ಸಂಭಲ್‌ ವಿವಾದ ಮತ್ತು ರಾಜಕೀಯ ನಾಯಕರ ದ್ವೇಷ ರಾಜಕಾರಣ

Date:

Advertisements
ಭಾರತದಲ್ಲಿ ಆಳ್ವಿಕೆ ನಡೆಸಿದ ಆಂಗ್ಲರ ಏಕೈಕ ಉದ್ದೇಶ ಹಿಂದೂ – ಮುಸ್ಲಿಮರ ನಡುವೆ ದ್ವೇಷವನ್ನುಂಟು ಮಾಡಿ ತಾವು ಸುಗಮವಾಗಿ ಆಳ್ವಿಕೆ ನಡೆಸುವುದಾಗಿತ್ತು. ಇಂದಿನ ಬಹುತೇಕ ರಾಜಕೀಯ ನಾಯಕರ ತತ್ವವು ಇದೇ ರೀತಿಯ ಆಶಯವನ್ನು ಹೊಂದಿದೆ. ಹೆಸರಿಗಷ್ಟೆ ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ ಎಂದು ಹೇಳುತ್ತಾರೆ. ಆದರೆ ರಾಜಕಾರಣದಲ್ಲಿ ಮಾತ್ರ ಮತ್ಸರವನ್ನು ಉಂಟು ಮಾಡುವ ಕೆಲಸ ಮಾಡುತ್ತಾರೆ. ಸದ್ಯ ಸಂಭಲ್‌ ಉರಿಯುತ್ತಿದೆ.

ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಕೋಟ್ ಗಾರ್ವಿ ಪ್ರದೇಶದಲ್ಲಿನ ಶಾಹಿ ಜಾಮಾ ಮಸೀದಿಯ ಆವರಣದಲ್ಲಿ ಸಮೀಕ್ಷೆ ವೇಳೆ ನಡೆದ ಘರ್ಷಣೆಯಲ್ಲಿ ಗಲಭೆಯುಂಟಾಗಿ ನಾಲ್ವರು ಸ್ಥಳೀಯರು ಮೃತಪಟ್ಟು, ಪೊಲೀಸರು ಸೇರಿ ಹಲವರು ಗಾಯಗೊಂಡರು. ನಾಲ್ವರ ಕ್ರೂರ ಹತ್ಯೆ ಮುಸ್ಲಿಂ ಸಮುದಾಯವನ್ನು ಬೆಚ್ಚಿಬೀಳಿಸಿದೆ. 75ನೇ ವರ್ಷದ ಸಂವಿಧಾನ ದಿನ ಸಂಭ್ರಮಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿ, ವೈವಿಧ್ಯತೆಯಿಂದ ಕೂಡಿದ ಜಾತ್ಯತೀತ ಸಂಸ್ಕೃತಿಯನ್ನು ಹಾಳು ಮಾಡಲು ಹಲವು ರಾಜಕೀಯ ಆದೇಶಗಳು ಹೊರಬೀಳುತ್ತಿವೆ. ವಿಪರ್ಯಾಸವೆಂದರೆ, ನಾವು ಪ್ರತಿ ಜಾಗತಿಕ ವೇದಿಕೆಯಲ್ಲಿ ಜಾತ್ಯತೀತ, ವೈವಿಧ್ಯತೆ ಮತ್ತು ಸಂಸ್ಕೃತಿಯನ್ನು ಹೆಚ್ಚು ಪ್ರಚಾರ ಮಾಡುತ್ತೇವೆ. ಇತ್ತೀಚಿಗಿನ ನಮ್ಮ ಒಲಿಂಪಿಕ್ಸ್ ಆಯೋಜಿಸುವ ಬಿಡ್‌ನಲ್ಲಿ ಕೂಡ ಅದನ್ನು ಉಲ್ಲೇಖಿಸಿದ್ದೇವೆ. ಆದರೆ ದೇಶದೊಳಗೆ ಮಾತ್ರ ಅದು ಜಾರಿಯಾಗುತ್ತಲೇ ಇಲ್ಲ.

ಎರಡು ವರ್ಷಗಳ ಹಿಂದೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದ ಪ್ರತಿ ಮಸೀದಿಯ ಕೆಳಗೆ ಮಂದಿರವನ್ನು ಹುಡುಕುವುದು ಸರಿಯಲ್ಲ ಎಂಬ ಸಂವೇದನಾಶೀಲ ಹೇಳಿಕೆಯನ್ನು ಕೂಡ ಮರೆಯಲಾಗಿದೆ ಅಥವಾ ಈ ರೀತಿಯ ಮಾತುಗಳು ತಮ್ಮ ಸಂಘಟನೆಗೆ ಒಪ್ಪುವುದಿಲ್ಲ ಎಂಬುದನ್ನು ಸಂಘ ಪರಿವಾರದ ನಾಯಕರು ಭಾವಿಸಿದಂತಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಚುನಾವಣಾ ಫಲಿತಾಂಶದ ಹುಮ್ಮಸ್ಸಿನಲ್ಲಿರುವ ಆರ್‌ಎಸ್‌ಎಸ್‌ ನಾಯಕರು ಹಾಗೂ ಬಿಜೆಪಿಯವರಿಗೆ ಬೇರೇನು ಕಾಣಿಸುತ್ತಿಲ್ಲ. ಜಾತ್ಯತೀತ ಪರಿಕಲ್ಪನೆ ನಮ್ಮ ದೇಶದ ಜನತೆಗೆ ಶಾಂತಿ, ಸೌಹಾರ್ದತೆ ಅತಿ ಮುಖ್ಯವಾದುದು. ಆದರೆ ಇತ್ತೀಚಿನ ವರ್ಷದಲ್ಲಿ ರಾಷ್ಟ್ರಾದ್ಯಂತ ಎಲ್ಲವೂ ತದ್ವಿರುದ್ಧವಾಗಿ ನಡೆಯುತ್ತಿದೆ.

1991ರ ಪೂಜಾಸ್ಥಳಗಳ ಕಾಯಿದೆ (ಪಿಒಡಬ್ಲ್ಯೂ-ದಿ ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್-1991) ನಿಜಕ್ಕೂ ಸವಾಲಾಗಿದೆ. 2019ರಲ್ಲಿ ಈ ಬಗ್ಗೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಪೂಜಾಸ್ಥಳಗಳ ಕಾಯಿದೆ ನಮ್ಮ ಜಾತ್ಯತೀತ ತತ್ವಗಳ ಮೂಲಾಧಾರ ಹಾಗೂ ಇದು ನಮ್ಮ ಸಂವಿಧಾನದ ಮೂಲಸ್ವರೂಪದ ಭಾಗ ಎಂದು ಆದೇಶಿಸಿತ್ತು. ಸಂಭಲ್‌ನಲ್ಲಿ ಶಾಹಿ ಜಾಮಾ ಮಸೀದಿಯ ಆವರಣದಲ್ಲಿ ಕೆಳಹಂತದ ನ್ಯಾಯಾಲಯ ಸಮೀಕ್ಷೆಗೆ ಆದೇಶಿಸಿರುವುದು ಪೂಜಾಸ್ಥಳಗಳ ಕಾಯ್ದೆಗೆ ಯಾವುದೇ ಅಧಿಕಾರವಿಲ್ಲ ಎನ್ನುವಂತಾಗಿದೆ. ಈ ಕಾಯ್ದೆಗೆ ಅಧಿಕಾರವಿಲ್ಲವೆಂದಾದರೆ ಯಾವುದೇ ಕೆಳಹಂತದ ನ್ಯಾಯಾಲಯವು ಮಸೀದಿಯ ನಂತರ ಚರ್ಚ್‌, ಅನಂತರ ಗುರುದ್ವಾರಗಳಿಗೆ ನೀಡುವ ಸಮೀಕ್ಷೆಯ ಆದೇಶವನ್ನು ಮತ್ತೆ ಯಾರು ತಡೆಯುತ್ತಾರೆ ಎಂಬುದು ಸದ್ಯದ ಪ್ರಮುಖ ವಿಷಯವಾಗಿದೆ. ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ನಾಯಕರು ದೇಶಾದ್ಯಂತ ಶಾಂತಿ ಸುವ್ಯವಸ್ಥೆಯೊಂದಿಗೆ ಅಭಿವೃದ್ಧಿಯತ್ತ ತೆಗೆದುಕೊಂಡುಹೋಗುವ ಬದಲು ಹಿಂದಿನ ಮುಸ್ಲಿಂ ಅರಸರು ನಮ್ಮ ಧರ್ಮ ಹಾಗೂ ದೇವಾಲಯಗಳನ್ನು ಅಪವಿತ್ರಗೊಳಿಸಿದರು ಎಂದು ದ್ವೇಷಭಾಷೆಯನ್ನು ಬಿತ್ತುತ್ತಿದ್ದಾರೆ. ಸಂವಿಧಾನದಲ್ಲಿ ಜಾತ್ಯತೀತ ಪರಿಕಲ್ಪನೆಯನ್ನು ಅಳವಡಿಸಿಕೊಂಡ ಕಾರಣ ಭಾರತವು ಒಳಗೊಂಡಂತೆ ಅಭಿವೃದ್ಧಿ ಹೊಂದಿರುವ ಅಥವಾ ಹೊಂದುತ್ತಿರುವ ದೇಶಗಳು ಜಾಗತಿಕ ಮನ್ನಣೆ ಪಡೆದಿವೆ.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತೀಯ ಜನತಾ ಪಕ್ಷಕ್ಕೆ ನೀತಿಯೂ ಇಲ್ಲ, ರೀತಿಯೂ ಇಲ್ಲ

ಸಂಭಲ್ ಶಾಹಿ ಮಸೀದಿ ವಿವಾದವು ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ದ್ವೇಷಾಸೂಯೆ ಬಿತ್ತಲು ಜಾಣತನದಿಂದ ರೂಪಿಸಿದ ಷಡ್ಯಂತ್ರ ಎಂಬುದು ಯಾರಿಗೂ ತಿಳಿಯದ ವಿಷಯವಲ್ಲ. ಅರ್ಜಿಯನ್ನು ಸಲ್ಲಿಸಿದ ರೀತಿ ಮತ್ತು ಸಮೀಕ್ಷೆಗೆ ತುರ್ತಾಗಿ ನೀಡಿದ ಆದೇಶವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಅಯೋಧ್ಯೆಯ ರಾಮಮಂದಿರದ ವಿಚಾರದಲ್ಲಿ ಕಾನೂನಿನ ಗೆಲುವು ಗಳಿಸಿದರೂ ಜನ ಬೆಂಬಲ ವ್ಯಕ್ತವಾಗಿಲ್ಲ. ಈಗ ಕಾಶಿ ಹಾಗೂ ಮಥುರಾದ ಬಗ್ಗೆ ಹೆಚ್ಚು ಪ್ರಚಾರ ನಡೆಸಲಾಗುತ್ತಿದೆ. ಆದರೆ ಕಾಶಿ ಹಾಗೂ ಮಥುರಾದಿಂದ ಹೆಚ್ಚು ಪ್ರಯೋಜನವಾಗುತ್ತಿಲ್ಲ ಎಂಬುದನ್ನು ಅರಿತ ಸಂಘ ಪರಿವಾರದ ನಾಯಕರು ಸಂಭಲ್‌ನಂಥ ಮಸೀದಿಗಳ ಮೇಲೆ ಕಣ್ಣು ನೆಟ್ಟಿದ್ದಾರೆ. ದೇಶದಲ್ಲಿರುವ ಹಲವಾರು ಜೀವಂತ ಸಮಸ್ಯೆಗಳಿಗಿಂತ ಮುಖ್ಯವಾಗಿ ಮಸೀದಿಗಳನ್ನು ಬಂಡವಾಳ ಮಾಡಿಕೊಳ್ಳಲು ಹೊರಟಿದ್ದಾರೆ.     

ವಿಶ್ವ ಹಿಂದೂ ಪರಿಷತ್‌ ನಾಯಕರು ಭಾರತದಲ್ಲಿ ದೇವಾಲಯಗಳ ಕೆಡವಿ 40 ಸಾವಿರಕ್ಕೂ ಹೆಚ್ಚು ಮಸೀದಿಗಳನ್ನು ನಿರ್ಮಿಸಲಾಗಿದೆ ಎಂದು ಬಡಬಡಿಸುತ್ತಾರೆ. ವಿಹೆಚ್‌ಪಿಯ ಈ ಹೇಳಿಕೆಗಳಿಗೆ ಯಾವುದೇ ಪುರಾವೆಯಿಲ್ಲದಿದ್ದರೂ ಈಗಿನ ಆಕ್ರೋಶ ಹೇಗಿದೆಯೆಂದರೆ ವಸಾಹತುಶಾಹಿ ಆಳ್ವಿಕೆಯಲ್ಲಿ ತನ್ನ ಪೂರ್ವಜರ ಅಪರಾಧಗಳಿಗಾಗಿ ವಿಮಾನ ನಿಲ್ದಾಣದಲ್ಲಿ ಬ್ರಿಟಿಷ್ ಪ್ರವಾಸಿಗರನ್ನು ಬಂಧಿಸಿದಂತಿದೆ. ಪ್ರಸ್ತುತ ಭಾರತದ ಮುಸ್ಲಿಂ ಸಮುದಾಯ ಮೊಘಲ್‌ ಅರಸರಿಗಿಂತ ಪ್ರವಾದಿ ಮೊಹಮ್ಮದ್, ಸೂಫಿ ಸಂತರು ಹಾಗೂ ಭಾರತೀಯ ಪರಂಪರೆಯಿಂದ ಹೆಚ್ಚು ಗುರುತಿಸಿಕೊಳ್ಳಲು ಬಯಸುತ್ತದೆ.

ಹಿಂದೂ-ಮುಸ್ಲಿಂ ಸೌಹಾರ್ದತೆ ವಿಷಯಕ್ಕೆ ಬಂದರೆ, ಭಾರತರತ್ನ ಮೌಲಾನಾ ಆಜಾದ್ ಅವರು “ವೇದಗಳು” ಮತ್ತು ಇಸ್ಲಾಮಿಕ್ ತತ್ವವಾದ “ವ್ಹಾದತ್‌-ಎ-ದೀನ್” ನಡುವೆ ಅಂತರ ಕಾಯ್ದುಕೊಂಡಿದ್ದರು. ಅವರಿಗೆ ಧರ್ಮಕ್ಕಿಂತ ದೇಶ ಮುಖ್ಯವಾಗಿತ್ತು. ಅವರ ಏಕೈಕ ಉದ್ದೇಶ ಉಜ್ವಲ ಮತ್ತು ಉತ್ತಮ ಭಾರತಕ್ಕಾಗಿ ಹಿಂದೂಗಳು ಮತ್ತು ಮುಸ್ಲಿಮರನ್ನು ಒಗ್ಗೂಡಿಸುವುದಾಗಿತ್ತು.

ಭಾರತದಲ್ಲಿ ಆಳ್ವಿಕೆ ನಡೆಸಿದ ಆಂಗ್ಲರ ಏಕೈಕ ಉದ್ದೇಶ ಹಿಂದೂ – ಮುಸ್ಲಿಮರ ನಡುವೆ ದ್ವೇಷವನ್ನುಂಟು ಮಾಡಿ ತಾವು ಸುಗಮವಾಗಿ ಆಳ್ವಿಕೆ ನಡೆಸುವುದಾಗಿತ್ತು. ಇಂದಿನ ಬಹುತೇಕ ರಾಜಕೀಯ ನಾಯಕರ ತತ್ವವು ಇದೇ ರೀತಿಯ ಆಶಯವನ್ನು ಹೊಂದಿದೆ. ಹೆಸರಿಗಷ್ಟೆ ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ ಎಂದು ಹೇಳುತ್ತಾರೆ. ಆದರೆ ರಾಜಕಾರಣದಲ್ಲಿ ಮಾತ್ರ ಮತ್ಸರವನ್ನು ಉಂಟು ಮಾಡುವ ಕೆಲಸ ಮಾಡುತ್ತಾರೆ. ಸದ್ಯ ಸಂಭಲ್‌ ಉರಿಯುತ್ತಿದೆ. ಮುಂದೆ ರಾಜಕೀಯ ನಾಯಕರ ಬಂಡವಾಳಕ್ಕಾಗಿ ದೇಶದ ಹಲವೆಡೆ ಹತ್ತಿ ಉರಿಯಲಿದೆ. ಆದರೆ ಬೆಲೆ ತೆತ್ತುವವರು ಮಾತ್ರ ಅಮಾಯಕ ಜನತೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X