ಹೊಸ ಓದು | ನೆಲದ ನುಡಿ ದುಡಿಸಿಕೊಂಡ ತುಂಬಾಡಿ ರಾಮಯ್ಯರ ‘ಜಾಲ್ಗಿರಿ’- ಸಾಮಾನ್ಯರ ಅಸಾಮಾನ್ಯ ಕೃತಿ

Date:

ನಮ್ಮ ನಡುವಿನ ವಿಶಿಷ್ಟ ಲೇಖಕ ತುಂಬಾಡಿ ರಾಮಯ್ಯ ಎಂದಾಕ್ಷಣ ನೆನಪಾಗುವುದು ‘ಮಣೆಗಾರ’ ಕೃತಿ. ದಲಿತ ಲೋಕದ ಮಗ್ಗುಲುಗಳನ್ನು ತೆರೆದು ತೋರಿಸಿದ ವಿಭಿನ್ನ ಕೃತಿ. ಈಗ ಅಂಥದ್ದೇ ಅಸ್ಮಿತೆಯನ್ನು ಶೋಧಿಸುವ ಲೇಖಕ ರಾಮಯ್ಯನವರ ಮತ್ತೊಂದು ಕೃತಿ ‘ಜಾಲ್ಗಿರಿ’ ಇಂದು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ನೆಲದ ನುಡಿಯನ್ನು ದುಡಿಸಿಕೊಂಡ ‘ಜಾಲ್ಗಿರಿ’ ಕೃತಿಯ ಒಂದು ಅಧ್ಯಾಯ, ನಿಮ್ಮ ಓದಿಗಾಗಿ… 

ದಯವಿಲ್ಲದ ಧರ್ಮವಾವುದಯ್ಯ…?

ಅಗ್ರಹಾರಕ್ಕೆ ಅಂಟಿಕೊಂಡು ತಿಗಳರ ತೋಟಕ್ಕೆ ಹರಡಿಕೊಂಡು ನರಸಿಂಹಸ್ವಾಮಿ ದೇವಸ್ಥಾನವಿತ್ತು. ಪಲ್ಗುಣಯ್ಯರಿಂದ ಸಂಸ್ಕೃತ ಕಲಿತ ಶಿಷ್ಯ ದೇವಸ್ಥಾನದ ಅರ್ಚಕರಾಗಿದ್ದರು. ಗುರು ಮಗನಿಗಾದ ಆಘಾತದ ಸುದ್ದಿ ಅವರಿವರ ಬಾಯಲ್ಲಿ ಉಪ್ಪು ಕಾರ ಹಚ್ಚಿಸಿಕೊಂಡು ಅರ್ಚಕರ ಕಿವಿಗೂ ಬಿದ್ದಿತ್ತು. ಅರ್ಚಕರಿಗೆ ಪಲ್ಗುಣಯ್ಯರ ಪಾಠದಿಂದ ಅನ್ನದ ದಾರಿ ಸಿಕ್ಕಿತ್ತಾದರೂ; ಪಾಠ ಹೇಳುವಾಗ ಅವರು ಕಟ್ಟುನಿಟ್ಟಾಗಿದ್ದ ಕಾರಣ ಗುರುವಿನ ಬಗ್ಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಅರ್ಚಕರು ಸಂಸ್ಕೃತದ ಜೊತೆ ಸ್ವಯಾರ್ಜಿತವಾಗಿ ಜನರನ್ನು ಮೋಡಿ ಮಾಡುವ ಮಾತುಗಾರಿಕೆ ಕಲಿತಿದ್ದರು. ಅದಕ್ಕೆ ಆಧಾರವಾಗಿ ಪ್ರತಿ ವರ್ಷ ಉಗಾದಿಗೆ ಹೊಸ ಒಂಟಿಕೊಪ್ಪಲ್ ಪಂಚಾಂಗ ತರಿಸುತ್ತಿದ್ದರು.

ಎರಡರ ತಾತ್ಪರ್ಯದಿಂದ ಕೈತುಂಬ ಕಾಸು ಸಂಪಾದಿಸುತ್ತಿದ್ದರು. ಅಷ್ಟಾದರೂ ಇತರರ ಬಳಿ ಕಾಸಾಡುವುದ ಸಹಿಸುವ ಜಾಯಮಾನ ಮಾತ್ರ ಅವರದಾಗಿರಲಿಲ್ಲ. ಎಷ್ಟೇ ಆಗಲಿ ಅನ್ನಕ್ಕೆ ಮಾರ್ಗ ತೋರಿದ ಗುರುವನ್ನು ಸಂತೈಸುವ ನೆಪ ಮಾಡಿಕೊಂಡರು. ಅವರ ಮನಕ್ಕೆ ಬೆಂಕಿ ಹಚ್ಚಿ ಅದರಲ್ಲಿ ಮೈ ಕಾಯಿಸಿಕೊಳ್ಳುವ ಹುನ್ನಾರ ಮಾಡಿದರು. ಒಂದು ಮಧ್ಯಾಹ್ನ ಗುರು ಮನೆಗೆ ಭೇಟಿ ನೀಡಿದರು. ಆಗುತ್ತಿರುವ ಎಲ್ಲ ಅನಾಹುತ ಕಂಡು ಹಿಡಿವರಂತೆ ಮನೆ ಮೂಲೆ ಮುಡುಕು ತಡಕಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮನೆಯಲ್ಲಿ ವಾಸ್ತು ದೋಷವಿದ್ದು ವಾಸಯೋಗ್ಯ ಅಲ್ಲವೆಂದರು. ಒಂಟಿಕೊಪ್ಪಲಿನ ದೊಡ್ಡ ಶಾಸ್ತ್ರಿಗಳು ಬರೆದ ಪಂಚಾಂಗದಲ್ಲಿ ಒಗಟಿನಂತ ಒಂದು ಸ್ತೋತ್ರ ಓದಿ ತಮ್ಮ ಹೇಳಿಕೆ ಸಮರ್ಥಿಸಿಕೊಂಡರು. ಮುಂದೆ ಒದಗಬಹುದಾದ ಗಂಡಾಂತರ ತಪ್ಪಿಸಲು ಪರಿಹಾರವೂ ಪಂಚಾಂಗದಲ್ಲೆ ಇದೆ ಎಂದರು. ಆಶ್ಚರ್ಯವೆಂದರೆ ಆ ಮನೆಯನ್ನು ಅರ್ಚಕರೆ ಹುಡುಕಿದ್ದರು. ಅದು ಸಾಲದೆಂಬಂತೆ ಮನೆ ಅವರ ದೂರದ ಸಂಬಂಧಿಕರದಾಗಿತ್ತು.

ಮನೆ ಕಟ್ಟಿಸಿದವರು ಸದ್ಯ ದೂರದ ದೇಶವೊಂದರಲ್ಲಿ ವಾಸವಾಗಿದ್ದರು. ಇನ್ನೂ ಆಶ್ಚರ್ಯ ಮನೆಯ ಪಾಯ ಪೂಜೆ, ಗೃಹ ಪ್ರವೇಶದ ಪುಣಿಯೋಜನೆ ಕಾರ್ಯಗಳಿಗೆ ಸ್ವತಃ ಅವರೆ ನೇತೃತ್ವ ವಹಿಸಿ ನೆರವೇಸಿದ್ದರು. ಮನೆಯವರು ವಿದೇಶಕ್ಕೆ ಹೋಗಿ ಹಲವು ವರ್ಷಗಳಿಂದ ಖಾಲಿಯಿತ್ತು. ಹೇಳಿ ಕೇಳಿ ಅಗ್ರಹಾರ “ಮನೆ ಬಾಡಿಗೆ” ಎಂದು ಬಾಗಿಲಲ್ಲಿ ಬೋರ್ಡ್ ಖಾಯಂ ಆಗಿ ನೇತಾಡುತಿತ್ತು. ಟುಮಕಿಪುರ ವಿಸ್ತರಿಸಿಕೊಂಡು ಬಾಡಿಗೆದಾರರು ಬಹಳಷ್ಟು ಬರುತ್ತಿದ್ದರು. ಬೋರ್ಡಿನ ಆವರಣದಲ್ಲಿದ್ದ “ಸಸ್ಯಾಹಾರಿಗಳಿಗೆ ಮಾತ್ರ” ಎಂಬ ಟಿಪ್ಪಣಿ ನೋಡಿ ಹಿಂತಿರುಗುತ್ತಿದ್ದರು.

ಮನೆಯಲ್ಲಿ ಜನ ವಾಸವಿಲ್ಲದೆ ಹೋದರೆ ಹಾಳಾಗುತ್ತದೆಂದು ಮಾಲೀಕರಿಗನಿಸಿತ್ತು. ಬಾಡಿಗೆದಾರರ ಹುಡುಕಿ ಕೊಟ್ಟವರಿಗೆ ಒಂದು ತಿಂಗಳ ಬಾಡಿಗೆ ಕಮಿಷನ್ ನೀಡುವ ಆಮಿಷ ಒಡ್ಡಿದರು. ಅರ್ಚಕರ ಬಳಿ ಸಾಕಷ್ಟು ಹಣವಿದ್ದರೂ ಕಮಿಷನ್ ಆಮಿಷಕ್ಕೆ ಒಳಗಾದರು. ಪಲ್ಗುಣಯ್ಯ ಟುಮಕಿಪುರಕ್ಕೆ ವಾಸ ಬದಲಿಸಬೇಕಾಗಿ ಬಂದು ಅರ್ಚಕರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿತ್ತು. ಸಂಬಂಧಿಕರಿಗೆ ಸಹಾಯವೂ ಆಯಿತು; ಕಮಿಷನ್ ಬಂದಂತಾಯಿತು ಗುರುವಿಗೆ ನೆರವಾದಂತಾಯಿತು. ಒಂದೆ ಕಲ್ಲಲ್ಲಿ ಮೂರು ಹಕ್ಕಿ ಹೊಡೆದಂತಾಗಿ ಅರ್ಚಕರಿಗೆ ಹಣ ಕೀರ್ತಿ ಎರಡೂ ಅನಾಯಾಸವಾಗಿ ಬಂದಿತ್ತು. ವಾಸ್ತು ದೋಷವೆಂಬ ಶಿಷ್ಯನ ಮಾತು ಕೇಳಿ ಪಲ್ಗುಣಯ್ಯ ಆಶ್ಚರ್ಯ ಗೊಂಡರು. ಈಗಿನ ದೋಷ ಆಗಿರಲಿಲ್ಲವೆ ಎಂದು ಶಿಷ್ಯನ ಮುಂದೆ ಪ್ರಶ್ನೆ ಇಟ್ಟರು. ಕ್ಷಣ ತಬ್ಬಿಬಾದ ಅರ್ಚಕರು ವಿಷಯ ಬದಲಿಸಿದರು. ಗಳಿಗೆಗೊಮ್ಮೆ ನಕ್ಷತ್ರಗಳು ಪಥ ಬದಲಿಸುವ ಕಲಿಗಾಲವಿದು. ತಮಗೆ ತಿಳಿದಿರುವಂತೆ ಗ್ರಹಗತಿಗಳು ತಿರುಗು ಮುರುಗಾಗುತ್ತಿವೆ. ಇಂದು ಕೆಳಗಿದ್ದವರು ನಾಳೆ ಮೇಲಿದ್ದವರ ಸವಾರಿ ಮಾಡುವಂತ ಕೆಟ್ಟ ಕಾಲ ಘಟ್ಟವಿದು. ಮನೆಯಲ್ಲಿ ದಿನವೂ ದೀಪ ಹಚ್ಚದೋದರೆ ಮತ್ತೇನಾದೀತು. ದೋಷಗಳು ಒಳ ಹೊಕ್ಕಿರ ಬಹುದಲ್ಲ! ಎಂದು ಗುರುವಿಗೆ ತಿರುಮಂತ್ರ ಹೇಳಿದರು. ವೇದ ಪುರಾಣಗಳನ್ನೆ ಅರೆದು ಕುಡಿದಿದ್ದ ಪಲ್ಗುಣಯ್ಯ ವಾಸ್ತುವಿನ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ. ಸ್ವಯಂ ಪುರೋಹಿತ ವರ್ಗಕ್ಕೆಯೆ! ಅದರ ಬಗ್ಗೆ ಹೆಚ್ಚು ಮಾಹಿತಿ ಇದ್ದಂತೆ ಕಂಡಿರಲಿಲ್ಲ. ಹಾಗಾಗಿ ಪಲ್ಗುಣಯ್ಯ ಶಿಷ್ಯನ ಮಾತು ಇಲ್ಲದ ಮನಸ್ಸಲ್ಲಿ ನಂಬುವ ಒತ್ತಡಕ್ಕೆ ಸಿಲುಕಿದರು.

ಹಿಂದೆ ಕೇವಲ ಆಯ ನೋಡಿ ಪಾಯ ಹಾಕುತ್ತಿದ್ದ ಒರಟು ಕಾಲ, ಪಲ್ಗುಣಯ್ಯರ ಬಳಿ ಅಪ್ಪ ನರಸಿಂಹ ಶ್ರೇಷ್ಠಿ ಬಳುವಳಿ ಕೊಟ್ಟಿದ್ದ ಶತಮಾನದಷ್ಟು ಹಳೆಯದಾದ ಪಂಚಾಂಗವಿತ್ತು. ಅದು ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳಲು ಹಿಂಜರಿಯುತಿತ್ತು. ತಮ್ಮ ಸುತ್ತ ಆಗುತ್ತಿದ್ದ ಬದಲಾವಣೆ ಕಂಡರೆ ಶಿಷ್ಯ ಹೇಳುವುದರಲ್ಲಿ ಸತ್ಯವೂ ಇರಬಹುದಲ್ಲವೆ!

ಪಲ್ಗುಣಯ್ಯರ ಸಂಶಯ ಗುಣಾಕಾರ ಹಾಕಿತ್ತು. ಅಂತಿಮವಾಗಿ ಶಿಷ್ಯನ ಮಾತಿನಂತೆ ಹೊಸಮನೆ ಕಟ್ಟುವ ನಿರ್ಧಾರಕ್ಕೆ ಬರಬೇಕಾಯಿತು. ಪಲ್ಗುಣಯ್ಯ ಬೆಳೆಸಿದ್ದ ಶಿಷ್ಯರ ಪೈಕಿ ಅರ್ಚಕರು ವಿಲಕ್ಷಣ ಬುದ್ದಿಯವರು. ಅವರ ನಡೆ ವಿದ್ಯೆ ಬುದ್ದಿ ಕಲಿಸಿದ ಗುರುವನ್ನೂ ಬಿಡದಂತದ್ದು. “ಯಾರನ್ನಾದರೂ ಇಕ್ಕಟ್ಟಿಗೆ ಸಿಕ್ಕಿಸಿ ಇಲಿಯಂತೆ ಒದ್ದಾಡಿಸ ಬೇಕ!! ಏನೂ ಮಾಡಬೇಡಿ ಅವರಿಗೆ ಮನೆ ಕಟ್ಟಲು ಪ್ರೇರೇಪಿಸಿ. ಪೀಡಕ ಒಳಗುದಿ ನಿಮ್ಮ ಪರವಾಗಿ ನಿಂತು ಮನೆ ಕಟ್ಟಿಸುವ ವಾಂಛೆ ಅವರನ್ನೆ ಎಡಬಿಡದೆ ಕಾಡುತ್ತದೆ. ಗೋಳಾಡಿಸುತ್ತದೆ, ಕಣ್ಣೀರು ತರಿಸುತ್ತದೆ” ಎಂಬ ಮಾತು ನಿಜವಾಗಿಸಲು ಅರ್ಚಕರ ಭಾಗಾಕಾರವಾಗಿತ್ತು. ಅವರೆ ಮುಂದೆ ನಿಂತು ಮುತುವರ್ಜಿ ವಹಿಸಿದರು. ಅಗ್ರಹಾರಕ್ಕೆ ಅಂಟಿಕೊಂಡಿದ್ದ ತಿಗಳರ ತೋಟದಲ್ಲಿ ದೊಡ್ಡ ಸೈಟೊಂದ ಪತ್ತೆ ಹಚ್ಚಿದರು. ಹೇಳಿ ಕೇಳಿ ಪಲ್ಗುಣಯ್ಯ ಕಮಲಪುರದ ಮನೆಯಲ್ಲಿ ವಿಶಾಲವಾಗಿ ಬದುಕಿದ್ದವರು. ಬಾಗಿಲಾಚೆ ಕಾಲಿಟ್ಟರೆ ರಸ್ತೆ ಸಿಗುವಂತಿದ್ದ ಸದ್ಯದ ಮನೆ ಬದಲಿಸಬೇಕೆಂಬ ಒಳಾಸೆ ಆಗಾಗ ಅವರ ಮನದಲ್ಲಿ ಸುಳಿದಾಡುತಿತ್ತು. ಸದಾ ಗಿಜಿಗುಟ್ಟುವ ಪರಿಸರ ಒಂದಲ್ಲ ಒಂದು ಕಡೆ ವಿಪರೀತ ಗದ್ದಲ, ಕಿಟಕಿ ತೆಗೆದರೆ ಸಾಕು ಮಹಿಳೆಯರ ದರ್ಶನ ಈ ಎಲ್ಲ ಮುಜುಗರದಿಂದ ಪುಂಡರೀಕರಿಗೆ ರಕ್ಷಣೆ ಬೇಕಿತ್ತು. ರೇಜಿಗೆಯಿಂದ ಮಗನ ಬಿಡುಗಡೆ ಮಾಡಲು ಶಿಷ್ಯನ ಸಲಹೆ ಸೂಕ್ತ ಎಂದು ಪಲ್ಗುಣಯ್ಯರಿಗೆ ಅನಿಸಿತು. ಗಟ್ಟಿ ಮನಸ್ಸು ಮಾಡಿ ಆರ್ಚಕರು ತೋರಿಸಿದ ಸೈಟು ಸಮಂಜಸವಾಗಿದೆ ಎಂದು ಒಪ್ಪಿದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಜೆಪಿಯ ಬಾಂಡ್ ಬಹಿರಂಗಗೊಳಿಸಲು ಎಸ್‌ಬಿಐ ಏಕೆ ಹಿಂಜರಿಯುತ್ತಿದೆ?

ಪಲ್ಗುಣಯ್ಯರ ಬಳಿ ಸಾಕು ಬೇಕಾದಷ್ಟು ಹಣವಿತ್ತು. ಅವರು ಕಿಲುಬು ಕಾಸಿನ ಕಾಲದಿಂದಲೂ ದುಡ್ಡಿನ ಮಹತ್ವ ತಿಳಿದಿದ್ದವರು. ಅಷ್ಟು ಸುಲಭವಾಗಿ ಕೈ ಸಡಿಲಿಸಿ ಕಾಸು ಬಿಚ್ಚುವ ಅಸಾಮಿಯಾಗಿರಲಿಲ್ಲ. ಹಣ ಕೈ ಬಿಚ್ಚಿ ಖರ್ಚು ಮಾಡದ ಗುರುವಿನ ಜಾಯಮಾನ ಅರ್ಚಕರಿಗೆ ತಿಳಿದಿತ್ತು. ಅಷ್ಟಾದರೂ ತಾರಾ ತಿಕಡಿ ಬಾರಾ ಬಗಡಿ ಮಾಡಲೆಣಿಸಿದರು. ಗುರುವಿನ ಬೊಕ್ಕಸದ ಹಣ ಬರಿದಾಗಿಸುವ ಮಸಲತ್ತು ಮಾಡಿದರು. ಗುರುವಿನ ಮೇಲಿದ್ದ, ಕಾರಣವೆ ಇಲ್ಲದ ಹಳೆ ದ್ವೇಷ ತೀರಿಸಿಕೊಳ್ಳಲು ಹವಣಿಸಿದರು. ಆ ಕಾಲಕ್ಕೆ ಟುಮಕಿಪುರದಲ್ಲಿ ಸೈಟಿನ ಬೆಲೆ ಆರ್ಕಾಸು ಮೂರ್ಕಾಸಿನಷ್ಟಿತ್ತು. ಅರ್ಚಕರು ಸುಮಾರು ಹತ್ತು ಗುಂಟೆ ವಿಶಾಲ ಸೈಟೆಂದು ಪಲ್ಗುಣಯ್ಯರ ಹುರಿದುಂಬಿಸಿದರು.

ಹೊಲದೊಡೆ ಯಗೆ ತಾವು ಹೇಳಿದಂತೆ ಕೇಳಿದರೆ ಒಂದಕ್ಕೆ ಎರಡರಷ್ಟು ಬೆಲೆ ಕೊಡಿಸುವ ಆಶ್ವಾಸನೆ ನೀಡಿದರು. ಅರ್ಚಕರ ವಿಷಪೂರಿತ ಸಲಹೆ ಹೊಲದೊಡೆಯಗೆ ಹಿಡಿಸದಾಯಿತು. ಹೊಲದೊಡೆಯ ತಿಗಳರ ಬಜ್ಜಣ್ಣನ ಕೈ ತುಂಬ ಬಯಲಿತ್ತು. ಹಣ ಕಾಸಿನಲ್ಲಿ ಮಾತ್ರ ಕ್ಯಾಬಿ ನೈ ಎನ್ನುವಂತವರು, ಅಷ್ಟಾದರೂ ಪರದ ಹಣ ಆಸ್ತಿಗೆ ಆಸೆಪಟ್ಟವರಲ್ಲ. ಪ್ರೀತಿಯಿಂದ ಬೆಳೆಸಿದ ಮಗಳ ಮದುವೆ ವಿಜೃಂಭಿಸಿ ಮಾಡಬೇಕೆಂದು ಆಸೆಪಟ್ಟಿದ್ದರು ಅಷ್ಟೆ ಮಗಳ ಮೇಲಿದ್ದ ಪ್ರೀತಿ ವಿಜೃಂಭಿಸಿ ಮದುವೆ ಮಾಡಬೇಕೆಂಬ ಅಭಿಲಾಷೆ; ಎರಡೂ ಒಟ್ಟುಗೂಡಿ ಹೊಲ ಮಾರಲು ಪ್ರೇರೇಪಿಸಿದ್ದವು.

ಬಜ್ಜಣ್ಣ ಬ್ರಾಹ್ಮಣರಿಗೆ ಮೋಸ ಮಾಡಬಾರದು ಎಂಬ ಮೂಢ ಮಾತಿನಲ್ಲಿ ನಂಬಿಕೆ ಇಟ್ಟಿದ್ದವರು. ನಂಬಿಕೆ ಅರ್ಚಕರ ಎಣಿಕೆ ಸುಳ್ಳಾಗಿಸಿತ್ತು. ತಾವು ಎಣಿಸಿದ್ದಕ್ಕಿಂತ ಕಡಿಮೆ ಬೆಲೆಗೆ ಸೈಟು ಪಲ್ಗುಣಯ್ಯರ ಕೈ ಸೇರಿತು. ಅವರೆ ಖುದ್ದು ಕಮಲಪುರಕ್ಕೆ ಭೇಟಿ ನೀಡಿ ಪರಿಚಯದ ಗುತ್ತಿಗೆದಾರನ ಕರೆ ತಂದರು. ತಾವು ತಾಲೂಕು ನದ ಮೈಲಣ್ಣನೂ ನಿಯತ್ತಿನ ಮನುಷ್ಯ ಅದರಲ್ಲೂ ಪಲ್ಗುಣಯ್ಯರ ವಿಷಯದಲ್ಲಿ ಅದು ಸ್ವಲ್ಪ ಹೆಚ್ಚಿತ್ತು. ಅದಕ್ಕೆಲ್ಲ ಕಾರಣವೂ ಇತ್ತೆನ್ನಬಹುದು. ಪಲ್ಗುಣಯ್ಯ ಹಿಂದೆ ಕಮಲಪುರ ತಾಲೂಕ ಕಛೇರಿಯಲ್ಲಿ ಇದ್ದರಲ್ಲವೆ? ಆಗಿನ ಕಾಲಕ್ಕೆ ಯಾವ ಫಲಾಪೇಕ್ಷೆಯಿಲ್ಲದೆ ಮೈಲಣ್ಣನ ಐದೆಕರೆ ಗೋಮಾಳ ಜಮೀನಿಗೆ ಒಡೆಯನ ಮಾಡಿದ್ದರು. ಆ ಉಪಕಾರ ಮೈಲಣ್ಣ ಮರೆತಿರಲಿಲ್ಲ. ಅದೀಗ ಪಲ್ಗುಣಯ್ಯರಿಗೆ ಸಹಾಯ ಮಾಡಿತ್ತು. ಅವರು ಹೆಚ್ಚು ಕೈಸುಟ್ಟುಕೊಳ್ಳದಂತೆ ಮೈಲಣ್ಣ ಉತ್ತಮ ಮನೆ ಕಟ್ಟಿ ಪ್ರತ್ಯುಪಕಾರ ಮಾಡಿದ್ದರು. ಮೂರು ಕೊಠಡಿ ಪ್ರತ್ಯೇಕ ಅಡಿಗೆ ಮನೆ, ವಿಶಾಲ ಬಚ್ಚಲು ಎಲ್ಲ ಅನುಕೂಲಕ್ಕೆ ತಕ್ಕಂತಿತ್ತು. ಉಳಿದ ಜಾಗದಲ್ಲಿ ಸುತ್ತ ಎಳ್ಳೆಕಾಯಿ, ಕರಿಬೇವಿನ ಗಿಡ ನೆಟ್ಟು ಮರವಾಗಿ ಬೆಳೆದವು. ನಿಂಬೆ ತುಂಬೆ ಗಿಡ ಎದ್ದು ನಿಂತವು. ಮಾವು ಬೇವಿಗೆ ವ್ಯವಸ್ಥೆಯಾಗಿ ಬಾಳೆಗೂ ನೆಲೆಯಿತ್ತು. ಬಾಗಿಲ ದಾಟಿ ಬಲಕ್ಕೆ ತುಳಸಿ ಕಟ್ಟೆ ನಳ ನಳಿಸಿತ್ತು. ತರಾವರಿ ಹೂ ಗಿಡ ತಲೆ ಎತ್ತಿ ನಿಂತವು. ಮನೆ ಗಾಗುವಷ್ಟು ತರಕಾರಿ ಬೆಳೆಯಲೂ ಅನುಕೂಲವಿತ್ತು. ನೆಲ ಆಗಿದು ಹಸನು ಮಾಡಲು ಪಕ್ಕದಲ್ಲಿ ಇದ್ದ ತೋಟದ ಮಾಲೀಕರ ಮಕ್ಕಳ ಬಲವಿತ್ತು. ಕುಬೇರ ಮೂಲೆಯಲ್ಲಿ ಹತ್ತಡಿ ಆಳದ ಬಾವಿ ಎಲ್ಲ ಅಗತ್ಯಕ್ಕೆ ನೀರುಣಿಸಲು ಸಿದ್ಧವಾಗಿತ್ತು. ಸುತ್ತ ತಡೆಗೋಡೆಯಾಗಿ ಚಕ್ರದಿಮ್ಮನ ಕೋಟೆಯಂತಾಗಿ ಕಿರುತೋಟವೆ ಆಗಿತ್ತು. ಬಜ್ಜಣ್ಣನ ಮನೆಯಿಂದ ಹಾಲು ತುಪ್ಪ ವರ್ತನೆಯಾಗಿ ಮೂವರೂ ಸಂತೃಪ್ತಿಯಲ್ಲಿ ತೇಲಿದರು. ಪಲ್ಲುಣಯ್ಯರ ಜೇಬಿಗೆ ಕಡ್ಡಿ ಆಡಿಸಲು ಬಂದ ಅರ್ಚಕರ ಮುಖ ಇಂಗು ತಿಂದ ಮಂಗನಂತಾಯಿತು. ಆಷ್ಟಾದರೂ ಎಲ್ಲ ತನ್ನಿಂದಲೆ ಎಂದು ಬೀಗಿದರು. ತಮ್ಮ ಮಾತು ಕೇಳಿ ಗುರುವಿನ ಬಾಳಲ್ಲಿ ಬೆಳಕಾಯಿತೆಂದರು.

ಪುಸ್ತಕಗಳಿಗಾಗಿ: 9535764159 ಸಂಪರ್ಕಿಸಿ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ಸಂದರ್ಶನ | ಬದ್ಧತೆ ಮೈಗೂಡಿಸಿಕೊಂಡು ಓದಿದರೆ ಕೋಚಿಂಗ್‌ ಅಗತ್ಯವಿಲ್ಲ

ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) 2023ನೇ ಸಾಲಿನಲ್ಲಿ ನಡೆಸಿದ್ದ ನಾಗರಿಕ...

ಕೊಲೆಗಾರ ಮುಸ್ಲಿಂ; ಬಿಜೆಪಿಯ ತಟ್ಟೆಗೆ ಮೃಷ್ಟಾನ್ನ

ಹುಬ್ಬಳ್ಳಿಯ ಘಟನೆಯಲ್ಲಿ ಎರಡು ಯುವ ಜೀವಗಳು ತಮ್ಮ ಬದುಕನ್ನು ಕಳೆದುಕೊಂಡಿವೆ. ಕೊಲೆಗಾರ...

ಸೌಜನ್ಯ ಹೋರಾಟಗಾರರಿಂದ NOTA ಅಭಿಯಾನ ; ಯಾರಾಗಲಿದ್ದಾರೆ ನೋಟಾದ ಫಲಾನುಭವಿ ?

ನೋಟಾ ಅಭಿಯಾನ ನಡೆಸುತ್ತಿರುವವರು ಸೌಜನ್ಯಪರ ಹೋರಾಟಗಾರರು. ಇವರೆಲ್ಲರೂ ಬಿಜೆಪಿ,ಆರೆಸ್ಸೆಸ್‌, ಭಜರಂಗದಳ, ವಿಎಚ್‌ಪಿ...

ಬ್ರಾಹ್ಮಣರಿಂದ ಬ್ರಾಹ್ಮಣರಿಗೆ ಮೋಸ: 24 ಲಕ್ಷ ಕಳೆದುಕೊಂಡು ಭಿಕ್ಷೆ ಬೇಡುತ್ತಿರುವ ಹೆಬ್ಬಾರ್

ಹೆಬ್ಬಾರ್ ಒಬ್ಬರೇ ಅಲ್ಲ, ಬೆಂಗಳೂರಿನ ಬಸವನಗುಡಿಯ ಬ್ರಾಹ್ಮಣರೆಲ್ಲರೂ ಗುರುರಾಘವೇಂದ್ರ ಬ್ಯಾಂಕಿನ ಗ್ರಾಹಕರೇ...