ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ ಕಾಮಗಾರಿ ಬರೋಬ್ಬರಿ 12 ವರ್ಷದಿಂದ ತೆವಳುತ್ತಿದೆ. 65 ಮೀಟರ್ ಅಗಲದ ಹೈವೇ 45 ಮೀ.ಗೆ ಕುಗ್ಗಿದೆ. ಸಂಚಾರ ಇಕ್ಕಟ್ಟಾಗಿ 27 ಮಂದಿ ಸ್ಥಳೀಯರು ಬಲಿಯಾಗಿದ್ದಾರೆ. ಮೇಲ್ನೋಟಕ್ಕೆ ದೇಶಪಾಂಡೆ, ಅನಂತಕುಮಾರ್ ಹೆಗಡೆ ಹಾಗೂ ಕಾಗೇರಿಯವರು ಹೈವೇ ಕಾಮಗಾರಿ ಹಳ್ಳ ಹಿಡಿದಿದೆ ಎಂದು ಕೂಗಾಡುತ್ತಾರೆ. ವಾಸ್ತವವಾಗಿ ಇಡೀ ಚತುಷ್ಪಥ ಯೋಜನೆ ನರಕದಂತಾಗಲು, ಇವರೇ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಪಶ್ಚಿಮ ಘಟ್ಟಕ್ಕೆ ಸಮಾನಾಂತರವಾಗಿ ಪಶ್ಚಿಮ ಕರಾವಳಿಯಲ್ಲಿ ಕೇರಳದಿಂದ ಕನ್ಯಾಕುಮಾರಿ ತನಕ ಸಾಗಿರುವ ರಾಷ್ಟ್ರೀಯ ಹೆದ್ದಾರಿ 66 ಕರ್ನಾಟಕದ ಕಡಲ ತಡಿಯ ಜೀವನಾಡಿ. ಅರಬ್ಬೀ ಸಮುದ್ರದ ಅಂಚಿನಲ್ಲಿರುವ ಉತ್ತರ ಕನ್ನಡದ ಐದೂ ತಾಲೂಕುಗಳ ಜನರ ಬದುಕಿಗೆ ಆಧಾರವಾದ ಕೃಷಿ, ತೋಟಗಾರಿಕೆ, ಮೀನುಗಾರಿಕೆ ವಹಿವಾಟು, ಕುಲಕಸುಬು ಮತ್ತು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತಿತರ ಸಕಲ ದೈನಂದಿನ ಚಟುವಟಿಕೆಗೆಳೊಂದಿಗೆ ಈ ಹೆದ್ದಾರಿಯದು ಕಡಿದ ಕರಳು ಬಳ್ಳಿಯ ಸಂಬಂಧ. ಕರ್ನಾಟಕ, ಬೃಹತ್ ವಾಣಿಜ್ಯ ನಗರಿ ಮುಂಬೈ-ಮಹಾರಾಷ್ಟ್ರ, ಗೋವಾ, ಕೇರಳ ಮತ್ತು ತಮಿಳುನಾಡು ನಡುವಿನ ಮಹತ್ವದ ಸಂಪರ್ಕ ಕೊಂಡಿಯಾಗಿರುವ ಈ ರಾಷ್ಟ್ರೀಯ ಹೆದ್ದಾರಿಯನ್ನು ಮೊದಲೆಲ್ಲ ಎನ್ಎಚ್-17, ಎನ್ಎಚ್-47 ಎಂದೆಲ್ಲ ಗುರುತಿಸಲಾಗುತಿತ್ತು. 1960-70ರ ದಶಕದಲ್ಲಾದ ಈ ಹೆದ್ದಾರಿ ಕಾಲಕ್ರಮೇಣ ವಾಹನಗಳ ದಟ್ಟಣೆಯಿಂದ ಕಿಕ್ಕಿರಿಯಿತು; ಅದೇ ಅನುಪಾತದಲ್ಲಿ ಅನಾಹುತ-ಅಪಘಾತಗಳೂ ಹೆಚ್ಚಾಯಿತು. ಹೆದ್ದಾರಿ ಚತುಷ್ಪಥವಾಗಿ ಅಗಲಗೊಳಿಸುವುದು ಜರೂರಾಯಿತು.
ಈ ರಸ್ತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎನ್ಎಚ್-66 ಎಂದು ನಾಮಕರಣ ಮಾಡಿ ನಾಲ್ಕು ಪಥವಾಗಿಸುವ ಕಾಮಗಾರಿ ಆರಂಭಿಸಿ ದಶಕಗಳೇ ಕಳೆದು ಹೋಗಿದೆ. ಈ ಹೈವೇ ಕಾಮಗಾರಿ ಸದ್ಯಕ್ಕಂತೂ ತಾರ್ಕಿಕ ಅಂತ್ಯ ಕಾಣುವ ಲಕ್ಷಣಗಳಿಲ್ಲ. ನ್ಯಾಷನಲ್ ಹೈವೇ ಹೀರೋ ಎಂಬ ‘ಆರೋಪ’ಕ್ಕೆ ಭಾಜನರಾಗಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರ ಸುಪರ್ದಿಯಲ್ಲಿರುವ ಹೆದ್ದಾರಿ ಪ್ರಾಧಿಕಾರದ ಪ್ರಭೃತಿಗಳ ಹೊಣೆಗೇಡಿತನದಿಂದ ಒಂದಲ್ಲ ಒಂದು ಅವಾಂತರ, ಜೀವಹಾನಿ ಎನ್ಎಚ್-66ರಲ್ಲಿ ನಿತ್ಯ ಕರ್ಮ ಎಂಬಂತಾಗಿಹೋಗಿದೆ!
ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ ಕಾಮಗಾರಿ ಬರೋಬ್ಬರಿ 12 ವರ್ಷದಿಂದ ತೆವಳುತ್ತಿದೆ. ಕಾಮಗಾರಿ ಗುತ್ತಿಗೆ ಮುಂಬೈ ಮೂಲದ ಐಡಿಯಲ್ ರೋಡ್ ಬಿಲ್ಡರ್ಸ್(ಐಆರ್‍ಬಿ) ಎಂಬ ‘ಪ್ರತಿಷ್ಠಿತ’ ರಸ್ತೆ ನಿರ್ಮಾಣ ಕಂಪನಿ ಪಡೆದುಕೊಂಡಿದೆ. ಕೇಂದ್ರ ಹೆದ್ದಾರಿ ಮಂತ್ರಿ ಗಡ್ಕರಿ ನಂಟಿನ ಕಂಪನಿ ಎನ್ನಲಾಗುವ ಐಆರ್‍ಬಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ನಡೆಸುತ್ತಿರುವ ಕಾಮಗಾರಿ ಶುದ್ಧ ಅವೈಜ್ಞಾನಿಕವಷ್ಟೇ ಅಲ್ಲ, ಯಾವುದೇ ತಾಂತ್ರಿಕ ತರ್ಕ-ಬದ್ಧತೆಗಳಿಲ್ಲದ ತರಲೆ-ತಾಪತ್ರಯ ಎಂದು ನುರಿತ ತಂತ್ರಜ್ಞರು-ಎಂಜಿನಿಯರ್‍ಗಳೇ ಅಭಿಪ್ರಾಯ ಪಡುತ್ತಾರೆ.
This video cannot be played in your browser. Open the video directly
ಇದನ್ನು ಓದಿದ್ದೀರಾ?: ಪ್ರಬುದ್ಧತೆಯತ್ತ ರಾಹುಲ್, ಪಥಭ್ರಾಂತದತ್ತ ಮೋದಿ
ಇಂತಹ ಐಆರ್‍ಬಿ ಕಾಮಗಾರಿಯಿಂದ ಉತ್ತರ ಕನ್ನಡದಲ್ಲಿ ಆಗಿರುವ, ಆಗುತ್ತಿರುವ ಅನಾಹುತ ಒಂದೆರಡಲ್ಲ. ಐಆರ್‍ಬಿಗೆ ಕಡಿವಾಣ ಹಾಕಿ ಜನರಿಗಾಗುತ್ತಿರುವ ತೊಂದರೆ ತಪ್ಪಿಸುವ ಕರ್ತವ್ಯ ನಿಭಾಯಿಸಬೇಕಾದ ಎನ್ಎಚ್ಎ(ನ್ಯಾಷನಲ್ ಹೈವೇ ಅಥಾರಿಟಿ) ಅಡ್ನಾಡಿ-ಅಕ್ರಮ ಕೆಲಸಕ್ಕೆ ಸಹಕರಿಸುತ್ತಿದೆ. ಮೊದಲಿಗೆ ಹೈವೇ ವಿನ್ಯಾಸವೇ ಎಡವಟ್ಟಿನದಾಗಿದೆ. ಜಿಲ್ಲಾಡಳಿತ, ಸ್ಥಳೀಯ ಮಂತ್ರಿ-ಶಾಸಕ-ಸಂಸದರ ಸೂಚನೆ-ನಿರ್ದೇಶನವನವನ್ನೆಲ್ಲ ಧಿಕ್ಕರಿಸಿ ಏಕಪಕ್ಷೀಯವಾಗಿ ಐಆರ್‍ಬಿ ಯದ್ವಾತದ್ವಾ ಕಾಮಗಾರಿ ನಡೆಸಿದೆ-ನಡೆಸುತ್ತಿದೆ. ಇದರಿಂದ ರಸ್ತೆಯಲ್ಲಿ ಪ್ರಯಾಣಿಸುವವರು, ನಡೆದಾಡವವರಿಗಷ್ಟೇ ಅಲ್ಲ, ರಸ್ತೆಯ ಅಕ್ಕಪಕ್ಕದಲ್ಲಿರುವ ವಸತಿ, ವಾಣಿಜ್ಯ ಪ್ರದೇಶದ ಜನರಿಗಾಗುತ್ತಿರುವ ಹಿಂಸೆ ಹೇಳತೀರದು. ಕೆಲವಡೆಯಂತೂ ಸರಿಪಡಿಸಲಾಗದ ಅಧ್ವಾನಗಳಾಗಿ ಜನರು ಜನ್ಮಪೂರ್ತಿ ಸಮಸ್ಯೆ-ಸಂಕಷ್ಟ ಎದುರಿಸುವಂತಾಗಿದೆ.

ರಸ್ತೆಯ ಆಚೀಚೆಯ ಬೃಹತ್ ಗುಡ್ಡಗಳನ್ನು ಯಾವುದೇ ತಾಂತ್ರಿಕ-ವೈಜ್ಞಾನಿಕ ಯೋಚನೆ-ಯೋಜನೆ-ಎಚ್ಚರಿಕೆಗಳಿಲ್ಲದೆ ಮನಸೋ ಇಚ್ಛೆ ಕತ್ತರಿಸಲಾಗಿದೆ. ಹೆಚ್ಚು ಮಳೆ ಬೀಳುವ ಪ್ರದೇಶ ಉತ್ತರ ಕನ್ನಡ. ಈ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅನುವಾಗುವಂತೆ ಗುಡ್ಡಗಳನ್ನು ಇಳಿಜಾರಾಗಿ ಕತ್ತರಿಸಬೇಕಿತ್ತು. ಆದರೆ ಐಆರ್‍ಬಿ-ಎನ್ಎಚ್ಎ ‘ಬುದ್ಧಿವಂತರು’ ಗುಡ್ಡಗಳನ್ನು ಲಂಬವಾಗಿ(Verticle) ತುಂಡರಿಸಿದ್ದಾರೆ. ಸಾಧಕ-ಬಾಧಕಗಳನ್ನು ಲೆಕ್ಕಿಸದೆ ಗುಡ್ಡದಲ್ಲಿನ ಬಂಡೆಗಳನ್ನು ಸಾರಾಸಗಟಾಗಿ ಸ್ಫೋಟಿಸಿ ಹೆದ್ದಾರಿ ನಿರ್ಮಾಣಕ್ಕೆ ಬೇಕಾದಷ್ಟು ಪ್ರದೇಶ ಸಮತಟ್ಟು ಮಾಡಿಕೊಂಡಿದ್ದಾರೆ. ಈ ವಿವೇಚನಾರಹಿತ ಕೆಲಸದಿಂದ ಗುಡ್ಡಗಳಲ್ಲಿ ಬಿರುಕುಗಳು ಮೂಡಿವೆ. ಹೆದ್ದಾರಿ ಅಕ್ಕ-ಪಕ್ಕದಲ್ಲಿ ಮಳೆ ನೀರು ಹರಿದು ಹೋಗಲು ಗಟಾರ ಸಹ ನಿರ್ಮಿಸಿಲ್ಲ. ಹೀಗಾಗಿ ಮಳೆಗಾಲದಲ್ಲಿ ಗುಡ್ಡದ ಬಿರುಕುಗಳಲ್ಲಿ ನೀರು ಇಳಿದು, ಗುಡ್ಡದ ಬುಡದಲ್ಲಿ ನೀರು ತುಂಬಿ ಗುಡ್ಡಗಳು ಕುಸಿಯುತ್ತಿವೆ. ಮಣ್ಣಿನ ಸಾಂದ್ರತೆ-ಭೌಗೋಳಿಕ ಸ್ಥಿತಿ-ಗತಿ ಪ್ರಜ್ಞಾಪೂರ್ವಕವಾಗೇ ಕಡೆಗಣಿಸಿ ಗುಡ್ಡಕ್ಕೆ ತಡೆಗೋಡೆ ಕಟ್ಟಲಾಗಿದೆ. ಈ ತಡಗೋಡೆಗಳು ಮಣ್ಣಿನ ಒತ್ತಡಕ್ಕೆ ಗುಡ್ಡಗಳ ಸಮೇತ ಹೆದ್ದಾರಿಗೆ ಬೀಳುತ್ತಿವೆ. ಅಂಕೋಲಾ ತಾಲೂಕಿನ ಶಿರೂರು ಮತ್ತು ಕುಮಟಾ ತಾಲೂಕಿನ ಬೆಟಕುಳಿಯಲ್ಲಿ ಗುಡ್ಡಗಳು ಜನ ವಸತಿ ಪ್ರದೇಶಗಳ ಮೇಲೆ ಉರುಳಿ ಹತ್ತಾರು ಮಂದಿ ಐಆರ್‍ಬಿ-ಎನ್ಎಚ್ಎಗೆ ಆಹುತಿಯಾಗಿದ್ದಾರೆ!
ಪಶ್ಚಿಮಕ್ಕೆ ನೀರು ಹರಿದು ಹೋಗುವ ವ್ಯವಸ್ಥೆ ಕಾಮಗಾರಿ ಕಂಪನಿ ಮಾಡಿಲ್ಲ. ಇದನ್ನು ಎನ್ಎಚ್ಎ ಅಧಿಕಾರಿಗಳು ಕಂಡೂಕಾಣದಂತಿದ್ದಾರೆ. ಮಳೆಗಾಲದಲ್ಲಿ ರಭಸದಿಂದ ಉಕ್ಕಿ ಹರಿಯುವ ನೀರು ಸಮುದ್ರದೆಡೆ ಸಾಗಲು ದಾರಿಯಿಲ್ಲದೆ ಜನ ವಸತಿ, ತೋಟ, ಗದ್ದೆಗಳಿಗೆ ನುಗ್ಗುತ್ತಿದೆ. ನಿಷ್ಪಾಪಿ ಜನರ ಬದುಕು ದ್ವಂಸವಾಗುತ್ತಿದೆ.
ಕುಮಟಾ, ಹೊನ್ನಾವರ ಮತ್ತು ಭಟ್ಕಳ ಶಹರಗಳಲ್ಲಿ ಅತೀ ಅವಶ್ಯವಾದ ಮೇಲ್ಸೇತುವೆ, ಸರ್ವಿಸ್ ರಸ್ತೆ ನಿರ್ಮಿಸಿಲ್ಲ. ಹೈವೇ ಗುಂಟವಿರುವ ಕೆಲವು ಜನನಿಭಿಡ ಹಳ್ಳಿಗಳಲ್ಲೂ ಸರ್ವಿಸ್ ರಸ್ತೆ, ಪಾದಚಾರಿ ಮಾರ್ಗ(Footpath) ಇಲ್ಲ. ಹೀಗಾಗಿ ಜನರು ಜೀವ ಕೈಲಿಡಿದು ಓಡಾಡುವಂತಾಗಿದೆ. ನಿತ್ಯ ಒಂದಲ್ಲ ಒಂದು ಅಪಘಾತ ಆಗುತ್ತಿದೆ. ಪ್ರಾಣ ಹಾನಿ, ಅಂಗಾಂಗ ಊನಗಳಾಗುತ್ತಿದೆ. ಮೂರೂ ತಾಲೂಕಾ ಕೇಂದ್ರಗಳು ಪಶ್ಚಿಮಕ್ಕಿವೆ. ಪೂರ್ವದಲ್ಲಿ ನೂರಾರು ಹಳ್ಳಿಗಳಿವೆ. ಸರ್ವಿಸ್ ರಸ್ತೆ ಇಲ್ಲದಿರುವುದರಿಂದ ಹಳ್ಳಿಗರು ತಾಲೂಕಾ ಕೇಂದ್ರ-ನಗರ ಪ್ರವೇಶಿಸಲು ತಿಣುಕಾಡಬೇಕಾಗಿದೆ.
ಐಆರ್‍ಬಿ ಭೂಪರು 2014ರಲ್ಲಿ ಉತ್ತರ ಕನ್ನಡದಲ್ಲಿ ಚತುಷ್ಪತ ಕಾಮಗಾರಿ ಶುರುಮಾಡುವಾಗ ಮೂರೇ ವರ್ಷದಲ್ಲಿ ಮುಗಿಸುವ ಮಾತುಗಳನ್ನಾಡಿದ್ದರು. ಆದರೆ ಇವತ್ತಿಗೂ ಪೂರ್ಣ ಪ್ರಮಾಣದ ಹೈವೇ ಸಿದ್ದವಾಗಿಲ್ಲ. ಅರ್ಧಂಬರ್ಧ ಕಾಮಗಾರಿಯಿಂದ ಪ್ರಯಾಣ ಪ್ರಯಾಸವಾಗಿದೆ. ಗಮ್ಯ ತಲುಪುವವರೆಗೂ ಆತಂಕ-ಕಷ್ಟ ತಪ್ಪಿದ್ದಲ್ಲ. ಕಾಮಗಾರಿ ಕಾಲಮಿತಿಯಲ್ಲಿ ಮುಗಿಸಲು ವಿಫಲವಾಗಿರುವ ಅಸಮರ್ಥ ಐಆರ್‍ಬಿ ಅವ್ಯವಸ್ಥೆಯ ಹೈವೇಗೆ ಟೋಲ್ ಮಾತ್ರ ಬಲವಂತದಿಂದಲೇ ವಸೂಲಿಗಿಳಿದಿದೆ. ಉತ್ತರ ಕನ್ನಡದಲ್ಲಿ ಎರಡು ಸುಂಕದ ಕಟ್ಟೆಗಳನ್ನು ಕಟ್ಟಿರುವ ಐಆರ್‍ಬಿ ಅಲ್ಲಿ ಬೌನ್ಸರ್‍ಗಳನಿಟ್ಟುಕೊಂಡು ನಿಭಾಯಿಸುತ್ತಿದೆ.
ಎನ್ಎಚ್-3, ಎನ್ಎಚ್-4, ಎನ್ಎಚ್-8 ಮೊದಲಾದ ಹೈವೇಗಳಿಗೆ ಹೋಲಿಸಿದರೆ ಈ ಅರೆಬರೆ ಕಾಮಗಾರಿಯ ಎನ್ಎಚ್-66ರ ಸರಾಸರಿ ವೇಗವೂ ತೀರಾ ಕಡಿಮೆ. ಇದಕ್ಕೆ ನ್ಯೂನತೆಗಳ ರಸ್ತೆ ವಿನ್ಯಾಸ-ಕಳಪೆ ಕಾಮಗಾರಿ ಒಂದು ಕಾರಣವಾದರೆ, ರಸ್ತೆಯ ಆಚೀಚೆ ಮನೆ, ವ್ಯಾಪಾರ-ವಹಿವಾಟು ಕೇಂದ್ರಗಳೇ ಮುಂತಾದ ಮಾನವ ವಸಾಹತುಗಳಿಂದ ಕಿರಿದಾಗಿರುವ ಹೈವೇ ಅಗಲ ಮತ್ತೊಂದು ಕಾರಣ. ಬಹುತೇಕ ಕಡೆಗಳಲ್ಲಿ 65 ಮೀಟರ್ ಅಗಲದ ಹೈವೇ ನಿರ್ಮಾಣಕ್ಕೆ ಬೇಕಾಗುವಷ್ಟು ಭೂಮಿಯನ್ನು ಎನ್ಎಚ್ಎ ಸ್ವಾಧೀನ ಪಡಿಸಿಕೊಂಡಿದೆ. ಆದರೆ ವರ್ತಕ ಲಾಬಿಯ ಹಿತಾಸಕ್ತಿ ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರಕಾರದ ಆಯಕಟ್ಟಿನ ಅಧಿಕಾರದಲ್ಲಿರುವ ರಾಜಕಾರಣಿಗಳೆಲ್ಲ ಒಂದಾಗಿ ಕುಮಟಾ, ಹೊನ್ನಾವರ, ಭಟ್ಕಳ ಮತ್ತು ಹಳದೀಪುರ, ಶಿರಾಲಿ ಮುಂತಾದ ದೊಡ್ಡ ಹಳ್ಳಿಗಳಲ್ಲಿ ಹೈವೇ ಅಗಲ ಏಕಪಕ್ಷೀಯವಾಗಿ 45 ಮೀಟರಿಗೆ ಸೀಮಿತಗೊಳ್ಳುವಂತೆ ನೋಡಿಕೊಳ್ಳಲಾಗಿದೆ.

ಕುಮಟಾ, ಹೊನ್ನಾವರ ಮತ್ತು ಭಟ್ಕಳದಲ್ಲಿ ಪೇಟೆಯನ್ನೇ ಸೀಳಿಕೋಂಡು ಹೆದ್ದಾರಿ ನಡುಮಧ್ಯದಲ್ಲೇ ಹಾದುಹೋಗಿದೆ. ಮೂರೂ ನಗರದಲ್ಲಿ ಹೆದ್ದಾರಿಯ ಮೂಲ ನೀಲ ನಕ್ಷೆಯಂತೆ 65 ಮೀ. ಅಗಲದ ರಸ್ತೆ ತಯಾರಾಗಬೇಕಿತ್ತು; ಮೇಲ್ಸೇತುವೆ-ಪಾದಚಾರಿ ಮಾರ್ಗಗಳು ಇರಬೇಕಿತ್ತು. 65 ಮೀ. ರಸ್ತೆಯಾದರೆ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಬೇಕಾಗುತ್ತದೆ; ಮೇಲ್ಸೇತುವೆ(ಅಂಡರ್ಪಾಸ್) ಇದ್ದರೆ ಬಲಾಢ್ಯ ಉದ್ಯಮಿಗಳ ಹೊಟೇಲ್, ಲಾಡ್ಜ್, ಅಂಗಡಿಗಳಿಗೆ ಗಿರಾಕಿಗಳು ಬರದೆ ದುಡಿಮೆಗೆ ಖೋತಾ ಆಗುತ್ತದೆಂದು 24 ತಾಸೂ ಬಿಜಿಯಾಗಿರುವ ಹೈವೇಯ ಅಗಲವನ್ನೇ 45 ಮೀ.ಗೆ ಕಂಟಕಕಾರಿಯಾಗಿ ಕಿರಿದುಗೊಳಿಸಲಾಗಿದೆ. ರಸ್ತೆ ಅಗಲ ಕಡಿತವಾಗಿರುವುದರಿಂದ ಪಾದಚಾರಿ ಮಾರ್ಗ ಇಲ್ಲದಾಗಿದೆ. ಕರ್ಕಿ, ಹಳದೀಪುರ, ಶರಾಲಿ ಮತ್ತಿತರೆಡೆ 45 ಮೀ. ಅಗಲದ ರಸ್ತೆಯಲ್ಲೇ ಬಾರೀಕಾದ ಕಾಂಕ್ರೀಟ್ ಡಿವೈಡರ್ ಹಾಕಲಾಗಿದೆ. ಅಪಘಾತವಾಗುತ್ತದೆಂದು ಪೊಲೀಸ್ ಬ್ಯಾರಿಕೇಡ್‌ಗಳನ್ನು ಯೂ-ಟರ್ನ್‌ಗಳಲ್ಲಿ ಅಡ್ಡವಾಗಿಡಲಾಗಿದೆ. ಇದರಿಂದಾಗಿ ಯೂ-ಟರ್ನ್‌ಗಳು ಜವರಾಯನ ಹಾಟ್ ಸ್ಫಾಟ್‌ಗಳಂತಾಗಿವೆ. ಹೈವೇ ಕಾಮಗಾರಿ ಆರಂಭವಾದ ಬಳಿಕದ ಈ ಹತ್ತು ವರ್ಷದಲ್ಲಿ ಕುಮಟಾ, ಹೊನ್ನಾವರ-ಭಟ್ಕಳದಲ್ಲಿ 27 ಮಂದಿ ಬಲಿಯಾಗಿದ್ದಾರೆ. ಇದು ಪೋಲೀಸ್ ದಾಖಲೆಗಳೇ ಹೇಳುವ ಅಂಕಿ-ಅಂಶ.
ಹೈವೇ ನಿರ್ಮಾಣ ಕೇಂದ್ರ ಸರಕಾರದ ಯೋಜನೆ. ಹಾಗಾಗಿ ಮೂರು ತಾಲೂಕಿನ ಮಂದಿ ಹಲವು ಬಾರಿ ಸಂಸದ ಕಾಗೇರಿ ವಿಶ್ವೇಶ್ವರ ಹೆಗಡೆ ಕಂಡು, ಕಷ್ಟ ಹೇಳಿಕೊಂಡಿದ್ದಾರೆ. ಜೀವ ಹಾನಿ ತಪ್ಪಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆರೆಸೆಸ್ ಕೃಪಾಕಟಾಕ್ಷವಿರುವ ಸ್ಥಳೀಯ ಕೊಂಕಣಿ ವರ್ತಕರ ವ್ಯಾಪಾರಕ್ಕೆ ಧಕ್ಕೆಯಾಗುತ್ತದೆಂದು ಭಾವಿಸಿದ ಕಾಂಗೇರಿಯವರು ಬಾಯಿ ಬಿಡದಂತಾಗಿದ್ದಾರೆ. ಕಾಂಗ್ರೆಸ್ಸಿನ ಹಿರಿಯ ರಾಜಕಾರಣಿ-ಹಾಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೈವೇಯನ್ನು 45 ಮೀ. ಕುಗ್ಗಿಸಿದ, ಅಂಡರ್ಪಾಸ್ ಆಗದಂತೆ ‘ಆಟ’ ಆಡಿದ ಆರೆಸೆಸ್-ಬಿಜೆಪಿ ತಂಡದಲ್ಲಿದ್ದಾರೆ.
ದೇಶಪಾಂಡೆ ಅಧಿಕಾರದಲ್ಲಿದ್ದಾಗೆಲ್ಲ ತುಂಬ ಮುತುವರ್ಜಿಯಿಂದಲೇ ಸ್ವಜಾತಿ ಕೊಂಕಣಿ ವ್ಯಾಪಾರಿಗಳ ಅನುಕೂಲಕ್ಕೆ ‘ಹೋರಾಡಿದ’ ನಿದರ್ಶನಗಳು ಸಾಕಷ್ಟಿವೆ. ಮೇಲ್ನೋಟಕ್ಕೆ ದೇಶಪಾಂಡೆ, ಮಾಜಿ ಸಂಸದ ಅನಂತಕುಮಾರ್ ಹೆಗಡೆ ಹಾಗೂ ಹಾಲಿ ಎಂಪಿ ಕಾಗೇರಿಯವರು ಹೈವೇ ಕಾಮಗಾರಿ ಹಳ್ಳ ಹಿಡಿದಿದೆ ಎಂದು ಕೂಗಾಡುತ್ತಾರೆ. ವಾಸ್ತವವಾಗಿ ಇಡೀ ಚತುಷ್ಪಥ ಯೋಜನೆ ನರಕದಂತಾಗಲು, ಇವರೇ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?
ಎನ್ಎಚ್-66 ನಾಲ್ಕು ಪಥವಾಗಿಸುವ ಯೋಜನೆಯ ‘ಅವಸ್ಥೆ’ ಅರ್ಥವಾಗಬೇಕೆಂದರೆ ಮೊದಲು ಉತ್ತರ ಕನ್ನಡದ ಕೊಂಕಣಿ ವ್ಯಾಪಾರಸ್ಥರ ಲಾಬಿಯ ಇತಿಹಾಸ ಅರಿಯಬೇಕು. ಜಿಲ್ಲೆಯ ವಾಣಿಜ್ಯ ವಹಿವಾಟು ಕೊಂಕಣಿಗರು ಎಂದು ಜನಜನಿತರಾಗಿರುವ ಗೌಡ ಸಾರಸ್ವತ ಬ್ರಾಹ್ಮಣ(ಜಿಎಸ್ಬಿ) ಸಮುದಾಯದ ಬಿಗಿ ಹಿಡಿತದಲ್ಲಿದೆ. ಬಹುತೇಕ ಕೊಂಕಣಿಗರು ಸಂಘ ಪರಿವಾರ-ಬಿಜೆಪಿಯ ಕಟ್ಟರ್ ಅನುಯಾಯಿಗಳು. ಹಳಿಯಾಳದ ಮಂಗೇಶ್ ಭೇಂಡೆ ಆರೆಸೆಸ್‌ನ ಉನ್ನತ ಸಮಿತಿಯ ಪ್ರಮುಖ ಮುಖಂಡ. ಭೇಂಡೆಯ ಪರಮಾಪ್ತ ಮಿತ್ರ ಕುಮಟಾದ ಹನುಮಂತ್ ಶಾನಭಾಗ್ ‘ಉತ್ತರ ಕನ್ನಡದ ಕಲ್ಲಡ್ಕ’ ಎಂದೇ ಚಿರಪರಿಚಿತ. ಹನುಮಂತ್ ಶಾನುಭಾಗ್ ಜಿಲ್ಲೆಯ ಕೊಂಕಣಿ ವರ್ತಕ ಗಣದ ಟ್ರಬಲ್ ಶೂಟರ್. ಸ್ಥಳೀಯ ಹಿಂದುತ್ವದ ಚಿಂತನ ಚಿಲುಮೆಯ ನೀತಿ ನಿರೂಪಕ. ಪಂಚಾಯಿತಿಯಿಂದ ಪಾರ್ಲಿಮೆಂಟ್ ತನಕದ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಶಾನಭಾಗರದೇ ಅಂತಿಮವಾಣಿ. ಜಿಲ್ಲೆಯ ಯಾವ ಬಿಜೆಪಿಯ ಶಾಸಕ-ಸಂಸದನೂ ಭೇಂಡೆಜೀ-ಶಾನಭಾಗಜೀಗಳು ಹಾಕಿದ ಗೆರೆ ದಾಟುವುದಿಲ್ಲ!

ಈ ಶಾನುಭಾಗಜೀಯ ಖಾಸಾ ತಮ್ಮ ಬಲಮುರಿ ದಾಸ, ಈತನ ತಂಗಿಯ ಗಂಡ(ಭಾವ) ದಾಸ ರಂಗ ಶಾನಭಾಗ್ ಹಾಗೂ ಆತನ ಮಿತ್ರ ರಾಮನಾಥ್ ಶಾನಭಾಗ್‌ರ ಒಡೆತನದ ಮಹಾಲಕ್ಷ್ಮೀ ಕಂಫರ್ಟ್ ಎಂಬ ವಾಣಿಜ್ಯ-ವಸತಿ ಸಂಕೀರ್ಣ ಕುಮಟಾದ ಹೈವೇಗೆ ಹೊಂದಿಕೊಂಡಿರುವ ರಾಮನಗರ ಎಂಬಲ್ಲಿದೆ. 2014ರಲ್ಲಿ ಹೈವೇ ಕಾಮಗಾರಿ ಶುರುವಾಗುವುದಕ್ಕೆ ಕೆಲವೇ ತಿಂಗಳು ಮೊದಲು ತಲೆಯೆತ್ತಿದ ಐದಂತಸ್ತಿನ ಕಟ್ಟಡವಿದು. ಈ ಬಿಲ್ಡಿಂಗ್ ಇರುವ ಜಾಗದ ಒಂದಿಷ್ಟು ಪ್ರದೇಶ 1968ರಲ್ಲಿ ದ್ವೀಪಥ ರಾಷ್ಟ್ರೀಯ ಹೆದ್ದಾರಿ ಆಗುವಾಗ ನ್ಯಾಷನಲ್ ಹೈವೇ ಇಲಾಖೆ ಸ್ವಾಧೀನ ಪಡಿಸಿಕೊಂಡು ಅಂದಿನ ಕಬ್ಜಾದಾರನಿಗೆ ಪರಿಹಾರ ಕೊಟ್ಟಿತ್ತು. ಹೆದ್ದಾರಿ ಇಲಾಖೆಯ ಎಕ್ವಾಯರಿ ಜಾಗವನ್ನು ಕಬಳಿಸಿ ಈ ತ್ರಿಮೂರ್ತಿ ಬಿಲ್ಡರ್‍ಗಳು ಮಹಾಲಕ್ಷ್ಮೀ ಕಂಫರ್ಟ್ ಕಟ್ಟಿನಿಲ್ಲಿಸಿದ್ದಾರೆ. ಈ ಕಟ್ಟಡ ಪಕ್ಕಾ ಅಕ್ರಮ. ಇದಕ್ಕೆ ಪುರಸಭೆ ಪರವಾನಗಿ, ಟೌನ್ ಪ್ಲಾನಿಂಗ್ ಒಪ್ಪಿಗೆಯಿಲ್ಲ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಟ್ಟಡ ತಲೆಯೆತ್ತಿದ್ದಾಗಲೇ ನೆಲಸಮ ಮಾಡುವಂತೆ ಪುರಸಭೆಗೆ ನೋಟಿಸ್ ಸಹ ನೀಡಿತ್ತು. ಕೃಷಿ ಭೂಮಿಯಾಗಿದ್ದ ಈ ಜಾಗ ಕೃಷಿಯೇತರ(ಎನ್ಎ)- ವಸತಿ-ಉದ್ದೇಶಕ್ಕೆ ಪರಿವರ್ತನೆ ಆಗಿರುರುವುದು ಕೂಡ ಕಾನೂನುಬಾಹೀರವೇ.
ಮಹಾಲಕ್ಷ್ಮೀ ಕಂಫರ್ಟ್‌ನಂತೆಯೇ ಹೆದ್ದಾರಿ ಇಲಾಖೆಯ ನಿಯಮ-ಷರತ್ತುಗಳನ್ನೆಲ್ಲ ಧಿಕ್ಕರಿಸಿ ಎರಡು ಬಹುಮಹಡಿ ಕಟ್ಟಡ, ಒಂದು ಭವ್ಯ ಬಂಗಲೆ ಉದ್ಯಮಪತಿ ಶಿರೀಷ್ ನಾಯಕ್ ಕಟ್ಟಿದ್ದಾರೆ. ಕೊಂಕಣಿ ಕುಲದ ಶಿರೀಷ್ ನಾಯಕ್ ಅತ್ತ ಹಿರಿಯ-ಪ್ರಭಾವಿ ರಾಜಕಾರಣಿ ಆರ್.ವಿ.ದೇಶಪಾಂಡೆಗೆ ಪರಮಾಪ್ತರಾದರೆ, ಇತ್ತ ಆರೆಸೆಸ್ ಸಖ್ಯವನ್ನೂ ಸಾಧಿಸಿದ್ದಾರೆ. ದೇಶಪಾಂಡೆ ಕೈಗಾರಿಕಾ ಮಂತ್ರಿಯಾಗಿದ್ದಾಗ ಶಿರೀಷ್ ನಾಯಕ್ ಪಾಂಡುರಂಗ ಇಂಟರ್ ನ್ಯಾಷನಲ್ ಎಂಬ ಹೊಟೇಲ್ ಆರಂಭಿಸಿದ್ದಾರೆ. ಇದು ಪ್ರವಾಸೋದ್ಯಮ ಇಲಾಖೆಯ ಭರ್ಜರಿ ಸಬ್ಸಡಿಯಲ್ಲಿ ಕಟ್ಟಲಾಗಿರುವ ಹೋಟೆಲ್. ನಾಮಾಂಕಿತ ಸರಕಾರಿ ಗುತ್ತಿಗೆದಾರರಾಗಿದ್ದ ಶಿರೀಷ್ ನಾಯಕರ ತಂದೆ ಪಿ.ಆರ್.ನಾಯಕರಿಗೆ ರಾಮಕೃಷ್ಣ ಹೆಗಡೆ ಹಣಕಾಸು ಸಚಿವರಾಗಿದ್ದಾಗ ಮಂಜೂರಿ ಮಾಡಿಸಿದ್ದ 9 ಎಕರೆ ಭೂಮಿಯ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಪಾಂಡುರಂಗ ಹೋಟೆಲ್ ಇದೆ. ಈ ಜಾಗದ ಸ್ವಲ್ಪ ಪ್ರದೇಶ 1968ರಲ್ಲಿ ಹೆದ್ದಾರಿ ಇಲಾಖೆ ಹೈವೇಗೆಂದು ಸ್ವಾಧೀನ ಪಡಿಸಿಕೊಂಡು ಪಿ.ಆರ್.ನಾಯಕರಿಗೆ ಪರಿಹಾರವೂ ಕೊಟ್ಟಿದೆ. ಇದು ಗೊತ್ತಿದ್ದೂ ಎಕ್ವಾಯರಿ ಜಾಗದಲ್ಲಿಯೇ ಅಂಗಳ-ವಾಹನ ನಿಲುಗಡೆ ಸ್ಥಳ ಬರುವಂತೆ ಹೋಟೆಲ್ ನಿರ್ಮಿಸಲಾಗಿದೆ.
ಚತುಷ್ಪಥಕ್ಕೆ ಈ ನಾಲ್ಕೂ ಕಟ್ಟಡಗಳನ್ನು ಬಾಗಶಃ ತೆರವು ಮಾಡಬೇಕಾಗುತ್ತದೆ. ಸರಕಾರ ಸ್ವಾಧೀನ ಭೂ ಪ್ರದೇಶದಲ್ಲಿರುವುದರಿಂದ ಈ ಅಕ್ರಮ ಕಟ್ಟಡಗಳಿಗೆ ಪರಿಹಾರವೂ ಸಿಗದು. 1968ರಲ್ಲಿ ಸರಕಾರ ಚತುಷ್ಪಥಕ್ಕೆ ಬೇಕಾಗುವಷ್ಟು ಭೂಮಿ ಸ್ವಾಧೀನ ಮಾಡಿಕೊಂಡಿದೆಯಾದರೂ, ಬದಲಾದ ದಿನಮಾನಕ್ಕೆ ತಕ್ಕಂತೆ ಇನ್ನೂ ಶೇಕಡಾ 20ರಷ್ಟು ಹೆಚ್ಚಿಗೆ ಭೂಮಿ ಯೋಜನೆಗೆ ಬೇಕಾಗುತ್ತದೆ. ಅದೇ ಪ್ರಕಾರ ಹೈವೇ ಉದ್ದಕ್ಕೂ ಭೂಸ್ವಾಧೀನ ಮಾಡಲಾಗಿದೆ. ಅದರಂತೆ ಸಂಘಪರಿವಾರದ ಸಹಕಾರದ ಈ ನಾಲ್ಕು ಕಟ್ಟಡಗಳು ಸಂಪೂರ್ಣ ನೆಲಸಮ ಮಾಡುವುದು ಅನಿವಾರ್ಯ. ಇದರಿಂದ ಕಂಗಾಲಾದ ಕಟ್ಟಡಗಳ ಮಾಲೀಕರು ಆರಂಭದಲ್ಲಿ ಕುಮಟಾದ ಹೊರ ವಲಯದಲ್ಲಿ ಹೈವೇಗೆ ಬೈಪಾಸ್ ನಿರ್ಮಿಸುವಂತೆ ನೋಡಿಕೊಳ್ಳಲು ತಮ್ಮೆಲ್ಲ ಪ್ರಭಾವ ಬಳಸತೊಡಗಿದರು.
ಇದನ್ನು ಓದಿದ್ದೀರಾ?: CEC ನೇಮಕ ಬಲು ದೊಡ್ಡ ತಲೆನೋವು ಎಂದಿದ್ದ ಸಂವಿಧಾನ ರಚನಾ ಸಭೆ; ಯಾಕೆ ಗೊತ್ತೇ?
ಒಂದು ಹಂತದಲ್ಲಿ ಆರೆಂಟು ಹಳ್ಳಿಗಳ ಅಮಾಯಕ ಮಂದಿಯನ್ನು ಒಕ್ಕಲೆಬ್ಬಿಸಿ 400-500 ಕೋಟಿ ರೂ.ಗಳ ಬೈಪಾಸ್ ರಸ್ತೆ ಮಾಡಲು ಕೇಂದ್ರದ ಬಿಜೆಪಿ ಸರಕಾರ ಸಿದ್ಧವೂ ಆಗಿತ್ತು. ಅಂದರೆ ಹಿಂದುಳಿದ ವರ್ಗದ ನೂರಾರು ಅಸಹಾಯಕ ಕುಟುಂಬಗಳನ್ನು ಬೀದಿಪಾಲಾಗಿಸಿ, ಸರಕಾರಿ ಬೊಕ್ಕಸಕ್ಕೆ ನೂರಾರು ಕೋಟಿ ಹಾನಿ ಮಾಡಿ, ತಮ್ಮ ಕಟ್ಟಡಗಳನ್ನು ಉಳಿಸಿಕೊಳ್ಳಲು ಮುಂದಾಗಿತ್ತು. ಈ ಬೈಪಾಸ್ ಯೋಜನೆ ಅಂದು ಕೇಂದ್ರ ಸರಕಾರದಲ್ಲಿ ಮಂತ್ರಿಗಳಾಗಿದ್ದ ಮನೋಹರರ ಪಾರಿಕ್ಕರ್, ಸುರೇಶ್ ಪ್ರಭು ಮತ್ತು ರಾಜ್ಯದಲ್ಲಿ ಸಚಿರಾಗಿದ್ದ ಆರ್.ವಿ.ದೇಶಪಾಂಡೆ ಎಂಬ ಕೊಂಕಣಿ ಕುಲ ಕಂಠೀರವರ ಜಾಯಿಂಟ್ ವೆಂಚರ್ ಆಗಿತ್ತು. ಇವರಿಗೆ ಕೊಂಕಣಿಗರ ಪರ್ತಗಾಳಿ ಮಠದ ಹಿಂದಿನ ಪೀಠಾಧಿಪತಿ ವಿದ್ಯಾಧಿರಾಜ ಸ್ವಾಮಿಗಳ ಆಶೀರ್ವಾದವೂ ಇತ್ತೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ನಾಗಪುರ ಮಠದ ನಿಷ್ಠಾವಂತ ಶಿಷ್ಯ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಬೈಪಾಸ್‌ಗೆ ತರಾತುರಿಯಲ್ಲಿ ಒಪ್ಪಿಗೆಯೂ ಕೊಟ್ಟುಬಿಟ್ಟರು. ಹಳ್ಳಿಗಳಲ್ಲಿ ಸರ್ವೆಯೂ ಆರಂಭ ಆಗಿಬಿಟ್ಟಿತು. ನೆಲೆ ಕಳೆದುಕೊಳ್ಳುವ ಆತಂಕದಿಂದ ಕಂಗಾಲಾದ ಜನರು ಬೈಪಾಸ್ ಯೋಜನೆ ವಿರುದ್ಧ ಪ್ರತಿಭಟನೆಗಿಳಿದರು. ಇದ್ದಕ್ಕಿದ್ದಂತೆ ಬೈಪಾಸ್ ಯೋಜನೆ ಪ್ರಸ್ತಾಪದ ಸದ್ದಡಗಿತು. ಹಾಗಂತ ಜನರ ಹೋರಾಟಕ್ಕೇನೂ ಬಿಜೆಪಿ ಸರಕಾರ ಹಿಮ್ಮೆಟ್ಟಿರಲಿಲ್ಲ. ತಮಾಷೆಯೆಂದರೆ, ಯಾರು ಬೈಪಾಸ್‌ಗಾಗಿ ಷಡ್ಯಂತ್ರ ಮಾಡಿದ್ದರೋ ಅವರಿಗೇ ಅದು ಬೇಡವಾಗಿತ್ತು. ಹೈವೇ ನಗರದಿಂದ ಹೊರಹೋದರೆ ತಮ್ಮ ವಸತಿ ಸಮುಚ್ಚಯ, ವಸತಿ ಗೃಹ, ಹೋಟೆಲ್ ಮತ್ತು ವಾಣಿಜ್ಯ ಕಾಂಪ್ಲೆಕ್ಸ್‌ಗಳಿಗೆ ವ್ಯಾಪಾರ ಕಡಿಮೆಯಾಗಿ ಮಂಕು ಕವಿಯುತ್ತದೆಂಬ ಭಯ ಬೈಪಾಸ್ ‘ಪ್ರವರ್ತಕ’ರಿಗೆ ಬಾಧಿಸತೊಡಗಿತ್ತು.

ಸಂಘೀ ವರ್ತಕರ ವರಸೆ ಬದಲಾಯಿತು. ತಮ್ಮ ‘ಕಪ್ಪು ಕಟ್ಟಡ’ಗಳಿಗೆ ಯಾವುದೇ ತೊಂದರೆ ಆಗದಂತೆ ಹೆದ್ದಾರಿ ಇಲಾಖೆಯ ಸ್ವಾಧೀನದಲ್ಲಿರುವ ಜಾಗದಲ್ಲಿ ಚತುಷ್ಪಥ ನಿರ್ಮಿಸುವಂತೆ ಕೊಂಕಣಿ ವರ್ತಕ ಮಂಡಳಿ ಕೇಂದ್ರ ಸರಕಾರದ ಮೇಲೆ ವ್ಯಸ್ಥಿತ ಒತ್ತಡ ಹಾಕಿತು. ಸಂಘೀ ವರ್ತಕರ ಅಂತರಂಗದ ಆಸೆ ಅರ್ಥಮಾಡಿಕೊಂಡ ಸಾರಿಗೆ ಸಚಿವ ಗಡ್ಕರಿ ಮೂಲ ಹೈವೇ ಮಾರ್ಗದಲ್ಲೇ ಚತುಷ್ಪಥವನ್ನು 45 ಮೀ.ಗೆ ಸೀಮಿತವಾಗುವಂತೆ ನೋಡಿಕೊಂಡರು. ಕೇಸರಿ ವರ್ತಕರ ಆಶಯದಂತೆಯೇ ಈಗ ಕಾಮಗಾರಿ ನಡೆಯುತ್ತಿದೆ. ಸದಾ ಜನಜಂಗುಳಿಯಿಂದ ತುಂಬಿರುವ ಕುಮಟಾದ ಬಸ್ ಸ್ಟ್ಯಾಂಡ್ ಎದುರಿನ ರಸ್ತೆ ಮತ್ತು ರೈಲು ನಿಲ್ದಾಣದ ರಸ್ತೆಯ ಮಧ್ಯೆ ಈ ಇಕ್ಕಟ್ಟಾದ ಹೈವೇ ಹಾದುಹೋಗುವಂತಾಗಿದೆ. ಅಲ್ಲೊಂದು ಮೇಲ್ಸೇತುವೆಗೂ ಅವಕಾಶ ಕೊಟ್ಟಿಲ್ಲ. ಮೇಲ್ಸೇತುವೆಯಾದರೆ ಕೆಳಗಿನ ಸಂಘೀ ವರ್ತಕರ ವಾಣಿಜ್ಯ ಸಾಮ್ರಾಜ್ಯ ಸೊರಗುತ್ತದೆಂಬ ದೂ(ದು)ರಾಲೋಚನೆಯಿದೆ.
ಏತನ್ಮಧ್ಯೆ ಇದೊಂದು ಆತಂಕ-ಆಘಾತದ ವಲಯವಾಗುವ ಅಪಾಯವಿದೆಯೆಂದು ತಂತ್ರಜ್ಞರು ಹೇಳುತ್ತಾರೆ. ಸಂಘೀಗಳ ನಾಲ್ಕು ಕಟ್ಟಡ ತೆರವುಗೊಳಿಸಿದರೆ ಕುಮಟಾದ ಚತುಷ್ಪಥ ಸಾಕಷ್ಟು ಅಗಲವಾಗಿ ರಗಳೆ ತಪ್ಪುತಿತ್ತೆಂದು ಎಂಬ ಅಭಿಪ್ರಾಯ ಸಾಮಾನ್ಯವಾಗಿದೆ. ಆದರೆ, ನಕಲಿ ದೇಶ ಭಕ್ತರ ಅಸಲೀ ಕೈಂಕರ್ಯದ ಮುಂದೆ ಸ್ಥಳೀಯರ ಅಳಲು ಅರಣ್ಯರೋದನವಾಗಿದೆ.
-ವಲಲ





