ವಿಶ್ವಕಪ್ ಕ್ರಿಕೆಟ್ | ಅಫ್ಘಾನ್ ವಿರುದ್ಧ ಹೀನಾಯ ಸೋಲು; ಟೀಕೆ, ಲೇವಡಿಗೆ ಗುರಿಯಾದ ಪಾಕ್ ತಂಡ

Date:

Advertisements
  • ಎಂಟು ಕೆ ಜಿ ಮಟನ್ ತಿಂತೀರಾ, ಉತ್ತಮ ಪ್ರದರ್ಶನ ಯಾಕಿಲ್ಲ -ವಾಸೀಮ್ ಅಕ್ರಂ, ಪಾಕ್ ಮಾಜಿ ಕ್ರಿಕೆಟಿಗ
  • ಇಷ್ಟೊಂದು ಕಳಪೆ ಪ್ರದರ್ಶನ ಕನಸಲ್ಲೂ ನಿರೀಕ್ಷಿಸಿರಲಿಲ್ಲ -ಮೋಮಿನ್ ಸಾಕಿಬ್, ಪಾಕ್ ಕ್ರಿಕೆಟ್ ಅಭಿಮಾನಿ
  • ಬಾಬರ್ ಆಝಂ ಮೊದಲು ನಾಯಕತ್ವ ತ್ಯಜಿಸಬೇಕು, ಬ್ಯಾಟಿಂಗ್ ಮಾಡಬೇಕು- ಬಾಸಿತ್ ಅಲಿ, ಪಾಕ್ ಕ್ರೀಡಾ ನಿರೂಪಕ
  • ಇಂತಹ ಪಂದ್ಯಗಳನ್ನು ನೋಡುವಾಗ ಮನಸ್ಸಿಗೆ ತುಂಬಾ ನೋವಾಗುತ್ತೆ -ಮೊಹಮ್ಮದ್ ಹಫೀಝ್, ಪಾಕ್ ಮಾಜಿ ಕ್ರಿಕೆಟಿಗ

ಈ ರೀತಿಯ ಹೇಳಿಕೆಗಳು ಬರುತ್ತಿರುವುದು ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಸೋಮವಾರ ನಡೆದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕ್‌ ತಂಡದ ಹೀನಾಯ ಸೋಲಿನ ಬಳಿಕ.

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನ್‌ ತಂಡ 8 ವಿಕೆಟ್‌ಗಳ ಗೆಲುವು ಸಾಧಿಸಿದೆ. ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಎರಡು ಗೆಲುವುಗಳನ್ನು ಕಂಡಿದ್ದ ಪಾಕ್‌ ತಂಡ, ಬಳಿಕ ಸತತ ಮೂರು ಸೋಲುಗಳನ್ನು ಕಂಡಿದೆ.

ಪಾಕಿಸ್ತಾನ ತಂಡ ಆಡಿದ ಮೊದಲ ಪಂದ್ಯದಲ್ಲಿ ನೆದರ್‌ಲೆಂಡ್ ಮತ್ತು ಎರಡನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿತ್ತು. ಆ ಬಳಿಕ, ಭಾರತ ಮತ್ತು ಆಸ್ಟ್ರೇಲಿಯಾ ಜೊತೆಗಿನ ಪಂದ್ಯದಲ್ಲಿ ಸೋಲುಂಡಿತ್ತು. ಇದೀಗ, ಅಫ್ಘಾನ್ ವಿರುದ್ಧವೂ ಆಘಾತಕಾರಿಯಾಗಿ ಸೋತಿದೆ.

Advertisements

ಪಾಕಿಸ್ತಾನವನ್ನು ಬಗ್ಗು ಬಡಿದು ಅಫ್ಘಾನಿಸ್ತಾನ ತಂಡ ಐತಿಹಾಸಿಕ ಗೆಲುವಿನ ಸಾಧನೆ ಮಾಡಿದ ಖುಷಿಯಲ್ಲಿದ್ದರೆ, ಪಾಕಿಸ್ತಾನದಲ್ಲಿ ತಂಡದ ಪ್ರದರ್ಶನದ ವಿರುದ್ಧ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಫ್ಘಾನ್ ವಿರುದ್ಧದ ನಿನ್ನೆಯ ಸೋಲನ್ನು ಅರಗಿಸಿಕೊಳ್ಳಲು ಪಾಕಿಸ್ತಾನ ಅಭಿಮಾನಿಗಳಿಗೆ ಅದರಲ್ಲೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗರಿಗೆ ಆಗುತ್ತಿಲ್ಲ. ವಿಶ್ವಕಪ್‌ನಲ್ಲಿ ತಂಡದ ಪ್ರದರ್ಶನದ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರುತ್ತಿದ್ದಾರೆ.

ಎಂಟು ಕೆ ಜಿ ಮಟನ್ ತಿಂತೀರಾ, ಉತ್ತಮ ಪ್ರದರ್ಶನ ಯಾಕಿಲ್ಲ: ವಾಸೀಮ್ ಅಕ್ರಂ
“ಅಫ್ಘಾನ್ ವಿರುದ್ಧದ ಸೋಲು ತೀವ್ರ ಮುಜುಗರದ ಸಂಗತಿ. ಕೇವಲ ಎರಡು ವಿಕೆಟ್‌ಗಳನ್ನು ಕಳೆದುಕೊಂಡು 282 ರನ್ ಗುರಿಯನ್ನು ಅಫ್ಘಾನ್ ತಲುಪಿದ್ದು ತುಂಬಾ ದೊಡ್ಡ ವಿಚಾರ. ಫೀಲ್ಡಿಂಗ್, ಫಿಟ್‌ನೆಸ್ ಮಟ್ಟ ತೀವ್ರ ಕಳಪೆಯಾಗಿದೆ. ಇದು ಸುಧಾರಿಸಬೇಕು ಎಂದು ನಾವು ಕಳೆದ ಮೂರು ವಾರಗಳಿಂದ ಕಿರುಚುತ್ತಿದ್ದೇವೆ. ಆಟಗಾರರು ಕಳೆದ ಎರಡು ವರ್ಷಗಳಿಂದ ಫಿಟ್‌ನೆಸ್ ಪರೀಕ್ಷೆ ತೆಗೆದುಕೊಂಡಿಲ್ಲ. ನಾನು ಆಟಗಾರರ ವೈಯಕ್ತಿಕ ಹೆಸರುಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರೆ, ಅವರ ಮುಖ ಬಾಡಬಹುದು. ಆಟಗಾರರು ಪ್ರತಿದಿನ 8 ಕಿಲೋ ಮಟನ್ ತಿನ್ನುತ್ತಿದ್ದಾರೆ ಎಂದು ತೋರುತ್ತಿದೆ. ಫಿಟ್‌ನೆಸ್‌ ಪರೀಕ್ಷೆ ಕೂಡ ಮಾಡಬೇಕಲ್ಲವೇ? ವೃತ್ತಿಪರವಾಗಿ ನೀವು ಹಣ ಪಡೆಯುತ್ತಿದ್ದೀರಿ, ನಿಮ್ಮ ದೇಶಕ್ಕಾಗಿ ಆಡುತ್ತಿದ್ದೀರಿ ಎಂಬುದು ನೆನಪಿರಲಿ. ಕೋಟ್ಯಂತರ ಅಭಿಮಾನಿಗಳು ನಿಮ್ಮನ್ನು ನೋಡುತ್ತಿದ್ದಾರೆ ಎಂಬುದನ್ನು ನಿಮ್ಮ ಗಮನದಲ್ಲಿರಲಿ’ ಎಂದು ಕಿಡಿಕಾರಿದ್ದಾರೆ.

ವಿಶ್ವಕಪ್ ಟೂರ್ನಿಗೂ ಮುನ್ನ ಪಾಕಿಸ್ತಾನ ಸೆಮಿಫೈನಲ್ ತಲುಪುವ ನೆಚ್ಚಿನ ತಂಡಗಳಲ್ಲಿ ಒಂದಾಗಿತ್ತು, ಮಾರಕ ವೇಗಿಗಳು, ವಿಶ್ವದ ನಂಬರ್ 1 ಬ್ಯಾಟರ್ ಅನ್ನು ಹೊಂದಿದ್ದ ಪಾಕಿಸ್ತಾನ ಬಲಿಷ್ಠವಾಗಿಯೇ ಕಾಣುತ್ತಿತ್ತು. ಆದರೆ ಸತತ ಮೂರು ಸೋಲುಗಳು ಪಾಕಿಸ್ತಾನದ ಆಟಗಾರರ ಪ್ರದರ್ಶನದ ಬಗ್ಗೆಯೇ ಅಭಿಮಾನಿಗಳು ಆಕ್ರೋಶ ಹೊರಹಾಕಿರುವುದರ ಜೊತೆಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ ಏನು ಮಾಡ್ತಾ ಇದೆ. ಮಲಗಿದ್ದಾರಾ? ಎಂದು ಟ್ವಿಟ್ಟರ್‌ನಲ್ಲಿ ಪ್ರಶ್ನೆಗಳ ಸುರಿಮಳೆ ಸುರಿಯುತ್ತಿದ್ದಾರೆ.

ಪಾಕಿಸ್ತಾನದ ಮಾಜಿ ಆಟಗಾರ ರಮೀಝ್ ರಾಜಾ ಅವರನ್ನು ವಜಾಗೊಳಿಸಿದ ನಂತರ, ಝಕಾ ಅಶ್ರಫ್ ಅವರನ್ನು ನಾಲ್ಕು ತಿಂಗಳ ಕಾಲ ಪಿಸಿಬಿ ಮುಖ್ಯಸ್ಥರನ್ನಾಗಿ ನೇಮಿಸುವ ಮೊದಲು ನಜಮ್ ಸೇಥಿ ಅವರಿಗೆ ಹಂಗಾಮಿ ಅಧ್ಯಕ್ಷರಾಗಿ ಸ್ಥಾನ ನೀಡಲಾಗಿತ್ತು. ಸದ್ಯ ಝಾಕಾ ಅಶ್ರಫ್ ಪಿಸಿಬಿ ಚೇರ್ಮನ್ ಆಗಿದ್ದಾರೆ.

ಹಾದಿ ಕಠಿಣ
ಪಾಕಿಸ್ತಾನ ಮುಂದಿನ ಸೆಮಿಫೈನಲ್ ಹಾದಿ ಬಹಳ ಕಠಿಣವಾಗಿದ್ದು, ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಮುಂದೆ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ, ಕೋಲ್ಕತ್ತಾದಲ್ಲಿ ಬಾಂಗ್ಲಾದೇಶ ವಿರುದ್ಧ, ಬೆಂಗಳೂರಿನಲ್ಲಿ ನ್ಯೂಝಿಲ್ಯಾಂಡ್, ಕೋಲ್ಕತ್ತಾದಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯವನ್ನು ಎದುರಿಸಲಿದೆ. ಈ ಪಂದ್ಯಗಳ ಪೈಕಿ ಒಂದನ್ನು ಸೋತರೂ ವಿಶ್ವಕಪ್‌ನಿಂದ ಬಹುತೇಕ ಅವರು, ಹೊರ ಬೀಳಲಿದ್ದಾರೆ.

ಅಫ್ಘಾನಿಸ್ತಾನದಲ್ಲಿ ವಿಶ್ವಕಪ್ ಗೆದ್ದಷ್ಟೇ ಸಂಭ್ರಮ!
ಪಾಕಿಸ್ತಾನ ವಿರುದ್ಧ ಅಫ್ಘಾನ್ ಗೆದ್ದಿರುವುದನ್ನು ಅಫ್ಘಾನಿಸ್ತಾನದಲ್ಲಿ ವಿಶ್ವಕಪ್ ಗೆದ್ದಷ್ಟು ಸಂಭ್ರಮವನ್ನಾಗಿ ಆಚರಿಸಲಾಗುತ್ತಿದೆ. ಪಾಕ್ ಅನ್ನು ಮಣಿಸಿದ ಖುಷಿಯಲ್ಲಿ ತಾಲಿಬಾನಿಗಳು ಸೇರಿದಂತೆ ಕ್ರೀಡಾಭಿಮಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿ, ಪಟಾಕಿ ಸಿಡಿಸಿದ್ದಲ್ಲದೇ, ರಸ್ತೆಯಲ್ಲಿ ತಮ್ಮ ದೇಶದ ಧ್ವಜವನ್ನಿಟ್ಟುಕೊಂಡು ಬೃಹತ್ ಮೆರವಣಿಗೆ ಕೂಡ ನಡೆಸಿದ್ದಾರೆ. ಅಫ್ಘಾನಿಸ್ತಾನದ ಡ್ರೆಸ್ಸಿಂಗ್ ರೂಮಿನಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು.

ಪಾಕಿಸ್ತಾನ ವಿರುದ್ಧದ ಅಫ್ಘಾನಿಸ್ತಾನ ತಂಡದ ಗೆಲುವನ್ನು ಭಾರತೀಯರು ಹೆಚ್ಚು ಸಂಭ್ರಮಿಸಿದ್ದು, ಭಾರತದ ಕ್ರಿಕೆಟ್ ದಿಗ್ಗಜರು ಅಫ್ಘಾನ್ ಗೆಲುವಿಗೆ ಶುಭಕೋರಿದ್ದಾರೆ. ಅಫ್ಘಾನ್ ಆಟಗಾರರು ಗೆಲುವಿನ ಬಳಿಕ ಅಭಿಮಾನಿಗಳಿಗೆ ಧನ್ಯವಾದ ಕೂಡ ಹೇಳಿದ್ದಾರೆ.

ಐತಿಹಾಸಿಕ ಜಯ ಸಾಧಿಸಿದ ಬಳಿಕ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ರಶೀದ್ ಖಾನ್ ಅವರೊಂದಿಗೆ ಮೈದಾನದಲ್ಲಿ ನೃತ್ಯ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದೇ ವೇಳೆ, ಪಾಕಿಸ್ತಾನದಲ್ಲಿ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದು, ಇಂತಹ ಪಂದ್ಯಗಳನ್ನು ನೋಡುವಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಇಷ್ಟೊಂದು ಕಳಪೆ ಪ್ರದರ್ಶನ ಕನಸಲ್ಲೂ ನಿರೀಕ್ಷಿಸಿರಲಿಲ್ಲ ಎಂದು ತಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ.

ಅಫ್ಘಾನ್ ಗೆಲುವಿನಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರನ ಪಾತ್ರ
ಅಫ್ಘಾನಿಸ್ತಾನದ ಈ ಗೆಲುವಿನ ಹಿಂದೆ ಟೀಮ್ ಇಂಡಿಯಾದ ಮಾಜಿ ಆಟಗಾರನ ಶ್ರಮ ಕೂಡ ಈಗ ಚರ್ಚೆಯಾಗುತ್ತಿದೆ. ಟೀಮ್ ಇಂಡಿಯಾ ಮಾಜಿ ಆಟಗಾರ ಅಜಯ್ ಜಡೇಜಾ ಅವರನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ತಂಡದ ಮಾರ್ಗದರ್ಶಕರಾಗಿ(ಮೆಂಟರ್) ಆಯ್ಕೆ ಮಾಡಿದೆ.

ಅಜಯ್ ಜಡೇಜಾ ಭಾರತದಲ್ಲಿ ಕ್ರಿಕೆಟ್ ಸಾಕಷ್ಟು ಆಡಿದ್ದರಿಂದ ಇಲ್ಲಿನ ಪಿಚ್ ಗಳ ಜ್ಞಾನ ಅವರಿಗೆ ಚೆನ್ನಾಗಿದೆ. ಅಲ್ಲದೆ ಪಿಚ್ ಕಂಡಿಷನ್ ಬಗ್ಗೆ ಜ್ಞಾನ ಇದೆ. ಈ ಅಂಶಗಳನ್ನು ಮನಗೊಂಡು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಇವರಿಗೆ ಮೆಂಟರ್ ಶಿಪ್ ನೀಡಿದೆ. ಅಜಯ್ ಜಡೇಜಾ ಬಳಿ ಹಲವು ವರ್ಷದ ಕ್ರಿಕೆಟ್ ಅನುಭವ ಇದೆ. ಈ ಅನುಭವವನ್ನು ಅವರು ಅಫ್ಘಾನಿಸ್ತಾನ ತಂಡಕ್ಕೆ ಧಾರೆ ಎರೆಯುತ್ತಿದ್ದಾರೆ.

ಪಾಕ್ ವಿರುದ್ಧದ ಗೆಲುವಿನ ಬಳಿಕ ಅಫ್ಘಾನಿಸ್ತಾನ ತಂಡಕ್ಕೆ ಶುಭಾಶಯ ಕೋರಿ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, “ಬಹುಶಃ ಈ ಅಚ್ಚರಿದಾಯಕ ಗೆಲುವು ಅಜಯ್ ಜಡೇಜಾ ಅವರ ಕಾರಣದಿಂದಾಗಿರಬಹುದು. ಅವರ ಉಪಸ್ಥಿತಿ ತಂಡದ ಮೇಲೆ ಪ್ರಭಾವ ಬೀರಿದೆ” ಎಂದು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X