ಗುಬ್ಬಚ್ಚಿಯಂತೆ ಗುಕ್ಕು ತಿನ್ನುತ್ತಿದ್ದ ಅವಳಿಗೆ ಖೈಮಾ ಉಂಡೆ, ಚಪಾತಿ ಮತ್ತು ಬಿರಿಯಾನಿ ತೆಗೆದುಕೊಂಡು ಹೋಗಿದ್ದೆ. 10 ಗಂಟೆಯಾದರೂ ಊಟ ಮಾಡಲು ಒಪ್ಪಲಿಲ್ಲ. ಕೊನೆಗೆ ಗದರಿ “ನೀನೂ ಅಮ್ಮನಂತೆಯೇ ಭಾಳ ಹಟ ಮಾಡ್ತಿಯಾ. ನನಗೆ ಕೆಲಸವಿದೆ, ನೀನು ಊಟ ಮಾಡಿ ಮಲಗಿಕೋ. ನಾನು ಊಟ ಮಾಡಲು 11 ಗಂಟೆ ಆಗುತ್ತೆ” ಎಂದಳು. ಆಗ ನಾನು ಅವಳ ಪಾಲನ್ನು ಎತ್ತಿಟ್ಟು ಉಂಡು ಮಲಗಿದೆ
ಶಿವಮೊಗ್ಗೆಯಲ್ಲಿ ಜನಿಸಿ, ಬೆಂಗಳೂರಿನಲ್ಲಿ ಅಪ್ಪನ ಪತ್ರಿಕೆಯನ್ನು ಮುನ್ನಡೆಸಿ, ದೆಹಲಿಯಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದ ಗೌರಿ ಅಮೆರಿಕ ಫ್ರಾನ್ಸ್ನಲ್ಲಿಯೂ ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದವಳು. 2000ರಲ್ಲಿ ತಂದೆ ಪಿ.ಲಂಕೇಶರ ನಿರ್ಗಮನದ ನಂತರ ಆ ಜನಪ್ರಿಯ ʼಲಂಕೇಶ್ ಪತ್ರಿಕೆʼಯನ್ನು ಮುನ್ನಡೆಸಿದ ಧೀಮಂತೆ. ನಾಗರಿಕ ಶಾಂತಿ, ಸೌಹಾರ್ದ, ಮತ್ತು ನಕ್ಸಲ್ಲರನ್ನು ಮುಖ್ಯವಾಹಿನಿಗೆ ತರುವಲ್ಲಿ ಅವಳ ಪಾತ್ರ ಬಹುಮುಖ್ಯ. ಅವಳು ಲಂಕೇಶ್ ಪತ್ರಿಕೆಯ ಸಂಪಾದಕಿಯಾಗಿ ತಂದಿರುವ ಮೊದಲ ಸಂಚಿಕೆಯನ್ನು ನೋಡಿ, “ಗೌರವ್ವಾ ಅಪ್ಪನಂತೆಯೇ ಚೆಂದ ತಂದಿದಿಯವ್ವಾ ಸಂಚಿಕೆನಾ” ಎಂದು ಹೇಳಿ ಅವಾಗ 50 ಪೈಸೆಯ ಕಾರ್ಡಿನಲ್ಲಿ ಬರೆದಿದ್ದೆ. ಆಗ ನಾನು ಹರಿಹರದಲ್ಲಿ ವಾಸವಾಗಿದ್ದೆ. ಆ ಪತ್ರ ನೋಡಿ ಖುಷಿ ಪಟ್ಟ ಗೌರಿ ಅದನ್ನು ಪತ್ರಿಕೆಯಲ್ಲಿ ಪ್ರಿಂಟ್ ಮಾಡಿದ್ದಳು.
ಹಲವಾರು ಹೋರಾಟಗಳು, ಸಂಘರ್ಷಗಳು, ಶಾಂತಿ ಸ್ಥಾಪನಾ ಕೆಲಸಗಳಲ್ಲಿ ನಾವಿಬ್ಬರೂ ಭಾಗಿಯಾಗಿರುತ್ತಿದ್ದೆವು. ಶಿವಮೊಗ್ಗದಲ್ಲಿ, ಚಿಕ್ಕಮಗಳೂರಿನಲ್ಲಿ ನಡೆಯುವ ಸೌಹಾರ್ದ ಸಭೆ, ಸಮಾರಂಭ, ಜನರ ಜಾಥಾಗಳಲ್ಲಿ ನಾವಿಬ್ಬರೂ ತೊಡಗಿಕೊಳ್ಳುತ್ತಿದ್ದೆವು. ಮಗು ಮನಸಿನ ಗೌರಿ ತನ್ನ ಸುಖ ದು:ಖಗಳನ್ನು ಗಮನಿಸದೇ ದಮನಿತರ, ಶೋಷಿತರ, ಅಲ್ಪಸಂಖ್ಯಾತರ ಪರ ಯಾವತ್ತೂ ನಿಲ್ಲುತ್ತಿದ್ದ ಅವಳ ಬದುಕಿನ ಕೊನೆಯ ದಿನಗಳಲ್ಲಿ, ಅಂದರೆ ಸಾಯುವದಕ್ಕೆ ಒಂದು ತಿಂಗಳು ಮುಂಚೆ ಗೌರಿ ಹೇಳಿದ್ದಳು “ಷರೀಫಾ ನೋಡು ನನ್ನ ಎಲ್.ಐ.ಸಿ. ಹಣ ಬಂತು ಅದರಲ್ಲಿ ಎಲ್ಲರ ಸಂಬಳ ಕೊಟ್ಟುಬಿಟ್ಟೆನಮ್ಮ. ಒಂದು ರೀತಿ ನನಗೆ ನಿರಾಳವಾಯ್ತು ನೋಡು. ಸಾಕಾಗಿದೆ ಕಣೆ, ಪತ್ರಿಕೆ ಲಾಸ್ನಲ್ಲಿ ನಡೀತಿದೆ. ಇನ್ನು ಎರಡು ತಿಂಗಳು ನಡೆಸಿ ನಿಲ್ಲಿಸಿಬಿಡುತ್ತೇನೆ” ಎಂದಿದ್ದಳು.
ಅದೊಂದು ಘಟನೆಯನ್ನು ನಾನಿಲ್ಲಿ ನೆನಪಿಸಲೇಬೇಕು. ಅದೇನೆಂದರೆ ಅಂದು ಆರ್.ಎನ್.ಶೆಟ್ಟಿ ಕಾಲೇಜಿನಲ್ಲಿ ಓದುತ್ತಿದ್ದಳು ಮಗಳು. ಆಗಿನ್ನೂ ಗೂಗಲ್ ಪೇ, ಫೋನ್ ಪೇಗಳು ಆರಂಭವಾಗಿರಲಿಲ್ಲ. ಮಗಳು ಫೋನ್ ಮಾಡಿ “ಅಮ್ಮ ಪರೀಕ್ಷೆ ಫೀ ಕಟ್ಟಲು ನಾಳೆ ಕೊನೆಯ ದಿನಾಂಕವಾಗಿದೆ. ಕೂಡಲೇ 2000 ರುಪಾಯಿ ಕಟ್ಟಬೇಕಮ್ಮ” ಎಂದಳು. ತಕ್ಷಣ ಬೆಂಗಳೂರಿನಲ್ಲಿರುವ ಗೌರಿಯ ನೆನಪಾಗಿ ಫೋನ್ ಮಾಡಿ ವಿಷಯ ತಿಳಿಸಿದೆ. ಆ ಕೂಡಲೇ ಗೌರಿ ಕಾರು ಓಡಿಸಿಕೊಂಡು ಕಾಲೇಜಿನ ಬಳಿ ಹೋಗಿ ಮಗಳ ಕೈಗೆ ಹಣ ಕೊಟ್ಟು ಬಂದಳು. ಅವಳು ತಿರುಗಿ ಅದನ್ನು ಕೇಳಲೂ ಇಲ್ಲ. ನಾನೂ ಅವಳಿಗೆ ಕಳಿಸಿರಲಿಲ್ಲ. ಮತ್ತೆ ಮುಂದೆ ಅದನ್ನು ಪಾವತಿಸಿದೆ. ಅವಳಿಗೆ ಅದು ಮರತೇ ಹೋಗಿತ್ತು. “ನಾನೆಲ್ಲಿ ಕೊಟ್ಟೆ. ಇಲ್ಲ ಕೊಟ್ಟಿಲ್ಲ ಬಿಡಪ್ಪ” ಎಂದಳು. ಆದರೆ ಸಮಯಕ್ಕೆ ಹಣ ಪಾವತಿಸಿ ಮಗಳ ಶಿಕ್ಷಣಕ್ಕೆ ನೆರವಾದ ಅವಳ ಉಪಕಾರವನ್ನು ನಾನು ಹೇಗೆ ಮರೆಯಲಿ?
ಅಂದು ಹಂಪಿ ವಿಶ್ವವಿದ್ಯಾಲಯದಿಂದ ನಮ್ಮಿಬ್ಬರಿಗೂ ಕರೆ ಬಂದಿತ್ತು. “ತಕ್ಷಣ ನೀವು ಹೊರಟು ಬರಬೇಕು ಪತ್ರಕರ್ತರ ಸಭೆ ಕರೆಯಲಾಗಿದೆ. ದಯವಿಟ್ಟು ಬನ್ನಿ” ಎಂದು ಕುಲಪತಿಯವರ ಫೋನು ಬಂದಿತು. ಇಬ್ಬರಿಗೂ ರಿಜರ್ವೇಶನ್ ಮಾಡಿಸಿದೆ. ಅವಳು ಸಭೆಯಲ್ಲಿ ಭಾಗವಹಿಸಲು ರಾತ್ರಿ 9 ಗಂಟೆಗೆ ಹೊರಡುವ ಹಂಪಿ ಎಕ್ಸ್ಪ್ರೆಸ್ಗೆ ಹೊರಟೆವು. ನನಗೆ ಗೌರಿ ಮೊದಲೇ ಸೂಚನೆ ಕೊಟ್ಟಿದ್ದಳು. “ರಾತ್ರಿ ಊಟಕ್ಕೆ ಬಿರಿಯಾನಿ ಮಾಡಿಕೊಂಡು ಬಾ” ಎಂದಿದ್ದಳು.
ಗುಬ್ಬಚ್ಚಿಯಂತೆ ಗುಕ್ಕು ತಿನ್ನುತ್ತಿದ್ದ ಅವಳಿಗೆ ಖೈಮಾ ಉಂಡೆ, ಚಪಾತಿ ಮತ್ತು ಬಿರಿಯಾನಿ ತೆಗೆದುಕೊಂಡು ಹೋಗಿದ್ದೆ. 10 ಗಂಟೆಯಾದರೂ ಊಟ ಮಾಡಲು ಒಪ್ಪಲಿಲ್ಲ. ಕೊನೆಗೆ ಗದರಿ “ನೀನೂ ಅಮ್ಮನಂತೆಯೇ ಭಾಳ ಹಟ ಮಾಡ್ತಿಯಾ. ನನಗೆ ಕೆಲಸವಿದೆ ನೀನು ಊಟ ಮಾಡಿ ಮಲಗಿಕೋ. ನಾನು ಊಟ ಮಾಡಲು 11-30 ಆಗುತ್ತೆ” ಎಂದಳು. ಆಗ ನಾನು ಅವಳ ಪಾಲನ್ನು ಎತ್ತಿಟ್ಟು ಉಂಡು ಮಲಗಿದೆ. ಆದರೆ ಅವಳ ಪತ್ರಿಕೆ ಕುರಿತ ಬದ್ಧತೆ ಎಷ್ಟಿತ್ತೆಂದರೆ ಲ್ಯಾಬ್ ಟಾಪ್ನಲ್ಲಿ ಕೆಲಸ ಮಾಡುತ್ತಲೇ ಇದ್ದಳು. ನಾನು ರಾತ್ರಿ 12.00 ಗಂಟೆಗೆ ನೋಡಿದರೂ ಕಂಪ್ಯೂಟರ್ ಮುಂದೆಯೇ ಇದ್ದಳು.
ಇಂತಹ ಬದ್ದತೆಯ ಮಾತೃ ಹೃದಯದ, ಎಲ್ಲ ಬಡವರ ಸಂಗಾತಿ ನನ್ನವ್ವ ಇಂದು ಇಲ್ಲ ಎಂಬ ನೋವು ಎದೆಯನ್ನು ಈಟಿಯಂತೆ ಇರಿಯುತ್ತದೆ. ಇಂತಹ ಸ್ನೇಹಮಯಿ ಗೆಳತಿಯ ಅಂತ್ಯವಾಗಿ 6 ವರ್ಷಗಳು ಗತಿಸುತ್ತಿರುವ ಈ ಸಂದರ್ಭದಲ್ಲಿ ಕರುಳು ಸುಟ್ಟು ಕಣ್ಣೀರು ಬರುತ್ತದೆ. ಈ ಅಶ್ರುತರ್ಪಣವೇ ನನ್ನ ಜೀವದ ಗೆಳತಿಗೆ ಶ್ರದ್ಧಾಂಜಲಿ.

ಡಾ ಕೆ ಷರೀಫಾ
ಬಂಡಾಯ ಸಾಹಿತಿ, ಕವಿ