕೋರಹಳ್ಳಿ ಹಾಗೂ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮಗಳಲ್ಲಿ ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಆರಂಭಗೊಂಡಿವೆ.
ಇದರೊಂದಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸೇರಿದಂತೆ ವಿವಿಧ ವರ್ಗಗಳ ವಿದ್ಯಾರ್ಥಿಗಳಿಗೆ ವಸತಿ ಸಹಿತ ಪಿಯು ಶಿಕ್ಷಣದ ಅವಕಾಶ ಕಲ್ಪಿಸುವ ಉದ್ದೇಶದಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದನ್ನು ಪದವಿ ಪೂರ್ವ ವಸತಿ ಕಾಲೇಜಾಗಿ ಮೇಲ್ದರ್ಜೆಗೇರಿಸಲಾಗಿದೆ.
ಅಲ್ಲದೇ, ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ವಿಜಯಪುರ ನಗರದ ಅಜೀಮ್ ಮೆಡಿಕಲ್ ಕಾಲೇಜು ಎದುರು ಅಲ್ಪಸಂಖ್ಯಾತರ ಮಹಿಳಾ ಪಿಯು ಕಾಲೇಜು ಕೂಡ ಆರಂಭಗೊಂಡಿದೆ.
ಹೊಸ ಕಾಲೇಜುಗಳಿಗೆ ಉತ್ತಮ ಸ್ಪಂದನೆ
ಹೊಸದಾಗಿ ಆರಂಭಗೊಂಡಿರುವ ಬಹುತೇಕ ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ಈಗಾಗಲೇ 50ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿಯೇ ಸರ್ಕಾರಿ ಪಿಯು ಶಿಕ್ಷಣಕ್ಕೆ ಹೆಚ್ಚು ಮಹತ್ವವಿದೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ವಿದ್ಯಾರ್ಥಿಗಳು ದೂರದ ಪಟ್ಟಣಗಳಿಗೆ ತೆರಳಿ ಶಿಕ್ಷಣ ಪಡೆಯುವ ಅನಿವಾರ್ಯತೆ ಕಡಿಮೆಯಾಗಲಿದ್ದು, ಪ್ರಯಾಣದ ಸಮಯ ಹಾಗೂ ವೆಚ್ಚವೂ ಉಳಿತಾಯವಾಗಲಿದೆ.
3 ಕಾಲೇಜು ಸ್ಥಳಾಂತರ, 5 ಕಾಲೇಜು ಮೇಲ್ದರ್ಜೆಗೆ
ಹೊಸದಾಗಿ ಆರಂಭಗೊಂಡ 8 ಸರ್ಕಾರಿ ಪಿಯು ಕಾಲೇಜುಗಳಲ್ಲಿ ಶಿರಶ್ಯಾಡ, ಹಡಲಸಂಗ ಹಾಗೂ ಬಸನಾಳದ ಕಾಲೇಜುಗಳು ಸ್ಥಳಾಂತರದ ಮೂಲಕ ಆರಂಭಗೊಂಡಿವೆ. ಇನ್ನುಳಿದ ಮಲಘಾಣ, ಕೂಬಕಡ್ಡಿ, ಕೋರಹಳ್ಳಿ ಹಾಗೂ ತಂಗಡಗಿ ಸೇರಿದಂತೆ ಐದು ಕಡೆ ಈಗಾಗಲೇ ಇದ್ದ ಶಿಕ್ಷಣ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ.
ಮೇಲ್ದರ್ಜೆಗೇರಿಸಿರುವ 5 ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಿಂದ ವಾಣಿಜ್ಯ ವಿಭಾಗಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಹಂತ ಹಂತವಾಗಿ ಎಲ್ಲ ಕಾಲೇಜುಗಳಲ್ಲೂ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ.
ಅತಿಥಿ ಉಪನ್ಯಾಸಕರ ನೇಮಕ
ಹೊಸ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಜಿಲ್ಲೆಯ ವಿವಿಧ ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರಲ್ಲಿ ಒಬ್ಬರನ್ನು ಪ್ರತಿ ಹೊಸ ಕಾಲೇಜಿಗೆ ಪ್ರಾಚಾರ್ಯರನ್ನಾಗಿ ನಿಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಅಗತ್ಯ ಬೋಧನಾ ವ್ಯವಸ್ಥೆ ಕಲ್ಪಿಸಲು ಅತಿಥಿ ಉಪನ್ಯಾಸಕರನ್ನೂ ನೇಮಕ ಮಾಡಿಕೊಳ್ಳಲಾಗಿದೆ. ಹೀಗಾಗಿ ಹೊಸ ಕಾಲೇಜುಗಳಲ್ಲಿ ತರಗತಿಗಳು ಸುಗಮವಾಗಿ ನಡೆಯಲು ಅನುಕೂಲವಾಗಿದೆ ಎಂದು ಡಿಡಿಪಿಯು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 279 ಪಿಯು ಕಾಲೇಜುಗಳು
8 ಹೊಸ ಸರ್ಕಾರಿ ಕಾಲೇಜುಗಳ ಸೇರ್ಪಡೆಯೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಒಟ್ಟು 279 ಪದವಿ ಪೂರ್ವ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 44 ಸರ್ಕಾರಿ, 4 ಕ್ರೈಸ್ತ, 9 ಅಲ್ಪಸಂಖ್ಯಾತರ, 58 ಅನುದಾನಿತ ಹಾಗೂ 164 ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳು ಸೇರಿವೆ.
“ಜಿಲ್ಲೆಯಲ್ಲಿ 8 ಹೊಸ ಸರ್ಕಾರಿ ಪಿಯು ಕಾಲೇಜುಗಳು ಸೇರ್ಪಡೆಯಾಗಿದ್ದು, ಸರ್ಕಾರಿ ಕಾಲೇಜುಗಳ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಇದರಿಂದ ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದೆ” ಎಂದು ಡಿಡಿಪಿಯು ಕೆ.ಎ. ಉಪ್ಪಾರ್ ತಿಳಿಸಿದ್ದಾರೆ.
ಗ್ರಾಮೀಣ ವಿದ್ಯಾರ್ಥಿನಿಯರಿಗೆ ಅನುಕೂಲ
ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆಯ ಕೊರತೆ, ಪ್ರತಿನಿತ್ಯದ ದೂರದ ಪ್ರಯಾಣ, ಹೆಚ್ಚುವರಿ ವೆಚ್ಚ ಹಾಗೂ ಸುರಕ್ಷತೆಯಂತಹ ಕಾರಣಗಳಿಂದ ಕೆಲ ಕುಟುಂಬಗಳು ತಮ್ಮ ಹೆಣ್ಣು ಮಕ್ಕಳನ್ನು ದೂರದ ಪಟ್ಟಣಗಳಲ್ಲಿರುವ ಕಾಲೇಜುಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತವೆ. ಗ್ರಾಮಗಳ ಸಮೀಪದಲ್ಲೇ ಸರ್ಕಾರಿ ಪಿಯು ಕಾಲೇಜುಗಳು ಆರಂಭವಾಗಿರುವುದು ಗ್ರಾಮೀಣ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೊಸ ಬಲ ನೀಡಲಿದೆ. ಪೋಷಕರ ಮೇಲಿನ ಆರ್ಥಿಕ ಹೊರೆಯೂ ಕಡಿಮೆಯಾಗಲಿದ್ದು, ಪಿಯು ನಂತರದ ಉನ್ನತ ಶಿಕ್ಷಣದತ್ತ ಹೆಣ್ಣು ಮಕ್ಕಳು ಮುನ್ನಡೆಯಲು ಇದು ಸಹಕಾರಿಯಾಗಲಿದೆ.
ನಿಡಗುಂದಿಗೆ ಸರ್ಕಾರಿ ಪಿಯು ಕಾಲೇಜಿನ ಕೊರತೆ
ಜಿಲ್ಲೆಯಲ್ಲಿ ಹೊಸ ಸರ್ಕಾರಿ ಪಿಯು ಕಾಲೇಜುಗಳ ಆರಂಭದಿಂದ ಶಿಕ್ಷಣದ ಅವಕಾಶ ವಿಸ್ತರಿಸಿದ್ದರೂ ನಿಡಗುಂದಿ ತಾಲೂಕು ಇನ್ನೂ ಸರ್ಕಾರಿ ಪಿಯು ಕಾಲೇಜಿನ ಕೊರತೆಯನ್ನು ಎದುರಿಸುತ್ತಿದೆ. ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಿಯು ಶಿಕ್ಷಣಕ್ಕಾಗಿ ಖಾಸಗಿ ಕಾಲೇಜುಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಮುಂದುವರಿದಿದೆ. ಅದರಲ್ಲೂ ಆರ್ಥಿಕವಾಗಿ ದುರ್ಬಲ ಕುಟುಂಬಗಳ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳ ಶುಲ್ಕ ಹೆಚ್ಚುವರಿ ಹೊರೆಯಾಗುತ್ತಿದೆ. ಹೀಗಾಗಿ ನಿಡಗುಂದಿ ತಾಲೂಕಿನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಸರ್ಕಾರ ಮತ್ತಷ್ಟು ಬಲ ನೀಡಬೇಕು ಎಂಬ ಬೇಡಿಕೆ ಸ್ಥಳೀಯರಿಂದ ಕೇಳಿಬರುತ್ತಿದೆ.
ಒಟ್ಟಾರೆ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಹೊಸ ಸರ್ಕಾರಿ ಪಿಯು ಕಾಲೇಜುಗಳ ಆರಂಭವು ‘ಮನೆಯ ಸಮೀಪವೇ ಶಿಕ್ಷಣ’ ಎಂಬ ಆಶಯಕ್ಕೆ ಮತ್ತಷ್ಟು ಬಲ ನೀಡಿದ್ದು, ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಈ ಮಹತ್ವದ ಶೈಕ್ಷಣಿಕ ಬೆಳವಣಿಗೆ ಭವಿಷ್ಯದ ಕನಸುಗಳಿಗೆ ಭದ್ರ ಬುನಾದಿ ಒದಗಿಸುವ ನಿರೀಕ್ಷೆಯಿದೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು



