ನಾವು ಬಾಲ್ಯದಿಂದ ಇಂದಿಗೂ ಭಾಷಣಗಳಲ್ಲಿ ಹೇಳಿಕೊಂಡು, ಕೇಳಿಕೊಂಡು ಬಂದಿರುವುದು ‘ರೈತ ದೇಶದ ಬೆನ್ನೆಲುಬು’ ಎಂಬುದು. ಆಸ್ತಿಕರು ‘ರೈತನೇ ದೇವರೆಂದರೆ’, ನಾಸ್ತಿಕರು ‘ರೈತನೇ ನಮ್ಮ ದೇಶ’ ಎನ್ನುತ್ತಾರೆ. ಅವೆಲ್ಲವೂ ಇಂದು ಭಾಷಣಕ್ಕೆ ಸೀಮಿತ, ರಾಜಕಾರಣಿಗಳ ಮಾತಿನ ಚಪಲಕ್ಕೆ ಆಹುತಿಯಾಗಿವೆ. ರೈತರ ಬೇಡಿಕೆಯನ್ನು ಕೇಳುವವರೂ ಇಲ್ಲ, ಬೆಲೆಯೂ ಇಲ್ಲ. ಅದಕ್ಕೆ ಸ್ಪಷ್ಟ ಉದಾಹರಣೆ ಸುಮಾರು 43 ದಿನಗಳಿಂದ ಜಗ್‌ಜೀತ್ ಸಿಂಗ್ ದಲ್ಲೇವಾಲ್ ಉಪವಾಸ ಮಾಡುತ್ತಿರುವುದು.
ರೈತರು ತಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಯುಪಿಎ ಸರ್ಕಾರ ಇದ್ದಾಗಲೂ ನಡೆದಿದೆ. ಆದರೆ, ಕಾರ್ಪೋರೇಟ್ ಕಂಪನಿಗಳ ಅದರಲ್ಲೂ ಅಂಬಾನಿ-ಅದಾನಿಗಳ ಅತ್ಯಾಪ್ತ, ಆಪ್ತಮಿತ್ರ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರೈತರ ಪಾಡು ಇನ್ನಷ್ಟು ಶೋಚನೀಯ ಸ್ಥಿತಿಗೆ ತಲುಪಿದೆ. ತಮ್ಮ ಬೇಡಿಕೆ ಈಡೇರಿಕೆಗೆ ರೈತರು ತಮ್ಮ ಜೀವವನ್ನೇ ಮುಡಿಪಿಡುವಂತಾಗಿದೆ.
ಇದನ್ನು ಓದಿದ್ದೀರಾ? ಗೆಲ್ಲುತ್ತೇನೆ ಅಥವಾ ಸಾಯುತ್ತೇನೆ; ನನ್ನನ್ನು ಮೇಲೆತ್ತಲು ಸರ್ಕಾರಕ್ಕೆ ಬಿಡಬೇಡಿ: 29 ದಿನಗಳಿಂದ ಉಪವಾಸ ಮಾಡುತ್ತಿರುವ ರೈತ ದಲೈವಾಲ್
2020ರಿಂದ ರೈತರು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಖಾತರಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. 2020ರಲ್ಲಿ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ದೀರ್ಘ ಪ್ರತಿಭಟನೆಯನ್ನು ನಡೆಸಿದ್ದರು. ರೈತರ ಪಟ್ಟುಬಿಡದ ಈ ಹೋರಾಟದಿಂದಾಗಿ ಬೇರೆ ದಾರಿಯಿಲ್ಲದೆ ಮಣಿದ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು2021ರ ನವೆಂಬರ್‌ನಲ್ಲಿ ಹಿಂಪಡೆದಿತ್ತು.
ಆದರೆ, ಎಂಎಸ್‌ಪಿಗೆ ಕಾನೂನು ಖಾತರಿ ನೀಡುವ ರೈತರ ಬೇಡಿಕೆ ಇಂದಿಗೂ ಬೇಡಿಕೆಯಾಗಿಯೇ ಉಳಿದಿದೆ. ಎಂಎಸ್‌ಪಿ ಕಾನೂನು ಖಾತರಿ ಸೇರಿದಂತೆ ಇನ್ನೂ ಹಲವು ಬೇಡಿಕೆಗಳನ್ನು ಮುಂದಿಟ್ಟು ಪಂಜಾಬ್ ರೈತರು 2024ರ ಫೆಬ್ರವರಿ 13ರಿಂದ ದೆಹಲಿ ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದರು. ಅವರನ್ನು ಪಂಜಾಬ್-ಹರಿಯಾಣ ಗಡಿಯಲ್ಲಿಯೇ ಗಡ್ಡಗಟ್ಟಲಾಯಿತು. ಅಂದಿನಿಂದಲೂ ಅವರು ಖನೌರಿ ಮತ್ತು ಶಂಭು ಗಡಿಗಳಲ್ಲಿ ಹೋರಾಟ ಮುಂದುವರೆಸಿದ್ದಾರೆ. ಇವೆಲ್ಲವುದರ ನಡುವೆ ರೈತ ನಾಯಕ ಜಗ್‌ಜೀತ್ ಸಿಂಗ್ ದಲ್ಲೇವಾಲ್ ರೈತರ ಬೇಡಿಕೆಯ ಈಡೇರಿಕೆಗಾಗಿ ಅನಿರ್ಧಿಷ್ಠಾವಧಿ ಉಪವಾಸ ನಡೆಸುತ್ತಿದ್ದಾರೆ. ಅವರ ಉಪವಾಸ 40ಕ್ಕೂ ದಿನಗಳ ಗಡಿ ದಾಟಿದೆ. ಅವರ ಆರೋಗ್ಯ ಪರಿಸ್ಥಿತಿ ಶೋಚನೀಯವಾಗಿದೆ. “ನಾನು ನನ್ನ ಹೋರಾಟದಲ್ಲಿ ಗೆಲ್ಲುತ್ತೇನೆ ಅಥವಾ ಸಾಯುತ್ತೇನೆ. ನನ್ನನ್ನು ಬಲವಂತವಾಗಿ ಮೇಲೆತ್ತಲು ಸರ್ಕಾರಕ್ಕೆ ಬಿಡಬೇಡಿ” ಎಂದು ಸ್ಪಷ್ಟವಾಗಿ ದಲ್ಲೇವಾಲ್ ಹೇಳಿದ್ದಾರೆ.
ಈ ಹಂತದಲ್ಲಾದರೂ ರೈತರೊಂದಿಗೆ ಕೂತು ಮಾತನಾಡಿ ಬೇಡಿಕೆ ಈಡೇರಿಕೆಯ ಚಿಂತನೆ ನಡೆಸಬೇಕಾದ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ. ರೈತರ ಜೀವಕ್ಕೆ ಬೆಲೆ ನೀಡದ ಈ ಕೇಂದ್ರ ಸರ್ಕಾರ ಸರ್ಪಕ್ಕಾಗಿ ಹೊಂಚು ಹಾಕುತ್ತಿರುವ ಗರುಡನಂತೆ ಕಾಣಿಸುತ್ತಿದೆ.
ಇದನ್ನು ಓದಿದ್ದೀರಾ? ಎಂಎಸ್‌ಪಿ | ಜನವರಿ 4ರಂದು ಕಿಸಾನ್ ಮಹಾ ಪಂಚಾಯತ್: ರೈತರ ಕರೆ
2020ರಿಂದ ಎಂಎಸ್‌ಪಿ ಕಾನೂನು ಖಾತರಿಗಾಗಿ ರೈತರು ಪ್ರತಿಭಟಿಸುತ್ತಿದ್ದರೂ ಕೇಂದ್ರ ಮಾತ್ರ ರೈತರತ್ತ ತಲೆಹಾಕಿಯೂ ಮಲಗಲ್ಲ ಎಂದು ನಿರ್ಧರಿಸಿದಂತಿದೆ. ಪದೇ ಪದೇ ಇನ್ನೇನು ಎಂಎಸ್‌ಪಿ ಜಾರಿಗೊಳಿಸುವತ್ತೇವೆ ಎಂದು ಕೇಂದ್ರ ಹೇಳುತ್ತಲೇ ಇದೆ. ಆದರೆ, ಜಾರಿಗೆ ಮಾತ್ರ ಬಂದಿಲ್ಲ. ಕಾನೂನು ಖಾತರಿ ಬಗ್ಗೆ ಮಾತೇ ಇಲ್ಲ.
ಈಗಾಗಲೇ ರೈತರ ಹೊಟ್ಟೆಗೆ ಹೊಡೆದಿರುವ ಮೋದಿ ಸರ್ಕಾರ ಕಾರ್ಪೋರೇಟ್ ಸಂಸ್ಥೆಗಳಿಗೆ ಕೃಷಿ ಭೂಮಿಯನ್ನು ಧಾರೆ ಎರೆಯುತ್ತಿದೆ. ರೈತರ ಭೂಮಿ ಕಿತ್ತುಕೊಂಡು ಕಾರ್ಪೋರೇಟ್‌ಗಳ ಕೈಗೆ ಒಪ್ಪಿಸಲಾಗುತ್ತಿದೆ. ಇತ್ತ ಪರಿಹಾರವೂ ಇಲ್ಲ, ಭೂಮಿಯೂ ಇಲ್ಲ ಎಂಬ ಸ್ಥಿತಿಯಲ್ಲಿರುವ ರೈತರ ಅಳಲು ಕೇಳುವವರಿಲ್ಲ.
Dallewal will take medical aid if Centre speaks to farmers: Punjab to Supreme Court
— Law Today (@LawTodayLive) January 2, 2025
Jagjit Singh Dallewal has been on an indefinite hunger strike at the Khanauri border between Punjab and Haryana since Nov 26, urging Centre to address farmers' demands.https://t.co/VMHsjRe1Mu
ಇನ್ನೊಂದೆಡೆ ಬೀದಿಗಿಳಿದು ಹೋರಾಡುವ ರೈತರನ್ನು ರೈತರೇ ಅಲ್ಲ ಎಂದು ಬಿಂಬಿಸಿ, ಜನರನ್ನೇ ರೈತರ ವಿರುದ್ಧ ಎತ್ತಿಕಟ್ಟುವಲ್ಲಿಯೂ ಬಿಜೆಪಿಗರು ಬಹುತೇಕ ಸಫಲರಾಗಿದ್ದಾರೆ. ರೈತರನ್ನೇ ಭಯೋತ್ಪಾದಕರು ಎಂದು ಬಿಂಬಿಸುವ ಕೀಳು ಸ್ಥಿತಿಗೆ ಕೇಂದ್ರ ಸರ್ಕಾರ ಇಳಿದಿದೆ.
ರೈತರ, ಬಡವರ್ಗದ, ಜನ ಸಾಮಾನ್ಯರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ನಮ್ಮ ನಾಟಕೀಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಸಾನದ ದಾಹ ಹೆಚ್ಚಾದಂತಿದೆ. ನೋಟ್ ಬಂದ್‌ನಿಂದ ಹಿಡಿದು ಲಾಕ್‌ಡೌನ್‌ವರೆಗೆ ಮುಂದಾಲೋಚನೆಯಿಲ್ಲದ ತನ್ನ ಆದೇಶಗಳಿಂದ ಈಗಾಗಲೇ ಮೋದಿ ಪಡೆದ ನರಬಲಿಗೆ ಲೆಕ್ಕವಿಲ್ಲ. ದೇಶದ ಬೆನ್ನೆಲುಬಾದ ರೈತರ ಬೇಡಿಕೆಗಳನ್ನು ಈಡೇರಿಸಬೇಕಾದ ಕೇಂದ್ರ ಸರ್ಕಾರ ದಲೈವಾಲ್ ಪ್ರಾಣಪಕ್ಷಿ ಹಾರಲು ಕಾದುಕೂತಿರುವುದು ವಿಪರ್ಯಾಸ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.