ಮಹಿಳಾ ಮೀಸಲಾತಿ ಈಗ ಪ್ರಮುಖ ವಿಷಯ ವಸ್ತುವಾಗಿದೆ. ಅಬ್ಬರದ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಹೊಳೆಯುವ ನಕ್ಷತ್ರವಾಗಿದೆ. ಮೀಸಲಾತಿ ಕಾರಣ ಸಂಸತ್ತು ಸದಸ್ಯರ ಸ್ಥಾನವು 543ರಿಂದ 850ಕ್ಕೆ ಹೆಚ್ಚಾಗಿ ಸಂಸತ್ತಿನ ಸಭಾಂಗಣದಲ್ಲಿ ಹೊಸ ಕುರ್ಚಿಗಳನ್ನು ಸೇರಿಸುವವರೆಗೂ ಮಹಿಳಾ ಮೀಸಲಾತಿ ವಿಚಾರ ಪ್ರಚಾರದ ವಿಷಯವಸ್ತುವಾಗಿಯೇ ಉಳಿಯಲಿದೆ ಎಂಬುದು ನಿಜ.
ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ದಶಕಗಳಿಂದ ಸುದೀರ್ಘ ಚರ್ಚೆಗಳು ನಡೆಯುತ್ತಿವೆ. ನಾನು ವಿದ್ಯಾರ್ಥಿನಿಯಾಗಿದ್ದಾಗ ಕಾಲೇಜು ಕ್ಯಾಂಪಸ್‌ನಲ್ಲಿ ಈ ಮೀಸಲಾತಿಯ ಬಗ್ಗೆ ಹಾಸ್ಯ ಕೇಳಿಬರುತ್ತಿತ್ತು. “ಅವರು (ಹೆಣ್ಣು ಮಕ್ಕಳು) ಶೇ.33 ಮೀಸಲಾತಿ ಪಡೆದರೆ ಹೇಗಿರುತ್ತದೆ ಊಹಿಸಿ. ಅವರು ಏನು ಮಾಡಬಲ್ಲರು” – ಇವೆಲ್ಲವೂ ಹೆಣ್ಣುಮಕ್ಕಳನ್ನು ರೇಗಿಸುವಾಗ ಸ್ನೇಹಿತರ ವಲಯದಲ್ಲಿ ಕೇಳಿಬರುತ್ತಿದ್ದ ಮಾತುಗಳು. ಸ್ಪಷ್ಟವಾಗಿ ಹೇಳುವುದಾದರೆ ಇದು ಹೆಣ್ಣುಮಕ್ಕಳ ಆತ್ಮವಿಶ್ವಾಸವನ್ನು ನಾಶ ಮಾಡುವ ಮಾತು. ಹೆಣ್ಣು ಮಕ್ಕಳು ಅಧಿಕ ಜವಾಬ್ದಾರಿ ಇರುವ ಸ್ಥಾನವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂಬುದು ಈ ಮಾತಿನ ಅರ್ಥ. ದುರದೃಷ್ಟವಶಾತ್, ಇಂತಹ ಹಾಸ್ಯ ಇಂದಿಗೂ ಮುಂದುವರೆದಿದೆ!
ನಾರಿ ಶಕ್ತಿ ವಂದನ್ ಅಧಿನಿಯಮ್ (ಹಿಂದಿ ಹೇರಿಕೆ ಸಾಕಾಗಿಲ್ಲ ಅನಿಸುತ್ತದೆ) ಎಂಬ ಅಲಂಕಾರಿಕ ಹೆಸರಿನ ಬಗ್ಗೆ ದೀರ್ಘಕಾಲದ ಚರ್ಚೆ ನಡೆದಿದೆ. ಮಸೂದೆಗೆ ‘ಮಹಿಳಾ ಆರಕ್ಷಣ್ ಸಂಶೋಧನ್’ನಂತಹ ಸರಳವಾದ ಹೆಸರು ನೀಡಬಹುದು ಎಂಬಂತಹ ಜೋಕ್‌ಗಳನ್ನೂ ಕಾಲೇಜು-ಕ್ಯಾಂಟೀನ್‌ಗಳಲ್ಲಿ ಮಾಡಲಾಗುತ್ತಿತ್ತು. ಸರ್ಕಾರವು ಜಾರಿ ಮಾಡುವಲ್ಲಿ ವಿಳಂಬ ಮಾಡಿದ ಈ ಮಹಿಳಾ ಮೀಸಲಾತಿ ಇಂದು ಮತ್ತೆ ಚರ್ಚೆಗೆ ಗ್ರಾಸವಾಗುತ್ತಿದೆ. 2023ರ ಸೆಪ್ಟೆಂಬರ್‌ನಲ್ಲಿ ಅಂಗೀಕರಿಸಲ್ಪಟ್ಟ ಈ ಕಾಯ್ದೆ ಪ್ರಕಾರ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕಡ್ಡಾಯ. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಸವಾಲಾಗಿರುವ ಪಿತೃಪ್ರಧಾನ ರಚನೆಗಳನ್ನು ಕೆಡವುವ ಗುರಿಯನ್ನು ಈ ಕಾಯ್ದೆ ಹೊಂದಿದೆ.
ಇದನ್ನು ಓದಿದ್ದೀರಾ? 2023ರಲ್ಲಿ ಅಂಗೀಕಾರಗೊಂಡ ಮಹಿಳಾ ಮೀಸಲಾತಿ ಮಸೂದೆಯನ್ನು ಮೋದಿ ಸರ್ಕಾರ ಜಾರಿ ಮಾಡಬಹುದಲ್ಲವೇ?
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾಡಿದ ಭಾಷಣವನ್ನು ನೋಡುವಾಗ “ಅಬ್ಲಾ ನಾರಿ” (ನಾರಿ ಅಬಲೆ) ಎಂಬಂತೆ ಭಾಸವಾಯಿತು. ಈ ಭಾಷಣ ಹೇಗಿತ್ತೆಂದರೆ ದಿನನಿತ್ಯ ಧಾರಾವಾಹಿಗಳಲ್ಲಿ ನಾವು ಕಾಣುವ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ನಾಗಿಣಿಯನ್ನು ನೆನಪಿಸಿತು. ಪ್ರಧಾನಿಯವರು ತಮ್ಮ ಭಾಷಣದಲ್ಲಿ ಮಹಿಳೆಯರು ದ್ರೋಹವನ್ನು ಮರೆಯುವುದಿಲ್ಲ ಎಂದು ಪದೇ ಪದೇ ನೆನಪಿಸುತ್ತಲೇ ಇದ್ದರು.
ಮಸೂದೆ ವಿಫಲವಾಗಲು ವಿರೋಧ ಪಕ್ಷಗಳೇ ಕಾರಣ ಎಂದು ಪ್ರಧಾನಿ ಮೋದಿ ಆಕ್ರೋಶದಿಂದ ಹೇಳಿದರು. ದೇಶಾದ್ಯಂತ ಅನೇಕ ಮಹಿಳೆಯರ ಕನಸುಗಳನ್ನು ಭಗ್ನಗೊಳಿಸಿದೆ ಎಂದರು. ಪ್ರಧಾನಿಯವರ ಈ ವಿಶೇಷ ಭಾಷಣವನ್ನು ಡಜನ್‌ಗಟ್ಟಲೆ ಮಹಿಳೆಯರು ಗಮನವಿಟ್ಟು ನೋಡಿದರು. ತಮ್ಮ ಅಡುಗೆಮನೆಗಳಲ್ಲಿ ಉಂಟಾದ ಅನಿಲ ಬಿಕ್ಕಟ್ಟಿಗೆ ರಾತ್ರಿ 8.30 ರ ಪ್ರೈಮ್ ಟೈಮ್‌ನಲ್ಲಿ ಪರಿಹಾರ ಸಿಗಬಹುದು ಎಂಬುದು ಮಹಿಳೆಯರ ನಿರೀಕ್ಷೆ. ಪ್ರಧಾನಿ ಮೋದಿ ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಕೆಲವು ‘ಗುಡ್ ನ್ಯೂಸ್’ ನೀಡಬಹುದು ಎಂಬ ಆಶಯದೊಂದಿಗೆ ಮಹಿಳೆಯರು ಅಸಹಾಯಕ ಪ್ರೇಕ್ಷಕರಾಗಿ ಕಾಯುತ್ತಿದ್ದರು.
ಆದರೆ ಪ್ರಧಾನಿ ಮೋದಿ ಅವರಿಗೆ ದೀರ್ಘಕಾಲದ ಕೋಮು ವಿಭಜನೆ ಭಾಷಣ ಸಾಕಾಗುತ್ತಿಲ್ಲ ಅನಿಸುತ್ತದೆ. ಈಗ ಹೊಸದಾದ ಭಾಷಣದ ವಿಷಯವಸ್ತುವನ್ನು ರೂಪಿಸಿಕೊಂಡಿದ್ದಾರೆ. ಈಗ ಮಹಿಳಾ ಮಸೂದೆಯನ್ನು ಬೆಂಬಲಿಸಿದರೆ ನೀವು ‘ನಿಜವಾದ ಭಾರತೀಯರು’ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಕ್ಷೇತ್ರ ಮರುವಿಂಗಡಣೆಯೊಂದಿಗೆ ಲಿಂಕ್ ಮಾಡಿರುವ ಈ ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರಶ್ನಿಸಿದರೆ ನೀವು ‘ದೇಶ ವಿರೋಧಿ’ ಆಗುತ್ತೀರಿ! ‘ಪೊಲಿಟಿಕಲ್ ಗ್ಯಾಸ್‌ಲೈಟಿಂಗ್’ನಲ್ಲಿ (ರಾಜಕೀಯ ನಾಯಕರು ಜನರಿಗೆ ಸುಳ್ಳು ಮಾಹಿತಿ ನೀಡುವುದು) ಇದೂ ಒಂದು ಮಾಸ್ಟರ್‌ಕ್ಲಾಸ್. ಬಿಳಿ ಧಿರಿಸು ಧರಿಸಿದ ಪುರುಷನಿಂದ (ರಾಜಕಾರಣಿ) ‘ಸಹಾಯ’ವನ್ನು (ಮೀಸಲಾತಿಯನ್ನು) ಪಡೆಯಲು ಒಪ್ಪುತ್ತೀರಾ ಎಂಬುದರ ಮೂಲಕ ನಿಮ್ಮ ದೇಶಪ್ರೇಮವನ್ನು ಅಳೆಯಲಾಗುತ್ತದೆ.
ಮಸೂದೆಯ ಬಗ್ಗೆ ವರದಿ ಮಾಡುವಾಗ ಅಥವಾ ಬರೆಯುವಾಗ ಪತ್ರಕರ್ತರು ಎಂಬ ಕಾರಣಕ್ಕೆ ತಟಸ್ಥರಾಗಿರುವುದು, ಮಾಧ್ಯಮಗಳು ಮಸೂದೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳದಿರುವುದು ಮುಖ್ಯ. ಮಾಧ್ಯಮಗಳು ಒಂದೋ ತಮ್ಮ ಸ್ನೇಹಪರ ತಜ್ಞರನ್ನು ಕರೆಸಿ ಮಾತನಾಡುವುದು ಅಥವಾ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವಷ್ಟು ವಾಕ್ಚಾರ್ತುಯವಿಲ್ಲದ ವಿರೋಧ ಪಕ್ಷದ ಪ್ರತಿನಿಧಿಯನ್ನೇ ಹುಡುಕಿ ಮಾಧ್ಯಮಗಳ ಮುಂದೆ ಕೂರಿಸುವುದನ್ನು ಮಾಡುತ್ತದೆ. ಮಾಧ್ಯಮ ಭಾಷೆಯಲ್ಲಿ ಇದನ್ನು sanitized guest ಎಂದು ಕರೆಯಲಾಗುತ್ತದೆ. ಈ ಹೆಕ್ಕಿ ತಂದ ತಜ್ಞರು ಒಂದೋ ಮಾಧ್ಯಮದ ನಿಲುವನ್ನು ಅಥವಾ ನಿರೂಪಕರ ಸೈದ್ಧಾಂತಿಕ ನಿಲುವನ್ನು ತಜ್ಞರ ಅಭಿಪ್ರಾಯವೆಂಬಂತೆ ಬಿಂಬಿಸುತ್ತಾರೆ!
ಈ “ಆಯ್ದ ಸೆಲೆಬ್ರಿಟಿ” ಮಾಧ್ಯಮದ ಒಂದು ನಿರ್ದಿಷ್ಟ ವಿಭಾಗ ಮತ್ತು ಪ್ರಧಾನ ಮಂತ್ರಿಯವರ ನಂಬಿಕಸ್ಥರು ಎನಿಸಿಕೊಂಡಿರುವ ನಿರೂಪಕರು ಕ್ಷೇತ್ರ ಮರುವಿಂಗಡಣೆಯನ್ನು ಮೀಸಲಾತಿಯೊಂದಿಗೆ ಲಿಂಕ್ ಮಾಡಿದ್ದರ ಸಾಧಕ-ಬಾಧಕಗಳನ್ನು ಪರಿಣಾಮಕಾರಿಯಾಗಿ ಎತ್ತಿ ತೋರಿಸಿದ್ದರೆ, ಇಂದು ಪ್ರಧಾನಿಯವರು ವಿಶೇಷ ಭಾಷಣ ಮಾಡಿ ದೇಶದ ಮಹಿಳೆಯರ ಮುಂದೆ ಕ್ಷಮೆಯಾಚಿಸುವ ಪ್ರಸಂಗವೇ ಬರುತ್ತಿರಲಿಲ್ಲ!
“ಆಯ್ದ ದೇಶೀಯ ಮಾಧ್ಯಮಗಳು” ಸತ್ಯವೆಂಬ ಕನ್ನಡಿಯನ್ನು ಎತ್ತಿ ತೋರಿಸುವಲ್ಲಿ ವಿಫಲವಾಗಿದೆ. ಮಹಿಳಾ ಮೀಸಲಾತಿಯೊಂದಿಗೆ ಕ್ಷೇತ್ರ ಮರುವಿಂಗಡಣೆಯನ್ನು ಲಿಂಕ್ ಮಾಡಲಾಗಿದೆ ಎಂದು ಸಮರ್ಪಕವಾಗಿ ಹೇಳುವಲ್ಲಿ ವಿಫಲವಾಗಿದೆ. ಕ್ಷೇತ್ರ ಮರುವಿಂಗಡಣೆಯನ್ನು ಮಹಿಳಾ ಮೀಸಲಾತಿಯೊಂದಿಗೆ ಲಿಂಕ್ ಮಾಡುವುದರಿಂದ ಉತ್ತರ ಭಾರತದ ರಾಜ್ಯಗಳಿಗಿಂತ ಉತ್ತಮವಾಗಿ ಜನಸಂಖ್ಯೆ ಬೆಳವಣಿಗೆಯನ್ನು ನಿಯಂತ್ರಿಸಿದ ದಕ್ಷಿಣ ರಾಜ್ಯಗಳಿಗೆ ಅನಾನುಕೂಲವಾಗಬಹುದು ಎಂಬ ಸತ್ಯವನ್ನು ವರದಿ ಮಾಡುವಲ್ಲಿ ಮಾಧ್ಯಮಗಳು ಹಿಂದೇಟು ಹಾಕುತ್ತಿದೆ. ಮಾಧ್ಯಮಗಳು ಯಾವುದೇ ಪ್ರಶ್ನೆಗಳನ್ನು ಕೇಳಿಲ್ಲ, ಸವಾಲನ್ನು ಎತ್ತಿ ತೋರಿಸಿಲ್ಲ. ಇನ್ನೊಂದೆಡೆ ಸತ್ಯವನ್ನು ಬಿಚ್ಚಿಟ್ಟ ಮಾಧ್ಯಮಗಳನ್ನು “ದೇಶ ವಿರೋಧಿ” ಎಂದು ಕರೆಯಲಾಗುತ್ತಿದೆ.
ಇದನ್ನು ಓದಿದ್ದೀರಾ? ಮಹಿಳಾ ಮೀಸಲಾತಿ : ಬಿಜೆಪಿಯ ಪಾಲಿಟಿಕಲ್ ಮಾರ್ಕೆಟಿಂಗ್ ತಂತ್ರ
“ಮೀಸಲಾತಿಯೊಳಗಿನ ಒಳಮೀಸಲಾತಿ”ಯ ಬಗ್ಗೆಯೂ ಚರ್ಚೆ ನಡೆದಿದೆ. ಅನೇಕ ವಿಮರ್ಶಕರು ಒಬಿಸಿ ಮತ್ತು ಅಲ್ಪಸಂಖ್ಯಾತ ಮಹಿಳೆಯರಿಗೆ ನಿರ್ದಿಷ್ಟ ಒಳಮೀಸಲಾತಿ ಇಲ್ಲದಿದ್ದರೆ ಮಸೂದೆ ಅಪೂರ್ಣವಾಗುತ್ತದೆ. ಮೀಸಲಾತಿಯ ಲಾಭವು ಕುಟುಂಬ ರಾಜಕಾರಣಕ್ಕೆ ಸಿಲುಕಬಹುದು ಎಂದು ಅನೇಕ ವಿಮರ್ಶಕರು ಹೇಳಿದರು. ‘ದೇಶಭಕ್ತ’ ಮಾಧ್ಯಮಗಳು ಈ ಅಂಶದ ಬಗ್ಗೆಯೂ ಉಸಿರು ಎತ್ತಿಲ್ಲ.
ನಿಜವಾದ ಮಹಿಳಾ ಸಬಲೀಕರಣದ ಬದಲು ರಾಜಕೀಯ ಪಕ್ಷಗಳು ಸಾಂಕೇತಿಕ ಪ್ರಾತಿನಿಧ್ಯಕ್ಕಾಗಿ ಈ ಮೀಸಲಾತಿಯನ್ನು ಬಳಸಿಕೊಳ್ಳಬಹುದು ಎಂಬ ಆತಂಕ ಇರುವುದರ ಬಗ್ಗೆಯೂ ಚರ್ಚೆಯಾಗಿಲ್ಲ. ಪಂಚಾಯತ್‌ಗಳಲ್ಲಿ ಮಹಿಳಾ ನಾಯಕರುಗಳು ಸಕಾರಾತ್ಮಕವಾದ ಕಾರ್ಯಗಳನ್ನು ಮಾಡಿದ್ದರೂ ನಿರಂತರ “ಮೆಗಾಲೊಮೇನಿಯಾಕಲ್” (ಅಧಿಕಾರದ ಬಗ್ಗೆ ಹುಚ್ಚು ಆಸೆ) ಎಂಬ ಸಮಸ್ಯೆ ಇಂದಿಗೂ ಉಳಿದಿದೆ. ಮೀಸಲಾತಿ ಇರುವ ಕಾರಣಕ್ಕಾಗಿ ಮಹಿಳೆಯರನ್ನು ಚುನಾವಣೆಯಲ್ಲಿ ನಿಲ್ಲಿಸಿ, ಗೆಲ್ಲಿಸಿ ಬಳಿಕ ಗಂಡಂದಿರು ನಿಜವಾದ ನಿಯಂತ್ರಣವನ್ನು ಮಾಡುವ ವಿದ್ಯಮಾನಗಳಿವೆ. ಮಸೂದೆಯ ಕರಡು ಈ ಅಪಾಯವನ್ನು ನಿಭಾಯಿಸುವ ಬಗ್ಗೆ ಮತ್ತು ಮಹಿಳಾ ನಾಯಕರು ಸಂಪೂರ್ಣ ಅಧಿಕಾರವನ್ನು ಹೇಗೆ ಪಡೆಯಬಹುದು ಎಂಬುದರ ಬಗ್ಗೆ ಯಾವುದೇ ಪ್ರಸ್ತಾಪವನ್ನು ಹೊಂದಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಮಹಿಳಾ ಮೀಸಲಾತಿ ಮಸೂದೆಯು ಸದ್ಯ ಸಂಸತ್ತಿನ ಹೊಸ ಸಭಾಂಗಣಗಳು ಮತ್ತು ಟಿವಿ ಚಾನೆಲ್‌ಗಳ ಸ್ಟುಡಿಯೋಗಳ ಎಸಿ ರೂಮ್ ಕೊಠಡಿಗಳಿಂದ ಹೊರಕ್ಕೆ ಅಧಿಕೃತವಾಗಿ ವಿಸ್ತರಿಸಿದೆ. ಮಹಿಳಾ ಮೀಸಲಾತಿ ಈಗ ಪ್ರಮುಖ ಪಾತ್ರ ವಿಷಯವಸ್ತುವಾಗಿದೆ. ಅಬ್ಬರದ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಹೊಳೆಯುವ ನಕ್ಷತ್ರವಾಗಿದೆ. ಮೀಸಲಾತಿ ಕಾರಣ ಸಂಸತ್ತು ಸದಸ್ಯರ ಸ್ಥಾನವು 543ರಿಂದ 850ಕ್ಕೆ ಹೆಚ್ಚಾಗಿ ಸಂಸತ್ತಿನ ಸಭಾಂಗಣದಲ್ಲಿ ಹೊಸ ಕುರ್ಚಿಗಳನ್ನು ಸೇರಿಸುವವರೆಗೂ ಮಹಿಳಾ ಮೀಸಲಾತಿ ವಿಚಾರ ಪ್ರಚಾರದ ವಿಷಯವಸ್ತುವಾಗಿಯೇ ಉಳಿಯಲಿದೆ ಎಂಬುದು ನಿಜ. ಮಹಿಳಾ ಮೀಸಲಾತಿ ಬಳಿಕ ಸಂಖ್ಯಾಬಲ ಹೆಚ್ಚಾಗುವ ಕಾರಣಕ್ಕಾಗಿಯೇ ಹೊಸ ಸಂಸತ್ತನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಪ್ರಾಯಶಃ ಸಂಸತ್ತಿನ ಸಭಾಂಗಣದ ವಾಸ್ತುಶಿಲ್ಪ ವಿನ್ಯಾಸವು ಮಹಿಳಾ ಮೀಸಲಾತಿ ಮಸೂದೆಯ ವಿನ್ಯಾಸಕ್ಕಿಂತ ಸುಲಭವಾಗಿತ್ತು ಅನಿಸುತ್ತದೆ!
ಇನ್ನು ಮುಂದಾದರೂ ಮಾಧ್ಯಮಗಳು ಜನಾಭಿಪ್ರಾಯವನ್ನು ಬಿಂಬಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸಬೇಕು. ಮೀಸಲಾತಿಯಲ್ಲಿ ಒಬಿಸಿ, ಎಸ್‌ಸಿ/ಎಸ್‌ಟಿ, ಅಲ್ಪಸಂಖ್ಯಾತರು ಮತ್ತು ಗ್ರಾಮೀಣ ಮಹಿಳೆಯರಿಗೆ ಮೀಸಲಾತಿ ನೀಡುವ ವಿಚಾರವನ್ನು ಎತ್ತುವ ಧ್ವನಿಗಳಿಗೆ ಪ್ರೋತ್ಸಾಹ ನೀಡಲಿ. ಹಾಗೆಯೇ ಮಹಿಳಾ ಮೀಸಲಾತಿಯನ್ನು ಮುಂದಿನ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯೊಂದಿಗೆ ಏಕೆ ಜೋಡಿಸಲಾಗಿದೆ ಎಂಬಂತಹ ಸಂಕೀರ್ಣ ವಿಚಾರಗಳನ್ನು ಮಾಧ್ಯಮಗಳು ವಿವರಿಸುವಂತಾಗಬೇಕು.
ಒಟ್ಟಾರೆಯಾಗಿ ಹೇಳುವುದಾದರೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಪತ್ನಿ ಗದರಿಸಿದ್ದಾರೆ ಎಂದು ತಮಾಷೆ ಮಾಡಿದ್ದಕ್ಕೆ ರಾಹುಲ್ ಗಾಂಧಿಯವರ ಹೇಳಿಕೆಯು ಹಾಸ್ಯಮಯವಾಗಿತ್ತು. “ಖಂಡಿತ, ಪ್ರಧಾನಿ ಮತ್ತು ನನಗೆ ಪತ್ನಿಯ ಸಮಸ್ಯೆ ಇಲ್ಲ, ಆದ್ದರಿಂದ ನಮಗೆ ಆ ಮಾಹಿತಿ ಸಿಗುವುದಿಲ್ಲ. ಆದರೆ ನಮಗೆ ನಮ್ಮ ತಾಯಂದಿರು ಮತ್ತು ಸಹೋದರಿಯರು ಇದ್ದಾರೆ” ಎಂದು ಗಾಂಧಿಯವರು ಹೇಳಿದ್ದು ಎಲ್ಲರೂ ನಗೆಗಡಲಲ್ಲಿ ತೇಲುವಂತೆ ಮಾಡಿತ್ತು.
ಈ ರೀತಿ ಸಂಸತ್ತಿನಲ್ಲಾಗಲಿ ಅಥವಾ ಹೊರಗೆ ಇರುವವರಾಗಲಿ- ನಮ್ಮ ದೇಶದ ಪುರುಷರು ತಮ್ಮ ಸಂಗಾತಿಗಳು ‘ನಿಜವಾದ ಗೃಹ ಮಂತ್ರಿಗಳು’ ಎಂದು ಹೇಳುವುದನ್ನು, ಆಗಾಗ್ಗೆ ಕೇಳಿಬರುವ ಪರಸ್ಪರ ಗೇಲಿ ಮಾಡುವ ಮತ್ತು ಪ್ರಣಯಭರಿತ ಹೇಳಿಕೆಗಳನ್ನು ನಾವು ಕೇವಲ ಹಾಸ್ಯ ಎಂದು ತಳ್ಳಿಹಾಕುವಂತಿಲ್ಲ. ವಾಸ್ತವದಲ್ಲಿ ಮಹಿಳೆಯರು ಆಡಳಿತ ಮಾಡಲು ಮತ್ತು ನಾಯಕತ್ವವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದನ್ನು ಈ ಹೇಳಿಕೆಗಳು ತೋರಿಸುತ್ತದೆ.
ಇದನ್ನು ಒಪ್ಪಿಕೊಳ್ಳುವುದಾದರೆ, ಮಹಿಳಾ ಮೀಸಲಾತಿ ಮಸೂದೆಯು ಈ ನಂಬಿಕೆಯ ವಿಸ್ತರಣೆಯೆಂದು ಪರಿಗಣಿಸಬಹುದು. ಮನೆಯ ‘ಗೃಹ ಸಚಿವಾಲಯ’ದಿಂದ ಸಂಸತ್ತಿನ ಶಾಸಕಾಂಗಗಳವರೆಗೆ ಸಾಗುವುದೆಂದರೆ ನಮ್ಮ ಸಾಮರ್ಥ್ಯದಲ್ಲಿ ಬದಲಾವಣೆಯಾಗಿದೆ, ನಾವು ಈ ಸಬಲರಾಗಿದ್ದೇವೆ ಎಂದು ಅರ್ಥವಲ್ಲ. ಬದಲಾಗಿ ಸಾಮರ್ಥ್ಯವಿದ್ದರೂ ಬಹಳ ಹಿಂದಿನಿಂದಲೂ ಮಹಿಳೆಯರ ದಕ್ಕದ ವೇದಿಕೆಯನ್ನು ಈಗ ನಾವು ಪಡೆಯಲು ಮುಂದಾಗುತ್ತಿರುವುದಷ್ಟೇ. ರಾಜಕೀಯ ಮಸಾಲ, ಟಿವಿ ನಾಟಕ – ಹೀಗೆ ಒಂದೇ ಅಡುಗೆ ಮಾಡಲು ಅಗತ್ಯಕ್ಕಿಂತ ಅಧಿಕ ಬಾಣಸಿಗರು (ಅಡುಗೆ ಮಾಡುವವರು) ಸೇರಿದರೆ ಆ ಸಾರು ಹಾಳಾಗುತ್ತದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು!
ಅನುವಾದ: ಮಯೂರಿ ಬೋಳಾರ್

ಆಯೇಷಾ ಖಾನಂ
ಹಿರಿಯ ಪತ್ರಕರ್ತೆ, ಕರ್ನಾಟಕ ಮಾಧ್ಯಮ ಕಾಡೆಮಿ ಅಧ್ಯಕ್ಷರು




