ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್‌ನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟೆಸ್ಟ್‌ನ ಕೊನೆಯ ದಿನ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ಕೈಕೊಟ್ಟ ಪರಿಣಾಮ 184 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿದೆ.
ನಾಲ್ಕನೇ ಟೆಸ್ಟ್‌ನ ಗೆಲುವಿನೊಂದಿಗೆ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು, ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-1 ಗೆಲುವಿನೊಂದಿಗೆ ಮುನ್ನಡೆ ಕಾಯ್ದುಕೊಂಡಿದೆ. ಕೊನೆಯ ಟೆಸ್ಟ್ ಪಂದ್ಯವು ಸಿಡ್ನಿಯಲ್ಲಿ ನಡೆಯಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಲು ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗವು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಒಂದು ವೇಳೆ ಸೋತರೆ ಅಥವಾ ಡ್ರಾ ಆದರೆ ಅರ್ಹತೆ ಕಳೆದುಕೊಳ್ಳಲಿದೆ.
SIRAJ LBW.
— 7Cricket (@7Cricket) December 30, 2024
AUSTRALIA WIN AND GO 2-1 UP IN THE SERIES.#AUSvIND pic.twitter.com/pSYhfMvOOR
ಮೆಲ್ಬೋರ್ನ್ನಲ್ಲಿ ನಡೆದ ಬಾರ್ಡರ್ – ಗವಾಸ್ಕರ್ ಟ್ರೋಫಿ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 122.4 ಓವರ್‌ಗಳಲ್ಲಿ 474 ರನ್‌ಗಳಿಗೆ ಆಲೌಟ್ ಆಗಿತ್ತು. 311/6 ರನ್‌ನೊಂದಿಗೆ ಎರಡನೇ ದಿನದಾಟ ಆರಂಭಿಸಿದ್ದ ಆಸ್ಟ್ರೇಲಿಯಾವು ಸ್ಟೀವನ್ ಸ್ಮಿತ್ ಅವರ ಆಕರ್ಷಕ ಶತಕದ(140) ನೆರವಿನಿಂದಿಗೆ 470ರ ಗಡಿ ದಾಟಿತ್ತು.
ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ರೋಹಿತ್ ಬಳಗವು, ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಉತ್ತಮ ಆಟವಾಡಿದ್ದರಿಂದ ಫಾಲೋ ಆನ್ ಭೀತಿಯಿಂದ ಪಾರಾಗಿತ್ತು. ಶನಿವಾರ ದಿನದಾಟದ ಕೊನೆಗೆ 9ಕ್ಕೆ 358 ರನ್ ಗಳಿಸಿದ್ದ ಭಾರತ ತಂಡವು ಭಾನುವಾರ ಹೆಚ್ಚು ಹೊತ್ತು ಆಡಲಿಲ್ಲ. ಈ ಮೊತ್ತಕ್ಕೆ 11 ರನ್‌ಗಳು ಸೇರಿದ ನಂತರ ಸ್ಪಿನ್ನರ್ ನೇಥನ್ ಲಯನ್ ಬೌಲಿಂಗ್‌ನಲ್ಲಿ ಮೊದಲ ಶತಕ ಬಾರಿಸಿ ಮಿಂಚಿದ್ದ (114 ರನ್) ನಿತೀಶ್ ಕುಮಾರ್ ರೆಡ್ಡಿ ಔಟಾದರು. ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 369 ರನ್ ದಾಖಲಿಸಿತ್ತು. ಇದರಿಂದಾಗಿ ಆಸ್ಟ್ರೇಲಿಯಾ 105 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿತ್ತು.
ಮೊದಲ ಇನ್ನಿಂಗ್ಸ್‌ನಲ್ಲಿ 105 ರನ್ ಮುನ್ನಡೆ ಪಡೆದಿದ್ದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 235 ರನ್‌ಗಳ ಗೆಲುವಿನ ಗುರಿಯನ್ನು ಭಾರತ ತಂಡಕ್ಕೆ ನೀಡಿತು. ಗುರಿ ಬೆನ್ನಟ್ಟಿದ ಭಾರತ 155 ರನ್‌ಗಳಿಗೆ ಸರ್ವ ಪತನವಾಗುವ ಮೂಲಕ ಅವಮಾನಕರ ಸೋಲು ಕಂಡಿದೆ.
