ಸಂತೋಷ್‌ ನಿರಪರಾಧಿಯಾದರೆ, ಆರೋಪಿಗಳು ಯಾರು?; ಸೌಜನ್ಯ ಹತ್ಯೆ – ಧರ್ಮಸ್ಥಳದಲ್ಲಿನ ಅಧರ್ಮ: ಈದಿನ.ಕಾಮ್‌ ಸಾಕ್ಷಾತ್‌ ವರದಿ

Date:

ಸಂತೋಷ್ ನಿಜವಾದ ಅಪರಾಧಿಯಲ್ಲ. ನೈಜ ಆರೋಪಿಗಳನ್ನು ಪತ್ತೆ ಹಚ್ಚಿ, ಬಂಧಿಸಬೇಕೆಂದು ಸೌಜನ್ಯ ಕುಟುಂಬ ಮತ್ತು ಹೋರಾಟಗಾರರು ಹೇಳುತ್ತಲೇ ಇದ್ದರು. ಆದರೂ, ತನಿಖಾಧಿಕಾರಿಗಳು ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಈಗ, ಸಂತೋಷ್ ನಿರಪರಾಧಿ ಎಂದು ಘೋಷಿಸಲಾಗಿದೆ. ಹಾಗಾದರೆ ನಿಜವಾದ ಅಪರಾಧಿ ಯಾರು?

ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ನಿರ್ಭಯಾ ಪ್ರಕರಣವಾದ ಸಮಯದಲ್ಲೇ ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣ ನಡೆದಿತ್ತು. ಧರ್ಮಸ್ಥಳದಲ್ಲಿ, 2012ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಮಾಯಕ ಸಂತೋಷ್ ರಾವ್‌ ಅವರನ್ನು ಪೊಲೀಸರು ಬಂಧಿಸಿ, ಬರೋಬ್ಬರಿ 6 ವರ್ಷ ಜೈಲಿನಟ್ಟಿದ್ದರು. ಅಂತಿಮವಾಗಿ, 2023ರ ಜೂನ್ 16ರಂದು ಆತ ನಿರ್ದೋಷಿ ಎಂದು ಸಿಬಿಐ ಕೋರ್ಟ್‌ ತೀರ್ಪು ನೀಡಿದ್ದು, ಪ್ರಕರಣದಿಂದ ಆತನನ್ನು ಖುಲಾಸೆಗೊಳಿಸಿದೆ. ಸಂತೋಷ್ ಆರೋಪ ಮುಕ್ತನಾಗಿದ್ದರೂ, ಸಮಾಜದ ಹಳದಿ ಕಣ್ಣಿಗೆ ಆತನೊಬ್ಬ ಅಪರಾಧಿಯಂತೆಯೇ ಇಂದಿಗೂ ಕಾಣಿಸುತ್ತಿದ್ದಾರೆ. ಆತ ಮತ್ತು ಆತನ ಕುಟುಂಬದ ಬದುಕು ಛಿದ್ರವಾಗಿದೆ.

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ರಾಜ್ಯಾದ್ಯಂತ ತಲ್ಲಣ ಮೂಡಿಸಿತ್ತು. ಕೊಲೆಗೀಡಾದ ಯುವತಿಯ ಕುಟುಂಬದವರು ಯಾರನ್ನು ಈತ ಅಪರಾಧಿಯಲ್ಲವೇ ಅಲ್ಲ ಎನ್ನುತ್ತಿದ್ದರೋ ಆತನನ್ನೇ ಪೊಲೀಸರು ಬಂಧಿಸಿದ್ದರು. ಈಗ ಆ ʼನಿರಪರಾಧಿʼ ಆರೋಪಮುಕ್ತನಾದ. ಹಾಗಾದರೆ, ‘ಅಪರಾಧಿ ಯಾರು’ ಎಂಬ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಪೊಲೀಸ್, ಸಿಐಡಿ ಮತ್ತು ಸಿಬಿಐ ತನಿಖೆಯಲ್ಲಿ ಬೇರೆ ಯಾವ ಆರೋಪಿಗಳ ಉಲ್ಲೇಖವೂ ಇಲ್ಲ. ಕೃತ್ಯವೊಂದು ನಡೆದಿದೆ ಎಂದಾದ ಮೇಲೆ ಅಪರಾಧಿಯೂ ಇರಲೇಬೇಕಲ್ಲವೇ? ಯಾರು ಆರೋಪಿಗಳು ಅಂತ ಸಂತ್ರಸ್ತ ಕುಟುಂಬ ಹೇಳುತ್ತಲೇ ಬಂದಿತ್ತು. ಅವರನ್ನ ಈಗಲಾದರೂ ತನಿಖೆಗೆ ಒಳಪಡಿಸುತ್ತಾರಾ – ಇಲ್ಲವಾ ಎಂಬ ಪ್ರಶ್ನೆಯೊಂದಿಗೆ ಈದಿನ.ಕಾಮ್‌ ಮತ್ತು ನ್ಯೂಸ್‌ ಮಿನಿಟ್ (newsminute English portal) ತಂಡ ಧರ್ಮಸ್ಥಳಕ್ಕೆ ತೆರಳಿ, ಸೌಜನ್ಯಳ ಕುಟುಂಬ ಮತ್ತು ನಿರ್ದೋಷಿ ಸಂತೋಷ್ ಕುಟುಂಬವನ್ನು ಭೇಟಿ ಮಾಡಿತು. ಆ ವೇಳೆ, ಪ್ರಕರಣಕ್ಕೆ ಸಂಬಂಧಿಸಿದ ಹಲವಾರು ಅಂಶಗಳನ್ನು ಆ ಕುಟುಂಬಗಳು ಬಿಚ್ಚಿಟ್ಟಿವೆ. ಆ ಅಂಶಗಳನ್ನು ನಿಮ್ಮ ಮುಂದಿಟ್ಟಿದ್ದೇವೆ. ಓದಿ….

ಅಂದಹಾಗೆ, ಧರ್ಮಸ್ಥಳದಲ್ಲಿ ಉಳ್ಳವರು ಮತ್ತು ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಿದ್ದು ಸೌಜನ್ಯ ಮಾತ್ರವಲ್ಲ, ಅಂತಹ, ಸುಮಾರು 90 ಸೌಜನ್ಯರ ನಿಟ್ಟುಸಿರು ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಕರಗಿಹೋಗಿದೆ. ನೂರಾರು ಕುಟುಂಬಗಳ ಕಣ್ಣೀರು ಮಲೆನಾಡಿನ ಮಳೆಯಲ್ಲಿ ತೊಯ್ದು ಹೋಗಿದೆ. ಆ ಯಾವ ಪ್ರಕರಣಗಳೂ ಪೊಲೀಸ್‌ ಕಡತಗಳಿಂದ ಹೊರ ಬಂದು ತನಿಖೆಯಾಗಲಿಲ್ಲವೆಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಇಂತಹ ನೂರಾರು ಪ್ರಕರಣಗಳ ನಡುವೆ ಬೆಳಕಿಗೆ ಬಂದು, ರಾಜ್ಯದ ಗಮನ ಸೆಳೆದು, ಸಿಬಿಐ ತನಿಖೆವರೆಗೂ ಹೋಗಿದ್ದು ಸೌಜನ್ಯಳ ಪ್ರಕರಣ ಮಾತ್ರ. ಆಕೆಯ ಮೇಲಾದ ದೌರ್ಜನ್ಯ ಮತ್ತು ಕೊಲೆಗೆ ನ್ಯಾಯ ಸಿಗಬೇಕೆಂದು ಇಡೀ ಬೆಳ್ತಂಗಡಿ ದನಿ ಎತ್ತಿದ್ದರ ಪ್ರತಿಫಲವಿದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾಲೇಜಿಗೆ ಹೋದ ಸೌಜನ್ಯ ಮರಳಿ ಬರಲಿಲ್ಲ

ಅಂದು 2012ರ ಅಕ್ಟೋಬರ್ 9, ಸಂಜೆಯ ಸಮಯದಲ್ಲಿ ಹಿಂಗಾರಿನ ಮಳೆ ಅಬ್ಬರಿಸುತ್ತಿತ್ತು. ಮಳೆಯ ನಡುವೆ ಉಜಿರೆಯಲ್ಲಿ ಕಾಲೇಜು ಮುಗಿಸಿ, ಮನೆಗೆ ಹೋಗಲೆಂದು ಧರ್ಮಸ್ಥಳದ ಸ್ನಾನಘಟ್ಟ ಬಸ್‌ ನಿಲ್ಧಾಣದಲ್ಲಿ ಬಂದಿಳಿದ 17 ವರ್ಷದ ಸೌಜನ್ಯ, ಮಳೆಗೆ ಕೊಡೆ ಹಿಡಿದು ತನ್ನ ಮನೆಯತ್ತ ನಡೆದು ಹೊರಟ್ಟಿದ್ದರು. ಬಸ್ ಇಳಿದು ಅರ್ಧ ಕಿ.ಮೀ ನಡೆದಿದ್ದಳೇನೋ, ಅಷ್ಟರಲ್ಲಿ ಅಟಕಾಯಿಸಿಕೊಂಡ ದುರುಳರ ಗುಂಪು ಶಾಂತಿವನದ ಬಳಿ ಆಕೆಯನ್ನು ಅಪಹರಿಸಿತ್ತು.

ಮಗಳು ಮನೆಗೆ ಬಾರದಿದ್ದನ್ನು ಕಂಡ ಕುಟುಂಬ, ಸಂಜೆ 7 ಗಂಟೆಯ ಸುಮಾರಿಗೆ ಸುಮಾರು 350-400 ಮಂದಿಯೊಂದಿಗೆ ಸೌಜನ್ಯಳಿಗಾಗಿ ಹುಡುಕಾಟ ನಡೆಸಿತ್ತು. ಆಕೆ ಬಸ್ ಇಳಿದ ಸ್ಥಳ, ಆಕೆ ಅಪಹರಣಕ್ಕೊಳಗಾದ ಸ್ಥಳ, ತಮ್ಮ ಮನೆಯ ದಾರಿಯುದ್ದಕ್ಕೂ ಒಂದಿಂಚೂ ಬಿಡದೆ ಹುಡುಕಾಡಿದ್ದರು. ಆದರೆ, ಸೌಜನ್ಯ ಪತ್ತೆಯಾಗಿರಲಿಲ್ಲ. ಮಗಳ ಸುಳಿವಿಲ್ಲದೆ, ರಾತ್ರಿ ಕಳೆಯಿತು. ಅಕ್ಟೋಬರ್ 10ರಂದು ಬೆಳಗ್ಗೆ ಸುಮಾರು 7.30ರ ಸಮಯದಲ್ಲಿ ಸೌಜನ್ಯಳ ಮೃತದೇಹ ಆಕೆ ಎಲ್ಲಿಂದ ಕಾಣೆಯಾಗಿದ್ದಳೋ, ಅಲ್ಲಿಂದ ಕೇವಲ 20 ಮೀಟರ್ ದೂರದಲ್ಲಿದ್ದ ತೊರೆಯಾಚೆ ಪೊದೆಯಲ್ಲಿ ಪತ್ತೆಯಾಗಿತ್ತು.

ಸೌಜನ್ಯ

ಆಕೆಯ ದೇಹ ಅರೆ ಬೆತ್ತಲೆಯಾಗಿತ್ತು. ಆಕೆಯ ಕೈಗಳನ್ನು ಮರವೊಂದಕ್ಕೆ ಆಕೆಯದ್ದೇ ದುಪ್ಪಟ್ಟದಿಂದ ಸಡಿಲವಾಗಿ ಕಟ್ಟಲಾಗಿತ್ತು. ಆಕೆಯ ಕಾಲಿನಲ್ಲಿ ರಕ್ತ ಸೋರುತ್ತಿತ್ತು. ಆಕೆಯನ್ನು ಅತ್ಯಾಚಾರಗೈದು, ಹತ್ಯೆಗೈಯಲಾಗಿತ್ತು. ಅತ್ಯಾಚಾರವನ್ನು ಮರೆಮಾಡಲು ಅಪರಾಧಿಗಳು ಆಕೆಯ ಮರ್ಮಾಂಗಕ್ಕೆ ಮಣ್ಣು ಹಾಕಿದ್ದರು. ಆಕೆಯ ಮೃತದೇಹ ಕಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

ಆಕೆಯ ಮೇಲೆ ವಿಕೃತಿ ಮೆರೆದ ದುರುಳರನ್ನು ಬಂಧಿಸಿ, ಶಿಕ್ಷೆ ವಿಧಿಸಬೇಕು. ಸೌಜನ್ಯಳ ಸಾವಿಗೆ ನ್ಯಾಯ ಕೊಡಬೇಕು ಎಂದು ಕುಟುಂಬ ಹೋರಾಟಕ್ಕಿಳಿಯಿತು. ಸಾವಿರಾರು ಮಂದಿ ಕುಟುಂಬದ ಬೆಂಬಲಕ್ಕೆ ನಿಂತರು. ಅಕ್ಟೋಬರ್ 11ರಂದು ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಆರೋಪಿಯನ್ನು ಬಂಧಿಸಲೇಬೇಕಾದ ಒತ್ತಡಕ್ಕೆ ಪೊಲೀಸರು ಸಿಲುಕಿದರು.

ಷಡ್ಯಂತ್ರಕ್ಕೆ ಬಲಿಯಾದ ಸಂತೋಷ್ ರಾವ್

“ಪ್ರಕರಣದಲ್ಲಿ ಯಾರನ್ನಾದರೂ ಮಿಕ ಮಾಡಬೇಕೆಂದು ಪೊಲೀಸರು ಮತ್ತು ಅವರೊಟ್ಟಿಗಿದ್ದ ಕೆಲವು ಉಳ್ಳವರು ಹವಣಿಸುತ್ತಿದ್ದರು. ಆಗ ಅವರಿಗೆ ಸಿಕ್ಕಿದ್ದೇ ಈ ಅಮಾಯಕ ಸಂತೋಷ್ ರಾವ್. ಆತನಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ ಆತನ ಬದುಕನ್ನು ಧರ್ಮಸ್ಥಳದ ವ್ಯವಸ್ಥೆ ನಾಶ ಮಾಡಿತು” ಎಂದು ಸೌಜನ್ಯಳ ಪರ ಹೋರಾಟಗಾರ ತಿಮರೋಡಿ ಆರೋಪಿಸಿದ್ದಾರೆ.

ಅಕ್ಟೋಬರ್ 11ರಂದು ಅತ್ತ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದಾಗಲೇ, ಇತ್ತ ಸಂತೋಷ್ ಧರ್ಮಸ್ಥಳದ ಗೊಮ್ಮಟೇಶ್ವರ ಬೆಟ್ಟದ ಮೆಟ್ಟಿಲುಗಳ ಮೇಲೆ ಕುಳಿತಿದ್ದ. ಏಕಾಏಕಿ ಅಲ್ಲಿಗೆ ಬಂದ ಮಲಿಕ್ ಜೈನ್, ರವಿ ಪೂಜಾರಿ ಸಂತೋಷ್ ಅನ್ನು ಹಿಡಿದು, ಈತನೇ ಅತ್ಯಾಚಾರಿ ಎಂದು ಬೊಬ್ಬೆಹೊಡೆದು, ಥಳಿಸಿದರು. ಪೊಲೀಸರ ಕೈಗಿತ್ತರು. ಪೊಲೀಸರು ಹಿಂದೆ-ಮುಂದೆ ನೋಡದೆ, ಆತನನ್ನು ಎಳೆದೊಯ್ದರು. ಸಂತೋಷ್ ದೇಹದ ಮೇಲೆ ಉಗುರಿನ ಗುರುತುಗಳು ಸೇರಿದಂತೆ 17 ಗಾಯಗಳಿವೆ. ಅವುಗಳನ್ನು ಸೌಜನ್ಯಳೇ ಮಾಡಿದ್ದಾಳೆಂದು ಜಾರ್ಜ್‌ಶೀಟ್‌ನಲ್ಲಿ ಪೊಲೀಸರು ತಿಳಿಸಿದ್ದರು.

ಆರು ವರ್ಷ ಜೈಲು ಶಿಕ್ಷೆ ಅನುಭವಿಸಿದ ಸಂತೋಷ್ ರಾವ್

ಅಕ್ಟೋಬರ್ 13ರಂದು ಸಂತೋಷ್ ತಾನೇ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತ ಸೌಜನ್ಯಳನ್ನು ಮಣ್ಣಸಂಕಕ್ಕೆ ಎಳೆದೊಯ್ದು ಕೃತ್ಯ ಎಸಗಿದ್ದಾಗಿ ತಿಳಿಸಿದ್ದಾನೆ. ಕೃತ್ಯದ ಸ್ಥಳಗಳನ್ನು ತೋರಿಸಿದ್ದಾನೆ. ಸೌಜನ್ಯಳ ಮೃತದೇಹ ಪತ್ತೆಯಾದ 100 ಮೀಟರ್ ದೂರದಲ್ಲಿ ಬಟ್ಟೆಗಳು ಪತ್ತೆಯಾಗಿವೆ ಎಂದು ಪೊಲೀಸರು ನ್ಯಾಯಾಲಯದಲ್ಲಿ ಹೇಳಿದ್ದರು.

“ಪ್ರಕರಣದಲ್ಲಿ ತಾನೇ ಅಪರಾಧಿಯೆಂದು ಒಪ್ಪಿಕೊಳ್ಳುವಂತೆ ಆತನಿಗೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಥಳಿಸಿದರು. ತಾನೇ ಆರೋಪಿ ಎಂದು ಒಪ್ಪಿಕೊಳ್ಳುವಂತೆ ಬೆದರಿಕೆ ಹಾಕಿದರು. ಯಾರನ್ನೋ ರಕ್ಷಿಸಲು ಒಬ್ಬ ಅಮಾಯಕನನ್ನು ಪ್ರಕರಣದಲ್ಲಿ ಬಲಿಪಶು ಮಾಡಲು ವ್ಯವಸ್ಥಿತ ಸಂಚನ್ನು ಎಲ್ಲರೂ ಹೆಣೆದಿದ್ದರು. ಸಂಚಿಗೆ ಬಲಿಯಾದ ಸಂತೋಷ್ 6 ವರ್ಷ ಜೈಲಿನಲ್ಲಿರಬೇಕಾಯಿತು” ಎಂದು ತಿಮರೋಡಿ ಆರೋಪಿಸಿದ್ದಾರೆ.

ಸಂತೋಷ್ ರಾವ್ ನಿರ್ದೋಷಿ ಎಂದ ಸಿಬಿಐ ಕೋರ್ಟ್

ಸಂತೋಷ್ ರಾವ್ ವಿರುದ್ಧ ಬೆಳ್ತಂಗಡಿ ಪೊಲೀಸರು, ಸಿಐಡಿ ಮತ್ತು ಅಂತಿಮವಾಗಿ ಸಿಬಿಐ ನಡೆಸಿದ ತನಿಖೆಯು ಪ್ರಾಥಮಿಕವಾಗಿ ಮೂರು ವಿಷಯಗಳನ್ನು ಆಧರಿಸಿದೆ: ಅವರ ತಪ್ಪೊಪ್ಪಿಗೆ, ಅವರ ಬಟ್ಟೆಗಳನ್ನು ವಶಪಡಿಸಿಕೊಂಡಿರುವುದು ಮತ್ತು ಅವರ ದೇಹದ ಮೇಲಿನ ಗಾಯದ ಗುರುತುಗಳು. ಆದರೆ ಇವುಗಳಲ್ಲಿ ಯಾವುದೂ ಅತ್ಯುನ್ನತ ಸಾಕ್ಷಿಗಳಲ್ಲ ಅಥವಾ ಸಂತೋಷ್ ರಾವ್ ಅವರನ್ನು ಅಪರಾಧಿಯೆಂದು ಸಾಬೀತು ಮಾಡಲು ಇವುಗಳು ಸಾಕಾಗುವುದಿಲ್ಲ ಎಂದು ಸಿಬಿಐ ನ್ಯಾಯಾಲಯ ಹೇಳಿದೆ.

ಅಲ್ಲದೆ, ಸೌಜನ್ಯ ಮೇಲೆನ ಅತ್ಯಾಚಾರಕ್ಕೆ ಸಂಬಂಧಿಸಿದ ವರದಿಯನ್ನೇ ಈ ಮೂರು ತನಿಖೆಗಳು ಸಂಗ್ರಹಿಸಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಇದೆಲ್ಲದರ ನಡುವೆ, ಸಂತೋಷ್ ರಾವ್‌ನನ್ನು ಕಳ್ಳನೆಂದು ಹಿಡಿದುಕೊಟ್ಟೆವೆಂದು ಕೆಲವರು ಹೇಳಿರುವುದಾಗಿ ವರದಿಯಾಗಿದೆ.

ಸಂತೋಷ್‌ ರಾವ್‌ ಅಪರಾಧಿಯೆಂದು ಸಾಬೀತು ಪಡಿಸುವಲ್ಲಿ ಯಾವುದೇ ಸಾಕ್ಷ್ಯಗಳಿಲ್ಲದ ಕಾರಣ, ಅವರನ್ನು ನಿರ್ದೋಷಿಯೆಂದು ಸಿಬಿಐ ನ್ಯಾಯಾಲಯ ಘೋಷಿಸಿದೆ.

“ಸಂತೋಷ್ ಅಪರಾಧಿಯಲ್ಲ ಎಂಬುದು ನಮಗೆ ಮೊದಲೇ ಗೊತ್ತಿತ್ತು. ಆತ ನಿಜವಾದ ಅಪರಾಧಿಯಲ್ಲ. ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿ ಎಂದು ನಾವು ಹೇಳುತ್ತಲೇ ಇದ್ದೆವು. ಕೆಲವರ ವಿರುದ್ಧ ನಮಗೆ ಅನುಮಾನವೂ ಇತ್ತು. ಆದರೆ, ಪೊಲೀಸರು ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಇಲ್ಲಿ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರವನ್ನು ಎಲ್ಲರೂ ಹೆಣೆದಿದ್ದರು” ಎಂದು ಸೌಜನ್ಯ ತಾಯಿ ಕುಸುಮಾವತಿ ಆರೋಪಿಸಿದ್ದಾರೆ.

ಈ ವರದಿ ಓದಿದ್ದೀರಾ?: ಸೌಜನ್ಯ ಪ್ರಕರಣ Exclusive | ಯಾರದ್ದೋ ಷಡ್ಯಂತ್ರಕ್ಕೆ ನಮ್ಮ ಕುಟುಂಬ ಛಿದ್ರಗೊಂಡಿದೆ- ಸುಧಾಕರ ರಾವ್‌

ಧರ್ಮಸ್ಥಳ ಧರ್ಮಾಧಿಕಾರಿಯ ಸೋದರನ ಮಗ ಮತ್ತು ಆತನ ಸ್ನೇಹಿತರ ಮೇಲೆ ಅನುಮಾನ

ಬೆಳ್ತಂಗಡಿ ಪೊಲೀಸರು ಪ್ರಕರಣದ ತನಿಖೆಯನ್ನು ಕೊಂಡೊಯ್ಯುತ್ತಿದ್ದ ರೀತಿಯು ಸೌಜನ್ಯಳ ಕುಟುಂಬ ಮತ್ತು ಊರಿನ ಹಲವರಲ್ಲಿ ಅನುಮಾನವನ್ನು ಹುಟ್ಟುಹಾಕಿತ್ತು. ಸಂತೋಷ್ ರಾವ್ ಅನ್ನು ಹಿಡಿದುಕೊಟ್ಟ ಮಲಿಕ್ ಜೈನ್, ಉದಯ ಜೈನ್ ಮತ್ತು ಧೀರಜ್ ಕೆಲ್ಲಾ ಜೈನ್ ಅವರ ಮೇಲೆ ಸೌಜನ್ಯ ಹೆತ್ತವರು ಮತ್ತು ಹೋರಾಟಗಾರರು ಅನುಮಾನ ವ್ಯಕ್ತಪಡಿಸಿದ್ದರು.

‘ಸೌಜನ್ಯ ನಾಪತ್ತೆಯಾಗುವುದಕ್ಕೂ ಮುನ್ನ ಶವ ಸಿಕ್ಕ ಜಾಗ ಸಮೀಪದಲ್ಲೇ ಈ ಮೂವರು ಅನುಮಾನಾಸ್ಪದವಾಗಿ ಮಾತನಾಡಿಕೊಳ್ಳುತ್ತಿದ್ದರು. ಅದನ್ನು ನಾನೇ ಕೇಳಿಸಿಕೊಂಡಿದ್ದೇನೆ’ ಎಂದು ಸೌಜನ್ಯಳ ಚಿಕ್ಕಮ್ಮ ಹೇಳಿಕೊಂಡಿದ್ದಾರೆ. ಅವರು ಸಂಚು ರೂಪಿಸುತ್ತಿರುವಂತೆ ಮಾತನಾಡಿಕೊಳ್ಳುತ್ತಿದ್ದರು. ಅವರಲ್ಲೊಬ್ಬ, “ಸಿಕ್ಕಾಪಟ್ಟೆ ಮಳೆಯಿದೆ. ಇಲ್ಲೇನು ಮಾಡಲು ಸಾಧ್ಯವಿಲ್ಲ” ಎಂದು ಹೇಳುತ್ತಿದ್ದನೆಂದು ಅವರು ವಿವರಿಸಿರುವುದಾಗಿ ಕುಟುಂಬಸ್ಥರು ಹೇಳುತ್ತಾರೆ.

ಮಲಿಕ್ ಜೈನ್ ಧರ್ಮಸ್ಥಳ ಟ್ರಸ್ಟ್‌ನಲ್ಲಿ ಅಕೌಂಟೆಂಟ್ ಆಗಿದ್ದರೆ, ಧೀರಜ್ ಅನ್ನಪೂರ್ಣ ಟ್ರಸ್ಟ್‌ನ ಹಿರಿಯ ವ್ಯವಸ್ಥಾಪಕರ ಮಗ. ಈ ಮೂವರೂ ಧರ್ಮಸ್ಥಳ ಮಂಜುನಾಥ ದೇವಾಲಯದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆಯವರ ಸೋದರನ ಮಗ ನಿಶ್ಚಲ್ ಜೈನ್ ಅವರ ಸ್ನೇಹಿತರು. ಪ್ರಕರಣದಲ್ಲಿ ಈ ಮೂವರು ಮತ್ತು ನಿಶ್ಚಲ್‌ ಜೈನ್‌ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಸೌಜನ್ಯಳ ಕುಟುಂಬ ಮತ್ತು ಪ್ರತಿಭಟನಾಕಾರರು ಆ ನಾಲ್ವರನ್ನೂ ಬಂಧಿಸಿ, ವಿಚಾರಣೆಗೆ ಒಳಪಡಿಸುವಂತೆ ಒತ್ತಾಯಿಸಿದ್ದರು. ಮಾತ್ರವಲ್ಲ, ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ, ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.

ಧರ್ಮಸ್ಥಳದಲ್ಲಿ ಭಾರೀ ಪ್ರಭಾವ ಹೊಂದಿರುವ ವೀರೇಂದ್ರ ಹೆಗ್ಗಡೆ ಅವರು ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಬಿಜೆಪಿ ಆಡಳಿತದಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ರಾಜಕೀಯ ವಲಯದಲ್ಲಿ ಅವರ ಮಾತಿಗೆ ಎಲ್ಲರೂ ಮಣೆ ಹಾಕುತ್ತಾರೆ. ಆದರೂ, ಸಾರ್ವಜನಿಕ ಒತ್ತಡ ಹೆಚ್ಚುತ್ತಿದ್ದಂತೆ, ನಿಶ್ಚಲ್ ಜೈನ್ ಮತ್ತು ಆತನ ಸ್ನೇಹಿತರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ‘ಸೌಜನ್ಯ ಹತ್ಯೆಯಾದ ದಿನ ತಾನು ನ್ಯೂಯಾರ್ಕ್‌ನಲ್ಲಿದ್ದೆ’ ಎಂದು ನಿಶ್ಚಲ್‌ ಜೈನ್‌ ಹೇಳಿಕೊಂಡಿದ್ದ. ಸಾರ್ವಜನಿಕ ಒತ್ತಡಕ್ಕೆ ಮಣಿದ ಸರ್ಕಾರ, 2013ರಲ್ಲಿ ಸಿಬಿಐ ತನಿಖೆಗೆ ಒಪ್ಪಿಸಿತು.

ಅನುಮಾನಿತರ ವಿರುದ್ಧ ಸರಿಯಾಗಿ ನಡೆಯದ ತನಿಖೆ

“2013ರಲ್ಲಿ ತನಿಖೆ ಆರಂಭಿಸಿದ ಸಿಬಿಐ ಕೂಡ ಸ್ಥಳೀಯ ಪೋಲೀಸರು ನಡೆಸಿದ್ದ ತನಿಖೆಯ ಮಾದರಿಯಲ್ಲಿಯೇ ಮುಂದುವರೆಯಿತು. ಸಂತೋಷ್ ರಾವ್‌ನನ್ನು ಅಪರಾಧಿ ಎಂದು ಸಾಬೀತುಪಡಿಸುವ ನಿಟ್ಟಿಯಲ್ಲಿಯೇ ಸಿಬಿಐ ನಡೆಯುತ್ತಿತ್ತು. 2015ರ ಮಾರ್ಚ್‌ನಲ್ಲಿ ಮಲಿಕ್, ಧೀರಜ್ ಮತ್ತು ಉದಯ್‌ನನ್ನು ಬ್ರೈನ್ ಮ್ಯಾಪಿಂಗ್ ಮತ್ತು ಮಂಪರು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಿಬಿಐ ಹೇಳಿದೆ. ಆದರೆ, ಈ ಮೂವರನ್ನೂ ಸರಿಯಾದ ಮತ್ತು ಹೆಚ್ಚಿನ ತನಿಖೆಗೆ ಒಳಪಡಿಸಿಲ್ಲ” ಎಂದು ಈ ದಿನ.ಕಾಮ್‌ ಜೊತೆ ಮಾತನಾಡಿದ ಹೋರಾಟಗಾರ ತಿಮರೋಡಿ ಆರೋಪಿಸಿದ್ದಾರೆ.

ಪ್ರಕರಣದ ಆರೋಪಪಟ್ಟಿಯಲ್ಲಿ ಸಂತೋಷ್ ಅವರನ್ನು ಏಕೈಕ ಆರೋಪಿ ಎಂದು ಹೆಸರಿಸಲಾಗಿದೆ. ಸಾಕ್ಷಿ ಹೇಳಿಕೆಗಳು ಮತ್ತು ಸಾಕ್ಷ್ಯಾಧಾರಗಳ ಹೊರತಾಗಿಯೂ, ಅಪರಾಧದಲ್ಲಿ ಒಬ್ಬನಿಗಿಂತ ಹೆಚ್ಚಿನ ಜನರು ಭಾಗಿಯಾಗಿದ್ದಾರೆಂದು ಸೂಚಿಸುತ್ತದೆ ಎಂದು ಸೌಜನ್ಯ ಕುಟುಂಬ ಹೇಳಿದೆ.

ನಿಶ್ಚಲ್ ಜೈನ್ ಪಾಸ್‌ಪೋರ್ಟ್‌ ಮತ್ತು ವೀರೇಂದ್ರ ಹೆಗಡೆ

ಇಬ್ಬರು ಪ್ರಮುಖ ಸಾಕ್ಷಿಗಳಾದ ಅಶ್ರತ್ ಖಾಲಿದ್ ಮತ್ತು ವರ್ಷಾ ಅವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಲ್ಲ. ಆ ಇಬ್ಬರಲ್ಲಿ ಒಬ್ಬರು ಸೌಜನ್ಯ ಅಪಹರಣವನ್ನು ಕಣ್ಣಾರೆ ಕಂಡಿದ್ದಾಗಿ ಹೇಳಿಕೊಂಡಿದ್ದರು. ಆ ಸಾಕ್ಷಿಗಳು ಅಪರಾಧಿಗಳನ್ನು ಗುರುತಿಸಲು ಸಮರ್ಥರಾಗಿದ್ದರು. ಅವರಿಬ್ಬರು ಪ್ರಕರಣದಲ್ಲಿ ಒಬ್ಬರಿಗಿಂತ ಹೆಚ್ಚು ಆರೋಪಿಗಳಿದ್ದಾರೆಂದು ಶಂಕೆ ವ್ಯಕ್ತಪಡಿದ್ದರು ಎಂದು ತಿಳಿದುಬಂದಿದೆ.

ಈ ಮಧ್ಯೆ ಸೌಜನ್ಯ ತಂದೆ ಚೆನ್ನಪ್ಪಗೌಡ ಅವರು ಈ ಮೂವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಸೇರಿಸಬೇಕು. ವಿಚಾರಣೆಗೆ ಒಳಪಡಿಸಬೇಕೆಂದು ಕೋರಿ ನ್ಯಾಯಾಲಯದ ಮೊರೆ ಹೋದರು. ಆರೋಪಿಗಳ ಪಟ್ಟಿಯಲ್ಲಿ ಈ ಮೂವರ ಹೆಸರನ್ನು ಸೇರಿಸಲು 2016ರಲ್ಲಿ ನ್ಯಾಯಾಲಯ ಅನುಮತಿ ನೀಡಿತು. ಈ ಮೂವರು ಶಂಕಿತರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಸೇರಿಸಲಾಗುತ್ತದೆ ಎಂದು ಕುಟುಂಬ ಭಾವಿಸಿತ್ತು. ಆದರೆ, 2021ರ ಜನವರಿಯಲ್ಲಿ ಈ ಮೂವರು ಹೈಕೋರ್ಟ್ ಮೊರೆ ಹೋಗಿ, ತಮ್ಮ ವಿರುದ್ಧ ವಿಚಾರಣೆ ನಡೆಸದಂತೆ ತಡೆಯಾಜ್ಞೆ ತಂದರು. ತಡೆಯಾಜ್ಞೆ ನೀಡಿದ್ದ ಕೋರ್ಟ್, “ವಿಚಾರಣೆ ಮುಂದುವರಿದ ಹಂತದಲ್ಲಿದ್ದು, ಇನ್ನಷ್ಟು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವುದು ಸೂಕ್ತವಲ್ಲ” ಎಂದು ಹೇಳಿತ್ತು.

ನಿಖರ ಸಾಕ್ಷ್ಯಗಳನ್ನೇ ಸಂಗ್ರಹಿಸದ ಅಧಿಕಾರಿಗಳು

ಪ್ರಕರಣದ ಅಗತ್ಯ ಪುರಾವೆಗಳನ್ನು ಉದ್ದೇಶಪೂರ್ವಕವಾಗಿಯೇ ತನಿಖಾಧಿಕಾರಿಗಳು ನಿರ್ಲಕ್ಷಿಸಿದ್ದರು ಎಂದು ಸೌಜನ್ಯ ಕುಟುಂಬ ಆರೋಪಿಸಿದೆ.

ಸೌಜನ್ಯ ಕಾಣೆಯಾಗಿದ್ದು ಧರ್ಮಸ್ಥಳ ದೇವಸ್ಥಾನದ ಆಡಳಿತ ಮಂಡಳಿ ನಡೆಸುತ್ತಿರುವ ಪ್ರಕೃತಿ ಚಿಕಿತ್ಸಾಲಯ (ಶಾಂತಿವನ) ಗೇಟಿನಿಂದ ಕೇವಲ 200 ಮೀಟರ್ ದೂರದಲ್ಲಿ. ಶಾಂತಿವನದ ಗೇಟ್‌ನಲ್ಲಿ ಸಿಸಿ ಕ್ಯಾಮೆರಾವಿದೆ. ಆದರೆ, ಪೊಲೀಸರು ಸಿಸಿಟಿವಿ ಫೂಟೇಜ್‌ಗಳನ್ನು ಪಡೆದುಕೊಂಡಿಲ್ಲ. ‘ಸಿಸಿ ಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲು ನಾವು ತಲೆಕೆಡಿಸಿಕೊಂಡಿಲ್ಲ’ ಎಂದು ಸಬ್ ಇನ್‌ಸ್ಪೆಕ್ಟರ್ ಯೋಗೀಶ್ ಕುಮಾರ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಮುಖ್ಯರಸ್ತೆಯ ಪಕ್ಕದಲ್ಲಿದ್ದ ಆ ಕ್ಯಾಮೆರಾದ ಫೂಟೇಜ್‌ಗಳು ಪ್ರಕರಣದಲ್ಲಿ ನಿರ್ಣಾಯಕ ಸಾಕ್ಷ್ಯವನ್ನು ಒದಗಿಸುತ್ತಿತ್ತು ಎಂದು ಸಂತ್ರಸ್ತೆಯ ಕುಟುಂಬ ಹೇಳಿದೆ.

ಸೌಜನ್ಯ ನಾಪತ್ತೆಯಾಗಿದ್ದ ಸ್ಥಳದ ಬಳಿಯ ಶಾಂತಿವನ ಗೇಟ್

ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಸಂತ್ರಸ್ತೆ ಒಳಉಡುಪು ಆಕೆ ಪತ್ತೆಯಾದಾಗ, ಆಕೆಯ ದೇಹದ ಮೇಲೆ ಇರಲಿಲ್ಲ. ಮನೆಯಿಂದ ಪೊಲೀಸರು ಕೊಂಡೊಯ್ದಿದ್ದರು. ಅಪರಾಧದ ಸ್ಥಳದಲ್ಲಿ ಪತ್ತೆಯಾದ ಬೆರಳಚ್ಚುಗಳು ಮತ್ತು ಚೀಟಿ ಸೇರಿದಂತೆ ನಿರ್ಣಾಯಕ ಪುರಾವೆಗಳನ್ನು ಸಂಗ್ರಹಿಸಲು ತಮ್ಮ ತಂಡ ವಿಫಲವಾಗಿದೆ ಎಂದು ಯೋಗೀಶ್ ಕುಮಾರ್ ಒಪ್ಪಿಕೊಂಡಿದ್ದಾರೆ.

ಅಲ್ಲದೆ, ಸೌಜನ್ಯಳ ಮರಣೋತ್ತರ ಪರೀಕ್ಷೆಯನ್ನು ಮಂದ ಬೆಳಕಿನಲ್ಲಿ ಮಾಡಲಾಗಿದೆ. ಸಂತೋಷ್ ತಾನೇ ಅಪರಾಧಿಯೆಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದನ್ನು ಬಿಟ್ಟರೆ, ಆತನ ವಿರುದ್ಧ ಬೇರಾವುದೇ ಪುರಾವೆಗಳಿಲ್ಲ. ಅವನ, ದೇಹದ ಮೇಲೆ ಕಂಡುಬಂದ ಗಾಯಗಳು ಸಂತ್ರಸ್ತೆ ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಆಗಿರುವ ಗಾಯಗಳೆಂದು ಪೊಲೀಸರು ಹೇಳಿದ್ದರು. ಆದರೆ, ಆ ಗಾಯಗಳ ಬಗ್ಗೆ ಯಾವುದೇ ತಜ್ಞರು ವರದಿ ನೀಡಿಲ್ಲ ಎಂದು ತನಿಖಾಧಿಕಾರಿ ಭಾಸ್ಕರ್ ರೈ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ. ಸಂತೋಷ್‌ನನ್ನು ಸಾರ್ವಜನಿಕರು ಹಿಡಿದು ಥಳಿಸಿದಾಗ ಆ ಗಾಯಗಳಾಗಿವೆ ಎಂದು ಪರೀಕ್ಷಿಸಿದ ವಿಧಿವಿಜ್ಞಾನ ವೈದ್ಯರು ತಿಳಿಸಿದ್ದಾರೆ.

ಮೂವರು ಜೈನ್ ಯುವಕರ ವಿರುದ್ಧ ಸೌಜನ್ಯ ಕುಟುಂಬದ ಆರೋಪಗಳು

ಸೌಜನ್ಯ ಪ್ರಕರಣದ ನಂತರ ಹೋರಾಟ ಭುಗಿಲೆದ್ದಿತ್ತು. ಎಲ್ಲೆಡೆ ಸೌಜನ್ಯಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಬ್ಯಾನರ್ ಗಳನ್ನು ಕಟ್ಟಲಾಗಿತ್ತು. ಅದರಲ್ಲಿ, ಒಬ್ಬ ಯುವಕ ಸೌಜನ್ಯ ಪರವಾಗಿ ಹೋರಾಟದ ಬ್ಯಾನರ್ ಕಟ್ಟುತ್ತಿದ್ದ. ಆತ ಬ್ಯಾನರ್ ಕಟ್ಟಿ ಮುಂದೆ ಹೋಗುತ್ತಿದ್ದಂತೆಯೇ ಆತನನ್ನು ಜೀಪಿನಲ್ಲಿ ಗುದ್ದಿ, ಹತ್ಯೆ ಮಾಡಲಾಯಿತು. ಅಪಘಾತವೆಂಬಂತೆ ಬಿಂಬಿಸಲಾಯಿತು ಎಂದು ಈದಿನ.ಕಾಮ್‌ ಜೊತೆ ಮಾತನಾಡಿದ ಸೌಜನ್ಯ ಸೋದರಮಾವ ವಿಠಲ್ ಆರೋಪಿಸಿದ್ದಾರೆ.

ಸೌಜನ್ಯ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬನಾಗಿದ್ದ, ಸಂತೋಷ್ ಅವರನ್ನು ಹಿಡಿದುಕೊಟ್ಟಿದ್ದ ಟ್ರಸ್ಟ್ ನ ಕಾವಲುಗಾರ ರವಿ ಪೂಜಾರಿ, ಸೌಜನ್ಯ ಪ್ರಕರಣವಾದ ಆರು ತಿಂಗಳ ಬಳಿಕ ಆತ್ಮಹತ್ಯೆ ಮಾಡಿಕೊಂಡ. ಆತನದ್ದು ಆತ್ಮಹತ್ಯೆಯಲ್ಲ ಕೊಲೆಯೆಂದು ಸೌಜನ್ಯ ಕುಟುಂಬ ಆರೋಪಿಸಿದೆ. “ಆತನ ಸಾವಿನ ದಿನ, ಆತ ನಮ್ಮ ಅಂಗಡಿಗೆ ಬಂದಿದ್ದ. ನಾನು ತಪ್ಪು ಮಾಡಿದೆನೆಂದು ಹೇಳಿ, ಚಹಾ ಕುಡಿದು ಹೋದ. ಬಳಿಕ ಆರು ತಿಂಗಳ ಬಳಿಕ, ಸ್ನಾನಘಟ್ಟದ ಬಳಿಯಿದ್ದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂತು. ಸಾಕ್ಷ್ಯನಾಶಕ್ಕಾಗಿ ಆತನನ್ನು ಹತ್ಯೆ ಮಾಡಲಾಗಿದೆ” ಎಂದು ವಿಠಲ್ ಆರೋಪಿಸಿದ್ದಾರೆ.

ಉದಯ್ ಜೈನ್, ಮಲಿಕ್ ಜೈನ್, ಮಾಜಿ ಶಾಸಕ ಅಭಯಚಂದ್ರ ಜೈನ್ ಮತ್ತು ಧೀರಜ್ ಜೈನ್ (ಎಡದಿಂದ ಬಲಕ್ಕೆ)

ಪ್ರಕರಣದಲ್ಲಿ ಮತ್ತೊಂದು ಸಾಕ್ಷಿಯೆಂದು ಸೌಜನ್ಯ ಕುಟುಂಬ ಹೇಳುತ್ತಿದ್ದ ಧೀರಜ್‌ನ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ ಮಹಿಳೆಯೂ ಆತ್ಮಹತ್ಯೆ ಮಾಡಿಕೊಂಡರು. “ಅದೂ ಕೂಡ ಕೊಲೆ. ಸಿಐಡಿ ಪೊಲೀಸರು ನಮ್ಮನ್ನು ವಿಚಾರಣೆ ನಡೆಸುತ್ತಿದ್ದ ಸಮಯದಲ್ಲಿ ಅತ್ತ ಆಕೆ ಸಾವನ್ನಪ್ಪಿದರು. ಆಕೆ ಸೌಜನ್ಯ ಸಾವಿನ ಮರುದಿನ ಧೀರಜ್‌ನ ಬಟ್ಟೆಯಲ್ಲಿ ರಕ್ತದ ಕಲೆಯನ್ನು ಗಮನಿಸಿದ್ದರು. ಸಿಒಡಿ ಅಧಿಕಾರಿಗಳು ಧೀರಜ್ ಮನೆಗೆ ಹೋಗಿ, ತನಿಖೆ ನಡೆಸಿದರೆ, ಪ್ರಕರಣ ಬಯಲಾಗಬಹುದೆಂಬ ಭಯದಲ್ಲಿ ಆಕೆಯನ್ನು ಹತ್ಯೆಗೈದು, ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಬಿಂಬಿಸಲಾಗಿದೆ” ಎಂದು ಸೌಜನ್ಯ ಪ್ರಕರಣದ ಹೋರಾಟಗಾರ ತಿಮರೋಡಿ ಆರೋಪಿಸಿದ್ದಾರೆ.

ಅಲ್ಲದೆ, ನೇತ್ರಾವತಿ ನದಿ ಬಳಿಕ ಸ್ನಾನಘಟ್ಟದಲ್ಲಿ ಧರ್ಮಸ್ಥಳ ಪಂಚಾಯತಿಯ ಕಟ್ಟಡದಲ್ಲಿ ನಾವು ಅಂಗಡಿ ನಡೆಸುತ್ತಿದ್ದೆವು. ನಮ್ಮ ವಿರುದ್ಧ ಷಡ್ಯಂತ್ರ ರೂಪಿಸಿ, ನಮ್ಮ ಪ್ರಕರಣದಲ್ಲಿ ಸುಮ್ಮನಾಗಿಸಲು ಭಾರೀ ಪ್ರಯತ್ನಗಳು ನಡೆದವು. ಐದು ಸಾವಿರ ಬಾಡಿಗೆ ಇದ್ದ ಕಟ್ಟಡದ ಬಾಡಿಗೆಯನ್ನು ಐದಾರು ಪಟ್ಟು ಹೆಚ್ಚಿಸಿದರು. ಇದರ ಹಿಂದೆ ಧರ್ಮಸ್ಥಳ ಧರ್ಮಾಧಿಕಾರಿಗಳ ಕೈವಾಡವಿದೆ” ಎಂದು ಸೌಜನ್ಯಳ ಸೋದರಮಾವ ವಿಠಲ ದೂರಿದ್ದಾರೆ.

ಸಂತೋಷ್ ನಿರಪರಾಧಿ! ಅಪರಾಧಿಗಳು ಯಾರು?

ಸಂತೋಷ್ ನಿರಪರಾಧಿ ಎಂದು ಸಿಬಿಐ ಕೋರ್ಟ್‌ ಘೋಷಿಸಿದ್ದು, ಆತನನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಆ ಅಮಾಯಕ ಷಡ್ಯಂತ್ರದಿಂದ ಪಾರಾದ. ಹಾಗಿದ್ದರೆ ಅಪರಾಧಿಗಳು ಯಾರು? ಆ ನಿಟ್ಟಿನಲ್ಲಿ ತನಿಖೆ ನಡೆಯಬೇಕು. ಈ ಹಿಂದೆ (2013ರಲ್ಲಿ) ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದ ಸಿದ್ದರಾಮಯ್ಯ ಅವರೇ, ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದಾರೆ. ಅವರು ಮತ್ತೆ ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ, ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ, ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು. ಆ ಮೂವರು ಶಂಕಿತರನ್ನು ವಿಚಾರಣೆ ಒಳಪಡಿಸದಂತೆ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆಯನ್ನು ರದ್ದುಪಡಿಸಿ, ಅವರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಸೌಜನ್ಯ ತಾಯಿ ಕುಸುಮಾವತಿ ಒತ್ತಾಯಿಸಿದ್ದಾರೆ.

ಅಲ್ಲದೆ, 2012ರ ಅಕ್ಟೋಬರ್ 12 ರಂದು ಸಂತೋಷ್ ರಾವ್ ಅವರನ್ನು ಪರೀಕ್ಷಿಸಿದ ಫೋರೆನ್ಸಿಕ್ ಮೆಡಿಸಿನ್ ಪ್ರಾಧ್ಯಾಪಕ ಡಾ. ಮಹಾಬಲ ಶೆಟ್ಟಿ, ಸೌಜನ್ಯ ಅವರ ಮರಣೋತ್ತರ ಪರೀಕ್ಷೆ ನಡೆಸಿದ ಮತ್ತು ಸಂತೋಷ್ ಅವರನ್ನು ಪರೀಕ್ಷಿಸಿ ವೈದ್ಯಕೀಯ ಪರೀಕ್ಷೆಯ ವರದಿ ಬೆಳ್ತಂಗಡಿ ವೈದ್ಯಕೀಯ ಆಸ್ಪತ್ರೆಯ ಸ್ತ್ರೀರೋಗತಜ್ಞ ಡಾ ರಶ್ಮಿ ಎನ್, ಡಾ. ಆದಂ ಹಾಗೂ ಮೊದಲಿಗೆ ಪ್ರಕರಣದ ತನಿಖೆ ನಡೆಸಿದ್ದ ತನಿಖಾಧಿಕಾರಿ ಯೋಗೀಶ್ ಕುಮಾರ್, ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

“ನಮ್ಮ ಮಗಳಿಗೆ ನ್ಯಾಯ ಬೇಕು. ಅಪರಾಧಿಗಳಿಗೆ ಶಿಕ್ಷೆಯಾಗುವುದನ್ನು ನೋಡುವುದಕ್ಕಾಗಿಯೇ ನಾನು ಬದುಕಿದ್ದೇನೆ. ನಾವು ಪದೇ ಪದೇ ಮನವಿ ಮಾಡಿದರೂ ಪೊಲೀಸರು ಮತ್ತು ಸಿಬಿಐ ನಿಜವಾದ ಅಪರಾಧಿಗಳನ್ನು ಹುಡುಕಲಿಲ್ಲ,” ಎಂದು ಕುಸುಮಾವತಿ ಕಿಡಿಕಾರಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಇಷ್ಟು ಕಥೆ ಇದಿಯಾ, ವ್ಯವಸ್ಥೆ ಎಷ್ಟು ಕೆಟ್ಟದಾಗಿದೆ. ಸುಮಾರು ಜನರ ಸಾವು ಆದರೂ, ಯಾರಿಗೂ ಶಿಕ್ಷೆ ಆಗಿಲ್ಲ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಸ ಸುರಿಯುವ ಜಾಗವಾಗಿ ಮಾರ್ಪಟ್ಟ ಬೆಂಗಳೂರಿನ ಮೇಲ್ಸೇತುವೆಗಳು!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಹನ ಸವಾರರಿಗೆ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ....

ರಾಯಚೂರು | ಅಬಕಾರಿ ಇಲಾಖೆ ದಾಳಿ; ₹500 ಮುಖಬೆಲೆಯ ನೋಟಿನ 62 ಬಂಡಲ್ ಪತ್ತೆ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಳಿಗಲ್ಲಿಯ ಗೌಳಿಯೊಬ್ಬರ ಮನೆಯಲ್ಲಿ ಗೋಣಿ ಚೀಲದ...

2ನೇ ಹಂತದ ಚುನಾವಣೆ | ಮತಗಟ್ಟೆಗೆ ಬಾರದ ಹೆಚ್ಚಿನ ಮತದಾರರು; ಬಿಜೆಪಿ ವಿರೋಧಿ ಅಲೆಯ ಸೂಚನೆಯೇ?

ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಶುಕ್ರವಾರ ಮುಗಿದಿದೆ. 13 ರಾಜ್ಯಗಳ...

ಬೆಂಗಳೂರು | ಆ್ಯಂಬುಲೆನ್ಸ್ ಚಾಲಕನ ಅಚಾತುರ್ಯ: ಸರಣಿ ಅಪಘಾತ

ಆ್ಯಂಬುಲೆನ್ಸ್ ಚಾಲಕನ ಅಚಾತುರ್ಯದಿಂದ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡದಹಳ್ಳಿ...