ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ ಲಾರೆನ್ಸ್ ಬಿಷ್ಣೋಯ್‌ವರೆಗೆ!

Date:

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್ ಇಬ್ರಾಹಿಂ, ಛೋಟಾ ಶಕೀಲ್, ಅಬು ಸಲೇಂನ ಕಾಲದಿಂದ ಇಂದಿನ ಬಿಷ್ಣೋಯ್ ಗ್ಯಾಂಗ್‌ವರೆಗೆ ಸಿನಿಮಾ ಜಗತ್ತು ಭೂಗತ ಪಾತಕಿಗಳಿಂದ ನಿರಂತರ ಬೆದರಿಕೆ, ಸುಲಿಗೆ, ಹಣಕಾಸು ವ್ಯವಹಾರ ಹಾಗೂ ಹಿಂಸಾಚಾರವನ್ನು ಎದುರಿಸಿದೆ. ಈಗ, ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿರುವುದು ಹಿಂದಿ ಚಿತ್ರರಂಗ ಮತ್ತು ಸಂಘಟಿತ ಅಪರಾಧ ಜಗತ್ತಿನ (ಅಂಡರ್‌ ವರ್ಲ್ಡ್‌) ದಶಕಗಳ ಸಂಬಂಧವನ್ನು ಮತ್ತೆ ಮುನ್ನೆಲೆಗೆ ತಂದಿದೆ.

- Advertisement -

ಭಾನುವಾರ (ಅ.28), ಮುಂಬೈನ ಜುಹು ಪ್ರದೇಶದಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಮೋಟಾರ್‌ಸೈಕಲ್‌ನಲ್ಲಿ ಬಂದ ಮೂವರು ಶಸ್ತ್ರಧಾರಿಗಳು ದಾಳಿಗೈದಿದ್ದಾರೆ. ಘಟನೆಯಲ್ಲಿ ಶ್ರಾಫ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಚಾಲಕ ಸೇರಿದಂತೆ ಇತರರು ಗಾಯಗೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ಏನಿದು ʼಮಶೀನ್‌ ರೀಡಬಲ್‌ʼ ಮತದಾರರ ಪಟ್ಟಿ? ಅದನ್ನು ಹಂಚಿಕೊಳ್ಳದೆ...

17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ಸೂಚಿಸಿದೆ. ವಿಪಕ್ಷಗಳ ವಿರೋಧಕ್ಕೆ ಮಣಿದು ಕೊನೆಗೂ ಓದಲು ಸಾಧ್ಯವಾಗುವ PDF ಪ್ರತಿಗಳನ್ನು ರಾಜಕೀಯ ಪಕ್ಷಗಳಿಗೆ ಒದಗಿಸುವಂತೆ ನಿರ್ದೇಶಿಸಿದೆ. ಹಾಗಾದರೆ,...

ಈ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಪರವಾಗಿ ಅನಿಲ್ ಪಂಡಿತ್ ಮತ್ತು ಹರ್ಮನ್ ಸಂಧು ಎಂಬವರು ಹೊತ್ತುಕೊಂಡಿದ್ದಾರೆ. ಅಮೆರಿಕದಿಂದ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಹೇಳಲಾಗುವ ಅನಿಲ್ ಪಂಡಿತ್, “ನಟ ಸಲ್ಮಾನ್ ಖಾನ್ ಅವರೊಂದಿಗೆ ಟೈಗರ್ ಶ್ರಾಫ್ ಸಂಬಂಧ ಮುಂದುವರಿಸಿರುವುದೇ, ಅವರ ಮೇಲಿನ ದಾಳಿಗೆ ಕಾರಣ” ಎಂದು ಹೇಳಿಕೊಂಡಿದ್ದಾನೆ. ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುವ ಇತರ ಕಲಾವಿದರಿಗೂ ಬೆದರಿಕೆ ಹಾಕಿದ್ದಾನೆ. ಸದ್ಯ, ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ಮುಂದುವರೆಸಿದ್ದಾರೆ.

Advertisements

ಟೈಗರ್ ಶ್ರಾಪ್‌ ಮೇಲಿನ ದಾಳಿ ಕೇವಲ ಒಬ್ಬ ನಟನ ಮೇಲಿನ ದಾಳಿಯಾಗಿ ಉಳಿದಿಲ್ಲ. ಬದಲಾಗಿ, ಒಂದು ಚಿತ್ರದಲ್ಲಿ ಯಾರು ನಟಿಸಬೇಕು, ಯಾರೊಂದಿಗೆ ಕೆಲಸ ಮಾಡಬೇಕು, ಯಾರೊಂದಿಗೆ ಸ್ನೇಹ ಹೊಂದಿರಬೇಕು ಎನ್ನುವುದನ್ನೂ ಅಪರಾಧ ಸಂಘಟನೆಗಳು ನಿಯಂತ್ರಿಸಲು ಮುಂದಾಗುತ್ತಿರುವ ಅಪಾಯಕಾರಿ ಬೆಳವಣಿಗೆಯ ಸಂಕೇತವಾಗಿದೆ. ಇದು, ಇಡೀ ಬಾಲಿವುಡ್ ಅಂಗಳದಲ್ಲಿ ಭಯದ ವಾತಾವರಣವನ್ನು ಹುಟ್ಟುಹಾಕಿದೆ.

ಬಾಲಿವುಡ್‌ಗೆ ಇಂತಹ ಪರಿಸ್ಥಿತಿ ಹೊಸದೇನಲ್ಲ. ಇತಿಹಾಸದಲ್ಲಿ, ಮುಂಬೈ ಚಿತ್ರರಂಗ ಮತ್ತು ಭೂಗತ ಲೋಕದ ನಡುವೆ ಸಂಬಂಧಗಳು ಆಗಾಗ್ಗೆ ಸದ್ದು ಮಾಡಿವೆ. ಈ ಸಂಬಂಧವು ಕೆಲವೊಮ್ಮೆ ಪರಸ್ಪರ ಲಾಭದಾಯಕ ವ್ಯವಹಾರವಾಗಿದ್ದರೆ, ಮತ್ತೊಮ್ಮೆ ಭೀಕರ ಸಂಘರ್ಷಗಳಾಗಿ ಮಾರ್ಪಟ್ಟಿವೆ.

ಬಾಲಿವುಡ್ ಮತ್ತು ಭೂಗತ ಲೋಕದ ಸಂಬಂಧ ಆರಂಭವಾಗಿದ್ದು ಹೇಗೆ?

ಹಿಂದಿ ಚಿತ್ರರಂಗ ಮತ್ತು ಮುಂಬೈನ ಭೂಗತ ಲೋಕದ ನಡುವಿನ ಸಂಬಂಧವು 1960ರಿಂದ 1980ರ ದಶಕಗಳವರೆಗಿನ ಮುಂಬೈನ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯೊಂದಿಗೆ ಬೆಸೆದುಕೊಂಡಿದೆ. ಆ ಕಾಲದಲ್ಲಿ ಮುಂಬೈ ಬಂದರು ವ್ಯಾಪಾರ, ಚಿನ್ನದ ಕಳ್ಳಸಾಗಣೆ, ವಿದೇಶಿ ಎಲೆಕ್ಟ್ರಾನಿಕ್ ವಸ್ತುಗಳ ಅಕ್ರಮ ಸಾಗಣೆ, ಹವಾಲಾ ಹಣ ವರ್ಗಾವಣೆ ಹಾಗೂ ಅನಧಿಕೃತ ಹಣಕಾಸು ವ್ಯವಹಾರಗಳ ಪ್ರಮುಖ ಕೇಂದ್ರವಾಗಿತ್ತು.

ಹಾಜಿ ಮಸ್ತಾನ್, ವರದರಾಜನ್ ಮುದಲಿಯಾರ್, ಕರೀಂ ಲಾಲಾ ಮೊದಲಾದವರ ಹೆಸರುಗಳು ಮುಂಬೈನ ‘ಅಂಡರ್‌ ವರ್ಲ್ಡ್‌’ನಲ್ಲಿ ಪ್ರಮುಖವಾಗಿ ಕೇಳಿಬರುತ್ತಿದ್ದವು. ಆ ಸಮಯದಲ್ಲಿ, ಚಿತ್ರರಂಗಕ್ಕೂ ಈ ಅಪರಾಧ ಜಗತ್ತಿಗೂ ಸಂಪರ್ಕ ಬೆಳೆಯಲು ಹಣಕಾಸು ಅತ್ಯಂತ ಪ್ರಮುಖ ಕಾರಣವಾಗಿತ್ತು.

ಅಂದಿನ, ಸಿನಿಮಾ ನಿರ್ಮಾಣವು ಸಂಘಟಿತ ಹಣಕಾಸು ವ್ಯವಸ್ಥೆಯ ಹೊರಗೇ ಹೆಚ್ಚಾಗಿ ನಡೆಯುತ್ತಿತ್ತು. ಸಿನಿಮಾಗಳಿಗೆ ಸಾಲ ನೀಡಲು ಬ್ಯಾಂಕುಗಳು ಹಿಂಜರಿಯುತ್ತಿದ್ದವು. ನಿರ್ಮಾಪಕರು ಖಾಸಗಿ ಹಣಕಾಸುದಾರರು, ವಿತರಕರು ಹಾಗೂ ವ್ಯಾಪಾರಸ್ಥರ ಮೇಲೆ ಅವಲಂಬಿತರಾಗಿದ್ದರು. ಇದು ಸಿನಿಮಾ ಜಗತ್ತಿಗೆ ಕಪ್ಪುಹಣದ ಹರಿವು, ಭೂಗತ ಲೋಕ ಮತ್ತು ಅಕ್ರಮ ಹಣಕಾಸುದಾರರ ಪ್ರವೇಶಕ್ಕೆ ಅವಕಾಶ ಸೃಷ್ಟಿಸಿತು.

ಅಕ್ರಮ ವ್ಯಾಪಾರದಿಂದ ಗಳಿಸಿದ ಹಣವನ್ನು ಸಿನಿಮಾ ನಿರ್ಮಾಣದಲ್ಲಿ ಹೂಡುವುದು, ಅದರ ಮೂಲಕ ಸಾಮಾಜಿಕ ಪ್ರತಿಷ್ಠೆ ಪಡೆಯುವುದು ಹಾಗೂ ಚಿತ್ರರಂಗದ ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸುವುದು ಭೂಗತ ಲೋಕದ ಕೆಲವು ನಾಯಕರ ಆಸಕ್ತಿಯೂ ಆಗಿತ್ತು.

ಹಾಜಿ ಮಸ್ತಾನ್: ಅಪರಾಧ ಜಗತ್ತಿನಿಂದ ಸಿನಿಮಾ ಜಗತ್ತಿನವರೆಗೆ

ಮುಂಬೈನ ಭೂಗತ ಲೋಕ ಮತ್ತು ಬಾಲಿವುಡ್ ನಡುವಿನ ಸಂಬಂಧಗಳು ಹಾಜಿ ಮಸ್ತಾನ್‌ನಿಂದ ಆರಂಭವಾದವು. 1960 ಮತ್ತು 1970ರ ದಶಕಗಳಲ್ಲಿ ಚಿನ್ನದ ಕಳ್ಳಸಾಗಣೆ ಸೇರಿದಂತೆ ಹಲವು ಅಕ್ರಮ ವ್ಯಾಪಾರಗಳ ಮೂಲಕ ಪ್ರಭಾವ ಬೆಳೆಸಿದ್ದ ಹಾಜಿ ಮಸ್ತಾನ್, ಸಿನಿಮಾ ಕಲಾವಿದರು ಮತ್ತು ಚಿತ್ರರಂಗದ ವ್ಯಕ್ತಿಗಳೊಂದಿಗೆ ಸಾಮಾಜಿಕ ಸಂಪರ್ಕ ಹೊಂದಿದ್ದ. ಆತನ ಐಷಾರಾಮಿ ಜೀವನಶೈಲಿ, ಬಿಳಿ ಉಡುಗೆ, ದುಬಾರಿ ಕಾರುಗಳು ಹಾಗೂ ಪ್ರಭಾವಶಾಲಿ ವ್ಯಕ್ತಿಗಳೊಂದಿಗಿನ ಒಡನಾಟ ಸಾರ್ವಜನಿಕ ಗಮನ ಸೆಳೆದಿತ್ತು.

ಈ ಅವಧಿಯಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳತೊಡಗಿದ ‘ಡಾನ್’ ಪಾತ್ರಗಳಿಗೆ ಮುಂಬೈನ ನೈಜ ಅಪರಾಧ ಜಗತ್ತು ಸ್ಫೂರ್ತಿಯಾಗಿತ್ತು. ಅಧಿಕಾರ, ಹಣ, ಕಳ್ಳಸಾಗಣೆ ಹಾಗೂ ರಾಜಕೀಯ ಸಂಪರ್ಕಗಳೊಂದಿಗೆ ಬದುಕುವ ಅಪರಾಧ ನಾಯಕನ ಚಿತ್ರಣ ಜನಪ್ರಿಯವಾಗಿತ್ತು. ಸಿನಿಮಾಗಳಲ್ಲಿ ಈ ಕ್ರೈಮ್ ಹೀರೋಗಳ ಪಾತ್ರಗಳು ಜನಪ್ರಿಯ ನಾಯಕತ್ವದ ಪ್ರತೀಕಗಳಾಗಿ ರೂಪುಗೊಳ್ಳುತ್ತಿದ್ದವು. ಈ ಸಾಂಸ್ಕೃತಿಕ ಆಕರ್ಷಣೆಯು ನಂತರದ ದಶಕಗಳಲ್ಲಿ ಇನ್ನಷ್ಟು ಗಟ್ಟಿಯಾಯಿತು.

ದಾವೂದ್ ಇಬ್ರಾಹಿಂ: ಚಿತ್ರರಂಗದ ಮೇಲೆ ಡಿ-ಕಂಪನಿಯ ಹಿಡಿತ

1980ರ ದಶಕದ ಅಂತ್ಯ ಮತ್ತು 1990ರ ದಶಕದಲ್ಲಿ ಮುಂಬೈನ ಭೂಗತ ಲೋಕದ ಸ್ವರೂಪವೇ ಬದಲಾಯಿತು. ಈ ಬದಲಾವಣೆಯ ಕೇಂದ್ರದಲ್ಲಿ ಇದ್ದದ್ದು ದಾವೂದ್ ಇಬ್ರಾಹಿಂ ನೇತೃತ್ವದ ಡಿ-ಕಂಪನಿ.

ಹಿಂದಿನ ಅಪರಾಧ ಜಾಲಗಳು ಮುಖ್ಯವಾಗಿ ಕಳ್ಳಸಾಗಣೆ, ಸ್ಥಳೀಯ ವಸೂಲಿ ಹಾಗೂ ಅನಧಿಕೃತ ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿದ್ದರೆ, ಡಿ-ಕಂಪನಿ ತನ್ನ ಕಾರ್ಯಾಚರಣೆಯನ್ನು ಹಲವು ದೇಶಗಳಿಗೆ ವಿಸ್ತರಿಸಿತು. ಹವಾಲಾ, ಸುಲಿಗೆ, ರಿಯಲ್ ಎಸ್ಟೇಟ್ ಮತ್ತು ಅಂತರರಾಷ್ಟ್ರೀಯ ಹಣಕಾಸು ಜಾಲಗಳೊಂದಿಗೆ ಬಾಲಿವುಡ್ ಕೂಡ ಅದರ ಗಮನ ಸೆಳೆಯಿತು.

image 215

ಮುಂಬೈನ ಭೂಗತ ವ್ಯವಹಾರವು ಡಿ-ಕಂಪನಿಯ ಹಿಡಿತದಲ್ಲಿದ್ದ ಸಮಯದಲ್ಲಿ, ಭೂಗತ ಲೋಕದ ಉದ್ದೇಶ ಕೇವಲ ಸಿನಿಮಾಗಳಿಗೆ ಹಣ ಹೂಡುವುದಕ್ಕೆ ಸೀಮಿತವಾಗಲಿಲ್ಲ. ಸಿನಿಮಾ ನಿರ್ಮಾಪಕರು, ವಿತರಕರು ಹಾಗೂ ನಟರ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಪ್ರಯತ್ನಗಳೂ ನಡೆದವು.

ಯಾವ ನಿರ್ಮಾಪಕ ಯಾರೊಂದಿಗೆ ವ್ಯವಹಾರ ನಡೆಸಬೇಕು, ಯಾವ ನಟ ಯಾವ ಚಿತ್ರದಲ್ಲಿ ಅಭಿನಯಿಸಬೇಕು, ಯಾವ ಚಿತ್ರದ ವಿತರಣೆ ಯಾರಿಗೆ ಸಿಗಬೇಕು ಎಂಬ ವಿಷಯಗಳಲ್ಲಿ ಭೂಗತ ಲೋಕದ ಪ್ರಭಾವ ಹೆಚ್ಚಿತು.

ಡಿ-ಕಂಪನಿಯ ಪ್ರಮುಖ ವ್ಯಕ್ತಿಗಳಲ್ಲಿ ಛೋಟಾ ಶಕೀಲ್ ಮತ್ತು ಅಬು ಸಲೇಂ ಹೆಸರುಗಳು ಚಿತ್ರರಂಗದ ಹಣಕಾಸು ಮತ್ತು ಸುಲಿಗೆ ಪ್ರಕರಣಗಳಲ್ಲಿ ಹೆಚ್ಚು ಕೇಳಿಬಂದವು. ಈ ಸಮಯದಲ್ಲಿ, ಸಿನಿಮಾ ಕೇವಲ ಮನರಂಜನೆಯ ಉದ್ಯಮವಾಗಿ ಉಳಿಯಲಿಲ್ಲ. ಅದು ಹಣವನ್ನು ಚಲಾಯಿಸುವ, ಪ್ರಭಾವವನ್ನು ಪ್ರದರ್ಶಿಸುವ ಹಾಗೂ ಅಪರಾಧ ಸಂಘಟನೆಗಳ ಪ್ರತಿಷ್ಠೆಯನ್ನು ಹೆಚ್ಚಿಸುವ ಸಾಧನವಾಗಿಯೂ ಬಳಕೆಯಾಗತೊಡಗಿತು.

1993ರ ಮುಂಬೈ ಸ್ಫೋಟಗಳು: ಬಾಲಿವುಡ್‌ಗೂ ತಟ್ಟಿದ ಭೂಗತ ಲೋಕದ ಭೀಕರತೆ

1993ರ ಮಾರ್ಚ್ 12ರಂದು ಮುಂಬೈನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳು ಭಾರತದ ಅಪರಾಧ ಮತ್ತು ಭಯೋತ್ಪಾದನೆಯ ಇತಿಹಾಸದಲ್ಲಿ ನಿರ್ಣಾಯಕ ಘಟನೆಗಳು. ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆಮನ್ ನೇತೃತ್ವದ ಜಾಲ ಈ ಸ್ಫೋಟಗಳ ಸಂಚಿನಲ್ಲಿ ಭಾಗಿಯಾಗಿತ್ತು. ಈ ಪ್ರಕರಣದಲ್ಲಿ ಚಿತ್ರನಟ ಸಂಜಯ್ ದತ್ ಅವರ ಹೆಸರು ಕೂಡ ವಿವಾದಕ್ಕೆ ಸಿಲುಕಿತು.

ಸ್ಫೋಟಗಳ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸಂಜಯ್ ದತ್ ವಿರುದ್ಧ ವಿಚಾರಣೆಯೂ ನಡೆದು, ಶಸ್ತ್ರಾಸ್ತ್ರ ಕಾಯ್ದೆಯಡಿ ಅವರಿಗೆ ಶಿಕ್ಷೆಯೂ ಆಯಿತು. ಆದರೆ, ಬಾಂಬ್ ಸ್ಫೋಟಗಳ ಭಯೋತ್ಪಾದನಾ ಸಂಚಿನಲ್ಲಿ ದತ್ ಭಾಗಿಯಾಗಿದ್ದರು ಎಂಬ ಪುರಾವೆಗಳು ಇರಲಿಲ್ಲ. ಈ ಪ್ರಕರಣದಿಂದ ದತ್ ಹೊರಗುಳಿದರು.

ಆದಾಗ್ಯೂ, ಸಂಜಯ್ ದತ್ ಪ್ರಕರಣವು ಚಿತ್ರರಂಗದ ವ್ಯಕ್ತಿಗಳಿಗೆ ಭೂಗತ ಜಗತ್ತಿನ ಸಂಪರ್ಕಗಳಿಂದ ಎದುರಾಗಬಹುದಾದ ಕಾನೂನು ಮತ್ತು ಸಾಮಾಜಿಕ ಪರಿಣಾಮಗಳನ್ನು ಬಹಿರಂಗಪಡಿಸಿತು.

1993ರ ಸ್ಫೋಟಗಳ ನಂತರ ದಾವೂದ್ ನೇತೃತ್ವದ ಭೂಗತ ಜಾಲದ ಬಗ್ಗೆ ಭಾರತೀಯ ಸಮಾಜದ ದೃಷ್ಟಿಕೋನವೂ ಬದಲಾಯಿತು. ಹಿಂದೆ ಕಳ್ಳಸಾಗಣೆ ಮತ್ತು ಐಷಾರಾಮಿ ಬದುಕಿನೊಂದಿಗೆ ಗುರುತಿಸಲಾಗುತ್ತಿದ್ದ ಭೂಗತ ಜಗತ್ತು, ಭಯೋತ್ಪಾದನೆ ಮತ್ತು ರಾಷ್ಟ್ರೀಯ ಭದ್ರತೆಯ ಸವಾಲಿನೊಂದಿಗೆ ಬೆಸೆದುಕೊಂಡಿತು.

ಗುಲ್ಶನ್ ಕುಮಾರ್ ಹತ್ಯೆ: ಬಾಲಿವುಡ್ ನಡುಗಿದ ದಿನ

ಬಾಲಿವುಡ್ ಮತ್ತು ಭೂಗತ ಲೋಕದ ನಡುವಿನ ಸಂಘರ್ಷದ ಅತ್ಯಂತ ಭೀಕರ ಘಟನೆಗಳಲ್ಲಿ ಟಿ-ಸಿರೀಸ್ ಸಂಸ್ಥಾಪಕ ಗುಲ್ಶನ್ ಕುಮಾರ್ ಅವರ ಹತ್ಯೆ ಮುಖ್ಯವಾದದದ್ದು. 1997ರ ಆಗಸ್ಟ್ 12ರಂದು ಮುಂಬೈನ ಅಂಧೇರಿಯಲ್ಲಿರುವ ಶಿವಮಂದಿರದ ಹೊರಗೆ ಗುಲ್ಶನ್ ಕುಮಾರ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಈ ಪ್ರಕರಣದಲ್ಲಿ ಅಬ್ದುಲ್ ರವೂಫ್ ಮರ್ಚೆಂಟ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

image 216

ಸಂಗೀತ ಕ್ಯಾಸೆಟ್‌ಗಳ ವ್ಯಾಪಾರದಿಂದ ಆರಂಭಿಸಿ ದೊಡ್ಡ ಸಂಗೀತ ಸಾಮ್ರಾಜ್ಯ ನಿರ್ಮಿಸಿದ್ದ ಗುಲ್ಶನ್ ಕುಮಾರ್ ಅವರ ಹತ್ಯೆ, ಚಿತ್ರರಂಗದ ಉದ್ಯಮಿಗಳು ಎದುರಿಸುತ್ತಿದ್ದ ಅಪರಾಧ ಜಗತ್ತಿನ ಅಪಾಯವನ್ನು ಬಯಲುಮಾಡಿತು.

ಗುಲ್ಶನ್ ಕುಮಾರ್ ಹತ್ಯೆಯು; “ಯಶಸ್ವಿ ಉದ್ಯಮಿಗಳು ಮತ್ತು ಕಲಾವಿದರು ಅಪರಾಧ ಸಂಘಟನೆಗಳ ಬೇಡಿಕೆಗಳಿಗೆ ಮಣಿಯದಿದ್ದರೆ ಜೀವಕ್ಕೂ ಅಪಾಯ ಎದುರಾಗಬಹುದು” ಎಂಬ ಭೀಕರ ಸಂದೇಶವನ್ನು ಬಾಲಿವುಡ್‌ಗೆ ರವಾನಿಸಿತು.

ರಾಕೇಶ್ ರೋಷನ್ ಮೇಲಿನ ಗುಂಡಿನ ದಾಳಿ: ಸಿನಿಮಾ ಯಶಸ್ಸಿಗೂ ಬೆಲೆ ಕಟ್ಟಬೇಕಾದ ಪರಿಸ್ಥಿತಿ

ಗುಲ್ಶನ್ ಕುಮಾರ್ ಹತ್ಯೆಯ ಮೂರು ವರ್ಷಗಳ ನಂತರ ಮತ್ತೊಂದು ಘಟನೆ ಬಾಲಿವುಡ್‌ನ್ನು ಬೆಚ್ಚಿಬೀಳಿಸಿತು. 2000ರ ಜನವರಿಯಲ್ಲಿ ನಿರ್ಮಾಪಕ ಮತ್ತು ನಿರ್ದೇಶಕ ರಾಕೇಶ್ ರೋಷನ್ ಅವರ ಮೇಲೆ ಮುಂಬೈನಲ್ಲಿ ಗುಂಡಿನ ದಾಳಿ ನಡೆಯಿತು. ಅವರ ನಿರ್ದೇಶನದ ‘ಕಹೋ ನಾ… ಪ್ಯಾರ್ ಹೈ’ ಚಿತ್ರ ಯಶಸ್ಸು ಗಳಿಸುತ್ತಿದ್ದ ಸಮಯದಲ್ಲಿ ಈ ದಾಳಿ ನಡೆದಿತ್ತು.

ಚಿತ್ರದ ಯಶಸ್ಸಿನ ನಂತರ ಭೂಗತ ಲೋಕದಿಂದ ಹಣದ ಬೇಡಿಕೆ ಮತ್ತು ಬೆದರಿಕೆಗಳು ಎದುರಾಗಿದ್ದವು ಎಂಬ ಆರೋಪಗಳು ಕೇಳಿಬಂದವು. ಈ ಪ್ರಕರಣದಲ್ಲಿ ದಾವೂದ್‌ನ ಸಹಚರ ಅಬು ಸಲೇಂ ಹೆಸರು ಕೇಳಿಬಂದಿತ್ತು.

ರಾಕೇಶ್ ರೋಷನ್ ದಾಳಿಯಿಂದ ಬದುಕುಳಿದರು. ಆದರೆ, ಚಿತ್ರರಂಗದ ಪ್ರಮುಖ ನಿರ್ಮಾಪಕರ ಮೇಲೆಯೇ ಗುಂಡಿನ ದಾಳಿ ನಡೆದಿದ್ದು ಕಲಾವಿದರಲ್ಲಿ ಆತಂಕ ಹೆಚ್ಚಿಸಿತು. ಆ ಅವಧಿಯಲ್ಲಿ ಶಾರುಖ್ ಖಾನ್, ಸುಭಾಷ್ ಘಾಯ್ ಸೇರಿದಂತೆ ಅನೇಕ ಪ್ರಭಾವಿ ಚಿತ್ರರಂಗದ ಅನೇಕರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

‘ಚೋರಿ ಚೋರಿ ಚುಪ್ಕೆ ಚುಪ್ಕೆ’: ಭೂಗತ ಲೋಕದ ಹಣದಿಂದ ಸಿನಿಮಾ ನಿರ್ಮಾಣ

ಬಾಲಿವುಡ್ ಮತ್ತು ಭೂಗತ ಲೋಕದ ಹಣಕಾಸಿನ ಸಂಪರ್ಕದ ಪ್ರಮುಖ ಪ್ರಕರಣವೆಂದರೆ 2001ರಲ್ಲಿ ಬಿಡುಗಡೆಯಾದ ‘ಚೋರಿ ಚೋರಿ ಚುಪ್ಕೆ ಚುಪ್ಕೆ’ ಸಿನಿಮಾ. ಸಲ್ಮಾನ್ ಖಾನ್, ರಾಣಿ ಮುಖರ್ಜಿ ಹಾಗೂ ಪ್ರೀತಿ ಜಿಂಟಾ ಅಭಿನಯದ ಈ ಸಿನಿಮಾದ ನಿರ್ಮಾಣಕ್ಕೆ ಭೂಗತ ಲೋಕದ ಹಣ ಬಳಕೆಯಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ತನಿಖೆಯೂ ನಡೆದಿದೆ. ಚಿತ್ರ ನಿರ್ಮಾಪಕ ನಜೀಮ್ ರಿಜ್ವಿ ಮತ್ತು ಪ್ರಮುಖ ಹೂಡಿಕೆದಾರ ಭರತ್ ಶಾ ವಿರುದ್ಧ ಪ್ರಕರಣ ದಾಖಲಾಗಿತ್ತು.

ತನಿಖೆಯಲ್ಲಿ ಛೋಟಾ ಶಕೀಲ್‌ನೊಂದಿಗೆ ನಡೆಸಲಾಗಿದೆ ಎನ್ನಲಾದ ದೂರವಾಣಿ ಸಂಭಾಷಣೆಗಳು ಪ್ರಮುಖ ಸಾಕ್ಷ್ಯಗಳಾಗಿದ್ದವು. 2003ರಲ್ಲಿ, ಮುಂಬೈ ನ್ಯಾಯಾಲಯವು ಭೂಗತ ಲೋಕದಿಂದ ಬಂದ ಹಣದ ಸಂಪರ್ಕದ ಕುರಿತು ಮಾಹಿತಿ ಇದ್ದರೂ ಅಧಿಕಾರಿಗಳಿಗೆ ತಿಳಿಸದಿದ್ದಕ್ಕಾಗಿ ಭರತ್ ಶಾ ಅವರನ್ನು ದೋಷಿ ಎಂದು ತೀರ್ಪು ನೀಡಿತು. ನಜೀಮ್ ರಿಜ್ವಿ ಮತ್ತು ಅವರ ಸಹಾಯಕ ಅಬ್ದುಲ್ ರಹೀಮ್ ಕೂಡ ಪ್ರಕರಣದಲ್ಲಿ ದೋಷಿಗಳೆಂದು ಘೋಷಿಸಿತು.

ಚಿತ್ರೋದ್ಯಮಕ್ಕೆ ಅಧಿಕೃತ ಮಾನ್ಯತೆ: ಭೂಗತ ಹಣಕ್ಕೆ ಕಡಿವಾಣ ಹಾಕುವ ಪ್ರಯತ್ನ

1998ರಲ್ಲಿ ಕೇಂದ್ರ ಸರ್ಕಾರ ಭಾರತೀಯ ಚಿತ್ರರಂಗಕ್ಕೆ ಉದ್ಯಮದ ಸ್ಥಾನಮಾನ ನೀಡಿತು. ಇದು ಚಿತ್ರೋದ್ಯಮದ ಹಣಕಾಸು ವ್ಯವಸ್ಥೆಯನ್ನು ಹೆಚ್ಚು ಸಂಘಟಿತಗೊಳಿಸುವ ಪ್ರಮುಖ ಹೆಜ್ಜೆಯಾಗಿತ್ತು. ಉದ್ಯಮದ ಸ್ಥಾನಮಾನವು ಬ್ಯಾಂಕ್ ಸಾಲ, ಕಾರ್ಪೊರೇಟ್ ಹೂಡಿಕೆ ಹಾಗೂ ಹಣಕಾಸು ಲೆಕ್ಕಪತ್ರಗಳ ವ್ಯವಸ್ಥೆಯ ವಿಸ್ತರಣೆಗೆ ಅನುವು ಮಾಡಿಕೊಟ್ಟಿತು. ಚಿತ್ರ ನಿರ್ಮಾಣದ ಔಪಚಾರಿಕ ಹಣಕಾಸು ವ್ಯವಸ್ಥೆ ಬಲಗೊಂಡಿತು.

ಆದರೆ, ಭೂಗತ ಲೋಕದಿಂದಬರುತ್ತಿದ್ದ ಬೆದರಿಕೆಗಳು ಸಂಪೂರ್ಣವಾಗಿ ನಿಂತುಹೋಗಲಿಲ್ಲ.  ಆವರೆಗೆ, ಸಿನಿಮಾ ನಿರ್ಮಾಣದಲ್ಲಿ ಹಣ ಹೂಡಿ ಪ್ರಭಾವ ಬೆಳೆಸಿಕೊಳ್ಳುತ್ತಿದ್ದ ಜಾಲಗಳು, ನಂತರದಲ್ಲಿ ನಟರು ಮತ್ತು ನಿರ್ಮಾಪಕರನ್ನು ಗುರಿಯಾಗಿಸಿಕೊಂಡ ಸುಲಿಗೆ, ಬೆದರಿಕೆ ಹಾಗೂ ದಾಳಿಗಳನ್ನು ನಡೆಸಲಾರಂಭಿಸಿದರು.

ಅಬು ಸಲೇಂ ಮತ್ತು ಛೋಟಾ ಶಕೀಲ್: ದೂರವಾಣಿ ಕರೆಗಳ ಮೂಲಕ ನಡೆಯುತ್ತಿದ್ದ ದರ್ಬಾರ್

1990ರ ದಶಕದಲ್ಲಿ ಬಾಲಿವುಡ್ ಎದುರಿಸಿದ ಪ್ರಮುಖ ಸಮಸ್ಯೆಗಳಲ್ಲಿ ಭೂಗತ ಲೋಕದಿಂದ ಬರುತ್ತಿದ್ದ ಬೆದರಿಕೆ ಕರೆಗಳು ಪ್ರಧಾನವಾಗಿದ್ದವು. ಅಬು ಸಲೇಂ ಮತ್ತು ಛೋಟಾ ಶಕೀಲ್ ಅವರ ಹೆಸರುಗಳು ಈ ಅವಧಿಯ ಹಲವು ಸುಲಿಗೆ ಮತ್ತು ಬೆದರಿಕೆ ಪ್ರಕರಣಗಳಲ್ಲಿ ಕೇಳಿಬಂದವು.

ಈ ಲೇಖನ ಓದಿದ್ದೀರಾ?: ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ? ಅಂಜಲಿ ಭಾರದ್ವಾಜ್‌ ಏನು ಹೇಳುತ್ತಾರೆ?

ಭೂಗತ ಲೋಕದ ಪ್ರಮುಖ ವ್ಯಕ್ತಿಗಳು ಭಾರತದಿಂದ ಹೊರಗೆ ನೆಲೆಸಿದ್ದರೂ ಮುಂಬೈನ ಅಪರಾಧ ಜಾಲಗಳ ಮೂಲಕ ಚಿತ್ರರಂಗದ ವ್ಯಕ್ತಿಗಳ ಮೇಲೆ ಒತ್ತಡ ಹೇರುತ್ತಿದ್ದರು. ಚಿತ್ರ ನಿರ್ಮಾಪಕರಿಂದ ಹಣ ಕೇಳುವುದು, ನಟರನ್ನು ನಿರ್ದಿಷ್ಟ ಸಿನಿಮಾಗಳಲ್ಲಿ ಅಭಿನಯಿಸುವಂತೆ ಒತ್ತಾಯಿಸುವುದು ಹಾಗೂ ವ್ಯವಹಾರಗಳಲ್ಲಿ ಪಾಲು ಪಡೆಯಲು ಪ್ರಯತ್ನಿಸುವುದು ಜಾಲಗಳ ಕಾರ್ಯವಿಧಾನವಾಗಿತ್ತು.

ಭೂಗತ ಲೋಕಕ್ಕೆ ಬಾಲಿವುಡ್ ಏಕೆ ಬೇಕಿತ್ತು?

ಚಿತ್ರರಂಗದೊಂದಿಗೆ ಸಂಪರ್ಕ ಬೆಳೆಸಲು ಅಪರಾಧ ಸಂಘಟನೆಗಳಿಗೆ ಹಲವು ಕಾರಣಗಳಿದ್ದವು. ಮೊದಲನೆಯದು ಹಣ. ದೊಡ್ಡ ಸಿನಿಮಾಗಳ ನಿರ್ಮಾಣ, ವಿತರಣೆ ಹಾಗೂ ಪ್ರದರ್ಶನ ವ್ಯವಸ್ಥೆಯಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿತ್ತು. ಈ ಹಣದ ಹರಿವಿನೊಳಗೆ ಪ್ರವೇಶಿಸುವುದು ಭೂಗತ ಪಾತಕಿಗಳಿಗೆ ಆರ್ಥಿಕವಾಗಿ ಆಕರ್ಷಕವಾಗಿತ್ತು.

ಎರಡನೆಯದು ಪ್ರತಿಷ್ಠೆ. ಜನಪ್ರಿಯ ನಟರೊಂದಿಗೆ ಕಾಣಿಸಿಕೊಳ್ಳುವುದರಿಂದ ಈ ಪಾತಕಿಗಳಿಗೆ ಸಾರ್ವಜನಿಕ ಪ್ರಚಾರ ಸಿಗುತ್ತಿತ್ತು. ಚಿತ್ರರಂಗದ ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವುದು ಅವರ ಅಪರಾಧ ಜಗತ್ತಿನ ಸ್ಥಾನಮಾನವನ್ನು ಹೆಚ್ಚಿಸುತ್ತಿತ್ತು.

ಮೂರನೆಯದು ಅಧಿಕಾರ. ದೊಡ್ಡ ಉದ್ಯಮದ ಪ್ರಮುಖ ವ್ಯಕ್ತಿಗಳಿಗೆ ಬೆದರಿಕೆ ಹಾಕಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಮೂಲಕ ಸಂಘಟನೆಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸುತ್ತಿದ್ದವು.

ನಾಲ್ಕನೆಯದು ಪ್ರಭಾವ ವಿಸ್ತರಣೆ. ಸಿನಿಮಾ, ರಿಯಲ್ ಎಸ್ಟೇಟ್, ಹೋಟೆಲ್, ನೈಟ್‌ಕ್ಲಬ್ ಹಾಗೂ ಹಣಕಾಸು ವ್ಯವಹಾರಗಳ ನಡುವೆ ಅನೇಕ ವಾಣಿಜ್ಯ ಸಂಪರ್ಕಗಳಿದ್ದವು. ಒಂದು ವಲಯದಲ್ಲಿ ಪ್ರಭಾವ ಬೆಳೆಸಿದರೆ ಮತ್ತೊಂದು ವಲಯದ ವ್ಯವಹಾರಗಳ ಮೇಲೂ ಪರಿಣಾಮ ಬೀರುವ ಅವಕಾಶವಿತ್ತು.

ಐದನೆಯದು ಸಾರ್ವಜನಿಕ ಭಯ. ಜನಪ್ರಿಯ ನಟನ ಮೇಲೆ ಗುಂಡಿನ ದಾಳಿ ನಡೆಸಿದರೆ ಅದು ಸಾಮಾನ್ಯ ಸುಲಿಗೆ ಪ್ರಕರಣಕ್ಕಿಂತ ಹೆಚ್ಚಿನ ಮಾಧ್ಯಮ ಗಮನ ಸೆಳೆಯುತ್ತದೆ. ಅದನ್ನು ಬಳಸಿಕೊಂಡು ಇತರರಿಗೆ ಬೆದರಿಕೆ ಸಂದೇಶ ರವಾನಿಸುತ್ತಿದ್ದವು.

ಹೀಗಾಗಿ, ಭೂಗತ ಲೋಕಕ್ಕೆ ಬಾಲಿವುಡ್ ಕೇವಲ ಹಣ ಗಳಿಸುವ ಕ್ಷೇತ್ರವಾಗಿರಲಿಲ್ಲ. ಅದು ತಮ್ಮ ಪ್ರಭಾವವನ್ನು ಪ್ರದರ್ಶಿಸುವ ವೇದಿಕೆಯೂ ಆಗಿತ್ತು.

ಲಾರೆನ್ಸ್ ಬಿಷ್ಣೋಯ್: ಹೊಸ ಕಾಲದ ಭೂಗತ ಲೋಕದ ಪ್ರವೇಶ

ಮುಂಬೈಅನ್ನು ಭೂಗತ ಲೋಕವನ್ನು ಎಷ್ಟೇ ನಡುಗಿಸಿದರೂ, ಅಂತಿಮವಾಗಿ, ಭೂಗತ ಪಾತಕಿಗಳನ್ನು ಪೊಲೀಸ್‌ ವ್ಯವಸ್ಥೆ ಸದೆಬಡಿಯಿತು. ಭೂಗತ ಜಗತ್ತಿಗೆ ಪೂರ್ಣವಿರಾಮವೂ ಬಿದ್ದಂತೆಯೇ ಕಂಡಿತ್ತು. ಆದರೆ, ಈಗ ಹೊಸ ರೀತಿಯ ಅಪರಾಧ ಜಗತ್ತು ಮುನ್ನೆಲೆಗೆ ಬರಲು ಯತ್ನಿಸುತ್ತಿದೆ. ಇದು ಹಳೆಯ ಭೂಗತ ಲೋಕಕ್ಕಿಂತ ಭಿನ್ನವಾದ ಸ್ವರೂಪದಲ್ಲಿದೆ.

ಒಂದು ಕಾಲದಲ್ಲಿ ಮುಂಬೈನ ಸ್ಥಳೀಯ ಅಪರಾಧ ಜಾಲಗಳು ನಗರವನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದವು. ಈಗ ಹಲವು ರಾಜ್ಯಗಳಲ್ಲಿ ಹರಡಿಕೊಂಡಿರುವ ಜಾಲಗಳು, ವಿದೇಶದಲ್ಲಿರುವ ಸಹಚರರು ಮತ್ತು ಡಿಜಿಟಲ್ ಸಂಪರ್ಕ ವ್ಯವಸ್ಥೆಗಳ ಮೂಲಕ ಸಂಘಟಿತ ಅಪರಾಧಗಳನ್ನು ಎಸಗುತ್ತಿವೆ.

image 217

ಇಂತಹ ಜಾಲಗಳ ಪೈಕಿ ಲಾರೆನ್ಸ್ ಬಿಷ್ಣೋಯ್ ನೇತೃತ್ವದ ಸಂಘಟನೆ ಹೆಚ್ಚು ಗಮನ ಸೆಳೆದಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಈ ಗ್ಯಾಂಗ್‌ನ ಅಪರಾಧ ಚಟುವಟಿಕೆಗಳ ಕುರಿತು ಪ್ರಕರಣಗಳು ದಾಖಲಾಗಿವೆ. ಕೊಲೆ, ಸುಲಿಗೆ, ಜೀವಬೆದರಿಕೆ ಹಾಗೂ ಶಸ್ತ್ರಾಸ್ತ್ರ ಸಂಬಂಧಿತ ಪ್ರಕರಣಗಳಲ್ಲಿ ಅದರ ಸದಸ್ಯರ ಹೆಸರುಗಳು ಕೇಳಿಬಂದಿವೆ.

ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿದ್ದರೂ ಆತನ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುವ ಜಾಲದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಜಾಲದ ಪ್ರಮುಖ ಲಕ್ಷಣವೆಂದರೆ; ಬೇರೆಬೇರೆ ಪ್ರದೇಶಗಳ ಸಹಚರರನ್ನು ಬಳಸಿಕೊಳ್ಳುವುದು. ವಿದೇಶದಲ್ಲಿರುವ ವ್ಯಕ್ತಿಗಳಿಂದ ಬೆದರಿಕೆ ಸಂದೇಶಗಳನ್ನು ಬಿಡುಗಡೆ ಮಾಡಿಸುವುದು, ಸ್ಥಳೀಯ ಸಹಚರರ ಮೂಲಕ ದಾಳಿಗಳನ್ನು ನಡೆಸುವುದು ಹಾಗೂ ಸಾಮಾಜಿಕ ಮಾಧ್ಯಮದ ಮೂಲಕ ದಾಳಿಯ ಹೊಣೆ ಹೊತ್ತುಕೊಳ್ಳುವುದು ಇದರ ಕಾರ್ಯವಿಧಾನ.

ಸಲ್ಮಾನ್ ಖಾನ್ ಮತ್ತು ಬಿಷ್ಣೋಯ್ ಗ್ಯಾಂಗ್ ನಡುವಿನ ಸಂಘರ್ಷ

ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಡುವಿನ ಸಂಘರ್ಷಕ್ಕೆ 1998ರ ಕೃಷ್ಣಮೃಗ ಬೇಟೆ ಪ್ರಕರಣವೇ ಕಾರಣವಂದು ಬಿಷ್ಣೋಯ್ ಗ್ಯಾಂಗ್ ಹೇಳಿಕೊಂಡಿದೆ. ರಾಜಸ್ಥಾನದಲ್ಲಿ ಚಿತ್ರೀಕರಣದ ವೇಳೆ, ಕೃಷ್ಣಮೃಗವನ್ನು ಸಲ್ಮಾನ್ ಖಾನ್ ಭೇಟೆಯಾಡಿದ್ದರು ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಖಾನ್‌ ವಿರುದ್ಧ ಕಾನೂನು ಕ್ರಮಗಳೂ ನಡೆದಿವೆ.

ಆದರೆ, ಬಿಷ್ಣೋಯ್ ಸಮುದಾಯವು ಕೃಷ್ಣಮೃಗವನ್ನು ಪವಿತ್ರ ಪ್ರಾಣಿಯೆಂದು ಪರಿಗಣಿಸುತ್ತದೆ. ಈ ಹಿನ್ನೆಲೆಯನ್ನು ಮುಂದಿಟ್ಟುಕೊಂಡು ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಸಹಚರರು ಸಲ್ಮಾನ್ ಖಾನ್ ವಿರುದ್ಧ ಬೆದರಿಕೆಗಳನ್ನು ಹಾಕುತ್ತಾ ಬಂದಿದ್ದಾರೆ. ಆದರೆ, ಇದು ಬಿಷ್ಣೋಯ್ ಸಮುದಾಯದ ಸಮಸ್ಯೆಯಲ್ಲ, ಕೇವಲ ಲಾರೆನ್ಸ್ ಬಿಷ್ಣೋಯ್ ನೇತೃತ್ವದ ಅಪರಾಧ ಸಂಘಟನೆ ಕೃತ್ಯ.

2024ರ ಏಪ್ರಿಲ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡಿನ ದಾಳಿ ನಡೆಯಿತು. ಈ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಹೊತ್ತುಕೊಂಡಿದ್ದ. ಪ್ರಕರಣದಲ್ಲಿ ಪೊಲೀಸರು ದಾಳಿಕೋರರನ್ನು ಬಂಧಿಸಿದ್ದರು. ಈ ಘಟನೆ ಬಾಲಿವುಡ್‌ನಲ್ಲಿ ಮತ್ತೊಮ್ಮೆ ಆತಂಕ ಹುಟ್ಟಿಸಿತು.

ಸಲ್ಮಾನ್ ಖಾನ್ ಅವರಿಗೆ ಭದ್ರತೆ ಒದಗಿಸಲಾಗಿದ್ದರೂ ಅವರ ನಿವಾಸದ ಹೊರಗೆ ಗುಂಡಿನ ದಾಳಿ ನಡೆದದ್ದು ಪೊಲೀಸ್ ರಕ್ಷಣೆಯ ಪರಿಣಾಮಕಾರಿತ್ವದ ಕುರಿತು ಪ್ರಶ್ನೆಗಳನ್ನು ಎಬ್ಬಿಸಿತು. ಜೊತಗೆ ಬಿಷ್ಣೋಯ್ ಗ್ಯಾಂಗ್‌ ಖಾನ್‌ ಅವರೊಂದಿಗೆ ಸಂಪರ್ಕ ಹೊಂದಿರುವ ಇತರ ವ್ಯಕ್ತಿಗಳನ್ನೂ ಗುರಿಯಾಗಿಸಿಕೊಂಡು ದಾಳಿ ಮಾಡುವುದಾಗಿ ಬೆದರಿಕೆ ಹಾಕಿತು.

ಬಾಬಾ ಸಿದ್ದಿಖಿ ಹತ್ಯೆ: ನಟರ ಸ್ನೇಹಿತರಿಗೂ ಅಪಾಯವೇ?

2024ರ ಅಕ್ಟೋಬರ್ 12ರಂದು ಮಹಾರಾಷ್ಟ್ರದ ಮಾಜಿ ಸಚಿವ, ಎನ್‌ಸಿಪಿ ನಾಯಕ ಬಾಬಾ ಸಿದ್ದಿಖಿ ಅವರನ್ನು ಮುಂಬೈನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಸಿದ್ದಿಖಿ ಅವರನ್ನು ಬಿಷ್ಣೋಯ್ ಗ್ಯಾಂಗ್ ಹತ್ಯೆಗೈದಿದೆ. ಸಿದ್ದಿಖಿ ಅವರು ಖಾನ್ ಜೊತೆ ಸಂಪರ್ಕ ಹೊಂದಿದ್ದದ್ದೇ ಈ ಹತ್ಯೆಗೆ ಕಾರಣವೆಂದು ಎಂದು ಪೊಲೀಸರು ಆರೋಪಿಸಿದ್ದಾರೆ.

ಈ ಹತ್ಯೆಯ ನಂತರ, 2026ರಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ ಅವರ ನಿವಾಸದ ಹೊರಗೆ ಗುಂಡಿನ ದಾಳಿ ನಡೆದಿದೆ. ಈ ಪ್ರಕರಣದಲ್ಲಿಯೂ ಬಿಷ್ಣೋಯ್ ಗ್ಯಾಂಗ್‌ನ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಹಾಸ್ಯನಟ ಕಪಿಲ್ ಶರ್ಮಾ ಅವರ ಕೆನಡಾದ ಕೆಫೆಯ ಮೇಲೂ ಹಲವು ಬಾರಿ ಗುಂಡಿನ ದಾಳಿಗಳು ನಡೆದಿವೆ. ಪಂಜಾಬಿ ಸಂಗೀತ ಕ್ಷೇತ್ರದ ಎ.ಪಿ. ಧಿಲ್ಲೋನ್ ಮತ್ತು ಗಿಪ್ಪಿ ಗ್ರೆವಾಲ್ ಅವರಿಗೂ ಬೆದರಿಕೆ ಮತ್ತು ದಾಳಿ ಘಟನೆಗಳು ಎದುರಾಗಿವೆ. ಈ ಪ್ರಕರಣಗಳಲ್ಲಿ ವಿವಿಧ ಗ್ಯಾಂಗ್‌ಗಳ ಹೆಸರುಗಳು ಕೇಳಿಬಂದಿದ್ದರೂ, ಪ್ರಧಾನವಾಗಿ ಬಿಷ್ಣೋಯ್‌ ಗ್ಯಾಂಗ್‌ ಹೆಸರೂ ಇದೆ.

ಇದೀಗ, ಟೈಗರ್ ಶ್ರಾಫ್ ಮೇಲಿನ ದಾಳಿಗೆ ಬಿಷ್ಣೋಯ್ ಗ್ಯಾಂಗ್ ಹೊಣೆ ಹೊತ್ತಿದೆ. ಈ ಗ್ಯಾಂಗ್‌ ಹೆಸರಿನಲ್ಲಿ ಪ್ರಕಟವಾದ ಸಂದೇಶದಲ್ಲಿ ಸಲ್ಮಾನ್ ಖಾನ್ ಮತ್ತು ಅವರೊಂದಿಗೆ ಕೆಲಸ ಮಾಡುವ ಇತರ ಕಲಾವಿದರಿಗೆ ಬೆದರಿಕೆ ಹಾಕಲಾಗಿದೆ.

ಲಾರೆನ್ಸ್‌ ಜೈಲಿನಲ್ಲಿದ್ದರೂ ಅಪರಾಧ ಜಾಲಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಲಾರೆನ್ಸ್ ಬಿಷ್ಣೋಯ್ ಗುಜರಾತಿನ ಸಾಬರಮತಿ ಕೇಂದ್ರ ಕಾರಾಗೃಹದಲ್ಲಿದ್ದು, ಆತನ ಸಹೋದರ ಅನ್ಮೋಲ್ ಬಿಷ್ಣೋಯ್ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಆದರೂ, ಈ ಸಂಘಟನೆಯ ಹೆಸರಿನಲ್ಲಿ ವಿವಿಧ ಪ್ರದೇಶಗಳಲ್ಲಿ ಬೆದರಿಕೆ ಮತ್ತು ದಾಳಿಗಳು ನಡೆಯುತ್ತಲೇ ಇವೆ.

ಟೈಗರ್ ಶ್ರಾಫ್ ಪ್ರಕರಣದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಬಿಷ್ಣೋಯ್ ಸಹೋದರರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯುವಲ್ಲಿ ಎದುರಿಸುತ್ತಿರುವ ಕಾನೂನು ಮತ್ತು ಆಡಳಿತಾತ್ಮಕ ಅಡೆತಡೆಗಳ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸಿವೆ.  ಲಾರೆನ್ಸ್‌ ಬಿಷ್ಟೋಯ್‌ನನ್ನು ತಮ್ಮ ಕಷ್ಟಡಿಗೆ ಪಡೆದುಕೊಳ್ಳಲು ವರ್ಷಗಳಿಂದ ಮುಂಬೈ ಪೊಲೀಸರು ಸೇರಿದಂತೆ ದೇಶದ ವಿವಿಧ ರಾಜ್ಯಗಳ ತನಿಖಾ ಸಂಸ್ಥೆಗಳು ಯತ್ನಿಸುತ್ತಿವೆ. ಆದರೆ, ಸಾಧ್ಯವಾಗುತ್ತಿಲ್ಲ. ಇದಕ್ಕೆ ಕೇಂದ್ರ ಗೃಹ ಸಚಿವಾಲಯದ ಕಠಿಣ ಕಾನೂನು ತಡೆಗೋಡೆಯು ಇದಕ್ಕೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ. 

ಈ ಲೇಖನ ಓದಿದ್ದೀರಾ?: ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ; ಸುಪ್ರೀಂನದ್ದು ದ್ವಂದ್ವ ನಿಲುವಲ್ಲವೇ?

2023ರ ಆಗಸ್ಟ್‌ನಲ್ಲಿ ಕೇಂದ್ರ ಗೃಹ ಸಚಿವಾಲಯವು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 268ರ ಅಡಿಯಲ್ಲಿ ಅಧಿಕೃತ ಆದೇಶ ಹೊರಡಿಸಿದ್ದು, ಬಿಷ್ಣೋಯ್‌ನನ್ನು ಆ ಜೈಲಿನಿಂದ ಹೊರತರಲು ಅಥವಾ ಬೇರೆಡೆಗೆ ಸ್ಥಳಾಂತರಿಸಲು ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದೆ. ಆ ನಂತರ, ಜಾರಿಗೆ ಬಂದ ‘ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ’ಯ (BNSS) ಸೆಕ್ಷನ್ 303ರ ಅಡಿಯಲ್ಲಿ ಈ ನಿರ್ಬಂಧ ಮುಂದುವರಿದಿದೆ.

ವಿಶೇಷವೆಂದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಚಿವಾಲಯವು 2025ರ ಆಗಸ್ಟ್‌ನಲ್ಲಿ ಈ ಆದೇಶವನ್ನು ಸತತ ಮೂರನೇ ಬಾರಿಗೆ ನವೀಕರಿಸಿದ್ದು, ಆತನನ್ನು ಸಬರ್ಮತಿ ಜೈಲಿನಿಂದ ಹೊರಗೆ ಕೊಂಡೊಯ್ಯದಂತೆ ಸಂಪೂರ್ಣ ರಕ್ಷಣೆ ಕಲ್ಪಿಸಿದೆ. ಇದರಿಂದಾಗಿ ಯಾವುದೇ ರಾಜ್ಯದ ಪೊಲೀಸರಿಗೆ ಆತನನ್ನು ಕಸ್ಟಡಿ ಪಡೆಯುವುದು ಅಸಾಧ್ಯವಾಗಿದ್ದು, ಕೇವಲ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರ ವಿಚಾರಣೆ ನಡೆಸಲು ಅವಕಾಶ ನೀಡಲಾಗಿದೆ.

ದೇಶದ ಆಂತರಿಕ ಭದ್ರತೆಯ ಹೊಣೆ ಹೊತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಣ್ಗಾವಲಿನಲ್ಲಿಯೇ ಜೈಲಿನಲ್ಲಿರುವ ಒಬ್ಬ ಕುಖ್ಯಾತ ಅಪರಾಧಿ ವಿದೇಶಗಳಲ್ಲಿ ಮತ್ತು ಮುಂಬೈ ಬೀದಿಗಳಲ್ಲಿ ತನ್ನ ಕ್ರಿಮಿನಲ್ ಸಾಮ್ರಾಜ್ಯವನ್ನು ಹೇಗೆ ಮುನ್ನಡೆಸಲು ಸಾಧ್ಯ ಎಂಬ ಪ್ರಶ್ನೆಗೆ ಆಡಳಿತದಿಂದ ಯಾವುದೇ ಸ್ಪಷ್ಟ ಉತ್ತರವಿಲ್ಲ. ಲಾರೆನ್ಸ್ ಬಿಷ್ಣೋಯ್ ಜೈಲಿನಿಂದಲೇ ಬೆದರಿಕೆ ಸಂದೇಶಗಳನ್ನು ಕಳುಹಿಸುವುದು ಮತ್ತು ಗುಂಡಿನ ದಾಳಿಗಳ ಆದೇಶಗಳನ್ನು ಹೊರಡಿಸುತ್ತಿದ್ದರೂ, ಆತನನ್ನು ಅತ್ಯುನ್ನತ ಭದ್ರತೆಯ ಎನ್‌ಐಎ ಸೌಲಭ್ಯದಲ್ಲಿ ಏಕೆ ಬಂಧಿಸಿಡಲಾಗಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ.

ಬಾಲಿವುಡ್ ಮತ್ತು ಭೂಗತ ಲೋಕ: ಪ್ರಮುಖ ಘಟನೆಗಳ ಕಾಲಾನುಕ್ರಮ

ಅವಧಿಪ್ರಮುಖ ಬೆಳವಣಿಗೆ
1960–70ರ ದಶಕಹಾಜಿ ಮಸ್ತಾನ್ ಮೊದಲಾದ ಕಳ್ಳಸಾಗಣೆ ಜಾಲಗಳ ನಾಯಕರಿಗೆ ಚಿತ್ರರಂಗದೊಂದಿಗೆ ಸಾಮಾಜಿಕ ಸಂಪರ್ಕ
1980ರ ದಶಕದಾವೂದ್ ಇಬ್ರಾಹಿಂ ನೇತೃತ್ವದ ಡಿ-ಕಂಪನಿಯ ಪ್ರಭಾವ ವಿಸ್ತರಣೆ
1993ಮುಂಬೈ ಸರಣಿ ಬಾಂಬ್ ಸ್ಫೋಟಗಳು; ಸಂಜಯ್ ದತ್ ಶಸ್ತ್ರಾಸ್ತ್ರ ಪ್ರಕರಣ
1997ಟಿ-ಸಿರೀಸ್ ಸ್ಥಾಪಕ ಗುಲ್ಶನ್ ಕುಮಾರ್ ಹತ್ಯೆ
1998ಭಾರತೀಯ ಚಿತ್ರರಂಗಕ್ಕೆ ಉದ್ಯಮದ ಸ್ಥಾನಮಾನ
2000ನಿರ್ಮಾಪಕ ರಾಕೇಶ್ ರೋಷನ್ ಮೇಲೆ ಗುಂಡಿನ ದಾಳಿ
2001–03ಚೋರಿ ಚೋರಿ ಚುಪ್ಕೆ ಚುಪ್ಕೆ ಹಣಕಾಸು ಪ್ರಕರಣ ಮತ್ತು ನ್ಯಾಯಾಲಯದ ತೀರ್ಪು
2024 ಏಪ್ರಿಲ್ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡಿನ ದಾಳಿ
2024 ಅಕ್ಟೋಬರ್ಮಾಜಿ ಸಚಿವ ಬಾಬಾ ಸಿದ್ದಿಖಿ ಹತ್ಯೆ
2025–26ಮನರಂಜನಾ ಕ್ಷೇತ್ರದ ಹಲವರನ್ನು ಗುರಿಯಾಗಿಸಿದ ಬೆದರಿಕೆ ಮತ್ತು ದಾಳಿಗಳು
2026 ಅಕ್ಟೋಬರ್ 18ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ; ಬಿಷ್ಣೋಯ್ ಗ್ಯಾಂಗ್ ಹೊಣೆ ಹೊತ್ತುಕೊಂಡಿರುವುದಾಗಿ ಹೇಳಿಕೆ

ದಾವೂದ್ ಇಬ್ರಾಹಿಂ, ಛೋಟಾ ಶಕೀಲ್ ಮತ್ತು ಅಬು ಸಲೇಂ ಅವರ ಕಾಲದಿಂದ ಲಾರೆನ್ಸ್ ಬಿಷ್ಣೋಯ್ ಸಂಘಟನೆಯವರೆಗೆ ಅಪರಾಧ ಜಗತ್ತಿನ ನಾಯಕರು ಮತ್ತು ಕಾರ್ಯವಿಧಾನಗಳು ಬದಲಾಗಿವೆ. ಆದರೆ ಹಣ, ಪ್ರಭಾವ ಮತ್ತು ಭಯದ ಮೂಲಕ ಸಿನಿಮಾ ಉದ್ಯಮದ ಮೇಲೆ ಹಿಡಿತ ಸಾಧಿಸುವ ಪ್ರಯತ್ನಗಳು ಬೇರೆಬೇರೆ ರೂಪಗಳಲ್ಲಿ ಮುಂದುವರಿದಿವೆ.

ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಈ ಸುದೀರ್ಘ ಇತಿಹಾಸದ ಇತ್ತೀಚಿನ ಘಟನೆಯಾಗಿದೆ. ಆಗಾತಕಾರಿ ಸಂಗತಿಯೆಂದರೆ ಅಪರಾಧ ಸಂಘಟನೆಗಳು ಸಿನಿಮಾ ಕಲಾವಿದರನ್ನಷ್ಟೇ ಅಲ್ಲ, ಅವರೊಂದಿಗೆ ಸಂಪರ್ಕ ಹೊಂದಿರುವ ಇತರರನ್ನೂ ಗುರಿಯಾಗಿಸುವ ಬೆದರಿಕೆ ಹಾಕುತ್ತಿದ್ದಾರೆ.

ಇದನ್ನೂ ಓದಿ ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡಲು ಮುಂದಾಗುತ್ತಿದ್ದ ಭೂಗತ ಲೋಕ, ಈಗ ಕಲಾವಿದರು ಯಾರೊಂದಿಗೆ ಕೆಲಸ ಮಾಡಬೇಕೆಂಬುದನ್ನೂ ಬಂದೂಕಿನ ಮೂಲಕ ನಿರ್ಧರಿಸಲು ಪ್ರಯತ್ನಿಸುತ್ತಿದೆ. ಈ ಬೆಳವಣಿಗೆಯನ್ನು ತಡೆಯುವುದು ಕೇವಲ ಮುಂಬೈ ಪೊಲೀಸರ ಕರ್ತವ್ಯವಲ್ಲ; ಕಾನೂನಿನ ಆಡಳಿತ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಪ್ರಜಾಪ್ರಭುತ್ವದ ಜವಾಬ್ದಾರಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದ ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ತುರ್ತು ಮಧ್ಯಪ್ರವೇಶಿಸಲು ಪ್ರಧಾನಿಗೆ ಸಿಎಂ ಡಿ ಕೆ ಶಿವಕುಮಾರ್ ಮನವಿ

ಸದ್ಯದಲ್ಲೇ ಕಬ್ಬು ಅರೆಯುವ ಋತು ಆರಂಭವಾಗಲಿದ್ದು, ಕರ್ನಾಟಕದ ಕಬ್ಬು ಬೆಳೆಗಾರರ ಬೇಡಿಕೆಗಳಿಗೆ...

ಮಣಿಪುರ | ಉಗ್ರರ ದಾಳಿಗೆ ಮೂವರು ಬಲಿ; ಸಿಎಂ ನಿವಾಸದ ಮುಂದೆ ಮೃತದೇಹಗಳನ್ನಿಟ್ಟು ಆಕ್ರೋಶ

ಮಣಿಪುರದ ಅರಣ್ಯ ಪ್ರದೇಶದಲ್ಲಿ ಕಟ್ಟಿಗೆ ಸಂಗ್ರಹಿಸಲು ತೆರಳಿದ್ದ ಮೂವರನ್ನು ಸೋಮವಾರ ಉಗ್ರರು...

ರಾಜ್ಯದ ಹಲವು ಜಿಲ್ಲೆಗಳಲ್ಲಿ 7 ದಿನಗಳವರೆಗೆ ಮಳೆ ಆರ್ಭಟ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಹಿಂಗಾರು ಮುಂದುವರಿದಿದ್ದು, ಕರ್ನಾಟಕದ ಪ್ರಮುಖ ಮೂರು ವಲಯಗಳಾದ ಕರಾವಳಿ, ಉತ್ತರ...

ತೀರ್ಥಹಳ್ಳಿ ಖಾಸಗಿ ಬಸ್‌ಗಳ ಅಕ್ರಮ ಧೋರಣೆ ಖಂಡಿಸಿ ಪ್ರತಿಭಟನೆ: ದುರ್ಗಾಂಬಾ ವಿರುದ್ಧ ಕಾನೂನು ಕ್ರಮ

ಶಿವಮೊಗ್ಗದ ಖಾಸಗಿ ಬಸ್‌ ನಿಲ್ದಾಣದಲ್ಲಿ ತೀರ್ಥಹಳ್ಳಿ ಹಾಗೂ ಆಗುಂಬೆ ಭಾಗಕ್ಕೆ ತೆರಳುವ...