ಬೋಸ್ನಿಯಾ ಯುದ್ಧದ ರಕ್ತಸಿಕ್ತ ಅಧ್ಯಾಯದ ಪ್ರಮುಖ ರೂವಾರಿ ರಾಟ್ಕೊ ಮ್ಲಾಡಿಚ್. ‘ಬುಚರ್ ಆಫ್ ಬೋಸ್ನಿಯಾ’ ಎಂದೇ ಕುಖ್ಯಾತನಾಗಿದ್ದ ಈ ನರಹಂತಕ 8 ಸಾವಿರಕ್ಕೂ ಹೆಚ್ಚು ಮುಸ್ಲಿಂ ಪುರುಷರು ಮತ್ತು ಬಾಲಕರ ನರಮೇಧ, ಸರಾಯೇವೊ ಮುತ್ತಿಗೆ ಸೇರಿದಂತೆ ಹಲವು ಭೀಕರ ಯುದ್ಧಾಪರಾಧಗಳ ಮಾಸ್ಟರ್ ಮೈಂಡ್. 16 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಮ್ಲಾಡಿಚ್ ಕೊನೆಗೆ ಜೀವಾವಧಿ ಶಿಕ್ಷೆಗೆ ಗುರಿಯಾದ. ಇದೀಗ ಆತನ ಸಾವಿನೊಂದಿಗೆ ಹತ್ಯಾಕಾಂಡದ ಒಂದು ಕರಾಳ ಅಧ್ಯಾಯ ಮುಗಿದಿದೆ. ಆದರೆ…
ಮ್ಲಾಡಿಚ್ನ ಮರಣದೊಂದಿಗೆ ಬೋಸ್ನಿಯಾ ಯುದ್ಧದ ಅತ್ಯಂತ ಭೀಕರ ಮುಖವೊಂದು ಕಣ್ಮರೆಯಾಗಿದೆ. ಆದರೆ ಮೂರು ದಶಕಗಳ ಹಿಂದೆ ನಡೆದ ನರಮೇಧದ ಪರಿಣಾಮಗಳು ಬೋಸ್ನಿಯಾದಲ್ಲಿ ಇನ್ನೂ ಜೀವಂತವಾಗಿವೆ. ಸ್ರೆಬ್ರೆನಿಕಾದಲ್ಲಿ ಹತ್ಯೆಗೀಡಾದವರ ಕುಟುಂಬಗಳು ಇಂದಿಗೂ ತಮ್ಮ ಆತ್ಮೀಯರ, ಕುಟುಂಬದವರ, ಪ್ರೀತಿಪಾತ್ರರ ಅವಶೇಷಗಳನ್ನು ಸಿದುಕುತ್ತಲೇ ಇವೆ. ಸಾಮೂಹಿಕ ಸಮಾಧಿಗಳಿಂದ ಪತ್ತೆಯಾಗುವ ಮೃತದೇಹಗಳನ್ನು ಗುರುತಿಸಿ, ಪ್ರತಿವರ್ಷ ಜುಲೈ 11ರಂದು ಸ್ರೆಬ್ರೆನಿಕಾ ಸ್ಮಾರಕದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.
1990ರ ದಶಕದ ಬಾಲ್ಕನ್ ಬಿಕ್ಕಟ್ಟು ಮತ್ತು ಯುಗೊಸ್ಲಾವಿಯಾದ ವಿಭಜನೆಯು ಆಧುನಿಕ ಯುರೋಪಿನ ಇತಿಹಾಸದಲ್ಲಿ ಅತ್ಯಂತ ರಕ್ತಸಿಕ್ತ ಅಧ್ಯಾಯಗಳಲ್ಲಿ ಒಂದು. ಈ ಭೀಕರ ಸಂಘರ್ಷದ ಮುಂಚೂಣಿಯಲ್ಲಿದ್ದ, ನರಮೇಧದ ರೂವಾರಿ ರಾಟ್ಕೊ ಮ್ಲಾಡಿಚ್ (Ratko Mladic) ಹೇಗ್ನ ಯುಎನ್ ಬಂಧನ ಆಸ್ಪತ್ರೆಯಲ್ಲಿ ತನ್ನ 84ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿರುವುದು ಜಾಗತಿಕವಾಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ‘ಬುಚರ್ ಆಫ್ ಬೋಸ್ನಿಯಾ’ (ಬೋಸ್ನಿಯಾದ ನರಹಂತಕ) ಎಂದೇ ಕುಖ್ಯಾತನಾಗಿದ್ದ ಈ ಯುದ್ಧಾಪರಾಧಿ ನಡೆಸಿದ ನರಮೇಧಗಳು ಸಾಮಾನ್ಯವಾದುವಲ್ಲ, ಮಾಡಿದ ಅನಾಚಾರಗಳು ಮರೆಯುವಂತವಲ್ಲ.

1991-92ರಲ್ಲಿ ಯುಗೊಸ್ಲಾವಿಯಾ ಒಡೆದು ತುಂಡಾದಾಗ, ಬೋಸ್ನಿಯಾ-ಹರ್ಜೆಗೋವಿನಾ ಸ್ವಾತಂತ್ರ್ಯ ಘೋಷಿಸಿಕೊಂಡಿತು. ಯುಗೊಸ್ಲಾವಿಯಾ ವಿಭಜನೆಯ ಬಳಿಕ ಬೋಸ್ನಿಯಾದಲ್ಲಿ ಸರ್ಬ್ ಪ್ರಾಬಲ್ಯದ ಪ್ರತ್ಯೇಕ ಪ್ರದೇಶ ನಿರ್ಮಿಸುವ ರಾಜಕೀಯ ಗುರಿಗೆ ಸೆರ್ಬಿಯಾದ ನಾಯಕ ಸ್ಲೋಬೊಡಾನ್ ಮಿಲೋಶೆವಿಚ್ ಮತ್ತು ಬೋಸ್ನಿಯನ್ ಸರ್ಬ್ ನಾಯಕ ರಾಡೊವನ್ ಕರಾಡ್ಜಿಚ್ ಬೆಂಬಲ ನೀಡಿದ್ದರು. ಬೋಸ್ನಿಯಾದ ಸರ್ಬ್ ನಾಯಕತ್ವ, ಬೋಸ್ನಿಯನ್ ಸರ್ಬ್ ಪಡೆಗಳು ಮತ್ತು ನೆರೆಯ ಸೆರ್ಬಿಯಾದ ಬೆಂಬಲದೊಂದಿಗೆ ಪ್ರತ್ಯೇಕ ಸರ್ಬ್ ರಾಜ್ಯವನ್ನು ನಿರ್ಮಿಸುವ ದೊಡ್ಡ ಸಂಚಿಗೆ ಸೇನಾ ರೂಪ ಕೊಡುವ ಜವಾಬ್ದಾರಿ ಹೊತ್ತವನು ಮ್ಲಾಡಿಚ್. ನಂತರದ ಅಂತಾರಾಷ್ಟ್ರೀಯ ನ್ಯಾಯಾಂಗ ವಿಚಾರಣೆಗಳಲ್ಲಿ ಈ ಮೂವರ ನಡುವಿನ ರಾಜಕೀಯ-ಸೇನಾ ಸಂಬಂಧವೂ ಪ್ರಮುಖವಾಗಿ ಪರಿಶೀಲಿಸಲ್ಪಟ್ಟಿತ್ತು. ಬೋಸ್ನಿಯನ್ ಸರ್ಬ್ ಸೇನೆಯ ಕಮಾಂಡರ್ ಆಗಿ ಅಧಿಕಾರ ಸ್ವೀಕರಿಸಿದ ಮ್ಲಾಡಿಚ್, ಕೇವಲ ಸೈನ್ಯದ ಚೌಕಟ್ಟಿನಲ್ಲಿ ಯುದ್ಧ ಮಾಡಲಿಲ್ಲ, ಮುಸ್ಲಿಮರು ಮತ್ತು ಕ್ರೊಯೇಟ್ಗಳನ್ನು ಆ ಪ್ರದೇಶದಿಂದ ಸಂಪೂರ್ಣವಾಗಿ ಹೊರಹಾಕುವ ಅಥವಾ ನಾಶಪಡಿಸುವ ‘ಜನಾಂಗೀಯ ಶುದ್ಧೀಕರಣ’ದ (Ethnic Cleansing) ಅಮಾನವೀಯ ನೀತಿಯನ್ನು ಜಾರಿಗೆ ತಂದ. ಹಳ್ಳಿಗಳಿಗೆ ಬೆಂಕಿ ಹಚ್ಚುವುದು, ಕುಟುಂಬಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸುವುದು ಮತ್ತು ನಾಗರಿಕರನ್ನು ಸಾಮೂಹಿಕ ಬಂಧನ ಶಿಬಿರಗಳಿಗೆ ತಳ್ಳಿ ಹಿಂಸಿಸುವುದು ಆತನ ದಿನನಿತ್ಯದ ಕಾರ್ಯತಂತ್ರವಾಗಿತ್ತು.
ಬೋಸ್ನಿಯಾದ ರಾಜಧಾನಿ ಸರಾಯೇವೊ ನಗರದ ಮೇಲೆ ಮ್ಲಾಡಿಚ್ ಪಡೆಗಳು ನಡೆಸಿದ ಮೂರೂವರೆ ವರ್ಷಗಳ ಮುತ್ತಿಗೆಯನ್ನು ಆಧುನಿಕ ಯುದ್ಧದ ಇತಿಹಾಸದಲ್ಲೇ ಅತ್ಯಂತ ಅಮಾನವೀಯ ಕೃತ್ಯ ಎಂದು ಉಲ್ಲೇಖಿಸಲಾಗಿದೆ. ನಗರದ ಸುತ್ತಲೂ ಬೆಟ್ಟಗಳಲ್ಲಿ ಫಿರಂಗಿಗಳನ್ನು ಸ್ಥಾಪಿಸಿ, ಕೆಳಗಿದ್ದ ಅಮಾಯಕ ನಾಗರಿಕರ ಮೇಲೆ ನಿರಂತರವಾಗಿ ಶೆಲ್ ದಾಳಿಗಳನ್ನು ನಡೆಸಲಾಯಿತು. ದಿನನಿತ್ಯದ ನೀರು, ವಿದ್ಯುತ್, ಆಹಾರ ಅಥವಾ ಔಷಧಿ ತರಲು ಹೊರಡುತ್ತಿದ್ದವರೇ ಸ್ನೈಪರ್ಗಳ ಗುಂಡಿಗೆ ಗುರಿಯಾಗುತ್ತಿದ್ದರು. ಶಾಲೆಗಳು, ಆಸ್ಪತ್ರೆಗಳು ಮತ್ತು ಪ್ರಾರ್ಥನಾ ಮಂದಿರಗಳೂ ಸಹ ಮ್ಲಾಡಿಚ್ ಪಡೆಗಳ ದಾಳಿಯಿಂದ ಛಿದ್ರಗೊಳ್ಳುತ್ತಿದ್ದವು. ಸುಮಾರು 11,000ಕ್ಕೂ ಹೆಚ್ಚು ಮಂದಿ ಈ ಮುತ್ತಿಗೆಯಲ್ಲಿ ಪ್ರಾಣ ಕಳೆದುಕೊಂಡರು. ಜನರಲ್ಲಿ ತೀವ್ರ ಭಯ ಹುಟ್ಟಿಸಿ, ಅವರ ಮನೋಬಲವನ್ನು ಕುಗ್ಗಿಸುವುದೇ ಈ ಮುತ್ತಿಗೆಯ ಮುಖ್ಯ ಗುರಿಯಾಗಿತ್ತು.

ಮ್ಲಾಡಿಚ್ನ ಇಡೀ ಜೀವನದ ಅತ್ಯಂತ ಕರಾಳ ಹಾಗೂ ಕಳಂಕಿತ ಅಧ್ಯಾಯವೆಂದರೆ 1995ರ ಜುಲೈನಲ್ಲಿ ನಡೆದ ಸ್ರೆಬ್ರೆನಿಕಾ ನರಮೇಧ. ವಿಶ್ವಸಂಸ್ಥೆಯು ಈ ಪ್ರದೇಶವನ್ನು ‘ಸುರಕ್ಷಿತ ಪ್ರದೇಶ’ವೆಂದು ಘೋಷಿಸಿ, ಅಲ್ಲಿ ಡಚ್ ಶಾಂತಿಪಾಲನಾ ಪಡೆಗಳನ್ನು ನಿಯೋಜಿಸಿತ್ತು. ಆದರೆ ಮ್ಲಾಡಿಚ್ ನೇತೃತ್ವದ ಪಡೆಗಳು ಯಾವುದೇ ಅಂಜಿಕೆ ಇಲ್ಲದೆ ಈ ನಗರವನ್ನು ಮುತ್ತಿಗೆ ಹಾಕಿ ವಶಪಡಿಸಿಕೊಂಡವು. ಯುಎನ್ ಪಡೆಗಳ ರಕ್ಷಣೆಯ ಭರವಸೆ ಕೇವಲ ಭರವಸೆಯಾಗಿಯೇ ಉಳಿಯಿತು. ಮ್ಲಾಡಿಚ್ ಪಡೆಗಳು ಸಾವಿರಾರು ಮುಸ್ಲಿಂ ಪುರುಷರು ಮತ್ತು ಬಾಲಕರನ್ನು ಮಹಿಳೆಯರು ಹಾಗೂ ಮಕ್ಕಳಿಂದ ಬಲವಂತವಾಗಿ ಬೇರ್ಪಡಿಸಿದವು. ಕೆಲವೇ ದಿನಗಳಲ್ಲಿ ಸುಮಾರು 8,000ಕ್ಕೂ ಹೆಚ್ಚು ಮಂದಿಯನ್ನು ಟ್ರಕ್ಗಳಲ್ಲಿ ಕರೆದೊಯ್ದು ಸಾಮೂಹಿಕವಾಗಿ ಹತ್ಯೆ ಮಾಡಲಾಯಿತು. ಭಾರೀ ಯಂತ್ರಗಳ ಮೂಲಕ ದೊಡ್ಡ ದೊಡ್ಡ ಕಂದಕಗಳನ್ನು ತೋಡಿ ದೇಹಗಳನ್ನ ತುಂಬಿ ಮಣ್ಣು ಮುಚ್ಚಲಾಯಿತು. ನಂತರ ಅಪರಾಧದ ಸಾಕ್ಷ್ಯಗಳನ್ನು ಮರೆಮಾಚುವ ಉದ್ದೇಶದಿಂದ ಹಲವು ಶವಗಳನ್ನು ಆ ಸಮಾಧಿಗಳಿಂದ ಹೊರತೆಗೆದು ಬೇರೆ, ಸಣ್ಣ ಸಾಮೂಹಿಕ ಸಮಾಧಿಗಳಿಗೆ ಮರುಹೂಳಲಾಗಿತ್ತು. ಇದರಿಂದ ಒಂದೇ ವ್ಯಕ್ತಿಯ ದೇಹದ ಭಾಗಗಳು ಬೇರೆ ಬೇರೆ ಸಮಾಧಿಗಳಲ್ಲಿ ಸಿಗುವ ಪರಿಸ್ಥಿತಿಯೂ ನಿರ್ಮಾಣವಾಯಿತು. ಈಗ ಜುಲೈ 11ರಂದು ನಡೆಯುತ್ತಿರುವ ಅಂತ್ಯಕ್ರಿಯೆ ಇದೇ. ಪತ್ತೆಯಾದ ಅವಶೇಷಗಳನ್ನು DNA ಪರೀಕ್ಷೆ ಮೂಲಕ ಗುರುತಿಸಿ, ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತದೆ. ಗುರುತಿಸಲ್ಪಟ್ಟವರನ್ನು ಪ್ರತಿವರ್ಷ ಜುಲೈ 11ರಂದು ಸ್ರೆಬ್ರೆನಿಕಾ ಸಮೀಪದ ಪೊಟೊಚಾರಿಯ ಸ್ಮಾರಕ-ಸ್ಮಶಾನದಲ್ಲಿ ಇಸ್ಲಾಮಿಕ್ ವಿಧಿವಿಧಾನದೊಂದಿಗೆ ಪುನಃ ದಫನ ಮಾಡಲಾಗುತ್ತದೆ. ಈ ಕ್ರೌರ್ಯವು ಎರಡನೇ ಮಹಾಯುದ್ಧದ ನಂತರ ಯುರೋಪಿನಲ್ಲಿ ನಡೆದ ಅತ್ಯಂತ ಭೀಕರ ನರಮೇಧವಾಗಿ ಇತಿಹಾಸದಲ್ಲಿ ದಾಖಲಾಯಿತು.
ಯುದ್ಧ ಮುಗಿದ ಬಳಿಕ ಸುಮಾರು 16 ವರ್ಷಗಳ ಕಾಲ ಮ್ಲಾಡಿಚ್ ತಲೆಮರೆಸಿಕೊಂಡಿದ್ದ. ಸರ್ಬಿಯಾ ಮತ್ತು ಬೋಸ್ನಿಯನ್ ಸರ್ಬ್ ಪ್ರಭಾವಿಗಳ ಕೃಪಾಕಟಾಕ್ಷದಿಂದ ಆತ ರಕ್ಷಿಸಲ್ಪಟ್ಟಿದ್ದ. ಆದರೆ ಅಂತಾರಾಷ್ಟ್ರೀಯ ಸಮುದಾಯದ ನಿರಂತರ ಒತ್ತಡ ಮತ್ತು ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ 2011ರಲ್ಲಿ ಆತನನ್ನು ಸೆರ್ಬಿಯಾದಲ್ಲಿ ಬಂಧಿಸಲಾಯಿತು. ಹೇಗ್ನಲ್ಲಿರುವ ಮಾಜಿ ಯುಗೊಸ್ಲಾವಿಯಾದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯಲ್ಲಿ (ICTY) ಸುದೀರ್ಘ ವಿಚಾರಣೆ ನಡೆಯಿತು. ಪ್ರಾಸಿಕ್ಯೂಟರ್ಗಳು ಮ್ಲಾಡಿಚ್ನ ಕ್ರೂರ ಆದೇಶಗಳ ಧ್ವನಿಮುದ್ರಿಕೆಗಳು, ಲಿಖಿತ ದಾಖಲೆಗಳು ಮತ್ತು ನೂರಾರು ಸಾಕ್ಷಿಗಳ ಹೇಳಿಕೆಗಳನ್ನು ಮಂಡಿಸಿದರು. ಅಂತಿಮವಾಗಿ 2017ರಲ್ಲಿ ನ್ಯಾಯಾಲಯವು ಮ್ಲಾಡಿಚ್ಗೆ ನರಮೇಧ ಮತ್ತು ಯುದ್ಧಾಪರಾಧಗಳಿಗಾಗಿ ಜೀವಾವಧಿ ಶಿಕ್ಷೆ ವಿಧಿಸಿತು. 2021ರಲ್ಲಿ ಮೇಲ್ಮನವಿ ನ್ಯಾಯಾಲಯವೂ ಈ ತೀರ್ಪನ್ನು ಎತ್ತಿಹಿಡಿಯಿತು. ಆದರೆ ಕೊನೆಯವರೆಗೂ ಮ್ಲಾಡಿಚ್ ತನ್ನ ತಪ್ಪನ್ನು ಒಪ್ಪಿಕೊಳ್ಳಲಿಲ್ಲ; ಬದಲಿಗೆ ತಾನು ತನ್ನ ದೇಶವನ್ನು ಮತ್ತು ಜನರನ್ನು ರಕ್ಷಿಸಿದ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದ.
ಇದನ್ನೂ ಓದಿ: ಕಪ್ಪು ಕನಿಷ್ಠವಲ್ಲ, ಬಿಳುಪು ಶ್ರೇಷ್ಠವಲ್ಲ; ಬಣ್ಣದಾಸೆಗೆ ಬಲಿಯಾಗದಿರಿ!
ಮ್ಲಾಡಿಚ್ನ ಸಾವಿನ ಬಳಿಕ ಸ್ರೆಬ್ರೆನಿಕಾ ಸ್ಮಾರಕ ಕೇಂದ್ರದ ಮುಖ್ಯಸ್ಥ ಎಮಿರ್ ಸುಲ್ಜಾಗಿಚ್, “ಆತನ ಸಾವು ಸತ್ತವರನ್ನು ಮರಳಿ ತರುವುದಿಲ್ಲ, ಸಾಮೂಹಿಕ ಸಮಾಧಿಗಳನ್ನು ತೆರವುಗೊಳಿಸುವುದಿಲ್ಲ, ನ್ಯಾಯಾಲಯದ ತೀರ್ಪನ್ನೂ ಬದಲಿಸುವುದಿಲ್ಲ. ಮ್ಲಾಡಿಚ್ನ ಸಾವಿಗಿಂತ ಆತನ ಅಪರಾಧಗಳ ಸತ್ಯವನ್ನು ಉಳಿಸಿಕೊಳ್ಳುವುದು ಮುಖ್ಯ ಎಂದು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಸ್ರೆಬ್ರೆನಿಕಾ ನರಮೇಧದಲ್ಲಿ ಪತಿ ಮತ್ತು ಮಗನನ್ನು ಕಳೆದುಕೊಂಡ ಕದಾ ಹೋಟಿಚ್ ಕೂಡ ಪ್ರತಿಕ್ರಿಯಿಸಿದ್ದು, ಮ್ಲಾಡಿಚ್ಗೆ ಜೀವಾವಧಿ ಶಿಕ್ಷೆ ಆಗಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಕೆಲವು ಸರ್ಬ್ ರಾಜಕೀಯ ನಾಯಕರು ಆತನನ್ನು ಯುದ್ಧದ “ಹೀರೋ” ಎಂದು ಬಿಂಬಿಸಿದ್ದಾರೆ. ಈ ವಿಭಿನ್ನ ಪ್ರತಿಕ್ರಿಯೆಗಳೇ ಮ್ಲಾಡಿಚ್ನ ಸಾವು ಬೋಸ್ನಿಯಾದ ಹಳೆಯ ಗಾಯಗಳನ್ನು ಮತ್ತೆ ತೆರೆದಿರುವುದನ್ನು ತೋರಿಸುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಇದೀಗ ಕ್ರೂರಿ ನರಹಂತಕನೊಬ್ಬನ ಅಂತ್ಯವಾಗಿದೆ. ಸ್ರೆಬ್ರೆನಿಕಾ ಮತ್ತು ಸರಾಯೇವೊದ ಸಂತ್ರಸ್ತರ ಕುಟುಂಬಗಳಿಗೆ ಮ್ಲಾಡಿಚ್ನ ಸಾವು ಯಾವುದೇ ದೊಡ್ಡ ಸಮಾಧಾನ ತಂದಿಲ್ಲ. ಆತನ ಜೀವಿತಾವಧಿಯಲ್ಲಿ ಪಶ್ಚಾತ್ತಾಪದ ಮಾತುಗಳು ಬಾರದಿರುವುದು ಮತ್ತು ಇಂದಿಗೂ ಕೆಲವು ಸರ್ಬ್ ರಾಷ್ಟ್ರೀಯತಾವಾದಿ ಗುಂಪುಗಳು ಆತನನ್ನು ‘ಹೀರೋ’ ಎಂದು ಕರೆಯುತ್ತಿರುವುದು ಸಂತ್ರಸ್ತರ ನೋವನ್ನು ಮತ್ತಷ್ಟು ಹೆಚ್ಚಿಸಿದೆ. ಜನಾಂಗೀಯ ದ್ವೇಷ, ಅಧಿಕಾರದ ಅಹಂಕಾರ ಮತ್ತು ಮನುಕುಲದ ವಿರುದ್ಧ ಎಸಗುವ ಅಪರಾಧಗಳಿಗೆ ಕಾನೂನಿನ ಶಿಕ್ಷೆ ಎಷ್ಟೇ ತಡವಾಗಿ ಸಿಕ್ಕರೂ ಅದು ಅಂತಿಮವಾಗಿ ತಪ್ಪಿದ್ದಲ್ಲ ಎಂಬುದಕ್ಕೆ ಮ್ಲಾಡಿಚ್ ಪ್ರಕರಣವೇ ಸಾಕ್ಷಿ. ಸ್ರೆಬ್ರೆನಿಕಾದ ಸಾಮೂಹಿಕ ಸಮಾಧಿಗಳು ಮತ್ತು ಸರಾಯೇವೊದ ಬೀದಿಗಳನ್ನ ತೋಯ್ದ ಕಣ್ಣೀರು ಜಾಗತಿಕ ಸಮಾಜಕ್ಕೆ ಶಾಂತಿಯ ಸಂದೇಶದ ಅಗತ್ಯವನ್ನು ಹಾಗೂ ಇತಿಹಾಸದಿಂದ ಪಾಠ ಕಲಿಯುವ ಅನಿವಾರ್ಯತೆಯನ್ನು ಸದಾ ನೆನಪಿಸುತ್ತಲೇ ಇರುತ್ತದೆ.




