ಸಾಹಿತಿ ಚದುರಂಗ ಅವರ ಅಭಿಪ್ರಾಯದಂತೆ ಆಲೂರು ವೆಂಕಟರಾಯರು ಬರೆದ ಕರ್ನಾಟಕ ಗಥ ವೈಭವ ಪುಸ್ತಕದ ಆಧಾರದಲ್ಲಿ ಕರ್ನಾಟಕ ಪದವನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು. 1972ರ ಜುಲೈ 18ರಂದು ಸಚಿವ ಸಂಪುಟದಲ್ಲಿ ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ರಾಜ್ಯ ಎಂದು ಮರು ನಾಮಕರಣ ಮಾಡುವ ನಿರ್ಣಯ ಕೈಗೊಳ್ಳಲಾಯಿತು.
1973 ನವೆಂಬರ್ 1ರಂದು ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಣಗೊಳಿಸಲಾಯಿತು. ಮೈಸೂರು ರಾಜ್ಯ ಕರ್ನಾಟಕವೆನ್ನುವ ಹೆಸರಿನ ಮೂಲಕ ಅಧಿಕೃತವಾಗಿ ಗುರುತಿಸಿಕೊಂಡು ಭರ್ತಿ 5೦ ವರ್ಷ ತುಂಬಿದೆ. ಪ್ರಾಚೀನ ಕಾಲದಿಂದಲೂ ಕರ್ನಾಟಕ ಹೆಸರಿಗೆ ಹೋಲಿಕೆಯಾಗುವ ಹೆಸರಿನ ಉಲ್ಲೇಖ ಮಹಾಕಾವ್ಯ, ಶಾಸನಗಳಲ್ಲಿ ನಾವು ಕಾಣಬಹುದು. ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಒಪ್ಪಿಕೊಂಡು ಸಂವಿಧಾನಬದ್ಧವಾಗಿಯೇ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ಮರು ನಾಮಕರಣಗೊಳಿಸಿದ್ದರು. ನಾವು ಈಗಾಗಲೇ ಸುವರ್ಣ ಮಹೋತ್ಸವ ಆಚರಿಸಿದ್ದೇವೆ.
ಮೈಸೂರು ರಾಜ್ಯ ಹುಟ್ಟಿದ್ದು ಹೇಗೆ : 1956ರ ನವೆಂಬರ್ 1ರಂದು ಮದ್ರಾಸ್, ಬಾಂಬೆ, ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ಅಂದು, ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾದ ಹಂಪಿಯಲ್ಲಿ ಒಂದು ರೀತಿಯ ಸಂಭ್ರಮಾಚರಣೆ ನಡೆಸಿದರೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ರೀತಿಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಆದರೆ, ಮೈಸೂರು ರಾಜ್ಯದ ಹೆಸರನ್ನು ಹಳೆ ಮೈಸೂರು ಪ್ರಾಂತ್ಯ ಹೊರತುಪಡಿಸಿ ಇತರ ಭಾಗದ ಕನ್ನಡಿಗರು ಒಪ್ಪಲು ಸಿದ್ಧರಿರಲಿಲ್ಲ. ಇದರ ಪರಿಣಾಮವೇ ಕರ್ನಾಟಕ ಹೆಸರು ರಾಜ್ಯಕ್ಕೆ ಸಿಗುವಂತಾಯಿತು.
ಕರ್ನಾಟಕ ಹೆಸರಿಗಾಗಿ ಹೋರಾಟ: 17 ವರ್ಷಗಳ ಕಾಲ ಕರ್ನಾಟಕ ಹೆಸರಿಗಾಗಿ ರಾಜ್ಯದಲ್ಲಿ ಹೋರಾಟವನ್ನು ನಡೆಸಬೇಕಾದ ಸ್ಥಿತಿ ಬಂದಿತು. ಸದನದ ಹೊರಗಡೆಯ ಹೋರಾಟದ ಜೊತೆಗೆ ಸದನದ ಒಳಗಡೆಯೂ ಚರ್ಚೆಗೆ ಜನಪ್ರತಿನಿಧಿ ದೊಡ್ಡಮೇಟಿ ಅಂದಾನಪ್ಪ ಮುನ್ನುಡಿ ಬರೆದಿದ್ದರು. 1956ರ ಡಿಸೆಂಬರ್ನಲ್ಲಿ ಕರ್ನಾಟಕ ಹೆಸರಿನ ಚರ್ಚೆ ಸುದೀರ್ಘ ಚರ್ಚೆಯಾಯಿತು. 1960ರಲ್ಲಿ ಮತ್ತೊಮ್ಮೆ ಮಂಡನೆಯಾದರೂ ಚರ್ಚೆಗೆ ಬರಲಿಲ್ಲ. ಮೈಸೂರು ರಾಜ್ಯಕ್ಕೆ ನಿಜಲಿಂಗಪ್ಪ ಮುಖ್ಯಮಂತ್ರಿಯಾದರು. ಅವರ ನಂತರ ಕಡಿದಾಳ್ ಮಂಜಪ್ಪ, ಬಿ.ಡಿ ಜತ್ತಿ, ಎಸ್.ಆರ್. ಕಂಠಿ, ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದರೂ ಮೈಸೂರು ರಾಜ್ಯದ ಹೆಸರು ಬದಲಾಯಿಸಲು ಆಗಲಿಲ್ಲ. ಕನ್ನಡಿಗರ ಆಶಯ ಈಡೇರಲು ದೇವರಾಜ ಅರಸು ಬರಬೇಕಾಯಿತು. 1972ರ ಜುಲೈ 18ರಂದು ಸಚಿವ ಸಂಪುಟದಲ್ಲಿ ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ರಾಜ್ಯ ಎಂದು ಮರು ನಾಮಕರಣ ಮಾಡುವ ನಿರ್ಣಯ ಕೈಗೊಳ್ಳಲಾಯಿತು.
ಕರ್ನಾಟಕ ನಾಮಕರಣದ ನಿರ್ಣಯ ಸದನದಲ್ಲಿ ಮಂಡನೆ: ಈ ಎಲ್ಲವುಗಳ ನಡುವೆ 1972ರ ಜುಲೈ 27ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಕರ್ನಾಟಕ ನಾಮಕರಣದ ನಿರ್ಣಯವನ್ನು ಸದನದಲ್ಲಿ ಮಂಡಿಸಿ ಭಾಷಣ ಮಾಡಿದರು. ಈ ನಿರ್ಣಯವನ್ನು ವಿಧಾನಸಭೆ ಅವಿರೋಧವಾಗಿ ಅಂಗೀಕರಿಸಿತು. ವಿಧಾನ ಪರಿಷತ್ ಕೂಡ ಅಂಗೀಕರಿಸಿತು. ನಂತರ 1973ರ ಜುಲೈ 30ರಂದು ಲೋಕಸಭೆಯಲ್ಲಿ ಮತ್ತು ಅದೇ ವರ್ಷ ಆಗಸ್ಟ್ 8ರಂದು ರಾಜ್ಯಸಭೆಯಲ್ಲಿ ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ರಾಜ್ಯ ಎಂದು ಬದಲಾಯಿಸುವ ನಿರ್ಣಯಕ್ಕೆ ಅಂಗೀಕಾರ ಸಿಕ್ಕಿತು.
ಕವಿಗಳು, ಸಾಹಿತಿಗಳು ಕರ್ನಾಟಕ ಹೆಸರಿನ ಪರ ದನಿ ಎತ್ತಿದರು. ಬಿ ಎಂ ಶ್ರೀಕಂಠಯ್ಯ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಟಿ.ಎಸ್. ವೆಂಕಣ್ಣಯ್ಯ, ಅ ನ ಕೃಷ್ಣರಾವ್, ತಿ ತಾ ಶರ್ಮ, ಕುಲಪುರೋಹಿತ ಆಲೂರು ವೆಂಕಟರಾಯರು ಸೇರಿದಂತೆ ಅನೇಕ ಸಾಹಿತಿಗಳು ಶಾಲಾ – ಕಾಲೇಜುಗಳಲ್ಲೂ ಕರ್ನಾಟಕ ಸಂಘ ಹೆಸರಿನಲ್ಲಿ ಸಂಘಗಳನ್ನು ಹುಟ್ಟುಹಾಕಲು ಕಾರಣರಾಗಿ ಮೈಸೂರು ಹಾಗೂ ಕರ್ನಾಟಕ ಎನ್ನುವ ಹೆಸರಿನ ಚರ್ಚೆಯ ಕಾವು ಮತ್ತಷ್ಟು ಹೆಚ್ಚಿಸುವಂತೆ ಮಾಡಿದರು.
ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸುವ ಸಂದರ್ಭದಲ್ಲಿ, ಮೈಸೂರು ಕರ್ನಾಟಕ, ಕನ್ನಡ ನಾಡು, ಮೈಸೂರು ಕನ್ನಡನಾಡು, ಕರ್ಣಾಟಕ, ಕರ್ನಾಟಕ ಹೀಗೆ ಹಲವು ಹೆಸರುಗಳು ಶಿಫಾರಸ್ಸಾಗಿದ್ದವು. ಮುಖ್ಯಮಂತ್ರಿ ದೇವರಾಜ ಅರಸು ಅವರು ಕರ್ನಾಟಕ ಹೆಸರಿಗೆ ಒಪ್ಪಿಗೆ ನೀಡುವಂತೆ ಸದನದಲ್ಲಿ ಮಂಡಿಸಿ ಅಂತಿಮವಾಗಿ, ಅಕ್ಟೋಬರ್ 8ರಂದು ಅಂದಿನ ರಾಷ್ಟ್ರಪತಿ ವಿವಿ ಗಿರಿ ಅವರು ಕರ್ನಾಟಕದ ಹೆಸರಿಗೆ ಅಧಿಕೃತ ಒಪ್ಪಿಗೆ ನೀಡುವ ಮೂಲಕ ಕರ್ನಾಟಕ ರಾಜ್ಯ ಎಂದು ಕರೆಸಿಕೊಳ್ಳಲು ಸಮ್ಮತಿಸಿಕೊಂಡಿತು. 1973ರ ನವೆಂಬರ್ 1ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಸಮ್ಮುಖದಲ್ಲಿ ಪಂಪಾಪತಿ ಹಾಗೂ ಭುವನೇಶ್ವರಿ ದರ್ಶನ ಪಡೆದು ಕರ್ನಾಟಕ ರಾಜ್ಯದ ನಕಾಶೆಗೆ ಪೂಜಿ ಸಲ್ಲಿಸಿ, ಕರ್ನಾಟಕ ಜ್ಯೋತಿ ಬೆಳಗುವ ಮೂಲಕ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಲಾಯಿತು.
ಇದನ್ನೂ ಓದಿ ಈ ದಿನ ಸಂಪಾದಕೀಯ | ಬೇಲೆಕೇರಿ ಬಹುಕೋಟಿ ಹಗರಣದತ್ತ ಮಾಧ್ಯಮಗಳ ಮೌನವೇಕೆ?
ಸಾಹಿತಿ ಚದುರಂಗ ಅವರ ಅಭಿಪ್ರಾಯದಂತೆ ಆಲೂರು ವೆಂಕಟರಾಯರು ಬರೆದ ಕರ್ನಾಟಕ ಗಥ ವೈಭವ ಪುಸ್ತಕದ ಆಧಾರದಲ್ಲಿ ಕರ್ನಾಟಕ ಪದವನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು. ಕರ್ನಾಟಕ ಎಂಬ ಪದ ಕೇವಲ ಹಳೆ ಮೈಸೂರು ಪ್ರಾಂತ್ಯ ಮಾತ್ರವಲ್ಲದೇ ಇಡೀ ಕನ್ನಡ ನಾಡನ್ನು ಸೂಚಿಸುತ್ತದೆ. ಚಾಲುಕ್ಯರು, ರಾಷ್ಟ್ರಕೂಟರು, ಯಾವಾಗಲೂ ತಮ್ಮನ್ನು ಕರ್ನಾಟ ಬಲ ಎಂದು ಕರೆದುಕೊಳ್ಳುತ್ತಿದ್ದರು. ಅಂದರೆ ಕರ್ನಾಟಕದ ಸೈನ್ಯ. ವಿಜಯನಗರ ಸಾಮ್ರಾಜ್ಯವನ್ನು ಮೂಲದಲ್ಲಿ ಕರ್ನಾಟ ಸಾಮ್ರಾಜ್ಯ ಎಂದು ಕರೆದುಕೊಂಡಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ.