ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ, ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್‌ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಆರು ಮಂದಿಯಲ್ಲಿ ನಾನೂ ಒಬ್ಬಳು. ನನಗೆ ಜೀವ ಬೆದರಿಕೆ ಕೂಡ ಇತ್ತು ಎಂದು ಕುಸ್ತಿಪಟು ವಿನೇಶ್ ಫೋಗಟ್ ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ.
ಸುಮಾರು 18 ತಿಂಗಳ ನಂತರ ಮತ್ತೆ ತಂಡಕ್ಕೆ ಮರಳುವ ಮುನ್ನ ವಿನೇಶ್ ಫೋಗಟ್ ವೀಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ. ಗೊಂಡಾದಲ್ಲಿ ನಡೆದ ರಾಷ್ಟ್ರೀಯ ಮುಕ್ತ ರ‍್ಯಾಂಕಿಂಗ್ ಟೂರ್ನಮೆಂಟ್‌ನಲ್ಲಿ ತನ್ನ ಅಥವಾ ತನ್ನ ತಂಡದ ಸದಸ್ಯರಿಗೆ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಸರ್ಕಾರವೇ ಹೊಣೆಗಾರರಾಗಬೇಕೆಂದು ಫೋಗಟ್ ಎಚ್ಚರಿಸಿದ್ದಾರೆ.
ಇದನ್ನು ಓದಿದ್ದೀರಾ? ನನ್ನ ಹೋರಾಟ ಕೊನೆಗೊಂಡಿಲ್ಲ, ಈಗಷ್ಟೇ ಶುರುವಾಗಿದೆ: ವಿನೇಶ್ ಫೋಗಟ್
ಬ್ರಿಜ್ ಭೂಷಣ್ ಅವರು ಹಲವಾರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿನೇಶ್ ಫೋಗಟ್ ಮತ್ತು ಇತರ ಪ್ರಮುಖ ಕುಸ್ತಿಪಟುಗಳು (ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮೊದಲಾದವರು) ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು.
ಈ ಆರೋಪಗಳ ಆಧಾರದ ಮೇಲೆ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಸದ್ಯ ಈ ಪ್ರಕರಣವು ನ್ಯಾಯಾಲಯದಲ್ಲಿದೆ. ಇತ್ತೀಚೆಗಷ್ಟೇ ದೆಹಲಿ ನ್ಯಾಯಾಲಯವು ಅವರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ದೋಷಾರೋಪಣೆ ಹೊರಿಸಲು ಆದೇಶಿಸಿದೆ.




