ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ದಲಿತ ಹೋರಾಟಗಾರ್ತಿಯೊಬ್ಬರ ತಂದೆಯ ಮೇಲೆ ಹಲ್ಲೆ ನಡೆಸಿ, “ನಾನೇ ಆತನ ಬುರುಡೆ ಒಡೆದೆ” ಎಂದು ವೀಡಿಯೋ ಮೂಲಕ ಬಹಿರಂಗವಾಗಿ ಹೆಮ್ಮೆಪಟ್ಟುಕೊಂಡಿದ್ದ ಬಲಪಂಥೀಯ ಇನ್‌ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ 3 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಕಳೆದ ಜೂನ್ 23 ರಂದು ಜಂತರ್ ಮಂತರ್‌ನಲ್ಲಿ ಜಂಟಿ ಪ್ರತಿಭಟನೆ ವೇಳೆ ಹಲ್ಲೆ ನಡೆದಿತ್ತು. ಈ ಸಂಬಂಧ ತಾನೇ ದಾಳಿ ಮಾಡಿರುವುದಾಗಿ ಭಾರದ್ವಾಜ್ ಪಾಡ್‌ಕಾಸ್ಟ್ ಒಂದರಲ್ಲಿ ಹೇಳಿಕೊಂಡಿದ್ದ. ಇದಾದ ಬಳಿಕ ಆತನ ವಿರುದ್ಧ ಸಿಜೆಪಿ ಸೇರಿದಂತೆ ಹಲವು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.
ಇದನ್ನೂ ಓದಿ: ಸಿಜೆಪಿ ಪ್ರತಿಭಟನೆಯ ಹಲ್ಲೆ ಆರೋಪಿ ಸಂಘಿ ಭಾರದ್ವಾಜ್‌ಗೆ 3 ವಾರ ಮಧ್ಯಂತರ ಜಾಮೀನು
ತೀವ್ರ ಒತ್ತಡದ ಬಳಿಕ ಭಾರದ್ವಾಜ್ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 4ರಂದು ದೆಹಲಿ ಪೊಲೀಸರು ಈತನನ್ನು ಬಂಧಿಸಿದ್ದರು. ಆದರೆ, ವಶಕ್ಕೆ ಪಡೆದ ಕೇವಲ 10 ದಿನಗಳಲ್ಲೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಪ್ರತಾಪ್ ಸಿಂಗ್ ಲಾಲೆರ್ ಅವರು, “ಈತನ ಕಸ್ಟಡಿ ತನಿಖೆ ಮುಗಿದಿದೆ” ಎಂಬ ಕಾರಣ ನೀಡಿ 3 ವಾರಗಳ ಕಾಲ ಜಾಮೀನು ನೀಡಿದ್ದಾರೆ.
This video cannot be played in your browser. Open the video directly
ಮತ್ತೊಂದೆಡೆ, ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಸೇರಿದಂತೆ ಹಲವು ವಿದ್ಯಾರ್ಥಿ ನಾಯಕರು ಮತ್ತು ಸಾಮಾಜಿಕ ಹೋರಾಟಗಾರರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳೇ ಇಲ್ಲದಿದ್ದರೂ, ಕಳೆದ ನಾಲ್ಕು ವರ್ಷಗಳಿಂದಲೂ (2020 ರಿಂದ) ಅವರು ಜೈಲಿನಲ್ಲಿಯೇ ಕಾಲ ಕಳೆಯುವಂತಾಗಿದೆ. ಯುಎಪಿಎನಂತಹ ಕಠಿಣ ಕಾನೂನುಗಳನ್ನು ಅವರ ವಿರುದ್ಧ ಪ್ರಯೋಗಿಸಿ ಜಾಮೀನು ನಿರಾಕರಿಸಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಲ್ಲೆ ನಡೆಸಿದ್ದಾಗಿ ವೀಡಿಯೋ ಸಾಕ್ಷ್ಯಗಳು ಲಭ್ಯವಿದ್ದರೂ ಸ್ವತಂತ್ರ ಭಾರದ್ವಾಜ್‌ಗೆ ಸುಲಭವಾಗಿ ಜಾಮೀನು ಸಿಕ್ಕಿರುವುದು ಹಾಗೂ ಯಾವುದೇ ಪ್ರತ್ಯಕ್ಷ ಸಾಕ್ಷಿಗಳಿಲ್ಲದಿದ್ದರೂ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಅವರಂತಹ ಪ್ರಗತಿಪರ ಧ್ವನಿಗಳಿಗೆ ಜಾಮೀನು ನಿರಾಕರಿಸುತ್ತಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ದೇಶದ ಕಾನೂನು ಜಾರಿ ವ್ಯವಸ್ಥೆ ಮತ್ತು ತನಿಖಾ ಸಂಸ್ಥೆಗಳ ದ್ವಿಮುಖ ನೀತಿ ಹಾಗೂ ತಾರತಮ್ಯವನ್ನು ಎತ್ತಿಹಿಡಿಯುತ್ತಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ.





