ಉತ್ತರ ಕನ್ನಡ: ಹಾಲಕ್ಕಿಗಳ ಹಾಡು-ಪಾಡು ಮತ್ತು ಮರೀಚಿಕೆಯಾದ ಮೀಸಲಾತಿ

Date:

ಹಾಲಕ್ಕಿಗಳಿಗೆ ಪರಿಶಿಷ್ಟ ಪಂಗಡ ಮೀಸಲಾತಿ ಮರೀಚಿಕೆ ಆಗುತ್ತಿದೆ. ಮೀಲಾತಿ ಕೊಡಿಸುವ ಬಣ್ಣ-ಬಣ್ಣದ ಮಾತುಗಳಿಂದ ಹಾಲಕ್ಕಿಗಳ ಮತ ದೋಚಿ ಗೆದ್ದವರು ಕೃತಘ್ನರಾಗಿದ್ದಾರೆ. ಎಸ್ಟಿ ಮೀಸಲಾತಿ ಸೌಲಭ್ಯ ಅಷ್ಟು ಸುಲಭಕ್ಕೆ ಹಾಕ್ಕಿಗಳಿಗೆ ದಕ್ಕಲು ಪ್ರಬಲ ಮೇಲ್ವರ್ಗದ ಲಾಬಿ ಬಿಡುತ್ತಿಲ್ಲ. ಹಾಗಾಗಿ ಸದ್ಯಕ್ಕೆ 'ಹಾಲಕ್ಕಿ ಅಭಿವೃದ್ದಿ ನಿಗಮ'ವನ್ನಾದರೂ ಆರಂಭಿಸುವಂತೆ ಹಾಲಕ್ಕಿ ಹೋರಾಟಗಾರರು ಸಿಎಂ ಡಿಕೆಶಿ ಸರಕಾರದ ಮೇಲೆ ಒತ್ತಡ ತರುವ ಯೋಜನೆ ರೂಪಿಸಬೇಕಾಗಿದೆ. 

ಹಾಲಕ್ಕಿ ಒಕ್ಕಲು ಸಮುದಾಯ ಉತ್ತರ ಕನ್ನಡ ಜಿಲ್ಲೆಯ ಅಸ್ಮಿತೆ. ಹಾಲು ಹಾಗೂ ಅಕ್ಕಿಯಷ್ಟೇ ಸಮೃದ್ಧ ಸಂಸ್ಕೃತಿಯ ಈ ಬುಡಕಟ್ಟು ಜನಾಂಗ ಉತ್ತರ ಕನ್ನಡದ ಕರಾವಳಿಯಲ್ಲಷ್ಟೇ ಕಂಡುಬರುತ್ತದೆ. ಈ ವಿಭಿನ್ನ, ವಿಶಿಷ್ಟ ಗುಡ್ಡಗಾಡು ಮಂದಿ ಹಾಲು-ಅಕ್ಕಿ ಪಾಯಸ ಮಾತ್ರ ಎಂದೂ ಉಂಡಿಲ್ಲ. ಹಾಲಕ್ಕಿಗಳ ಶ್ರಮ-ಸಾಹಸದಿಂದ ಹಾಲು-ಅಕ್ಕಿ ಯಥೇಚ್ಚವಾಗಿ ಕೂಡಿಹಾಕಿಕೊಂಡವರು ಹನಿ ಪಾಯಸ ಕೊಟ್ಟಿದ್ದಿಲ್ಲ; ಅವರದೇ ಹಾಲು-ಅಕ್ಕಿಯಿಂದ ಪಾಯಸ ಮಾಡಿಕೊಳ್ಳುವುದಕ್ಕೂ ಶತಶತಮಾನಗಳಿಂದ ಬಿಡುತ್ತಿಲ್ಲ. ಬೆವರಿನ ಸಂಸ್ಕೃತಿಯ ಹಾಲಕ್ಕಿಗಳಿಗೆ ಪಾಯಸದ ರುಚಿ ತಿಳಿದರೆ ತಾವು ಹಾಕುವ ತಂಗಳನ್ನದ ಹಿಂದಿನ ಹಿಕಮತ್ತು ಅರ್ಥವಾಗುತ್ತದೆ ಎಂಬ ಆತಂಕ ಪಟ್ಟಭದ್ರ  ಶಿಷ್ಟ ಸಮುದಾಯಕ್ಕೆ. ಹಾಗಾಗಿ ಸ್ವಾತಂತ್ರ್ಯ ಬಂದು ಎಂಟು ದಶಕ ಕಳೆದರೂ ಹಾಲಕ್ಕಿ ಕೊಪ್ಪಗಳು ನಾಗರಿಕ ಸಮಾಜದ ನಡುಗಡ್ಡೆಗಳಾಗಿಯೇ ಉಳಿದಿವೆ.

- Advertisement -

ಕವಿ-ಕರ್ಮಯೋಗಿ-ದಾರ್ಶನಿಕ ದಿನಕರ ದೇಸಾಯಿ ಒಬ್ಬರನ್ನು ಬಿಟ್ಟರೆ ಉತ್ತರ ಕನ್ನಡದಿಂದ ಶಾಸಕ-ಸಂಸದ-ಮಂತ್ರಿಯಾದ ಯಾವ ಮಹನೀಯನೂ ಹಾಲಕ್ಕಿಗಳ ಬಗ್ಗೆ ಪ್ರಾಮಾಣಿಕ ಕಾಳಜಿ-ಕಳಕಳಿ ತೋರಿಸಿದ್ದ ಕುರುಹು ಕಾಣಿಸುವುದಿಲ್ಲ. ಒಂದು ಅವಧಿಗೆ ಕೆನರಾದ ಸಂಸದೆಯಾಗಿದ್ದ ಮಾರ್ಗರೆಟ್ ಆಳ್ವ ಒಂಚೂರು ಹಾಲಕ್ಕಿಗಳತ್ತ ಕಣ್ಣು ಹಾಯಿಸಿದ್ದರು. ಆದರೆ ನಿಗ್ರೋ ಮೂಲದವರೆನ್ನಲಾಗುವ ಉತ್ತರ ಕನ್ನಡದ ಸಿದ್ಧಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದ ಮಾರ್ಗರೆಟ್ ಆಳ್ವ ಅದ್ಯಾಕೋ ಹಾಲಕ್ಕಿಗಳನ್ನು ಅರ್ಧದಲ್ಲೇ ಕೈಬಿಟ್ಟುಬಿಟ್ಟರು. ಸರಿ ಸುಮಾರು ಮೂರು ದಶಕದಿಂದ ಹಾಲಕ್ಕಿ ಒಕ್ಕಲು ಸಮುದಾಯದ ಪ್ರಜ್ಞಾವಂತರು ತಮ್ಮ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಮುಖ್ಯವಾಹಿನಿಗೆ ಬರಲು ಅವಕಾಶ ಮಾಡಿಕೊಡಿ ಎಂದು ಅಲವತ್ತುಕೊಳ್ಳುತ್ತಲೇ ಇದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರದಲ್ಲಿ ಜಿ.ಪಂ ತಾ.ಪಂ ಚುನಾವಣೆಯ ಕಾವು; AI ಪೋಸ್ಟರ್‌ಗಳಲ್ಲೂ...

ಚುನಾವಣೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಅಭ್ಯರ್ಥಿಗಳ ಅಂತಿಮ ಪಟ್ಟಿಯೂ ಸಿದ್ಧವಾಗಿಲ್ಲ. ಆದರೆ, ಗ್ರಾಮೀಣ ರಾಜಕಾರಣದಲ್ಲಿ ಮಾತ್ರ ಈಗಾಗಲೇ ಚುನಾವಣೆಯ ಕಾವು ಏರತೊಡಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ...

ಸ್ಟಿಂಗ್ ಆರೋಪದ ಸುತ್ತ ರಾಜಕೀಯ ಲೆಕ್ಕಾಚಾರ; ಸತ್ಯಾಸತ್ಯತೆ ಹೊಣೆಗಾರಿಕೆಯ...

ಸಿದ್ದರಾಮಯ್ಯ ಅವರ ನಿರಾಕರಣೆ, ಕುಮಾರಸ್ವಾಮಿ ಅವರ ಆರೋಪಗಳು, ಆರ್. ಅಶೋಕ್ ಅವರ ಹಣಕಾಸಿನ ಕುರಿತ ಹೇಳಿಕೆಗಳು ಮತ್ತು ಸರ್ಕಾರದ ತನಿಖೆಯ ಭರವಸೆ—ಇವೆಲ್ಲವೂ ಪ್ರಕರಣದ ವಿವಿಧ ಆಯಾಮಗಳನ್ನು ಪ್ರತಿನಿಧಿಸುತ್ತವೆ. ಆದರೆ ಇವುಗಳಲ್ಲಿ ಯಾವುದೂ ಸ್ವತಃ...

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಪ್ರವರ್ಗ-1ರಲ್ಲಿ ಬಲಾಢ್ಯರೊಂದಿಗೆ ಸೆಣಸಾಡಲು ತೀರ ಅಸಹಾಯಕರಾದ ತಮಗೆ ಸಾಧ್ಯವಿಲ್ಲ ಎಂದು ಕಂಡಕಂಡ ನಾಯಕರಲ್ಲಿ ಬೇಡಿಕೊಂಡಿದ್ದಾರೆ. ಹಕ್ಕೊತ್ತಾಯದ ಹಲವು ಹೋರಾಟ-ಪ್ರತಿಭಟನೆ-ದಿಲ್ಲಿ ಯಾತ್ರೆ ಮಾಡಿದ್ದಾರೆ. ಮಾಡುತ್ತಲೇ ಇದ್ದಾರೆ. ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಮತ್ತು ತುಳಸಿ ಗೌಡ ತಮ್ಮ ಕೊನೆಗಾಲದವರೆಗೂ ಸ್ವಸಮುದಾಯದ ಹಾಲಕ್ಕಿಗಳಿಗೆ ಎಸ್ಟಿ ಮೀಸಲಾತಿಗಾಗಿ, ತಮ್ಮ ಯುವಕರನ್ನು ಹೆಂಡದ ಗಂಡಾಂತರದಿಂದ ಪಾರುಮಾಡುವ ಮತ್ತು ಹಾಲಕ್ಕಿ ಹುಡುಗ-ಹುಡುಗಿಯರು ವಿದ್ಯಾಭ್ಯಾಸದತ್ತ ಹೊರಳುವಂತೆ ಮಾಡುವ ಕಟಿಪಿಟಿ ಮಾಡುತ್ತಲೇ ಇದ್ದರು. ಸುಕ್ರಜ್ಜಿ, ತುಳಸಿಜ್ಜಿಗಳನ್ನು ತಮ್ಮ ಸಾಮಾಜಿಕ, ರಾಜಕೀಯ ಲಾಭಕ್ಕೆ ವೇದಿಕೆಗಳಲ್ಲಿ ಬಳಸಿದವರೂ ಹಾಲಕ್ಕಿಗಳ ಬಗ್ಗೆ ಕಾಳಜಿ ತೋರಿಸಲಿಲ್ಲ. ಹಾಲಕ್ಕಿಗಳು ಸಾಮಾಜಿಕ-ಶೈಕ್ಷಣಿಕ ಮತ್ತು ರಾಜಕೀಯವಾಗಿ ತಿಳಿವಳಿಕೆಯುಳ್ಳವರಾಗುತ್ತಿದ್ದಂತೆ, ಉದ್ಧಾರವಾಗದಂತೆ ಮೇಲ್ವರ್ಗದ ಷಡ್ಯಂತ್ರ ನಾಜೂಕಾಗಿ ನಡೆಸುತ್ತಲೇ ಇದೆ; ಇಲ್ಲಿಯ ಎಲ್ಲ ಪಕ್ಷದ ಅದಿಕಾರಸ್ಥರಂತೂ ಲಾಗಾಯ್ತಿನಿಂದ ಹಾಲಕ್ಕಿಗಳನ್ನು ಓಟ್ ಬ್ಯಾಂಕ್ ರಾಜಕಾರಣಕ್ಕಷ್ಟೇ ಬಳಸಿಕೊಂಡರೇ ಹೊರತು ಅವರ ಬೇಕು-ಬೇಡಗಳತ್ತ ಬೇಕಂತಲೇ ಗಮನ ಹರಿಸಲಿಲ್ಲ ಎಂಬುದು ಇತಿಹಾಸ.

ಹಾಲಕ್ಕಿ ಜನಾಂಗ3

ಪಕ್ಕಾ ಬುಡಕಟ್ಟು ಸಮುದಾಯ
ಹಾಲಕ್ಕಿ ಒಕ್ಕಲಿಗರು ಉತ್ತರ ಕನ್ನಡದ ಮೂಲ ನಿವಾಸಿಗಳು. ಒಂದು ಲೆಕ್ಕಾಚಾರದಂತೆ ಸುಮಾರು ಎರಡು ಲಕ್ಷದಷ್ಟಿರುವ ಹಾಲಕ್ಕಿ ಒಕ್ಕಲಿಗರೇ ಜಿಲ್ಲೆಯ ಪ್ರಥಮ ಬಹುಸಂಖ್ಯಾತರು. ಹಾಲಕ್ಕಿಗಳ ಉಡುಗೆ-ತೊಡುಗೆ, ಆಹಾರ-ವಿಹಾರ, ಸಾಮಾಜಿಕ-ಧಾರ್ಮಿಕ-ಸಾಂಸ್ಕೃತಿಕ ರೀತಿ-ರಿವಾಜು, ಕಲೆ-ಕಸುಬು, ಹೊರ-ಒಳ ನೋಟಗಳು ಇದೊಂದು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರಲು ಸಕಲ ಅರ್ಹತೆ ಇರುವ ವಿಶಿಷ್ಟ ಬುಡಕಟ್ಟು ಜನಜಾತಿ ಎಂಬುದನ್ನು ನಿಸ್ಸಂಶಯವಾಗಿ ಸಾಬೀತು ಮಾಡುವಂತಿದೆ. ಹಾಲಕ್ಕಿಗಳದು ಕಾಡಿನ ಸಂಸ್ಕೃತಿಯ ಪಕ್ಕಾ ಆದಿವಾಸಿ ಜನಾಂಗ ಎಂಬುದನ್ನು ಅವರ ಬದುಕು-ಬವಣೆ ಮನದಟ್ಟು ಮಾಡುತ್ತದೆ. ಕಾರವಾರದ ಕಾಳಿ ನದಿ ಬಲ ದಂಡೆಯಿಂದ ಹೊನ್ನಾವರದ ಶರಾವತಿ ನದಿಯ ಎಡ ದಂಡೆಯ ನಡುವಿನ ಸಹ್ಯಾದ್ರಿ ಬೆಟ್ಟಗಳ ತಪ್ಪಲಲ್ಲಿ ಗುಂಪುಗುಂಪಾಗಿ ಹಾಲಕ್ಕಿಗಳು ಬದುಕು ಕಟ್ಟಿಕೊಂಡಿದ್ದಾರೆ. ಕಾರವಾರ, ಅಂಕೋಲಾ, ಕುಮಟಾ ಮತ್ತು ಹೊನ್ನಾವರ ತಾಲೂಕಿನಲ್ಲಿ ಅರಣ್ಯ ಉತ್ಪನ್ನ ಸಂಗ್ರಹ-ಮಾರಾಟ ಮತ್ತು ಕೂಲಿ ನಂಬಿ ಜೀವಿಸುತ್ತಿರುವ ಈ ಕಾಡಿನ ಮಕ್ಕಳು ವಾಟೆ ಮರದ ಬಾರೀಕು ಕೋಲಿನ ತಡಿಕೆಗೆ ಮಣ್ಣು ಮೆತ್ತಿ ಸಿದ್ಧಪಡಿಸಿದ ಗೋಡೆ ಮತ್ತು ತಾಳೆಗರಿ ಹೊದೆಸಿದ ಸೂರಿನ ಗುಡಿಸಿಲಲ್ಲಿ ವಾಸಿಸುತ್ತಾರೆ. ಜಗದ ಪರಿವರ್ತನೆಯಲ್ಲಿ ಅಲ್ಲಲ್ಲಿ ಮನೆಗಳು ರೂಪಾಂತರಗೊಂಡು ಹಂಚು ಕಂಡರೂ ಸಾಂಪ್ರದಾಯಿಕ ಒಳ ರಚನೆ ಬದಲಾಗಿಲ್ಲ.

ಹಾಲಕ್ಕಿಗಳು ಮಾತಾಡುವುದು ಕನ್ನಡ ಭಾಷೆ; ಆದರೆ ಆ ಸಂವಹನಕ್ಕೆ ಹಾಲಕ್ಕಿಗಳದೇ ಆದ ಲಯವಿದೆ. ಉತ್ತರ ಕನ್ನಡದ ಹವ್ಯಕ ಬ್ರಾಹ್ಮಣರ ಮತ್ತು ನಾಡವರ ಆಡು ಭಾಷೆಯಿಂದ ಹೇಗೆ ಅವರ ಜಾತಿಯನ್ನು ಗುರುತಿಸಬಹುದೋ ಹಾಗೆ ಹಾಲಕ್ಕಿಗಳ ಕನ್ನಡವೂ ವಿಭಿನ್ನವಾಗಿದೆ. ಕಡಮೆ, ಹಂದಿ ಮುಂತಾದ ಕಾಡು ಪ್ರಾಣಿಗಳು ಮತ್ತು ಮಂಜಲ, ಕೊಡಸಲದಂಥ ಗಿಡ ಮೂಲಿಕೆಗಳು ಹಾಲಕ್ಕಿಗಳ ‘ಬಳಿ'(ಗೋತ್ರ)ಗಳು. ಈ ಜನಾಂಗದ ಗಂಡಸರು ಉಡದಾರಕ್ಕೆ ಮೂಲೆ ಪಂಚೆ ಕಚ್ಚೆ(ಲಂಗೋಟಿ) ಸಿಕ್ಕಿಸಿಕೊಂಡು ಬರಿ ಮೈಲಿರುತ್ತಾರೆ; ಹೆಂಗಸರು ಗೇಟಿ ಸೀರೆ ಉಡುತ್ತಾರೆ. ಗೇಟಿ ಸೀರೆಯೆಂದರೆ ಲಂಗ ಮತ್ತು ರವಿಕೆಯಿಲ್ಲದೆ ಬರಿ ಸೀರೆಯಷ್ಟೇ. ಎದೆಯಿಂದ ಮೊಣ ಕಾಲಿನಿಂದ ಸ್ವಲ್ಪ ಕೆಳತನಕ ಅವರದೆ ಆದ ವಿಶಿಷ್ಟ ವಿನ್ಯಾಸದಲ್ಲಿ ಸುತ್ತಿಕೊಳ್ಳುವುದು. ಹಾಲಕ್ಕಿ ಹೆಂಗಸರು ಕಾಡಿನಲ್ಲಿ ಸಿಗುವ ಗುಲಗುಂಜಿ ಮತ್ತಿತರ ಕಪ್ಪು ಬೀಜಗಳನ್ನು ನಾರಿನ ದಾರದಲ್ಲಿ ಪೋಣಿಸಿ ತಯಾರಿಸಿದ ರಾಶಿ-ರಾಶಿ ಸರಗಳನ್ನು ಕುತ್ತಿಗೆ ತುಂಬ ಹಾಕಿಕೊಳ್ಳುತ್ತಾರೆ. ಜನಪದ ಹಾಡುಗಳು ಇವತ್ತಿಗೂ ಹಾಲಕ್ಕಿ ಹೆಂಗಸರ ಬಾಯಲ್ಲಿವೆ. ಗಂಡಸರು ಈಟಿ, ಭರ್ಚಿ, ಬಲೆಯಂಥ ಬೇಟೆ ಆಯುಧಗಳನ್ನು ಸಂಗ್ರಹಿಸಿ ಧಾರ್ಮಿಕ ನಂಬುಗೆಯ ಪ್ರಾಣಿ ಶಿಕಾರಿಗೆ ಹೋಗುತ್ತಿದ್ದ ಕಾಲವೊಂದಿತ್ತು. ತಾಳೆ ಮತ್ತು ರಾಗಿ ಹಿಟ್ಟಿನ ಗಂಜಿ ಹಾಲಕ್ಕಿಗಳ ಪ್ರಮುಖ ಆಹಾರ. ಕೆಲವು ಕುಟುಂಬಗಳು ಅರಣ್ಯ ಭೂಮಿ ಸಾಗುವಳಿಯಿಂದ ಬದುಕುತ್ತಿವೆ.

ಹಾಲಕ್ಕಿಗಳು ಅನಾದಿ ಕಾಲದಿಂದ ಒಳಾಡಳಿತ ನಡೆಸುತ್ತಿದ್ದಾರೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯ ಆಂತರಿಕ ಪಾರುಪತ್ಯಕ್ಕೆ ಅನುಕೂಲವಾಗುವಂತೆ ತಮ್ಮ ಜನ ಸಮುದಾಯದ ಪ್ರದೇಶಗಳನ್ನು ಏಳು ಸೀಮೆಗಳಾಗಿ ವಿಂಗಡಿಸಿ ಕೊಂಡಿದ್ದಾರೆ. ಸೀಮೆ ಗೌಡ, ಗುರು ಗೌಡ, ಅರಸು ಗೌಡ, ಪ್ರಧಾನಿ ಗೌಡ, ಬುದವಂತ, ಕೋಲಕಾರ, ಮಾಗಣಿದಾರ ಮತ್ತು 18 ಹಳ್ಳಿ ಗೌಡರ ಮಂತ್ರಿ ಮಂಡಲ ಆಂತರಿಕ ಪ್ರಜಾಸತ್ತೆಯನ್ನು ನಡೆಸುತ್ತದೆ. ಹುಲಿ ದ್ಯಾವ್ರು, ಕರಿ ದ್ಯಾವ್ರು, ಜಟಗ ದ್ಯಾವ್ರು, ಬೊಂಬೆ ದ್ಯಾವ್ರುಗಳ ಆರಾಧಕರಾದ ಹಾಲಕ್ಕಿಗಳ ಕೊಪ್ಪ(ಕೇರಿ)ದ ಹುಲಿದೇವರ ಗುಡಿಯಲ್ಲಿ ನಿತ್ಯ ಪೂಜೆಯಾಗುತ್ತದೆ. ಕಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಹಾಲಕ್ಕಿಗಳ ಕೆಲವು ಮನೆತನಗಳು ತಲತಲಾಂತರದಿಂದ ವಿವಿಧ ಗಿಡ-ಮರದ ಬೇರು, ಎಲೆ, ಟೊಂಗೆ ಮತ್ತು ಬಳ್ಳಿಗಳನ್ನು ಬಳಸಿಕೊಂಡು ನಾಟಿ ಮದ್ದು ಹಲವು ಕಾಯಿಲೆಗಳಿಗೆ ಕೊಡುತ್ತಬಂದಿವೆ. ಮೇಲ್ವರ್ಗದ ಮಂದಿಯೂ ಹಾಲಕ್ಕಿ ವೈದ್ಯರ ಮದ್ದಿಗೆ ಸಾಲುಗಟ್ಟಿ ನಿಲ್ಲುತ್ತಾರೆ. ಹಾಲಕ್ಕಿಗಳ ಆಯುರ್ವೇದ ನೈಪುಣ್ಯ ಒಂದು ಪಿಎಚ್.ಡಿ ಪ್ರಬಂಧಕ್ಕಾಗುವಷ್ಟು ಹರಹು ಹೊಂದಿದೆ ಎಂಬ ಅಭಿಪ್ರಾಯವಿದೆ.

ನೆಲದ ಸೊಗಡಿನ ಈ ಜನಾಂಗದ ಹೆಗ್ಗುರುತೆ ವಿಶಿಷ್ಟ-ವಿಭಿನ್ನ ಸಾಂಪ್ರದಾಯಿಕ ಕಲಾ ಪ್ರಕಾರಗಳ ವೈಭವ. ಸುಗ್ಗಿ ಹಬ್ಬದ ಸಂದರ್ಭದಲ್ಲಿ ಸುಗ್ಗಿ ಕುಣಿತದ ಹಾಲಕ್ಕಿ ತಂಡಗಳು ಕಾಡಿನ ಕುಸುಮಾಲೆ ಹೂವಿನ ತುರಾಯಿ ಕಟ್ಟಿಕೊಂಡು ಹಾಲಕ್ಕಿ ಲಯದಲ್ಲಿ ಕುಣಿಯುತ್ತ ಕೊಪ್ಪದಿಂದ ‘ಆಧುನಿಕರ’ ಕೇರಿಗಳತ್ತ ಬಂತೆಂದರೆ ಇಡೀ ಊರಿಗೆ ಸಂಭ್ರಮ-ಸಡಗರ!ಹಾಲಕ್ಕಿಗಳ ಸುಗ್ಗಿ ಕುಣಿತದ ನೃತ್ಯ, ಪದ್ಯ, ವಾದ್ಯದ ಗತಿ-ತಾಳವೇ ಹಾಗಿರುತ್ತದೆ. ಹಾಲಕ್ಕಿಗಳ ಗುಮಟೆ ಪಾಂಗು, ಕೋಲಾಟ, ತಾರ್ಲೆ ಕುಣಿತ, ಮರಕಾಲು ಕುಣಿತ, ಹಗಣಗಳು ಬೇರೆಲ್ಲಿಯೂ ಕಾಣಿಸದು. ಅಂಕೋಲಾದಲ್ಲಿ ಪ್ರತಿ ವರ್ಷ ಹೋಳಿ ಹಬ್ಬದ ಹೊತ್ತಲ್ಲಿ ಸಾರ್ವಜನಿಕವಾಗಿ ನಡೆಯುವ ಸಾಂಪ್ರದಾಯಿಕ ಕಲೆ ಹಗಣ(ಹಗರಣ-ಸಮಕಾಲೀನ ಘಟನೆಗಳ ವಿಡಂಬನೆ)ಕ್ಕೆ ಸ್ವಾತಂತ್ರ್ಯ ಪೂರ್ವದಲ್ಲಿ ತಾಲೂಕಾ ದಂಡಾಧಿಕಾರಿ ಗೌರವಿಸಿ ಅತ್ಯುತ್ತಮ ಎನಿಸಿದವುಗಳಿಗೆ ಬಹುಮಾನ ಕೊಟ್ಟು ಪ್ರಶಂಸಿಸುತ್ತಿದ್ದರು. ಆ ಗೌರವ ಇವತ್ತಿಗೂ ಸರಕಾರ ಕೊಡುತ್ತಿರುವುದು ಹಾಲಕ್ಕಿಗಳ ಸಾಂಸ್ಕೃತಿಕ ಹಿರಿಮೆಗೆ ಸಾಕ್ಷಿಯಂತಿದೆ.

ತುಳಸಿ ಸುಕ್ರಿ ಗೌಡ ಮತ್ತು ಮೋದಿ
ಜನಾಂಗದ ಹಿರಿಮೆಗಳಾದ ತುಳಸಿಗೌಡ, ಸುಕ್ರಿ ಬೊಮ್ಮಗೌಡ ಪ್ರಧಾನಿ ಮೋದಿ ಭೇಟಿ ಮಾಡಿದ್ದು…

ಸಾಮಾಜಿಕ ಸಂಕಷ್ಟ ಮತ್ತು ಮೀಸಲಾತಿ
ಬದ್ಧತೆಯ ಕಠಿಣ ಪರಿಶ್ರಮದ ಹಾಲಕ್ಕಿ ಒಕ್ಕಲು ಸಮುದಾಯ ನಂಬಿಕೆ-ನಿಷ್ಠೆಗೆ ಅನ್ವರ್ಥದಂತಿದೆ. ಹಾಲಕ್ಕಿಗಳು ಬೆವರು ಸುರಿಸುವ ಉಳ್ಳವರ ತೋಟ-ಗದ್ದೆಗಳು ಹಸನಾಗಿ ಲಾಭದಾಯಕವಾಗಿ ನಳನಳಿಸುವುದು ಆ ಸಮುದಾಯದ ಕಷ್ಟ ಸಹಿಷ್ಣುತೆಗೆ ಸಾಕ್ಷಿಯಂತಿವೆ. ಕಠೋರ ಕಾಡಿನ ಕಾಯ್ದೆ ಜಾರಿಗೆ ಬಂದ ಬಳಿಕ ಅರಣ್ಯ ಇಲಾಖೆ ಅಸಾಯಕ ಹಾಲಕ್ಕಿಗಳ ಮೇಲೆ ಮುಗಿಬಿದ್ದು ಬೀದಿ ಪಾಲಾಗಿಸುತ್ತಿದೆ. ಅರಣ್ಯ ಇಲಾಖೆ ದಂಡ ಪ್ರಯೋಗಿಸಿ ಕಾಡಿನಂಚಿನಿಂದ ಒಕ್ಕಲೆಬ್ಬಿಸಿದ ನಂತರ ಹಾಲು-ಅಕ್ಕಿಯ ಸಮೃದ್ಧ ಸೀಮೆಗಳು ಕೂಲಿಗಳ ಕೇರಿಗಳಂತಾಗಿವೆ. ಭೂನ್ಯಾಯ ಮಂಡಳಿಯಿಂದ ಬಂದಿದ್ದ ಜಮೀನನ್ನು ಲ್ಯಾಂಡ್ ಮಾಫಿಯಾ ಆತಂಕ-ಆಮಿಷ ಒಡ್ಡಿ ಎಗರಿಸಿ ಒಂದಿಷ್ಟು ಹಾಲಕ್ಕಿ ಕುಟುಂಬಗಳನ್ನು ನಿರ್ಗತಿಕರನ್ನಾಗಿಸಿದೆ.

ಒಂದೆಡೆ ಬಡತನ-ಸಾಮಾಜಿಕ ತಾರತಮ್ಯ ಮತ್ತೊಂದೆಡೆ ಆಧುನಿಕತೆ ಹಾವಳಿ-ಸರಕಾರಿ ಕಾನೂನುಗಳ ದೌರ್ಜನ್ಯದ ಜಂಜಾಟದ ನಡುವೆಯೂ ಹಾಲಕ್ಕಿಗಳು ತಮ್ಮ ಅಸಲೀ ಗುಣ ಧರ್ಮ ಮಾತ್ರ ಬಿಟ್ಟಿಲ್ಲ; ಬುಡಕಟ್ಟು ಸಂಸ್ಕೃತಿಯ ಆಚಾರ, ವಿಚಾರ, ಕಲೆ, ಕಸುಬು ಹಾಗೂ ಆಂತರಿಕ ಆಡಳಿತ ವ್ಯವಸ್ಥೆ ಉಳಿಸಿಕೊಂಡಿದ್ದಾರೆ. ಈಗಿತ್ತಲಾಗಿ ಹೊಸ ಪೀಳಿಗೆಯ ಉಡುಗೆ-ತೊಡುಗೆ ಮತ್ತು ಗುಡಿಸಲುಗಳ ರಚನೆಯಲ್ಲಿ ಬದಲಾವಣೆ ಆಗಿದೆಯಾದರೂ ಸಾಮಾಜಿಕ-ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ವ್ಯವಹಾರ ಜ್ಞಾನ ಮೂಡಿಲ್ಲ ಎಂದು ಸಮಾಜ ವಿಜ್ಞಾನಿಗಳು ತರ್ಕಿಸುತ್ತಾರೆ.

ಪ್ರಗತಿ-ಅಭಿವೃದ್ಧಿಯತ್ತ ಹಾಲಕ್ಕಿಗಳು ಹೊರಳದಂತೆ ವ್ಯವಸ್ಥಿತವಾಗಿ ಅಡ್ಡಿಪಡಿಸಲಾಗುತ್ತಿದೆ ಎಂಬುದು ಕಣ್ಣಿಗೆ ಕಾಣುವ ವಾಸ್ತವ; ಹಾಲಕ್ಕಿಗಳಿಗೆ ಪರಿಶಿಷ್ಟ ಪಂಗಡ(ಎಸ್ಟಿ) ಮೀಸಲಾತಿ ಸಿಕ್ಕರೆ ಪರಿವರ್ತನೆಯೆ ಗಾಳಿ ಆ ಮುಗ್ದ ಜನಾಂಗದ ಕೊಪ್ಪಗಳಲ್ಲಿ ಬೀಸುತ್ತದೆ. ಅದು ಹಾಲಕ್ಕಿಗಳನ್ನು ಸಾಮಾಜಿಕ ಮತ್ತು ರಾಜಕೀಯವಾಗಿ ಗುಲಾಮರಾಗಿ ಮಾಡಿಕೊಂಡಿರುವ ‘ಮೇಲರಿಮೆ ವ್ಯಸನ’ದ ವರ್ಗಕ್ಕೆ ಬೇಡವಾಗಿದೆ. ಹಾಲಕ್ಕಿಗಳಿಗೆ ಪರಿಶಿಷ್ಟ ಪಂಗಡ ಮೀಲಾತಿ ಸೌಲಭ್ಯ ದೊರಕಿದರೆ ತಮ್ಮ ರಾಜಕೀಯ ಸ್ಥಾನ-ಮಾನಕ್ಕೆ ಸಂಚಕಾರ ಬರುತ್ತದೆಂಬ ಆತಂಕ ಹಾಲಕ್ಕಿಗಳೇತರ ಅಧಿಕಾರಸ್ಥರದು; ಹಾಲಕ್ಕಿ ಹುಡುಗ, ಹುಡುಗಿಯರು ಶಾಲೆ-ಕಾಲೇಜು ಕಲಿತು ಉದ್ಯೋಗ-ಉದ್ಯಮದಲ್ಲಿ ತೊಡಗಿಕೊಂಡರೆ ತಮ್ಮ ಹೊಲ, ತೋಟ, ಕೊಟ್ಟಿಗೆ ಚಾಕರಿ ಮಾಡುವವರಿಲ್ಲದೆ ಪಾಳು ಬೀಳುತ್ತದೆಂಬ ದೂ(ದು)ರಾಲೋಚನೆ ಉಳ್ಳವರದು.

ಉತ್ತರ ಕನ್ನಡದ ಹವ್ಯಕ-ಕೊಂಕಣಿ-ದೀವರೆ ಮುಂತಾದ ಸವರ್ಣೀಯರ ಮನೆ-ಗದ್ದೆ-ತೋಟ-ಉದ್ಯಮದಲ್ಲಿ ಬೆವರು ಬಸಿದು ಗೇಯುವುದು ಬುಡಕಟ್ಟು ಹಾಲಕ್ಕಿ ಒಕ್ಕಲಿಗರು, ಗ್ರಾಮ ಒಕ್ಕಲಿಗರು(ಪಟಗಾರ), ಕರೆ ಒಕ್ಕಲಿಗರು ಮತ್ತು ದಲಿತ ಮುಕ್ರಿ, ಆಗೇರ, ಹಳ್ಳೇರ ಇನ್ನಿತರ ಜಾತಿಯವರು. ಮುಗಿಲೆತ್ತರದ ಅಡಿಕೆ ಮರವೇರಿ ಮದ್ದು ಹೊಡೆಯುವ, ಅಡಿಕೆ-ತೆಂಗು ಕೊಯ್ಯುವ ಗಂಡಾಂತರಕಾರಿ-ಚಾಕಚಕ್ಯತೆಯ ಕಸುಬಿನ ಜನಾಂಗಗಳಿವು. ಈ ಕಷ್ಟ ಸಹಿಷ್ಣು ಶ್ರಮಿಕ ವರ್ಗವಿಲ್ಲವೆಂದರೆ ಮೇಲ್ವರ್ಗದ ಆರ್ಥಿಕತೆಯೇ ಪಲ್ಟಿ ಹೊಡೆಯುತ್ತದೆ. ಹೀಗಾಗಿ ಹಾಲಕ್ಕಿಗಳು ಮತ್ತು ದಲಿತರು ಇರುವಂತೆಯೇ ಇರಲಿ ಎಂಬ ಆಶಯ ರಾಜಕಾರಣಿ, ಜಮೀನ್ದಾರ ಹಾಗು ಪುರೋಹಿತಶಾಹಿ ವರ್ಗಗಳದ್ದಾಗಿದೆ ಎಂದು ವಿಶ್ಲೇಷಿಸಲಾಗುತ್ತದೆ.

ಹಾಲಕ್ಕಿ ಜನಾಂಗ1

ತೇರು-ಜಾತ್ರೆಗೆ ಹಾಲಕ್ಕಿಗಳ ‘ಸೇವೆ’ ಅನಿವಾರ್ಯ
ಹವ್ಯಕ ಬ್ರಾಹ್ಮಣ ಅಥವಾ ಗೌಡ ಸಾರಸ್ವತ ಬ್ರಾಹ್ಮಣ(ಜಿಎಸ್ಬಿ)ರ ಸುಪರ್ದಿಯಲ್ಲಿ ಜರುಗುವ ಗೋಕರ್ಣ, ಕುಮಟಾ, ಹೊನ್ನಾವರ, ಅಂಕೋಲಾ ಮತ್ತು ಸುತ್ತಲಿನ ಹಲವು ಹಳ್ಳಿಗಳ ಬಂಡಿಹಬ್ಬ, ತೇರು, ಜಾತ್ರೆ, ಪಲ್ಲಕ್ಕಿ ಉತ್ಸವವೇ ಮುಂತಾದ ಧಾರ್ಮಿಕ ವಿಧಿ-ವಿಧಾನ ಹಾಲಕ್ಕಿಗಳಿಲ್ಲದೆ ನಡೆಯಲಾರದು! ತೇರಿನ ಸಂಭ್ರಮಕ್ಕೆ ವಾರೊಪ್ಪತ್ತು ಇರುವಾಗ ರಥ ಕಟ್ಟುವುದು ಹಾಲಕ್ಕಿಗಳು. ದೇವರು ಸವಾರಿ ಹೊರಡುವ ರಥವನ್ನು ಶೆಡ್‌ನಿಂದ ಹೊರತಂದು ಅಡಿಕೆ ದಬ್ಬೆ ಮತ್ತು ಬಿದಿರಿನಿಂದ ಗೋಪುರಾಕಾರದಲ್ಲಿ ಕಟ್ಟಿ ಬಣ್ಣ-ಬಣ್ಣದ ಪತಾಕೆ, ತಳಿರು ತೋರಣದಿಂದ ಹಾಲಕ್ಕಿಗಳು ಶೃಂಗರಿಸುತ್ತಾರೆ. ಅನುಚಾನಾಗಿ ನಡೆದು ಬಂದಿರುವ ಧಾರ್ಮಿಕ ಪದ್ಧತಿಯಂತೆ ರಥ ರೆಡಿ ಮಾಡಲು ಹಾಲಕ್ಕಿಗಳೇ ಆಗಬೇಕು. ಕರಾವಳಿಯ ಹಲವು ಹಳ್ಳಿ-ಪಟ್ಟಣದ ದೇವಸ್ಥಾನಗಳ ಪಲ್ಲಕ್ಕಿ ಮೆರವಣಿಗೆ ಮುಂದೆ ಮರಕಾಲು ಕಟ್ಟಿಕೊಂಡ ಮತ್ತು ಪೌರಾಣಿಕ ವೇಷ-ಭೂಷಣದ ಹಾಲಕ್ಕಿಗಳಿಲ್ಲದಿದ್ದರೆ ಜನಪದ ಉತ್ಸವ ಕಳೆ ಕಟ್ಟುವುದಿಲ್ಲ!

ದುರಂತವೆಂದರೆ, ಹಬ್ಬ ಮುಗಿಯುತ್ತಿದ್ದಂತೆಯೇ ದೇವರು ವಿಹರಿಸಿದ ‘ಪವಿತ್ರ’ ರಥ ಕಟ್ಟಿದವರು ‘ಮೈಲಿಗೆ’ಯವರಾಗಿ ಬಿಡುತ್ತಾರೆ! ಹೆಂಡದ ಕಾಸಿನ ಆಸೆಗೆ ರಥ ಕಟ್ಟುವ ಕೂಲಿಗೆ ಬರುವ ಗತಿಗೇಡಿ ನಿಕೃಷ್ಟರಾಗಿ-ಮುಟ್ಟಿಸಿ ಕೊಳ್ಳಲಾರದವರಾಗಿ ತಾತ್ಸಾರಕ್ಕೀಡಾಗುತ್ತಾರೆ!! ದೇವರ ಉತ್ಸವದ ಯಜಮಾನಿಕೆಯ ಯಜ್ಞೋಪವೀತದ ಮಂದಿ ಮೇಲಿಂದ ಎತ್ತಿಹಾಕಿದ ‘ಅನ್ನ ಪ್ರಸಾದ’ ಪಡೆದು ಉತ್ಸವಕ್ಕೆ ಮುದ ತಂದವರು ದೂರದ ಗದ್ದೆ, ಗುಡ್ಡದಲ್ಲಿ ಕುಳಿತು ತಿನ್ನಬೇಕು. ಇತ್ತ ಆರಾಮಾಗಿ ದೇವರಿಗೆ ಆರತಿ ಎತ್ತಿ ಘಂಟೆ ತೂಗಿದ ‘ಪೂಜ್ಯರು’ ಮತ್ತವರ ಕುಲಗೋತ್ರದವರು ಪಂಕ್ತಿಯಲ್ಲಿ ಗೌರವಾನ್ವಿತರಾಗಿ ಕುಳಿತು ಹಾಸುಂಡು ತೇಗುತ್ತಾರೆ; ‘ಒಡೆದೀರ’ ಎಂಜಲೆಲೆಯನ್ನು ಹಾಲಕ್ಕಿ ಹೆಂಗಸರು ತಿಪ್ಪೆಗೆಸೆದು, ಮುಸುರೆ ತೆಗೆದು, ಪಾತ್ರೆ ತೊಳೆದು ಶುದ್ಧ ಮಾಬೇಕು. ಇದು ಹಾಕ್ಕಿಗಳ ವರ್ತಮಾನದ ಬದುಕು! 

ಹಾಲಕ್ಕಿಗಳು ಘೋರ ಮೌಡ್ಯದಲ್ಲಿದ್ದಾರೆ; ಅವರಿಗೆ ಅವರ ಮಹತ್ವ ಮತ್ತು ಅನಿವಾರ್ಯತೆಯ ಅರಿವಿಲ್ಲ; ಶೋಷಣೆಗೆ ಒಳಗಾಗುತ್ತಿರುವುದು ಅರ್ಥವಾಗುತ್ತಿಲ್ಲ. ಏತನ್ಮಧ್ಯೆ, ಆದಿ ಚುಂಚನಗಿರಿ ಮಠ ಉತ್ತರ ಕನ್ನಡದ ಹಾಲಕ್ಕಿಗಳು ಮತ್ತು ಗ್ರಾಮ ಒಕ್ಕಲಿಗ(ಪಟಗಾರ)ರು ‘ಒಕ್ಕಲಿಗರು’ ಎಂದು ಹೇಳುತ್ತ ಕಾಣಿಕೆ-ಸೇವೆ ಪಡೆಯುತ್ತಿದೆ. ಒಂದಿಷ್ಟು ಸಭಾಭವನ-ಕಲ್ಯಾಣ ಮಂಟಪಗಳನ್ನು ಮಠ ಕಟ್ಟಿಸಿಕೊಟ್ಟಿದೆಯೇ ವಿನಃ ಹಾಕ್ಕಿಗಳ ಸಮಸ್ಯೆಯ ಆಳಕ್ಕಿಳಿದು ವಿಮೋಚನೆಗೆ ಯೋಚಿಸಿಲ್ಲ. ಆದಿ ಚುಂಚನಗಿರಿ ಶಾಖಾ ಮಠದ ಹಿರಿ-ಕಿರಿ ಸ್ವಾಮಿಗಳು ಪ್ರವಚನ ಕೊಟ್ಟು ಹೋಗುತ್ತಿದ್ದಾರೆ. ಆದರೆ ಈ ಮಠಕ್ಕೆ ಹಾಲಕ್ಕಿಗಳಿಗಿಂತ ಒಂಚೂರು ಮುಂದುವರಿದಿರುವ ಗ್ರಾಮ ಒಕ್ಕಲು-ಪಟಗಾರ ಸಮುದಾಯದ ನಂಟು ಹೆಚ್ಚು; ಮಠ ಹಾಲಕ್ಕಿಗಳನ್ನು ಹೆಂಡ ಮತ್ತು ದಾಸ್ಯದ ಖೆಡ್ಡಾದಿಂದ ಹೊರತುರುವ ಹೊಣೆಗಾರಿಕೆ ಹೊರಬೇಕಾಗಿದೆ ಎಂದು ಹಾಲಕ್ಕಿಗಳ ಬಗ್ಗೆ ಕಾಳಜಿಯಿರುವವರು ಅಭಿಪ್ರಾಯ ಪಡುತ್ತಾರೆ.

ಹಾಲಕ್ಕಿ ಜನಾಂಗ2
ಪ್ರಭುತ್ವದ ವಿರುದ್ಧ ನಡೆಸಿದ ಪ್ರತಿಭಟನೆಗಳು ಕೊಟ್ಟ ಮನವಿಗಳಿಗೆ ಲೆಕ್ಕವೇ ಇಲ್ಲ…

ಆರ್ಥಿಕ-ಶೈಕ್ಷಣಿಕ-ರಾಜಕೀಯ ದಾರಿದ್ರ್ಯ
ಹಲವು ಶೋಷಣೆ ಮತ್ತು ಹೆಂಡದ ಹಾವಳಿಯಿಂದ ಹಾಲಕ್ಕಿ ಕೊಪ್ಪಗಳನ್ನು ಮುಕ್ತಗೊಳಿಸಿ ಮುಖ್ಯವಾಹಿನಿಗೆ ತರುವುದು ವರ್ತಮಾನದ ತುರ್ತು. ಇದಕ್ಕೆ ಶಿಕ್ಷಣ ಮತ್ತು ವ್ಯಸನ ಮುಕ್ತತೆ ಮಂತ್ರವೆ ತಾರಕ. ಒಂದು ಅಂದಾಜಿನಂತೆ ಹಾಲಕ್ಕಿಗಳ ಸಾಕ್ಷರತಾ ಪ್ರಮಾಣ ಶೇ.8-10 ಎನ್ನಲಾಗುತ್ತಿದೆ. ಶಾಲೆಗೆ ಹೋಗುವ ಪ್ರಾಯಕ್ಕೆ ಬರುವಾಗ ಹಾಲಕ್ಕಿ ಹುಡುಗ, ಹುಡುಗಿಯರು ಮೇಲ್ವರ್ಗದವರ ತೋಟ-ಹೊಲ-ಕೊಟ್ಟಿಗೆ ಕೂಲಿ ತರಬೇತಿಯ ಗುರುಕುಲ ಸೇರುತ್ತಾರೆ. ತಂದೆ-ತಾತ-ಮುತ್ತಾತ ಜೀತ ಮಾಡಿದ ಒಡೆದೀರು ಕುಟುಂಬದ ಬದುಕು-ಕೃಷಿ-ಪಶುಸಂಗೋಪನೆ ಸಮೃದ್ಧವಾಗಿಸುವ ಗುಲಾಮಗಿರಿಗೆ ತೊಡಗಿಸಿಕೊಳ್ಳುತ್ತಾರೆ; ಒಡೆಯನ ಉದ್ಧಾರದ ದುಡಿಮೆಯೆ ತಮ್ಮ ಜೀವಿತದ ಪ್ರಮುಖ ದ್ಯೇಯೋದ್ದೇಶ ಎಂಬ ಮುಗ್ಧ ಮನೋಭಾವನೆ ಹಾಲಕ್ಕಿಗಳಲ್ಲಿ ಲಾಗಾಯ್ತಿನಿಂದ ಬೆಳೆದು ಬರುವಂತೆ ಮಾಡಲಾಗಿದೆ. ಒಡೆಯರ ಮನೆಯ ಕಸ-ಮುಸುರೆ, ಕೊಟ್ಟಿಗೆ ಕೆಲಸ ಮಾಡುವ ಹಾಲಕ್ಕಿ ಹೆಂಗಸರ ಸಂಸಾರದ ಹೊಟ್ಟೆ ಆ ಚಾಕರಿಯಿಂದ ತುಂಬುವುದಿಲ್ಲ. ಹಾಲಕ್ಕಿ ಹೆಂಗಸರು ಸಮಯ ಹೊಂದಿಸಿಕೊಂಡು ಕಾಡಿನ ಉತ್ಪನ್ನ ಸಂಗ್ರಹಕ್ಕೆ ಕಾಡು-ಮೇಡು ಅಲೆಯುತ್ತಾರೆ; ಉರುವಲು ಕಟ್ಟಿಗೆ-ವಿವಿಧ ಹಣ್ಣು-ಹೂವು ನಾಡಿಗೆ ತಂದು ಮಾರುತ್ತಾರೆ. ಗಂಡಸರು ನಸುಕಲ್ಲೇ ಒಡೆಯರ ಜಮೀನಿನಲ್ಲಿ ಮೈಮುರಿದು ಗೇಯಲು ಶುರುಮಾಡುತ್ತಾರೆ. ಸಂಜೆಯಾಗುತ್ತಲೆ ಸಿಗುವ ಕೂಲಿ ಕಾಸಿಂದ ಸಾರಾಯಿ ಕುಡಿದು ತೂರಾಡುತ್ತ ಗುಡಿಸಲ ಹೊಳ್ಳಿ(ಜಗುಲಿ) ಸೇರಿಕೊಳ್ಳುತ್ತಾರೆ. ಅಮಲಿನಲ್ಲಿ ಉಂಡರೆ ಉಂಡರು; ಇಲ್ಲದಿದ್ದರೆ ಇಲ್ಲ. ಹೆಂಗಸರ ಗೋಳು ಹೇಳತೀರದು.

ಮರುದಿನ ತಂಗಳನ್ನ ತಿಂದು ಉಳ್ಳವರ ಮನೆ-ಜಮೀನಿಗೆ ಹೋದರೆ ಯಥಾಪ್ರಕಾರ ಜೀತ-ಹೆಂಡ-ಹೊಳ್ಳಿ-ಕೊಪ್ಪದಲ್ಲಿ ನಿತ್ಯ ನರಕ. ಒಂದು ಕಾಲದಲ್ಲಿ ಕಾಯಕ ಶ್ರದ್ಧೆ ಮತ್ತು ಸಾಂಸ್ಕೃತಿಕ ಹಿರಿಮೆ-ಗರಿಮೆಗೆ ಹೆಸರಾಗಿದ್ದ ಹಾಲಕ್ಕಿ ಸೀಮೆಗಳ ಅಧಃಪತನಕ್ಕೆ ಈ ನಿತ್ಯಕರ್ಮ ಮೂಲಕಾರಣ. ಹಾಲಕ್ಕಿಗಳ ಕೊಪ್ಪಗಳಲ್ಲಿ ಸಾರಾಯಿ ಚಟದಿಂದ ಅಪಾರ ಸಾವು-ನೋವು-ಕಷ್ಟ-ನಷ್ಟ ಆಗುತ್ತಿದೆ. ಹಾಲಕ್ಕಿ ಕೊಪ್ಪಗಳಲ್ಲಿ ವ್ಯಸನದಿಂದಾಗುತ್ತಿರುವ ಅನಾಹುತ ಕಂಡು ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಹೆಂಡದ ವಿರುದ್ಧ ಬಂಡೆದ್ದು ಹೋರಾಟ ಕಟ್ಟಿದ್ದರು. ಹಾಲಕ್ಕಿ ಹುಡುಗ-ಹುಡುಗಿಯರು ವಿದ್ಯೆ ಕಲಿಯಬೇಕು; ವ್ಯಸನದಿಂದ ದೂರಾಗಬೇಕೆಂದು ಹಂಬಲಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ಹಾಲಕ್ಕಿ ಜನಾಂಗದ ಹುಡುಗರು ಸಾರಾಯಿ ಸುಳಿಗೆ ಸಿಲುಕುತ್ತಿದ್ದಾರೆ. ಸಾರಾಯಿ ಸಹವಾಸದಿಂದ ಹಾಲಕ್ಕಿ ಕೊಪ್ಪಗಳಲ್ಲಿ ಆಗುತ್ತಿರುವಷ್ಟು ಸಾವು-ನೋವು ಜಿಲ್ಲೆಯ ಬೇರೆ ಸಮುದಾಯದಲ್ಲಿಲ್ಲವೆಂದು ಸಾಮಾಜಿಕ ಸಮೀಕ್ಷೆಗಳು ಹೇಳುತ್ತವೆ. ಆಳುವವರ ಅಸಡ್ಡೆ ಮತ್ತು ಹೆಂಡದ ಗೀಳು ಹಾಲಕ್ಕಿ ಜನಾಂಗಕ್ಕೆ ಕೇಡಾಗಿ ಪರಿಣಮಿಸಿದೆ. ಒಂದೆಡೆ ವ್ಯಸ್ಥಿತ ಶೋಷಣೆ-ಆಳುವವರ ದ್ರೋಹ; ಮತ್ತೊಂದೆಡೆ ಆಧುನಿಕತೆ-ವ್ಯಸನಗಳ ಸೆಳೆತ. ನಡುವೆ ಸಿಲುಕಿರುವ ಈ ನತದೃಷ್ಟ ಜನಾಂಗದ ಯುವ ಸಮೂಹ ದಿಕ್ಕು ತಪ್ಪಿದೆ. ಬದುಕಿನ ಗೊಂದಲದಲ್ಲಿರುವ ತರುಣರನ್ನು ಹಿಂದುತ್ವದ ಕಾಲಾಳಾಗಿಸಿ ಕೊಳ್ಳುವ ಹುನ್ನಾರ ನಾಜೂಕಾಗಿ ನಡೆಯುತ್ತಿದೆ.

ಹಾಲಕ್ಕಿಗಳು ಸಾಮಾಜಿಕವಾಗಿ ತುಳಿತಕ್ಕೊಳ ಪಟ್ಟವರು; ರಾಜಕೀಯವಾಗಿ ಕೇವಲ ಓಟ್ ಬ್ಯಾಂಕ್; ಆರ್ಥಿಕವಾಗಿ ನಿರ್ಗತಿಕರು. ದುಡಿಯಬೇಕು-ತಿನ್ನಬೇಕು. ಬಹುತೇಕರು ಭೂರಹಿತರು. ಜವಾನ, ಗುಮಾಸ್ತ, ಮಾಸ್ತರ್ ಅಂತಹ ಸಣ್ಣ ಮಟ್ಟದ ಸರಕಾರಿ ಚಾಕರಿಯಲ್ಲಿ ಬೆರಳೆಣಿಕೆಯಷ್ಟು ಮಂದಿಯಿದ್ದಾರೆ. ಅಲ್ಲೊಬ್ಬ, ಇಲ್ಲೊಬ್ಬಳು ಸ್ನಾತಕೋತ್ತರ ಪದವೀಧರರು ಸಿಗಬಹುದು. ಕೆಲವೇ ಕೆಲವು ಹುಡುಗಿಯರು ನರ್ಸ್, ಶಿಕ್ಷಕಿಯಾಗಿದಾರೆ. ಒಂದೆರಡು ಬಾರಿ ಹಾಲಕ್ಕಿಗಳಿಗೆ ಶಾಸಕರಾಗುವ ಅವಕಾಶವಾಗಿದ್ದು ಬಿಟ್ಟರೆ ರಾಜಕೀಯ ಪ್ರಾತಿನಿದ್ಯ ಸಿಕ್ಕಿದ್ದು ಅಷ್ಟಕ್ಕಷ್ಟೇ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ  ದುರ್ಬಲಾತಿ ದುರ್ಬಲರಾದ ಹಾಲಕ್ಕಿಗಳಿಗೆ ರಾಜಕೀಯ ಬಲ ಹೇಗೆ ಬಂದೀತು? ಪ್ರಮುಖ ಪಕ್ಷಗಳ ಸ್ಥಳಿಯ ಮೇಲ್ವರ್ಗದ ಸೂತ್ರಧಾರರು ಜಾತಿ ಮತ್ತು ಮೀಸಲಾತಿ ಕ್ಷೇತ್ರಗಳ ಸಮೀಕರಣ ಸರಿದೂಗಿಸಲು ಹಾಲಕ್ಕಿಗಳಿಗೆ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್, ಜಿಲ್ಲಾ ಪಂಚಾಯತ್ ಟಿಕೆಟ್ ಕೊಟ್ಟು ಓಲೈಸುತ್ತಾರೆ. ವಿಧಾನ ಸಭೆ ಮತ್ತು ಲೋಕಸಭೆ ಚುನಾವಣೆ ಗೆಲ್ಲುವ ಲೆಕ್ಕಾಚಾರವಿದು. ಹಾಗಂತ ಯಾವ ಪಕ್ಷದವರೂ ಈ ಬುಡಕಟ್ಟು ಸಮುದಾಯದವರನ್ನು ಅಸೆಂಬ್ಲಿ, ಪಾರ್ಲಿಮೆಂಟಿಗೆ ಕಳಿಸಲು ಕನಸಲ್ಲೂ ಯೋಚಿಸುವುದಿಲ್ಲ.

ಹಾಲಕ್ಕಿ ಸಮುದಾಯದಲ್ಲಿ ಹಾಸುಹೊಕ್ಕಾಗಿದ್ದ ದಿನಕರ ದೇಸಾಯಿ 1960ರ ದಶಕದಲ್ಲಿ ಹೆಸರುವಾಸಿ ನಾಟಿ ವೈದ್ಯ ಬೊಮ್ಮಗೌಡರನ್ನು ಅಸೆಂಬ್ಲಿ ಚುನಾವಣೆ ಸ್ಪರ್ಧೆಗಿಳಿಸಿದ್ದರು. ಗೌಡರು ಗೆಲ್ಲಲಾಗಿಲ್ಲವಾದರೂ ದೇಸಾಯರು ನೆಲ ಮೂಲದ ಹಾಲಕ್ಕಿಗಳ ರಾಜಕೀಯ ಪ್ರಜ್ಞೆ-ಪ್ರಾತಿನಿಧ್ಯಕ್ಕೆ ಪ್ರಯತ್ನಿಸಿದ್ದರೆಂಬುದು ಗಮನಾರ್ಹ. ಮಾಜಿ ಸಿಎಂಗಳಾದ ರಾಮಕೃಷ್ಣ ಹೆಗಡೆ ಮತ್ತು ಬಂಗಾರಪ್ಪ ಮಾತ್ರ ಹಾಲಕ್ಕಿಗಳಿಗೆ ಶಾಸಕರಾಗುವ ಭಾಗ್ಯ ಕಲ್ಪಿಸಿದ್ದರು. ರಾಮಕೃಷ್ಣ ಹೆಗಡೆ ಕಾಲದಲ್ಲಿ ಹೈಸ್ಕೂಲ್ ಮಾಸ್ತರ್ ಆಗಿದ್ದ ಎನ್.ಎಚ್.ಗೌಡ(ಜನತಾ ಪಕ್ಷ) ಮತ್ತು ಬಂಗಾರಪ್ಪ ಪರ್ವದಲ್ಲಿ ಪದವೀಧರರಾಗಿದ್ದ ಕೆ.ಎಚ್.ಗೌಡ(ಕಾಂಗ್ರೆಸ್) ಕುಮಟಾದ ಶಾಸಕರಾಗಿದ್ದು ಬಿಟ್ಟರೆ ಆ ನಂತರ ಯಾವ ಪಕ್ಷದವರೂ ಹಾಲಕ್ಕಿಗಳತ್ತ ಕಣ್ಣೆತ್ತಿಯೂ ನೋಡಲಿಲ್ಲ.

ಹಾಲಕ್ಕಿ ಜನಾಂಗ

ಕಾಂಗ್ರೆಸ್, ಬಿಜೆಪಿಯಂಥ ದೊಡ್ಡ ಪಕ್ಷದ ಟಿಕೆಟ್ ಹಂಚುವವರಿಗೆ ಮತ್ತು ಆ ಪಾರ್ಟಿಗಳ  ಹುರಿಯಾಳುಗಳಾಗುವವರ ತಲೆಯಲ್ಲಿ ಹಣ-ಹೆಂಡ ಹಂಚಿ ಹಾಲಕ್ಕಿಗಳ ಮತ ದಂಡಿಯಾಗಿ ಬಾಚಬಹುದೆಂಬ ಯೋಚನೆ ಇರುತ್ತದೆ. ಚುನಾವಣೆ ಹಿಂದಿನ ದಿನದ ಕತ್ತಲ ರಾತ್ರಿಯಲ್ಲಿ ಹಾಲಕ್ಕಿ ಕೊಪ್ಪಗಳಲ್ಲಿ ಹೆಂಡದ ಹೊಳೆಯೇ  ಹರಿಯುತ್ತದೆ ಎಂಬ ಮಾತು ಜಿಲ್ಲೆಯ ರಾಜಕೀಯ ವಲಯದಲ್ಲಿದೆ. ಈ ಧರ್ಮಕಾರಣದ ದುರಿತ ಕಾಲದಲ್ಲಿ ಆದಿ ಚುಂಚನಗಿರಿ ಪೀಠಧಿಪತಿಗಳು ‘ತ್ರಿಕರಣ ಶುದ್ಧಿ’ಯಿಂದ ಪ್ರಯತ್ನಿಸಿದರೆ ಹಾಲಕ್ಕಿಗಳು ಬಹು ಸಂಖ್ಯಾತರಾಗಿರುವ ಕಾರವಾರ-ಅಂಕೋಲಾ, ಕುಮಟ-ಹೊನ್ನಾವರ ಕ್ಷೇತ್ರದಲ್ಲಿ ಶಾಸಕ/ಕಿ ಆಯ್ಕೆ ಮಾಡಿಕೊಳ್ಳುವುದಾಗಲಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹಾಲಕ್ಕಿಯೊಬ್ಬ ಸಂಸದನಾಗುವುದಾಗಲಿ ಕಷ್ಟವಲ್ಲ ಎಂದು ಆ ಸಮುದಾಯದ ಪ್ರಜ್ಞಾವಂತರು ಹೇಳುತ್ತಾರೆ. ಹಾಲಕ್ಕಿ ಗೌಡರು ತಮ್ಮ ‘ಗೌಡ ಪರಂಪರೆ’ಯವರು ಎನ್ನುವ ಆದಿಚುಂಚನಗಿರಿ ಸ್ವಾಮಿ ಪರಿವಾರ ಅದ್ಯಾಕೋ ಹಾಲಕ್ಕಿ ಗೌಡರ ಹಾಡು-ಪಾಡುಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ.   

ಶಿಕ್ಷಿತ, ತಿಳಿವಳಿಕೆಯ ಅಥವಾ ಆರ್ಥಿಕವಾಗಿ ಚೇತರಿಸಿಕೊಂಡಿರುವ ಹಾಲಕ್ಕಿಗಳಿಗೆ ದಾಸ್ಯ ನೆಚ್ಚಿಕೊಂಡಿರುವ ಸ್ವಸಮುದಾಯದವರ ವಿಶ್ವಾಸ ಗಳಿಸಿ, ಸಂಘಟನೆ ಮಾಡಿ ಗಾಡಾಂಧಕಾರದಿಂದ ಹೊರತರಬೇಕೆಂಬ ತುಡಿತವಿಲ್ಲ. ಮೋಸ-ವಂಚನೆ-ದ್ರೋಹ ಅರಿಯದ ಹಾಲಕ್ಕಿಗಳಿಗೂ ಸ್ವಜಾತಿ ವಿಚಾರವಂತರ ಮಾತಿಗಿಂತ ನಯವಂಚನೆಯ ಒಡೆದೀರ ಮಾತೇ ಆಪ್ಯಾಯಮಾನವಾಗುವ ವಿಪರ್ಯಾಸವೂ ಇದೆ. ಈ ಸಿಕ್ಕುಗಳನ್ನೆಲ್ಲ ತಾಳ್ಮೆಯಿಂದ ಬಿಡಿಸಿ ಹಾಲಕ್ಕಿಗಳಿಗೆ ದಾಸ್ಯ ಮತ್ತು ಹೆಂಡದ ಅನಾಹುತಗಳ ಬಗ್ಗೆ ತಿಳಿವಳಿಕೆ ಕೊಡುವ ನಿಜ ನಾಯಕತ್ವ ಬೇಕಾಗಿದೆ. ಬೆಳಂಬರದ ಪ್ರಸಿದ್ಧ ನಾಟಿ ವೈದ್ಯ ಹನುಮಂತ ಗೌಡರ ತಂಡ ತಮ್ಮ ಇತಿ-ಮಿತಿಯಲ್ಲಿ ಸಂಘಟನೆ ಕಟ್ಟಿಕೊಂಡು ತಮ್ಮ ಕುಲಕೋಟಿಗೆ ಎಸ್ಟಿ(ಪರಿಶಿಷ್ಟ ಪಂಗಡ) ಮೀಸಲಾತಿ ಕೊಡಿಸಲು ಹಲವು ವರ್ಷದಿಂದ ಪ್ರಯತ್ನಿಸುತ್ತಿದೆ. ಆದರೆ ಈ ಹಾಲಕ್ಕಿಗಳ ಮುಗ್ಧತೆ ಬಳಸಿಕೊಂಡು ಆಳುವ ಮಂದಿ ದಾರಿತಪ್ಪಿಸುತ್ತಲೇ ಇದ್ದಾರೆ!

ಇದನ್ನು ಓದಿದ್ದೀರಾ?: ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ ಮತ್ತು IRB ಕಂಪನಿ ಕಾಟ!

ಎಸ್ಟಿ ಮೀಸಲಾತಿ ಮೋಸ!
ಬುಡಕಟ್ಟು ಜನಾಂಗದ ಹಾಲಕ್ಕಿ ಒಕ್ಕಲಿಗರಿಗಾದ ಮೋಸ-ವಂಚನೆ-ಅನ್ಯಾಯದ ಕತೆ ಒಂದೆರಡಲ್ಲ. ಹಿಂದುಳಿದ ವರ್ಗದ ಬೈಬಲ್ ಎನ್ನಲಾಗುತ್ತಿರುವ ಹಾವನೂರು ವರದಿಯಿಂದ ಮೊದಲ್ಗೊಂಡು ಯಾವ ಹಿಂದುಳಿದ ವರ್ಗದ ಅಧ್ಯಯನ ವರದಿಯಲ್ಲೂ ಈ ಗುಡ್ಡಗಾಡು ಜನಜಾತಿಗೆ ನ್ಯಾಯ ಸಿಕ್ಕಿಲ್ಲ. ಹಾವನೂರು ವರದಿಯಲ್ಲೇನಾದರೂ ಹಾಲಕ್ಕಿಗಳಿಗೆ ಪರಿಶಿಷ್ಟ ಪಂಗಡ ಮೀಸಲಾತಿ ದೊರೆತಿದ್ದರೆ ಸದ್ರಿ ಶುದ್ಧ ಬುಡಕಟ್ಟು ಚಹರೆಯ ಸಮುದಾಯದ ದಿಕ್ಕು-ದೆಸೆಯೇ ಬದಲಾಗಿಬಿಡುತಿತ್ತು ಎಂದು ಹಾಲಕ್ಕಿ ಕುಲದ ಕರಾರುವಾಕ್ಕಾದ ಅಧ್ಯಯನ ಮಾಡಿದವರೆಲ್ಲ ಹೇಳುತ್ತಾರೆ. ಪ್ರವರ್ಗ-1ರಲ್ಲಿರುವ ದುರ್ಬಲ ಹಾಲಕ್ಕಿಗಳು ತಮಗಿಂತ ಹತ್ತಾರು ಪಟ್ಟು ಶಕ್ತಿಶಾಲಿಗಳೊಂದಿಗೆ ಸ್ಪರ್ಧೆ ಮಾಡಬೇಕಾಗಿದೆ. ಈ ಲೋಪ ಅರಿತು ಕಾಲಾಂತರದಲ್ಲಾದರೂ ಆಳುವವರು ಮತ್ತು ಉತ್ತರ ಕನ್ನಡದಲ್ಲಾದ ಶಾಸಕ-ಸಂಸದ-ಸಚಿವರು ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿ ನ್ಯಾಯ ಒದಗಿಸುವ ಕರ್ತವ್ಯ ನಿಭಾಯಿಸಬೇಕಿತ್ತು.

ಜಿಲ್ಲೆಯ ಶಾಸಕ-ಸಂಸದ-ಮಂತ್ರಿಗಳ್ಯಾರೆ ಆಗಲಿ, ಅವರೆಲ್ಲ ತಾವು ಹಾಲಕ್ಕಿ ಪರವೆಂದು ಪ್ರಹಸನ ಮಾಡುತ್ತಾರೆಯೇ ಹೊರತು ಆ ಧ್ವನಿಯಿಲ್ಲದ ಸಮಾಜಕ್ಕೆ ಎಸ್ಟಿ ಮೀಸಲಾತಿಗಾಗಿ ಒಗ್ಗಟ್ಟಾಗಿ ಹಠ ಹಿಡಿಯುತ್ತಿಲ್ಲ. ಚುನಾವಣೆಗಳನ್ನು ಗೆಲ್ಲಲು ರಾಜಕಾರಣಿಗಳು ಹಾಲಕ್ಕಿಗಳ ಮೂಗಿಗೆ ತುಪ್ಪ ಸವರುತ್ತಾರಷ್ಟೆ; ಹಾಲಕ್ಕಿಗಳ ನೋವು-ನಲಿವು ತಿಳಿದ ಪ್ರಗತಿಪರರು ಮತ್ತು ಆ ಜನಾಂಗದ ಪ್ರಜ್ಞಾವಂತರು ಎಸ್ಟಿ ಮೀಸಲಾತಿಗೆ ಹಕ್ಕೊತ್ತಾಯ ಮಾಡುತ್ತಿದ್ದರೂ ಪ್ರಯೋಜನ ಆಗುತ್ತಿಲ್ಲ. ಸರಿಸುಮಾರು ಮುವ್ವತ್ತೈದು ವರ್ಷಗಳಿಂದ ಹಾಲಕ್ಕಿಗಳು ಎಸ್ಟಿ ಸೌಲತ್ತಿಗಾಗಿ ಹೋರಾಡುತ್ತಿದ್ದಾರೆ. ಹಾಲಕ್ಕಿಗಳ ಸೀಮೆ-ಸೀಮೆಗಳಿಂದ ಜಿಲ್ಲಾ ಕೇಂದ್ರ ಕಾರವಾರ ಮತ್ತು ರಾಜ್ಯಧಾನಿ ಹಲವು ಸಲ ಬೆಂಗಳೂರು ಚಲೋಗಳಾಗಿದೆ. ಧರಣಿ-ಸತ್ಯಾಗ್ರಹ-ಪ್ರತಿಭಟನೆಗಳಿಗಂತೂ ಲೆಕ್ಕವೇ ಇಲ್ಲ; ದಿಲ್ಲಿಗೂ ಹಲವು ಸಲ ನಿಯೋಗ ಹೋಗಿದ್ದಾಗಿದೆ. ಅಧಿಕಾರಸ್ಥರು ಬದಲಾದಂತೆಲ್ಲ ಹಾಲಕ್ಕಿ ತಂಡಗಳು ಕಂಡುಬಂದು ಸುಸ್ತಾಗಿ ಹೋಗಿವೆ.

ಹಾಲಕ್ಕಿಗಳ ಮೀಸಲಾತಿ ಹೋರಾಟಕ್ಕೆ 15 ವರ್ಷ ತುಂಬುತ್ತಿರುವ ಹೊತ್ತಿಗೆ ಹಾಲಕ್ಕಿಗಳ ಓಟಿನ ಅನಿವಾರ್ಯತೆಯಲ್ಲಿರುವ ಜಿಲ್ಲೆಯ ರಾಜಕಾರಣಿಗಳ ಮತ್ತು ರಾಜ್ಯ ಸರಕಾರದ ಪ್ರಭೃತಿಗಳ ಕಣ್ಣು ಅರೆ-ತೆರೆಯಿತು! 2008ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಯದವರಿಂದ ‘ಹಾಲಕ್ಕಿಗಳ ಕುಲ ಶಾಸ್ತ್ರೀಯ ಅಧ್ಯಯನ’ ವರದಿ ಸಿದ್ಧಪಡಿಸಿ ಕೊಡುವಂತೆ ಕೇಳಲಾಯಿತು. ಆ ವರದಿಯಲ್ಲಿ ‘ಹಾಲಕ್ಕಿ ಸಮುದಾಯಕ್ಕೆ ಬುಡಕಟ್ಟು ಸಂಸ್ಕೃತಿಯ ಸಕಲ ಲಕ್ಷಣಗಳಿವೆ; ಪರಿಶಿಷ್ಟ ಪಂಗಡ ಮೀಸಲಾತಿ ಪಡೆಯಲು ಅರ್ಹವಾಗಿದೆ’ ಎಂದು ಸ್ಪಷ್ಟವಾಗಿ ಬರೆಯಲಾಗಿತ್ತು.

ಈ ವರದಿಯ ಆಧಾರದಲ್ಲಿ ಆಗಸ್ಟ್ 2010ರ ಸಚಿವ ಸಂಪುಟ ಸಭೆಯಲ್ಲಿ ಹಾಲಕ್ಕಿ ಒಕ್ಕಲು ಸಮುದಾಯವನ್ನು ಪರಿಶಿಷ್ಟ ಪಂಗಡ ಎಂದು ಪರಿಗಣಿಸುವಂತೆ ನಿರ್ಣಯ ಕೈಗೊಂಡು ಶೀಫಾರಸ್ಸನ್ನು ಕೇಂದ್ರ ಸರಕಾರಕ್ಕೆ ಕಳಿಸಲಾಯಿತು. ಹಾಲಕ್ಕಿಗಳ ಬಹುದಿನದ ಬೇಡಿಕೆಯ ಹೋರಾಟದ ಹಾದಿಯಲ್ಲಿ ಇದೊಂದು ಮಹತ್ವದ ಮೈಲುಗಲ್ಲಾಗಿತ್ತು. ಆದರೆ ಎರಡು ವರ್ಷ ಕಡತ ಕೇಂದ್ರದ  ಬುಡಕಟ್ಟು ಸಮುದಾಯ ಅಭಿವೃದ್ದಿ ಇಲಾಖೆಯಲ್ಲಿ ಧೂಳು ತಿಂದಿತು. ಹಾಲಕ್ಕಿ ಹೋರಾಟಗಾರರು ಕಡತದ ಬೆನ್ನು ಬಿದ್ದಾಗ ಎರಡು ತಾಂತ್ರಿಕ ದೋಷಗಳನ್ನು ಸರಿಪಡಿಸಿ ಕಳಿಸುವಂತೆ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ವಾಪಸ್ ಕಳಿಸಿತು. 2012ರಲ್ಲಿ ರಾಜ್ಯದ ಸರಕಾರ ಸರಿಪಡಿಸಿದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳಿಸಿತು. ಮರುವರ್ಷ (1-2-2018) ಕೇಂದ್ರದ ಬಿಜೆಪಿ ಸರಕಾರ ‘ಹಾಲಕ್ಕಿಗಳಿಗೆ ಪರಿಶಿಷ್ಟ ಪಂಗಡ ಮೀಸಲಾತಿ ಅರ್ಹತೆಯಿಲ್ಲ’ ಎಂಬ ಸುದೀರ್ಘ ಅಡಿ ಟಿಪ್ಪಣಿಯೊಂದಿಗೆ ತಿರಸ್ಕರಿಸಿಬಿಟ್ಟಿತು!

ಹಾಲಕ್ಕಿ ಜನಾಂಗ4
ಹಾಲಕ್ಕಿಗಳಿಗೆ ನಿರಂತರ ಮೋಸ ಮಾಡಿದ ನಾಯಕರು- ಮಾರ್ಗರೆಟ್ ಆಳ್ವ, ದೇಶಪಾಂಡೆ, ಅನಂತಕುಮಾರ್ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ

ಉತ್ತರ ಕನ್ನಡದ ಸವರ್ಣೀಯ ಪಟ್ಟಭದ್ರ ರಾಜಕೀಯ ಪಟುಗಳ ಒಳ ಆಶಯವೂ ಇದೇ ಆಗಿತ್ತು. ಹಾಗಾಗಿ ಕೇಂದ್ರ ಸರಕಾರ ಮೀಸಲಾತಿ ಪ್ರಸ್ತಾವನೆ ಒಪ್ಪದಿರುವುದನ್ನು ಅಧಿಕಾರಸ್ಥರು ಮುಚ್ಚಿಟ್ಟು ಹಾಲಕ್ಕಿಗಳಿಗೆ ವಂಚಿಸುತ್ತ ಬಂದರು; ಎಸ್ಟಿ ಮೀಸಲು ಸೌಲಭ್ಯ ಇಂದು ಸಿಗುತ್ತದೆ, ನಾಳೆ ಗ್ಯಾರಂಟಿ ದಕ್ಕುತ್ತದೆ ಎಂದು ಮೋಸಮಾಡಿ ರಾಜಕೀಯ ಲಾಭ ಪಡೆದುಕೊಂಡರು. ಎಲ್ಲ ಪಕ್ಷದ ಪ್ರಮುಖರು ಹಾಲಕ್ಕಿಗಳ ಮರುಳು ಮಾಡಲು ಮೀಸಲಾತಿ ಕೊಡಿಸುವ ಆಸೆ ತೋರಿಸುತ್ತಲೇ ಇದ್ದಾರೆ. ಕೇಂದ್ರ ಮಂತ್ರಿ ಕುಮಾರಸ್ವಾಮಿ ಹಾಲಕ್ಕಿಗಳು ತಮ್ಮ ಹಳೆ ಮೈಸೂರು ಭಾಗದ ಗೌಡ ಗೋತ್ರದವರೆಂದು ಹೇಳುತ್ತ ಮೀಸಲಾತಿ ಕೊಡಿಸಿಯೇ ಸಿದ್ಧವೆಂದು ವೀರಾವೇಷದ ಭಾಷಣ ಬಿಗಿದು ದಶಕವೇ ಉರುಳಿದೆ.

ಸುಮಾರು ಎರಡೂವರೆ ದಶಕ ಸಂಸದನಾಗಿದ್ದ ಬಿಜೆಪಿಯ ಅನಂತ್ ಕುಮಾರ್ ಹೆಗಡೆ ತನಗೆ ಸಾರಾಸಗಟಾಗಿ ಮತಹಾಕಿ ಗೆಲ್ಲಿಸುತ್ತಿದ್ದ ಹಾಕ್ಕಿಗಳ ಋಣ ತೀರಿಸುವ ಸಣ್ಣ ಪ್ರಯತ್ನವೂ ಮಾಡಲಿಲ್ಲ; ಕೊನೆಯ ಸಂಸದಗಿರಿ ಅವಧಿಯಲ್ಲಿ ಕೇಂದ್ರದ ಬುಡಕಟ್ಟು ಅಭಿವೃದ್ದಿ ಇಲಾಖೆಯ ಮಂತ್ರಿಯನ್ನು ಭೇಟಿ ಮಾಡಿಸುತ್ತೇನೆಂದು ಸುಳ್ಳು ಹೇಳುತ್ತಲೇ ಕಾಲ ಕಳೆದು ಮಾಜಿಯಾಗಿ ಹೋದರು; ಹಾಲಕ್ಕಿಗಳ ಪರಿಶಿಷ್ಟ ಪಂಗಡ ಮೀಸಲಾತಿ ಪ್ರಸ್ತಾವನೆ ಕಡತ ಕೇಂದ್ರ ಸರಕಾರದ ಮುಂದಿದ್ದಾಗ ಸಂಘ ಪರಿವಾರದ ಪ್ರಭಾವಿ ಅನಂತ್ ಹೆಗಡೆ ಆಳುವ ಪಕ್ಷ ಎಂಪಿಯಾಗಿದ್ದರು. ಹೆಗಡೆ ಮನಸ್ಸು ಮಾಡಿದ್ದರೆ ಸುಲಭವಾಗಿ ಕೆಲಸವಾಗುತಿತ್ತು. ಆದರದು ಹೆಗಡೆಗೆ ಬೇಡದ ಉಸಾಬರಿಯಾಗಿತ್ತು ಎಂದು ಹಾಲಕ್ಕಿ ಹೋರಾಟಗಾರರು ಅಲವತ್ತುಕೊಳ್ಳುತ್ತಾರೆ.

ಜಿಲ್ಲೆಯ ರಾಜಕಾರಣದ ಭೀಷ್ಮಾಚಾರ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಈಗಿತ್ತಲಾಗಿ ತನ್ನ ಕ್ಷೇತ್ರ(ಹಳಿಯಾಳ-ಜೊಯಿಡಾ)ದ ಕುಣಬಿ ಜನಾಂಗದ ಜತೆ ಹಾಲಕ್ಕಿಗಳನ್ನೂ ಎಸ್ಟಿ ಮೀಸಲು ಪಟ್ಟಿಗೆ ಸೇರಿಸುವ ಪ್ರಯತ್ನದಲ್ಲಿದ್ದೇನೆಂದು ಹೇಳುತ್ತಿದ್ದಾರೆ. ಆದರೆ ಸುದೀರ್ಘ ಕಾಲ ಮಂತ್ರಿಯಾಗಿ ಜಿಲ್ಲೆಯನ್ನಾಳಿದ ದೇಶಪಾಂಡೆ ಆಟ ಅಷ್ಟು ಸಲಭಕ್ಕೆ ಅರ್ಥವಾಗುವಂತಹದ್ದಲ್ಲ; ಹಿಂದೆಲ್ಲ ಪ್ರಭಾವಿ ಮಂತ್ರಿಯಾಗಿದ್ದಾಗ ಮೀಸಲಾತಿ ಕೊಡಿಸಲು ದೇಶಪಾಂಡೆಯಿಂದ ಏಕಾಗಲಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ಕಳೆದ ಅಸೆಂಬ್ಲಿ ಚುನಾವಣೆ ಹತ್ತಿರತ್ತಿರ ಬಂದಾಗ ಬಿಜೆಪಿ ಶಾಸಕರಾಗಿದ್ದ ಕುಮಟಾದ ದಿನಕರ ಶೆಟ್ಟಿ ಮತ್ತು ಕಾರವಾರದ ರೂಪಾಲಿ ನಾಯ್ಕ್ ಪೈಪೋಟಿಗೆ ಬಿದ್ದಂತೆ ಹಾಲಕ್ಕಿಗಳ ಮೀಸಲಾತಿ ಜರೂರತ್ತಿನ ಕುರಿತು ಮಾತಾಡುತ್ತಿದ್ದರು. ಈ  ಎರಡೂ ವಿಧಾನ ಸಭಾ ಕ್ಷೇತ್ರದಲ್ಲಿ ಹಾಲಕ್ಕಿ ಮತದಾರರೇ ನಿರ್ಣಾಯಕರಾಗಿದ್ದೇ ಬಿಜೆಪಿಯ ರೂಪಾಲಿ ಮತ್ತು ದಿನಕರರ ಕಾಳಜಿಗೆ ಕಾರಣವಾಗಿದ್ದು ಬಹಿರಂಗ ರಹಸ್ಯ. ಶಾಸಕತ್ವದ ಕೊನೆಯ ದಿನಗಳಲ್ಲಿ ಹಾಲಕ್ಕಿಗಳ ಎಸ್ಟಿ ಮೀಸಲಾತಿ ಬಗ್ಗೆ ಅತ್ಯುತ್ಸಾಹ ತೋರಿಸಿ ಸುದ್ದಿ ಮೇಲೆ ಸುದ್ದಿ ಮಾಡುತ್ತಿದ್ದ ರೂಪಾಲಿ ನಾಯ್ಕ್ ಈಗ ಸುಮ್ಮನಾಗಿದ್ದಾರೆ; ಶಾಸಕ ದಿನಕರ ಶೆಟ್ಟರಿಗೆ ಹಾಲಕ್ಕಿಗಳ ಮೀಸಲಾತಿ ಕತೆ ಮರೆತು ಹೋಗಿದೆ.

ಇದನ್ನು ಓದಿದ್ದೀರಾ?: ಬೇಡ್ತಿ ನದಿ ತಿರುವು ಯೋಜನೆಯೂ, ಬೊಮ್ಮಾಯಿ-ಕಾಗೇರಿ ಪೀಕಲಾಟವೂ

ಈ ಮಧ್ಯೆ ತಮಾಷೆಯೊಂದು ನಡೆದಿದೆ. ಕುಮಟಾ ಶಾಸಕ ದಿನಕರ ಶೆಟ್ಟಿ ಹಾಲಕ್ಕಿ ಮೀಸಲಾತಿಗೆ ಸಂಬಂಧಿಸಿದಂತೆ ವಿಧಾ ಸಭಾ ಅಧಿವೇಶನದಲ್ಲಿ(16-2-2022) ಚುಕ್ಕೆ ಗುರುತಿನ ಪ್ರಶ್ನೆ(319) ಕೇಳಿದ್ದಾರೆ. ಅಂದಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮಂತ್ರಿ ಶ್ರೀರಾಮಲು-ಕೇಂದ್ರ ಸರಕಾರಕ್ಕೆ 8-2-2017ರಂದು ಕಳಿಸಿದ ಹಾಲಕ್ಕಿಗಳ ಮೀಸಲಾತಿ ಪ್ರಸ್ತಾವನೆ ಬಾಕಿಯಿದೆ- ಎಂದು ಹಸೀ ಸುಳ್ಳು ಉತ್ತರ ಕೊಟ್ಟಿದ್ದಾರೆ. ಸದ್ರಿ ಸಬೂಬಿಗೆ ಶಾಸಕ ಶೆಟ್ಟಿ ಸಂತೃಪ್ತರಾಗಿದ್ದಾರೆ. ಶೆಟ್ಟರಿಗೆ ಹಾಲಕ್ಕಿಗಳಿಗೆ ಎಸ್ಟಿ ಮೀಸಲಾತಿ ದೊರಕಿಸಿ ಕೊಡುವುದಕ್ಕಿಂತ ಅಸೆಂಬ್ಲಿಯಲ್ಲಿ ಪ್ರಶ್ನೆ ಕೇಳಿ ಸ್ವಕ್ಷೇತ್ರದಲ್ಲಿನ ಹಾಲಕ್ಕಿಗಳನ್ನು ಮರಳುಮಾಡುವುದೇ ಮುಖ್ಯವಾಗಿದೆ. ವಾಸ್ತವವಾಗಿ ರಾಜ್ಯ ಸರಕಾರ 8-2-2017ರಂದು ಕಳಿಸಿದ್ದ ಹಾಲಕ್ಕಿಗಳ ಎಸ್ಟಿ ಮೀಸಲಾತಿ ಪ್ರಸ್ತಾವನೆಯನ್ನು ಬಿಜೆಪಿಯ ಕೇಂದ್ರ ಸರಕಾರ ತಿರಸ್ಕರಿಸಿ ಆ ವೇಳೆಗೆ ನಾಲ್ಕು ವರ್ಷಗಳೆ ಗತಿಸಿಹೋಗಿತ್ತು. ಇದು ಜಿಲ್ಲೆಯ ಶಾಸಕ-ಸಂಸದ-ಸಚಿವರು ಅಮಾಯಕ ಹಾಲಕ್ಕಿಗಳಿಗೆ ಮಾಡುತ್ತಿರುವ ದ್ರೋಹದ ಸಣ್ಣ ಸ್ಯಾಂಪಲ್ ಅಷ್ಟೇ! ಜಿಲ್ಲೆಯ ಬಹುಸಂಖ್ಯಾತರಾದ ಹಾಲಕ್ಕಿಗಳು ಪರಿಶಿಷ್ಟ ಪಂಗಡ ಮೀಸಲಾತಿ ಪಟ್ಟಿ ಸೇರಿದರೆ ಮುಂದೆ ಕಾರವಾರ ಹಾಗೂ ಕುಮಟಾ ವಿಧಾನಸಭಾ ಕ್ಷೇತ್ರಗಳು ಮತ್ತು ಉತ್ತರ ಕನ್ನಡ ಪಾರ್ಲಿಮೆಂಟ್ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿ ತಮ್ಮ ಪಟ್ಟಕ್ಕೆ ಸಂಚಕಾರ ಬರುತ್ತದೆಂಬ ದೂ(ದು)ರಾಲೋಚನೆಯಿಂದ ಸವರ್ಣೀಯರು ಅಡ್ಡಗಾಲು ಹಾಕಿ ಕೂತಿದ್ದಾರೆ. ಹಾಲಕ್ಕಿಗಳಿಗೆ ನಿರಂತರವಾಗಿ ಆಗುತ್ತಿರುವ ಮೋಸ-ವಂಚನೆಯ ಮರ್ಮವೇ ಇದು!

ಈಗ ಮತ್ತೆ ಹಾಲಕ್ಕಿಗಳ ಮೀಸಲಾತಿ ಚೆಂಡು ಕೇಂದ್ರ ಸರಕಾರದ ಅಂಕಣ ತಲುಪಿದೆ. ಒಂದಿಷ್ಟು ಸ್ಪಷ್ಟೀಕರಣದೊಂದಿಗೆ ಮೀಸಲಾತಿ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಕೇಂದ್ರದ ಬುಡಕಟ್ಟು ಕಲ್ಯಾಣ ಇಲಾಖೆಗೆ ಕಳುಹಿಸಿದೆ. ಈ ಸಂದರ್ಭದಲ್ಲಿ ಕೇಂದ್ರದ ಆಡಳಿತಾರೂಢ ಬಿಜೆಪಿಯ ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮೇಲೆ ಹಾಲಕ್ಕಿ ಹೋರಾಟಗಾರರು ಬೆಟ್ಟದಷ್ಟು ಭರವಸೆ ಇಟ್ಟಿದ್ದಾರೆ. ಹಾಲಕ್ಕಿಗಳ ಓಟು ಸಾರಾಸಗಟಾಗಿ ಪಡೆದು ಎಂಪಿ ಸೌಭಾಗ್ಯ ಕಂಡಿರುವ ಕಾಗೇರಿ ಆ ಜನಾಂಗದ ಋಣ ತೀರಿಸಬೇಕಾಗಿದೆ. ಹಾಲಕ್ಕಿಗಳಿಗೆ ಎಸ್ಟಿ ಮೀಸಲಾತಿ ಕೊಡಿಸಲು ಬದ್ಧತೆಯಿಂದ ದಿಲ್ಲಿಯಲ್ಲಿ ಕಾಗೇರಿ ಕಾರ್ಯಾಚರಣೆ ನಡೆಸಬೇಕಿದೆ; ಕಾಗೇರಿ ಇಚ್ಛಾಶಕ್ತಿ ತೋರಿಸಿದರೆ ಈ ಬಾರಿ ನಮ್ಮ ಬೇಡಿಕೆ ಈಡೇರುವುದು ಕಷ್ಟವಾಗದು ಎಂದು ಹಾಲಕ್ಕಿ ಹೋರಾಟಗಾರು ಹೇಳುತ್ತಾರೆ. ಆದರೆ ಆರೆಸೆಸ್‌ನ ವರ್ಣ ವ್ಯವಸ್ಥೆಯ ರಹಸ್ಯ ಸಿದ್ಧಾಂತಿಯಾದ ಕಾಗೇರಿ ತೀರಾ ತಳ ಸಮುದಾಯದ ಹಾಲಕ್ಕಿ ಬುಡಕಟ್ಟನ್ನು ಪ್ರಪಾತದಿಂದ ಮೇಲಕ್ಕೆತ್ತುತ್ತಾರೆಂದು ನಂಬಲಿಕ್ಕಾಗದು ಎಂಬ ಚರ್ಚೆ ಜಿಲ್ಲೆಯ ರಾಜಕೀಯ-ಸಾಮಾಜಿಕ ವಲಯದಲ್ಲಿದೆ.

ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ರ ಹಾಲಕ್ಕಿ ಮೀಸಲಾತಿಗೆ ಪ್ರಯತ್ನ ಸದ್ಯ ಸದ್ದು ಮಾಡುತ್ತಿದೆ. ಈಚೆಗೆ ಮಂಗಳೂರಲ್ಲಿ ಕ್ಯಾಬಿನೆಟ್ ಸಭೆ ಜರುಗಿದಾಗ ಸಾಂಪ್ರದಾಯಿಕ ಉಡುಗೆ-ತೊಡುಗೆಯ ಹಾಲಕ್ಕಿ ಹೆಂಗಸರು-ಗಂಡಸರಿದ್ದ ಒಂದು ತಂಡವನ್ನು ಸೈಲ್ ಸಿಎಂ ಡಿಕೆಶಿ ಬಳಿಗೊಯ್ದಿದ್ದರು. ಹಾಲಕ್ಕಿ ಒಕ್ಕಲಿಗರ ಕಷ್ಟ-ಇಷ್ಟ ಅರುಹಿದ್ದರು. ಕಳೆದ ವಾರ ಮತ್ತೆ ಹಾಲಕ್ಕಿಗಳಿಗಾಗಿ ಸೈಲ್ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದರೆಂದು ಸುದ್ದಿಯಾಗಿದೆ. ತನ್ನ ಮೊಬೈಲ್ ಫೋನ್‌ನಿಂದ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ್ ಗೌಡರ ಜತೆ ಸಿಎಂರಿಂದ ಮಾತಾಡಿಸಿದ್ದಾರೆ. ಸಿಎಂ ಡಿಕೆಶಿ ಹಾಲಕ್ಕಿಗಳ ಮೀಸಲಾತಿ ಕಡತಗಳಿಗೆ ಜೀವ ಕೊಟ್ಟು ಮುನ್ನಡೆಸಲು ಸಂಬಂಧಿಸಿದ ಅಧಿಕಾರಿಗೆ ತಾಕೀತು ಮಾಡಿದ್ದಾರೆ. ಅಸೆಂಬ್ಲಿ ಚಿನಾವಣೆ ಹತ್ತಿರ ಬಂದಿರುವುದರಿಂದ ಸೈಲ್ ಈ ಕಟಿಪಿಟಿ ಮಾಡಿದ್ದಾರೆಂಬ ಮಾತು ಜಿಲ್ಲೆಯಲ್ಲಿ ಕೇಳಿಬರುತ್ತಿದೆ. ದುರಂತವೆಂದರೆ, ಹಾಲಕ್ಕಿ ಮೀಸಲಾತಿಗಾಗಿ ಪಟ್ಟು ಹಿಡಿದು ಕೆಲಸ ಮಾಡುವ ಗಟ್ಟಿಗರು ಮಾತ್ರ ಕಾಣಿಸುತ್ತಿಲ್ಲ.

ಹಾಲಕ್ಕಿ ಜನಾಂಗ5

ಒಟ್ಟಿನಲ್ಲಿ ಹಾಲಕ್ಕಿಗಳಿಗೆ ಪರಿಶಿಷ್ಟ ಪಂಗಡ ಮೀಸಲಾತಿ ಮರೀಚಿಕೆ ಆಗುತ್ತಿದೆ. ಮೀಲಾತಿ ಕೊಡಿಸುವ ಬಣ್ಣ-ಬಣ್ಣದ ಮಾತುಗಳಿಂದ ಹಾಲಕ್ಕಿಗಳ ಮತ ದೋಚಿ ಗೆದ್ದವರು ಕೃತಘ್ನರಾಗಿದ್ದಾರೆ. ಎಸ್ಟಿ ಮೀಸಲಾತಿ ಸೌಲಭ್ಯ ಅಷ್ಟು ಸುಲಭಕ್ಕೆ ಹಾಕ್ಕಿಗಳಿಗೆ ದಕ್ಕಲು ಪ್ರಬಲ ಮೇಲ್ವರ್ಗದ ಲಾಬಿ ಬಿಡುತ್ತಿಲ್ಲ. ಹಾಗಾಗಿ ಸದ್ಯಕ್ಕೆ ‘ಹಾಲಕ್ಕಿ ಅಭಿವೃದ್ದಿ ನಿಗಮ’ವನ್ನಾದರೂ ಆರಂಭಿಸುವಂತೆ ಹಾಲಕ್ಕಿ ಹೋರಾಟಗಾರರು ಸಿಎಂ ಡಿಕೆಶಿ ಸರಕಾರದ ಮೇಲೆ ಒತ್ತಡ ತರುವ ಯೋಜನೆ ರೂಪಿಸಬೇಕಾಗಿದೆ. ಹಾಲಕ್ಕಿಗಳಲ್ಲಿ ಶೈಕ್ಷಣಿಕ ಉನ್ನತಿ ಮತ್ತು ಸರಾಯಿ ಅನಾಹುತದ ಬಗ್ಗೆ ಎಚ್ಚರಿಕೆ ಮೂಡಿಸುವುದು ಈ ನಿಗಮದ ಪ್ರಮುಖ ಕಾರ್ಯ ಸೂಚಿಯಾಗಬೇಕು; ಸದೃಢ ದೇಹದಾರ್ಢ್ಯ ಪಡೆದಿರುವ ಹಾಲಕ್ಕಿ ವಿದ್ಯಾರ್ಥಿ-ವಿಧ್ಯಾರ್ಥಿನಿಯರನ್ನು ಕ್ರೀಡಾಪಟುಗಳಾಗಿ ತಯಾರು ಮಾಡುವ ಮತ್ತು ಹಾಲಕ್ಕಿ ಯುವಕ-ಯುವತಿಯರನ್ನು ಸ್ವಯಂ ಉದ್ಯೋಗದಿಂದ ಸ್ವಾವಲಂಬಿಗಳಾಗಿಸುವ ಯೋಜನೆ ನಿಗಮದ್ದಾಗಬೇಕು. ನಿಗಮ ಸ್ಥಾಪನೆ ಹಾಲಕ್ಕಿಗಳಿಗೆ ಆಗುತ್ತಿರುವ ನಿರಂತರ ಅನ್ಯಾಯ ಮತ್ತು ಎಸ್ಟಿ ಮೀಸಲಾತಿ ಮೋಸಕ್ಕೆ ಪ್ರಾಯಶ್ಚಿತ್ತವಾದರೂ ಆಗಬಹುದೇನೋ!

-ವಲಲ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಪಿ ಚುನಾವಣೆಗೆ ಕಾಂಗ್ರೆಸ್ ಪ್ಲ್ಯಾನ್: ಎಸ್‌ಪಿ ಮುಂದೆ 125+ ಸೀಟುಗಳ ಬೇಡಿಕೆ ಇಡಲು ಪ್ರಿಯಾಂಕಾ ಸಜ್ಜು!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ...

SIR | 14 ಕೋಟಿ ‘ಮತದಾರರು ಕಣ್ಮರೆ’; ಬೆಚ್ಚಿಬೀಳಿಸುವ ಅಂಕಿಅಂಶ!

ಎಸ್‌ಐಆರ್ ವಿವಾದದ ಚರ್ಚೆಗಳಲ್ಲಿ ಎರಡು ವಾದಗಳಿವೆ; ಒಂದು - ಮತಪಟ್ಟಿಯಿಂದ 13.3...

ಬಿಜೆಪಿ ಬುಲ್ಡೋಜರ್ ರಾಜಕೀಯ: ಬಂಗಾಳದಲ್ಲಿ ಮುಂದುವರೆದ ಎಡಪಂಥೀಯರ ಪುಸ್ತಕ ಮಳಿಗೆಗಳ ಮೇಲೆ ದಾಳಿ

ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯೆಂದರೆ ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಅದು...

‘ಗ್ರಾಮೀಣ ಕಾರ್ಮಿಕರ ಕೂಲಿ ಕಳವು’: ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಎಂನರೇಗಾ) ಯೋಜನೆಗೆ ಬದಲಾಗಿ...