ತೆಲಂಗಾಣ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಕಾಂಗ್ರೆಸ್ ಸರ್ಕಾರದ ನಡುವೆ ಹಲವು ದಿನಗಳಿಂದ ವಿವಾದ ನಡೆಯುತ್ತಿದೆ. ವಿದ್ಯಾರ್ಥಿಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೈದಾರಾಬಾದ್ ಕೇಂದ್ರ ವಿಶ್ವವಿದ್ಯಾನಿಲಯದ ಸಮೀಪದಲ್ಲಿರುವ ಸುಮಾರು 400 ಎಕರೆ ಭೂಮಿಗೆ ಸಂಬಂಧಿಸಿದ ವಿವಾದವಿದು. ಈ ಭೂಮಿಯಲ್ಲಿ ಐಟಿ ಪಾರ್ಕ್ ಆರಂಭಿಸಲು ಮುಂದಾದ ಸರ್ಕಾರದ ನಡೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ, ಪರಿಸರವಾದಿಗಳೂ ಜೊತೆ ಸೇರಿದ್ದಾರೆ. ಸದ್ಯ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ.
ಯಾವುದೇ ವಿಚಾರವಿದ್ದರೂ ಅಲ್ಲಿ ರಾಜಕೀಯ ಪ್ರವೇಶ ಸಾಮಾನ್ಯ. ಯುವಕರು, ವಿದ್ಯಾರ್ಥಿಗಳು, ಕಾರ್ಮಿಕರಿಗೆ ಅನ್ಯಾಯವಾಗುವ ಯಾವುದೇ ನಿರ್ಧಾರವನ್ನು ಕೈಗೊಂಡರೂ ಆಯಾ ಸಂಘಟನೆಗಳು ಮಧ್ಯಪ್ರವೇಶಿಸುತ್ತವೆ. ಇದು ಅಗತ್ಯವೂ ಹೌದು. ಆದರೆ ಪ್ರಸ್ತುತ ಎಲ್ಲವೂ ರಾಜಕೀಕರಣಗೊಂಡಿದೆ. ಕಾಂಗ್ರೆಸ್ ಆಡಳಿತವಿದ್ದರೆ ಬಿಜೆಪಿ ತೆಗಳುವುದು, ಬಿಜೆಪಿ ಸರ್ಕಾರವಿದ್ದರೆ ಕಾಂಗ್ರೆಸ್ ಟೀಕಿಸುವುದು. ಅದರಲ್ಲೂ ಇತರೆ ರಾಜ್ಯಗಳಲ್ಲಿ ವಿಪಕ್ಷವಾಗಿ ಯಾವ ಯೋಜನೆ/ ನಿರ್ಧಾರವನ್ನು ವಿರೋಧಿಸಿರುತ್ತಾರೋ ಅದೇ ರೀತಿಯ ಯೋಜನೆಯನ್ನು ತಾವಿದ್ದ ರಾಜ್ಯದಲ್ಲಿ ಜಾರಿ ಮಾಡುವುದು. ಹೀಗೆ ರಾಜಕೀಯ, ನಿರ್ಧಾರ, ಸಿದ್ಧಾಂತ, ನಿಲುವು – ಎಲ್ಲವೂ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.
ಇದನ್ನು ಓದಿದ್ದೀರಾ? ತೆಲಂಗಾಣ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಿಷೇಧ; ಇದು ‘ಅಘೋಷಿತ ತುರ್ತು ಪರಿಸ್ಥಿತಿ’ ಎಂದ ಬಿಜೆಪಿ
ತೆಲಂಗಾಣ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು ಮತ್ತು ತೆಲಂಗಾಣ ಸರ್ಕಾರದ ನಡುವೆ ನಡೆಯುತ್ತಿರುವ ಈ ಸಂಘರ್ಷವೂ ಅದೇ ರೀತಿ. ಈ ವಿದ್ಯಾರ್ಥಿಗಳನ್ನು ಉತ್ತೇಜಿಸಿ ಬಿಆರ್‌ಎಸ್ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರ ದೂರಿದರೆ, ಇನ್ನೊಂದೆಡೆ ಸರ್ಕಾರ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂಬುದು ವಿಪಕ್ಷಗಳ ಆರೋಪ. ಈ ಆರೋಪ ಪ್ರತ್ಯಾರೋಪದಲ್ಲಿ ವಾಸ್ತವ ವಿಚಾರವೇ ಮುಳುಗಿ ಹೋಗುತ್ತಿದೆ, ಜನರಿಗೆ ಮರೆತು ಹೋಗುತ್ತಿದೆ. ಪ್ರಕೃತಿ ವಿನಾಶವಾಗುತ್ತಿದೆ.
ಏನಿದು ವಿವಾದ?
ಈ ವಿವಾದವು ಸುಮಾರು ದಶಕಕ್ಕೂ ಹಳೆಯದ್ದು. ವಿಶ್ವವಿದ್ಯಾಲಯದ ಸಮೀಪದಲ್ಲಿರುವ 400 ಎಕರೆಗಳ ಪೈಕಿ 2,324 ಎಕರೆಗಳನ್ನು 1975ರಲ್ಲಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಹಂಚಿಕೆಯಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿಕೊಂಡಿದೆ. ಆದರೆ ಈ ಭೂಮಿಯನ್ನು ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಿದ್ದನ್ನು ಸಾಬೀತುಪಡಿಸಲು ಯಾವುದೇ ಪುರಾವೆಯಿಲ್ಲ ಎಂದು 2022ರಲ್ಲಿ ಹೈಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್ ಕೂಡಾ ಈ ನಿರ್ಧಾರವನ್ನೇ ಎತ್ತಿ ಹಿಡಿದಿದೆ.
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯವು 400 ಎಕರೆಗಳು 1975 ರಲ್ಲಿ ತನಗೆ ಹಂಚಿಕೆಯಾದ 2,324 ಎಕರೆಗಳಲ್ಲಿ ಒಂದು ಎಂದು ಹೇಳಿಕೊಂಡಿದೆ. ಆದಾಗ್ಯೂ, ಹೈಕೋರ್ಟ್ 2022ರಲ್ಲಿ ಈ ಭೂಮಿಯನ್ನು ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಿದ್ದನ್ನು ಸಾಬೀತುಪಡಿಸುವ ಯಾವುದೇ ಕಾನೂನು ದಾಖಲೆಗಳಿಲ್ಲ ಎಂದು ತೀರ್ಪು ನೀಡಿತು. ನಂತರ ಸುಪ್ರೀಂ ಕೋರ್ಟ್ ಈ ನಿರ್ಧಾರವನ್ನು ಎತ್ತಿಹಿಡಿದು, ಸರ್ಕಾರವು ಭೂಮಿಯನ್ನು ಹೊಂದಿದೆ ಎಂದು ದೃಢಪಡಿಸಿತು. ಅದೆಲ್ಲಾ ಮುಗಿದ ಬಳಿಕ ಈಗ ಸರ್ಕಾರ ಈ ಜಾಗದಲ್ಲಿ ಐಟಿ ಪಾರ್ಕ್ ನಿರ್ಮಾಣದ ಯೋಜನೆ ಹಾಕಿಕೊಂಡಿದೆ.
ಇದನ್ನು ಓದಿದ್ದೀರಾ? ಜಗತ್ತಿನಲ್ಲಿಯೇ ಮೊದಲು ಕಬ್ಬಿಣದ ಯುಗ ಆರಂಭವಾದದ್ದು ತಮಿಳುನಾಡಿನಲ್ಲಿ
ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಪರಿಸರವಾದಿಗಳು ಜೊತೆ ಸೇರಿ ಹೋರಾಟಕ್ಕಿಳಿದಿದ್ದಾರೆ. ಈ ಭೂಮಿ ‘ಪರಿಸರ ಸೂಕ್ಷ್ಮ ವಲಯ’ ಎಂದು ವಾದಿಸಿದ್ದಾರೆ. ನವಿಲುಗಳು, ಎಮ್ಮೆಗಳು, ವಿಭಿನ್ನವಾದ ಬಂಡೆ ಕಲ್ಲುಗಳು ಸೇರಿದಂತೆ ಸುಮಾರು 455ಕ್ಕೂ ಹೆಚ್ಚು ಜಾತಿಯ ಸಸ್ಯ ಮತ್ತು ಪ್ರಾಣಿಗಳಿಗೆ ಈ ಜಾಗ ನೆಲೆಯಾಗಿದೆ ಎಂದಿದ್ದಾರೆ. ವಾಟಾ ಫೌಂಡೇಶನ್ ಎಂಬ ಸರ್ಕಾರೇತರ ಸಂಸ್ಥೆಯ ಕಾರ್ಯಕರ್ತರು, ಈ ಭೂಮಿಯನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆಯಡಿ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಬೇಕೆಂದು ಒತ್ತಾಯಿಸಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇವೆಲ್ಲವುದರ ನಡುವೆ ಕಾನೂನು ಸಮರವೂ ನಡೆಯುತ್ತಿದೆ.
ಕಾನೂನು ಸಮರಕ್ಕಿಳಿದ ವಿದ್ಯಾರ್ಥಿಗಳು
ತೆಲಂಗಾಣ ಕೈಗಾರಿಕಾ ಮೂಲಸೌಕರ್ಯ ನಿಗಮಕ್ಕೆ (TGIIC) ಸರ್ಕಾರ ಭೂಮಿ ಮಂಜೂರು ಮಾಡುವುದನ್ನು ತಡೆಯುವಂತೆ ವಿದ್ಯಾರ್ಥಿಗಳು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL)ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಅರ್ಜಿ ಮತ್ತು ವಾಟಾ ಫೌಂಡೇಶನ್‌ನ ಅರ್ಜಿ ಎರಡನ್ನೂ ಹೈಕೋರ್ಟ್ ವಿಚಾರಣೆ ನಡೆಸಲಿದೆ.
ಈ ನಡುವೆಯೇ ತೆಲಂಗಾಣ ಸರ್ಕಾರ ಭೂಮಿ ತೆರವು ಕಾರ್ಯಾಚರಣೆ ಪ್ರಾರಂಭಿಸಿದೆ. ಬುಲ್ಡೋಜರ್‌ಗಳು ಮತ್ತು ಮಣ್ಣು ತೆಗೆಯುವ ಯಂತ್ರಗಳು ಸ್ಥಳಕ್ಕೆ ತಲುಪಿದೆ. ಮರಗಳನ್ನು ಕಡಿಯಲಾಗುತ್ತಿದೆ ಮತ್ತು ಬಂಡೆಗಳನ್ನು ಒಡೆಯಲಾಗುತ್ತಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. ಇನ್ನೊಂದೆಡೆ ಪೊಲೀಸರು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ.
ಪ್ರತಿಭಟನೆ ನಡೆಯುತ್ತಿದ್ದಂತೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಸಂಘರ್ಷ ನಡೆದಿದೆ. ಸುಮಾರು 53 ಮಂದಿಯನ್ನು ಬಂಧಿಸಲಾಗಿದೆ. ಪೊಲೀಸರು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕೂದಲು ಎಳೆದಿದ್ದಾರೆ, ಥಳಿಸಿದ್ದಾರೆ, ವಿದ್ಯಾರ್ಥಿನಿಯರ ಬಟ್ಟೆ ಹರಿದಿದೆ ಎಂದು ಹೇಳಿದರೂ ಎಳೆದೊಯ್ದಿದ್ದಾರೆ ಎಂದು ಬಿಆರ್‌ಎಸ್ ಆರೋಪಿಸಿದೆ. ಆದರೆ ಪೊಲೀಸರು ಮಾತ್ರ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಬಂಧನಕ್ಕೊಳಗಾದವರು ಹೈದಾರಾಬಾದ್ ಕೇಂದ್ರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹೀಗೆ ಆರೋಪ ಪ್ರತ್ಯಾರೋಪಗಳು ಮುಂದುವರೆದಿದೆ.
ಯಾವುದೇ ಸರ್ಕಾರವಾದರೂ ಐಟಿ ಪಾರ್ಕ್, ಟೆಕ್ ಪಾರ್ಕ್ ಯಾವುದನ್ನೂ ನಿರ್ಮಿಸುವುದಾದರೂ ಅದಕ್ಕೆ ಬರಡು ಬಿದ್ದಿರುವ ಭೂಮಿಗಳನ್ನು ಬಳಸುವುದು ಉತ್ತಮ. ಈಗಾಗಲೇ ಕಾಡು ಬಹುತೇಕ ನಾಶವಾಗಿದೆ. ಅಳಿದುಳಿದಿರುವ ಕಾಡಿಗೂ ಕೊಡಲಿ ಹಾಕಿ ಮಾನವನಿಗೆ ಮಾನವನೇ ಸಂಕಷ್ಟ ತಂದೊಡ್ಡುವುದಲ್ಲದೇ ಮತ್ತೇನಲ್ಲ. ಇದರ ವಿರುದ್ಧ ವಿದ್ಯಾರ್ಥಿಗಳು ದೃಢವಾಗಿ ನಿಂತಿರುವುದು ಸ್ವಾಗತಾರ್ಹ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.