ಭಾರತದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ, ಹೆಚ್ಚು ತೆರಿಗೆ ಕೊಡುಗೆ, ಐಟಿ ರಫ್ತು, ಉದ್ಯೋಗ ಸೃಷ್ಟಿ, ಹೂಡಿಕೆ ಎಲ್ಲದರಲ್ಲೂ ಮುಂದಿರುವ ನಗರ ಬೆಂಗಳೂರು. ದೇಶದ ಆರ್ಥಿಕತೆಗೆ ಭಾರೀ ಕೊಡುಗೆ ಕೊಡುತ್ತಿರುವ ಬೆಂಗಳೂರಿಗೆ ಮರಳಿ ಸಿಗುತ್ತಿರುವ ಮೂಲಸೌಕರ್ಯ ಹೂಡಿಕೆ ತೀರಾ ಕಡಿಮೆ. ಅದರಲ್ಲೂ ಕೇಂದ್ರ ಸರ್ಕಾರವು ಕರ್ನಾಟಕ ಮತ್ತು ಬೆಂಗಳೂರು ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನಗರ ಮತ್ತು ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ. ನಗರದಲ್ಲಿ ರಸ್ತೆ ಗುಂಡಿ ಸೇರಿದಂತೆ ನಾನಾ ಸಮಸ್ಯೆಗಳು ಕಾಡುತ್ತಿವೆ.
ಮೊಲಸೌಕರ್ಯಗಳ ಕೊರತೆಯ ವಿರುದ್ಧ ನಗರ ವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಿರುವಾಗ, ಈ ಬಿಕ್ಕಟ್ಟುಗಳನ್ನು ಪರಿಹಾರಕ್ಕೆ ರಾಜ್ಯ ಸರ್ಕಾರ ಗಮನ ಕೊಡಬೇಕಿತ್ತು. ಆದರೆ, ಸರ್ಕಾರವು ಹೆಬ್ಬಾಳ–ಸಿಲ್ಕ್ ಬೋರ್ಡ್ ಟನೆಲ್ ರಸ್ತೆ ಯೋಜನೆಯ ಅನುಷ್ಠಾನಕ್ಕಾಗಿ ಹಾತೊರೆಯುತ್ತಿದೆ. ಡಿ.ಕೆ ಶಿವಕುಮಾರ್ ಅವರ ಹಿರಿದಾಸೆಯ ಈ ಯೋಜನೆ ಪರಿಸರ ಪ್ರೇಮಿಗಳು ವಿರೋಧಕ್ಕೆ ತುತ್ತಾಗಿದೆ. ಮಾತ್ರವಲ್ಲದೆ, ರಾಜಕೀಯ ವಿರೋಧಕ್ಕೂ ಗುರಿಯಾಗಿದೆ.
ಈ ಯೋಜನೆ ವಿರುದ್ಧ ರಾಜಕೀಯ ಹೋರಾಟದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಲಾಲ್ಬಾಗ್ ರಕ್ಷಣೆಯ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ, ಕರ್ನಾಟಕ ಸರ್ಕಾರಿ ಉದ್ಯಾನಗಳ ಸಂರಕ್ಷಣಾ ಕಾಯ್ದೆಯ ತಿದ್ದುಪಡಿಯನ್ನು ವಿರೋಧಿಸಿದ್ದಾರೆ, ರಾಜ್ಯಪಾಲರಿಗೂ ಮನವಿ ಸಲ್ಲಿಸಿದ್ದಾರೆ. ಟನೆಲ್ ರಸ್ತೆ ಖಾಸಗಿ ಕಾರು ಅವಲಂಬಿತ ಯೋಜನೆ, ಬೆಂಗಳೂರಿಗೆ ಮೆಟ್ರೋ ಹಾಗೂ ಸಾರ್ವಜನಿಕ ಸಾರಿಗೆಯೇ ಮುಖ್ಯ ಪರಿಹಾರ ಎಂದು ವಾದಿಸುತ್ತಿದ್ದಾರೆ.
ಅವರ ಈ ಎಲ್ಲ ವಾದಗಳು ಅಕ್ಷರಶಃ ಒಪ್ಪುವಂತವೇ ಆಗಿವೆ. ಅವರ ಈ ಪ್ರಶ್ನೆಗಳಲ್ಲಿ ಸಾರ್ವಜನಿಕ ಚರ್ಚೆಗೆ ಅರ್ಹವಾದ ಅಂಶಗಳೂ ಇವೆ. ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳ ಯೋಜನೆ ಕೈಗೆತ್ತಿಕೊಂಡಾಗ ಅದರ ಹಣಕಾಸು ಮಾದರಿ, ಪರಿಸರ ಪರಿಣಾಮ, ಸಂಚಾರ ಪ್ರಯೋಜನ ಹಾಗೂ ಸಾರ್ವಜನಿಕ ಹಿತಾಸಕ್ತಿ ಪರಿಶೀಲನೆಗೆ ಒಳಗಾಗಲೇಬೇಕು. ಅದನ್ನು ಬಿಜೆಪಿಗರು ಮಾತ್ರವಲ್ಲ, ಸ್ವತಃ ಆಡಳಿತಾರೂಢ ಕಾಂಗ್ರೆಸ್ಸಿಗರೇ ಮಾಡಿದರೂ ತಪ್ಪಲ್ಲ.
ಆದರೆ, ತೇಜಸ್ವಿ ಸೂರ್ಯ ಅವರು ಕೇವಲ ‘ರಾಜ್ಯ ಸರ್ಕಾರ ಟನಲ್ ವಿರುದ್ಧ ಪ್ರತಿಭಟನೆ ನಡೆಸಿದರೆ ಸಾಕೇ. ಕೇಂದ್ರದಿಂದ ಬೆಂಗಳೂರಿಗೆ ಬರಬೇಕಿರುವ ಅನುದಾನವನ್ನೂ ಬಿಡುಗಡೆ ಮಾಡುವಂತೆ ತಮ್ಮದೇ ಮೋದಿ ಸರ್ಕಾರವನ್ನು ಕೇಳಬೇಕಲ್ಲವೇ’ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ. ಯಾಕೆಂದರೆ, ತೇಜಸ್ವಿ ಸೂರ್ಯ ಅವರು ಸ್ವತಃ ಬೆಂಗಳೂರಿನ ಒಂದು ಭಾಗದ ಸಂಸದರೂ ಆಗಿದ್ದಾರೆ. ನಗರದ ಅಭಿವೃದ್ಧಿ, ಮೂಲಸೌಕರ್ಯಕ್ಕೆ ಕೇಂದ್ರದಿಂದ ಅನುದಾನದ ತರುವ ಹೊಣೆಯೂ ಅವರದ್ದೇ ಆಗಿದೆ.
ಅಂದಹಾಗೆ, 15ನೇ ಹಣಕಾಸು ಆಯೋಗವು ಬೆಂಗಳೂರಿಗೆ 6,000 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದರಲ್ಲಿ, ಬೆಂಗಳೂರಿನ ಮತ್ತು ಸುತ್ತಮುತ್ತಲಿನ ಜಲಮೂಲಗಳ ಅಭಿವೃದ್ಧಿಗೆ 3,000 ಕೋಟಿ ರೂ. ಮತ್ತು ಪೆರಿಫೆರಲ್ ರಿಂಗ್ ರಸ್ತೆಗಾಗಿ ಮತ್ತೊಂದು 3,000 ಕೋಟಿ ರೂ. (ಒಟ್ಟು 6,000 ಕೋಟಿ ರೂ.) ಕೊಡಬೇಕೆಂದು ಆಯೋಗ ಹೇಳಿತ್ತು. ಆದರೆ, ಈ ಅನುದಾನವನ್ನು ಮೋದಿ ಸರ್ಕಾರ ಈವರೆಗೆ ಬಿಡುಗಡೆ ಮಾಡಿಲ್ಲ.
ಈ 6,000 ಕೋಟಿ ರೂ. ಹಣವು ಬೆಂಗಳೂರಿಗೆ ಎಷ್ಟು ದೊಡ್ಡ ಅವಕಾಶವಾಗಿತ್ತು ಎಂಬುದಕ್ಕೆ ಬೆಂಗಳೂರಿನ ಪರಿಸ್ಥಿತಿಯೇ ಕನ್ನಡಿ ಹಿಡಿಯುತ್ತದೆ. ಬೆಂಗಳೂರು ಮಳೆ ಬಂದಾಗ ಮುಳುಗುತ್ತದೆ. ಕೆರೆಗಳು ಒಳಚರಂಡಿ ನೀರಿನ ಕೊಳಗಳಾಗಿ ಬದಲಾಗಿವೆ. ರಾಜಕಾಲುವೆಗಳು ಒತ್ತುವರಿಯಾಗಿವೆ. ರಸ್ತೆಗಳಲ್ಲಿ ಗುಂಡಿಗಳು, ಸಂಚಾರ ದಟ್ಟಣೆಗಳುಇ ನಗರವಾಸಿಗಳನ್ನು ಹೈರಾಣಾಗಿಸಿವೆ.
ಈ ಪರಿಸ್ಥಿತಿಯನ್ನು ನಿಭಾಯಿಸಲು 6,000 ಕೋಟಿ ರೂ. ಅನುದಾನ ಕೊಡುವಂತೆ ಹಣಕಾಸು ಆಯೋಗವೇ ಶಿಫಾರಸು ಮಾಡಿದ್ದರೂ, ಆ ಹಣಕ್ಕಾಗಿ ಬೆಂಗಳೂರಿನ ಸಂಸದರಲ್ಲಿ ಒಬ್ಬರಾದ ತೇಜಸ್ವಿ ಸೂರ್ಯ ಸಂಸತ್ತಿನಲ್ಲಿ ದನಿ ಎತ್ತಿಲ್ಲ. ಬೆಂಗಳೂರಿಗರ ಪರವಾಗಿ ಮಾತನಾಡಲಿಲ್ಲ. ಅನುದಾನ ಬಿಡುಗಡೆಗಾಗಿ ಪ್ರತಿಭಟನೆಗಳನ್ನೂ ಮಾಡಲಿಲ್ಲ.
ರಾಜ್ಯ ಸರ್ಕಾರದ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸುವ ಅವರಿಗಿರುವ ರಾಜಕೀಯ ಉತ್ಸಾಹ, ಬೆಂಗಳೂರಿನ ನೂರಾರು ಕೆರೆಗಳಿಗೆ ಬರಬೇಕಿದ್ದ 3,000 ಕೋಟಿ ರೂ. ಅನುದಾನ ಬಿಡುಗಡೆ ವಿಚಾರದಲ್ಲಿ ಕಾಣಿಸುತ್ತಿಲ್ಲ.
“ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಟನೆಲ್ ರಸ್ತೆ ಪರಿಹಾರವಲ್ಲ” ಎಂದು ತೇಜಸ್ವಿ ಸೂರ್ಯ ಹೇಳುತ್ತಾರೆ. ಅದು ಸತ್ಯವೂ ಹೌದು. ಹಾಗೆಂದ ಮಾತ್ರಕ್ಕೆ, ಫೆರಿಫರಲ್ ರಿಂಗ್ ರಸ್ತೆ ಸೇರಿದಂತೆ ನಾನಾ ರಸ್ತೆಗಳ ಅಭಿವೃದ್ಧಿಯಿಂದಲೂ ಪರಿಹಾರ ದೊರೆಯುವುದಿಲ್ಲ. ಯಾಕೆಂದರೆ, ಸಮಸ್ಯೆ ಇರುವುದು ರಸ್ತೆಗಳಲ್ಲಿ ಅಲ್ಲ. ಸರ್ಕಾರದ ಅಭಿವೃದ್ಧಿ ಯೋಜನೆಗಳಲ್ಲಿ, ಎಲ್ಲದಕ್ಕೂ ಒಂದೇ ನಗರವನ್ನು ಅವಲಂಬಿಸಿರುವುದರಲ್ಲಿ. ಆದರೂ, ಸದ್ಯದ ಪರಿಸ್ಥಿತಿಯಲ್ಲಿ ಫೆರಿಫರಲ್ ರಿಂಗ್ ರಸ್ತೆಯಂತಹ ರಸ್ತೆಗಳು ಸಂಚಾರ ದಟ್ಟಣೆ ಕಡಿಮೆ ಮಾಡಲು ನೆರವು ನೀಡುತ್ತವೆ. ಆದ್ದರಿಂದಲೇ, ಈ ರಸ್ತೆಗಳ ಅಭಿವೃದ್ಧಿ ಮಾಡಲು ಹಣಕಾಸು ಆಯೋಗವು 3,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಆದರೆ, ಈ ಹಣವನ್ನು ಬಿಡುಗಡೆ ಮಾಡಿಸುವಲ್ಲಿ ತೇಜಸ್ವಿ ಸೂರ್ಯ ಉತ್ಸಾಹ ತೋರುತ್ತಿಲ್ಲ. ಗಟ್ಟಿದನಿಯಲ್ಲಿ ಮಾತನಾಡುತ್ತಿಲ್ಲ.
ಈ ಲೇಖನ ಓದಿದ್ದೀರಾ?: ನೈಸ್ ರಸ್ತೆಯ ಟಾಕ್ಸಿಕ್ ಮನರಂಜನೆ
ಲಾಲ್ಬಾಗ್ ಉಳಿಯಬೇಕು. ಅದರಲ್ಲಿ ಎರಡು ಮಾತಿಲ್ಲ. ಆದ್ದರಿಂದಲೇ, ಬೆಂಗಳೂರಿನ ನಗರವಾಸಿಗಳು ಟನಲ್ ಯೋಜನೆ ವಿರುದ್ಧ ದಿನನಿತ್ಯ ಹೋರಾಟ ನಡೆಸುತ್ತಿದ್ದಾರೆ. ಆದರೆ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪ್ರತಿಭಟನೆಯಲ್ಲಿ ಹುರುಳಿಲ್ಲ. ಒಂದು ವೇಳೆ, ಬೆಂಗಳೂರಿನ ಪರಿಸರ ವ್ಯವಸ್ಥೆಯ ಮೇಲೆ ಅವರಿಗೆ ನಿಜಕ್ಕೂ ಕಾಳಜಿ ಇದ್ದಿದ್ದರೆ, ಬೆಳ್ಳಂದೂರು, ವರ್ತೂರು, ಯಮಲೂರು, ಅಗರ ಸೇರಿದಂತೆ ನಗರಕ್ಕೆ ಜೀವನಾಡಿಯಾಗಿರುವ ಜಲಮೂಲಗಳೂ ಉಳಿಯಬೇಕು. ಅದಕ್ಕಾಗಿ, ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದೂ ಅವರು ಪ್ರತಿಭಟನೆ ನಡೆಸುತ್ತಿದ್ದರು. ಒತ್ತಡ ಹೇರುತ್ತಿದ್ದರು. ಆದರೆ, ಅವರ ಪರಿಸರ ಕಾಳಜಿ ಒಂದು ಉದ್ಯಾನದ ಗೇಟ್ ಎದುರಿಗಷ್ಟೇ ಸೀಮಿತವಾಗಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಜನರು ತೇಜಸ್ವಿ ಸೂರ್ಯ ಅವರನ್ನು ಆಯ್ಕೆ ಮಾಡಿದ್ದು, ಕೇವಲ ವಿಧಾನಸೌಧದ ವಿರುದ್ಧ ಪ್ರತಿಭಟನೆ ನಡೆಸಲು ಮಾತ್ರವಲ್ಲ, ದೆಹಲಿಯಲ್ಲಿ ಬೆಂಗಳೂರಿನ ಧ್ವನಿಯಾಗಲು. ಆದರೆ, ದೆಹಲಿಯಲ್ಲಿ, ಸಂಸತ್ತಿನಲ್ಲಿ ತೇಜಸ್ವಿ ಸೂರ್ಯ ಅವರು ಬಾಲ ಸುಟ್ಟ ಬೆಕ್ಕಿನಂತೆ ಮೌನವಾಗಿರುತ್ತಾರೆ. ರಾಜ್ಯ ಸರ್ಕಾರದ ಯೋಜನೆ 20,000 ಕೋಟಿ ರೂ. ಲೆಕ್ಕ ಕೇಳುವವರು, ಕೇಂದ್ರದ 6,000 ಕೋಟಿ ರೂ. ಶಿಫಾರಸಿನ ಲೆಕ್ಕವನ್ನೂ ಕೇಳಬೇಕು. ಆದರೆ, ಅವರು ಕೇಳುವುದಿಲ್ಲ.
ಕೇಂದ್ರದಿಂದ ಅನುದಾನ ಬಾರದ ವಿಚಾರ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವೂ ಅಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ನಲ್ಲಿ 5,300 ಕೋಟಿ ರೂ. ನೆರವು ಘೋಷಿಸಲಾಗಿತ್ತು. ಆ ಹಣದ ಬಿಡುಗಡೆಯ ಕುರಿತೂ ಕರ್ನಾಟಕ ಸರ್ಕಾರ ವರ್ಷಗಳಿಂದ ಪ್ರಶ್ನೆ ಎತ್ತುತ್ತಿದೆ. ತೆರಿಗೆ ಹಂಚಿಕೆ, ಬರ ಪರಿಹಾರ, ನಗರಾಭಿವೃದ್ಧಿ, ರೈಲು–ಮೆಟ್ರೋ ಯೋಜನೆಗಳಲ್ಲಿ ಕರ್ನಾಟಕಕ್ಕೆ ಸಿಗಬೇಕಾದ ಪಾಲಿನ ಕುರಿತು ನಿರಂತರ ಚರ್ಚೆಗಳು ನಡೆಯುತ್ತಿವೆ. ಈ ಯಾವುದೇ ವಿಚಾರಗಳಲ್ಲಿ ತೇಜಸ್ವಿ ಸೂರ್ಯ ಅವರು ಮೋದಿ ಸರ್ಕಾರವನ್ನು ಪ್ರಶ್ನಿಸುವ ಎದೆಗಾರಿಕೆ ತೋರಿಸಿಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಬ್ಬರಿಸುವ ಅವರ ಧೋರಣೆ ಸ್ಪಷ್ಟ. ಅವರಿಗೆ ಬೆಂಗಳೂರು ಮುಖ್ಯವಲ್ಲ, ಬೆಂಗಳೂರಿನ ಹೆಸರಿನಲ್ಲಿ ರಾಜಕೀಯ ಮಾಡುವುದಷ್ಟೇ ಅವರ ಗುರಿ.



