ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಇತ್ತೀಚೆಗೆ ತಮ್ಮ ಆಡಳಿತ ಶೈಲಿಯ ಕುರಿತು ನೀಡಿದ ಹೇಳಿಕೆಯೊಂದು ಇದೀಗ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ. ತಮ್ಮ ಕಟ್ಟುನಿಟ್ಟಾದ ಆಡಳಿತ ಹಾಗೂ ಕೆಲವು ಕಠಿಣ ತೀರ್ಮಾನಗಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅವರು ಜರ್ಮನಿಯ ಕ್ರೂರ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅವರನ್ನು ಪ್ರಸ್ತಾಪಿಸಿರುವುದು ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿಗಳು ಸಾರ್ವಜನಿಕವಾಗಿ ಮಾಡಿದ ಈ ‘ಸ್ವಯಂನಿವೇದನೆ’ಯು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರದ ಪ್ರವೃತ್ತಿಯ ಬಗೆಗಿನ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಆಡಳಿತದಲ್ಲಿ ಶಿಸ್ತು ತರಲು ಹಾಗೂ ವ್ಯವಸ್ಥೆಯಲ್ಲಿ ಬೇರೂರಿರುವ ಭ್ರಷ್ಟಾಚಾರವನ್ನು ಹತ್ತಿಕ್ಕಲು ಕಠಿಣ ನಿರ್ಧಾರಗಳು ಅನಿವಾರ್ಯ ಎಂಬ ಸಂದೇಶವನ್ನು ರೇವಂತ್ ರೆಡ್ಡಿ ನೀಡಿದ್ದರು. ಈ ಸಂದರ್ಭದಲ್ಲಿ, ಕೆಲವು ಕಠಿಣ ಹಾಗೂ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವಾಗ ಹಿಟ್ಲರ್‌ನಂತಹ ಕಟ್ಟುನಿಟ್ಟಿನ ನಿಲುವುಗಳನ್ನು ಅಳವಡಿಸಿಕೊಳ್ಳುವುದು ತಪ್ಪಲ್ಲ ಎಂಬರ್ಥದಲ್ಲಿ ಅವರು ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ. ಪ್ರಜಾಪ್ರಭುತ್ವದ ಅಡಿಪಾಯದಲ್ಲಿ ಆಯ್ಕೆಯಾದ ಮುಖ್ಯಮಂತ್ರಿಯೊಬ್ಬರು, ಜಗತ್ತು ಕಂಡ ಅತ್ಯಂತ ಕ್ರೂರ ಸರ್ವಾಧಿಕಾರಿಯನ್ನು ಉಲ್ಲೇಖಿಸಿ, ಆತನ ಗುಣಲಕ್ಷಣಗಳನ್ನು ತಮ್ಮ ಕಾರ್ಯವೈಖರಿಗೆ ಹೋಲಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಇದನ್ನು ಓದಿದ್ದೀರಾ? 28 ವರ್ಷಗಳ ಟಿಎಂಸಿ ಸಾಮ್ರಾಜ್ಯ ಕೇವಲ 13 ದಿನಗಳಲ್ಲಿ ಕುಸಿದದ್ದು ಹೇಗೆ?
ಈ ವಿವಾದಾತ್ಮಕ ಹೇಳಿಕೆಯ ಬೆನ್ನಲ್ಲೇ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಪ್ರಜಾಪ್ರಭುತ್ವದಲ್ಲಿ ಹಿಟ್ಲರ್‌ನಂತಹ ಸರ್ವಾಧಿಕಾರಿಯ ಮೇಲಿನ ಪ್ರೇಮವನ್ನು ವ್ಯಕ್ತಪಡಿಸುವುದು ಸಂವಿಧಾನಕ್ಕೆ ಮತ್ತು ದೇಶದ ಜನತೆಗೆ ಮಾಡುವ ಬಹುದೊಡ್ಡ ಅಪಚಾರ” ಎಂದು ಖಂಡಿಸಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯನ್ನು ಹಿಂಪಡೆದು, ರಾಜ್ಯದ ಜನರ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಆಡಳಿತರೂಢ ಕಾಂಗ್ರೆಸ್ ವಲಯವು ಮುಖ್ಯಮಂತ್ರಿಗಳ ಈ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಿದೆ. “ರೇವಂತ್ ರೆಡ್ಡಿ ಅವರ ಮಾತಿನ ಮೂಲ ಉದ್ದೇಶ ಸರ್ವಾಧಿಕಾರವನ್ನು ಬೆಂಬಲಿಸುವುದಲ್ಲ; ಬದಲಾಗಿ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಹಾಗೂ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ತಮ್ಮ ಬದ್ಧತೆಯನ್ನು ತೋರಿಸುವುದಷ್ಟೇ ಆಗಿದೆ. ಆದರೆ, ವಿರೋಧ ಪಕ್ಷಗಳು ಈ ಹೇಳಿಕೆಯ ನೈಜ ಅರ್ಥವನ್ನು ಮರೆಮಾಚಿ, ಮಾತುಗಳನ್ನು ತಿರುಚಿ ಕೇವಲ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿವೆ,” ಎಂದು ಹಿರಿಯ ಕಾಂಗ್ರೆಸ್ ಮುಖಂಡರು ಸ್ಪಷ್ಟನೆ ನೀಡಿದ್ದಾರೆ.




