ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದ್ದಕ್ಕಿದ್ದಂತೆಯೇ ಬೇಡ್ತಿ-ವರದಾ ಮತ್ತು ಬೇಡ್ತಿ-ಧರ್ಮ-ವರದಾ ನದಿ ಜೋಡಣೆ ಎಂಬ ಅವಳಿ ಗುಮ್ಮಗಳು ಎದ್ದು ಕುಳಿತು ಬೆಚ್ಚಿ ಬೀಳಿಸಿವೆ. ಸ್ವರ್ಣವಲ್ಲೀ ಸ್ವಾಮಿ, ಎಂಪಿ ಕಾಗೇರಿ ಮತ್ತು ಬೊಮ್ಮಾಯಿಗಳ ನಡೆ ಅನುಮಾನಕ್ಕೆಡೆಮಾಡಿದೆ. ನದಿ ಜೋಡಣೆ ಒಂದು ನಿರುಪಯುಕ್ತ-ಪರಿಸರ ಹಾಳುಗೆಡುವ-ಬೊಕ್ಕಸ ಲೂಟಿ ಮಾಡುವ ಪ್ರಳಯಾಂತಕ ಯೋಜನೆ ಎಂಬುದಕ್ಕೆ ಎರಡು ಮಾತೇ ಇಲ್ಲ.
ಉತ್ತರ ಕನ್ನಡವೆಂದರೆ ಪ್ರಳಯಾಂತಕ ಸರಕಾರಿ ಯೋಜನೆಗಳ ಪ್ರಯೋಗ ಶಾಲೆಯೆಂಬ ಮಾತೊಂದಿದೆ. ಈ ನತದೃಷ್ಟ ಜಿಲ್ಲೆಯ ಕಾಡು, ನದಿ, ಸಮುದ್ರದ ಮೇಲೆ ಅಭಿವೃದ್ಧಿ ನೆಪದಲ್ಲಿ ಆಗುತ್ತಿರುವ ಪ್ರಹಾರಕ್ಕೆ ಸಸ್ಯ-ಪ್ರಾಣಿ-ಪಕ್ಷಿಯೇ ಮುಂತಾದ ಜೀವ ಸಂಕುಲ ಮತ್ತು ಅಮಾಯಕ ಮಂದಿಯ ಬದುಕು ಬರ್ಬಾದ್ ಆಗಿಹೋಗಿದೆ! ಜಿಲ್ಲೆಯ ಧಾರಣಾ ಸಾಮರ್ಥ್ಯಕ್ಕೆ ಮೀರಿದ ಯೋಜನೆಗಳ ಹೊರೆಯನ್ನು ಸ್ಥಳೀಯ ನದಿ, ಸಮುದ್ರ ತೀರದಲ್ಲಿ ಹೊರೆಸಲಾಗುತ್ತಿದೆ. ಕೋಟ್ಯಂತರ ಜೀವರಾಶಿಯನ್ನು ಪೊರೆಯುತ್ತಿರುವ ಜಿಲ್ಲೆಯ ಜೀವ ನದಿಗಳಾದ ಕಾಳಿ, ಶರಾವತಿ, ಅಘನಾಶಿನಿ, ಬೇಡ್ತಿ, ಗಂಗಾವಳಿಯ ಜೀವ ಹೀರುವ ಯೋಜನೆಗಳನ್ನು ಸರಕಾರಿ ಪರ್ಯಾವರಣ ಪಂಡಿತರು ಒಂದರ ಹಿಂದೊಂದರಂತೆ ಸಿದ್ಧಪಡಿಸುತ್ತಲೇ ಇದ್ದಾರೆ. ಈ ಅವಸರ-ಅತಿರೇಕದ ಯೋಜನೆಗಳ ಸಾಧಕ-ಬಾಧಕದ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ ಆಳುವ ಮಂದಿ ಕಿಕ್ ಬ್ಯಾಕ್ ಆಸೆಯಿಂದ ಯೋಜನೆಗಳ ಅನುಷ್ಠಾನಕ್ಕೆ ಆಸ್ಥೆ ವಹಿಸುತ್ತಿದ್ದಾರೆಂಬ ಆರೋಪ-ಆಕ್ಷೇಪ ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ.
ವಿದ್ಯುತ್, ನೀರಾವರಿ, ಕುಡಿಯುವ ನೀರು ಪೂರೈಕೆ ಎಂದಾಕ್ಷಣ ಆಳುವವರ ಅಧಿಕಾರಿ ಗಣದ ಕಣ್ಮುಂದೆ ಕಾಣಿಸುವುದೆ ಉತ್ತರ ಕನ್ನಡದ ಸಮೃದ್ಧ ನದಿ-ತೊರೆ-ಕಾಡು-ಕಣಿವೆ-ಸಮುದ್ರ! ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಗೆ ನೀಲ ನಕ್ಷೆ ಹಾಕಿಕೊಂಡಿರುವ ಅಧಿಕಾರಸ್ಥರಿಗೆ ಹೊನ್ನಾವರ-ಸಾಗರ ಸೀಮೆಯ ಮಂದಿ ಪ್ರಬಲ ಪ್ರತಿರೋಧ ಒಡ್ಡುತ್ತಿದ್ದಾರೆ. ಮತ್ತೊಂದೆಡೆ ಸಿದ್ದಾಪುರದ ಅಘನಾಶಿನಿ ನದಿಯನ್ನು ಬಯಲು ಸೀಮೆಯ ವೇದಾವತಿ ನದಿಗೆ ಜೋಡಿಸುವ ನಾಜೂಕಾದ ಕಾರ್ಯಾಚರಣೆ ಆಗುತ್ತಿದೆ. ಈ ನಡುವೆ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದ್ದಕ್ಕಿದ್ದಂತೆಯೇ ಬೇಡ್ತಿ-ವರದಾ ಮತ್ತು ಬೇಡ್ತಿ-ಧರ್ಮ-ವರದಾ ನದಿ ಜೋಡಣೆ ಎಂಬ ಅವಳಿ ಗುಮ್ಮಗಳು ಎದ್ದು ಕುಳಿತು ಬೆಚ್ಚಿ ಬೀಳಿಸಿವೆ! ಅದ್ಯಾಕೋ ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಮತ್ತು ಬೇಡ್ತಿ-ವರದಾ ನದಿ ತಿರುವು ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಸ್ಥರು ಹಠ ತೊಟ್ಟಂತಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಪ್ರಾಜೆಕ್ಟ್ ಕರಾವಳಿಯ ಹೊನ್ನಾವರ-ಗೇರುಸೊಪ್ಪೆ ಭಾಗದಲ್ಲಿ ತಲ್ಲಣ ಸೃಷ್ಟಿಸಿದಹಾಗೆ ಮಲೆನಾಡಿನ ಶಿರಸಿ-ಯಲ್ಲಾಪುರ ಸೀಮೆಯಲ್ಲಿ ಬೇಡ್ತಿ(ಗಂಗಾವಳಿ)-ವರದಾ ನದಿ ತಿರುವು ಯೋಜನೆ ಆತಂಕ ಮೂಡಿಸಿದೆ.
ಯೋಜನೆಯ ಕಥೆ-ವ್ಯಥೆ
ಬಿಜೆಪಿಯ ವಾಜಪೇಯಿ ಪ್ರಧಾನ ಮಂತ್ರಿಗಿರಿ ಕಾಲ ಕೀರ್ದಿಯಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ‘ರಾಷ್ಟ್ರೀಯ ದೃಷ್ಟಿಕೋನ ಯೋಜನೆ’ಯಡಿಯಲ್ಲಿ ಹೆಚ್ಚುವರಿ ನೀರಿನ ಜಲಾನಯನ ಪ್ರದೇಶಗಳಿಂದ ನೀರಿನ ಕೊರತೆಯ ಜಲಾನಯನ ಪ್ರದೇಶಗಳಿಗೆ ನೀರನ್ನು ವರ್ಗಾಯಿಸುವ ಪ್ರಸ್ತಾವನೆಯನ್ನು ಕೋರಿತ್ತು. ಅದರಂತೆ ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರ (ಎನ್ಡಬ್ಲ್ಯೂಡಿಎ) ದೇಶದ 16 ಪರ್ಯಾಯ ದ್ವೀಪ ನದಿಗಳನ್ನು ಒಳಗೊಂಡಂತೆ ಒಟ್ಟೂ 30 ಕೊಂಡಿಗಳನ್ನು ಗುರುತಿಸಿತ್ತು. ಅದರಲ್ಲಿ ಕರ್ನಾಟಕದ 6 ಯೋಜನೆಗಳಿದ್ದವು. ಇವುಗಳಲ್ಲಿ ಎರಡು ಪ್ರಸ್ತಾವನೆಗಳು ಪಶ್ಚಿಮ ಘಟ್ಟದ ಹೃದಯವೆಂದೇ ಪರಿಗಣಿತವಾಗಿರುವ ಉತ್ತರ ಕನ್ನಡದ ಬೇಡ್ತಿ ನದಿ ಕೊಳ್ಳ ಮತ್ತು ಅಘನಾಶಿನಿ ನದಿ ಕಣಿವೆ ವಲಯಕ್ಕೆ ಸೇರಿವೆ. ಅವುಗಳಲ್ಲಿ ಈಗ ಹೆಚ್ಚು ಕಾಡುತ್ತಿರುವುದು ಬೇಡ್ತಿ-ಧರ್ಮ-ವರದಾ ನದಿ ತಿರುವು ಮತ್ತು ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗಳು.
ಈ ಪ್ರಸ್ತಾವನೆಗಳು ಉತ್ತರ ಕನ್ನಡದ ಯಲ್ಲಾಪುರ, ಶಿರಸಿ ತಾಲೂಕುಗಳ ಅತ್ಯಂತ ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಪಶ್ಚಿಮಕ್ಕೆ ಹರಿಯುವ ನದಿ-ತೊರೆಗಳ ನೀರನ್ನು ಪೂರ್ವದ ಬಯಲು ನಾಡಿನ ತುಂಗಭದ್ರಾ ಜಲಾನಯನ ಪ್ರದೇಶಕ್ಕೆ ತಿರುಗಿಸುವುದಾಗಿದೆ. ರಾಯಚೂರು ಜಿಲ್ಲೆಯ ತುಂಗಭದ್ರಾ ಯೋಜನಾ ಅಚ್ಚುಕಟ್ಟು ಪ್ರದೇಶದ 60,200 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲು ಉತ್ತರ ಕನ್ನಡದ ಬೇಡ್ತಿ ಜಲಾನಯನ ಪ್ರದೇಶದಿಂದ ನೀರಿನ ಕೊರತೆಯಿರುವ ತುಂಗಭದ್ರಾ ಉಪ-ಜಲಾನಯನ ಪ್ರದೇಶಕ್ಕೆ 242 ಮಿಲಿಯನ್ ಕ್ಯೂಬಿಕ್ ಮೀಟರ್(ಎಮ್ಸಿಎಮ್) ನೀರು ಹರಿಸುವುದು ಈ ಯೋಜನೆಯ ಮೂಲ ಗುರಿ.
ಈ ಯೋಜನೆ 1995ರಲ್ಲಿ ಮೊದಲ ಬಾರಿ ರೋಪುಗೊಂಡಿತ್ತು. 2008-09ರಲ್ಲಿ ಯೋಜನೆ ಜಾರಿಗೆ ನಿರ್ಧರಿಸಿದಾಗ ಪರಿಸರ ಮತ್ತು ಬೇಡ್ತಿ ನದಿ ಕಣಿವೆಯ ಹವ್ಯಕ ಬ್ರಾಹ್ಮಣ ಅಡಕೆ ತೋಟಿಗರ ಪ್ರಬಲ ಪ್ರತಿರೋಧದಿಂದ ನನೆಗುದಿಗೆ ಬಿದ್ದಿತ್ತು. ಉತ್ತರ ಕನ್ನಡದ ಘಟ್ಟದ ಮೇಲಿನ ಪ್ರಭಾವಿ ಹವ್ಯಕರ ಕುಲ ಗುರು ಸ್ವರ್ಣವಲ್ಲಿ ಮಠಾಧೀಶರೇ ಈ ಪ್ರತಿಭಟನೆಯ ಅಧ್ವರ್ಯ ವಹಿಸಿದ್ದರು. ಅತ್ತ ಬಯಲು ಸೀಮೆಯ ಭಾಗದ ಪ್ರತಿಷ್ಠೆಯ ನಾಯಕ ಬಸವರಾಜ ಬೊಮ್ಮಾಯಿ ಸದ್ರಿ ಯೋಜನೆ ಪರವಾಗಿದ್ದರು. ಬರ ಪ್ರದೇಶವಾದ ಹಾವೇರಿ-ಗದಗ ಸುತ್ತಮುತ್ತಲಿನಲ್ಲಿ ಬೇಡ್ತಿ ನೀರಿಗಾಗಿ ದಶಕಗಳಿಂದ ರೈತರ ಹೋರಾಟವಾಗುತ್ತಿದೆ. ಹೀಗಾಗಿ ಬೇಡ್ತಿ-ವರದಾ ನದಿ ತಿರುವು ಯೋನಜನೆ ಅನುಷ್ಠಾನ ಬಸು ಬೊಮ್ಮಾಯಿಯ ದಮ್ಮು-ಇಜ್ಜತ್ತಿನ ಪ್ರಶ್ನೆಯಾಗಿದೆ. ಹೀಗಾಗಿ ಬೊಮ್ಮಾಯಿ ಜಲ ಸಂಪನ್ಮೂಲ ಮಂತ್ರಿ, ಮುಖ್ಯಮಂತ್ರಿಯಾದಾಗೆಲ್ಲ ಈ ಪ್ರಾಜೆಕ್ಟ್ ಪ್ರಾರಂಭಕ್ಕೆ ಸತತ ಪ್ರಯತ್ನಗಳಾದವು. ಅದವರ ವರ್ತಮಾನದ ಅಸ್ತಿತ್ವ ಮತ್ತು ಮಗನ ಭವಿಷ್ಯದ ರಾಜಕಾರಣಕ್ಕೆ ಅನಿರ್ವಾಯವೂ ಆಗಿತ್ತು.

2017ರಲ್ಲಿ ಒಂದಿಷ್ಟು ಮಾರ್ಪಡಿಸಿ ಯೋಜನೆಯನ್ನು ಮರುವಿನ್ಯಾಸಗೊಳಿಸಲಾಯಿತು. ಬೇಡ್ತಿ-ವರದಾ ನದಿಗೆ ಎರಡು ಲಿಂಕ್ ಯೋಜನೆಗಳನ್ನು ಸರಕಾರಿ ‘ಪಂಡಿತರು’ ತಯಾರಿಸಿದರು. ಪ್ರಸ್ತಾವನೆ ಪೂರ್ವ ಕಾರ್ಯಸಾಧ್ಯತಾ ವರದಿಯನ್ನು ಎನ್ಡಬ್ಯೂಡಿಎ 2021ರಲ್ಲಿ ಸಲ್ಲಿಸಿತು. 2022ರಲ್ಲಿ ಯೋಜನೆಯಲ್ಲಿ ಮತ್ತೆ ಬದಲಾವಣೆ ಮಾಡಲಾಯಿತು. ಬೊಮ್ಮಾಯಿ ‘ಇಚ್ಛಾಶಕ್ತಿ’ಯಿಂದ ಈ ಕಾರ್ಯಸಾಧ್ಯವಲ್ಲದ ಯೋಜನೆ ಮರುಜೀವ ಪಡೆದುಕೊಂಡಿತು. ಬೊಮ್ಮಾಯಿಯವರೇ ವಿವರಿಸುವಂತೆ, ಇದು ಎರಡು ಲಿಂಕ್‌ಗಳ ಯೋಜನೆ. ಒಂದು, ಬೇಡ್ತಿ-ವರದಾ ನದಿಗಳನ್ನು ನೇರವಾಗಿ ಜೋಡಿಸುವ ನ್ಯಾಷನಲ್ ಪ್ರಸ್ಪೆಕ್ಟಿವ್ ಪ್ರಾಜೆಕ್ಟ್. ಮತ್ತೊಂದು, ಬೇಡ್ತಿ-ಧರ್ಮ-ವರದಾ ನದಿಗಳನ್ನು ಲಿಂಕ್‌ಗಳ ಮೂಲಕ ಜೋಡಿಸುವುದು. ಮೊದಲ ಯೋಜನೆಯಲ್ಲಿ 10.66 ಟಿಎಂಸಿ ಮತ್ತು ಎರಡನೇ ಯೋಜನೆಯಲ್ಲಿ 7.84 ಟಿಎಂಸಿ ನೀರನ್ನು ಸಂಗ್ರಹಿಸಲಾಗುತ್ತದೆ. ಒಟ್ಟೂ 18 ಟಿಎಂಸಿಗೂ ಹೆಚ್ಚು ನೀರನ್ನು ವರದಾ ನದಿಗೆ ಹರಿಸಲಾಗುತ್ತದೆ. ತುಂಗಭದ್ರ ಡ್ಯಾಮ್‌ನಲ್ಲಿ ಹೂಳು ತುಂಬಿರುವುದರಿಂದ ಆ ನೀರನ್ನು ಶಿರಹಟ್ಟಿ ಬಳಿ ನಿರ್ಮಿಸಲಾಗುವ ಬ್ಯಾರೇಜ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಅದು ಅಂತಿಮವಾಗಿ ತುಂಗಭದ್ರ ನದಿಗೆ ಸೇರಿಸಲಾಗುತ್ತದೆ.
ರೂಪಾಂತರಗೊಂಡಿರುವ ಯೋಜನೆಯಂತೆ ಮಲೆನಾಡಿನ ಬೇಡ್ತಿ, ಶಾಲ್ಮಲಾ ಮತ್ತು ಪಟ್ಟಣದ ಹೊಳೆ ಎಂಬ ಮೂರು ನದಿ-ತೊರೆಗಳ ನೀರನ್ನು ವರದಾ ನದಿಗೆ ತಿರುಗಿಸಲಾಗುತ್ತದೆ. ಶಿರಸಿಯ ವಾನಳ್ಳಿಯಲ್ಲಿ ಹರಿಯುವ ಪಟ್ಟಣದ ಹೊಳೆಗೆ ಮೆಣಸಗೋಡ ಎಂಬಲ್ಲಿ ಅಣೆಕಟ್ಟು ಕಟ್ಟಲಾಗುತ್ತದೆ; ಶಾಲ್ಮಲಾ ಹಳ್ಳಕ್ಕೆ ಸೋಂದಾದದಲ್ಲಿ ತಡೆಹಾಕಲಾಗುತ್ತದೆ. ಪಟ್ಟಣದ ಹಳ್ಳ ಮತ್ತು ಶಾಲ್ಮಲಾ ಹೊಳೆಗಳಿಂದ ಒಟ್ಟೂ 302 ಮಿಲಿಯನ್ ಕ್ಯೂಬಿಕ್ ಮೀಟರ್ ಮತ್ತು ಬೇಡ್ತಿ ನದಿಯ ಸುರೇಮನೆ ಬ್ಯಾರೇಜ್‌ನಿಂದ 222 ಮಿಲಿಯನ್ ಕ್ಯೂಬಿಕ್ ಮೀಟರ್ ನೀರನ್ನು ಪಡೆಯಲಾಗುತ್ತದೆ. ಪಟ್ಟಣದ ಹೊಳೆ ಮತ್ತು ಶಾಲ್ಮಲಾ ಹಳ್ಳದ ಜಲಾಶಯಗಳ ನೀರನ್ನು 6.3 ಕಿಮೀ. ಕಾಲುವೆ ಮತ್ತು 2.2 ಕಿಮೀ. ಸುರಂಗದ ಮೂಲಕ ವರದಾಕ್ಕೆ ಹರಿಸಲಾಗುತ್ತದೆ.
ಶಾಲ್ಮಲಾ ಮತ್ತು ಪಟ್ಟಣದ ಹೊಳೆ ಜಲಾಶಯದ ಹಿನ್ನೀರಿನ ಕೆಂಗ್ರೆ ಎಂಬಲ್ಲಿಂದ 8.03 ಕಿಮೀ ನೀರನ್ನು ಪಂಪ್ಮಾಡಿ 6.88 ಕಿಮೀ ಸುರಂಗದ ಮೂಲಕ ಶಿರಸಿಯ ಹಕ್ಕಲಮನೆ ತನಕ ತರಲಾಗುತ್ತದೆ. ಇಲ್ಲಿಂದ ಪಟ್ಟಣದ ಹೊಳೆ ಹಾಗು ಶಾಲ್ಮಲಾ ಹಳ್ಳದ ನೀರು ಇಳಿಜಾರು ಕಾಲುವೆಯಲ್ಲಿ ಸರಾಗವಾಗಿ ಹರಿದು ಬನವಾಸಿ ಸಮೀಪದ ವರದಾ ನದಿ ಪಾತ್ರ ತಲುಪುತ್ತದೆ. ಪಟ್ಟಣದ ಹಳ್ಳ ಮತ್ತು ಶಾಲ್ಮಲಾ ಹೊಳೆಯ ಜಲಾಶಯಗಳನ್ನು ಕೇವಲ 20 ಕಿಮೀ. ಅಂತರದ ಕಾಮಗಾರಿಯಲ್ಲಿ ಜೋಡಿಸಿ ಆ ನೀರನ್ನು ಶಿರಹಟ್ಟಿ ಬ್ಯಾರೇಜ್‌ನಲ್ಲಿ ಶೇಖರಿಸಿ ತುಂಗಭದ್ರಾ ನದಿ ಮೂಲಕ ಹಾವೇರಿ, ಬ್ಯಾಡಗಿ, ಗದಗ, ಕೊಪ್ಪಳ, ರಾಣೆಬೆನ್ನೂರುಗಳ ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಅಂದಾಜು 1.6 ಲಕ್ಷ ಹೆಕ್ಟರ್ ಕೃಷಿ ಭೂಮಿಗೆ ವರ್ಷವಿಡೀ ಕೊರತೆಯಾಗದಂತೆ ನೀರೊದಗಿಸಬಹುದು; ಜತೆಗೆ ಇನ್ನಿತರ ಐದು ಜಿಲ್ಲೆಗಳ ಪ್ರಮುಖ ಪಟ್ಟಣಗಳ ಕುಡಿಯುವ ನೀರಿನ ದಾಹ ತೀರಿಸಬಹುದೆಂಬುದು ಬೊಮ್ಮಾಯಿ ‘ಚಿಂತಕರ ಚಿಲುಮೆ’ಯ ಲೆಕ್ಕಾಚಾರ.
ಮತ್ತೊಂದು ಎತ್ತಿನ ಹೊಳೆ ಯೋಜನೆ!
ವಿಫಲ ಎತ್ತಿನ ಹೊಳೆ ತಿರುವು ಯೋಜನೆಯಂತೆ ಬೇಡ್ತಿ ನದಿಯ ದಿಕ್ಕು ತಪ್ಪಿಸುವ ಯೋಜನೆಯೂ ವ್ಯರ್ಥ. ಇದೂ ಕೂಡ ನೀರಿಲ್ಲದ ನೀರಾವರಿ ಯೋಜನೆ ಆಗಲಿದೆ. ಎತ್ತಿನ ಹೊಳೆ ಯೋಜನೆ ಘೋಷಣೆಯಾದಾಗ ದಕ್ಷಿಣ ಕನ್ನಡದ ನೇತ್ರಾವತಿ ನದಿಯ ಉಪ-ನದಿಗಳಲ್ಲಿ 24 ಟಿಎಂಸಿ ನೀರು ಸಿಗಲಿದ್ದು ಅದನ್ನು ಬರದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸಲಾಗುತ್ತದೆಂದು ಬಣ್ಣ-ಬಣ್ಣದ ಗಾಳಿಪಟ ಸರಕಾರಿ ತಜ್ಞರು ಹಾರಿಸಿದ್ದರು. ಆ ಹೊತ್ತಲ್ಲಿ ಪರಿಸರ ವಿಜ್ಞಾನಿ-ಐಐಎಸ್ಸಿ ಉಪನ್ಯಾಸಕ ಡಾ.ಟಿ.ವಿ.ರಾಮಚಂದ್ರ ಎತ್ತಿನ ಹೊಳೆಯ ನೀರಿನ ಲಭ್ಯತೆ ಬಗ್ಗೆ ಅಧ್ಯಯನ ನಡೆಸಿದ್ದರು; ಆ ಹೊಳೆಯಲ್ಲಿ ಸಿಗುವುದು ಕೇವಲ 12.85 ಟಿಎಂಸಿ ನೀರಷ್ಟೇ. ಅದರಲ್ಲಿ ಸ್ಥಳೀಯ ಬಳಕೆಗೇ 12 ಟಿಎಂಸಿ ಬೇಕಾಗುತ್ತದೆ ಎಂದಿದ್ದರು. ಈ ಎಚ್ಚರಿಕೆ ಕಡೆಗಣಿಸಿ 0.85 ಟಿಎಂಸಿ ನೀರಿಗಾಗಿ 33 ಸಾವಿರ ಕೋಟಿಯ ಭರ್ಜರಿ ಪ್ರಾಜೆಕ್ಟ್ ಮಾಡಲಾಯಿತು. ಆದರೆ ಯೋಜನೆ ಶುರವಾಗಿ ದಶಕಗಳುರುಳಿದರೂ ನೀರು ಮಾತ್ರ ಕೋಲಾರ-ಚಿಕ್ಕಬಳ್ಳಾಪುರಕ್ಕೆ ಹರಿದಿಲ್ಲ!
ಬೇಡ್ತಿ ನದಿ ತಿರುವು ಯೋಜನೆಯೂ ಸಹ ಎತ್ತಿನಹೊಳೆಯಂತೆ ಬೋಗಸ್ ಆಗುವುದರಲ್ಲಿ ಯಾವ ಅನುಮಾನವೂ ಇಲ್ಲವೆಂದು ಅದೇ ಪರಿಸರ ಅಧ್ಯಯನಕಾರ ಡಾ.ರಾಮಚಂದ್ರ ಹೇಳುತ್ತಿದ್ದಾರೆ. ಯೋಜನೆಯಿಂದ ಬೇಡ್ತಿ ಸಾಯುತ್ತದೆ. ಈ ಹುಚ್ಚಾಟದಿಂದ ಇತ್ತ ಮಲೆನಾಡು-ಕರಾವಳಿಗೂ ನೀರಿಲ್ಲ; ಅತ್ತ ಬಯಲು ಸೀಮೆಗೂ ಪ್ರಯೋಜನವಿಲ್ಲ ಎಂತಾಗಲಿದೆ. ಬೇಡ್ತಿಯನ್ನು ತಿರುಗಿಸಿ ವರದೆಗೆ ಸೇರಿಸಿ ತುಂಗಭದ್ರಾ ನದಿಗೆ ಹರಿಸುವುದು ಯೋಜನೆಯ ಸಂಕಥನದಷ್ಟು ಸೊಗಸು-ಸರಳವಾಗಿಲ್ಲ ಎಂದು ಬೇಡ್ತಿ-ಗಂಗಾವಳಿ ನದಿ ಪಾತ್ರದ ಮಂದಿ ಜೀವಂತ ನಿದರ್ಶನಗಳೊಂದಿಗೆ ವಿವರಿಸುತ್ತಾರೆ. ಪಶ್ಚಿಮಕ್ಕೆ ಹರಿಯುವ ಬೇಡ್ತಿ ಮತ್ತು ಪೂರ್ವಕ್ಕೆ ಸಾಗುವ ವರದಾ ನದಿಗಳನ್ನು ಜೋಡಿಸಲು ಬಲಪ್ರಯೋಗಿಸುವುದು ದುಸ್ಸಾಹಸವಷ್ಟೇ ಅಲ್ಲ, ಅವೈಜ್ಞಾನಿಕ, ಅನೈಸರ್ಗಿಕ ಮತ್ತು ಅನಾಹುತಕಾರಿ ಎಂದು ಪರಿಸರ ತಜ್ಞರು ಅಭಿಪ್ರಾಯ ಪಡುತ್ತಾರೆ.
ಬೇಸಿಗೆ ಆರಂಭದ ಫೆಬ್ರವರಿ ತಿಂಗಳಲ್ಲೇ ಬೇಡ್ತಿ-ವರದಾ-ಅಘನಾಶಿನಿ ನದಿಗಳು ಬತ್ತಲು ಆರಂಭವಾಗುತ್ತದೆ. ಈ ನದಿಗಳು ಸರ್ವ ಋತುವಿನಲ್ಲಿ ಹರಿಯುವುದಿಲ್ಲ ಎಂಬುದು ಗೊತ್ತಿದ್ದೂ ಆಳುವವರು ಮತ್ತವರ ಸಲಹೆಗಾರರು ಮಲೆನಾಡಿನ ನದಿಗಳನ್ನು ಬಯಲು ಸೀಮೆಗೆ ತಿರುಗಿಸಿ ಅಲ್ಲಿಯ ದಾಹ-ಬರ ನೀಗುವ ನಕಲಿ ಪ್ರಾಜೆಕ್ಟ್ ತೋರಿಸುತ್ತಿರುವುದು ವಿಪರ್ಯಾಸ. ಬೇಡ್ತಿ ನದಿಯ ನೀರು ಕಣಿವೆಯ ಒಂದೂವರೆ ಲಕ್ಷ ಜನರ ಬಳಕೆ ಮತ್ತವರ ಕೃಷಿಗೇ ಸಾಕಾಗುತ್ತಿಲ್ಲ. ಈ ಯೋಜನೆಯಿಂದ ಕೋಟ್ಯಾಂತರ ರೂ.ಗಳು ಪೋಲಾಗುವುದು ಮಾತ್ರವಲ್ಲ ತಲತಲಾಂತರದಿಂದ ಬೇಡ್ತಿ ನದಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಸಾವಿರಾರು ಕುಟುಂಬಗಳು ಬೀದಿ ಪಾಲಾಗುತ್ತವೆ! ಈ ಯೋಜನೆಯಲ್ಲಿ ಒಮ್ಮೆ ನೀರೆತ್ತಲು ಬರೋಬ್ಬರಿ 61 ಮೆಗಾ ವ್ಯಾಟ್ ವಿದ್ಯುತ್ ಬೇಕು. ಇಷ್ಟಾದರೂ ನೀರು ಬಯಲು ಸೀಮೆ ಸೇರುತ್ತದೆ, ಅಲ್ಲಿಯ ಜನರ ಬದುಕು ಮತ್ತು ಹೊಲಗಳನ್ನು ಹಸನು-ಹಸಿರಾಗಿಸುತ್ತದೆ ಎಂಬುದಕ್ಕೆ ಖಾತ್ರಿಯೇನಿಲ್ಲ.
ಈ ನದಿ ಜೋಡಣೆ ಎಂಥ ಮೋಸದ ಯೋಜನೆ ಎಂಬುದನ್ನು ಬೇಡ್ತಿ ಬಳಿಯೇ ಇರುವ ಯಲ್ಲಾಪುರ ಪಟ್ಟಣಕ್ಕೆ ಕುಡಿಯುವ ನೀರೊದಗಿಸಲೆಂದು ಕೈಗೊಳ್ಳಲಾದ 20 ಕೋಟಿ ರೂಪಾಯಿಗಳ ನಿಷ್ಫಲ ಪ್ರಾಜೆಕ್ಟ್ ಸಾರಿ ಸಾರಿ ಹೇಳುತ್ತಿದೆ. 2011ರಲ್ಲಿ ಈ ಫ್ಲಾಪ್ ಪ್ಲಾನ್ ಆರಂಭವಾಗುವಾಗ ನಿಷ್ಪ್ರಯೋಜಕ-ಕಾರ್ಯಸಾಧುವಲ್ಲ ಹುಸಿ ಯೋಜನೆ ಎಂಬ ಆಕ್ಷೇಪಗಳು ವ್ಯಕ್ತವಾಗಿದ್ದವು.
ದೊಡ್ಡ ಮೊತ್ತದ ಕಾಸು ವ್ಯಯಿಸಿದರೂ ಬೇಸಿಗೆಯಲ್ಲಿ ಬೇಡ್ತಿಯಲ್ಲಿ ನೀರಿಲ್ಲದ್ದರಿಂದ ಯೋಜನೆ ನಿರರ್ಥಕವಾಯಿತು. ಕೆಲವೇ ಕೆಲವು ವಾರ್ಡ್‌ನಲ್ಲಿ ನಲ್ಲಿಗಳಲ್ಲಿ ನೀರು ತೊಟ್ಟಿಕ್ಕಿದರೂ ಇದು ಕಲುಷಿತ ನೀರೆಂದು ಜನ ಮುಟ್ಟಲಿಲ್ಲ. ಕೆಲಸಕ್ಕೆ ಬಾರದ ಯೋಜನೆಗೆಂದು ನಿರ್ಮಿಸಿದ್ದ ಪ್ರತ್ಯೇಕ ವಿದ್ಯುತ್ ಲೈನ್ ಕಾಡಿನಲ್ಲಿ ಇವತ್ತಿಗೂ ಅವಶೇಷವಾಗಿದೆ. ಜಾಕ್ವೆಲ್, ಶುದ್ಧೀಕರಣ ಘಟಕ, ಯಂತ್ರಗಳೆಲ್ಲ ತುಕ್ಕು ಹಿಡಿದು ಸರಕಾರಿ ಪ್ರಭೃತಿಗಳ ‘ಪಾಂಡಿತ್ಯ’ ಪ್ರದರ್ಶಿಸುತ್ತಿವೆ! ಉದ್ದೇಶಿತ ಬೇಡ್ತಿ-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆಗಳು ಕೋಟಿ-ಕೋಟಿಗಳ ಎತ್ತಿಹೊಳೆ ಮತ್ತು ಯಲ್ಲಾಪುರದ ನೀರಿನ ಪ್ರಾಜೆಕ್ಟ್‌ನಂತೆ ಕೈಕೊಡುವುದು ಖಂಡಿತ ಎಂಬುದು ಕಣ್ಮುಂದಿನ ದೃಷ್ಟಾಂತ!

ಪರಿಸರಕ್ಕೆ ನೇಣ!
ಬೇಡ್ತಿ ನದಿ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಬಳಿ ಹುಟ್ಟಿ ಮಲೆನಾಡು-ಕರಾವಳಿಯ ಒಟ್ಟೂ 152 ಕಿಮೀ ಉದ್ದಕ್ಕೆ ಹರಿದು ಅಂಕೋಲೆಯ ಗಂಗಾವಳಿ ಎಂಬಲ್ಲಿ ಅರಬ್ಬೀ ಸಮುದ್ರ ಸೇರುತ್ತದೆ. ಮಲೆನಾಡಲ್ಲಿ ಬೇಡ್ತಿ ಮತ್ತು ಕರಾವಳಿಯಲ್ಲಿ ಗಂಗಾವಳಿ ಎಂದು ಕರೆಯಲ್ಪಡುವ ಈ ನದಿ ತನ್ನ ಪಾತ್ರದ ಎಡ-ಬಲದ ರೈತ-ತೋಟಿಗ, ಮೀನುಗಾರರ ಮತ್ತು ಕಣಿವೆಯಲ್ಲಿರುವ ವಿವಿಧ ಬುಡಕಟ್ಟಿನ ವನವಾಸಿಗಳಿಗೆ ಜೀವನಾಡಿ; ನಾನಾ ಪ್ರಬೇಧದ ಪ್ರಾಣಿ-ಪಕ್ಷಿ-ಕೀಟ-ಜಂತು-ಜಲಚರ-ಸಸ್ಯ ಸಂಕುಲದ ಮಿಲಿಯನ್ ವರ್ಷಗಳ ಜೀವವಿಕಾಸದ ತೊಟ್ಟಿಲು. ಮಲೆನಾಡಿನಲ್ಲಿ ಲಕ್ಷಾಂತರ ಎಕರೆ ಭೂಮಿಯಲ್ಲಿ ತುತ್ತಿಗಾಧಾರವಾದ ಪೈರು-ಪಚ್ಚೆಗೆ ಮೂಲವಾಗಿರುವ ಈ ನದಿಗಳು ಕರಾವಳಿಯಲ್ಲಿ ಸಾವಿರಾರು ಮೀನುಗಾರ ಕುಟುಂಬಗಳ ಕುಲಕಸುಬಿಗೆ ಆಸರೆಯಾಗಿವೆ.
ಅಂತಾರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಒಕ್ಕೂಟ ಬೇಡ್ತಿ ಕೊಳ್ಳವನ್ನು ಜೀವ ವೈವಿಧ್ಯದ ಸಕ್ರೀಯ ಪ್ರದೇಶವೆಂದು ಘೋಷಿಸಿದೆ.ಈ ನದಿ ಕೊಳ್ಳದಲ್ಲಿ 1,741 ಬಗೆಯ ಹೂಬಿಡುವ ಸಸ್ಯಗಳು, 420 ಪ್ರಬೇಧದ ಪಕ್ಷಿಗಳು ಮತ್ತು ಅಪರೂಪದ ವನ್ಯಜೀವಿಗಳ ನೆಲೆಯೆಂದು ಗುರುತಿಸಲ್ಪಟ್ಟಿದೆ. 350ಕ್ಕೂ ಹೆಚ್ಚು ಪ್ರಾಣಿ ತಳಿಯ ಕಾರಿಡಾರ್ ಇದು. ಕರಾವಳಿಯ ನದಿ-ಸಮುದ್ರದಲ್ಲಿ ಮೀನಿನ ಸಂತತಿ ಬೆಳೆಯುವುದೇ ನದಿ ಕಾಡು-ಮೇಡಿಂದ ತರುವ ಪೌಷ್ಟಿಕಾಂಶಗಳಿಂದ. ನದಿ ಈ ಪೋಷಕಾಂಶ ಸಾಗಿಸುವುದರಿಂದಲೇ ಗಂಗಾವಳಿ ನದಿಯ ಮುಖಜ ಪ್ರದೇಶದಲ್ಲಿ ಮೀನಿನ ಸಂತತಿ ಉಳಿದುಕೊಂಡಿದೆ ಎಂದು ಜಲ ವಿಜ್ಞಾನಿಗಳು ಹೇಳುತ್ತಾರೆ. 1980ರ ವನ್ಯಜೀವಿ ರಕ್ಷಣಾ ಕಾಯ್ದೆ ಪ್ರಕಾರ ಬೇಡ್ತಿ-ಶಾಲ್ಮಲಾ ನದಿ ತೀರ ಪ್ರದೇಶವನ್ನು ‘ಪರಿಸರ ಸೂಕ್ಷ್ಮ ವಲಯ'(ಇಎಸ್‌ಜಡ್) ಎಂದು ಸರಕಾರವೇ ಹೇಳಿದೆ. ಸುಪ್ರೀಮ್ ಕೋರ್ಟ್ಇಎಸ್‌ಜಡ್ ವಲಯದಲ್ಲಿ ಯಾವುದೇ ಉದ್ದೇಶಕ್ಕಾಗಿ ಯಾವುದೇ ಬಗೆಯ ಶಾಶ್ವತ ರಚನೆ-ನಿರ್ಮಾಣಕ್ಕೆ ಅವಕಾಶ ಕೊಡಕೂಡದೆಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಇಂಥ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಸಾವಿರಾರು ಟನ್ ಸಿಡಿಮದ್ದು ಸ್ಫೋಟಿಸಿ ಸುರಂಗ ಕೊರೆಯಲಾಗುತ್ತದೆ; ಕಾಲುವೆ-ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಸ್ಫೋಟಕಗಳ ರಣ ಭಯಂಕರ ಸದ್ದು-ಗದ್ದಲ-ಕಂಪನಕ್ಕೆ ಕೊಳ್ಳದ ಜೀವಜಾಲ ದ್ವಂಸವಾಗುತ್ತದೆ; ಮನುಷ್ಯ, ಪ್ರಾಣಿ, ಪಕ್ಷಿ, ಕೀಟ, ಸರೀಸೃಪಗಳೆಲ್ಲ ದಿಕ್ಕಾಪಾಲಾಗುತ್ತವೆ. ಕಾಮಗಾರಿಯಿಂದ ಗುಡ್ಡ-ಕಣಿವೆಯ ಮೇಲ್ಮಣ್ಣು ಸವಕಳಿಯಾಗಿ ಮಳೆಗಾಲದಲ್ಲಿ ಭೀಕರ ಭೂ ಕುಸಿತವಾಗುತ್ತದೆ. ಇದರಿಂದ ಹತ್ತಿರದಲ್ಲೇ ಇರುವ ವಿದ್ಯುತ್ ಉತ್ಪಾನೆಯ ಡ್ಯಾಮುಗಳಿಗೆ ಗಂಡಾಂತರವಾಗಲಿದೆ; ಕೊಳ್ಳದ ಹಳ್ಳಿಗರ ಬಾಳು ಗೋಳಾಗಲಿದೆ; ಯೋಜನೆ ತಲೆಮಾರುಗಳಿಂದ ನದಿಯೊಂದಿಗೆ ಬದುಕು ಕಟ್ಟಿಕೊಂಡವರ ಮನೆ-ತೋಟ-ಗದ್ದೆ-ಜೀವನಾಧಾರ ಕಸುಬನ್ನೆಲ್ಲ ಮುಳುಗಿಸಿ ನಿರಾಶ್ರಿತರಾಗಿಸುತ್ತದೆ.
ಬಯಲು ನಾಡಿಗೆ ಬೇಡ್ತಿ-ವರದಾ ನದಿಗಳ ಜೋಡಣೆಯಿಂದ ಭರಪೂರ ನೀರು ಸಿಗಲಿದೆ; ಈ ನೀರನ್ನು ಬಯಲು ಸೀಮೆಗೆ ಹರಿಸಲಾಗುತ್ತದೆ ಎಂದು ಹಾವೇರಿ ಭಾಗದ ನಾಯಕ-ಮಾಜಿ ಸಿಎಂ-ಹಾಲಿ ಸಂಸದ ಬಸು ಬೊಮ್ಮಾಯಿ ಮತ್ತವರ ಸರಕಾರಿ ಯೋಜನಾ ತಜ್ಞರು-ತಂತ್ರಜ್ಞರು ಹೇಳುವುದೇ ಮೂರ್ಖತನದ ಪರಮಾವಧಿ. ಬೇಡ್ತಿ-ಅಘನಾಶಿನಿ ನದಿಯಲ್ಲಿ ಮಳೆಗಾಲದ ಮೂರು ತಿಂಗಳು ಬಿಟ್ಟರೆ ಉಳಿದ 9 ತಿಂಗಳು ನೀರಿನಾಳ ತೀರಾ ಕಡಿಮೆ ಆಗುತ್ತದೆ. ಹಾಗಾಗಿ ಈ ಭ್ರಮೆಯ ಯೂಜನೆಯಿಂದ ಒಂದಿಷ್ಟು ರಾಜಕಾರಣಿ, ಕಂಟ್ರಾಕ್ಟರ್, ಸಿಮೆಂಟ್, ಕಬ್ಬಿಣ, ಗ್ರಾನೈಟ್ ಲಾಬಿಗೆ ಲಾಭ ತರಲಿದೆಯಷ್ಟೇ ಎಂದು ಪರಿಸರ ಹೋರಾಟಗಾರರು, ಪರಿಸರ ತಜ್ಞರು ಪೂರಕ ದಾಖಲೆ, ದತ್ತಾಂಶ ಮುಂದಿಟ್ಟು ತರ್ಕಿಸುತ್ತಾರೆ.
ಪಶ್ಚಿಮ ಘಟ್ಟದ ಪರಿಸರಕ್ಕೆ ಮಾರಕವಾದ ಈ ನದಿ ದಿಕ್ಕು ತಪ್ಪಿಸುವ ಯೋಜನೆ ಜಾರಿಯಾದರೆ ಸುಮಾರು 1,005 ಹೆಕ್ಟೇರ್ ಪ್ರದೇಶ ಮುಳುಗಡೆಯಾಗುತ್ತದೆ. ಇದರಲ್ಲಿ 787 ಹೆಕ್ಟೇರ್ ಅರಣ್ಯ, 130 ಹೆಕ್ಟೇರ್ ಕೃಷಿ ಭೂಮಿ ಮತ್ತು 88 ಹೆಕ್ಟೇರ್ ಕೃಷಿಯೇತರ ಬಳಕೆಯಲ್ಲಿರುವ ಭೂಮಿ. ಸುಮಾರು ಒಂದು ಸಾವಿರ ಜನರಿರುವ ಹಳ್ಳಿಯೂ ಮುಳುಗಲಿದೆ. ಅರಣ್ಯ ನಾಶದಿಂದ ಕಣಿವೆಯ ಜಲ ವಿಜ್ಞಾನ ಚಕ್ರ, ಮಾನ್ಸೂನ್ ಮಾದರಿ ಮತ್ತು ಹವಾಮಾನ ಪರಿಸ್ಥಿತಿಯಲ್ಲಿ ಅಸಮತೋಲನ ಆಗಲಿದೆ. ಒಂದು ಅಧ್ಯಯನ ಹೇಳುವಂತೆ, ಪಶ್ಚಿಮ ಘಟ್ಟದ ಉಷ್ಣಾಂಶ ಸುಮಾರು 1.5 ಡಿಗ್ರಿ ಹೆಚ್ಚಾಗಿದೆ. ನದಿ ತಿರುವಿನಂಥ ಹುಚ್ಚು ಯೋಜನೆಗಳಿಂದ ಪಶ್ಚಿಮ ಘಟ್ಟದ ತಾಪಮಾನ ಇನ್ನಷ್ಟು ವಿಪರೀತವಾಗಲಿದೆ. ಒಂದು ಕಾಲದಲ್ಲಿ ಕಾಡಿನ ಜಿಲ್ಲೆ ಎನಿಸಿದ್ದ ಉತ್ತರ ಕನ್ನಡದಲ್ಲಿ ಶೇ. 82ರಷ್ಟು ಅರಣ್ಯವಿತ್ತು. ಈಗದು ಶೇ. 10ಕ್ಕೆ ಕುಸಿದಿದೆ. ಜಿಲ್ಲೆಯಲ್ಲಿ ಈಗ ಕಾಣುವುದು ಪಾಂಟ್ಲೇಶನ್-ನೆಡುತೋಪು ಕಾನನವಷ್ಟೇ.

ಬೇಡ್ತಿ ನದಿಯನ್ನು ಬಲಾತ್ಕಾರದಿಂದ ಅನೈಸರ್ಗಿಕವಾಗಿ ತಿರುಗಿಸಿದರೆ ಆಗುವ ಅನಾಹುತ ಒಂದೆರಡಲ್ಲ. ಪಶ್ಚಿಮ ಘಟ್ಟದ ಅರಣ್ಯ, ಗೋಮಾಳ, ಕೃಷಿ ಭೂಮಿ ನಾಶವಾಗುತ್ತದೆ; ಕಾಡು ಪ್ರಾಣಿಗಳ ಆವಾಸಸ್ಥಾನ ಛಿದ್ರವಾಗುತ್ತದೆ; ಮಾನವ-ಕಾಡು ಪ್ರಾಣಿ ಸಂಘರ್ಷ ಆಗಲಿದೆ. ಗೌಳಿ, ಸಿದ್ಧಿ, ಕುಣಬಿ, ಹಾಲಕ್ಕಿ ಒಕ್ಕಲು, ಕರೆ ಒಕ್ಕಲು ಮುಂತಾದ ವನವಾಸಿಗಳ ಮತ್ತು ಮೀನುಗಾರರ ಜೀವನೋಪಾಯ ಕಸುಬಿಗೆ ಸಂಚಕಾರ ಬರಲಿದೆ. ನದಿಯ ಕೆಳ ಭಾಗದಲ್ಲಿರುವ ಜನರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತೆ; ನದಿ ಮುಖದಲ್ಲಿರುವ ಸಸ್ಯ-ಪ್ರಾಣಿಗಳ ಬದುಕಿಗೆ ಧಕ್ಕೆಯಾಗುತ್ತದೆ. ನದಿಯ ಸಹಜ ಹರಿವು ಕಡಿಮೆಯಾದರೆ ಕರಾವಳಿಯ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗಿ ಬಂಜರಾಗುತ್ತದೆ. ಬಾವಿಗಳ ನೀರು ಸಿಹಿ ಅಂಶ ಕಳೆದುಕೊಂಡು ಕುಡಿಯಲು ಬಾರದಂತಾಗುತ್ತದೆ.
ಅಂರ್ಜಲ ಬತ್ತುತ್ತದೆ. ನದಿಯ ‘ಹೆಚ್ಚುವರಿ’ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆಂದು ಸರಕಾರಿ ತಂತ್ರಜ್ಞರು-ವಿಜ್ಞಾನಿಗಳು ಹೇಳುವುದೆ ಅನರ್ಥಕಾರಿ. ಹೆಚ್ಚುವರಿ ನೀರೆಂಬುದೇ ನದಿ ಪಾತ್ರಗಲ್ಲಿ ಇರಲಾರದು. ನದಿಗಳು ಹರಿವಿನುದ್ದಕ್ಕೂ ಜೀವ ಜಗತ್ತನ್ನು ಪೋಷಿಸುತ್ತ, ಜನರ ಬದುಕು ಕಟ್ಟುತ್ತದೆ. ಬೇಡ್ತಿ ನದಿ ಪಾತ್ರದುದ್ದಕ್ಕೂ ಕೃಷಿ ಮತ್ತಿತರ ಅಗತ್ಯಗಳಿಗೆ ಬಳಕೆಯಾಗಿ ನಂತರ ಸಮುದ್ರ ಸೇರುವಾಗಲೂ ಜಲಚರಗಳಿಗೆ ಅನಿವಾರ್ಯ ಜೀವ ದೃವ್ಯವಾಗುತ್ತದೆ; ಬೇಡ್ತಿ ಸಮುದ್ರ ಸೇರುವ ಅಳಿವೆ(ಸಂಗಮ)ಯಲ್ಲಿ ಮೀನು, ಚಿಪ್ಪು ಸಂಗ್ರಹಿಸಿ ಜೀವಿಸುವ ಮೀನಗಾರರಿಗೆ ಮತ್ತು ಗಜನಿಯಲ್ಲಿ ಭತ್ತ ಬೇಸಾಯದ ಮಾಡುವ ರೈತರಿಗೆ ಜೀವ ಜಲವಾಗಿದೆ ಎಂದು ಪರಿಸರ ವಿಜ್ಞಾನಿಗಳು ಹೇಳುತ್ತಾರೆ. ಹಾಗೊಮ್ಮೆ ಬೇಡ್ತಿ ನದಿ ತಿರುವು ಯೋಜನೆ ಆಗಿದ್ದೇ ಆದರೆ ಘಟ್ಟದ ಕೆಳಗಿನ-ಕರಾವಳಿ-ಬೆಸ್ತ ಪರಿವಾರಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಅಳಿವೆಯಲ್ಲಿ ಉಪ್ಪು-ಸಹಿ ನೀರಿನ ಸಮತೋಲನ ತಪ್ಪಿ ಮೀನು-ಚಿಪ್ಪು ಸಂತತಿ ನಾಶವಾಗುತ್ತದೆ; ತಲತಲಾಂತರದ ಕುಲಕಸುಬು ಕಳೆದುಕೊಂಡು ಮೀನುಗಾರರು ನಿರ್ಗತಿಕರಾಗುತ್ತಾರೆ.
ಬೇಡ್ತಿ ನದಿಯಿಂದ ಮುಂಡಗೋಡ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ; ಗಂಗಾವಳಿ ನದಿ ನೀರಿಂದ ಕಾರವಾರ, ಅಂಕೋಲಾ ತಾಲ್ಲೂಕುಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಕದಂಬ ನೌಕಾ ನೆಲೆಯ ನೀರೊದಗಿಸುವ ಚೆಕ್ ಡ್ಯಾಮ್ ಇದೆ. ವರದೆ ಪಾತ್ರದಲ್ಲಿರುವ ತಿಗಣಿ ಸಮೀಪ ಒಡ್ಡು ಹಾಕಿ ಕೃಷಿಗೆ ಬಳಸಲಾಗುತ್ತಿದೆ. ವರದಾ ನದಿಯ ನೀರು ಬನವಾಸಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವುದಕ್ಕೆ ಸರಬರಾಜಾಗುತ್ತಿದೆ. ಬೇಡ್ತಿ-ಧರ್ಮ-ವರದಾ ನದಿಗಳ ಬಲವಂತದ ಜೋಡಣೆಯಿಂದ ಸ್ಥಳೀಯ ಅಗತ್ಯ-ಅನಿವಾರ್ಯ ಯೋಜನೆಗಳೆಲ್ಲ ನಿಷ್ಪ್ರಯೋಜಕವಾಗುತ್ತವೆ! ಒಟ್ಟಿನಲ್ಲಿ ಬೇಡ್ತಿ-ವರದಾ ನದಿ ಜೋಡಣೆಯಿಂದ ಅನುಕೂಲಕ್ಕಿಂತ ಹಾನಿ-ಹಿಂಸೆಯೇ ಜಾಸ್ತಿ!
ಬೇಕು-ಬೇಡ ಹೋರಾಟ!
ಉತ್ತರ ಕನ್ನಡದ ಶಿರಸಿ-ಯಲ್ಲಾಪುರ ಸೀಮೆಯಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯಿಂದ ನಮ್ಮ ಬದುಕು ಬರಿದಾಗುತ್ತದೆಂಬ ಆಕ್ರೋಶದ ಪ್ರತಿಭಟನೆ ಭುಗಿಲೆದ್ದಿದೆ; ಅತ್ತ ಹಾವೇರಿ ಮತ್ತು ಗದಗ ಜಿಲ್ಲೆಯಲ್ಲಿ ಬೇಡ್ತಿ-ವರದಾ-ತುಂಭದ್ರ ನದಿಗಳ ಸೇರಿಸುವ ಯೋಜನೆಯಿಂದ ತಮ್ಮ ಬದುಕಿನ ಭಾಗ್ಯದ ಬಾಗಿಲು ತೆರೆಯುತ್ತದೆ; ಆದಷ್ಟ ಬೇಗ ಯೋಜನೆ ಆರಂಭವಾಗಲಿ ಎಂಬ ಹೋರಾಟ ಶುರುವಾಗಿದೆ. ಹೇಗೆ ಉತ್ತರ ಕನ್ನಡದಲ್ಲಿ ದಶಕಗಳಿಂದ ಈ ಪರಿಸರ ಮಾರಕ ಪ್ರಾಜೆಕ್ಟ್ ಬೇಡವೇ ಬೇಡ ಎಂಬ ಆಗ್ರಹವಾಗುತ್ತಿದೆಯೋ ಹಾಗೇಯೇ ಬಯಲು ಸೀಮೆಯಲ್ಲಿ ಹತ್ತಾರು ವರ್ಷದಿಂದ ನದಿ ಜೋಡಣೆ ಬೇಡಿಕೆ ಮುಂದಿಟ್ಟು ರೈತರು ಆಂದೋಲನ ನಿರತರಾಗಿದ್ದಾರೆ. ಎರಡೂ ಜಿಲ್ಲೆಯಲ್ಲಿ ಮಠಾಧೀಶರು ಚಳವಳಿಯ ಮುಂಚೂಣಿಯಲ್ಲಿದ್ದಾರೆ. ಹಾವೇರಿ-ಗದಗ ಪ್ರತಿಭಟನೆಗಳ ಮುಂದಾಳತ್ವ ಅಲ್ಲಿಯ ಸಂಸದ-ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಹಿಸಿದ್ದರೆ, ಉತ್ತರ ಕನ್ನಡದಲ್ಲಿ ಸ್ಥಳಿಯ ಸಂಸದ-ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ‘ತಮ್ಮವರ’ ಬೆನ್ನಿಗೆ ನಿಂತಿದ್ದಾರೆ.

ಉತ್ತರ ಕನ್ನಡ ಮತ್ತು ಹಾವೇರಿ-ಗದಗ ಜಿಲ್ಲೆಯ ನದಿ ತಿರುವು ಯೋಜನೆ ಬೇಕು-ಬೇಡ ಸಂಘರ್ಷ ಸ್ಥಳೀಯ ಬಿಜೆಪಿ ಎಂಪಿಗಳ ಒಣ ಪ್ರತಿಷ್ಠೆಯ ಪ್ರಶ್ನೆಯಾಗಿದೆ! ಪರ-ವಿರುದ್ಧ ಸಮರ ಬಿರುಸಾಗುತ್ತಿದೆ. ಕೇಂದ್ರದ ನೀರಾವರಿ ಸಚಿವ ಸಿ.ಆರ್.ಪಾಟೀಲ್ ಮತ್ತು ಅದೇ ಖಾತೆಯ ರಾಜ್ಯ ಮಂತ್ರಿ ಸೋಮಣ್ಣರನ್ನು ಹಿಡಿದುಕೊಂಡು ಬೊಮ್ಮಾಯಿ ಶತಾಯಗಾತಾಯ ಯೋಜನೆಯ ಡಿಪಿಆರ್(Detailed Project Report) ತಯಾರಿಕೆಗೆ ಪ್ರಯತ್ನಿಸುತ್ತಿದ್ದಾಗ ಇತ್ತ ಉತ್ತರ ಕನ್ನಡದಲ್ಲಿ ಪ್ರತಿರೋಧದ ಕಿಚ್ಚು ಜೋರಾಗಿದೆ. ತಾನೇ ತೆರವು ಮಾಡಿಕೊಟ್ಟಿದ್ದ ಶಿಗ್ಗಾವಿ-ಸವಣೂರು ವಿಧಾನ ಸಭಾ ಕ್ಷೇತ್ರದ ಉಪ-ಚುನಾಣೆಯಲ್ಲಿ ಮುಗ್ಗರಿಸಿದ ಮಗನನ್ನು ನದಿ ಜೋಡಣೆ ಹೋರಾಟದ ಮೂಲಕ ‘ಲೀಡರ್’ ಮಾಡುವ ಇರಾದೆ ಬೊಮ್ಮಾಯಿದೆಂದು ಹೇಳುವವರೂ ಇದ್ದಾರೆ. ಉತ್ತರ ಕನ್ನಡದ ಸಂಸದ ಕಾಗೇರಿ ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಮತ್ತು ಯಲ್ಲಾಪುರದ ಎಮ್ಮೆಲ್ಲೆ ಶಿವರಾಮ್ ಹೆಬ್ಬಾರ್ ಜತೆಗಿಟ್ಟುಕೊಂಡು ಒಂದು ನಿಯೋಗ ಹಿಂದಿನ ಸಿಎಂ ಸಿದ್ದು ಬಳಿಗೊಯ್ದು, ವಿಸ್ತ್ರತ ಯೋಜನಾ ವರದಿ(ಡಿಪಿಆರ್) ತಯಾರಿಕೆ ಬೇಡ-ಉತ್ತರ ಕನ್ನಡಕ್ಕೆ ಹಾನಿ ಮಾಡುವ ಈ ಯೋಜನೆಗೆ ತಡೆಹಾಕಿ ಎಂದು ಹೇಳಿದ್ದರು. ಸ್ಥಳೀಯ ಜನರ ಒತ್ತಡ ದಿನಗಳೆದಂತೆ ಹೆಚ್ಚಾಗುತ್ತಿರುವುದರಿಂದ ಬೊಮ್ಮಾಯಿ-ಕಾಗೇರಿ ಇಬ್ಬರ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಈಗ ಯೋಜನೆಯ ಡಿಪಿಆರ್ ಪ್ರಕ್ರಿಯೆ ಪ್ರಾರಂಭವಾಗಿದೆ; ಸ್ಥಳ ಸಮೀಕ್ಷೆ ಟೆಂಡರ್ ಖಾಸಗಿ ಕಂಪನಿಯೊಂದಕ್ಕೆ ವಹಿಸಲಾಗಿದೆ. ಕಳೆದ ಒಂದು ವರ್ಷದಿಂದ ಪಾದಯಾತ್ರೆ, ಜನಸಮಾವೇಶ, ಪತ್ರ ಚಳವಳಿ, ವಿಜ್ಞಾನಿ-ತಂತ್ರಜ್ಞರ ವಿಚಾರಗೋಷ್ಠಿ ಮೂಲಕ ಶಿರಸಿ-ಯಲ್ಲಾಪುರ ಸೀಮೆಯ ಮಂದಿ ನಿರಂತರ ಪ್ರತಿಭಟಿಸುತ್ತಿದ್ದರೂ ಸರಕಾರ ಯೋಜನೆ ಕೈಬಿಟ್ಟಿಲ್ಲ. ಮೊದಲ ಹಂತದಲ್ಲಿ ಬೊಮ್ಮಾಯಿ ಕೈಮೇಲಾದರೆ, ಕಾಗೇರಿ ಸೋತಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ. ವಿಸ್ತ್ರತ ಯೋಜನಾ ವರದಿ ತಯಾರಿಕೆ ಕಾರ್ಯಾರಂಭವಾಗಿರುವುದರಿಂದ ಜನರು ಕೆರಳಿದ್ದಾರೆ. ಕಳೆದ ಶನಿವಾರ(10.10.2026) ಬೆಂಗಳೂರಿನ ಪ್ರೀಡಮ್ ಪಾರ್ಕ್‌ನಲ್ಲಿ ಪರಿಸರ ತಜ್ಞರು, ವಿಜ್ಞಾನಿಗಳು, ನಿವೃತ್ತ ನ್ಯಾಯಮೂರ್ತಿಗಳು, ಸಾಹಿತಿಗಳೇ ಮುಂತಾದ ಗಣ್ಯರೆಲ್ಲ ಸೇರಿ ನದಿ ತಿರುವು ಯೋಜನೆ ವಿರುದ್ದ ಆಂದೋಲನ ನಡೆಸಿದ್ದಾರೆ.
ನದಿ ಜೋಡಣೆ ಯೋಜನೆಯಿಂದ ಹೆಚ್ಚು ಬಾಧಿತರಾಗುವುದು ಬೇಡ್ತಿ ಕಣಿವೆಯ ಹವ್ಯಕರು. ಈ ಸಮುದಾಯದವರ ಬದುಕಿಗಾಧಾರವಾದ ಅಡಿಕೆ ತೋಟ ಪಟ್ಟಿ ಯೋಜನೆಯಲ್ಲಿ ಮುಳುಗಡೆಯಾಗುತ್ತದೆ. 1970ರ ದಶಕದ ಕೊನೆಯಿಂದ ಬೇಡ್ತಿ ಮತ್ತು ಅಘನಾಶಿನಿ ನದಿ ಕೊಳ್ಳದಲ್ಲಿ ಯಾವ ಯೋಜನೆ ಬಂದರೂ ‘ಪ್ರಜ್ಞಾವಂತ’ ಹವ್ಯಕರು ತಕ್ಷಣ ತಮ್ಮ ತೋಟ-ಬದುಕು ಬಚಾವಿಗೆ ಬೀದಿಗಿಳಿಯುತ್ತಾರೆ; ಬೇಡ್ತಿ, ಅಘನಾಶಿನಿ ಕೊಳ್ಳಗಳ ಹವ್ಯಕರ ಸ್ವಾಮಿ ಹಿರಿತನದ ಹೋರಾಟಕ್ಕೆ ಸುಮಾರು ನಾಲ್ಕು ದಶಕಗಳ ಇತಿಹಾಸವಿದೆ. ಇದು ಪರಿಸರಕ್ಕಿಂತ ಹೆಚ್ಚಾಗಿ ತುತ್ತಿನ ಸೆಣಸಾಟ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಬೇಡ್ತಿ ಕೊಳ್ಳದಲ್ಲಿರುವ ಹವ್ಯಕರ ಸ್ವರ್ಣವಲ್ಲೀ ಮಠದ ಸ್ವಾಮಿ ಗಂಗಾಧರೇಂಧ್ರ ಸರಸ್ವತಿ ಸದಾ ಶಿಷ್ಯ ವರ್ಗದ ಪ್ರತಿಭಟನೆಗೆ ‘ಸ್ಪೂರ್ತಿ’ಯಾಗಿ ಮುಂಚೂಣಿಯಲ್ಲಿರುತ್ತಾರೆ.
1992ರಿಂದ ಸ್ವರ್ಣವಲ್ಲಿ ಸ್ವಾಮಿಗೆ ‘ಹಸಿರು ಸ್ವಾಮಿ’ ಎಂಬ ಅಭಿದಾವನವೂ ಅಂಟಿಕೊಂಡಿದೆ. ಜತೆಗೆ ಸ್ವರ್ಣವಲ್ಲಿ ಸ್ವಾಮಿಯ ಪರಿಸರ ಪ್ರೇಮ ಸ್ವಜಾತಿ ಅನುಯಾಯಿಗಳು ಹೆಚ್ಚಿರುವ ಘಟ್ಟದ ಮೇಲೆ ಬರುವ ಯೋಜನೆಗಳ ವಿರೋಧಕ್ಕಷ್ಟೇ ಸೀಮಿತವಾಗಿರುವುದು ಅನೇಕ ಅನುಮಾನಗಳ ಜಿಜ್ಞಾಸೆಯೂ ಹುಟ್ಟುಹಾಕಿದೆ. ತಮ್ಮ ಮಠದ ಅನುವರ್ತಿಗಳಿಗೆ ತೊಂದರೆಯಾದಾಗ ಸ್ವರ್ಣವಲ್ಲಿ ಸ್ವಾಮಿಯ ಪರಿಸರ ಪರಿತಾಪ ಜೋರಾಗುತ್ತದೆ; ಉತ್ತರ ಕನ್ನಡದ ಕರಾವಳಿಗೆ ಅಪ್ಪಳಿಸುವ ಮಾರಕ ಯೋಜನೆಗಳ ಬಗ್ಗೆಂದು ಸ್ವರ್ಣವಲ್ಲಿ ಸ್ವಾಮಿಗಳದು ದಿವ್ಯ ನಿರ್ಲಕ್ಷ್ಯವೆಂಬ ಆರೋಪ-ಆಕ್ಷೇಪಗಳಿವೆ. ಕೈಗಾ ಅಣು ಸ್ಥಾವರ ವಿರೋಧಿಸಿದ್ದ ಈ ಸ್ವಾಮಿ ಅದೇ ಅಣು ವಿದ್ಯುತ್ ಯೋಜನೆ ಲೋಕಾರ್ಪಣೆಗೆ ಅಂದಿನ ಪ್ರಧಾನಿ ವಾಜಪೇಯಿ ಬಂದಾಗ ಖಾಸಗಿಯಾಗಿ ಭೇಟಿಯಾಗಿ ಬಂದಿದ್ದು ಪ್ರಾಮಾಣಿಕ ಪರಿಸರವಾದಿಗಳನ್ನು ದಂಗಾಗಿಸಿತ್ತು.

ಬೇಡ್ತಿ ನದಿ ತಿರುವು ಯೋಜನೆ ವಿರುದ್ಧವೀಗ ವೀರಾವೇಶದಿಂದ ಭೀಷಣ ಭಾಷಣ ಬಿಗಿಯುತ್ತಿರುವ ಸಂಸದ ಕಾಗೇರಿ ಎರಡಾಟ(ಡಬ್ಬಲ್ ಗೇಮ್) ಆಡುತ್ತಿದ್ದಾರೆಂಬ ಭಾವನೆ ಜನ ಮಾನಸದಲ್ಲಿದೆ. ವಿಧಾನ ಸಭೆ ಅಧ್ಯಕ್ಷರಾಗಿದ್ದಾಗ ಕಾಗೇರಿ ಎದುರೇ ಅಂದಿ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್‌ನಲ್ಲಿ ಬೇಡ್ತಿ ನದಿ ತಿರುವು ಯೋಜನೆ ಪ್ರಸ್ತಾಪಿಸಿದ್ದರು. ಆಗೇಕೆ ಕಾಗೇರಿ ಸುಮ್ಮನಿದ್ದರು ಎಂದು ಜನರಾಡಿಕೊಳ್ಳುತ್ತಿದ್ದಾರೆ. ಸ್ವರ್ಣವಲ್ಲೀ ಸ್ವಾಮಿ ಮತ್ತು ಎಂಪಿ ಕಾಗೇರಿಗಳ ವಿರೋಧಾಭಾಸ-ಜಾತಿ ಪ್ರೀತಿ ಏನೇ ಇರಲಿ; ಬೇಡ್ತಿ-ವರದ ನದಿ ಜೋಡಣೆ ಮಾತ್ರ ಒಂದು ನಿರುಪಯುಕ್ತ-ಪರಿಸರ ಹಾಳುಗೆಡುವ-ಬೊಕ್ಕಸ ಲೂಟಿ ಮಾಡುವ ಪ್ರಳಯಾಂತಕ ಯೋಜನೆ ಎಂಬುದಕ್ಕೆ ಎರಡು ಮಾತೇ ಇಲ್ಲ. ನದಿ ಬಲವಂತವಾಗಿ ತಿರುಗಿಸುವುದರಿಂದ ಬೇಡ್ತಿ-ಅಘನಾಶಿನಿ-ಗಂಗಾವಳಿ ನದಿಗಳ ಪಾತ್ರದುದ್ದಕ್ಕೆ ಮತ್ತು ಬಯಲು ಸೀಮೆ ಎರಡೂ ಕಡೆಯೂ ಸಮಸ್ಯೆ ಖಂಡಿತ.
ದೇಶದ ಎಲ್ಲಿಯೂ ನದಿ ಜೋಡಣೆ ಯೋಜನೆ ನಿಯಮಿತ ಸಮಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನವಾದದ್ದೇ ಇಲ್ಲ! ಕಳೆದ 20-25 ವರ್ಷದಲ್ಲಿ ಆದ್ಯತೆಯಲ್ಲಿ ಕೈಗೊಂಡ 30 ಯೋಜನೆಯಲ್ಲಿ ಒಂದೇ ಒಂದು ಕಾರ್ಯಗತವಾಗಿಲ್ಲ ಎನ್ನಲಾಗಿದೆ. ಇದೆಲ್ಲ ಗೊತ್ತಿದ್ದೂ ಸರಕಾರಿ ಪಂಡಿತೋತ್ತಮರು ಬೇಡ್ತಿ-ವರದಾ-ತುಂಗಭದ್ರ ಸೇರಿಸುವ ತರಾತುರಿಯಲ್ಲಿರುವುದು ದುರಂತ. ವೈಜ್ಞಾನಿಕ-ಪ್ರಾಕೃತಿಕ ನಿಯಮದ ಕಡೆಗಣಿಸಿ ತದ್ವಿರುದ್ಧ ದಿಕ್ಕಿನ ನದಿಗಳ ಜೋಡಿಸುವುದು ವ್ಯರ್ಥ ಸಹಾಸ ಎಂಬುದನ್ನು ಆಳುವ ಮಂದಿಗೆ ಅರ್ಥ ಮಾಡಿಸುವವರು ಯಾರು? ಬಯಲು ಸೀಮೆಯ ಹಾವೇರಿ-ಗದಗ-ರಾಯಚೂರುಗಳಿಗೆ ನೀರು ಬೇಕು ನಿಜ. ಹಾಗಂತ ಉತ್ತರ ಕನ್ನಡದ ಜೀವ ಜಗತ್ತನ್ನು ಸುಮ್ಮನೆ ಬಲಿ ಹಾಕಬೇಕಾ? ಕೆರೆಗಳ ಪುನರುಜ್ಜೀವನ, ಜಲಾನಯನ ಅಭಿವೃದ್ಧಿ ಮತ್ತು ಜಲ ದಕ್ಷತೆಯಿಂದ ಹಾವೇರಿ, ಗದಗ ಮತ್ತು ರಾಯಚೂರಲ್ಲಿ ನದಿ ಜೋಡಣೆಯಿಂದ ಸಿಗುವ ನೀರಿಗಿಂತಲೂ ಹೆಚ್ಚು ಸಂಗ್ರಹಿಸಬಹುದೆಂದು ತಜ್ಞರು ಹೇಳುತ್ತಾರೆ. ಇಂಥ ಸುಲಭ-ಖರ್ಚು ಕಡಿಮೆಯಾದ ಯೋಜನೆಗಳ ಬಗ್ಗೆ ಏಕೆ ಸರಕಾರಗಳು ಯೋಚಿಸುವುದಿಲ್ಲ? ಬಯಲು ಸೀಮೆ ಬಚಾಯಿಸಲು ಬೇಡ್ತಿ ನದಿಯುದ್ದದ ಜನರನ್ನು ನಿರಾಶ್ರಿತರಾಗಿಸುವುದು ಯಾವ ನ್ಯಾಯ? ಯಾವ ಸೀಮೆಯ ಅಭಿವೃದ್ಧಿ ಪರಿಕಲ್ಪನೆ?
-ವಲಲ




