ನವೆಂಬರ್‌ನಲ್ಲಿ ನಡೆದ ಐಪಿಎಲ್ ಹರಾಜಿನ ವೇಳೆ ವೈಭವ್ ಸೂರ್ಯವಂಶಿ ಅವರನ್ನು 1.1 ಕೋಟಿ ರೂಪಾಯಿಗೆ ಆರ್‌ಆರ್ ಖರೀದಿಸಿತ್ತು.
ರಾಜಸ್ಥಾನ ರಾಯಲ್ಸ್ (ಆರ್‌ಆರ್) ತಂಡದ ಪ್ರಮುಖ ಬ್ಯಾಟರ್ ಸಂಜು ಸ್ಯಾಮ್ಸನ್ ಗಾಯಗೊಂಡ ಕಾರಣದಿಂದ ಲಕ್ನೋ ಲೂಪರ್ ಜೈಂಟ್ಸ್ (ಎಲ್‌ಸಿಜಿ) ವಿರುದ್ಧದ ನಿನ್ನೆಯ ಪಂದ್ಯದಲ್ಲಿ ಆರ್‌ಆರ್ ವಿಶೇಷ ಪ್ರಯೋಗವನ್ನು ಮಾಡಿ, ಅಚ್ಚರಿ ಮೂಡಿಸಿದೆ.
ಕೇವಲ ಹದಿನಾಲ್ಕು ವರ್ಷದ ಬಾಲಕ ವೈಭವ್ ಸೂರ್ಯವಂಶಿಯವರನ್ನು ಘಟಾನುಘಟಿ ಬೌಲರ್‌ಗಳ ಎದುರು ಮೊದಲ ಕ್ರಮಾಂಕದಲ್ಲಿ ಆಡಲು ಕೋಚ್ ರಾಹುಲ್ ದ್ರಾವಿಡ್ ಕಳುಹಿಸಿದ್ದರು. ಜೈಪುರ್‌ದಲ್ಲಿ ನಡೆದ ಪಂದ್ಯದಲ್ಲಿ 180 ರನ್‌ಗಳ ಬೆನ್ನು ಹತ್ತಿದ ಆರ್‌ಆರ್ 2 ರನ್‌ಗಳಿಂದ ಸೋತರು ಕೂಡ ಈ ಹದಿಹರೆಯದ ಹುಡುಗನ ಆಟ ಎಲ್ಲರ ಮನಗೆದ್ದಿದೆ. ಮೊದಲ ಪಂದ್ಯದಲ್ಲೇ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿರುವ ಬಾಲಕ ಅಚ್ಚರಿ ಮೂಡಿಸಿದ್ದಾನೆ.
ಹೌದು, ಐಪಿಎಲ್‌ನಲ್ಲಿ ಕಮಾಲ್ ಮಾಡಿ, ಎಲ್ಲರ ಗಮನವನ್ನು ತನ್ನತ್ತ ತಿರುಗಿಸಿಕೊಂಡಿರುವ ಬಾಲಕ ವೈಭವ್ ಸೂರ್ಯವಂಶಿಗೆ 14 ವರ್ಷ 23 ದಿನಗಳು.
ವೈಭವ್ ತಾನು ಆಡಿದ ಮೊದಲ ಬಾಲ್‌ನಲ್ಲಿ ಸಿಕ್ಸರ್ ಬಾರಿಸಿಬಿಟ್ಟರು. ಅದು ಯಾರಿಗೆ? ಅದ್ಭುತ ಬೌಲರ್ ಶಾರ್ದೂಲ್ ಠಾಕೂರ್‌ಗೆ. ಐಪಿಎಲ್ ಆರಂಭವಾಗಿ 18 ವರ್ಷ. ಈ ಬಾಲಕನಿಗೆ 14 ವರ್ಷ. ಕಿರಿಯ ವಯಸ್ಸಿನಲ್ಲೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಖ್ಯಾತಿ ಸೂರ್ಯವಂಶಿ ಅವರದ್ದಾಗಿದೆ. ಈ ಸಾಧನೆ ಇದಕ್ಕಿಂತ ಮೊದಲಿಗೆ ಪ್ರಯಾಸ್ ರೇ ಬರ್ಮನ್ ಅವರದ್ದಾಗಿತ್ತು. 2019ರಲ್ಲಿ ಪ್ರಯಾಸ್ ಅವರು ಆರ್‌ಸಿಬಿ ತಂಡಕ್ಕಾಗಿ ಆಡಿದಾಗ ಅವರಿಗೆ 16 ವರ್ಷ 157 ದಿನಗಳಾಗಿದ್ದವು. ಆದರೆ 14 ವರ್ಷ 23 ದಿನಗಳಿಗೆಯೇ ಐಪಿಎಲ್‌ನಲ್ಲಿ ಆಡಿ, ಅತಿ ಕಿರಿಯ ವಯಸ್ಸಿನಲ್ಲೇ ಐಪಿಎಲ್‌ಗೆ ಕಾಲಿಟ್ಟ ದಾಖಲೆಯನ್ನು ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ.
ಮೊದಲ ಬಾಲ್‌ನಲ್ಲೇ ಸಿಕ್ಸ್ ಬಾರಿಸಿ ಐಪಿಎಲ್ ಕೆರಿಯರ್ ಆರಂಭಿಸಿದ ಆಟಗಾರರ ಪಟ್ಟಿಗೆ ಸೂರ್ಯವಂಶಿ ಸೇರ್ಪಡೆಯಾಗಿದ್ದಾರೆ. ಆಸ್ಟ್ರೇಲಿಯಾದ ರಾಬ್ ಕ್ವಿನಿ, ಕೆರಿಬಿಯನ್‌ನ ಕೆವೊನ್ ಕೂಪರ್, ವೆಸ್ಟ್ ಇಂಡೀಸ್ ಆಟಗಾರರಾದ ಆಂಡ್ರೆ ರಸೆಲ್, ಕಾರ್ಲೋಸ್ ಬ್ರೈತ್‌ವೈಟ್, ಜಾವೊನ್ ಸಿಯರ್ಲ್ಸ್, ಭಾರತದ ಆಟಗಾರರಾದ ಅನಿಕೇತ್ ಚೌಧರಿ, ಸಮೀರ್ ರಿಜ್ವಿ, ಸಿದ್ಧೇಶ್ ಲಾಡ್, ಶ್ರೀಲಂಕಾದ ಮಹೇಶ್ ತೀಕ್ಷಣಾ ಅವರು ಐಪಿಎಲ್‌ಗೆ ಕಾಲಿಟ್ಟ ಮೊದಲ ಪಂದ್ಯದಲ್ಲಿಯೇ ಮೊದಲ ಬಾಲ್‌ನಲ್ಲೇ ಸಿಕ್ಸ್ ಭಾರಿಸಿದ ಆಟಗಾರರು. ಈ ಪಟ್ಟಿಗೆ ಹೊಸ ಸೇರ್ಪಡೆ ಸೂರ್ಯವಂಶಿ.
ಇದನ್ನೂ ಓದಿರಿ: ಐಪಿಎಲ್ 2025 | ಅಪರೂಪದ ಸಚಿನ್ ದಾಖಲೆ ಮುರಿದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್
20 ಎಸೆತಗಳಲ್ಲಿ 34 ರನ್ ಗಳಿಸಿದ ಸೂರ್ಯವಂಶಿ ಬ್ಯಾಟ್‌ನಿಂದ 3 ಸಿಕ್ಸರ್, 2 ಫೋರ್‌ಗಳು ಹೊಮ್ಮಿದವು. ಜೊತೆಗೆ ಯಶಸ್ವಿ ಜೈಸ್ವಾಲ್ ಅವರೊಂದಿಗೆ 85 ರನ್‌ಗಳ ಆರಂಭಿಕ ಜೊತೆಯಾಟವನ್ನೂ ಸೂರ್ಯವಂಶಿ ನೀಡಿದರು. ದುರದೃಷ್ಟವಶಾತ್ ಆಡಂ ಮಾಕ್ರಮ್ ಬೌಲಿಂಗ್ ವೇಳೆ ಕೀಪರ್ ರಿಷಬ್ ಪಂತ ಸ್ಟಂಪ್ ಔಟ್ ಮಾಡಿದರು. ಬೇಸರದಿಂದ ಸೂರ್ಯವಂಶಿ ಕಣ್ಣೀರು ಹಾಕುತ್ತಾ ಹೊರನಡೆದರು. ಮೊದಲ ಪಂದ್ಯದಲ್ಲೇ ಅರ್ಧ ಶತಕ ಮಾಡಲಾಗದೆ ಬೇಸರಗೊಂಡರು.

ನವೆಂಬರ್‌ನಲ್ಲಿ ನಡೆದ ಐಪಿಎಲ್ ಹರಾಜಿನ ವೇಳೆ ವೈಭವ್ ಸೂರ್ಯವಂಶಿ ಅವರನ್ನು 1.1 ಕೋಟಿ ರೂಪಾಯಿಗೆ ಆರ್‌ಆರ್ ಖರೀದಿಸಿತ್ತು. ಆಸ್ಟ್ರೇಲಿಯಾ ವಿರುದ್ಧ ಅಂಡರ್ 19 ಟೆಸ್ಟ್ ಕ್ರಿಕೆಟ್‌ನಲ್ಲಿ ಸೂರ್ಯವಂಶಿ 58 ಎಸೆತಗಳಲ್ಲಿ ಶತಕ ಗಳಿಸಿದ್ದನ್ನು ಆರ್‌ಆರ್ ಗಮನಿಸಿತ್ತು. ನಿನ್ನೆಯ ಪಂದ್ಯಕ್ಕೂ ಮುನ್ನ ವೇಗದ ಬೌಲರ್ ಜೋಪ್ರಾ ಆರ್ಚರ್ ಅವರ ಎಸೆತಗಳನ್ನು ನೆಟ್‌ನಲ್ಲಿ ಸೂರ್ಯವಂಶಿ ಎದುರಿಸಿದ್ದರು. ಅವರ ಕಾನ್ಫಿಡೆನ್ಸ್ ನೋಡಿ ಅವಕಾಶ ನೀಡಿದ್ದು ವಿಶೇಷ. ಅಂದಹಾಗೆ ವೈಭವ್ ಸೂರ್ಯವಂಶಿ ಬಿಹಾರ ಮೂಲದವರು. ಕ್ರಿಕೆಟ್ ಕೆರಿಯರ್‌ನಲ್ಲಿ ದಾಖಲೆಗಳನ್ನು ಬರೆಯುವ ಸೂಚನೆಗಳನ್ನು ನೀಡಿರುವ ಇವರಿಗೆ ಮತ್ತಷ್ಟು ಅವಕಾಶಗಳು ಸಿಗಲಿ ಎಂಬುದು ಕ್ರಿಕೆಟ್ ಪ್ರೇಮಿಗಳ ಆಶಯ.
