ಎಸ್‌ಐಆರ್ ಎಂಬ ಗಿಲೋಟಿನ್ ಅಸ್ತ್ರ ಈಗ ಕರ್ನಾಟಕಕ್ಕೂ ಕಾಲಿಟ್ಟಿದೆ. ರಾಜ್ಯದಲ್ಲಿ ಜೂನ್ 30ರಿಂದ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ಬೇರೆ ರಾಜ್ಯಗಳಲ್ಲಿ ನಡೆದಿರುವ ಕಹಿ ಘಟನಾವಳಿಗಳು ಮತ್ತು ಆಕ್ರಮಣಕಾರಿ ಧೋರಣೆಯ ವಿರುದ್ಧ ಕರ್ನಾಟಕದಲ್ಲಿ ಪ್ರಬಲ ಪ್ರತಿರೋಧ ರೂಪುಗೊಳ್ಳುತ್ತಿದೆ. ಆತಂಕವೂ ಇದೆ.
ಮೋದಿ ಸರ್ಕಾರದ ಅಣತಿಯಲ್ಲಿರುವ ಚುನಾವಣಾ ಆಯೋಗವು ಏಕಪಕ್ಷೀಯವಾಗಿ, ಅಸಂವಿಧಾನಿಕವಾಗಿ ಜಾರಿಗೊಳಿಸಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪೆಡಂಭೂತ ಕರ್ನಾಟಕಕ್ಕೂ ಕಾಲಿಟ್ಟಿದೆ. ಜೂನ್ 30ರಿಂದ ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಗಳು ಆರಂಭವಾಗಲಿವೆ. ರಾಜ್ಯದಲ್ಲಿಯೂ ಲಕ್ಷಾಂತರ ಮತದಾರರನ್ನು ಮತಪಟ್ಟಿಯಿಂದ ಹೊರದೂಡಲು ಚುನಾವಣಾ ಆಯೋಗ ಹಪಾಹಪಿಸುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಯ ಗೆಲುವಿನ ಹಾದಿಯನ್ನು ಮತ್ತಷ್ಟು ಸಗಮ ಮಾಡಿಕೊಡಲು ಕಸರತ್ತು ಆರಂಭಿಸಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.
ಆರಂಭದಲ್ಲಿ, ಮತಪಟ್ಟಿಯನ್ನು ಶುದ್ಧೀಕರಣದ ಹೆಸರಿನಲ್ಲಿ ಚುನಾವಣಾ ಆಯೋಗವು ಬಿಹಾರದಲ್ಲಿ ಮೊದಲ ಬಾರಿಗೆ ಎಸ್‌ಐಆರ್ ಆರಂಭಿಸಿತು. ಬರೋಬ್ಬರಿ 65 ಲಕ್ಷ ಮತದಾರರನ್ನು ಹೊರಹಾಕಲಾಯಿತು. ಈ ಬೃಹತ್ ಸಂಖ್ಯೆಯ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಈಗ, ಅದು ಅವರ ಪೌರತ್ವವನ್ನೂ ಪ್ರಶ್ನಿಸುತ್ತಿದೆ. ಮತಪಟ್ಟಿಯಿಂದ ಹೊರಗುಳಿದವರನ್ನು 2ನೇ ದರ್ಜೆಯ ಪ್ರಜೆಗಳಂತೆ ನೋಡುವ ಆತಂಕ ಎದುರಾಗಿದೆ.
ಈ ಆತಂಕಕ್ಕೆ ಮುಖ್ಯ ಕಾರಣ, ಬಿಹಾರದ ಮೊದಲ ಬಿಜೆಪಿ ಮುಖ್ಯಮಂತ್ರಿ ಸಾಮ್ರಾಟ್ ಚೌದರಿ ನೀಡಿರುವ ಹೇಳಿಕೆ. “ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತಪಟ್ಟಿಯಿಂದ ಹೊರಗುಳಿದವರು ಪಡಿತರ, ನಗದು ಸಹಾಯ, ಪಿಂಚಣಿ ಹಾಗೂ ಇತರ ಕಲ್ಯಾಣ ಯೋಜನೆಗಳು ಸೇರಿದಂತೆ ಯಾವುದೇ ಸರ್ಕಾರಿ ಸೌಲಭ್ಯಗಳಿಗೆ ಅರ್ಹರಾಗಿರುವುದಿಲ್ಲ. ಸರಿಯಾದ ಸಮಯದಲ್ಲಿ, ಅವರುಗಳ ಬ್ಯಾಂಕ್ ಪಾಸ್‌ಬುಕ್‌ಗಳನ್ನು ಸಹ ರದ್ದುಗೊಳಿಸಲಾಗುವುದು” ಎಂದು ಅವರು ಹೇಳಿದ್ದಾರೆ.
ಅವರ ಹೇಳಿಕೆಯು ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಳ್ಳುವುದು ಎಂದರೆ, ಕೇವಲ ಮತದಾನದ ಹಕ್ಕು ಕಳೆದುಕೊಳ್ಳುವುದು ಮಾತ್ರವಲ್ಲ, ಬದಲಾಗಿ ಸರ್ಕಾರದ ಪಾಲಿಗೆ ಆ ವ್ಯಕ್ತಿ ‘ಅಸ್ತಿತ್ವದಲ್ಲಿಲ್ಲದವನು’ ಅಥವಾ ಅವರು ಭಾರತದ ಪೌರನಲ್ಲ ಎಂಬುದಾಗಿ ಅರ್ಥೈಸುತ್ತದೆ.
ಈ ಹೇಳಿಕೆ, ಬಿಹಾರದಲ್ಲಿ ಮಾತ್ರವಲ್ಲದೆ, ದೇಶಾದ್ಯಂತ ಈಗಾಗಲೇ ಎಸ್‌ಐಆರ್ ನಡೆದು, ಮತಪಟ್ಟಿಯಲ್ಲಿ ತಮ್ಮ ಹೆಸರನ್ನು ಕಳೆದುಕೊಂಡಿರುವ ಎಸ್‌ಸಿ, ಎಸ್‌ಟಿ, ಒಬಿಸಿ, ಹಿಂದಿಳಿದವರು, ಬಡವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರಲ್ಲಿ ಆತಂಕ ಸೃಷ್ಟಿಸಿದೆ. ತಮ್ಮ ಹಕ್ಕುಗಳನ್ನು ಮೋದಿ ಸರ್ಕಾರ ಕಸಿದುಕೊಳ್ಳಬಹುದು ಎಂಬ ಭಯ ಆವರಿಸಿದೆ.
ಸಾಮ್ರಾಟ್ ಚೌದರಿ ನೀಡಿರುವ ಹೇಳಿಕೆ ಹೊಸತೇನೂ ಅಲ್ಲ. ಎಸ್‌ಐಆರ್ ಆರಂಭವಾದಾಗಲೇ ಮೋದಿ ಸರ್ಕಾರ ಇಂತಹ ಕುಕೃತ್ಯವನ್ನು ಎಸಗುತ್ತದೆ ಎಂಬುದನ್ನು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದರು. ಎಸ್‌ಐಆರ್ ಪ್ರಕ್ರಿಯೆಯು ಕೇವಲ ಮತಪಟ್ಟಿ ಪರಿಷ್ಕರಣೆಯಲ್ಲ, ಅದು ಪೌರತ್ವದ ಪರಿಷ್ಕರಣೆ ಎಂದು ಎಚ್ಚರಿಸಿದ್ದರು. ಚುನಾವಣಾ ಆಯೋಗ ಕೂಡ ಮತದಾರರ ಬಳಿ ಪೌರತ್ವ ಸಾಬೀತಿಗೆ ಬೇಕಾದ ದಾಖಲೆಗಳನ್ನೇ ಕೇಳಿತ್ತು. ಆದಾಗ್ಯೂ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆಧಾರ್‌ಅನ್ನು ಪ್ರಕ್ರಿಯೆಯನ್ನು ಪರಿಗಣಿಸಲು ಸಮ್ಮತಿಸಿತ್ತು. ಆದರೂ, ಆಧಾರ್ ಮುಖ್ಯ ದಾಖಲೆಯಲ್ಲವೆಂದೂ ಆಯೋಗ ವಾದಿಸುತ್ತಲೇ ಬಂದಿತ್ತು. ಆದ್ದರಿಂದಲೇ, ಬಿಹಾರದಲ್ಲಿ 65 ಲಕ್ಷ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ.
ಇನ್ನು, ಪಶ್ಚಿಮ ಬಂಗಾಳದಲ್ಲಂತೂ ಚುನಾವಣಾ ಆಯೋಗದ ವರಸೆ ನಿರಂತರವಾಗಿ ಬದಲಾಗುತ್ತಲೇ ಇತ್ತು. ಬಂಗಾಳದಲ್ಲಿ ಮೊದಲ ಹಂತದಲ್ಲಿ ಮತದಾರರ ಕರಡು ಪಟ್ಟಿಯನ್ನು ಸಿದ್ದಪಡಿಸಿದಾಗ, ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ಉದ್ದೇಶಿಸಿದ್ದಷ್ಟು ಮತದಾರರನ್ನು ಹೊರಹಾಕಲು ಸಾಧ್ಯವಾಗಿರಲಿಲ್ಲ. ಆದ್ದರಿಂದ, ಆಯೋಗವು ತನ್ನ ನಿಮಯಗಳನ್ನೇ ಬದಲಿಸಿತು. ಮುಖ್ಯವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಸ್ಥಳೀಯ ದಾಖಲೆಗಳಲ್ಲಿ ವಯಸ್ಸು, ವಿಳಾಸ ಅಥವಾ ಹೆಸರುಗಳಲ್ಲಿ ವ್ಯಾಕರಣ ದೋಷದಂತಹ ಅತೀ ಸಣ್ಣ ವ್ಯತ್ಯಾಸಗಳು ಕಂಡುಬಂದರೂ ಸಹ ಅಂತಹವರ ಹೆಸರುಗಳನ್ನು ಕೈಬಿಡಲಾಯಿತು. ಸಣ್ಣ-ಪುಟ್ಟ ದೋಷಗಳನ್ನೇ ಗಂಭೀರ ದೋಷವೆಂದು ಹೇಳುತ್ತಲೇ ದಲಿತ, ಹಿಂದುಳಿದ, ಮುಸ್ಲಿಂ, ಇತರ ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ಸೇರಿದಂತೆ ಬಂಗಾಳದ 91 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಿತು. ಮಮತಾ ಬ್ಯಾನರ್ಜಿ ಅವರ ಪ್ರಬಲ ಹೋರಾಟದ ನಡುವೆಯೂ ‘ನೈಜ ಮತದಾರ’ರನ್ನೂ ಹೊರಹಾಕಿತು.
ಮತಪಟ್ಟಿಯಿಂದ ಹೆಸರು ಕಳೆದುಕೊಂಡವರಲ್ಲಿ ಸುಮಾರು 27 ಲಕ್ಷ ಮತದಾರರು ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಅವರ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನಿಯೋಜಿತ ನ್ಯಾಯಾಂಗ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆದರೂ, ಕಳೆದ ಚುನಾವಣೆಯಲ್ಲಿ ಅವರಾರೂ ಮತಚಲಾಯಿಸಲು ಸಾಧ್ಯವಾಗಿಯೇ ಇಲ್ಲ. ಬೃಹತ್ ಸಂಖ್ಯೆಯ ಮತದಾರರು ಮತಪಟ್ಟಿಯಿಂದ ಹೊರಗುಳಿದ ಪರಿಣಾಮ ಬಂಗಾಳದಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೇರಿದೆ ಎಂಬ ತರ್ಕ ದೇಶಾದ್ಯಂತ ಬಲವಾಗಿದೆ.
ಈವರೆಗೆ, ಚುನಾವಣಾ ಆಯೋಗವು 13 ರಾಜ್ಯಗಳಲ್ಲಿ ಎಸ್‌ಐಆರ್ ನಡೆಸಿದೆ. ಈ ಎಲ್ಲ ರಾಜ್ಯಗಳಲ್ಲೂ ಎಸ್‌ಐಆರ್ ವಿರುದ್ಧ ಪ್ರಬಲ ಹೋರಾಟಗಳು ನಡೆದಿವೆ. ಆದರೂ, ಈ ರಾಜ್ಯಗಳಲ್ಲಿ ಒಟ್ಟು 5.6 ಕೋಟಿ ಮತದಾರರನ್ನು ಆಯೋಗವು ಮತಪಟ್ಟಿಯಿಂದ ಹೊರಹಾಕಿದೆ.
ಎಸ್‌ಐಆರ್ ಎಂಬ ಗಿಲೋಟಿನ್ ಅಸ್ತ್ರ ಈಗ ಕರ್ನಾಟಕಕ್ಕೂ ಕಾಲಿಟ್ಟಿದೆ. ರಾಜ್ಯದಲ್ಲಿ ಜೂನ್ 30ರಿಂದ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ಬೇರೆ ರಾಜ್ಯಗಳಲ್ಲಿ ನಡೆದಿರುವ ಕಹಿ ಘಟನಾವಳಿಗಳು ಮತ್ತು ಆಕ್ರಮಣಕಾರಿ ಧೋರಣೆಯ ವಿರುದ್ಧ ಕರ್ನಾಟಕದಲ್ಲಿ ಪ್ರಬಲ ಪ್ರತಿರೋಧ ರೂಪುಗೊಳ್ಳುತ್ತಿದೆ. ಆತಂಕವೂ ಇದೆ.
ಗ್ರಾಮೀಣ ಭಾಗದ ಜನರು ಮತ್ತು ವಲಸೆ ಕಾರ್ಮಿಕರ ಬಳಿ ವಾಸಸ್ಥಳದ ನಿಖರ ದಾಖಲೆಗಳ ಕೊರತೆ ಇರುತ್ತದೆ. ಎಸ್‌ಐಆರ್ ತಂಡಗಳು ಕಟ್ಟುನಿಟ್ಟಿನ ನಿಯಮಗಳನ್ನು ಹೇರಿದರೆ, ಇವರೆಲ್ಲರೂ ಮತಪಟ್ಟಿಯಿಂದ ಹೊರಗುಳಿಯಬಹುದು. ತಾಂತ್ರಿಕ ದೋಷಗಳೂ ಮತದಾರರನ್ನು ತಮ್ಮ ಹಕ್ಕಿನಿಂದ ವಂಚಿತರಾಗುವಂತೆ ಮಾಡಬಹುದು.
ರಾಜಕೀಯ ವಿಶ್ಲೇಷಕರ ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿ ಎಸ್‌ಐಆರ್ ಪೆಡಂಭೂತಕ್ಕೆ ಸುಮಾರು 86 ಲಕ್ಷ ಮತದಾರರು ಬಲಿಯಾಗಬಹುದು. ಅಂದರೆ, ರಾಜ್ಯದ ಒಟ್ಟು 5.55 ಕೋಟಿ ಮತದಾರರಲ್ಲಿ 15% ಮತದಾರರು ತಮ್ಮ ಮತದಾನದ ಹಕ್ಕುಗಳನ್ನು ಕಳೆದುಕೊಳ್ಳುವ ಆತಂಕವಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರು, ದಲಿತರು, ಆದಿವಾಸಿಗಳು, ವಲಸಿಗರು, ಲಿಂಗತ್ವ ಅಲ್ಪಸಂಖ್ಯಾತರು ಎಸ್‌ಐಆರ್ ದಾಳಿಗೆ ತುತ್ತಾಗಲಿದ್ದಾರೆ.
ಆದ್ದರಿಂದ, ಹಲವಾರು ಸಂಘಟನೆಗಳು ಎಸ್‌ಐಆರ್ ‘ದಾಳಿ’ಗೆ ಮತದಾರರು ಬಲಿಯಾಗದಂತೆ ತಡೆಯಲು ಹೋರಾಟ ರೂಪಿಸುತ್ತಿದ್ದಾರೆ. ಮತದಾರರನ್ನು ಜಾಗೃತಿಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಈ ಲೇಖನ ಓದಿದ್ದೀರಾ?: ವಿಭಜನೆ, ಸಾಲು-ಸಾಲು ಸೋಲು, ಪಕ್ಷಾಂತರದ ಪೆಟ್ಟು; ಅಸ್ತಿತ್ವಕ್ಕಾಗಿ ಹೋರಾಟುತ್ತಿದೆ ಎಐಎಡಿಎಂಕೆ
ಎಸ್‌ಐಆರ್ ಅಪಾಯಗಳ ವಿರುದ್ಧ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ‘ಎದ್ದೇಳು ಕರ್ನಾಟಕ’ ಜನಾಂದೋಲನದ ಮುಖಂಡ ನೂರ್ ಶ್ರೀಧರ್ ಅವರು ಈದಿನ.ಕಾಮ್ ಜೊತೆ ಮಾತನಾಡಿದ್ದಾರೆ. “ಎಸ್‌ಐಆರ್ ಪ್ರಕ್ರಿಯೆಯು ಅಸಲಿಗೆ ಸಂವಿಧಾನ ವಿರೋಧಿ. ಈ ಪ್ರಕ್ರಿಯೆಯ ಕುರಿತು ಸದನದಲ್ಲಿ ಮಸೂದೆ ಮಂಡಿಸಲಾಗಿಲ್ಲ, ಚರ್ಚಿಸಲಾಗಿಲ್ಲ, ಅನುಮೋದಿಸಲಾಗಿಲ್ಲ. ಆಯೋಗವು ಏಕಪಕ್ಷೀಯವಾಗಿ ಈ ಪ್ರಕ್ರಿಯೆಯನ್ನು ಆರಂಭಿಸಿದೆ. ದೇಶಾದ್ಯಂತ ಬಿಜೆಪಿ ಆಡಳಿತದ ಅಧಿಪತ್ಯ ಸ್ಥಾಪಿಸುವುದು ಇದರ ಉದ್ದೇಶ. ಎಸ್‌ಐಆರ್ ಅಕ್ಷರಶಃ ಸಂವಿಧಾನ ವಿರೋಧಿ, ಮಹಿಳಾ ವಿರೋಧಿ, ಬಡವರು, ಅಲ್ಪಸಂಖ್ಯಾತರು ಹಾಗೂ ದಲಿತ ವಿರೋಧಿ. ದೇಶ ವಿರೋಧಿ. ಇದನ್ನು ಬಗ್ಗುಬಡಿಯಲೇಬೇಕು” ಎಂದಿದ್ದಾರೆ.
“ಬಂಗಾಳದಲ್ಲಿ ನಡೆಸಿದ್ದನ್ನೇ ಕರ್ನಾಟಕದಲ್ಲೂ ನಡೆಸಲು ಆಯೋಗ ಮುಂದಾಗಿದೆ. ಸಂವಿಧಾನ ವಿರೋಧಿ ಎಸ್‌ಐಆರ್‌ಗೆ ಪ್ರಬಲ ಪ್ರತಿರೋಧ ಒಡ್ಡಬೇಕು. ಆದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಸ್‌ಐಆರ್ ವಿಚಾರದಲ್ಲಿ ಯಾವುದೇ ಸ್ಪಷ್ಟ ನಿಲುವು ಹೊಂದಿಲ್ಲ. ಬದಲಾಗಿ, ಪ್ರಕ್ರಿಯೆಗೆ ಸ್ಪಂದಿಸುವುದಾಗಿ ಹೇಳುತ್ತಿದೆ. ಸರ್ಕಾರಕ್ಕೆ ಎಸ್‌ಐಆರ್ ಅಪಾಯದ ಅರಿವಿಲ್ಲ. ಆದ್ದರಿಂದ, ರಾಜ್ಯದ ಜನರೇ ಎಸ್‌ಐಆರ್‌ಅನ್ನು ಹಿಮ್ಮೆಟ್ಟಬೇಕಿದೆ” ಎಂದಿದ್ದಾರೆ.



