ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ ವಿಶ್ವಕ್ಕೇ ಬಿಡಿಸಲಾಗದ ಒಗಟು.
ಸೌದಿ ಅರೇಬಿಯಾ ಇಂದು ಚರಿತ್ರೆಯ ನಿರ್ಣಾಯಕ ಕವಲುದಾರಿಯಲ್ಲಿ ನಿಂತಿದೆ. ಮೂರು ದಶಕಗಳ ಹಿಂದೆ ಯಾರೂ ಗಂಭೀರವಾಗಿ ಪರಿಗಣಿಸದಿದ್ದ ಹೂತಿ ಹೋರಾಟಗಾರರು, ಇಂದು ಅರಬ್ ಜಗತ್ತಿನ ವಸಾಹತುಶಾಹಿ ಇತಿಹಾಸದ ಕುರುಹುಗಳನ್ನೇ ಅಲುಗಾಡಿಸುತ್ತಿದ್ದಾರೆ. ಅಪಾರ ಸಂಪತ್ತನ್ನು ಹೊಂದಿರುವ ಅರಬ್ ರಾಷ್ಟ್ರಗಳ ಒಕ್ಕೂಟವು ಯೆಮನ್ ಮೇಲೆ ನಿರಂತರ ಬಾಂಬ್ ದಾಳಿ ನಡೆಸಿ, ದೇಶವನ್ನೇ ಸರ್ವನಾಶದ ಅಂಚಿಗೆ ತಳ್ಳಿದೆ. ಆದರೂ ಗಟ್ಟಿಯಾಗಿ ನೆಲಕ್ಕೆ ಕಾಲು ಕೀಲಿಸಿ ನಿಂತಿರುವ ಹೂತಿಗಳ ಪ್ರಬಲ ಪ್ರತಿರೋಧ ಈಗ ಇಡೀ ಅರಬ್ ಜಗತ್ತಿನ ರಾಜಕೀಯ ಸಮೀಕರಣಗಳನ್ನೇ ಬದಲಾಯಿಸುತ್ತಿದೆ.
2014ರಲ್ಲಿ ಉತ್ತರ ಯೆಮನ್ನ ರಾಜಧಾನಿ ಸನಾವನ್ನು ವಶಪಡಿಸಿಕೊಂಡ ಹೂತಿಗಳು, ಕಳೆದ 12 ವರ್ಷಗಳಿಂದ ಸೌದಿ ನೇತೃತ್ವದ ಮಿತ್ರಪಡೆಗಳ ಭೀಕರ ವೈಮಾನಿಕ ದಾಳಿಗಳನ್ನು ಎದುರಿಸುತ್ತ ಬಂದಿದ್ದಾರೆ. ಇದೀಗ ಅವರು ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕುವ ಹಂತಕ್ಕೆ ಬೆಳೆದುನಿಂತಿದ್ದಾರೆ.
ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ದುರಂತ ಹತ್ಯೆ ಹಾಗೂ ಜುಲೈ ತಿಂಗಳಲ್ಲಿ ಅರಬ್ ಜಗತ್ತಿನ ಅತ್ಯಂತ ಬಡ ರಾಷ್ಟ್ರವಾದ ಯೆಮನ್ ವಿರುದ್ಧ ಯುದ್ಧ ಮತ್ತೆ ಆರಂಭವಾದ ನಂತರ, ಸೌದಿ ಅರೇಬಿಯಾ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಅಸ್ತಿತ್ವದ ಅಪಾಯವನ್ನು ಎದುರಿಸುತ್ತಿದೆ.
ಇದನ್ನೂ ಓದಿ: ಸನಾದ ತೈಲ ಘಟಕದ ಮೇಲೆ ಸೌದಿ ನೇತೃತ್ವದ ಮೈತ್ರಿಕೂಟದ ದಾಳಿ: ಬೆನ್ನಲ್ಲೇ ಅರಾಮ್ಕೊ ತೈಲ ಕಂಪನಿಯ ಮೇಲೆ ಹೂತಿಗಳ ಪ್ರತಿದಾಳಿ
ಸೌದಿ ರಾಜಮನೆತನವು ಈಗ ಅರೇಬಿಯಾದ ಭೌಗೋಳಿಕ ಗಡಿಗಳು ಮತ್ತು ಅವುಗಳೊಳಗೆ ಅಡಗಿರುವ ಐತಿಹಾಸಿಕ ಬಿರುಕುಗಳ ಕಹಿ ವಾಸ್ತವವನ್ನು ಅರಿತುಕೊಳ್ಳುತ್ತಿದೆ. ಮುಖ್ಯವಾಗಿ 20ನೇ ಶತಮಾನದ ಮೊದಲಾರ್ಧದಲ್ಲಿ ಬ್ರಿಟಿಷರು ಮತ್ತು ಫ್ರೆಂಚರು ಹಾಗೂ ನಂತರದ ಅವಧಿಯಲ್ಲಿ ಅಮೆರಿಕ ರೂಪಿಸಿದ ವಸಾಹತುಶಾಹಿ ಪ್ರಭಾವದ ಗಡಿಗಳು ಮತ್ತು ರಾಜಕೀಯ ವ್ಯವಸ್ಥೆಗಳ ಪರಿಣಾಮಗಳು ಈಗ ಸೌದಿ ಅರೇಬಿಯಾವನ್ನು ಕಾಡಲಾರಂಭಿಸಿವೆ.
ಯೆಮನ್ ಯುದ್ಧದಲ್ಲಿ ಸೌದಿ ಅರೇಬಿಯಾಕ್ಕೆ ಭಾರೀ ಹಿನ್ನಡೆ
ಯೆಮನ್ನಲ್ಲಿ ಸೌದಿ ಅರೇಬಿಯಾ ನಡೆಸಿದ ಮಿಲಿಟರಿ ಹಸ್ತಕ್ಷೇಪವು ಆ ದೇಶಕ್ಕೆ ಕಾರ್ಯತಂತ್ರ, ಆರ್ಥಿಕತೆ ಮತ್ತು ಮಾನವ ಸಂಪನ್ಮೂಲದ ದೃಷ್ಟಿಯಿಂದ ಅಪಾರ ನಷ್ಟವನ್ನು ಉಂಟುಮಾಡಿದೆ.
ಹೂತಿ ಚಳವಳಿಯನ್ನು ನಿರ್ಮೂಲಗೊಳಿಸುವುದು, ತನ್ನ ಗಡಿಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಹಾಗೂ ದೇಶದ ಪ್ರಮುಖ ಆರ್ಥಿಕ ಜೀವನಾಡಿಗಳನ್ನು ರಕ್ಷಿಸಿಕೊಳ್ಳುವುದು ಸೌದಿಯ ಮೂಲ ಉದ್ದೇಶಗಳಾಗಿದ್ದವು. ಆದರೆ ಈ ಮೂರೂ ಗುರಿಗಳನ್ನು ಸಾಧಿಸುವಲ್ಲಿ ರಿಯಾದ್ ವಿಫಲವಾಗಿದೆ.
ಆರ್ಥಿಕವಾಗಿ ನೋಡಿದರೆ, ಈ ಯುದ್ಧಕ್ಕಾಗಿ ಸೌದಿ ಅರೇಬಿಯಾ ನೂರಾರು ಶತಕೋಟಿ ಡಾಲರ್ಗಳನ್ನು ವ್ಯಯಿಸಿದೆ. ಇದರಿಂದ ಸೌದಿ ಸರ್ಕಾರದ ಮಹತ್ವಾಕಾಂಕ್ಷೆಯ ‘ಸೌದಿ ವಿಷನ್ 2030’ ಆರ್ಥಿಕ ವೈವಿಧ್ಯೀಕರಣ ಯೋಜನೆಗಳಿಗೂ ದೊಡ್ಡ ಹೊಡೆತ ಬಿದ್ದಿದೆ.
ಅಪಾರ ರಕ್ಷಣಾ ಬಜೆಟ್ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡಿದ್ದರೂ, ಸೌದಿ ಸೇನೆಯು ಯುದ್ಧದಲ್ಲಿ ಗಣನೀಯ ಪ್ರಮಾಣದ ಸೈನಿಕ ಮತ್ತು ಶಸ್ತ್ರಾಸ್ತ್ರ ನಷ್ಟವನ್ನು ಅನುಭವಿಸಿದೆ. ಅತ್ಯಂತ ದುಬಾರಿ ಬೇಹುಗಾರಿಕಾ ಡ್ರೋನ್ಗಳು, ಅಪಾಚೆ ಹೆಲಿಕಾಪ್ಟರ್ಗಳು ಹಾಗೂ ಅತ್ಯಾಧುನಿಕ ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿದೆ.
ಭೌಗೋಳಿಕ ರಾಜಕೀಯದ ದೃಷ್ಟಿಯಿಂದಲೂ ಸೌದಿ ಅರೇಬಿಯಾ ತೀವ್ರ ಹಿನ್ನಡೆ ಅನುಭವಿಸಿದೆ. ಆರಂಭದಲ್ಲಿ ಸೌದಿ ನೇತೃತ್ವದಲ್ಲಿ ರಚನೆಯಾಗಿದ್ದ ಅರಬ್ ರಾಷ್ಟ್ರಗಳ ಮಿಲಿಟರಿ ಒಕ್ಕೂಟವು ಕ್ರಮೇಣ ಒಡೆದುಹೋಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಒಕ್ಕೂಟದಿಂದ ಹೊರಬಂದ ನಂತರ, ಸೌದಿ ಬೆಂಬಲಿತ ಸ್ಥಳೀಯ ಸಶಸ್ತ್ರ ಪಡೆಗಳು ಮತ್ತಷ್ಟು ದುರ್ಬಲಗೊಂಡಿವೆ.
ಈ ಪಡೆಗಳ ನಡುವೆ ಸಮನ್ವಯದ ಕೊರತೆ ಹೆಚ್ಚಾಗಿದ್ದು, ಉತ್ತರ ಯೆಮನ್ನ ಹಲವು ಪ್ರದೇಶಗಳಲ್ಲಿ ಅವು ತ್ವರಿತವಾಗಿ ಹಿಮ್ಮೆಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ. ಯೆಮನ್ ವಿರುದ್ಧದ ಯುದ್ಧದಲ್ಲಿ ಸೌದಿ ಅರೇಬಿಯಾ ಸಿರಿಯಾದ ಅಲ್ಖೈದಾ ಮತ್ತು ಐಸಿಸ್ನಿಂದ ಕವಲೊಡೆದ ಉಗ್ರಗಾಮಿ ಸಂಘಟನೆಗಳ ಸದಸ್ಯರನ್ನು ಬಾಡಿಗೆ ಸೈನಿಕರನ್ನಾಗಿ ಬಳಸಿಕೊಳ್ಳುತ್ತಿದೆ ಎಂಬ ಊಹಾಪೋಹಗಳೂ ಕೇಳಿಬರುತ್ತಿವೆ.
ಸೌದಿ ಅರೇಬಿಯಾದೊಳಗೇ ಹೂತಿಗಳ ಪ್ರಬಲ ದಾಳಿ
ಸೌದಿ ಅರೇಬಿಯಾಕ್ಕೆ ಎದುರಾಗಿರುವ ಅತ್ಯಂತ ಗಂಭೀರ ಹಿನ್ನಡೆಯೆಂದರೆ ಅದರ ಆಂತರಿಕ ಭದ್ರತಾ ವ್ಯವಸ್ಥೆಯ ಮೇಲಿನ ದಾಳಿಗಳು.
ಹೂತಿಗಳು ನಡೆಸುತ್ತಿರುವ ಅಸಾಂಪ್ರದಾಯಿಕ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು, ಸೌದಿ ಅರೇಬಿಯಾದ ಬಹುಶತಕೋಟಿ ಡಾಲರ್ ವೆಚ್ಚದ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಗಳನ್ನೇ ಭೇದಿಸಿವೆ.
ಸೌದಿ ಅರೇಬಿಯಾದ ಒಳನಾಡಿನ ಪ್ರಮುಖ ಆರ್ಥಿಕ ಮತ್ತು ಮೂಲಸೌಕರ್ಯ ಕೇಂದ್ರಗಳ ಮೇಲೆ ನಡೆದ ದಾಳಿಗಳು ಆ ದೇಶದ ಭದ್ರತಾ ವ್ಯವಸ್ಥೆಯ ದೌರ್ಬಲ್ಯವನ್ನು ಬಹಿರಂಗಪಡಿಸಿವೆ.
ಪೂರ್ವ–ಪಶ್ಚಿಮ ತೈಲ ಪೈಪ್ಲೈನ್ಗೆ ಅಡ್ಡಿಪಡಿಸಿರುವುದು, ಸೌದಿ ಅರಾಮ್ಕೊ ತೈಲ ಸಂಸ್ಕರಣಾ ಘಟಕಗಳಿಗೆ ಹಾನಿ ಉಂಟುಮಾಡಿರುವುದು ಹಾಗೂ ರಿಯಾದ್ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಪ್ರಮುಖ ಸಾರಿಗೆ ಕೇಂದ್ರಗಳ ಮೇಲಿನ ಭೀಕರ ದಾಳಿಗಳಲ್ಲಿ ನೂರಾರು ನಾಗರಿಕರು ಸಾವುನೋವು ಅನುಭವಿಸಿರುವುದು ಸೌದಿಯ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ಕಳೆದ ಒಂದೇ ವಾರದಲ್ಲಿ ಐದು ವಿಮಾನ ನಿಲ್ದಾಣಗಳ ಮೇಲೆ ಹತ್ತಕ್ಕೂ ಹೆಚ್ಚು ದಾಳಿಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಈ ದಾಳಿಗಳಲ್ಲಿ 20 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ವಿಮಾನಯಾನ ಸಂಸ್ಥೆಗಳು ತಮ್ಮ ಹಾರಾಟಗಳನ್ನು ರದ್ದುಗೊಳಿಸುತ್ತಿವೆ.
ಅಂತಿಮವಾಗಿ, ಸೌದಿ ಅರೇಬಿಯಾ ನಡೆಸಿದ ಮಿಲಿಟರಿ ಕಾರ್ಯಾಚರಣೆಗಳು ಹೂತಿಗಳನ್ನು ದುರ್ಬಲಗೊಳಿಸುವ ಬದಲು, ಕೆಂಪು ಸಮುದ್ರದ ಆಯಕಟ್ಟಿನ ಕರಾವಳಿ ಪ್ರದೇಶಗಳಲ್ಲಿ ಅವರ ಹಿಡಿತ ಮತ್ತಷ್ಟು ಗಟ್ಟಿಯಾಗುವಂತೆ ಮಾಡಿವೆ.
ಈ ಬೆಳವಣಿಗೆಗಳಿಂದಾಗಿ ಸೌದಿ ಅರೇಬಿಯಾವು ಯುದ್ಧದಿಂದ ಹೊರಬರುವ ಮಾರ್ಗವನ್ನು ಹುಡುಕಬೇಕಾದ ಪರಿಸ್ಥಿತಿಗೆ ತಲುಪಿದೆ. ತೆರೆಮರೆಯ ಮಾತುಕತೆಗಳ ಮೂಲಕ ಸಂಘರ್ಷಕ್ಕೆ ಅಂತ್ಯ ಹಾಡಲು ಪ್ರಯತ್ನಿಸುತ್ತಿರುವ ರಿಯಾದ್, ಈಗ ಸ್ಪಷ್ಟವಾಗಿ ದುರ್ಬಲ ಸ್ಥಾನದಿಂದ ಸಂಧಾನ ನಡೆಸಬೇಕಾದ ಅನಿವಾರ್ಯಕ್ಕೆ ಸಿಲುಕಿದೆ.
ಫೆಬ್ರವರಿಯಲ್ಲಿ ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದ ನಂತರ, ಅರಬ್ ಜಗತ್ತಿಗೆ ಅಮೆರಿಕ ಒದಗಿಸುವ ರಕ್ಷಣೆಯ ಮೇಲಿದ್ದ ನಂಬಿಕೆಯೇ ಕುಸಿದುಬಿದ್ದಿದೆ. ಅಮೆರಿಕದ ರಕ್ಷಣೆಯಿದೆ ಎಂಬ ಭ್ರಮೆ ಈಗ ಒಡೆದುಹೋಗಿದೆ.
ಹೂತಿಗಳು ಯಾರು? ಅವರ ಹೋರಾಟದ ಐತಿಹಾಸಿಕ ಹಿನ್ನೆಲೆಯೇನು?
ಹೂತಿ ಚಳವಳಿಯ ಹೆಸರು ಅದರ ಸಂಸ್ಥಾಪಕರಲ್ಲಿ ಒಬ್ಬರಾದ ಹುಸೇನ್ ಅಲ್ಹೂತಿ ಅವರ ಹೆಸರಿನಿಂದ ಬಂದಿದೆ. ಈ ಸಂಘಟನೆಯನ್ನು ‘ಅನ್ಸಾರುಲ್ಲಾ’ ಎಂದೂ ಕರೆಯಲಾಗುತ್ತದೆ. ಇದರ ಅರ್ಥ ‘ದೇವರ ರಕ್ಷಕರು’ ಎಂಬುದಾಗಿದೆ.
ಯೆಮನ್ನ ಝೈದಿ ಶಿಯಾ ಇಸ್ಲಾಮಿಕ್ ಪರಂಪರೆಯ ಪುನರುಜ್ಜೀವನದ ಭಾಗವಾಗಿ ಈ ಚಳವಳಿ 1980ರ ದಶಕದ ಕೊನೆಯಲ್ಲಿ ರೂಪುಗೊಂಡಿತು.
1970ರ ದಶಕದಿಂದಲೇ ಅಮೆರಿಕದ ನೆರವಿನೊಂದಿಗೆ ಸೌದಿ ಅರೇಬಿಯಾ ಬೆಂಬಲಿತ ಮೂಲಭೂತವಾದಿ ಸಲಫಿ–ವಹಾಬಿ ಸಿದ್ಧಾಂತವು ಇಡೀ ಪ್ರದೇಶದಲ್ಲಿ ವೇಗವಾಗಿ ಹರಡುತ್ತಿತ್ತು. ಸೌದಿ ರಾಜಮನೆತನವು ತನ್ನ ಕಟ್ಟುನಿಟ್ಟಿನ ಧಾರ್ಮಿಕ ಸಿದ್ಧಾಂತವನ್ನು ಜಗತ್ತಿನಾದ್ಯಂತ ಹರಡಲು ಮಸೀದಿಗಳ ನಿರ್ಮಾಣ, ಧಾರ್ಮಿಕ ಪ್ರಚಾರ ಮತ್ತು ಧಾರ್ಮಿಕ ಶಿಕ್ಷಣಕ್ಕೆ ಅಪಾರ ಪ್ರಮಾಣದ ಹಣವನ್ನು ವಿನಿಯೋಗಿಸಿತು.
ಕಳೆದ ಮೂರು ದಶಕಗಳಲ್ಲಿ ಸೌದಿ ಅರೇಬಿಯಾವು ಬಡ ಮುಸ್ಲಿಂ ರಾಷ್ಟ್ರಗಳೂ ಸೇರಿದಂತೆ ವಿಶ್ವದ ನಾನಾ ದೇಶಗಳಿಗೆ ಕಟ್ಟರ್ ವಹಾಬಿ ಸಿದ್ಧಾಂತವನ್ನು ರಫ್ತು ಮಾಡಲು ಬರೋಬ್ಬರಿ 100 ಶತಕೋಟಿ ಅಮೆರಿಕನ್ ಡಾಲರ್ಗಳನ್ನು ಖರ್ಚು ಮಾಡಿದೆ ಎಂದು ಅಂದಾಜಿಸಲಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಯೆಮನ್ನ ಝೈದಿ ಸಮುದಾಯವು ತನ್ನ ಸಾಂಪ್ರದಾಯಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಪುನರುಜ್ಜೀವನ ಚಳವಳಿಯನ್ನು ಆರಂಭಿಸಿತು.
ಶೀತಲ ಸಮರ ಮತ್ತು ಯೆಮನ್ನ ಝೈದಿ ಪುನರುಜ್ಜೀವನ
ಯೆಮನ್ನಲ್ಲಿ ಝೈದಿ ಚಳವಳಿ ಮತ್ತೆ ಬಲಗೊಳ್ಳಲು ಶೀತಲ ಸಮರದ ರಾಜಕೀಯವೂ ಮಹತ್ವದ ಪಾತ್ರ ವಹಿಸಿತು.
1969ರಲ್ಲಿ ಮಾರ್ಕ್ಸ್ವಾದಿ–ಲೆನಿನ್ವಾದಿ ಏಕಪಕ್ಷೀಯ ಆಡಳಿತ ವ್ಯವಸ್ಥೆಯುಳ್ಳ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಯೆಮನ್ (PDRY) ಸ್ಥಾಪನೆಯಾದಾಗ, ಅಮೆರಿಕ ಮತ್ತು ಸೋವಿಯತ್ ಒಕ್ಕೂಟಗಳ ನಡುವಿನ ಪ್ರಭಾವದ ಸಂಘರ್ಷದ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿತು ಯೆಮನ್.
ಅರಬ್ ಜಗತ್ತಿನ ಏಕೈಕ ಮಾರ್ಕ್ಸ್ವಾದಿ ರಾಷ್ಟ್ರವೆಂಬ ಹೆಗ್ಗಳಿಕೆಯನ್ನೂ ಯೆಮನ್ ಹೊಂದಿತ್ತು. ಈ ರಾಜಕೀಯ ಸಂಘರ್ಷಗಳ ನಡುವೆಯೇ ಝೈದಿ ಪುನರುಜ್ಜೀವನ ಚಳವಳಿಯು ಯೆಮನ್ನ ಐತಿಹಾಸಿಕ ಇಮಾಮತ್ ಆಡಳಿತದ ಆದರ್ಶಗಳನ್ನು ಮತ್ತೆ ಜೀವಂತಗೊಳಿಸಲು ಪ್ರಯತ್ನಿಸಿತು.
ಕ್ರಿ.ಶ. 897ರಿಂದ 1962ರವರೆಗೆ ಯೆಮನ್ನಲ್ಲಿ ಝೈದಿ ಇಮಾಮತ್ ಆಡಳಿತ ಅಸ್ತಿತ್ವದಲ್ಲಿತ್ತು. ಒಂದು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಈ ವ್ಯವಸ್ಥೆಯು ಧಾರ್ಮಿಕ ಹಾಗೂ ರಾಜಕೀಯ ಅಧಿಕಾರದ ಕೇಂದ್ರವಾಗಿ ಮುಂದುವರಿಯಿತು.
ಆದರೆ 1962ರಲ್ಲಿ ನಡೆದ ಗಣರಾಜ್ಯ ಕ್ರಾಂತಿಯು ರಾಜಪ್ರಭುತ್ವವನ್ನು ಕೊನೆಗೊಳಿಸಿತು. ಇದರೊಂದಿಗೆ ಶತಮಾನಗಳ ಝೈದಿ ಇಮಾಮತ್ ಆಡಳಿತಕ್ಕೆ ತೆರೆಬಿತ್ತು.
ಇದನ್ನೂ ಓದಿ: ಇರಾನ್ನ ಮಿತ್ರರು ಯಾರು? ರಷ್ಯಾ-ಚೀನಾ ನಿಲುವೇನು?
ಸಾದಾದಿಂದ ಸನಾವರೆಗೆ: ಹೂತಿಗಳ ಬೆಳವಣಿಗೆ
ಯೆಮನ್ನ ಸುಮಾರು ಶೇ.80ರಷ್ಟು ಜನಸಂಖ್ಯೆಯು ದೇಶದ ಪಶ್ಚಿಮ ಭಾಗದ ಪರ್ವತ ಪ್ರದೇಶಗಳು ಹಾಗೂ ಕರಾವಳಿ ವಲಯದಲ್ಲಿ ವಾಸಿಸುತ್ತಿದೆ. ಇವರಲ್ಲಿ ಸುಮಾರು ಶೇ.50ರಷ್ಟು ಮಂದಿ ಹೂತಿಗಳಾಗಿದ್ದು, ಮುಖ್ಯವಾಗಿ ಸಾದಾ ಪ್ರಾಂತ್ಯದಿಂದ ರಾಜಧಾನಿ ಸನಾವರೆಗಿನ ಪ್ರದೇಶಗಳಲ್ಲಿ ದಟ್ಟೈಸಿದ್ದಾರೆ.
1990ರ ದಶಕದಲ್ಲಿ ಕೇವಲ ಸಾದಾ ಪ್ರಾಂತ್ಯಕ್ಕೆ ಸೀಮಿತವಾಗಿದ್ದ ಈ ಝೈದಿ ಪುನರುಜ್ಜೀವನ ಚಳವಳಿಯು, ಕ್ರಮೇಣ ರಾಜಕೀಯ ಮತ್ತು ಸಶಸ್ತ್ರ ಹೋರಾಟದ ಸ್ವರೂಪ ಪಡೆದುಕೊಂಡಿತು. ಇದು ದೇಶದಲ್ಲಿ ಆಂತರಿಕ ಸಂಘರ್ಷಗಳಿಗೆ ಕಾರಣವಾಯಿತು. 2004ರಲ್ಲಿ ಚಳವಳಿಯ ಸಂಸ್ಥಾಪಕ ನಾಯಕ ಹುಸೇನ್ ಅಲ್ಹೂತಿ ಹತ್ಯೆಗೀಡಾದರು. ಆದರೆ ಅವರ ಸಾವಿನೊಂದಿಗೆ ಚಳವಳಿ ಅಂತ್ಯಗೊಳ್ಳಲಿಲ್ಲ. ಬದಲಿಗೆ ಅದು ಮತ್ತಷ್ಟು ಸಂಘಟಿತವಾಗಿ, ತನ್ನ ಪ್ರಭಾವವನ್ನು ವಿಸ್ತರಿಸಿಕೊಳ್ಳತೊಡಗಿತು.
2011ರಲ್ಲಿ ಅರಬ್ ಜಗತ್ತಿನಾದ್ಯಂತ ಭುಗಿಲೆದ್ದ ‘ಅರಬ್ ವಸಂತ’ ಜನಾಂದೋಲನವು ಹೂತಿಗಳ ರಾಜಕೀಯ ಬೆಳವಣಿಗೆಗೆ ಮಹತ್ವದ ತಿರುವು ನೀಡಿತು. ಯೆಮನ್ನ ರಾಜಕೀಯ ಅಸ್ಥಿರತೆ ಮತ್ತು ಜನರ ಅಸಮಾಧಾನವನ್ನು ಬಳಸಿಕೊಂಡು ಹೂತಿಗಳು ರಾಜಧಾನಿ ಸನಾದತ್ತ ಮುನ್ನಡೆದರು.
ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ಅವರ ಅಧಿಕಾರಕ್ಕೆ ಅಂತ್ಯ ತಂದ ರಾಜಕೀಯ ಬೆಳವಣಿಗೆಗಳ ನಂತರ, 2014ರಲ್ಲಿ ಹೂತಿಗಳು ಸನಾವನ್ನು ವಶಪಡಿಸಿಕೊಂಡು ದೇಶದ ಅಧಿಕಾರ ಕೇಂದ್ರದ ಮೇಲೆ ಹಿಡಿತ ಸಾಧಿಸಿದರು.
ಸೌದಿ ನೇತೃತ್ವದ ವೈಮಾನಿಕ ದಾಳಿಗಳು ಮತ್ತು ದುರಂತ
ಪದಚ್ಯುತ ಯೆಮನ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವ ಉದ್ದೇಶದಿಂದ 2015ರ ಮಾರ್ಚ್ನಲ್ಲಿ ಸೌದಿ ಅರೇಬಿಯಾ ನೇತೃತ್ವದ ಮಿಲಿಟರಿ ಒಕ್ಕೂಟವು ಯೆಮನ್ ವಿರುದ್ಧ ಭಾರಿ ಪ್ರಮಾಣದ ವೈಮಾನಿಕ ಕಾರ್ಯಾಚರಣೆಯನ್ನು ಆರಂಭಿಸಿತು.
ಈ ಕಾರ್ಯಾಚರಣೆಯ ಭಾಗವಾಗಿ ಸಾವಿರಾರು ವೈಮಾನಿಕ ದಾಳಿಗಳನ್ನು ನಡೆಸಲಾಯಿತು. ವಿವೇಚನಾರಹಿತ ಬಾಂಬ್ ದಾಳಿಗಳು ದೇಶದ ನಾಗರಿಕ ಮೂಲಸೌಕರ್ಯವನ್ನು ಧ್ವಂಸಗೊಳಿಸಿದವು.
ಆಸ್ಪತ್ರೆಗಳು, ಶಾಲೆಗಳು, ವಸತಿ ಪ್ರದೇಶಗಳು, ನೀರು ಶುದ್ಧೀಕರಣ ಘಟಕಗಳು ಸೇರಿದಂತೆ ಜನಸಾಮಾನ್ಯರ ಬದುಕಿಗೆ ಅಗತ್ಯವಾದ ಮೂಲಸೌಕರ್ಯಗಳ ಮೇಲೂ ದಾಳಿಗಳು ನಡೆದವು.
ಇದರ ಜೊತೆಗೆ ಸೌದಿ ನೇತೃತ್ವದ ಒಕ್ಕೂಟವು ವಿಧಿಸಿದ ಕಠಿಣ ವೈಮಾನಿಕ ಮತ್ತು ನೌಕಾ ದಿಗ್ಬಂಧನದಿಂದಾಗಿ ಯೆಮನ್ಗೆ ಆಹಾರ, ಇಂಧನ ಮತ್ತು ಅತ್ಯಗತ್ಯ ಔಷಧಿಗಳ ಆಮದು ತೀವ್ರವಾಗಿ ನಿರ್ಬಂಧಿಸಲ್ಪಟ್ಟಿತು. ಆರ್ಥಿಕ ಪ್ರತ್ಯೇಕತೆಯನ್ನೇ ಯುದ್ಧಾಸ್ತ್ರವಾಗಿ ಬಳಸಿಕೊಂಡ ಈ ಕ್ರಮಗಳು ಯೆಮನ್ನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕುಸಿತಕ್ಕೆ ಕಾರಣವಾದವು. ಆರು ವರ್ಷಗಳ ಕಾಲ ಮುಂದುವರಿದ ಈ ಭೀಕರ ಯುದ್ಧದಿಂದ ಯೆಮನ್ ಅಭೂತಪೂರ್ವ ಮಾನವೀಯ ಬಿಕ್ಕಟ್ಟಿಗೆ ಸಿಲುಕಿತು.
ವಿಶ್ವಸಂಸ್ಥೆಯು ಈ ದುರಂತದ ಬಗ್ಗೆ ಪದೇಪದೇ ತೀವ್ರ ಕಳವಳ ವ್ಯಕ್ತಪಡಿಸಿತು. ಯೆಮನ್ನ ಪರಿಸ್ಥಿತಿಯನ್ನು ವಿಶ್ವದ ಅತ್ಯಂತ ಗಂಭೀರ ಮಾನವೀಯ ಬಿಕ್ಕಟ್ಟು ಎಂದು ಬಣ್ಣಿಸಿತು.
ಯುದ್ಧದ ದಿಕ್ಕನ್ನೇ ನಿರ್ಧರಿಸುತ್ತಿರುವ ಹೂತಿಗಳು!
ಒಂದು ಕಾಲದಲ್ಲಿ ಸೌದಿ ನೇತೃತ್ವದ ಒಕ್ಕೂಟದ ಭೀಕರ ದಾಳಿಗಳನ್ನು ಎದುರಿಸಿ ಉಳಿಯಲು ಹೋರಾಡುತ್ತಿದ್ದ ಹೂತಿಗಳೇ ಈಗ ಯುದ್ಧದ ದಿಕ್ಕು ಮತ್ತು ರಾಜಕೀಯ ಸಮೀಕರಣಗಳನ್ನು ನಿರ್ಧರಿಸುವ ಹಂತಕ್ಕೆ ತಲುಪಿದ್ದಾರೆ. ಮೆಕ್ಕಾ ಒಪ್ಪಂದವನ್ನು ಘೋಷಿಸಿರುವ ಟರ್ಕಿ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಕೂಡ ಈಗ ಗೊಂದಲದ ಸ್ಥಿತಿಯಲ್ಲಿವೆ.
ಅನ್ಸಾರುಲ್ಲಾ ವಿರುದ್ಧ ನೇರವಾಗಿ ಯುದ್ಧಕ್ಕೆ ಇಳಿಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾವು ಹೂತಿಗಳ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ನ ನೆರವು ಪಡೆಯಲು ಕೈ ಚಾಚಿದೆ.
ಯೆಮನ್ನ ಅನ್ಸಾರುಲ್ಲಾವನ್ನು ಎದುರಿಸಲು ಇಸ್ರೇಲ್, ಪಾಕಿಸ್ತಾನ ಮತ್ತು ಟರ್ಕಿ ಒಂದೇ ಬಣದಲ್ಲಿವೆ ಎಂಬ ಅಚ್ಚರಿಯ ವರದಿಗಳು ಇಸ್ಲಾಮಿಕ್ ಜಗತ್ತಿನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಪ್ಯಾಲೆಸ್ತೀನ್ ವಿಚಾರದಲ್ಲಿ ಪರಸ್ಪರ ವಿಭಿನ್ನ ನಿಲುವುಗಳನ್ನು ವ್ಯಕ್ತಪಡಿಸುತ್ತಿರುವ ಈ ರಾಷ್ಟ್ರಗಳು, ಯೆಮನ್ ವಿಚಾರದಲ್ಲಿ ಒಂದೇ ವೇದಿಕೆಯಲ್ಲಿ ನಿಲ್ಲುವ ಸಾಧ್ಯತೆ ರಾಜಕೀಯವಾಗಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ನಿರಂತರ ಬಾಂಬ್ ದಾಳಿಗಳು, ದಿಗ್ಬಂಧನ ಮತ್ತು ಹಸಿವಿನ ಸಂಕಷ್ಟಗಳನ್ನು ಎದುರಿಸುತ್ತಿರುವ ಯೆಮನ್ನ ಪರಿಸ್ಥಿತಿಯು ಗಾಜಾ ಪಟ್ಟಿಯ ಮೇಲಿನ ಮುತ್ತಿಗೆ ಮತ್ತು ಅಲ್ಲಿನ ಹಸಿವಿನ ದುರಂತವನ್ನೇ ನೆನಪಿಸುತ್ತದೆ. ಗಾಜಾದಲ್ಲಿ ನಡೆಯುತ್ತಿರುವ ಜನಾಂಗೀಯ ಹತ್ಯೆಯ ವಿರುದ್ಧ ದೃಢವಾಗಿ ಹೋರಾಟ ನಡೆಸಿದ ಕೆಲವೇ ರಾಷ್ಟ್ರಗಳಲ್ಲಿ ಯೆಮನ್, ದಕ್ಷಿಣ ಆಫ್ರಿಕಾ ಮತ್ತು ಇರಾನ್ ಪ್ರಮುಖವಾಗಿವೆ.
ಒಂದೆಡೆ ಯೆಮನ್ ತನ್ನ ಸೀಮಿತ ಸಂಪನ್ಮೂಲಗಳ ನಡುವೆಯೂ ಪ್ರಬಲ ರಾಷ್ಟ್ರಗಳಿಗೆ ಸವಾಲೊಡ್ಡುತ್ತಿದ್ದರೆ, ಮತ್ತೊಂದೆಡೆ ಗಾಜಾದ ಮೇಲಿನ ಇಸ್ರೇಲ್ ದಾಳಿಗಳು ಇಡೀ ಮಧ್ಯಪ್ರಾಚ್ಯದ ರಾಜಕೀಯ ವ್ಯವಸ್ಥೆಯನ್ನೇ ಅಲುಗಾಡಿಸಿವೆ.
ಇದನ್ನೂ ಓದಿ: ಪ್ರೀಮಿಯಂ ಲೇಖನ | ‘ಶಿಯಾ-ಸುನ್ನಿ’ಯಾಗಿ ಚದುರಿದ ಇಸ್ಲಾಂ; ಲಾಭ ಮಾಡಿಕೊಂಡವರಾರು?
ಇಸ್ರೇಲ್ ಮತ್ತು ಅಮೆರಿಕದ ಚುನಾವಣೆಗಳು ನಿರ್ಣಾಯಕವಾಗಲಿವೆಯೇ?
ಅಕ್ಟೋಬರ್ 27ರಂದು ಸಮೀಪಿಸುತ್ತಿರುವ ಇಸ್ರೇಲ್ ಚುನಾವಣೆಗಳು ಹಾಗೂ ಅಮೆರಿಕದ ಮಧ್ಯಂತರ ಚುನಾವಣೆಗಳು, ಪ್ರಸ್ತುತ ಅಧಿಕಾರದಲ್ಲಿರುವ ಇಬ್ಬರು ನಿರಂಕುಶ ನಾಯಕರ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆಗಳಿವೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧದ ಉದ್ವಿಗ್ನತೆ, ಗಾಜಾದಲ್ಲಿನ ಮಾನವೀಯ ದುರಂತ ಹಾಗೂ ಇರಾನ್ ಮತ್ತು ಯೆಮನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗಳು ಈ ಚುನಾವಣೆಗಳ ರಾಜಕೀಯ ಚರ್ಚೆಯ ಕೇಂದ್ರಬಿಂದುಗಳಾಗಿ ಪರಿಣಿಮಿಸಬಹುದು.
ಇರಾನ್ ಮೇಲೆ ಮತ್ತೊಂದು ದಾಳಿ ನಡೆದರೆ, ಅದರ ಬೆನ್ನಲ್ಲೇ ಯೆಮನ್ ಮೇಲೂ ದಾಳಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಇದರಿಂದಾಗಿ ಮಧ್ಯಪ್ರಾಚ್ಯದ ಯುದ್ಧವು ಮತ್ತಷ್ಟು ವಿಸ್ತಾರಗೊಳ್ಳುವ ಅಪಾಯ ಎದುರಾಗಿದೆ.
ಅರಬ್ ರಾಜಪ್ರಭುತ್ವಗಳ ಭವಿಷ್ಯವೇನು?
ಕಳೆದ 15 ವರ್ಷಗಳಿಂದ ಯೆಮನ್ ಅತ್ಯಂತ ಧೈರ್ಯ ಮತ್ತು ದೃಢಸಂಕಲ್ಪದಿಂದ ಹೋರಾಟ ನಡೆಸುತ್ತಿದೆ.
ವಿಶ್ವದ ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದಾಗಿರುವ ಯೆಮನ್, ಅಪಾರ ಸಂಪತ್ತು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಬೆಂಬಲವನ್ನು ಹೊಂದಿರುವ ಪ್ರಬಲ ಅರಬ್ ರಾಷ್ಟ್ರಗಳಿಗೆ ತೀವ್ರ ಪ್ರತಿರೋಧ ತೋರಿದೆ.
ಈ ಹೋರಾಟವು ಕೇವಲ ಯೆಮನ್ನ ಅಧಿಕಾರಕ್ಕಾಗಿ ನಡೆಯುತ್ತಿರುವ ಸಂಘರ್ಷವಾಗಿ ಉಳಿದಿಲ್ಲ. ಬದಲಾಗಿ, ಅರಬ್ ಜಗತ್ತಿನ ರಾಜಪ್ರಭುತ್ವಗಳು, ವಸಾಹತುಶಾಹಿ ಪರಂಪರೆ, ಪ್ರಾದೇಶಿಕ ಪ್ರಾಬಲ್ಯ ಮತ್ತು ಪಾಶ್ಚಿಮಾತ್ಯ ಶಕ್ತಿಗಳ ಹಸ್ತಕ್ಷೇಪದ ವಿರುದ್ಧದ ದೊಡ್ಡ ರಾಜಕೀಯ ಸಂಘರ್ಷವಾಗಿ ರೂಪಾಂತರಗೊಂಡಿದೆ.
ಇಂದು ಅರಬ್ ಜಗತ್ತಿನ ಎಲ್ಲ ರಾಜಪ್ರಭುತ್ವಗಳ ಭವಿಷ್ಯವೂ ತೀವ್ರ ಒತ್ತಡಕ್ಕೆ ಸಿಲುಕಿದೆ. ಯುದ್ಧದಲ್ಲಿ ಅಂತಿಮವಾಗಿ ಯಾರೇ ಮೇಲುಗೈ ಸಾಧಿಸಿದರೂ, ವಸಾಹತುಶಾಹಿ ಶಕ್ತಿಗಳು ರೂಪಿಸಿದ ಭೌಗೋಳಿಕ ನಕ್ಷೆಗಳು ಮತ್ತು ಗಡಿಗಳು ಮರುರಚನೆಯಾಗುವುದು ಖಚಿತವೆಂಬ ವಾತಾವರಣ ನಿರ್ಮಾಣವಾಗಿದೆ.
ಶತಮಾನಗಳ ಹಿಂದೆ ಬ್ರಿಟಿಷರು ಮತ್ತು ಫ್ರೆಂಚರು ತಮ್ಮ ರಾಜಕೀಯ ಹಾಗೂ ಆರ್ಥಿಕ ಹಿತಾಸಕ್ತಿಗಳಿಗಾಗಿ ರೂಪಿಸಿದ ಗಡಿಗಳು, ಈಗ ಸ್ಥಳೀಯ ಜನರ ಪ್ರತಿರೋಧ, ಧಾರ್ಮಿಕ ಅಸ್ಮಿತೆ ಮತ್ತು ಪ್ರಾದೇಶಿಕ ಅಧಿಕಾರ ಸಂಘರ್ಷಗಳಿಂದ ಸವಾಲಿಗೆ ಒಳಗಾಗುತ್ತಿವೆ.
ಸೌದಿ ಅರೇಬಿಯಾದ ರಾಜಮನೆತನದ ಮುಂದೆ ಈಗ ಕೇವಲ ಯೆಮನ್ ಯುದ್ಧದಲ್ಲಿ ಗೆಲ್ಲುವ ಅಥವಾ ಸೋಲುವ ಪ್ರಶ್ನೆಯಿಲ್ಲ. ತನ್ನ ಪ್ರಾದೇಶಿಕ ಪ್ರಾಬಲ್ಯ, ಆರ್ಥಿಕ ಭದ್ರತೆ, ಧಾರ್ಮಿಕ ಪ್ರಭಾವ ಹಾಗೂ ರಾಜಕೀಯ ಅಸ್ತಿತ್ವವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಬಹುದೊಡ್ಡ ಪ್ರಶ್ನೆ ಎದುರಾಗಿದೆ.
ಒಂದು ಕಾಲದಲ್ಲಿ ಅರಬ್ ಜಗತ್ತಿನ ಅತ್ಯಂತ ಪ್ರಭಾವಶಾಲಿ ಶಕ್ತಿಗಳಲ್ಲೊಂದಾಗಿದ್ದ ಸೌದಿ ಅರೇಬಿಯಾಕ್ಕೆ, ಇಂದು ಯೆಮನ್ನ ಹೂತಿಗಳು ಅತ್ಯಂತ ಗಂಭೀರ ಸವಾಲಾಗಿ ಪರಿಣಮಿಸಿದ್ದಾರೆ.
ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ ವಿಶ್ವಕ್ಕೇ ಬಿಡಿಸಲಾಗದ ಒಗಟಾಗಿ ಉಳಿಯಲಿದೆ.




