ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಹಲವು ಆಯಾಮಗಳಲ್ಲಿ ತಮ್ಮ ಬದುಕನ್ನೇ ಅರ್ಪಿಸಿದ ಹಿರಿಯ ಜೀವ ಟಿ.ಆರ್. ಕೃಷ್ಣಪ್ಪನವರಿಗೆ ಈಗ ಎಪ್ಪತ್ತೈದರ ಹರೆಯ. ಈ ಇಳಿವಯಸ್ಸಿನಲ್ಲೂ ಎಲ್ಲಿ ಅನ್ಯಾಯ, ದೌರ್ಜನ್ಯ ಕಂಡರೂ ಅಲ್ಲಿ ದಿಢೀರನೆ ಪ್ರತ್ಯಕ್ಷರಾಗುತ್ತಾರೆ.
ಇಂದು (08.06.2026) ನಾಡಿನ ಬಹುಮುಖ್ಯ ಹೋರಾಟಗಾರರೊಬ್ಬರ ಜನ್ಮದಿನ. ಅವರಿಗಿಂದು ಎಪ್ಪತ್ತೈದು ವರ್ಷಗಳು ಪೂರ್ಣಗೊಳ್ಳುತ್ತಿವೆ. ಇವರ ಹೆಸರು ಟಿ.ಆರ್. ಕೃಷ್ಣಪ್ಪ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಗ್ರಾಮದವರು.
ಕೃಷ್ಣಪ್ಪನವರು ಐವತ್ತು ವರ್ಷಗಳ ಹಿಂದೆಯೇ ಹೋರಾಟದ ಬೀದಿಗೆ ಇಳಿದವರು. ಈ ಇಳಿವಯಸ್ಸಿನಲ್ಲೂ ಟಿ.ಆರ್ ಕೃಷ್ಣಪ್ಪ ಎಲ್ಲಿ ಅನ್ಯಾಯ, ದೌರ್ಜನ್ಯ ಕಂಡರೂ ಅಲ್ಲಿ ದಿಢೀರನೆ ಪ್ರತ್ಯಕ್ಷರಾಗುತ್ತಾರೆ. ತುರ್ತುಪರಿಸ್ಥಿತಿ ವಿರೋಧಿಸಿ ಬಂಧನಕ್ಕೊಳಗಾಗಿ ಜೈಲುವಾಸ ಅನುಭವಿಸಿದ ಹೊಸನಗರ ತಾಲ್ಲೂಕಿನ ಏಕೈಕ ಹೋರಾಟಗಾರರಿವರು. ಬಡವರ ಮೇಲಿನ ಅಧಿಕಾರಶಾಹಿಯ ದೌರ್ಜನ್ಯ, ಭ್ರಷ್ಟಾಚಾರ, ಗ್ರಾಮದ ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಲೆಕ್ಕವಿಲ್ಲದಷ್ಟು ಹೋರಾಟಗಳನ್ನು ಮಾಡಿದ್ದಾರೆ.
ಪ್ರಭಾವಿ ರಾಜಕಾರಣಿಯೊಬ್ಬರ ಶಿವಮೊಗ್ಗದ ಸ್ಟಾರ್ ಹೋಟೆಲ್‌ನಲ್ಲಿ ಮಲದ ಗುಂಡಿ ಸ್ವಚ್ಛಗೊಳಿಸಲು ಬಾವಿಗಿಳಿದ ಕಾರ್ಮಿಕನ ಸಾವಿನ ವಿರುದ್ಧ ಸಂತ್ರಸ್ಥ ಕುಟುಂಬಕ್ಕೆ ಪರಿಹಾರ ದೊರಕಿಸಲು, ಮಾಜಿ ಮುಖ್ಯಮಂತ್ರಿಗಳ ಕಾಲೇಜು ಎದುರಿನ ಬಡವರ ಮನೆಯನ್ನು ನೆಲಸಮಗೊಳಿಸುವ ಪ್ರಯತ್ನ ನಡೆದಾಗ ಮನೆ ನೆಲಸಮಗೊಳಿಸಲು ಬಂದ ಜೆಸಿಬಿ ಎದುರು ಮಲಗಿ ಹೋರಾಟ ಮಾಡಿದ್ದಾರೆ. ಈ ಹೋರಾಟಗಳಿಂದ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ಸಿಕ್ಕಿದೆ, ಬಡವನ ಮನೆ ರಕ್ಷಣೆಯಾಗಿದೆ.
ಪೊಲೀಸ್ ಇಲಾಖೆಯೂ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ ವಿರೋಧಿಸಿ ಕೃಷ್ಣಪ್ಪನವರು ಹಮ್ಮಿಕೊಂಡ ನಿರಂತರ ಪ್ರತಿಭಟನೆಗಳಿಂದ ಕಂಗೆಟ್ಟ ವ್ಯವಸ್ಥೆ ಕೃಷ್ಣಪ್ಪನವರನ್ನು ರೌಡಿ ಎಂದು ಘೋಷಿಸಿ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಎಂದು ಪಟ್ಟಿ ಮಾಡಿತ್ತು. ಸ್ಥಳೀಯ ಗ್ರಾಮ ಪಂಚಾಯತಿಯ ಸದಸ್ಯರು ಕೂಲಿಕಾರ್ಮಿಕರೊಬ್ಬರ ಗುಡಿಸಲನ್ನು ರಾತ್ರೋರಾತ್ರಿ ಕಿತ್ತೆಸೆದಾಗ ಕೃಷ್ಣಪ್ಪ ಸುರಿಯುವ ಮಳೆಯನ್ನು ಲೆಕ್ಕಿಸದೆ ಅದನ್ನು ವಿರೋಧಿಸಿ ಪ್ರತಿಭಟಿಸಿದರು. ಈ ಕುರಿತು ಪ್ರಜಾವಾಣಿ ತನ್ನ ಸಾಪ್ತಾಹಿಕ ಪುರವಣಿಯಲ್ಲಿ ಲೇಖನ ಪ್ರಕಟಿಸಿತ್ತು.
ತಮ್ಮ ಯೌವನದ ಕಾಲದಲ್ಲಿ ಒಮ್ಮೆ ಅವಿರೋಧವಾಗಿ ಗ್ರಾಮ ಪಂಚಾಯತಿ ಸದಸ್ಯನಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ ಕೃಷ್ಣಪ್ಪ ನಂತರ ಚುನಾವಣಾ ರಾಜಕಾರಣ ಕಂಡುಕೊಂಡ ಭ್ರಷ್ಟ ರೂಪಾಂತರವನ್ನು ಕಂಡು ಅದರಿಂದ ದೂರವಾದವರು. ಸ್ಥಳೀಯ ಗ್ರಾಮ ಪಂಚಾಯತಿಯ ಭ್ರಷ್ಟಾಚಾರವನ್ನು ವಿರೋಧಿಸಿ ನಿರಂತರ ಹೋರಾಟ ಹಮ್ಮಿಕೊಂಡಿದ್ದರಿಂದ ಇವರಿಂದ ಗ್ರಾಮ ಪಂಚಾಯತಿಯ ದೈನಂದಿನ ಕೆಲಸಗಳಿಗೆ ಅಡ್ಡಿಯಾಗುತ್ತಿದೆ ಎಂಬ ನೆಪವೊಡ್ಡಿ ಕೃಷ್ಣಪ್ಪನವರನ್ನು ಗಡಿಪಾರು ಮಾಡುವ ನಿರ್ಧಾರ ಕೈಗೊಂಡಿತ್ತು. ಇದರ ವಿರುದ್ಧ ಜನಪರ ಸಂಘಟನೆಗಳು ಪ್ರತಿಭಟಿಸಿದವು ಮತ್ತು ಪ್ರಜಾವಾಣಿ ದಿನಪತ್ರಿಕೆ ಸಂಪಾದಕೀಯ ಬರೆಯಿತು.
ಇದನ್ನು ಓದಿದ್ದೀರಾ?: ಯುದ್ಧ ನಿಲ್ಲಿಸುವವರಿಗೆ ಪ್ರಶ್ನೆಪತ್ರಿಕೆ ಸೋರಿಕೆ ತಡೆಯೋಕೆ ಆಗಲ್ವಾ- ಪಿಎಂ ಮೋದಿಗೆ ಅಭಿಜೀತ್ ದೀಪ್ಕೆ ಪ್ರಶ್ನೆ
ಕೃಷ್ಣಪ್ಪನವರು ಬೆಳೆಯುತ್ತಿರುವ ತಮ್ಮ ಊರು ರಿಪ್ಪನ್ ಪೇಟೆಗೊಂದು ಜೂನಿಯರ್ ಕಾಲೇಜು, ಪದವಿ ಕಾಲೇಜು, ಹೆರಿಗೆ ಆಸ್ಪತ್ರೆ, ಕೆ.ಇ.ಬಿ ಸೆಕ್ಷನ್ ಆಫೀಸ್ ಬೇಕೆಂದು ತಮ್ಮ ಎಳೆ ವಯಸ್ಸಿನ ಮಗನನ್ನು ಕಟ್ಟಿಕೊಂಡು ಹಲವು ಬಾರಿ ಸೈಕಲ್ಲಿನಲ್ಲಿ ತಮ್ಮೂರಿನಿಂದ 300 ಕಿಲೋಮೀಟರ್ ದೂರವಿರುವ ಬೆಂಗಳೂರಿನ ವಿಧಾನಸೌಧಕ್ಕೆ ಸೈಕಲ್ ಜಾಥಾ ನಡೆಸಿ ಅಧಿಕಾರಸ್ಥರ ಕಣ್ಣು ತೆರೆಸಿ ಅವುಗಳನ್ನೆಲ್ಲ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮ ಪಂಚಾಯತಿ, ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಪೊಲೀಸ್ ಠಾಣೆ ಇತ್ಯಾದಿ ಸರ್ಕಾರಿ ಕಚೇರಿಗಳಲ್ಲಿ ಅನೇಕ ವರ್ಷಗಳಿಂದ ಬಗೆಹರಿಯದ ನೂರಾರು ಬಡಜನರ ಸಮಸ್ಯೆಗಳನ್ನು ಕೃಷ್ಣಪ್ಪನವರು ತಮ್ಮ ಹೋರಾಟಗಳ ಮೂಲಕ ಬಗೆಹರಿಸಿ ಕೊಟ್ಟಿದ್ದಾರೆ. ತಮ್ಮ ಊರಿನ ಸಮೀಪದ ರೈಲ್ವೇ ನಿಲ್ದಾಣ ಅರಸಾಳುವಿನಲ್ಲಿ ಅನೇಕ ವರ್ಷಗಳಿಂದ ಇಲಾಖೆ ನಿಲುಗಡೆ ನಿಲ್ಲಿಸಿತ್ತು. ಇದನ್ನು ಪ್ರತಿಭಟಿಸಿ ಕೃಷ್ಣಪ್ಪ ದೀರ್ಘಕಾಲದಿಂದ ಹೋರಾಟ ಮಾಡಿದ್ದರ ಫಲವಾಗಿ ಈಗ ಅರಸಾಳುವಿನಲ್ಲಿ ರೈಲು ನಿಲುಗಡೆಗೊಳ್ಳುತ್ತಿದೆ.

ಇಷ್ಟೆಲ್ಲ ಹೋರಾಟ ಮಾಡುತ್ತಿರುವ ಕೃಷ್ಣಪ್ಪ ಕುಟುಂಬದ ಜವಾಬ್ದಾರಿ ನಿರ್ವಹಿಸಲು ಅರ್ಧಕ್ಕೆ ಶಾಲೆ ಬಿಟ್ಟವರು. ಈವರೆಗೆ ಹಲವು ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಹಮಾಲಿ, ಲಾರಿ ಕ್ಲೀನರ್, ಸಿನಿಮಾ ಮಂದಿರದಲ್ಲಿ ಗೇಟ್ ಕೀಪರ್ ಇತ್ಯಾದಿ. ಸದ್ಯ ಅನೇಕ ವರ್ಷಗಳಿಂದ ಮನೆಗಳಿಗೆ ಪೇಪರ್ ಹಾಕುವ ಕೆಲಸ ಮಾಡುತ್ತಿದ್ದಾರೆ.
ಅರ್ಧ ಶತಮಾನದ ಹಿಂದೆಯೇ ಸರಳ ವಿವಾಹವಾದ ಕೃಷ್ಣಪ್ಪ, ತಮ್ಮ ಮಕ್ಕಳನ್ನೂ ಸರಳವಿವಾಹದ ಮೂಲಕವೇ ಮದುವೆ ಮಾಡಿದ್ದಾರೆ. ಅನೇಕರ ಸರಳವಿವಾಹಗಳನ್ನು ನೆರವೇರಿಸಿದ್ದಾರೆ. ಅನೇಕ ಬಡಮಕ್ಕಳನ್ನು ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ವಿದ್ಯಾಭ್ಯಾಸ ಕೊಡಿಸಿದ್ದಾರೆ. ಈವರೆಗಿನ ತಮ್ಮ ಬದುಕಿನಲ್ಲಿ ನೂರಾರು ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಖಾಯಿಲೆಬಿದ್ದ, ಮನೆಗಳಿಂದ ಹೊರದೂಡಲ್ಪಟ್ಟ ನಾಯಿ, ದನಗಳನ್ನು ಅಕ್ಕರೆಯಿಂದ ಸಾಕಿದ್ದಾರೆ.
ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಹಲವು ಆಯಾಮಗಳಲ್ಲಿ ತಮ್ಮ ಬದುಕನ್ನೇ ಅರ್ಪಿಸಿದ ಹಿರಿಯ ಜೀವ ಟಿ.ಆರ್ ಕೃಷ್ಣಪ್ಪನವರಿಗೆ ಇದುವರೆಗಿನ ಯಾವ ಸರ್ಕಾರಗಳೂ ಕನಿಷ್ಠ ಗೌರವ ಕೊಡುವ ಕೆಲಸ ಮಾಡಿಲ್ಲ. ತಮ್ಮನ್ನು ತಾವೇ ಸಮಾಜವಾದಿ ಎಂದು ಬೆನ್ನು ತಟ್ಟಿಕೊಳ್ಳುವ ಸರ್ಕಾರಗಳು ಈ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಅವರ ಎಪ್ಪತ್ತೈದನೆ ಜನ್ಮದಿನದಂದು ನಾವಾದರೂ ಅವರಿಗೊಂದು ಶುಭಾಶಯ ಕೋರೋಣ. (ಮೊ. 77609 77003)

ಡಾ. ಸರ್ಜಾಶಂಕರ್ ಹರಳಿಮಠ
ಲೇಖಕರು





