ವಿಶ್ವ ಬಾಲಕಾರ್ಮಿಕ ವಿರೋಧಿ ದಿನ | ಮಕ್ಕಳ ಬಾಲ್ಯವನ್ನೇ ಕಿತ್ತುಕೊಳ್ಳುವ ಕ್ರೌರ್ಯಕ್ಕೆ ಕೊನೆ ಎಂದು?

Date:

Advertisements
ಬಾಲಕಾರ್ಮಿಕರಲ್ಲಿ ಅತಿ ಹೆಚ್ಚು ಶೋಷಣೆಗೆ ಒಳಗಾಗುವವರು ಹೆಣ್ಣುಮಕ್ಕಳು. ಕೃಷಿ ಸಂಬಂಧಿತ ಕೆಲಸದಲ್ಲಿ ಭೂಮಾಲೀಕರಿಂದ, ಗಾರ್ಮೆಂಟ್ ಮತ್ತಿತರ ಫ್ಯಾಕ್ಟರಿಗಳಲ್ಲಿ ಮ್ಯಾನೇಜರ್ ಮತ್ತು ಮಾಲೀಕರಿಂದ, ಅಪಾರ್ಟ್‍ಮೆಂಟ್/‌ ಮನೆ ಕೆಲಸದಲ್ಲಿ ಮನೆ ಒಡೆಯರಿಂದ ಮಾನಸಿಕವಾಗಿ, ದೈಹಿಕವಾಗಿ ಶೋಷಣೆಗೆ ತುತ್ತಾಗುತ್ತಿದ್ದಾರೆ

ಮತ್ತೊಂದು ಅಂತಾರಾಷ್ಟ್ರೀಯ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಜ್ಜಾಗಿವೆ. ಮಕ್ಕಳ ಹಕ್ಕುಗಳಿಗಾಗಿ ಮತ್ತು ಬಾಲಕಾರ್ಮಿಕತೆ ನಿರ್ಮೂಲನೆಗಾಗಿ ಕಾರ್ಯ ನಿರ್ವಹಿಸುವ ಹಲವಾರು ಸಂಘಸಂಸ್ಥೆಗಳು ಬಾಲಕಾರ್ಮಿಕತೆ ಕುರಿತು ಜಾಗೃತಿ ಸಪ್ತಾಹ ನಡೆಸುತ್ತಿವೆ. ಭಾರತ ಸರ್ಕಾರವು ದೇಶದ ಒಟ್ಟು ಜನಸಂಖ್ಯೆಯ ಶೇ.40ರಷ್ಟಿರುವ 18 ವರ್ಷದೊಳಗಿನ ಮಕ್ಕಳ ಹಿತಾಸಕ್ತಿಗಳನ್ನು ಕಾಪಾಡಲು ರಾಷ್ಟ್ರೀಯ ಮಕ್ಕಳ ನೀತಿ 2013ನ್ನು ಜಾರಿಗೆ ತಂದಿದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 1989ರಲ್ಲಿ ಸಹಿ ಹಾಕಿದೆ. ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ ಕಾಯ್ದೆ) 1986ರ ಮೂಲಕ ಬಾಲಕಾರ್ಮಿಕ ಪದ್ಧತಿಯನ್ನು ಅಳಿಸಿ ಹಾಕಲು ಪ್ರಯತ್ನಿಸುತ್ತಿದೆ. ಸುಸ್ಥಿರ ಅಭಿವೃದ್ಧಿ ಗುರಿಯೊಂದಿಗೆ 2025ರೊಳಗೆ ಬಾಲಕಾರ್ಮಿಕತೆಯನ್ನು ಸಂಪೂರ್ಣವಾಗಿ ಅಳಿಸಿ ಹಾಕುವ ಯೋಜನೆ ಹೊಂದಲಾಗಿದೆ.

ಆದರೂ ಇಂದಿಗೂ ಕೃಷಿ ಚಟುವಟಿಕೆಗಳಲ್ಲಿ, ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ, ಕಾರ್ಪೆಟ್ ನೇಯ್ಗೆಯಲ್ಲಿ, ಇಟ್ಟಿಗೆ ಗೂಡುಗಳಲ್ಲಿ, ಕಟ್ಟಡ ಕಾಮಗಾರಿಗಳಲ್ಲಿ, ಗಣಿಗಾರಿಕೆಯಲ್ಲಿ, ಕ್ವಾರಿಗಳಲ್ಲಿ, ಕಟ್ಟಡ ಕಾಮಗಾರಿಗಳಲ್ಲಿ, ಮನೆಕೆಲಸದಲ್ಲಿ, ಗ್ಯಾರೇಜುಗಳಲ್ಲಿ, ಹೋಟೆಲುಗಳಲ್ಲಿ ಮತ್ತಿತರ ಅಸಂಘಟಿತ ಕ್ಷೇತ್ರಗಳಲ್ಲಿ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇದರಿಂದ ಅವರ ಬಾಲ್ಯ ಕಮರಿಹೋಗುತ್ತಿದ್ದು, ಶಿಕ್ಷಣದ ಹಕ್ಕಿನಿಂದ ವಂಚಿತರಾಗಿ, ಅಗ್ಗದ ಕೆಲಸಗಳನ್ನು ಮಾಡುತ್ತಾ, ಗೌರವ ಮತ್ತು ಘನತೆಯ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ.

ಭಾರತದ ಪ್ರತಿ 10 ಮಕ್ಕಳಲ್ಲಿ ಒಂದು ಮಗು ಬಾಲಕಾರ್ಮಿಕತೆಗೆ ಸಿಲುಕಿದೆ. 6ರಿಂದ 13 ವರ್ಷದೊಳಗಿನ ಶೇ.3.48ರಷ್ಟು ಮಕ್ಕಳು ಬಾಲಕಾರ್ಮಿಕರಾಗಿದ್ದು, ಅವರಲ್ಲಿ ಹೆಣ್ಣು ಮಕ್ಕಳ ಪ್ರಮಾಣ ಶೇ.3.30. ಮಾರ್ಚ್ 9, 2022ರ ಡೆಕ್ಕನ್ ಹೆರಾಲ್ಡ್‌ ಕರ್ನಾಟಕದಲ್ಲಿ 2018ರಲ್ಲಿ 64, 2020ರಲ್ಲಿ 54, 2021ರಲ್ಲಿ 58 ಮತ್ತು 2022ರಲ್ಲಿ 61 ಪ್ರಕರಣಗಳು ವರದಿಯಾಗಿವೆ. 2020ರಲ್ಲಿ 172, 2021ರಲ್ಲಿ 315 ಹಾಗೂ 2022ರ ನವಂಬರ್ ಅವಧಿಯಲ್ಲಿ ರಾಜ್ಯ ಕಾರ್ಮಿಕ ಇಲಾಖೆ 395 ಮಕ್ಕಳನ್ನು ರಕ್ಷಿಸಿದೆ. ವರದಿಯಾಗದ ಪ್ರಕರಣಗಳ ಸಂಖ್ಯೆ ಮತ್ತು ರಕ್ಷಿಸಲಾಗದ ಬಾಲಕಾರ್ಮಿಕರ ಸಂಖ್ಯೆ ವಾಸ್ತವಿಕವಾಗಿ ಹೆಚ್ಚಿನ ಪ್ರಮಾಣದಲ್ಲಿದೆ.

Advertisements
chaild labourr

ಮಕ್ಕಳನ್ನು ಕಾನೂನುಬಾಹಿರವಾಗಿ ದುಡಿಮೆಗೆ ಇಟ್ಟುಕೊಳ್ಳಲು ಪ್ರಮುಖ ಕಾರಣಗಳೆಂದರೆ ಪೋಷಕರು ಮಾಡುವ ಸಾಲ, ಅಗ್ಗದ ದುಡಿಮೆ, ಕಡಿಮೆ ಕೂಲಿಗೆ ಹೆಚ್ಚಿನ ಕೆಲಸ ಇತ್ಯಾದಿ. ಮಕ್ಕಳು ದನಿ ಇಲ್ಲದವರಾಗಿದ್ದು, ತಮ್ಮ ಮೇಲಿನ ದೌರ್ಜನ್ಯ ದಬ್ಬಾಳಿಕೆಯನ್ನು ಸಹಿಸಿಕೊಳ್ಳುವುದು, ಅನ್ಯಾಯದ ವಿರುದ್ಧ ಸಿಡಿದೇಳದಿರುವುದು ಕೂಡ ಮತ್ತೊಂದು ಪ್ರಮುಖ ಕಾರಣ. ಬಾಲಕಾರ್ಮಿಕರಲ್ಲಿ ಅತಿ ಹೆಚ್ಚು ಶೋಷಣೆಗೆ ಒಳಗಾಗುವವರು ಹೆಣ್ಣು ಮಕ್ಕಳು. ಕೃಷಿ ಸಂಬಂಧಿತ ಕೆಲಸದಲ್ಲಿ ಭೂಮಾಲೀಕರಿಂದ, ಗಾರ್ಮೆಂಟ್ ಮತ್ತಿತರ ಫ್ಯಾಕ್ಟರಿಗಳಲ್ಲಿ ಸೂಪರ್‍ವೈಸರ್ ಮತ್ತು ಮಾಲೀಕರಿಂದ, ಅಪಾರ್ಟ್‍ಮೆಂಟ್/ ಮನೆ ಕೆಲಸದಲ್ಲಿ ಮನೆ ಒಡೆಯರಿಂದ ಮಾನಸಿಕವಾಗಿ, ದೈಹಿಕವಾಗಿ ಶೋಷಣೆಗೆ ತುತ್ತಾಗುತ್ತಿದ್ದಾರೆ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ಪ್ರಕರಣಗಳು ಆಗಾಗ ಕೇಳಿ ಬರುತ್ತಿರುತ್ತವೆ. ಮಾಲೀಕರ ಅಸೆ ಆಮಿಷಗಳಿಗೆ ಒಲಿಯದಿದ್ದರೆ ಕಳ್ಳತನದ ಆರೋಪ ಹೊರಿಸುವ ಮತ್ತು ಚಾರಿತ್ರ್ಯವಧೆ ಮಾಡುವ ಘಟನೆಗಳು ಸಂಭವಿಸುತ್ತವೆ.

ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವ ಹೊಣೆಗಾರಿಕೆ ಹೊತ್ತಿರುವ ಕಾರ್ಮಿಕ ಇಲಾಖೆಯಲ್ಲಿ ಸೂಕ್ತ ಸಿಬ್ಬಂದಿಗಳಿಲ್ಲ ಎನ್ನುವುದು ಬಹು ವರ್ಷಗಳ ಅಪವಾದವಾಗಿದೆ. ಕೆಲವೆಡೆ ಜಿಲ್ಲಾ ಮಟ್ಟದಲ್ಲಿ ಕೇವಲ ಇಬ್ಬರು ಅಧಿಕಾರಿಗಳು ಒಂದಿಡೀ ಜಿಲ್ಲೆಯನ್ನು ನಿಭಾಯಿಸಬೇಕಾಗಿದೆ. ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ ಕಾಯ್ದೆ) 1986ರ ಪ್ರಕಾರ, ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರ ಮೊದಲ ಅಪರಾಧಕ್ಕೆ 6 ತಿಂಗಳಿಂದ 2ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 20,000ರೂಪಾಯಿಗಳಿಂದ 50,000 ರೂಪಾಯಿಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಪುನರಾವರ್ತಿತ ಅಪರಾಧಕ್ಕೆ 1ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ, ಸದರಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೊಳಗಾದ ಮಾಲೀಕರು ಅತ್ಯಂತ ವಿರಳ. ಇದಕ್ಕೆ ಕಾರಣ, ಸದರಿ ಕಾನೂನಿನ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದ ಇಛ್ಛಾಶಕ್ತಿಯ ಕೊರತೆ, ಮಾಲೀಕರ ಒತ್ತಡ ತಂತ್ರ ಇಲ್ಲವೇ ಭ್ರಷ್ಟಾಚಾರ. ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ ಕಾಯ್ದೆ) 1986ನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕಾದ ಜವಾಬ್ದಾರಿ ಕಾರ್ಮಿಕ ಇಲಾಖೆ ಜೊತೆ ಪೊಲೀಸ್ ಇಲಾಖೆಗೂ ಇದೆ.

ಇದನ್ನು ಓದಿ ಅಮೆಜಾನ್‌ ಕಾಡಿನಲ್ಲಿ ಪತನಗೊಂಡ ವಿಮಾನ; ಬದುಕುಳಿದ ಮಕ್ಕಳ ನೈಜ ಕಥನಕ್ಕೆ ಕಾದಿದೆ ಜಗತ್ತು

ಬಾಲಕಾರ್ಮಿಕರನ್ನು ಪತ್ತೆಹಚ್ಚಲು ನಿರಂತರವಾಗಿ ಫ್ಯಾಕ್ಟರಿಗಳಿಗೆ, ಅಸಂಘಟಿತ ಕ್ಷೇತ್ರದ ಸಣ್ಣ ಉದ್ದಿಮೆಗಳಿಗೆ, ಅಪಾರ್ಟ್‍ಮೆಂಟ್‍ಗಳಿಗೆ, ಹೊಲಗದ್ದೆಗಳಿಗೆ, ಇಟ್ಟಿಗೆ ಗೂಡುಗಳಿಗೆ, ಕಟ್ಟಡ ಕಾಮಗಾರಿಗಳಿಗೆ, ಗಣಿಗಾರಿಕೆ ಪ್ರದೇಶಗಳಿಗೆ, ಕ್ವಾರಿಗಳಿಗೆ, ಹೋಟೆಲ್ ಇತ್ಯಾದಿ ಕಡೆಗಳಿಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ದಿಢೀರ್ ದಾಳಿಗಳನ್ನು ನಡೆಸುತ್ತಿರಬೇಕು. ಇದಕ್ಕೆ ಬದಲಾಗಿ ವರ್ಷಕ್ಕೆ ಒಂದೆರಡು ಬಾರಿ ದಾಳಿ ಮಾಡಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವುದಕ್ಕಷ್ಟೇ ಇಂತಹ ಕಾರ್ಯಾಚರಣೆಗಳು ಸೀಮಿತವಾಗಿವೆ. ಜಿಲ್ಲಾಧಿಕಾರಗಳ ಅಧ್ಯಕ್ಷತೆಯ District ChildLabour Task Force ಗಳು ನೆಪಮಾತ್ರಕ್ಕೆ ಅಸ್ತಿತ್ವದಲ್ಲಿದ್ದು ನಿಷ್ಕ್ರಿಯವಾಗಿವೆ. ಅವುಗಳನ್ನು ಕ್ರಿಯಾಶೀಲಗೊಳಿಸಿ, ಕಡ್ಡಾಯವಾಗಿ 3 ತಿಂಗಳಿಗೊಮ್ಮೆ ಸಭೆ ನಡೆಸುವಂತೆ ಮಾಡಬೇಕಾಗಿದೆ.

ಬಾಲಕಾರ್ಮಿಕತೆಯಿಂದ ರಕ್ಷಿಸಲ್ಪಟ್ಟ ಮಕ್ಕಳು ಕುಟುಂಬದ ಸಂಕಷ್ಟಗಳ ಕಾರಣದಿಂದ ಪುನಃ ಬಾಲಕಾರ್ಮಿಕರಾಗಿ ಬೇರೆ ಕಡೆಗಳಲ್ಲಿ ದುಡಿಮೆಗೆ ಸೇರಿಕೊಳ್ಳುವುದರಿಂದ, ಅವರನ್ನು ಕಡ್ಡಾಯವಾಗಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಸತಿ ಶಾಲೆಗಳಲ್ಲಿ ಸೇರಿಸಿ, ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಪ್ರತಿ ಶೈಕ್ಷಣಿಕ ಸಾಲಿನಲ್ಲಿ, ಶಾಲೆ ಬಿಟ್ಟ ಮತ್ತು ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಮೀಕ್ಷೆಯನ್ನು ಕಾರ್ಮಿಕ ಇಲಾಖೆ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಮಾಡಬೇಕು ಹಾಗೂ ಆ ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ಖಾತ್ರಿಪಡಿಸಬೇಕು.

ಸಹಸ್ರಾರು ವರ್ಷಗಳಿಂದ ಜಾಗತಿಕವಾಗಿ ಬೆಳೆದು ಬಂದಿರುವ ಬಾಲಕಾರ್ಮಿಕ ಪದ್ಧತಿಯನ್ನು ಕೇವಲ ಕಾರ್ಮಿಕ ಇಲಾಖೆಯಿಂದ ಮಾತ್ರ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಬಾಲಕಾರ್ಮಿಕ ಪದ್ಧತಿಯನ್ನು ನಿಗ್ರಹಿಸಲು ಮಕ್ಕಳ ಹಕ್ಕುಗಳ ರಕ್ಷಣೆಯ ಹೊಣೆ ಹೊತ್ತಿರುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿಶೇಷ ಮಕ್ಕಳ ಪೊಲೀಸ್ ಘಟಕ, ಜಿಲ್ಲಾ ಬಾಲ ಕಾರ್ಮಿಕ Task Force, ಮಕ್ಕಳ ಸಹಾಯವಾಣಿ, ಮಕ್ಕಳ ಹಕ್ಕುಗಳ ಸಂಘಸಂಸ್ಥೆಗಳು ಹಾಗೂ ರಾಜ್ಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇವುಗಳೊಂದಿಗೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ.

ಇದನ್ನು ಓದಿ ಶಕ್ತಿ ಯೋಜನೆ | ಮತ್ತಷ್ಟು ‘ಸ್ವಾತಂತ್ರ್ಯ’ದತ್ತ ಮಹಿಳೆಯರ ಸವಾರಿ

ಬಾಲಕಾರ್ಮಿಕ ಪದ್ಧತಿಯನ್ನು ಕೇವಲ ಮೇಲ್ಮಟ್ಟದ ತೇಪೆಹಚ್ಚುವ ಕಾರ್ಯಚಟುವಟಿಕೆಗಳಿಂದ/ಯೋಜನೆಗಳಿಂದ ಬುಡಸಮೇತ ಕಿತ್ತುಹಾಕಲು ಸಾಧ್ಯವಿಲ್ಲ. ಏಕೆಂದರೆ, ಇದೊಂದು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಸಂಪತ್ತಿನ ಒಡೆತನ, ಆರ್ಥಿಕ ಸಂಪನ್ಮೂಲಗಳಿಂದ ವಂಚಿತರಾಗಿರುವ ಮತ್ತು ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಟ್ಟಿರುವ ದಲಿತ, ಆದಿವಾಸಿ, ಹಿಂದುಳಿದ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳೇ ಅತ್ಯಧಿಕವಾಗಿ ಬಾಲಕಾರ್ಮಿಕ ಪದ್ಧತಿಗೆ ಬಲಿಯಾಗುತ್ತಿದ್ದಾರೆ ಎನ್ನುವುದು ಚಾರಿತ್ರಿಕ ಸತ್ಯ.

ಸಾಮಾಜಿಕ ಅಭದ್ರತೆಯಲ್ಲಿರುವ ಈ ಸಮುದಾಯಗಳ ಮಕ್ಕಳಿಗೆ “ಮಕ್ಕಳ ಉಚಿತ ಮತ್ತು ಕಾಡ್ಡಾಯ ಶಿಕ್ಷಣ ಹಕ್ಕಿನ ಕಾಯ್ದೆ-2009”ರ ಆಶಯದಂತೆ ಈ ದೇಶದ ಪ್ರತಿಯೊಂದು ಮಗುವಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು, ಯುವಕರಿಗೆ ಉದ್ಯೋಗ, ಭೂರಹಿತರಿಗೆ ಭೂಹಂಚಿಕೆ, ಅಲೆಮಾರಿ ಬುಡಕಟ್ಟು ಸಮುದಾಯಗಳಿಗೆ ಶಾಶ್ವತ ಜೀವನಾಧಾರ ಮತ್ತು ಸೂರು ಒದಗಿಸುವುದರ ಮೂಲಕ ಹಂತಹಂತವಾಗಿ ಬಾಲಕಾರ್ಮಿಕ ಪದ್ಧತಿಯನ್ನು ನಿರ್ನಾಮ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರ ನೇತೃತ್ವದಲ್ಲಿ ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಚಿಂತಿಸುವಂತಾಗಲಿ ಹಾಗೂ ಬರುವ ದಿನಗಳಲ್ಲಿ ಈ ರಾಜ್ಯದ ಪ್ರತಿಯೊಂದು ಮಗುವಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣವನ್ನು “ಗ್ಯಾರಂಟಿ”ಯಾಗಿ ಅನುಷ್ಠಾನಗೊಳಿಸುವಂತಾಗಲಿ ಎಂದು ಆಶಿಸಬಹುದೇ?

ವೈ ಮರಿಸ್ವಾಮಿ ೧
ವೈ ಮರಿಸ್ವಾಮಿ
+ posts
ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

 

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವೈ ಮರಿಸ್ವಾಮಿ
ವೈ ಮರಿಸ್ವಾಮಿ
ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
 

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X