ಸರ್ಕಾರಿ ಶಾಲೆಗಳ ಕಣ್ಮರೆ ಎಂದರೆ ಬಹುತ್ವದ ನಾಶ; ಹರಳಿಮಠ ಶಾಲೆಯ ಬೆಳಕಿನ ಕಿರಣಗಳು

Date:

ರಾಜ್ಯಾದ್ಯಂತ ಹರಡಿರುವ ಸರ್ಕಾರಿ ಶಾಲೆಗಳು ಬಹುತ್ವದ ಕೇಂದ್ರಗಳು. ಇವು ಕನ್ನಡದ ಗುರುತುಗಳು ಕೂಡ ಹೌದು. ನಮ್ಮ ಹಳ್ಳಿಗಳ ಸರ್ಕಾರಿ ಶಾಲೆಗಳು ಎಂದಿಗೂ ಮುಚ್ಚದೇ ಜೀವಂತವಾಗಿ ಮುಂದುವರೆಯಲೇ ಬೇಕಾಗಿದೆ. ಏಕೆಂದರೆ ಈ ಶಾಲೆಗಳು ಗುಪ್ತಗಾಮಿನಿಯಾಗಿ ಈ ದೇಶದ ಸೆಕ್ಯುಲರ್ ತತ್ವವನ್ನು ಗಟ್ಟಿಗೊಳಿಸುತ್ತಿವೆ. ಮಕ್ಕಳು ಮತೀಯವಾದದತ್ತ ವಾಲದಂತೆ ತಡೆಯುತ್ತಿವೆ.

ನನ್ನನ್ನು ಧನ್ಯತೆಯಲ್ಲಿ ತೇಲಿಸಿದ ಆ ಎರಡು ದಿನಗಳು ಮರೆಯಾಗಿ ಎರಡು ವಾರಗಳೇ ಕಳೆದು ಹೋದವು. ಆದರೆ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎಂದು ಮನಸ್ಸು ತಹತಹಿಸುತ್ತಿದ್ದರೂ ಮಾತನಾಡಲು ಸಾಧ್ಯವಾಗಲೇ ಇಲ್ಲ. ಗೃಹಸ್ಥನ ಜವಾಬ್ದಾರಿಗಳು, ಅಧ್ಯಾಪಕನ ಉಪನ್ಯಾಸಗಳು, ಕಾಲೇಜು ಕೆಲಸಗಳು ಹೀಗೆ… ಎಲ್ಲ ಮುಗಿಯಲಿ, ಒಂದಷ್ಟು ಹೊತ್ತು ಮೌನವಾಗಿ, ಧ್ಯಾನಸ್ಥನಾಗಿ ಆ ಎರಡು ದಿನಗಳನ್ನು ಮೆಲುಕು ಹಾಕೋಣ ಎಂದು ಕಾದೂ ಇದ್ದೆ. ಆ ಘಳಿಗೆ ಈಗ ಬಂದಿದೆ!

- Advertisement -

ನಾನು ಈಗ ನಿಮ್ಮೊಂದಿಗೆ ಹಂಚಿಕೊಳ್ಳಲು ಹೊರಟಿದ್ದು ನನ್ನ ಊರು ಹರಳಿಮಠ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಶತಮಾನೋತ್ಸವವನ್ನು. ಶತಮಾನೋತ್ಸವ ಎಂದರೆ ನೂರನೇ ವರ್ಷದ ಉತ್ಸವ. ನಮ್ಮ ಶಾಲೆಗೂ ನೂರು ವರ್ಷವಾಗಿತ್ತು. ಇದು ಕಣ್ಣುಬಿಟ್ಟದ್ದು 1925ರಲ್ಲಿ. ಮೊದಲು ಒಂದು ಗುಡ್ಡದ ಸೆರಗಿನಲ್ಲಿದ್ದ ಈ ಶಾಲೆ 1956ರಲ್ಲಿ ಊರೊಳಗೆ ಸ್ಥಳಾಂತರಗೊಂಡಿತು. ಇದೇ ವರ್ಷ ನಮ್ಮ ಪಕ್ಕದ ಊರಾದ ಕಡಿದಾಳಿನ ಮಂಜಪ್ಪನವರು 75 ದಿನಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು. ಹಾಗಾಗಿ ಬಾಷಾಸಾಹೇಬರಿಗೆ ಸ್ಕೂಲ್ ಜಾಗ ಬದಲಾಯಿಸಿದ ಇಸವಿ ಚೆನ್ನಾಗಿ ನೆನಪಿದ್ದಿರಬೇಕು. ಅದನ್ನವರು ಯಾವಾಗಲೋ ತಮ್ಮ ಮಗ ಷಹಬುದ್ದೀನ್ ಹತ್ತಿರ ಹೇಳಿದ್ದರು. ಈ ಸ್ಕೂಲು ಗುಡ್ಡದಿಂದ ಇಳಿದು ಬಂದು ಊರು ಸೇರಿದರೂ ತಾನಿದ್ದ ಗುಡ್ಡಕ್ಕೆ ತನ್ನ ಹೆಸರನ್ನೇ ಇಟ್ಟುಕೊಂಡಿತು. ಈಗಲೂ ಈ ಗುಡ್ಡವನ್ನು ಊರವರು ಇಸ್ಕೂಲು ಗುಡ್ಡ ಎಂದೇ ಕರೆಯುವುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ತನಿಖಾ ವರದಿ | ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ...

ಸರ್ಕಾರದ ಅಧಿಕೃತ ಆದೇಶದ ಪ್ರತಿ ಎಲ್ಲಿದೆ? ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಮನಕ್ಕೂ ಬಾರದ ನೇಮಕಾತಿ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಹೇಗೆ? ಕೊಡವ ಹಾಗೂ ಅರೆಭಾಷೆ ಅಕಾಡೆಮಿಗಳ ಮೇಲೆ ರಾಜಕೀಯ ಹಿಡಿತ ಸಾಧಿಸುವ...

ಉತ್ತರ ಪ್ರದೇಶ | ಜೈಲಿನಿಂದ ಹೊರಬಂದ ಆಜಂ ಖಾನ್:ಚುನಾವಣಾ...

ಹನ್ನೊಂದು ತಿಂಗಳ ಸುದೀರ್ಘ ಜೈಲುವಾಸದ ನಂತರ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿರುವ ಸಮಾಜವಾದಿ ಪಕ್ಷದ (SP) ಹಿರಿಯ ನಾಯಕ ಆಜಂ ಖಾನ್ ಅವರ ಆಕ್ರಮಣಕಾರಿ ಮಾತುಗಳು ಉತ್ತರ ಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆಯ...

ಧರ್ಮಗಳ ಜನಸಂಖ್ಯೆಯ ಲೆಕ್ಕಾಚಾರಕ್ಕಿಂತ ಸಂಪನ್ಮೂಲಗಳ ನ್ಯಾಯಯುತ ಹಂಚಿಕೆಯ ಚರ್ಚೆ...

ಭಾರತದ ಆರ್ಥಿಕತೆ ಬೆಳೆಯುತ್ತಿದೆ ಎಂಬುದು ಒಂದು ವಾಸ್ತವ. ದೇಶದ ಒಟ್ಟು ಆಂತರಿಕ ಉತ್ಪನ್ನ ಹೆಚ್ಚಳ, ಕೈಗಾರಿಕಾ ಬೆಳವಣಿಗೆ, ತಂತ್ರಜ್ಞಾನ ಅಭಿವೃದ್ಧಿ, ಮೂಲಸೌಕರ್ಯ ವಿಸ್ತರಣೆ ಮತ್ತು ಸೇವಾ ವಲಯದ ಪ್ರಗತಿ ಆರ್ಥಿಕ ಬೆಳವಣಿಗೆಯ ಸೂಚಕಗಳಾಗಿವೆ....

ತಮ್ಮೂರಿನ ಸ್ಕೂಲಿಗೆ ನೂರು ವರ್ಷದ ಮೇಲೆ ಒಂದು ವರ್ಷವಾದರೂ ಒಂದು ಕಾರ್ಯಕ್ರಮ ಮಾಡದ ದುಗುಡ ನಮ್ಮೂರ ಜನರಲ್ಲಿತ್ತು. ಕೊನೆಗೆ ಈ ವರ್ಷದ ಗಾಂಧಿ ಜಯಂತಿ ಕಾರ್ಯಕ್ರಮದಂದು ಎಲ್ಲರೂ ಸೇರಿ ಒಂದು ಗಟ್ಟಿ ನಿರ್ಧಾರ ಮಾಡಿಯೇ ಬಿಟ್ಟರು. ಇನ್ನು ಒಂದು ತಿಂಗಳೊಳಗೆ ಈ ಕಾರ್ಯಕ್ರಮವನ್ನು ಜಬರದಸ್ತಾಗಿ ಮಾಡಿಯೇ ಬಿಡಬೇಕು ಎಂದು. ಅಂದೇ ಶತಮಾನೋತ್ಸವ ಸಮಿತಿಯೂ ರಚನೆಯಾಯಿತು. ವಾರದಲ್ಲಿ ಕೆಲಸವೂ ಶುರುವಾಯಿತು.

ಇದನ್ನು ಓದಿದ್ದೀರಾ?: ಅಮೆರಿಕ: ಅಟ್ಲಾಂಟದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ; ಜಾನಪದ ವೈಭವಕ್ಕೆ ಮನಸೋತ ಕನ್ನಡಿಗರು

ಹಗಲು ರಾತ್ರಿ ಯುವಕರ ತಂಡವೇ ಶಾಲೆಯ ಬಳಿ ಜಮಾಯಿಸಿತು. ರಾತ್ರಿ ಹತ್ತು ಗಂಟೆಯಾದರೂ ಗೋಡೆಗೆ ಬಣ್ಣ ಹೊಡೆಯುತ್ತಿದ್ದ ವಿಘ್ನೇಶ, ನಂದೀಶ ಅಥವಾ ಅವಿನಾಶನ ಉತ್ಸಾಹ ಕುಂದಲಿಲ್ಲ. ಅಲ್ಲೇ ಮುಂದೆ ಕಾಂಪೌಂಡಿಗೆ ಬಣ್ಣ ಹೊಡೆಯುತ್ತಿದ್ದ ನಿರಂಜನ, ಅಜೀದ್, ಫಾರೂಕ್, ಮಿಥುನ್, ರತ್ನಾಕರ್ ಅವರ ಉತ್ಸಾಹವೂ ಒಂದಿನಿತೂ ಕಡಿಮೆಯಾಗಲಿಲ್ಲ. ಇವರೆಲ್ಲ ಬಣ್ಣ ಹೊಡೆಯುವ ಧಾವಂತ ನೋಡಿದ ರಾತ್ರಿ ಸ್ಕೂಲಿನ ಮುಂದೆ ಓಡಾಡಿದ ಅಕ್ಕಪಕ್ಕದ ಊರವರು ಇದೊಂದು ಶಾಲೆಯೆಂದು ತಿಳಿಯದೇ ನಾಳೆ ಬೆಳಿಗ್ಗೆಯೇ ಈ ಮನೆಯಲ್ಲಿ ಮದುವೆ ನಡೆಯುತ್ತದೆಯೋ ಎಂದು ಅಚ್ಚರಿಪಟ್ಟು ಮುಂದೆ ಸಾಗುತ್ತಿದ್ದರು. ಹೀಗೆ ಹಗಲು ರಾತ್ರಿ ಶಾಲೆಗೆ ಬಣ್ಣ ಹೊಡೆದು, ಸುತ್ತಮುತ್ತಲ ಆವರಣವನ್ನೆಲ್ಲ ಒಂದೂ ಕಸಕಡ್ಡಿ ಇರದಂತೆ ಸ್ವಚ್ಛಗೊಳಿಸುವಾಗಲೇ ಸಮಾರಂಭದ ದಿನ ಹತ್ತಿರ ಬಂದುಬಿಟ್ಟಿತ್ತು. ಈಗ ಇಡೀ ಊರನ್ನು ವಿದ್ಯುತ್ ದೀಪಗಳಿಂದ ಝಗಮಗಗೊಳಿಸಿದರು. ಎಲ್ಲೆಲ್ಲೂ ಸ್ವಾಗತ ಕಮಾನುಗಳು ಎಲ್ಲರನ್ನೂ ಊರತ್ತ ಸೆಳೆಯತೊಡಗಿದವು.

WhatsApp Image 2026 11 20 at 10.41.44 1

ಶಾಲಾ ಶತಮಾನೋತ್ಸವ ಸಮಿತಿಯ ಒಂದು ತಂಡ ಬೆಂಗಳೂರಿಗೆ ತೆರಳಿತು. ರಮೇಶ, ಪ್ರಕಾಶ, ಯಾಕೂಬ, ಪ್ರದೀಪ, ಸಾಹಿಲ್, ವೀರೇಂದ್ರ, ರಿಯಾಜ್, ಪ್ರೀತಮ್‌ರಿದ್ದ ಈ ತಂಡ ಈ ಶಾಲೆಯಲ್ಲಿ ಕಲಿತು ಈಗ ರಾಜಧಾನಿಯಲ್ಲಿ ಬದುಕು ಕಂಡುಕೊಂಡ ಹಳೆಯ ವಿದ್ಯಾರ್ಥಿಗಳ ಸಭೆ ನಡೆಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಬೆಂಗಳೂರಿನ ಮೂಲೆಮೂಲೆಯಲ್ಲಿದ್ದ ಅನಿವಾಸಿ ಹರಳಿಮಠದವರು ಒಂದು, ಎರಡು ಗಂಟೆ ತಮ್ಮ ಬೈಕುಗಳಲ್ಲಿ ರಾಘು ಮನೆಗೆ ಬಂದರು. ಹರಳಿಮಠ ಶಾಲೆಯಲ್ಲಿ ಕಲಿತ ರಾಘವೇಂದ್ರ ಮತ್ತವರ ಕುಟುಂಬದವರು ನಮಗೆಲ್ಲ ಸ್ವತಃ ಅಡುಗೆ ಮಾಡಿ ಭರ್ಜರಿ ಊಟವನ್ನು ಬಡಿಸಿದರು. ಸಂಜೆ ಸುಧೀರನ ಮನೆಯಲ್ಲಿ ಇಂತಹುದೇ ಭರ್ಜರಿ ಊಟವಾಯಿತು. ಶಾಲೆಯ ಹುಟ್ಟಿದ ಹಬ್ಬದ ಕಾರ್ಯಕ್ರಮಕ್ಕೆ ಮನಬಿಚ್ಚಿ ದೇಣಿಗೆ ನೀಡಿದರು. ಇಲ್ಲಿ ಕಲಿತು ಸ್ವಂತ ಉದ್ದಿಮೆಗಳನ್ನು ಕಟ್ಟಿಕೊಂಡ ಸುಧೀರ, ವಿಜಯ ಮತ್ತು ತನ್ನದೇ ವ್ಯವಹಾರ ನಡೆಸುವ ಅರುಣ ಎಂಬ ಮೂರು ಮಂದಿ ತರುಣರು ಎರಡೂ ದಿನಗಳ ಊಟದ ಲಕ್ಷಾವದಿ ಖರ್ಚಿನ ಭಾರವನ್ನು ಖುಷಿಯಿಂದ ಹೊತ್ತರು. ಸತ್ಯನಾರಾಯಣ, ಚಂದ್ರು, ಗಿರೀಶ ಎಲ್ಲ ಊಟದ ತಯಾರಿಯ ಜವಾಬ್ದಾರಿ ಹೊತ್ತರು. ಇವರಿಗೆ ಸಹಾಯಕರಾಗಿ ಷಹಬುದ್ದೀನ್ ಸೇರಿದಂತೆ ಹತ್ತಾರು ಯುವಕರ ತಂಡವೇ ಇತ್ತು. ಅಭಿ ವೇದಿಕೆಯನ್ನು ಅದ್ಭುತವಾಗಿ ಸಿಂಗರಿಸಿದ್ದ. ಬೆಳ ಬೆಳಿಗ್ಗೆಯೇ ಮನವಿ, ಸಿಂಚನ, ಚೇತನ, ಮಾನಸ ಊರ ಪ್ರವೇಶದ್ವಾರದಲ್ಲಿ, ಸಭಾಂಗಣದ ಅಂಗಳದಲ್ಲಿ ಚಂದದ ರಂಗೋಲಿ ಬಿಡಿಸಿದ್ದರು. ಆಸೀಫ ಮತ್ತು ಶ್ರೀನಾಥನ ತಂಡ ಬೃಹತ್ ಷಾಮಿಯಾನ ಹಾಕಿತ್ತು. ಮೈಸೂರು ದಸರಾಕ್ಕೆ ಸವಾಲೆಸೆಯುವಂತೆ ಇಡೀ ಊರನ್ನು ಗೆಳೆಯರು ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದರು. ಕಾರ್ಯಕ್ರಮ, ದೇಣಿಗೆ ಸಂಗ್ರಹದಂತಹ ಜವಾಬ್ದಾರಿಗಳನ್ನು ರಮೇಶ, ಪ್ರದೀಪ, ಯಾಕೂಬ, ಹೇಮರಾಜ, ನಾಗಲಕ್ಷ್ಮಿ, ರಿಯಾಜ್, ವೀರೇಂದ್ರ, ಪ್ರತಿಮ ಎಲ್ಲ ನಿರ್ವಹಿಸಿದರು. ಮುದ್ದು ತಮ್ಮನಂತಹ ಸಾಹಿಲ್ ಫೋಟೋ, ವೀಡಿಯೋ ತೆಗೆಯುತ್ತ ಎಲ್ಲೆಲ್ಲೂ ಓಡಾಡುತ್ತ ಸಮಾರಂಭಕ್ಕೊದುಂ ಬೆಚ್ಚನೆ ಜೋಷ್ ತರುತ್ತಿದ್ದ.

ನಮ್ಮ ಶಾಲೆಯಲ್ಲಿ ಇದುವರೆಗೂ ಕಲಿಸಿದ ಮೇಷ್ಟ್ರಿಗೆ, ಟೀಚರ್ ಗೆ ಕಾರ್ಯಕ್ರಮದ ಮೊದಲಿಗೆ ಅಭಿನಂದಿಸಲಾಯ್ತು. ಅವರೆಲ್ಲ ಊರವರ ಪ್ರೀತಿ ಕಂಡು ಭಾವುಕರಾದರು. ಸಂಜೆ ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕರಾದ ಶ್ರೀಮತಿ ರತ್ನಾಕುಮಾರಿ ಅವರನ್ನು ಅಭಿನಂದಿಸಿದಾಗಲೂ ಅವರು ಭಾವುಕರಾಗಿದ್ದರು. ಬೆಳಗಿನ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹೋದ ಕಿಮ್ಮನೆ ರತ್ನಾಕರ್ ಅವರು ಹರಳಿಮಠದ ಜನರ ಶಿಸ್ತು, ಬದ್ಧತೆಗೆ ಮಾರು ಹೋಗಿ ತಮ್ಮ ಖುಷಿಯನ್ನು ಎರಡು ಬಾರಿ ನನಗೆ ಫೋನ್ ಮಾಡಿ ತಿಳಿಸಿದರು. ಸಂಜೆ ಆಗಮಿಸಿದ ಆರ್.ಎಂ. ಮಂಜುನಾಥಗೌಡರೂ ಊರು ನೋಡಿ ಹೃದಯ ತುಂಬಿ ಬಂತು ಎಂಬ ಮಾತುಗಳನ್ನಾಡಿದರು.

ಇದನ್ನು ಓದಿದ್ದೀರಾ?: ‘ಬಸವ ಮಂಟಪ’ ಕೃತಿ ಮುಟ್ಟುಗೋಲಿಗೆ ಸರ್ಕಾರ ನಿರ್ಧಾರ: ರವಿ ಹಂಜ್, ವಿಶ್ವೇಶ್ವರ ಭಟ್ ವಿರುದ್ಧ ಎಫ್‌ಐಆರ್

ಎರಡೂ ದಿನಗಳೂ ಬೆಳಗಿನಿಂದ ರಾತ್ರಿ ಹನ್ನೆರಡರ ತನಕ ನಿರಂತರ ಕಾರ್ಯಕ್ರಮಗಳು. ಮೊದಲ ದಿನ ಶಿವಮೊಗ್ಗದ ಕಲಾಕೇಂದ್ರದ ಮಹಿಳಾ ಕಲಾವಿದರಿಂದ ಅದ್ಭುತ ಯಕ್ಷಗಾನ, ಎರಡನೇ ದಿನದ ರಾತ್ರಿ ಕುಂದಾಪುರದ ರೂಪಕಲಾ ಕುಳ್ಳಪ್ಪು ತಂಡದಿಂದ ‘ಗಿರಾಕಿಯೇ ಇಲ್ಲ ಮಾರಾಯಾ’ ಎಂಬ ನಕ್ಕು ನಕ್ಕು ಸುಸ್ತಾಗಿಸಿದ ನಾಟಕ. ವೇದಿಕೆಯ ಬಲಭಾಗದಲ್ಲಿ ಪ್ರಸಿದ್ಧ ಛಾಯಾಚಿತ್ರಗಾರ ಮಂಡಗದ್ದೆಯ ನಟರಾಜ್ ಗೆಳೆಯರಿಂದ ಪಶ್ಚಿಮಘಟ್ಟದ ನೂರಾರು ಬಗೆಯ ಹಾವುಗಳ ಫೋಟೋ ಪ್ರದರ್ಶನ, ಎಡಭಾಗದಲ್ಲಿ ನಿವೃತ್ತ ಶಿಕ್ಷಕ ಮಹಮ್ಮದ್ ಅವರಿಂದ ಅಪರೂಪದ ದೇಶ, ವಿದೇಶಗಳ ನಾಣ್ಯ, ಕರೆನ್ಸಿ ನೋಟುಗಳು, ವೃತ್ತಪತ್ರಿಕೆ, ಬೆಂಕಿಪೊಟ್ಟಣ ಇತ್ಯಾದಿಗಳ ಪ್ರದರ್ಶನ. ಮೊದಲ ದಿನ ಊರವರಿಂದ ರಕ್ತದಾನ, ಎರಡನೆಯ ದಿನ ಅಂದರೆ ನವೆಂಬರ್ ಒಂದರಂದು ರಾಜ್ಯೋತ್ಸವದ ದಿನ ನೂರಾರು ಯುವಕ ಯುವತಿಯರಿಂದ ಕನ್ನಡ ಬಾವುಟ ಹೊತ್ತ ಬೈಕುಗಳ ಸುಮಾರು ಮೂವತ್ತು ಕಿಲೋಮೀಟರುಗಳ ಬೃಹತ್ ಬೈಕ್ ರ್‍ಯಾಲಿ. ವೇದಿಕೆಗೆ ಪುರುಸೊತ್ತೇ ಇರಲಿಲ್ಲ. ಮಕ್ಕಳ ಹಾಡು, ಡ್ಯಾನ್ಸು, ಯುವಕ ಯುವತಿಯರ ಝಲಕ್‌ಗಳು, ಮ್ಯೂಸಿಕಲ್ ಚೇರಿನಂತಹ ಆಟಗಳು. ಮಧ್ಯಾಹ್ನ, ರಾತ್ರಿ ಎಲ್ಲಾ ಹೊತ್ತು ಬಂದ ಸಾವಿರಾರು ಜನರಿಗೆ ಊಟ. ಊಟ ಮುಗಿಸಿ ಜನ ತಮ್ಮ ಮನೆಗೆ ಮರಳುವಾಗ ರಾತ್ರಿ ಹನ್ನೆರಡು ಮೀರಿತ್ತು… ಮತ್ತೆ ಬೆಳಬೆಳಗ್ಗೆಯೇ ಶಾಲೆಗೆ ಬಂದ ಹರಳಿಮಠದ ಗೆಳೆಯರು ಶಾಲೆಯ ಸುತ್ತಮುತ್ತ ಸಂಪೂರ್ಣ ಸ್ವಚ್ಛಗೊಳಿಸಿದರು. ಆಗಲೇ ಮತ್ತೆ ತಮ್ಮ ನಿರ್ಧಾರವನ್ನು ಮತ್ತೆ ನೆನಪು ಮಾಡಿಕೊಂಡರು.

ಈ ನಮ್ಮ ಶಾಲೆಗೆ ಎಲ್ಲ ಮಕ್ಕಳು ಇಷ್ಟಪಟ್ಟು ಬರುವಂತೆ ಶಾಲೆಯನ್ನು ಪುನಃ ಕಟ್ಟುತ್ತೇವೆ. ನೂರು ವರ್ಷದ ಹುಟ್ಟುಹಬ್ಬ ಆಚರಿಸಿದ ನಾವು ಇನ್ನು ಪ್ರತಿವರ್ಷ ಈ ಶಾಲೆಯ ಹುಟ್ಟುಹಬ್ಬ ಆಚರಿಸುತ್ತೇವೆ. ಎಂದಿಗೂ ಈ ಶಾಲೆ ಮುಚ್ಚಿಹೋಗದಂತೆ ಕಾಪಾಡುತ್ತೇವೆ. ಏಕೆಂದರೆ ಈ ಶಾಲೆ ನಮ್ಮ ಊರಿನ ಆತ್ಮ.

WhatsApp Image 2026 11 20 at 10.41.44 2

*

ಹಳ್ಳಿಯ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕು ಎನ್ನುವ ಹಂಬಲದ ಹಿಂದೆ ಎರಡು ಆಶಯಗಳು ಕೆಲಸ ಮಾಡುತ್ತಿರುತ್ತವೆ. ಒಂದನೆಯದು ‘ಏನೇ ಮಿತಿಗಳಿದ್ದರೂ, ಬಡವರು ಶಿಕ್ಷಣ ಪಡೆಯಬೇಕು ಎಂದರೆ ಅವರಿಗಿರುವ ಏಕೈಕ ಆಸರೆ ಸರ್ಕಾರಿ ಶಾಲೆ’ ಎನ್ನುವ ವಾಸ್ತವ. ಎರಡನೆಯದು ‘ಮಾತೃಭಾಷೆಯಾಗಿ ನಮ್ಮ ಭಾಷೆಯನ್ನು ಉಳಿಸಿಕೊಳ್ಳಬೇಕು, ನಮ್ಮ ಭಾಷೆಯನ್ನು ಕಾಪಾಡಿಕೊಳ್ಳಬೇಕು ಎಂದರೆ ಅದು ಸರ್ಕಾರಿ ಶಾಲೆಗಳಿಂದ ಮಾತ್ರ ಸಾಧ್ಯ’ ಎನ್ನುವ ಭಾಷಿಕ ಕಾಳಜಿ.

ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕು ಎನ್ನುವ ಮೇಲೆ ಪ್ರಸ್ತಾಪಿಸಿದ ಎರಡು ಆಶಯಗಳು ಈಗಲೂ ಪರಿಣಾಮಕಾರಿಯಾಗಿ ಸಾಕಾರವಾಗಬೇಕಾದ ಸಂಗತಿಗಳೇ ಆಗಿವೆ. ಆದರೆ ನಮ್ಮ ಹಳ್ಳಿಗಳ ಸರ್ಕಾರಿ ಶಾಲೆಗಳು ಎಂದಿಗೂ ಮುಚ್ಚದೇ ಜೀವಂತವಾಗಿ ಮುಂದುವರೆಯಲೇ ಬೇಕಾಗಿದೆ. ಏಕೆಂದರೆ ಈ ಶಾಲೆಗಳು ಗುಪ್ತಗಾಮಿನಿಯಾಗಿ ಮಹತ್ವದ ಜವಾಬ್ದಾರಿಯೊಂದನ್ನು ನಿರ್ವಹಿಸುತ್ತ ಬಂದಿದೆ.

ಇಡೀ ಊರಿನ ಜನರನ್ನು ಜಾತಿ-ಧರ್ಮಗಳಾಚೆ ಒಂದಾಗಿ ಬೆಸೆಯುವುದೇ ಆ ಮಹತ್ವದ ಜವಾಬ್ದಾರಿಯಾಗಿದೆ. ಇವು ಆ ಊರಿನ ಆತ್ಮ. ಅದಕ್ಕೆ ಹರಳಿಮಠ ಸರ್ಕಾರಿ ಶಾಲೆಯೇ ಒಂದು ಅತ್ಯುತ್ತಮ ಉದಾಹರಣೆ.

ಸ್ವಾತಂತ್ರ್ಯಾನಂತರ ಎಲ್ಲರಿಗೂ ಶಿಕ್ಷಣ ದೊರೆಯಲಾರಂಭಿಸಿದಂತೆ ಸಮಾಜದಲ್ಲಿ ಬೇರೂರಿದ್ದ ಜಾತಿ ತಾರತಮ್ಯ, ಬಡವ-ಶ್ರೀಮಂತರ ಕೀಳರಿಮೆ-ಮೇಲರಿಮೆ, ಅವಮಾನ-ದುರಹಂಕಾರ ಎಲ್ಲವೂ ಶಾಲಾ ಅಂಗಳದಲ್ಲಿಯೂ ಕಾಣಲಾರಂಭಿಸಿತು. ಆ ಕಾಲಘಟ್ಟದ ಸಿನಿಮಾಗಳು ಇವುಗಳನ್ನೆಲ್ಲಾ ಪ್ರತಿಬಿಂಬಿಸಿವೆ. ಆದರೆ ಪರಿಸ್ಥಿತಿ ಇದೇ ರೀತಿ ಮುಂದುವರೆಯಲಿಲ್ಲ. ಈ ಸಮಾಜದ ಎಲ್ಲಾ ಜಾತಿ, ವರ್ಗದ ಮಕ್ಕಳಿಗೆ ಒಂದೇ ಸೂರಿನಡಿ ದೊರೆತ ಶಿಕ್ಷಣ ನಿಧಾನಕ್ಕೆ ತಮ್ಮನ್ನು ತಾವು ಅರಿಯುವುದಕ್ಕೆ ದಾರಿ ಮಾಡಿಕೊಟ್ಟಿತು. ಬಹುತೇಕರಲ್ಲಿ ಜಾತಿ-ವರ್ಗ ಮೀರಿ ಪರಸ್ಪರ ಗೆಳೆತನ ಬೆಸೆಯಲಾರಂಭಿಸಿತು. ಇದು ರಮ್ಯಕಲ್ಪನೆಯಲ್ಲ. ಸ್ವತಃ ಸರ್ಕಾರಿ ಶಾಲೆಯ ವಿದ್ಯಾರ್ಥಿಯಾದ ನನ್ನ ಅನುಭವ. ಇಪ್ಪತ್ತನೆಯ ಶತಮಾನದ ಕೊನೆಯವರೆಗೂ ಈ ಒಂದು ಬದಲಾವಣೆಯ ಗಾಳಿ ಚೇತೋಹಾರಿಯಾಗಿ ಬೀಸುತ್ತ ಊರ ಆರೋಗ್ಯ ಕೆಡದಂತೆ ಕಾಪಾಡತೊಡಗಿತು.

ಇದನ್ನು ಓದಿದ್ದೀರಾ?: ಧರ್ಮಗಳ ಜನಸಂಖ್ಯೆಯ ಲೆಕ್ಕಾಚಾರಕ್ಕಿಂತ ಸಂಪನ್ಮೂಲಗಳ ನ್ಯಾಯಯುತ ಹಂಚಿಕೆಯ ಚರ್ಚೆ ಮುಖ್ಯ

ಆದರೆ ಯಾವಾಗ ಖಾಸಗಿ ಶಾಲಾ ಕಾಲೇಜುಗಳು ತಲೆಯೆತ್ತತೊಡಗಿದವೋ ಪರಿಸ್ಥಿತಿ ಹಿಮ್ಮುಖವಾಗಿ ಚಲಿಸಲಾರಂಭಿಸಿತು. ಉತ್ತಮ ಸಮಾಜ ನಿರ್ಮಾಣ ಮಾಡುವ ಆಶಯಗಳನ್ನಿಟ್ಟುಕೊಂಡು ಕಾರ್ಯನಿರ್ವಹಿಸುವ ಬೆರೆಳೆಣಿಕೆಯ ಖಾಸಗಿ ಶಾಲೆಗಳನ್ನು ಹೊರತುಪಡಿಸಿದರೆ ಬಹುತೇಕ ಖಾಸಗಿ ಶಿಕ್ಷಣವ್ಯಾಪಾರಿಗಳ ಉದ್ದೇಶ ಹಣಗಳಿಕೆಯೇ ಆಗಿದೆ. ಇದರ ಜತೆಜತೆಗೆ ತಮ್ಮ ತಮ್ಮ ಜಾತಿಗಳನ್ನು ಮೆರೆಸುವ ಇವು ಉದ್ದೇಶವನ್ನೂ ಹೊಂದಿದ್ದವು. ಇದೇನು ಗುಪ್ತವಾಗಿರಲಿಲ್ಲ. ಮಠಗಳು, ವಿವಿಧ ಜಾತಿಸಂಘಗಳು ಹಣ ಗಳಿಕೆಯೊಂದಿಗೆ ತಮ್ಮ ಜಾತಿಗಳನ್ನು ಮೆರೆಸುವ ಉದ್ದೇಶವನ್ನು ನಿರ್ಲಜ್ಜವಾಗಿ ಪಾಲಿಸತೊಡಗಿದವು. ಖಾಸಗಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮೇಲ್ಜಾತಿಗಳಲ್ಲಿ ಜಾತಿ ಅಹಂಕಾರ, ಕೆಳಜಾತಿಗಳನ್ನು ಕೀಳರಿಮೆ ಆವರಿಸಿಕೊಳ್ಳತೊಡಗಿತು. ಎರಡನೆಯದಾಗಿ ತಾನು ಹಿಂದೂ, ತಾನು ಮುಸ್ಲಿಮ್, ತಾನು ಕ್ರೈಸ್ತ ಎನ್ನುವ ಭಾವ ಪ್ರಜ್ಞಾಪೂರ್ವಕವಾಗಿ ಮನಸ್ಸಿನಲ್ಲಿ ಗಟ್ಟಿಯಾಗತೊಡಗಿತು. ಇದರ ಆತ್ಯಂತಿಕ ಪರಿಣಾಮದಲ್ಲಿ ಒಂದಷ್ಟು ವಿದ್ಯಾರ್ಥಿಗಳೂ ರಾಜಕೀಯ ಪ್ರೇರಿತ ಕೋಮು ಸಂಘಟನೆಗಳಲ್ಲಿ ಸಕ್ರಿಯರಾಗುತ್ತ, ಕೋಮು ಗಲಭೆಗಳಲ್ಲಿಯೂ ಭಾಗವಹಿಸುತ್ತ ಅದರ ಬಲಿಪಶುಗಳಾಗತೊಡಗಿದರು.

ಈಗ ಖಾಸಗಿ ಶಾಲಾ ಕಾಲೇಜುಗಳ ಹೊಡೆತಕ್ಕೆ ಸರ್ಕಾರಿ ಶಾಲಾ ಕಾಲೇಜುಗಳು ಕುಸಿದುಬೀಳುತ್ತಿವೆ ಎಂಬ ತಿಳಿವಳಿಕೆ ಸಾಮಾನ್ಯವಾಗಿದೆ. ಹೊರನೋಟಕ್ಕೆ ಇದು ನಿಜವೆನಿಸುತ್ತದೆ. ಆದರೆ ಇದರ ಆಳಕ್ಕಿಳಿದು ನೋಡಿದರೆ ಸರ್ಕಾರಿ ಶಿಕ್ಷಣವ್ಯವಸ್ಥೆ ಪಾತಾಳಕ್ಕಿಳಿಯಲು ವ್ಯವಸ್ಥಿತ ಮತ್ತು ಪ್ರಜ್ಞಾಪೂರ್ವಕ ಪ್ರಯತ್ನ ನಿರಂತರವಾಗಿ ನಡೆಯುತ್ತ ಬಂದಿರುವುದನ್ನು ಪತ್ತೆಹಚ್ಚಬಹುದು.

ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ಸಾಕಷ್ಟು ಪ್ರಮಾಣದ ವಿದ್ಯಾರ್ಥಿಗಳ ಪ್ರವೇಶಾತಿ ಇಲ್ಲದೆ ಸೊರಗುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಹೇಗೆ? ವಾಸ್ತವದಲ್ಲಿ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸಮರೋಪಾದಿಯಲ್ಲಿ ಉತ್ಸುಕವಾಗಿದೆ. ಈ ಸಮರಕ್ಕೆ ಕರ್ನಾಟಕ ಪಬ್ಲಿಕ್ ಶಾಲೆಗಳು ಎಂಬ ಬುಲ್ಡೋಜರ್‌ಗಳನ್ನು ಬಳಸಲಾಗುತ್ತಿದೆ. ಇದರೊಂದಿಗೆ ತಕ್ಷಣದಲ್ಲಿ 2000 ಸರ್ಕಾರಿ ಶಾಲೆಗಳನ್ನು ಖಾಸಗಿಯವರ ಜತೆ ಸೇರಿಸುವ ಅಪಾಯಕಾರಿ ನಡೆಗೆ ಸರ್ಕಾರ ಮುಂದಾಗಿದೆ.

ಹೊರನೋಟಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲುಗಳು ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ಒಳ್ಳೆಯ ಪರ್ಯಾಯದಂತೆ ಕಾಣುತ್ತದೆ. ಕೊಂಚ ತಾಳ್ಮೆಯಿಂದ ಈ ಬಗ್ಗೆ ಚಿಂತಿಸಬೇಕಾಗಿದೆ. ಆರಂಭದಲ್ಲಿ ತನ್ನಲ್ಲಿನ ಮೂಲಭೂತ ಶೈಕ್ಷಣಿಕ ಸೌಲಭ್ಯಗಳ ಕಾರಣದಿಂದ ಹಳ್ಳಿಗಳ ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳನ್ನು ಸೆಳೆಯಲು ಕರ್ನಾಟಕ ಪಬ್ಲಿಕ್ ಸ್ಕೂಲುಗಳು ಯಶಸ್ವಿಯಾಗಬಹುದು. ಆದರೆ, ಇವೇ ಕರ್ನಾಟಕ ಪಬ್ಲಿಕ್ ಶಾಲೆಗಳು ಖಾಸಗಿ ಶಾಲೆಗಳ ಉದ್ಯಮಪತಿಗಳಿಗೆ ಇಲ್ಲಿನ ವಿದ್ಯಾರ್ಥಿಗಳನ್ನು ಆರಂಭಿಕ ಶುಲ್ಕವಿನಾಯತಿ ಇತ್ಯಾದಿ ಆಮಿಷ ತೋರಿಸಿ ದೊಡ್ಡ ಪ್ರಮಾಣದಲ್ಲಿ ತಮ್ಮತ್ತ ಸೆಳೆಯಲು ಒಳ್ಳೆಯ ಅವಕಾಶವನ್ನೂ ಸೃಷ್ಟಿಸುತ್ತವೆ. ಅಂದರೆ, ವಿದ್ಯಾರ್ಥಿಸಮೂಹವನ್ನು ತಮ್ಮೆಡೆಗೆ ಸೆಳೆಯಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕರ್ನಾಟಕ ಪಬ್ಲಿಕ್ ಸ್ಕೂಲುಗಳು ದೊಡ್ಡ ಮಾರುಕಟ್ಟೆಯಂತೆ ಬದಲಾಗುವ ಎಲ್ಲಾ ಲಕ್ಷಣಗಳಿವೆ.

WhatsApp Image 2026 11 20 at 10.49.31

ಖಾಸಗಿ ಶಾಲೆಗಳಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚತೊಡಗಿದಂತೆ ಕ್ರಮೇಣ ಕರ್ನಾಟಕ ಪಬ್ಲಿಕ್ ಶಾಲೆಗಳೂ ಮುಚ್ಚತೊಡಗುತ್ತವೆ. ಇದಕ್ಕೆ ಪೂರಕವಾಗಿ ಸರ್ಕಾರದಲ್ಲಿ ನೀತಿ ನಿರೂಪಣೆ ಮಾಡುವ ಅಧಿಕಾರಸ್ಥರೇ ಖಾಸಗಿ ಶಾಲೆಗಳ ಧಣಿಗಳೂ ಆಗಿರುವುದರಿಂದ ಈ ಪಬ್ಲಿಕ್ ಶಾಲೆಗಳನ್ನು ನಿಧಾನಕ್ಕೆ ಮುಚ್ಚುವ ಪ್ರಯತ್ನವನ್ನು ಅವರು ಆರಂಭಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಖಾಸಗಿ ಶಾಲೆಗಳ ಹೊಡೆತಕ್ಕೆ ಅಲ್ಲಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿದರೆ ಒಂದು ಪಬ್ಲಿಕ್ ಶಾಲೆಯ ಆರಂಭದಿಂದ ಬಹಳ ಕಡಿಮೆ ಅವಧಿಯಲ್ಲಿ ಕನಿಷ್ಠ ಒಂದು ನೂರು ಸರ್ಕಾರಿ ಶಾಲೆಗಳು ಮುಚ್ಚಿಬಿಡುತ್ತವೆ. ನೂರು ಸರ್ಕಾರಿ ಶಾಲೆಗಳನ್ನು ಮುಚ್ಚಲು ಕಾರಣವಾಗುವ ಸರ್ಕಾರದ್ದೇ ಆದ ಕರ್ನಾಟಕ ಪಬ್ಲಿಕ್ ಶಾಲೆಯು ಮುಚ್ಚಿಬಿಟ್ಟರೆ ಅಲ್ಲಿಗೆ ಇಡೀ ಶಿಕ್ಷಣ ಕ್ಷೇತ್ರ ಖಾಸಗಿಯವರ ಹಿಡಿತಕ್ಕೆ ಹೋಗಿಬಿಡುತ್ತದೆ. 

ಸರ್ಕಾರಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಬಗ್ಗೆ ನಿಜವಾಗಿ ಕಾಳಜಿಯಿದ್ದರೆ ಈಗಿರುವ ಪ್ರತಿ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಅಗತ್ಯ ಪ್ರಮಾಣದ ಶಿಕ್ಷಕರನ್ನು ಒದಗಿಸಿ, ಮೂಲಭೂತ ಸೌಲಭ್ಯಗಳನ್ನು ನೀಡಿ ಉನ್ನತೀಕರಿಸಲು ಯಾಕೆ ಸಾಧ್ಯವಾಗುವುದಿಲ್ಲ? ಕರ್ನಾಟಕ ಪಬ್ಲಿಕ್ ಸ್ಕೂಲುಗಳಿಗೆ ಖರ್ಚು ಮಾಡಹೊರಟಿರುವ 4600 ಕೋಟಿ ರೂಪಾಯಿಗಳನ್ನು ಹಳ್ಳಿಗಳ ಸಾವಿರಾರು ಶಾಲೆಗಳನ್ನು ಉನ್ನತೀಕರಿಸಲು ಸಾಧ್ಯವಿಲ್ಲವೇ? ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ತೆಗೆದಿರಿಸಿರುವ 4600 ಕೋಟಿ ರೂಪಾಯಿಗಳಲ್ಲಿ ರಾಜಕಾರಣಿಗಳ, ಅಧಿಕಾರಿಗಳ ಪಾಲು ಕಳೆದು ನಿಜಕ್ಕೂ ಈ ಶಾಲೆಗಳಿಗೆ ಖರ್ಚಾಗುವ ಹಣವೆಷ್ಟು? 

ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರದ ಒಂದು ಚುನಾವಣೆ, ಸಾಮಾನ್ಯ ಪೌರತ್ವ ಕಾಯಿದೆ ಹೀಗೆ ಎಲ್ಲವನ್ನೂ ‘ಒಂದು’ ಮಾಡುವ ಕೇಂದ್ರೀಕೃತ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ವಿರೋಧಿ, ಬಹುತ್ವದ ನಾಶ ಇತ್ಯಾದಿ ವ್ಯಾಖ್ಯಾನ ಮಾಡುತ್ತ ವಿರೋಧಿಸುತ್ತಿದೆ. ಆದರೆ ಅದು ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲುಗಳ ಮೂಲಕ ಮಾಡುತ್ತಿರುವುದಾದರೂ ಏನು?

ಇದನ್ನು ಓದಿದ್ದೀರಾ?: ಉನ್ನತ ಹುದ್ದೆಗಳಲ್ಲಿ ಮಹಿಳೆಯರಿದ್ದರೆ ಸಮಾನತೆ ಸಾಧಿಸಿದಂತಲ್ಲ: ನ್ಯಾಯಮೂರ್ತಿ ಬಿ.ವಿ. ನಾಗರತ್ನ!

ರಾಜ್ಯಾದ್ಯಂತ ಹರಡಿರುವ ಸರ್ಕಾರಿ ಶಾಲೆಗಳು ಬಹುತ್ವದ ಕೇಂದ್ರಗಳು. ಇವು ಕನ್ನಡದ ಗುರುತುಗಳು ಕೂಡ ಹೌದು. ನಮ್ಮ ಹಳ್ಳಿಗಳ ಸರ್ಕಾರಿ ಶಾಲೆಗಳು ಎಂದಿಗೂ ಮುಚ್ಚದೇ ಜೀವಂತವಾಗಿ ಮುಂದುವರೆಯಲೇ ಬೇಕಾಗಿದೆ. ಏಕೆಂದರೆ ಈ ಶಾಲೆಗಳು ಗುಪ್ತಗಾಮಿನಿಯಾಗಿ ಈ ದೇಶದ ಸೆಕ್ಯುಲರ್ ತತ್ವವನ್ನು ಗಟ್ಟಿಗೊಳಿಸುತ್ತಿವೆ. ಮಕ್ಕಳು ಮತೀಯವಾದದತ್ತ ವಾಲದಂತೆ ತಡೆಯುತ್ತಿವೆ. ಮಕ್ಕಳು ವ್ಯಕ್ತಿವಾದಿಗಳಾಗುವ ಅಪಾಯವನ್ನು ತಡೆದು ಕುಟುಂಬ ಹಾಗೂ ಸಮಾಜದ ಜೊತೆ ನಿಕಟ ಸಂಬಂಧ ಗಟ್ಟಿಗೊಳಿಸಲು ಅನುವು ಮಾಡಿಕೊಡುತ್ತಿವೆ.

ಮತೀಯವಾದವನ್ನು ಹತ್ತಿಕ್ಕಿ ಸೆಕ್ಯುಲರ್ ಆದ ಬಹುತ್ವದ ಸಮಾಜವನ್ನು ನಿರ್ಮಿಸುತ್ತೇನೆಂದು ಘೋಷಿಸಿಕೊಂಡಿರುವ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ತಾನು ಸಾಗುತ್ತಿರುವ ಹಾದಿ ತನ್ನ ಘೋಷಣೆಗೆ ಪೂರಕವಾಗಿದೆಯೇ ಎಂದು ಒಂದು ಕ್ಷಣ ಯೋಚಿಸಲಿ.

ಸರ್ಕಾರಿ ಶಾಲೆಯ ಅಂಗಳದಲ್ಲಿ ಅಣ್ಣತಮ್ಮಂದಿರಂತೆ ಬದುಕುವ ಹರಳಿಮಠ ಗ್ರಾಮ ಸರ್ಕಾರದ ಕಣ್ಣು ತೆರೆದು ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಹರಡಿರುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಎಲ್ಲಾ ಕ್ರಿಯಾತ್ಮಕ ಪ್ರಯತ್ನಗಳನ್ನು ಮಾಡಲಿ.

WhatsApp Image 2026 11 20 at 10.52.09 1
1417716 531606640266610 1974048228 o
ಡಾ. ಸರ್ಜಾಶಂಕರ್ ಹರಳಿಮಠ
+ posts

ಲೇಖಕರು

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕ: ಅಟ್ಲಾಂಟದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ; ಜಾನಪದ ವೈಭವಕ್ಕೆ ಮನಸೋತ ಕನ್ನಡಿಗರು

ಕರುನಾಡಿನ ಶ್ರೀಮಂತ ಜಾನಪದ ಕಲೆ ಮತ್ತು ಸಂಸ್ಕೃತಿಯ ವೈಭವಯುತ ಅನಾವರಣದೊಂದಿಗೆ ಅಟ್ಲಾಂಟ...

1 ಲಕ್ಷ ಮನೆ, 93 ಸಾವಿರ ನಿವೇಶನ, ₹10,252 ಕೋಟಿ ವೆಚ್ಚದ ಹೆದ್ದಾರಿ ಅಭಿವೃದ್ಧಿಗೆ ಸಂಪುಟ ಅಸ್ತು

ಬೆಂಗಳೂರಿಗೆ ₹2,321 ಕೋಟಿ ವೈಟ್ ಟಾಪಿಂಗ್, 2,000 ಇ–ಬಸ್, ಕೆಪಿಎಸ್‌ಸಿ ಸದಸ್ಯೆ...

ಯುಪಿಯಲ್ಲಿ ಕ್ರಾಂತಿಯಾಗಲಿದೆ, ಪ್ರವಾಹ ಉಕ್ಕಲಿದೆ: ಆಜಮ್ ಖಾನ್ ರಣ ಕಹಳೆ

ಉತ್ತರಪ್ರದೇಶ ಚುನಾವಣೆಯಲ್ಲಿ ಕ್ರಾಂತಿ ಘಟಿಸಲಿದೆ, ಪ್ರವಾಹವೇ ಉಕ್ಕಿ ಹರಿಯಲಿದೆ (ಚುನಾವ್ ನಹೀ...

ನೆರೆಯ ದೇಶ ಭಯೋತ್ಪಾದನೆ ನಿಲ್ಲಿಸದೆ ಮಾತುಕತೆ ಅಸಾಧ್ಯ: ಪಾಕ್ ವಿದ್ಯಾರ್ಥಿ ಪ್ರಶ್ನೆಗೆ ರಾಹುಲ್ ಉತ್ತರ

ಭಾರತದಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲ ಮತ್ತು ಪ್ರೋತ್ಸಾಹವೇ ಉಭಯ ದೇಶಗಳ...