ಮೀರಾ ಮತ್ತು ಮಧುವಿನ ಆತ್ಮೀಯತೆಯನ್ನು ಚಿತ್ರಿಸಿರುವ ರೀತಿಯೂ ಗಮನಾರ್ಹ. ಮೊದಲ ಮುತ್ತು, ಅಪ್ಪುಗೆ, ದೇಹದ ಹತ್ತಿರವಾಗುವಿಕೆ—ಇವುಗಳನ್ನು ಕೇವಲ ಪ್ರೇಕ್ಷಕರ ಕುತೂಹಲಕ್ಕಾಗಿ ಬಳಸದೆ, ಇಬ್ಬರು ಕಿಶೋರರು ತಮ್ಮ ದೇಹ ಮತ್ತು ಭಾವನೆಗಳನ್ನು ಅರಿಯುವ ಅನುಭವಗಳಾಗಿ ಚಿತ್ರಿಸಲಾಗಿದೆ. ಬಯಸಿದ ಸ್ಪರ್ಶ ಮತ್ತು ಬಯಸದ ಸ್ಪರ್ಶ ಒಂದೇ ಅಲ್ಲ ಎಂಬ ಸೂಕ್ಷ್ಮ ವ್ಯತ್ಯಾಸವನ್ನೂ ಸಿನಿಮಾ ಗುರುತಿಸುತ್ತದೆ. ಇದನ್ನು ಉಪದೇಶದ ಮೂಲಕ ಹೇಳದೆ, ಮೀರಾಳ ದೇಹ ಮತ್ತು ಮನಸ್ಸಿನ ಪ್ರತಿಕ್ರಿಯೆಗಳ ಮೂಲಕ ಅನುಭವಿಸುವಂತೆ ಮಾಡುತ್ತದೆ.
ಕೆಲವು ಪ್ರೇಮಗಳು ಮುಗಿಯುವುದಿಲ್ಲ. ಅವು ನಮ್ಮ ಬದುಕಿನಿಂದ ಹೊರಟುಹೋಗುತ್ತವೆ; ಆದರೆ ನಮ್ಮೊಳಗಿಂದ ಅಲ್ಲ. ಒಂದು ಹಾಡಿನಲ್ಲಿ, ಹಳೆಯ ಸಿನಿಮಾದ ದೃಶ್ಯವೊಂದರಲ್ಲಿ, ಯಾರೋ ಹೇಳಿದ ಮಾತಿನಲ್ಲಿ, ಅನಿರೀಕ್ಷಿತವಾಗಿ ಬರುವ ಒಂದು ನೆನಪಿನಲ್ಲಿ ಅವು ಮತ್ತೆ ಎದುರಾಗುತ್ತವೆ. ಅವುಗಳ ಜೊತೆ ನಮ್ಮದೇ ಒಂದು ಹಳೆಯ ರೂಪವೂ ಮರಳಿ ಬರುತ್ತದೆ—ಆಗ ನಾವು ಯಾರಾಗಿದ್ದೆವು, ಏನನ್ನು ನಂಬಿದ್ದೆವು, ಯಾರನ್ನು ಪ್ರೀತಿಸಿದ್ದೆವು, ಯಾವುದರಿಂದ ನೋಯುತ್ತಿದ್ದೆವು ಎಂಬುದನ್ನು ನೆನಪಿಸುವ ರೂಪ.
ರೂಪಾ ರಾವ್ ಅವರ ಗಂಟುಮೂಟೆ ಅಂತಹ ನೆನಪೊಂದನ್ನು ತೆರೆ ಮೇಲೆ ಇಡುವ ಸಿನಿಮಾ. ಇದು ಮೀರಾ ಯಾರನ್ನು ಪ್ರೀತಿಸಿದಳು ಎಂಬುದಕ್ಕಿಂತ, ಆ ಪ್ರೀತಿಯ ನಂತರ ಮೀರಾಳೊಳಗೆ ಏನು ಉಳಿಯಿತು ಎಂಬುದರ ಕಥೆ. ಮೊದಲ ಪ್ರೀತಿಯ ಉತ್ಸಾಹದ ಜೊತೆ ಅವಮಾನವೂ ಇದೆ; ಬಯಕೆಯ ಜೊತೆ ಗೊಂದಲವೂ ಇದೆ; ಆತ್ಮೀಯತೆಯ ಜೊತೆ ಆಘಾತವೂ ಇದೆ; ಮತ್ತೊಬ್ಬರನ್ನು ಪ್ರೀತಿಸುವುದರ ಜೊತೆ ನಿಧಾನವಾಗಿ ತನ್ನನ್ನೇ ಅರ್ಥಮಾಡಿಕೊಳ್ಳುವ ಪಯಣವೂ ಇದೆ.
ಮೀರಾ ಓದಿನಲ್ಲಿ ಮುಂದಿರುವ ಹುಡುಗಿ. ಸಿನಿಮಾಗಳನ್ನು ಪ್ರೀತಿಸುವ, ತನ್ನದೇ ಕಲ್ಪನೆಗಳ ಜಗತ್ತಿನಲ್ಲಿ ಬದುಕುವ ಹದಿಹರೆಯದವಳು. ಹಮ್ ಆಪ್ಕೆ ಹೈ ಕೌನ್ನಂತಹ ಸಿನಿಮಾಗಳು ಅವಳಿಗೆ ಪ್ರೀತಿಯ ಒಂದು ಚಿತ್ರವನ್ನು ಕೊಟ್ಟಿವೆ. ಸಲ್ಮಾನ್ ಖಾನ್ನಂತಹ ನಾಯಕ ತನ್ನ ಬದುಕಿಗೂ ಬರಬಹುದು ಎಂಬ ಕಲ್ಪನೆ ಅವಳೊಳಗಿದೆ. ಮಧುವಿನಲ್ಲಿ ಆ ಕನಸಿನ ಒಂದು ಛಾಯೆಯನ್ನು ಕಂಡಾಗ, ಸಿನಿಮಾ ಕಲಿಸಿದ ಪ್ರೀತಿಯ ಭಾಷೆ ನಿಜ ಜೀವನದ ಒಬ್ಬ ಹುಡುಗನ ಮೇಲೆ ಬಂದು ಕುಳಿತುಕೊಳ್ಳುತ್ತದೆ. ಆದರೆ ಬದುಕು ಸಿನಿಮಾದಂತೆ ಸಾಗುವುದಿಲ್ಲ. ಇಲ್ಲಿಂದಲೇ ಗಂಟುಮೂಟೆ ತನ್ನ ನಿಜವಾದ ಮಾತನ್ನು ಆರಂಭಿಸುತ್ತದೆ.
ಚಿತ್ರದ ಅತ್ಯಂತ ಮುಖ್ಯವಾದ ಸಂಗತಿ ಮೀರಾಳನ್ನು ನಾವು ನೋಡುವುದಲ್ಲ; ಮೀರಾಳ ಕಣ್ಣುಗಳಿಂದ ನಾವು ಜಗತ್ತನ್ನು ನೋಡುವುದು. ಅವಳಿಗೆ ಮಧು ಇಷ್ಟವಾಗುತ್ತಾನೆ. ಅವಳು ಅವನ ಹತ್ತಿರವಾಗಲು ಬಯಸುತ್ತಾಳೆ, ಮೊದಲ ಸ್ಪರ್ಶವನ್ನು ಅನುಭವಿಸುತ್ತಾಳೆ. ಈ ಬಯಕೆಯನ್ನು ಸಿನಿಮಾ ಮುಚ್ಚಿಡುವುದಿಲ್ಲ, ಅದನ್ನು ಅಶ್ಲೀಲವಾಗಿಯೂ ಮಾಡುವುದಿಲ್ಲ. ಹದಿಹರೆಯದ ಹುಡುಗಿಗೂ ಬಯಕೆ ಇರುತ್ತದೆ ಎಂಬ ಸರಳ ಸತ್ಯವನ್ನು ಯಾವುದೇ ನೈತಿಕ ತೀರ್ಪಿಲ್ಲದೆ ಒಪ್ಪಿಕೊಳ್ಳುತ್ತದೆ.
ಭಾರತೀಯ ಸಿನಿಮಾಗಳಲ್ಲಿ ಹೆಣ್ಣಿನ ಬಯಕೆಯನ್ನು ಬಹುಪಾಲು ಪುರುಷನ ದೃಷ್ಟಿಯಿಂದ ಕಟ್ಟಿಕೊಡಲಾಗಿರುವ ಸಂದರ್ಭದಲ್ಲಿ, ಮೀರಾಳ ಬಯಕೆಯನ್ನು ಅವಳದೇ ಅನುಭವವಾಗಿ ತೋರಿಸುವುದು ಮಹತ್ವದ ಆಯ್ಕೆ. ಅವಳು ಒಳ್ಳೆಯ ಹುಡುಗಿ ಆಗಿರುವುದರಿಂದ ಅವಳಿಗೆ ಆಸೆಗಳಿಲ್ಲ ಎಂಬ ಹಳೆಯ ಕಲ್ಪನೆಯನ್ನು ಚಿತ್ರ ತಿರಸ್ಕರಿಸುತ್ತದೆ. ಅವಳು ಬಯಸುತ್ತಾಳೆ, ಗೊಂದಲಗೊಳ್ಳುತ್ತಾಳೆ, ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾಳೆ, ಪ್ರೀತಿಸುತ್ತಾಳೆ, ನೋಯುತ್ತಾಳೆ. ಇವೆಲ್ಲವೂ ಅವಳ ಮನುಷ್ಯತ್ವದ ಭಾಗಗಳೇ.
ಚಿತ್ರದಲ್ಲಿನ ಒಂದು ಸಣ್ಣ ಪ್ರಸಂಗ ಈ ದೃಷ್ಟಿಕೋನವನ್ನು ಇನ್ನಷ್ಟು ಸ್ಪಷ್ಟಗೊಳಿಸುತ್ತದೆ. ಮೀರಾ ಒಬ್ಬ ಹುಡುಗನಿಂದ ಗುಲಾಬಿ ಸ್ವೀಕರಿಸುತ್ತಾಳೆ; ಪ್ರೀತಿಯನ್ನಲ್ಲ. ಆದರೆ ಅವಳ ನಿರಾಕರಣೆ ಅವಮಾನವಾಗಿ ಅವಳ ಮೇಲೆಯೇ ಮರಳುತ್ತದೆ. ಅವಳನ್ನು ಡಗಾರ್ ಎಂದು ಕರೆಯಲಾಗುತ್ತದೆ. ಒಂದು ವೃತ್ತಿಯ ಹೆಸರೇ ಹೆಣ್ಣನ್ನು ಅವಮಾನಿಸುವ ಬೈಗುಳವಾಗುವ ಈ ಭಾಷೆಯ ಹಿಂದೆ, ತನಗೆ ಸಿಗದ ಹೆಣ್ಣನ್ನು ಕೆಳಗಿಳಿಸುವ ಪುರುಷ ಮನೋಭಾವವಿದೆ. ಪ್ರೀತಿಯನ್ನು ಸ್ವೀಕರಿಸದಿರುವುದು ಅವಮಾನವಲ್ಲ; ಅದು ಹೆಣ್ಣಿನ ಆಯ್ಕೆ.
ಈ ಸಂದರ್ಭದಲ್ಲಿ ಮಧು ಮೌನವಾಗಿರುವುದು ಮತ್ತೊಂದು ಪದರವನ್ನು ತೆರೆದಿಡುತ್ತದೆ. ಮೀರಾ ಅವನು ತನ್ನ ಪರವಾಗಿ ನಿಲ್ಲಬೇಕು, ಸಿನಿಮಾದ ನಾಯಕನಂತೆ ತನ್ನನ್ನು ಕಾಪಾಡಬೇಕು ಎಂದು ಬಯಸುತ್ತಾಳೆ. ಆದರೆ ಅವನು ಹಾಗೆ ಮಾಡುವುದಿಲ್ಲ. ಬಾಯ್ಸ್ ಟಾಯ್ಲೆಟ್ನ ಗೋಡೆಯ ಮೇಲೂ ಅವಳ ಹೆಸರನ್ನು ಅವಮಾನಿಸುವಂತೆ ಬರೆಯಲ್ಪಟ್ಟಾಗ, ಹೊರಗಿನಿಂದ ಒಬ್ಬ ನಾಯಕ ಬಂದು ತನ್ನನ್ನು ರಕ್ಷಿಸುತ್ತಾನೆ ಎಂಬ ನಿರೀಕ್ಷೆಯಿಂದ ತನ್ನ ಹೋರಾಟವನ್ನು ತಾನೇ ಎದುರಿಸಬೇಕಾದ ಅರಿವಿನತ್ತ ಮೀರಾ ಸಾಗುತ್ತಾಳೆ.

ಮೀರಾ ಮತ್ತು ಮಧುವಿನ ಆತ್ಮೀಯತೆಯನ್ನು ಚಿತ್ರಿಸಿರುವ ರೀತಿಯೂ ಗಮನಾರ್ಹ. ಮೊದಲ ಮುತ್ತು, ಅಪ್ಪುಗೆ, ದೇಹದ ಹತ್ತಿರವಾಗುವಿಕೆ—ಇವುಗಳನ್ನು ಕೇವಲ ಪ್ರೇಕ್ಷಕರ ಕುತೂಹಲಕ್ಕಾಗಿ ಬಳಸದೆ, ಇಬ್ಬರು ಕಿಶೋರರು ತಮ್ಮ ದೇಹ ಮತ್ತು ಭಾವನೆಗಳನ್ನು ಅರಿಯುವ ಅನುಭವಗಳಾಗಿ ಚಿತ್ರಿಸಲಾಗಿದೆ. ಬಯಸಿದ ಸ್ಪರ್ಶ ಮತ್ತು ಬಯಸದ ಸ್ಪರ್ಶ ಒಂದೇ ಅಲ್ಲ ಎಂಬ ಸೂಕ್ಷ್ಮ ವ್ಯತ್ಯಾಸವನ್ನೂ ಸಿನಿಮಾ ಗುರುತಿಸುತ್ತದೆ. ಇದನ್ನು ಉಪದೇಶದ ಮೂಲಕ ಹೇಳದೆ, ಮೀರಾಳ ದೇಹ ಮತ್ತು ಮನಸ್ಸಿನ ಪ್ರತಿಕ್ರಿಯೆಗಳ ಮೂಲಕ ಅನುಭವಿಸುವಂತೆ ಮಾಡುತ್ತದೆ.
ತೇಜು ಬೆಳವಾಡಿ ಮೀರಾಳ ಈ ಗೊಂದಲವನ್ನು ಬಹಳ ಸಹಜವಾಗಿ ಹಿಡಿದಿಡುತ್ತಾರೆ. ಹದಿಹರೆಯದ ಹುಡುಗಿಯ ಪಾತ್ರವೆಂದಾಕ್ಷಣ ಮುಗ್ಧ ನಗು, ಮುಜುಗರ ಅಥವಾ ಕಣ್ಣೀರಿನ ಅತಿರೇಕಕ್ಕೆ ಅವರು ಹೋಗುವುದಿಲ್ಲ. ಪ್ರೀತಿಯೇ, ಮೋಹವೇ, ನೋವೇ, ಅಪರಾಧಬೋಧೆಯೇ—ಮೀರಾಳೊಳಗೆ ಎಲ್ಲವೂ ಒಂದರೊಳಗೆ ಮತ್ತೊಂದು ಬೆರೆತಿರುತ್ತದೆ. ಆ ಗೊಂದಲವನ್ನು ಸ್ಪಷ್ಟಪಡಿಸದೆ ಗೊಂದಲವಾಗಿಯೇ ಉಳಿಸುವುದು ಅವರ ಅಭಿನಯದ ದೊಡ್ಡ ಬಲ. ಕಣ್ಣುಗಳು, ಸಣ್ಣ ನಗು, ಮೌನ ಮತ್ತು ದೇಹಭಾಷೆ ಮೀರಾಳ ಒಳಲೋಕವನ್ನು ತೆರೆದಿಡುತ್ತವೆ.
ನಿಶ್ಚಿತ್ ಕರೋಡಿ ಮಧುವಾಗಿ ಸಹಜವಾಗಿ ಕಾಣುತ್ತಾರೆ. ಅವನು ಪರಿಪೂರ್ಣ ಪ್ರೇಮಿಯಲ್ಲ; ಅವನಲ್ಲೂ ಅಪಕ್ವತೆ, ಅಸೂಯೆ, ಮುಜುಗರ ಮತ್ತು ದೌರ್ಬಲ್ಯಗಳಿವೆ. ಇದೇ ಕಾರಣಕ್ಕೆ ಮೀರಾ ಮತ್ತು ಮಧುವಿನ ಸಂಬಂಧ ಆದರ್ಶ ಪ್ರೇಮಕಥೆಯಂತೆ ಕಾಣುವುದಿಲ್ಲ. ಆ ವಯಸ್ಸಿನ ಇಬ್ಬರು ವ್ಯಕ್ತಿಗಳು ತಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಸಂಬಂಧದಂತೆ ಕಾಣುತ್ತದೆ.
ಮಧುವಿನ ಕಥೆ ಇಲ್ಲಿಂದ ಮತ್ತೊಂದು ದಿಕ್ಕಿಗೆ ತಿರುಗುತ್ತದೆ. ಪರೀಕ್ಷೆಯಲ್ಲಿ ಫೇಲಾಗುವುದು ಅವನ ಸಮಸ್ಯೆಯ ಆರಂಭ ಮಾತ್ರ. ಮನೆಯವರ ಪ್ರತಿಕ್ರಿಯೆ, ತಂಗಿ ತನ್ನನ್ನು ಗೌರವಿಸುವುದಿಲ್ಲ ಎಂಬ ನೋವು, ತನ್ನ ಜೊತೆ ಓದಿದ ಮೀರಾ ಟಾಪರ್ ಆಗಿರುವುದು—ಇವೆಲ್ಲವೂ ಸೇರಿ ಅವನೊಳಗಿನ ಅಸಮರ್ಥತೆಯ ಭಾವನೆಯನ್ನು ಗಾಢಗೊಳಿಸುತ್ತವೆ. ಅದೆಂಗ್ ನನ್ನ ಜೊತೆನೇ ಇದ್ಕೊಂಡು ನೀನ್ ಟಾಪರ್ ಆಗ್ಬಿಟ್ಟೆ? ಎನ್ನುವ ಮಾತಿನಲ್ಲಿ ಮೀರಾಳ ಯಶಸ್ಸಿನ ಮೇಲಿನ ಅಸೂಯೆಯಷ್ಟೇ ಅಲ್ಲ, ತನ್ನನ್ನೇ ಕಡಿಮೆ ಕಾಣಲು ಆರಂಭಿಸಿರುವ ಹುಡುಗನ ಅಸಹಾಯಕತೆಯೂ ಇದೆ.
ಇಲ್ಲಿ ಸಿನಿಮಾ ಪುರುಷತ್ವದ ಮತ್ತೊಂದು ಮುಖವನ್ನು ತೋರಿಸುತ್ತದೆ. ಗಂಡು ಎಂದರೆ ಗೆಲ್ಲಬೇಕು, ಸಾಧಿಸಬೇಕು, ಹೆಣ್ಣಿಗಿಂತ ಹಿಂದೆ ಇರಬಾರದು, ತನ್ನ ಭಾವನೆಗಳನ್ನು ದುರ್ಬಲತೆಯಂತೆ ತೋರಿಸಬಾರದು ಎಂಬ ಒತ್ತಡ ಮಧುವಿನೊಳಗೂ ಕೆಲಸ ಮಾಡುತ್ತದೆ. ಮೀರಾಳ ಯಶಸ್ಸು ಅವಳ ಸಂತೋಷವಾಗುವುದಕ್ಕಿಂತ ತನ್ನ ಸೋಲಿನ ಅಳತೆಯಾಗಿ ಕಾಣತೊಡಗುತ್ತದೆ. ಹೀಗಾಗಿ ಅವನ ಕುಸಿತವನ್ನು ಕೇವಲ ಪರೀಕ್ಷೆಯ ಫಲಿತಾಂಶಕ್ಕೆ ಕಟ್ಟಿಹಾಕಲು ಸಾಧ್ಯವಿಲ್ಲ. ಪ್ರೀತಿ, ಹೋಲಿಕೆ, ಮನೆಯ ನಿರೀಕ್ಷೆ, ವೈಫಲ್ಯ ಮತ್ತು ತನ್ನ ಮೇಲಿನ ನಂಬಿಕೆಯ ಕುಸಿತ—ಇವೆಲ್ಲ ಸೇರಿ ಅವನೊಳಗಿನ ಕತ್ತಲೆಯನ್ನು ಗಾಢಗೊಳಿಸುತ್ತವೆ.

ಕೊನೆಗೆ ಮಧು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಸಿನಿಮಾ ಇದನ್ನು ಪರಿಹಾರವಾಗಿ ತೋರಿಸುವುದಿಲ್ಲ. ಅವನ ಸಾವನ್ನು ಕೇವಲ ಪರೀಕ್ಷೆಯಲ್ಲಿ ಫೇಲಾದ ಹುಡುಗನ ದುರಂತ ಎಂದು ನೋಡುವುದೂ ಚಿತ್ರದ ಪ್ರಶ್ನೆಯನ್ನು ಸಣ್ಣದಾಗಿಸುತ್ತದೆ. ಒಂದು ಹುಡುಗ ಆ ಹಂತಕ್ಕೆ ತಲುಪುವ ಮುನ್ನ ಅವನೊಳಗೆ ಏನೆಲ್ಲ ಬದಲಾಗುತ್ತಿತ್ತು ಎಂಬುದನ್ನು ಗಮನಿಸುವಂತೆ ಸಿನಿಮಾ ಮಾಡುತ್ತದೆ.
ಆದರೂ ಇಲ್ಲಿ ಒಂದು ವಿಮರ್ಶಾತ್ಮಕ ಪ್ರಶ್ನೆ ಉಳಿಯುತ್ತದೆ. ಮಧುವಿನ ಸಾವಿನ ನಂತರ ಅವನ ಮನಸ್ಸಿನೊಳಗೆ ನಾವು ಮೀರಾಳಷ್ಟು ಆಳವಾಗಿ ಹೋಗುವುದಿಲ್ಲ. ಆದರೆ ಅದನ್ನು ಚಿತ್ರದ ಕೊರತೆ ಎಂದು ಮಾತ್ರ ಹೇಳಲು ಸಾಧ್ಯವಿಲ್ಲ. ಇಡೀ ಕಥೆಯನ್ನು ಮೀರಾಳ ದೃಷ್ಟಿಯಿಂದ ಕಟ್ಟಿರುವ ನಿರ್ದೇಶಕಿಯ ಆಯ್ಕೆಯೂ ಇದಾಗಿರಬಹುದು. ಮಧುವಿನ ದುರಂತ ನಮಗೆ ಅವನ ಒಳಲೋಕದ ಮೂಲಕವಲ್ಲ, ಮೀರಾಳ ಮೇಲೆ ಅದು ಬಿಟ್ಟುಹೋದ ಪರಿಣಾಮದ ಮೂಲಕ ತಲುಪುತ್ತದೆ.
ಅವನ ಸಾವಿನ ನಂತರ ಮೀರಾ ಕೇಳುವ “ಪ್ರೀತಿ ಇದ್ದಿದ್ರೆ ಹೀಗ್ ಬಿಟ್ ಹೋಗ್ತಿದ್ನಾ” ಎಂಬ ಪ್ರಶ್ನೆ ಚಿತ್ರದ ಅತ್ಯಂತ ನೋವಿನ ಕ್ಷಣಗಳಲ್ಲಿ ಒಂದು. ಅವನು ಸತ್ತಿದ್ದಾನೆ ಎಂಬ ದುಃಖದ ಜೊತೆಗೆ, ಅವನೊಂದಿಗೆ ತನ್ನ ಬದುಕಿನ ಒಂದು ಭಾಗವೂ ಕಳೆದುಹೋಯಿತು ಎಂಬ ಭಾವನೆ ಅವಳನ್ನು ಕಾಡುತ್ತದೆ.
ಇಲ್ಲಿಯೇ ಚಿತ್ರದ ಶೀರ್ಷಿಕೆ ತನ್ನ ಪೂರ್ಣ ಅರ್ಥವನ್ನು ಪಡೆದುಕೊಳ್ಳುತ್ತದೆ. ಮೀರಾಳ ಗಂಟುಮೂಟೆಯಲ್ಲಿ ಮಧುವಿನ ನೆನಪು ಮಾತ್ರ ಇಲ್ಲ. ಮೊದಲ ಪ್ರೀತಿಯಿದೆ, ಬಯಕೆಯಿದೆ, ಅವಮಾನವಿದೆ, ಆಘಾತವಿದೆ, ಸ್ನೇಹವಿದೆ, ವೈಫಲ್ಯದ ನೆನಪಿದೆ, ತನ್ನನ್ನೇ ಅರ್ಥಮಾಡಿಕೊಳ್ಳಲಾಗದ ದಿನಗಳಿವೆ. ಬೆಳೆಯುವುದು ಎಂದರೆ ಇವೆಲ್ಲವನ್ನೂ ಮರೆತುಬಿಡುವುದು ಅಲ್ಲ; ಅವುಗಳೊಂದಿಗೆ ಬದುಕಲು ಕಲಿಯುವುದು.
ರೂಪಾ ರಾವ್ ಅವರ ದೊಡ್ಡ ಸಾಧನೆ ಮೀರಾಳನ್ನು ಪರಿಪೂರ್ಣ ನಾಯಕಿಯನ್ನಾಗಿ ಮಾಡದಿರುವುದು. ಅವಳು ತಪ್ಪು ಮಾಡುತ್ತಾಳೆ, ಬಯಸುತ್ತಾಳೆ, ಗೊಂದಲಗೊಳ್ಳುತ್ತಾಳೆ, ನೋಯುತ್ತಾಳೆ. ಆದರೆ ಅವಳನ್ನು ಒಳ್ಳೆಯ ಹುಡುಗಿ ಅಥವಾ ಕೆಟ್ಟ ಹುಡುಗಿ ಎಂಬ ಎರಡು ಚೌಕಟ್ಟಿನಲ್ಲಿ ಸಿಲುಕಿಸುವುದಿಲ್ಲ. ಅವಳು ತನ್ನ ಅನುಭವಗಳಿಗೆ ಅರ್ಥ ಹುಡುಕಿಕೊಳ್ಳುವ ಒಬ್ಬ ಸಂಪೂರ್ಣ ವ್ಯಕ್ತಿ.
ಚಿತ್ರದ ನಿಧಾನಗತಿಯೂ ಈ ಒಳಲೋಕದ ಅನುಭವಕ್ಕೆ ಪೂರಕವಾಗಿದೆ. ನೆನಪುಗಳು ಸರಳ ರೇಖೆಯಲ್ಲಿ ಬರುವುದಿಲ್ಲ; ಕೆಲವು ಕ್ಷಣಗಳು ಮತ್ತೆ ಮತ್ತೆ ಮರಳುತ್ತವೆ. ಅದೇ ಕಾರಣಕ್ಕೆ ಚಿತ್ರದ ಡೈರಿಯಂತಹ ನಿರೂಪಣೆ ಮೀರಾಳ ಮನಸ್ಸಿಗೆ ಹತ್ತಿರವಾಗುತ್ತದೆ. ಆದರೂ ಕೆಲವು ಕಡೆ ಈ ನಿಧಾನಗತಿ ಭಾವನೆಯನ್ನು ಆಳಗೊಳಿಸುವ ಬದಲು ಸ್ವಲ್ಪ ಎಳೆಯುತ್ತದೆ ಎನ್ನಿಸುವುದು ಚಿತ್ರದ ಮಿತಿಯಾಗಿದೆ. ಕೆಲವು ಪ್ರಸಂಗಗಳನ್ನು ಇನ್ನಷ್ಟು ಬಿಗಿಯಾಗಿ ಸಂಕಲನಗೊಳಿಸಿದ್ದರೆ ಒಟ್ಟಾರೆ ತೀವ್ರತೆ ಹೆಚ್ಚಬಹುದಿತ್ತು.
1990ರ ದಶಕದ ಬೆಂಗಳೂರು ಕೂಡ ಇಲ್ಲಿ ಕೇವಲ ನೆನಪು ಹುಟ್ಟಿಸುವ ಹಿನ್ನೆಲೆಯಲ್ಲ. ಲ್ಯಾಂಡ್ಲೈನ್, ನೋಟ್ಬುಕ್, ಸಿನಿಮಾ ಹಾಲ್ ಮತ್ತು ಕಾಯುವಿಕೆ—ಇವೆಲ್ಲವೂ ಆ ಕಾಲದ ನಿಧಾನವಾದ ಬದುಕನ್ನು ಮರಳಿ ತರುತ್ತವೆ. ಇಂದಿನಂತೆ ಕ್ಷಣಾರ್ಧದಲ್ಲಿ ಎಲ್ಲವನ್ನೂ ಹೇಳಿಬಿಡಲು ಸಾಧ್ಯವಿಲ್ಲದ ಕಾಲ ಅದು. ಕಾಯುವಿಕೆಯಲ್ಲೇ ಪ್ರೀತಿ ಬೆಳೆಯುತ್ತದೆ; ಮೌನದಲ್ಲೇ ಪ್ರಶ್ನೆಗಳು ದೊಡ್ಡವಾಗುತ್ತವೆ.
ಅಪರಾಜಿತ್ ಶ್ರೀಸ್ ಅವರ ಸಂಗೀತ ಮತ್ತು ಸಹದೇವ್ ಕೆಲ್ವಾಡಿ ಅವರ ಛಾಯಾಗ್ರಹಣವೂ ಈ ಆತ್ಮೀಯತೆಯನ್ನು ಕಟ್ಟುವಲ್ಲಿ ನೆರವಾಗುತ್ತವೆ. ಸಂಗೀತ ಮೀರಾಳ ಭಾವನೆಗಳ ಮೇಲೆ ಬಲವಂತವಾಗಿ ಕುಳಿತುಕೊಳ್ಳುವುದಿಲ್ಲ. ಕ್ಯಾಮೆರಾ ಕೂಡ ಅವಳನ್ನು ದೂರದಿಂದ ನೋಡುವುದಕ್ಕಿಂತ ಅವಳ ಜೊತೆಗಿರುವ ಅನುಭವ ನೀಡುತ್ತದೆ.
ಹೀಗಾಗಿ ಗಂಟುಮೂಟೆ ಕೇವಲ ಮೊದಲ ಪ್ರೀತಿಯ ನೆನಪಿನ ಸಿನಿಮಾ ಅಲ್ಲ. ಅದು ಹೆಣ್ಣಿನ ಬಯಕೆ ಮತ್ತು ಆಯ್ಕೆಯನ್ನು ನೋಡುವ ದೃಷ್ಟಿಯ ಬಗ್ಗೆ, ಪ್ರೀತಿಯನ್ನು ಸ್ವಾಮ್ಯವೆಂದು ತಪ್ಪಾಗಿ ಅರ್ಥಮಾಡಿಕೊಳ್ಳುವ ಮನಸ್ಥಿತಿಯ ಬಗ್ಗೆ, ಗಂಡು ಮಕ್ಕಳ ನೋವನ್ನು ಮೌನಗೊಳಿಸುವ ಪುರುಷತ್ವದ ಬಗ್ಗೆ ಮತ್ತು ವೈಫಲ್ಯವನ್ನು ಕೇವಲ ಅಂಕಗಳ ಮೂಲಕ ನೋಡುವ ಮನಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ.
ಆದರೆ ಚಿತ್ರದ ಅಂತಿಮ ಮಾತು ಮಧುವಿನ ಸಾವಲ್ಲ. ಅವನು ಆ ಹಂತಕ್ಕೆ ತಲುಪುವ ಮುನ್ನ ಅವನೊಳಗೆ ನಡೆದ ಬದಲಾವಣೆಗಳನ್ನು ನಾವು ಗಮನಿಸಿದ್ದೇವೆಯೇ ಎಂಬ ಪ್ರಶ್ನೆಯೇ ಹೆಚ್ಚು ಮುಖ್ಯ. ಹಾಗೆಯೇ ಮೀರಾಳ ಬದುಕಿನಲ್ಲೂ ಮುಖ್ಯವಾದುದು ಅವಳು ಯಾರನ್ನು ಪ್ರೀತಿಸಿದಳು ಎಂಬುದಲ್ಲ; ಆ ಪ್ರೀತಿಯ ಮೂಲಕ, ಅದರ ನೋವಿನ ಮೂಲಕ ಮತ್ತು ತನ್ನದೇ ಅನುಭವಗಳ ಮೂಲಕ ಅವಳು ತನ್ನನ್ನು ಹೇಗೆ ಕಂಡುಕೊಂಡಳು ಎಂಬುದು.
ಇದನ್ನೂ ಓದಿ ಅವಳ ಕಣ್ಣೋಟ | ʼಮಾತೃಭೂಮಿ: ಎ ನೇಷನ್ ವಿಥೌಟ್ ವುಮೆನ್ʼ- ಹೆಣ್ಣಿಲ್ಲದ ಭವಿಷ್ಯದ ಎಚ್ಚರಿಕೆ
ಕೊನೆಯಲ್ಲಿ ಮೀರಾ ಉಳಿಯುತ್ತಾಳೆ. ತುಂಬಿಕೊಂಡಂತೆಯೂ ಖಾಲಿಯಾದಂತೆಯೂ. ಜೀವನ ಕೆಲವೊಮ್ಮೆ ಒಂದೇ ಸಮಯದಲ್ಲಿ ಈ ಎರಡೂ ಆಗಿರಬಹುದು. ಕೆಲವು ಅನುಭವಗಳು ನಮ್ಮನ್ನು ಮುರಿಯಬಹುದು. ಆದರೆ ಮುರಿದಿರುವುದು ಮುಗಿದಿರುವುದಲ್ಲ.
ನಮ್ಮ ಪ್ರತಿಯೊಬ್ಬರ ಬದುಕಿನಲ್ಲೂ ಒಂದು ಗಂಟುಮೂಟೆ ಇರುತ್ತದೆ. ಅದನ್ನು ಎಸೆದುಬಿಡುವುದೇ ಮುಂದೆ ಸಾಗುವುದು ಅಲ್ಲ. ಅದರ ಭಾರ ನಮ್ಮ ಹೆಜ್ಜೆಗಳನ್ನು ನಿರ್ಧರಿಸದಂತೆ ಅದನ್ನು ಹೊತ್ತುಕೊಂಡೇ ನಡೆಯುವುದನ್ನು ಕಲಿಯುವುದು. ಬಹುಶಃ ಗಂಟುಮೂಟೆ ಮೀರಾಳಿಗೆ ಕಲಿಸುವುದೂ ಅದನ್ನೇ. ಪ್ರೇಕ್ಷಕರಿಗೂ.

ರುಕ್ಮಿಣಿ ನಾಗಣ್ಣವರ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.



