ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಉಪನಿರ್ದೇಶಕರಾಗಿದ್ದ ಸುಜ್ಞಾನಮೂರ್ತಿಯವರು ವೃತ್ತಿ ಮತ್ತು ಪ್ರವೃತ್ತಿಯನ್ನು ಏಕಕಾಲಕ್ಕೆ ಪ್ರತ್ಯೇಕವೂ ಏಕವೂ ಆಗಿಸಿಕೊಂಡಿದ್ದ ಪ್ರತಿಭಾಶಾಲಿ. ತಮ್ಮ ಪ್ರವೃತ್ತಿಗೂ ವೃತ್ತಿಗೂ ಧಕ್ಕೆಯಾಗದಂತೆ ‘ಏಕನಿಷ್ಠೆ’ಯಿಂದ ಏಕವಾಗಿಯೂ ‘ಕೃತಿ ಮಾದರಿಗಳಲ್ಲಿ’ ಪ್ರತ್ಯೇಕವಾಗಿಯೂ ಉಳಿದು ಬೆಳೆದ ಸುಜ್ಞಾನಮೂರ್ತಿ ಕನ್ನಡ ವಿಶ್ವವಿದ್ಯಾಲಯದ ಒಂದು ‘ವಿಸ್ಮಯ’ವಾಗಿ ನನಗೆ ಕಾಣಿಸುತ್ತಾರೆ.
ಬಿ. ಸುಜ್ಞಾನಮೂರ್ತಿಯವರ ಬಗ್ಗೆ ಬರೆಯುವುದೆಂದರೆ ಕೇವಲ ಒಬ್ಬ ವ್ಯಕ್ತಿಯ ಪರಿಚಯ ಎಂದು ನಾನು ಭಾವಿಸಿಲ್ಲ. ಅವರದೇ ಒಂದು ವಿಶಿಷ್ಟ ವ್ಯಕ್ತಿತ್ವ: ಅವರದೇ ವಿಶಿಷ್ಟ ವಿಚಾರತ್ವ, ವ್ಯಕ್ತಿ, ವ್ಯಕ್ತಿತ್ವ, ವಿಚಾರತ್ವಗಳು ಅಂತರ್ಸಂಬಂಧಿಯಾದ್ದರಿಂದ ಸುಜ್ಞಾನಮೂರ್ತಿಯವರನ್ನು ಮೂರೂ ನೆಲೆಗಳಲ್ಲಿ ಕಾಣುವ ಕಣ್ಣೋಟ ಬೇಕಾಗುತ್ತದೆ. ಹಾಗೆ ನೋಡಿದರೆ, ಸುಜ್ಞಾನಮೂರ್ತಿಯವರಲ್ಲೇ ಈ ಮುಪ್ಪುರಿ ಕಣ್ಣೋಟವಿದೆ.
ವ್ಯಕ್ತಿಯಾಗಿ ಸುಜ್ಞಾನಮೂರ್ತಿಯವರು ಸದಾ ಚಟುವಟಿಕೆಯ ಚಿಲುಮೆ, ಒಪ್ಪಿಕೊಂಡ ಕೆಲಸಗಳನ್ನು ಉತ್ಸಾಹದಿಂದ ಮಾಡುವ ಉಮೇದು ಇವರಲ್ಲಿ ಸದಾ ಚಿಮ್ಮುತ್ತಿರುತ್ತದೆ. ಹೀಗಾಗಿ ಉತ್ಸಾಹವೇ ಈ ವ್ಯಕ್ತಿಯ ಮುಖ್ಯ ವ್ಯಕ್ತಿತ್ವವೂ ಆಗುತ್ತದೆ. ಆದರೆ ವ್ಯಕ್ತಿತ್ವವೆನ್ನುವುದು ಭಾವತೀವ್ರ ಉತ್ಸಾಹಕ್ಕಷ್ಟೇ ಸೀಮಿತವಲ್ಲ. ಸುಜ್ಞಾನಮೂರ್ತಿಯವರ ವ್ಯಕ್ತಿತ್ವಕ್ಕಂತೂ ಭಾವತೀವ್ರ ಸೀಮಿತರೇಖೆ ಅನ್ವಯಿಸುವುದಿಲ್ಲ. ಯಾಕೆಂದರೆ ಇವರ ಉತ್ಸಾಹದಲ್ಲಿ ವಿವೇಕ ಮತ್ತು ವಿಚಾರಗಳು ಅಂತರ್ಗತವಾಗಿರುವುದರಿಂದ ವಿಶೇಷ ವ್ಯಕ್ತಿತ್ವ ರೂಪುಗೊಂಡಿದೆ.
ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಉಪನಿರ್ದೇಶಕರಾಗಿದ್ದ ಸುಜ್ಞಾನಮೂರ್ತಿಯವರು ವೃತ್ತಿ ಮತ್ತು ಪ್ರವೃತ್ತಿಯನ್ನು ಏಕಕಾಲಕ್ಕೆ ಪ್ರತ್ಯೇಕವೂ ಏಕವೂ ಆಗಿಸಿಕೊಂಡಿದ್ದ ಪ್ರತಿಭಾಶಾಲಿ. ನಾನು ಈ ಮಾತನ್ನು ಹೇಳಲು ಕಾರಣವಿದೆ. ಪ್ರಸಾರಾಂಗದ ಪ್ರಕಟಣೆಗಳ ಹೊಣೆಗಾರಿಕೆ ಇವರ ವೃತ್ತಿಯಾಗಿತ್ತು. ಅಲ್ಲಿ ಬಹುಪಾಲು ಸಂಶೋಧನಾತ್ಮಕ ಮತ್ತು ಶಾಸ್ತ್ರೀಯ ಶಿಸ್ತಿನ ಕೃತಿಗಳು ಪ್ರಕಟವಾಗುವುದು ಸಹಜ ಸಂಗತಿ. ವೃತ್ತಿಕಾರಣಕ್ಕೆ ಇಂತಹ ಕೃತಿಗಳ ಪ್ರಕಟಣೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಸುಜ್ಞಾನಮೂರ್ತಿಯವರ ಪ್ರಮುಖ ಪ್ರವೃತ್ತಿ ಅನುವಾದ; ಅದೂ ಬಹುಪಾಲು ವಿಚಾರವಾದ ಕೇಂದ್ರಿತ ಕೃತಿಗಳ ಅನುವಾದ. ತಮ್ಮ ಪ್ರವೃತ್ತಿಗೂ ವೃತ್ತಿಗೂ ಧಕ್ಕೆಯಾಗದಂತೆ ‘ಏಕನಿಷ್ಠೆ’ಯಿಂದ ಏಕವಾಗಿಯೂ ‘ಕೃತಿ ಮಾದರಿಗಳಲ್ಲಿ’ ಪ್ರತ್ಯೇಕವಾಗಿಯೂ ಉಳಿದು ಬೆಳೆದ ಸುಜ್ಞಾನಮೂರ್ತಿ ಕನ್ನಡ ವಿಶ್ವವಿದ್ಯಾಲಯದ ಒಂದು ‘ವಿಸ್ಮಯ’ವಾಗಿ ನನಗೆ ಕಾಣಿಸುತ್ತಾರೆ.
ಅನುವಾದಕರಾಗಿ ಸುಜ್ಞಾನಮೂರ್ತಿಯವರು ವೈಚಾರಿಕ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅನನ್ಯವಾದುದು. ಅನುವಾದಕರಲ್ಲಿ ಎರಡು ಬಗೆಯವರಿದ್ದಾರೆ. ಯಾವುದೇ ವಸ್ತು- ವಿಚಾರಗಳ ಪುಸ್ತಕವಾದರೂ ಅನುವಾದಿಸಿಕೊಡುವ ‘ವೃತ್ತಿ’ಯವರು ಒಂದು ಬಗೆ; ತಮಗೆ ಇಷ್ಟವಾದ ವಸ್ತು-ವಿಚಾರಗಳನ್ನು ಮಾತ್ರ ಅನುವಾದಿಸುವವರು ಇನ್ನೊಂದು ಬಗೆ. ಸುಜ್ಞಾನಮೂರ್ತಿ ಎರಡನೆಯ ಬಗೆಗೆ ಸೇರಿದವರು. ಅವರು ಅನುವಾದಿಸಿದ ಕೃತಿಗಳನ್ನು ಗಮನಿಸಿದರೆ ನನ್ನ ಈ ವಿಂಗಡನೆ ಸ್ಪಷ್ಟವಾಗುತ್ತದೆ.
ಇದನ್ನು ಓದಿದ್ದೀರಾ?: ಹೊಸ ಓದು | ನೆಲದ ನುಡಿ ದುಡಿಸಿಕೊಂಡ ತುಂಬಾಡಿ ರಾಮಯ್ಯರ ‘ಜಾಲ್ಗಿರಿ’- ಸಾಮಾನ್ಯರ ಅಸಾಮಾನ್ಯ ಕೃತಿ
ಸುಜ್ಞಾನಮೂರ್ತಿಯವರ ಅನುವಾದದ ಕೃತಿಗಳೆಲ್ಲ ಮೂಲತಃ ತೆಲುಗು ರಚನೆಗಳು. ಅನುವಾದಕ್ಕೆ ಆಯ್ಕೆ ಮಾಡಿಕೊಂಡ ಕೃತಿಗಳ ಮೂಲಕವೇ ಸುಜ್ಞಾನಮೂರ್ತಿಯವರ ವಿಚಾರಧಾರೆಯ ಒಲವು ವ್ಯಕ್ತವಾಗುತ್ತದೆ. ಕೆಲವು ಕೃತಿಗಳನ್ನು ನಿದರ್ಶನಕ್ಕಾಗಿ ನೆನೆಯಬಹುದು. ಜಾತಿವಿನಾಶ, ದಲಿತತತ್ವ, ಕುಟುಂಬವ್ಯವಸ್ಥೆ: ಮಾರ್ಕ್ಸ್ವಾದ-ಸ್ತ್ರೀವಾದ, ಪುರುಷ ಅಹಂಕಾರಕ್ಕೆ ಸವಾಲ್, ಜಾತಿವಿನಾಶ-ವರ್ಗವಿನಾಶ, ಮತಾಂಧತೆ ಮತ್ತು ಮಾನವೀಯತೆ, ದಲಿತರು ಮತ್ತು ಪ್ರಭುತ್ವ, ಆಂಧ್ರಪ್ರದೇಶದ ಶತಮಾನದ ದಲಿತ ಚಳವಳಿ, ಅಮೆರಿಕನಿಜಂ, ಜಾತಿಯ ನೆರಳಲ್ಲಿ ಅಭಿವೃದ್ಧಿ ರಾಜಕೀಯ, ತೆಲಂಗಾಣ ರೈತ ಹೋರಾಟ – ಇವೇ ಮುಂತಾದ ಅನೇಕ ಕೃತಿಗಳನ್ನು ಅನುವಾದಿಸಿದ್ದಾರೆ. ಆಂಧ್ರಪ್ರದೇಶ ಪ್ರಗತಿಪರ ಚಿಂತನೆಯ ಒಂದು ಪ್ರಮುಖ ಧಾರೆಯನ್ನು ಕನ್ನಡದ ಓದುಗರಿಗೆ ಪರಿಚಯಿಸಿದ್ದಾರೆ. ತನ್ಮೂಲಕ ತಮ್ಮ ವಿಚಾರಧಾರೆಯನ್ನು ಪ್ರಕಟಪಡಿಸಿದ್ದಾರೆ.
ಕೆಲವು ಕೃತಿಗಳು ಚಿಕ್ಕವಾದರೆ, ಇನ್ನು ಕೆಲವು ದೊಡ್ಡವು. ‘ತೆಲಂಗಾಣ ರೈತ ಹೋರಾಟ’ ಕುರಿತ ಅನುವಾದಿತ ಕೃತಿಯೂ ವಿಸ್ತಾರ ಮತ್ತು ವಿಚಾರ ಎರಡರಲ್ಲೂ ದೊಡ್ಡದಾಗಿದ್ದು, 2013ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನವನ್ನು ಪಡೆದಿದೆ. “ಯಾರದೀ ಕಾಡು” ಎಂಬ ಕಾದಂಬರಿಗೂ ಅನುವಾದ ಕ್ಷೇತ್ರದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭ್ಯವಾಗಿದೆ(2003). 2016ರಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಗೌರವ ಪ್ರಶಸ್ತಿ ನೀಡಿ ಗೌರವಿಸಿಕೊಂಡಿದೆ.
ಹೌದು, ಇಂಥ ನಿರ್ದಿಷ್ಟ ವಿಚಾರಧಾರೆಯ ಅನುವಾದಿತ ಕೃತಿಗಳನ್ನು ಕೊಟ್ಟವರನ್ನು ಗೌರವಿಸುವುದು, ಇಂದಿನ ದಿನಗಳಲ್ಲಿ ಸ್ವಯಂ ಗೌರವಿಸಿಕೊಂಡಂತೆಯೂ, ಒಂದು ವಿಚಾರಧಾರೆಯನ್ನು ಪ್ರಜಾಸತ್ತಾತ್ಮಕವಾಗಿ ಪರಿಗಣಿಸಿದಂತೆಯೂ ಆಗುತ್ತದೆ.
ಸುಜ್ಞಾನಮೂರ್ತಿಯವರು ತಮ್ಮ ‘ವೃತ್ತಿಮಿತಿ’ಯ ನಿಯಮಗಳ ಕಾರಣಕ್ಕೆ ನೇರವಾಗಿ ಪ್ರಗತಿಪರ ಚಳವಳಿಗಳಲ್ಲಿ ಭಾಗವಹಿಸದಿದ್ದರೂ ಅವರ ಅನುವಾದಗಳಲ್ಲೇ ಚಳವಳಿಯ ಅಂತರಂಗ ಅನಾವರಣಗೊಂಡಿದೆ. ಚಳವಳಿಯ ಕೆಲಸವನ್ನು ಹೀಗೂ ಮಾಡಬಹುದೆಂಬುದಕ್ಕೆ ಈ ಅನುವಾದಗಳು ಮತ್ತು ಅನುವಾದಕ ಸುಜ್ಞಾನಮೂರ್ತಿ ಸಾಕ್ಷಿಯಾಗಿದ್ದಾರೆ. ಕೊನೆಗೆ ಒಂದು ಮಾತು: ಸುಜ್ಞಾನಮೂರ್ತಿ ಮುಚ್ಚುಮರೆಯಿಲ್ಲದ ಮಾತುಗಾರ: ಶಿಸ್ತುಬದ್ಧ ಕೆಲಸಗಾರ. ಅವರಿಗೆ ಶುಭಹಾರೈಕೆಗಳು.
ಬದುಕಿನ ಬೆರಗು- ನಮ್ಮ ಕಣ್ಣಲ್ಲಿ ಸುಜ್ಞಾನಮೂರ್ತಿ
ಸಂಪಾದಕರು: ಡಾ. ಪ್ರದೀಪ್ ಮಾಲ್ಗುಡಿ
ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ
ಮುದ್ರಣ ವರ್ಷ: ೨೦೨೪, ಪುಟಗಳು: ೪೭೦
ಬೆಲೆ: ೪೦೦ ರೂ., ಸಂಪರ್ಕ: 94803 53507