ಅಮೆರಿಕದ ಬೆದರಿಕೆಗಳು ಮತ್ತು ಕದನ ವಿರಾಮ ಉಲ್ಲಂಘನೆಯನ್ನು ತೀವ್ರವಾಗಿ ಖಂಡಿಸಿರುವ ಇರಾನ್, ಒತ್ತಡದ ಹೆದರಿಕೆಯ ನೆರಳಲ್ಲಿ ಯಾವುದೇ ಮಾತುಕತೆಗೆ ತಯಾರಿಲ್ಲ ಎಂದು ಖಡಕ್ ಆಗಿ ಹೇಳಿದೆ. ರಾಜತಾಂತ್ರಿಕ ಕ್ರಮಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಬೆದರಿಕೆಗಳ ಮೂಲಕ ಹಾಳು ಮಾಡುತ್ತಿದ್ದಾರೆ ಎಂದು ಇರಾನ್‌ನ ಮುಖ್ಯ ಮಾತುಕತೆಗಾರ ಹಾಗೂ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಖೇರ್ ಗಾಲಿಬಾಫ್ ಆರೋಪಿಸಿದ್ದಾರೆ.
‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಗಾಲಿಬಾಫ್ ಅವರು, ವಾಷಿಂಗ್ಟನ್ ಮಾತುಕತೆಯ ಮೂಲಕ ಇರಾನ್ ಅನ್ನು ‘ಶರಣಾಗತಿಯ ವೇದಿಕೆ’ಗೆ ತಳ್ಳಲು ಪ್ರಯತ್ನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉದ್ವಿಗ್ನತೆ ಇನ್ನಷ್ಟು ಹೆಚ್ಚಾದರೆ, ಇರಾನ್ ಯುದ್ಧಭೂಮಿಯಲ್ಲಿ ‘ಹೊಸ ಅಸ್ತ್ರ’ಗಳನ್ನು ಬಳಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಎರಡು ವಾರಗಳ ತಾತ್ಕಾಲಿಕ ಕದನವಿರಾಮದ ಗಡುವು ಏಪ್ರಿಲ್ 22 ರಂದು ಅಂತ್ಯಗೊಳ್ಳಲಿದೆ. ಇದಕ್ಕೂ ಮುನ್ನ ‘PBS News’ ಜೊತೆ ಮಾತನಾಡಿದ ಟ್ರಂಪ್, “ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಮುಂದಿನ ಸುತ್ತಿನ ಮಾತುಕತೆಯಲ್ಲಿ ಯಾವುದೇ ಸ್ಪಷ್ಟ ಫಲಿತಾಂಶ ಸಿಗದಿದ್ದರೆ, ಬಹಳಷ್ಟು ಬಾಂಬ್‌ಗಳು ಸಿಡಿಯಲಿವೆ,” ಎಂದು ಎಚ್ಚರಿಕೆ ನೀಡಿದ್ದರು. ಇದು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಾಗಿರುವ ಮಾತುಕತೆಯ ಅತ್ಯಂತ ಮಹತ್ವವನ್ನು ತೋರಿಸುತ್ತದೆ.
ಇದನ್ನು ಓದಿದ್ದೀರಾ? ಉದ್ಯೋಗದ ಹಕ್ಕು ಕಸಿದುಕೊಳ್ಳದಿರಿ; ಬೈಕ್ ಟ್ಯಾಕ್ಸಿ ಚಾಲಕರಿಗೆ ಬೇಕಿದೆ ಸರ್ಕಾರದ ಆಸರೆ
ಇರಾನ್ ಮಾತುಕತೆಯಲ್ಲಿ ಭಾಗವಹಿಸುವ ಬಗ್ಗೆ ಟ್ರಂಪ್ ಅನುಮಾನ ವ್ಯಕ್ತಪಡಿಸಿದ್ದಾರೆ. ಎರಡು ರಾಷ್ಟ್ರಗಳು ಸಮ್ಮತಿಸಿದ್ದರೂ, ಟೆಹ್ರಾನ್ ಹಾಜರಾಗುವ ಬಗ್ಗೆ ಇನ್ನು ಖಚಿತವಾಗಿಲ್ಲ ಎಂದಿದ್ದರು. ಆದರೆ, ಅಮೆರಿಕ ನಿಯೋಗವು ತನ್ನ ಪಾಡಿಗೆ ತಾನು ಮಾತುಕತೆಯಲ್ಲಿ ಭಾಗವಹಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದರು. ಒಂದು ವೇಳೆ ಮಾತುಕತೆ ವಿಫಲವಾದರೆ, ವಾಷಿಂಗ್ಟನ್ ಬೇರೆ ಮಾರ್ಗ ಹಿಡಿಯಲು ಸಿದ್ಧವಾಗಿದೆ ಎಂಬ ಸಂಕೇತವನ್ನು ಇದು ನೀಡುತ್ತಿದೆ.
ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮ ಮತ್ತು ಜಾಗತಿಕ ಇಂಧನ ಪೂರೈಕೆ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ನಡೆಯುತ್ತಿರುವ ಅಡೆತಡೆಗಳ ಮಧ್ಯೆ ಈ ಆತಂಕ ಸೃಷ್ಟಿಯಾಗಿದೆ. ತಾತ್ಕಾಲಿಕ ಕದನವಿರಾಮವು ನೇರ ದಾಳಿಗಳನ್ನು ನಿಲ್ಲಿಸಿದ್ದರೂ, ಎರಡು ರಾಷ್ಟ್ರಗಳ ನಡುವೆ ಆಳವಾದ ಅವಿಶ್ವಾಸ ಅಡಗಿ ಕುಳಿತಿದೆ. ವಾಷಿಂಗ್ಟನ್ ಅತಿಯಾದ ಬೇಡಿಕೆಗಳು ಮತ್ತು ಅಸಂಗತ ನಿಲುವುಗಳನ್ನು ತಳೆದಿದೆ, ಹೀಗಾಗಿ ಟೆಹ್ರಾನ್ ಮುಂದಿನ ಮಾತುಕತೆಯಿಂದ ಹೊರಗುಳಿಯಬಹುದು ಎಂದು ಇರಾನ್‌ನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಕೂಡ ಅಮೆರಿಕದ ಒತ್ತಡದ ವಿರುದ್ಧ ತಮ್ಮ ಬಿಗಿಯಾದ ನಿಲುವನ್ನು ಸಮರ್ಥಿಸಿ, ಅಮೆರಿಕದ ಮೇಲಿರುವ ಅವಿಶ್ವಾಸ ಅರ್ಥಪೂರ್ಣ ಮಾತುಕತೆಯ ಸಾಧ್ಯತೆಯನ್ನು ಕೆಡಿಸುತ್ತಿದೆ ಎಂದಿದ್ದಾರೆ. “ಮಾತುಕತೆಗೆ ಬದ್ಧವಾಗಿರುವುದು ಯಾವುದೇ ಅರ್ಥಪೂರ್ಣ ಸಂವಾದದ ಮೂಲ ಅಡಿಪಾಯ. ಆದರೆ, ಅಮೆರಿಕ ಇತ್ತೀಚಿನ ದಿನಗಳಲ್ಲಿ ಅಸಂಗತ ಹಾಗೂ ವಿಧ್ವಂಸಕ ಸಂದೇಶಗಳನ್ನು ರವಾನಿಸುತ್ತಿದೆ. ಇದು ಇರಾನ್ ಅನ್ನು ಬಲವಂತವಾಗಿ ಶರಣಾಗತಿ ಮಾಡಿಸುವ ಯತ್ನ,” ಎಂದು ಪೆಜೆಶ್ಕಿಯಾನ್ ಖಡಕ್ ಆಗಿ ಹೇಳಿದ್ದಾರೆ.
ಅಮೆರಿಕದ ಅಧಿಕಾರಿಗಳ ಇತ್ತೀಚಿನ ಕ್ರಮಗಳು ಹಾಗೂ ಹೇಳಿಕೆಗಳು ಇರಾನ್‌ನ ಶರಣಾಗತಿಯನ್ನು ಬಯಸುತ್ತಿರುವ “ಕಹಿ ಸಂದೇಶ”ವನ್ನು ನೀಡುತ್ತಿವೆ ಎಂದು ಪೆಜೆಶ್ಕಿಯಾನ್ ತಿಳಿಸಿದ್ದಾರೆ. ಆದರೆ, ಇರಾನ್‌ನ ಜನತೆ ಯಾವುದೇ ಬೆದರಿಕೆ ಅಥವಾ ಒತ್ತಡಕ್ಕೆ ಬಗ್ಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.





