ಆರ್.ಎಸ್.ಎಸ್ ಸಂಸ್ಕಾರ ಪಡೆದವರು ಶಿಸ್ತಿನವರು, ಶುದ್ಧಹಸ್ತರು ಎಂಬುದು ವಾಸ್ತವವಲ್ಲ. ಯಡಿಯೂರಪ್ಪ ಮತ್ತು ಅವರ ಕುಟುಂಬದ ಮೇಲಿನ ಭ್ರಷ್ಟಾಚಾರದ ಆರೋಪಗಳು, ಬಿಜೆಪಿ ಸರ್ಕಾರದ ಅವಧಿಯ ಕಮಿಷನ್ ದಂಧೆ- ಎಲ್ಲವೂ ಸಂಘ ಹೇಳುವ ಕ್ಲೀನ್ ಇಮೇಜಿಗೆ ತದ್ವಿರುದ್ಧವಾಗಿವೆ.
ಸಿದ್ದರಾಮಯ್ಯ ಬಣ, ಡಿ.ಕೆ. ಶಿವಕುಮಾರ್ ಬಣ, ಮಲ್ಲಿಕಾರ್ಜುನ ಖರ್ಗೆ ಬಣ- ಈ ಮೂರು ಕೂಡ ಕರ್ನಾಟಕ ಕಾಂಗ್ರೆಸ್ನೊಳಗೆ ಕಾಣುವ ಪ್ರಬಲ ಗುಂಪುಗಳು. 2023ರ ಚುನಾವಣೆಯಲ್ಲಿ ಸಿಕ್ಕ ದೊಡ್ಡ ಬಹುಮತದ ಕಾರಣ ಅಧಿಕಾರಕ್ಕಾಗಿ ಕನಿಷ್ಠ ಎರಡು ಬಣಗಳ ನಡುವೆ ಭಾರೀ ತಿಕ್ಕಾಟ ನಡೆದು ಕಾಂಗ್ರೆಸ್ನಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ ಎಂದೇ ವಿಶ್ಲೇಷಣೆಗಳು ಬರುತ್ತಿದ್ದವು. ಬಹುಶಃ ಬಿಜೆಪಿಯ ಅಧಿಕಾರವನ್ನು ಬಯಸುವ ಮಾಧ್ಯಮಗಳೂ ಈ ನರೇಟಿವ್ಗಳನ್ನು ಪ್ರಚೋದಿಸಲು ಯತ್ನಿಸಿದ್ದವು. ಆದರೆ ಅದ್ಯಾವುದೂ ಆಗಲಿಲ್ಲ.
ಸಿದ್ದರಾಮಯ್ಯನವರು 2ನೇ ಬಾರಿಗೆ ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ನಾಯಕತ್ವ ಚರ್ಚೆ ಬಿರುಸು ಪಡೆದಿತ್ತು. ಹೈಕಮಾಂಡ್ ಮಟ್ಟದಲ್ಲಿ ಮಾತುಕತೆಗಳು ನಡೆದು, ಎರಡೂವರೆ ವರ್ಷಗಳ ಅಧಿಕಾರ ಒಪ್ಪಂದದಂತೆ ಮುಖ್ಯಮಂತ್ರಿ ಸ್ಥಾನವನ್ನು ವಹಿಸಿಕೊಂಡರು. ತಮ್ಮ ಒಪ್ಪಂದದ ಅವಧಿ ಮುಗಿದ ಮೇಲೆ ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಯಾವುದೇ ಪ್ರತಿರೋಧ ತೋರದೆ ಕುರ್ಚಿಯಿಂದ ಕೆಳಗಿಳಿದರು. ಜೊತೆಗೆ ಸಂತೋಷವಾಗಿಯೇ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಕಳೆದ ಮೂರು ದಶಕಗಳ ಕರ್ನಾಟಕ ರಾಜಕೀಯ ಚರಿತ್ರೆಯಲ್ಲಿ ಇಷ್ಟು ಸುಲಭವಾಗಿ ಅಧಿಕಾರ ವರ್ಗಾವಣೆಯಾದ ಉದಾಹರಣೆ ಕಾಣುವುದಿಲ್ಲ. ಅಷ್ಟರ ಮಟ್ಟಿಗೆ ಸಿದ್ದರಾಮಯ್ಯನವರು ರಾಜಕೀಯ ಮೇಲ್ಪಂಕ್ತಿ ಹಾಕಿಕೊಟ್ಟರು.
ಶಿಸ್ತಿನ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತುಲನೆ ಮಾಡುವುದು ಸಾಮಾನ್ಯ. ಕಾಂಗ್ರೆಸ್ನ ಕಾರ್ಯವೈಖರಿಗೂ ಬಿಜೆಪಿ ಕಾರ್ಯವೈಖರಿಗೂ ಹೋಲಿಕೆ ಮಾಡಿ, ಬಿಜೆಪಿಯನ್ನು ಬಹಳ ಶಿಸ್ತಿನ ಪಕ್ಷ ಎಂದು ಬಿಂಬಿಸಲಾಗುತ್ತದೆ. ಆ ಶಿಸ್ತಿಗೆ ಕೆಲವು ಕಾರಣಗಳನ್ನು ಕೊಡಲಾಗುತ್ತದೆ. “ಬಿಜೆಪಿಯಲ್ಲಿ ನಾಯಕತ್ವ ವಹಿಸುವ ಬಹುತೇಕರು ಆರ್.ಎಸ್.ಎಸ್ ಸಕ್ರಿಯ ಕಾರ್ಯಕರ್ತರಾಗಿ ಬೆಳೆದಿರುತ್ತಾರೆ. ಹೀಗಾಗಿ ಸಂಘದ ಸಂಸ್ಕಾರ ಅವರನ್ನು ಶಿಸ್ತಿನಲ್ಲಿ ಇಟ್ಟಿರುತ್ತದೆ. ಪಕ್ಷದ ಹೈಕಮಾಂಡ್ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿ ಎಲ್ಲರೂ ಮುಂದುವರಿಯುತ್ತಾರೆ. ಪಕ್ಷದಲ್ಲಿ ಕೇಡರ್ ಬೇಸ್ ಸಂಘಟನಾ ಶಕ್ತಿ ಇರುವುದರಿಂದ ಭಿನ್ನಾಭಿಪ್ರಾಯಗಳು ಬಹಿರಂಗವಾಗುವುದಿಲ್ಲ” ಎಂದು ನಿರೂಪಣೆ ಕಟ್ಟಲಾಗುತ್ತದೆ. ಆರ್.ಎಸ್.ಎಸ್ ಸಂಸ್ಕಾರ ಎಂದರೆ ಯಾವುದು? ಆ ಸಂಸ್ಕಾರಕ್ಕೂ ಸಾಂವಿಧಾನಿಕ ಮೌಲ್ಯಗಳಿಗೂ ಸಂಬಂಧವಿದೆಯೇ? ಎಂದು ಪ್ರಶ್ನಿಸಿದರೆ- ಆಶಾದಾಯಕ ಉತ್ತರವೇನೂ ದೊರಕುವುದಿಲ್ಲ; ಅದು ಬೇರೆಯ ವಿಚಾರ.
ಯಾವುದೇ ಬಂಡಾಯಗಳು ಸ್ಫೋಟವಾಗದಂತೆ ನೋಡಿಕೊಂಡು, ಪಕ್ಷದ ಒಗ್ಗಟ್ಟು ಪ್ರದರ್ಶಿಸುವುದನ್ನು ಶಿಸ್ತು ಎಂದು ಚಿತ್ರಿಸಲಾಗಿದೆ. ಬಿಜೆಪಿ ಹೈಕಮಾಂಡ್- ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಹಿಂದೆ ಮುಂದೆ ನೋಡುವುದಿಲ್ಲ, ಎಂಥವನೇ ಆದರೂ ಪಕ್ಷದಿಂದ ಹೊರಹಾಕಿ ಶಿಕ್ಷಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ. ಆ ಶಿಸ್ತು ಎಲ್ಲ ರಾಜ್ಯಕ್ಕೂ ಒಂದೇ ತೆರನಾಗಿರುತ್ತದೆಯೇ ಎಂದು ನೋಡಿದರೆ ಒಮ್ಮತದ ಅಭಿಪ್ರಾಯ ಮೂಡುವುದಿಲ್ಲ. ಅರಾಜಕತೆಯ ನಿಯಂತ್ರಣವು ಸಂದರ್ಭೋಚಿತವೂ ಹೌದು. ಖಂಡಿತವಾಗಿಯೂ ಮೇಲುನೋಟಕ್ಕೆ ಕೆಲವೊಂದು ವಿದ್ಯಮಾನಗಳು ಬಿಜೆಪಿ ಶಿಸ್ತಿಗೆ ಉದಾಹರಣೆಯಾಗಿ ಕಾಣುತ್ತವೆ. ಸ್ಥಳೀಯವಾಗಿ ಲಂಗುಲಗಾಮಿಲ್ಲದೆ ಮೆರೆಯುತ್ತಿದ್ದವರನ್ನು ತುಳಿದು ಅಥವಾ ಮೂಲೆಗುಂಪು ಮಾಡಿ, ಅವರ ಅಟಾಟೋಪಗಳಿಗೆ ಕಡಿವಾಣ ಹಾಕಿದ ಉದಾಹರಣೆಗಳು ಇವೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದ ನಾಯಕತ್ವ ಬದಲಿಸಿದ ರೀತಿಯಲ್ಲೂ ಇದು ಸಾಬೀತಾಗಿದೆ. ಶಿವರಾಜ್ ಸಿಂಗ್ ಚೌಹಾಣ್ ಮತ್ತು ವಸುಂಧರಾ ರಾಜೇ ಅವರು ದಶಕಗಳ ಕಾಲ ಆಳಿದ ಪ್ರಭಾವಿ ಮಾಸ್ ಲೀಡರ್ಗಳು. ಆದರೆ ಅವರನ್ನು ಬದಿಗೆ ಸರಿಸಿದ ಹೈಕಮಾಂಡ್, ತೀರಾ ಹೊಸ ಮುಖಗಳಾದ ಮೋಹನ್ ಯಾದವ್ ಮತ್ತು ಭಜನ್ಲಾಲ್ ಶರ್ಮಾ ಅವರನ್ನು ಸಿಎಂ ಮಾಡಿತು. ಇಷ್ಟು ದೊಡ್ಡ ಬದಲಾವಣೆಯಾದರೂ ಅಲ್ಲಿ ಯಾವುದೇ ಬಹಿರಂಗ ಬಂಡಾಯವಾಗಲಿ, ಶಾಸಕರ ರೆಸಾರ್ಟ್ ರಾಜಕೀಯವಾಗಲಿ ನಡೆಯಲಿಲ್ಲ. ಇದು ಬಿಜೆಪಿಯ ಶಿಸ್ತಿಗೆ ಉದಾಹರಣೆ ಎಂದು ಗುರುತಿಸಲಾಗುತ್ತದೆ.
ಇದನ್ನು ಓದಿದ್ದೀರಾ?: ಮೋದಿ ‘ತುರ್ತು ಪರಿಸ್ಥಿತಿಯಂತಹದ್ದನ್ನು’ ಹೇರಬಹುದು, ವರ್ಷದೊಳಗೆ ಪಿಎಂ ಸ್ಥಾನ ಕಳೆದುಕೊಳ್ತಾರೆ: ರಾಹುಲ್ ಗಾಂಧಿ
ಯಾವುದನ್ನು ಇಲ್ಲಿ ಅಶಿಸ್ತು ಎಂದು ಬಿಂಬಿಸಲಾಗುತ್ತಿದೆ? ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇರುವುದು, ಭಿನ್ನಾಭಿಪ್ರಾಯಗಳು ಸ್ಫೋಟಗೊಂಡು ಪಕ್ಷಕ್ಕೆ ಹಾನಿಯುಂಟು ಮಾಡುವುದು, ಹೈಕಮಾಂಡ್ ಸಂಸ್ಕೃತಿಗೆ ಶರಣಾಗದೆ ಇರುವುದು, ಕೇಡರ್ ಬೇಸ್ಡ್ ಬದಲಾಗಿ ಮಾಸ್ ಬೇಸ್ಡ್ ಆಗಿ ಪಕ್ಷವನ್ನು ರೂಪಿಸುವುದು, ಕೇಂದ್ರದ ನಾಯಕತ್ವಕ್ಕಿಂತ ಸ್ಥಳೀಯ ನಾಯಕತ್ವವೇ ಬಲವಾಗಿ ಇರುವುದು, ಪಕ್ಷದೊಳಗೆ ರಾಜಕೀಯ ಅಸ್ಥಿರತೆ ಸೃಷ್ಟಿಸಬಲ್ಲ ಶಕ್ತಿ ಇರುವುದು, ಬಂಡಾಯ ಎದ್ದು ಬೇರೊಂದು ಪಕ್ಷ ಸ್ಥಾಪಿಸುವುದು- ಈ ಎಲ್ಲವನ್ನೂ ಅಶಿಸ್ತಿನ ಲಕ್ಷಣವಾಗಿ ಗುರುತಿಸುವುದು ಸಾಮಾನ್ಯ. ಭಿನ್ನಾಭಿಪ್ರಾಯ, ಬಂಡಾಯ ಇರುವುದು ಪ್ರಜಾಪ್ರಭುತ್ವದ ಸೌಂದರ್ಯವೂ ಹೌದು. ಆದರೆ ಅದು ಅತಿರೇಕಕ್ಕೆ ಹೋದರೆ ಅರಾಜಕತೆಗೆ ಆಸ್ಪದ ನೀಡಿ, ಸಂಘಟನಾತ್ಮಕ ಶಕ್ತಿಗೆ ಹೊಡೆತ ಬೀಳುತ್ತದೆ ಎಂಬುದೂ ಸತ್ಯ. ‘ರಾಜಕಾರಣದಲ್ಲಿನ ಶಿಸ್ತು ಮತ್ತು ಅಶಿಸ್ತು’ ಪರಿಕಲ್ಪನೆಗಳನ್ನು ಹಲವು ಆಯಾಮದ ವ್ಯಾಖ್ಯಾನಗಳಿಗೂ ಒಳಪಡಿಸಬಹುದು. ಆದರೆ ‘ಪಕ್ಷದ ಶಿಸ್ತು’ ಎಂಬುದನ್ನು ಒಪ್ಪಿತ ಮೌಲ್ಯವಾಗಿ ನಮ್ಮ ಸಮಾಜ, ರಾಜಕೀಯ ವ್ಯವಸ್ಥೆ ಸ್ವೀಕರಿಸಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ಗೆ ಹೋಲಿಸಿದರೆ, ಬಿಜೆಪಿ ಹೆಚ್ಚು ಶಿಸ್ತಿನ ಪಕ್ಷ ಎಂದು ಬಿಂಬಿಸಲಾಗುತ್ತದೆ. ಆದರೆ ‘ಕರ್ನಾಟಕದ ಮಟ್ಟಿಗೆ ಇದು ವಾಸ್ತವವೇ?’ ಎಂದು ನೋಡಿದರೆ, ಕಾಂಗ್ರೆಸ್ನಿಂದ ಬಿಜೆಪಿಯೇ ಕಲಿಯಬೇಕಾದ ಹಲವು ಪಾಠಗಳು ಸಿಗುತ್ತವೆ.

ಡಿ.ಕೆ. ಶಿವಕುಮರ್ ಅಧಿಕಾರ ಹಸ್ತಾಂತರ ಸಂದರ್ಭವು ಕಾಂಗ್ರೆಸ್ ಪಕ್ಷದ ಒಗ್ಗಟ್ಟು ಮತ್ತು ಶಿಸ್ತಿಗೆ ಮೇಲ್ಪಂಕ್ತಿ ಹಾಕಿತು. ಅಧಿಕಾರ ಬಿಟ್ಟುಕೊಟ್ಟರೂ ಸಿದ್ದರಾಮಯ್ಯನವರ ಮುತ್ಸದ್ದಿತನಕ್ಕೆ ಯಾವುದೇ ಘಾಸಿಯಾಗದಂತೆ, ಅವರ ಮಾರ್ಗದರ್ಶನಕ್ಕೆ ಒತ್ತು ಕೊಟ್ಟಿರುವುದು ಕ್ಯಾಬಿನೆಟ್ ರಚನೆಯಲ್ಲೂ ಸಾಬೀತಾಗಿದೆ. ಈಗ ಮೊದಲ ಹಂತದ ಕ್ಯಾಬಿನೆಟ್ ವಿಸ್ತರಣೆಯಾಗಿದೆ. ಆಕಾಂಕ್ಷಿಗಳು ಅಧಿಕಾರಕ್ಕಾಗಿ ಕಸರತ್ತು ನಡೆಸಿ, ನಾಯಕರ ಮುಂದೆ ನಿಲ್ಲುವುದು ಇದ್ದೇ ಇದೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ, ಯಾವುದೇ ‘ನ್ಯೂಸೆನ್ಸ್’ ಸೃಷ್ಟಿಯಾಗದೆ, ಅಧಿಕಾರ ಹಂಚಿಕೆಯೂ ಆಗುತ್ತಿದೆ. ಇದರಲ್ಲಿ ಯಾರ ಬಣ ಮೇಲುಗೈ ಸಾಧಿಸುತ್ತದೆ, ಯಾರಿಗೆ ಹಿನ್ನಡೆಯಾಗುತ್ತದೆ ಎಂಬುದು ಬೇರೆಯ ಚರ್ಚೆ. ಆದರೆ ಮೇಲುಗೈ ಸಾಧಿಸುವ ಹಗ್ಗಜಗ್ಗಾಟವು ಬೀದಿ ರಂಪಾಟವಾಗದಂತೆ ಕಾಂಗ್ರೆಸ್ ಎಚ್ಚರಿಕೆ ವಹಿಸುತ್ತಿದೆ ಎಂಬುದನ್ನು ಈವರೆಗಿನ ಬೆಳವಣಿಗೆಗಳು ಸ್ಪಷ್ಟಪಡಿಸುತ್ತಿವೆ. ಸಿದ್ದರಾಮಯ್ಯನವರು ಅತೃಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸರ್ಕಾರ ಸರಾಗವಾಗಿ ಮುನ್ನಡೆಯುವಂತೆ ನೋಡಿಕೊಳ್ಳುವಂತೆಯೂ ಕಾಣಿಸುತ್ತಿದೆ.
2023ರಲ್ಲಿ ಕಾಂಗ್ರೆಸ್ ಪಕ್ಷವು 136 ಸೀಟುಗಳನ್ನು ಗೆದ್ದು ಅಧಿಕಾರ ಹಿಡಿದಾಗಲೇ, “ಪಕ್ಷದೊಳಗೆ ದೊಡ್ಡ ತಿಕ್ಕಾಟ ನಡೆಯುತ್ತದೆ, ನಾಯಕತ್ವ ಸಮರ ಬಿಗಡಾಯಿಸುತ್ತದೆ” ಎಂದು ನಂಬಲಾಗಿತ್ತು. ಅದ್ಯಾವುದೂ ಆಗಲಿಲ್ಲ. ಮುಖ್ಯಮಂತ್ರಿಯವರ ಪ್ರಮಾಣ ವಚನ ಸ್ವೀಕಾರದಲ್ಲಿ ಕೊಂಚ ವಿಳಂಬವಾದರೂ, ಎಲ್ಲವನ್ನೂ ಸೆಟಲ್ ಮಾಡಿಕೊಂಡೇ ಆಡಳಿತ ಆರಂಭಿಸಲಾಯಿತು. ಚುನಾವಣೆ ಸಂದರ್ಭದಲ್ಲೂ ಸಮತೋಲನ ಕಾಯ್ದುಕೊಳ್ಳಲಾಯಿತು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣದ ನಡುವೆ ಯಾವುದೇ ವಿರಸ ವ್ಯಕ್ತವಾಗದಂತೆ ನೋಡಿಕೊಳ್ಳಲಾಯಿತು. ಒಬ್ಬರನೊಬ್ಬರು ಪರಸ್ಪರ ಗೌರವಿಸುತ್ತಾ, ಫೋಟೋ ಶೂಟ್ ನಡೆಸುತ್ತಾ, ಒಂದೇ ವೇದಿಕೆಗಳಲ್ಲಿ ಗೌರವಯುತವಾಗಿ ಕಾಣಿಸಿಕೊಳ್ಳುತ್ತಾ ಪಕ್ಷದ ಕಾರ್ಯಕರ್ತರಿಗೆ ಒಗ್ಗಟ್ಟಿನ ಸಂದೇಶ ರವಾನಿಸಿದರು. ಪಕ್ಷ ಸಂಘಟನೆಯ ಮೂಲಕ ಕಾರ್ಯಕರ್ತರನ್ನು ಡಿ.ಕೆ. ಶಿವಕುಮಾರ್ ಚುರುಕುಗೊಳಿಸಿದರೆ, ಸಿದ್ದರಾಮಯ್ಯನವರು ತಮ್ಮ ಮಾಸ್ ವರ್ಚಸ್ಸಿನ ಮೂಲಕ ಜನಸಾಮಾನ್ಯರನ್ನು ಪ್ರಭಾವಿಸಿದರು. ಈ ಎರಡು ಶಕ್ತಿಗಳು ಸೇರಿಯೇ ಕಾಂಗ್ರೆಸ್ ಗೆದ್ದಿತು. ಕಚ್ಚಾಟ ನಡೆಸದೆ ಪರಸ್ಪರ ಕುರ್ಚಿ ಹಂಚಿಕೊಂಡು ಮುಂದುವರಿದರು.
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ, ಇದು ಬಹಳ ದಿನ ಉಳಿಯುವುದಿಲ್ಲ. ಒಳ ಜಗಳದಿಂದ ಉರುಳಿ ಬೀಳುತ್ತದೆ ಎಂದು ಬಿಜೆಪಿ ನಾಯಕರು ಮತ್ತು ಕುಮಾರಣ್ಣ ಕನಸು ಕಾಣುತ್ತಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದೆ. ಸಿದ್ಧರಾಮಯ್ಯನವರು ಮತ್ತು ಡಿ.ಕೆ ಶಿವಕುಮಾರ್ ಅತ್ಯಂತ ಎಚ್ಚರದ ಹೆಜ್ಜೆ ಇಟ್ಟಿದ್ದಾರೆ. ಶಿಸ್ತಿನ ಪಕ್ಷ ಎಂದು ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಳ್ಳುವ ಬಿಜೆಪಿ ಮತ್ತು ಸಂಘ ಪರಿವಾರ ಕಾಂಗ್ರೆಸ್ನಿಂದ ಕಲಿಯುವುದು ಸಾಕಷ್ಟಿದೆ” ಎನ್ನುತ್ತಾರೆ ಹಿರಿಯ ಪರ್ತಕರ್ತ ಸನತ್ ಕುಮಾರ್ ಬೆಳಗಲಿ. ಹೌದು, ಬಿಜೆಪಿಯೊಳಗೆ ಕಾಣುವಷ್ಟು ಆಂತರಿಕ ಕಚ್ಚಾಟ ಕಾಂಗ್ರೆಸ್ನಲ್ಲಿ ಕಾಣುವುದಿಲ್ಲ.
2008ರಲ್ಲಿ ಆಪರೇಷನ್ ಕಮಲ ನಡೆಸಿ ರಾಜ್ಯದಲ್ಲಿ ಅಧಿಕಾರಕ್ಕೇರಿದ ದಿನದಿಂದ ಹಿಡಿದು ಈವರೆಗೂ ಯಡಿಯೂರಪ್ಪ ಮತ್ತು ಅವರ ಕುಟುಂಬವನ್ನೇ ಬಿಜೆಪಿ ಅವಲಂಬಿಸಿರುವುದು ಕಾಣಿಸುತ್ತದೆ. ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಅಧಿಕಾರಕ್ಕೆ ಕೂರಿಸಿದಾಗಲೂ ಯಡಿಯೂರಪ್ಪನವರು ತಮ್ಮ ಉತ್ತರಾಧಿಕಾರಿಗಳನ್ನಾಗಿ ಆ ಇಬ್ಬರನ್ನು ನೋಡಿದ್ದರೆ ಹೊರತು, ನಾಯಕರನ್ನಾಗಿ ಅಲ್ಲ. ಹೈಕಮಾಂಡ್ನೊಂದಿಗೆ ನಡೆದ ತಿಕ್ಕಾಟಗಳಲ್ಲಿ, ಯಡಿಯೂರಪ್ಪನವರೇ ಮೇಲುಗೈ ಸಾಧಿಸಿದ್ದಾರೆ. ಬಿಜೆಪಿಯೊಳಗೆ ತನಗೆ ಬೆಲೆ ಸಿಗುತ್ತಿಲ್ಲ ಅಂದು ಗೊತ್ತಾದಾಗ ಹೊರಬಂದು ಕೆಜೆಪಿ ಕಟ್ಟಿ, ಬಿಜೆಪಿಗೆ ನಡುಕ ಹುಟ್ಟಿಸಿದ್ದರು. ಮತ್ತೆ ಬಿಜೆಪಿಗೆ ಸೇರಿ ತನ್ನ ಸ್ಥಾನವನ್ನು ಭದ್ರ ಮಾಡಿಕೊಂಡರು. ಬಿಜೆಪಿಯೊಳಗೆ ಲಿಂಗಾಯತ ನಾಯಕ ಯಡಿಯೂರಪ್ಪನವರ ಪ್ರಾಬಲ್ಯ ಕಡಿಮೆ ಮಾಡಲು ಈ ಹಿಂದೆ ಅನಂತಕುಮಾರ್ ಬಣ ಕಸರತ್ತು ಮಾಡುತ್ತಿತ್ತು. ಆದರೆ ಮೇಲುಗೈ ಸಾಧ್ಯವಾಗಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬ್ರಾಹ್ಮಣ ಮುಖಂಡತ್ವವನ್ನು ಕೈಗೆತ್ತಿಕೊಂಡಿರುವ ಬಿ.ಎಲ್. ಸಂತೋಷ್, ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಲು ಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ.

2019ರಲ್ಲಿ ಆಪರೇಷನ್ ಕಮಲ ಮಾಡಿ, ಬಿಎಸ್ವೈ ಮತ್ತೆ ಅಧಿಕಾರಕ್ಕೇರಿದರು. ಆದರೆ ಪಕ್ಷದೊಳಗಿನ ಬಂಡಾಯಗಾರರು ಪದೇಪದೇ ಹೈಕಮಾಂಡ್ಗೆ ದೂರು ಕೊಟ್ಟು, “ಸರ್ಕಾರದಲ್ಲಿ ಬಿಎಸ್ವೈ ಪುತ್ರ ವಿಜಯೇಂದ್ರರ ಆಟ ಹೆಚ್ಚಾಗಿದೆ. ಕಡಿವಾಣ ಹಾಕಬೇಕು. ನಾಯಕತ್ವ ಬದಲಿಸಬೇಕು” ಎಂದು ದುಂಬಾಲು ಬಿದ್ದರು. ಯಡಿಯೂರಪ್ಪನವರನ್ನು ಮತ್ತೆ ಕೆಳಗಿಳಿಸಬೇಕಾದಾಗಲೂ ಬಿಎಸ್ವೈ ಅವರ ಆಪ್ತ ಬಸವರಾಜ ಬೊಮ್ಮಾಯಿಯವರನ್ನೇ ಕುರ್ಚಿಯಲ್ಲಿ ಕೂರಿಸಲಾಯಿತು.
ಇದನ್ನು ಓದಿದ್ದೀರಾ?: ಅಧಿಕಾರ ಹಸ್ತಾಂತರ ಚರಿತ್ರೆ: ಸಿದ್ದರಾಮಯ್ಯ ಬಿಟ್ಟು ಹೋದ ಆ ಮುತ್ಸದ್ದಿತನ.. (ಭಾಗ-2)
2023ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ನೆಲಕಚ್ಚಿತು. ಯಡಿಯೂರಪ್ಪನವರನ್ನು ಬದಿಗೊತ್ತಲು ಯತ್ನಿಸಿದ್ದ ಸಂತೋಷ್ ಬಣಕ್ಕೆ ಹಿನ್ನಡೆಯಾಗಿತ್ತು. ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ಬಂದ ಬಸವರಾಜ ಬೊಮ್ಮಾಯಿ ಅವರು ಪಕ್ಷವನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ. ಆಗ ಮತ್ತೆ ಹೈಕಮಾಂಡ್ ಬಿಎಸ್ವೈ ಕುಟುಂಬದತ್ತ ನೋಡಿತು. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಪದವಿಗೆ ತಂದು ಕೂರಿಸಿತು. ವಿಜಯೇಂದ್ರ ಪದಗ್ರಹಣ ಮಾಡಿದ ಮೇಲೆ ಬಹಿರಂಗ ಬಂಡಾಯಗಾರರೇ ಹುಟ್ಟಿಕೊಂಡರು. ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್, ವಿ. ಸೋಮಣ್ಣ, ಅರವಿಂದ್ ಬೆಲ್ಲದ್, ಸಿ.ಟಿ.ರವಿ ಮೊದಲಾದವರನ್ನು ವಿಜಯೇಂದ್ರ ವಿರೋಧಿ ಬಣದಲ್ಲಿ ಗುರುತಿಸಲಾಯಿತು. ಯತ್ನಾಳ್ ಅವರು ನಿರಂತರವಾಗಿ ವಿಜಯೇಂದ್ರ ಮತ್ತು ಯಡಿಯೂರಪ್ಪನವರ ಮೇಲೆ ವಾಗ್ದಾಳಿ ನಡೆಸುತ್ತಿದ್ದರೂ ಬಹುದಿನಗಳವರೆಗೆ ಕ್ರಮ ಜರುಗಿಸಲು ಸಾಧ್ಯವಾಗಲಿಲ್ಲ. ಪಕ್ಷದ ಶಿಸ್ತು ಸಮಿತಿಯ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ, ನಿರಂತರವಾಗಿ ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದ ಹಿನ್ನೆಲೆಯಲ್ಲಿ 2025ರ ಮಾರ್ಚ್ 26ರಂದು ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯು ಯತ್ನಾಳ್ ಅವರನ್ನು 6 ವರ್ಷಗಳ ಅವಧಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ ಅಧಿಕೃತ ಆದೇಶ ಹೊರಡಿಸಿತು. ಆಗ ಯತ್ನಾಳ್, “ಪಕ್ಷದೊಳಗಿನ ವಂಶಪಾರಂಪರ್ಯ ರಾಜಕಾರಣ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿ ಪರ ಮಾತನಾಡಿದ್ದಕ್ಕೆ ನನಗೆ ಈ ಶಿಕ್ಷೆ ಸಿಕ್ಕಿದೆ. ಸತ್ಯ ಮಾತನಾಡಿದ್ದಕ್ಕೆ ಪಕ್ಷ ನನಗೆ ಬಹುಮಾನ ನೀಡಿದೆ. ಆದರೆ ಭ್ರಷ್ಟಾಚಾರ ಮತ್ತು ಪರಿವಾರ ರಾಜಕಾರಣದ ವಿರುದ್ಧ ನನ್ನ ಹೋರಾಟ ನಿಲ್ಲುವುದಿಲ್ಲ” ಎಂದರು. ಅವರು ಅದೇ ಪ್ರಕಾರ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಯತ್ನಾಳ್ ಅವರಿಗೆ ಬಿ.ಎಲ್. ಸಂತೋಷ್ ಅವರ ಬಲವಿದೆ ಎಂದೇ ನಂಬಲಾಗಿದೆ.
ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ನಡುವೆ ಸಂಪೂರ್ಣ ಹೊಂದಾಣಿಕೆ ಇಲ್ಲ ಎಂಬ ಮಾತುಗಳು ಇತ್ತೀಚಿನ ರಾಜಕೀಯ ವಿದ್ಯಮಾನಗಳಲ್ಲಿ (ವಿಶೇಷವಾಗಿ ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆಯಾಗುತ್ತಿರುವ ಸಂದರ್ಭದಲ್ಲಿ ಬಿಜೆಪಿಯ ಮಂದಗತಿಯ ಹೋರಾಟದ ಹಿನ್ನೆಲೆಯಲ್ಲಿ) ಕೇಳಿಬರುತ್ತಿದೆ. “ವಿಜಯೇಂದ್ರ ಅವರು ಹೊಂದಾಣಿಕೆಯ ರಾಜಕಾರಣ ಮಾಡುತ್ತಾರೆ” ಎಂಬ ಆರೋಪ ಸಾಮಾನ್ಯವಾಗಿದೆ. ನಾಯಕತ್ವ ಬದಲಿಸಬೇಕು ಎಂಬ ಕೂಗು ಕೂಡ ಮುಚ್ಚಿಟ್ಟ ಸಂಗತಿಯೇನೂ ಅಲ್ಲ. ಆರ್.ಎಸ್.ಎಸ್ ಸಂಸ್ಕಾರ ಪಡೆದವರು ಶಿಸ್ತಿನವರು, ಶುದ್ಧಹಸ್ತರು ಎಂಬುದು ವಾಸ್ತವವಲ್ಲ. ಯಡಿಯೂರಪ್ಪ ಮತ್ತು ಅವರ ಕುಟುಂಬದ ಮೇಲಿನ ಭ್ರಷ್ಟಾಚಾರದ ಆರೋಪಗಳು, ಬಿಜೆಪಿ ಸರ್ಕಾರದ ಅವಧಿಯ ಕಮಿಷನ್ ದಂಧೆ- ಎಲ್ಲವೂ ಸಂಘ ಹೇಳುವ ಕ್ಲೀನ್ ಇಮೇಜಿಗೆ ತದ್ವಿರುದ್ಧವಾಗಿವೆ. ಇಡಿ, ಸಿಬಿಐ, ಐಟಿ ದಾಳಿಗಳಿಗೆಲ್ಲ ಸಿಲುಕಿದವರು ಈಗ ಬಿಜೆಪಿಯ ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕ ಬಿಜೆಪಿ ವಿಚಾರದಲ್ಲೂ ಇದು ಸತ್ಯವಾಗಿದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




