ಪುರುಷರ 8ನೇ ಆವೃತ್ತಿಯ ಟಿ20 ವಿಶ್ವಕಪ್ ಕ್ರಿಕೆಟ್ ಇಂದಿನಿಂದ ಆರಂಭಗೊಂಡಿದೆ. ಅಮೆರಿಕದ ಡಲ್ಲಾಸ್ನಲ್ಲಿ ಕ್ರೀಡಾಂಗಣದಲ್ಲಿ ನಡೆದ ಅತಿಥೇಯ ಅಮೆರಿಕ ಹಾಗೂ ಕೆನಡಾ ನಡುವಿನ ಪಂದ್ಯದಲ್ಲಿ ಅಮೆರಿಕಾವು ಕೆನಡಾ ವಿರುದ್ಧ 7 ವಿಕೆಟ್ಗಳ ಅಂತರದಿಂದ ಭರ್ಜರಿ ಜಯಗಳಿಸಿತು.
ಸ್ಪೋಟಕ ಆಟವಾಡಿ ಅಜೇಯ 94 ರನ್ ಗಳಿಸಿದ ಅರೋನ್ ಜೋನ್ಸ್ ಹಾಗೂ ಆಂಡ್ರಿಸ್ ಗೌಸ್ ಭರ್ಜರಿ 65 ರನ್ಗಳ ಸಹಾಯದಿಂದ ಕೆನಡಾ ನೀಡಿದ 195 ರನ್ಗಳ ಗುರಿಯನ್ನು ಅಮೆರಿಕ ತಂಡ 17.4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಅರೋನ್ ಜೋನ್ಸ್ ಕೇವಲ 40 ಚೆಂಡುಗಳಲ್ಲಿ 10 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 94 ರನ್ ಬಾರಿಸಿದರೆ, ಆಂಡ್ರಿಸ್ ಗೌಸ್ 46 ಚೆಂಡುಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ಗಳೊಂದಿಗೆ 65 ರನ್ ಗಳಿಸಿ ಗೆಲುವಿನ ರೂವಾರಿಗಳಾದರು.
ಇದಕ್ಕೂ ಮೊದಲು ಟಾಸ್ ಗೆದ್ದ ಅಮೆರಿಕ ತಂಡದ ನಾಯಕ ಮೋನಾಂಕ್ ಪಟೇಲ್ ಕ್ಷೇತ್ರ ರಕ್ಷಣೆ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಕೆನಡಾ ನವನೀತ್ ಧಲಿವಾಲ್, ನಿಕೊಲೊಸ್ ಕಿರ್ಟೋನ್ ಅವರ ಅರ್ಧ ಶತಕ ಹಾಗೂ ವಿಕೆಟ್ ಕೀಪರ್ ಕನ್ನಡಿಗ ಶ್ರೇಯಸ್ ಮೊವ್ವ ಅವರ ಅಜೇಯ 32 ರನ್ಗಳ ಸಹಾಯದಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಕಲೆ ಹಾಕಿದರು.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2024 | ಗಮನ ಸೆಳೆದ ದೇಶೀಯ ಆಟಗಾರರು; ಭರವಸೆ ಮೂಡಿಸದ ವಿದೇಶಿಗರು
ಮೊದಲ ಕ್ರಮಾಂಕದ ಆಟಗಾರ ನವನೀತ್ ದಿಲ್ಲಿವಾಲ್ 44 ಚೆಂಡುಗಳಲ್ಲಿ 3 ಸಿಕ್ಸರ್ 6 ಬೌಂಡರಿಗಳೊಂದಿಗೆ 61, ನಿಕೊಲಸ್ ಕಿರ್ಟೊನ್ 31 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ಗಳೊಂದಿಗೆ 51 ಬಾರಿಸಿದರು.
ಕೆನಡಾ ಪರ ವಿಕೆಟ್ ಕೀಪರ್ ಕಂ ಬ್ಯಾಟರ್ ಆಗಿ ಆಡುತ್ತಿರುವ ದಾವಣಗೆರೆ ಮೂಲದ ಕನ್ನಡಿಗ ಶ್ರೇಯಸ್ ಮೊವ್ವ ಕೇವಲ 16 ಚೆಂಡುಗಳಲ್ಲಿ 2 ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ 32 ರನ್ ಸಿಡಿಸಿದರು. ವಿಕೆಟ್ ಕೀಪಿಂಗ್ನಲ್ಲೂ ಕೂಡ ನಾಯಕ ಮೊನಾಂಕ್ ಪಟೇಲ್ ಅವರ ಕ್ಯಾಚ್ ಹಿಡಿದು ಔಟ್ ಮಾಡುವಲ್ಲಿ ಯಶಸ್ವಿಯಾದರು.
20 ತಂಡ, 55 ಪಂದ್ಯಗಳು
ಅಮೆರಿಕ ಹಾಗೂ ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್ ನಡೆಯುತ್ತಿದ್ದು, ಎ,ಬಿ,ಸಿ ಹಾಗೂ ಡಿ ನಾಲ್ಕು ಗುಂಪಿನಿಂದ ತಲಾ 5 ತಂಡಗಳಂತೆ ಒಟ್ಟು 20 ತಂಡಗಳು 55 ಪಂದ್ಯಗಳನ್ನಾಡಿ ಟ್ರೋಫಿಗಾಗಿ ಸೆಣಸುತ್ತವೆ. ಫೈನಲ್ ಪಂದ್ಯ ಜೂನ್ 29 ರಂದು ನಡೆಯಲಿದೆ.
ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಅಮೆರಿಕ ಎ ತಂಡದಲ್ಲಿ, ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲ್ಯಾಂಡ್,ಒಮನ್ ಬಿ ಗುಂಪಿನಲ್ಲಿ, ಸಿ ಗುಂಪಿನಲ್ಲಿ ನ್ಯೂಜಿಲೆಂಡ್ ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಉಗಾಂಡ, ಪಾಪುವಾ ನ್ಯೂಗಿನಿ ಹಾಗೂ ಡಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನದರ್ಲ್ಯಾಂಡ್ ಹಾಗೂ ನೇಪಾಳ ತಂಡಗಳಿವೆ.
ಚುಟುಕು ವಿಶ್ವಕಪ್ನಲ್ಲಿ ಇಲ್ಲಿಯವರೆಗೂ ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಲಾ 2 ಬಾರಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಒಂದೊಂದು ಬಾರಿ ಟ್ರೋಫಿಯನ್ನು ಗೆದ್ದುಕೊಂಡಿವೆ.
ಟಿ20 ವಿಶ್ವಕಪ್ನಲ್ಲಿರುವ ನಿಯಮಗಳು
ಯಾವುದೇ ಪಂದ್ಯ ಡ್ರಾದಲ್ಲಿ ಕೊನೆಗೊಂಡರೆ ಸೂಪರ್ ಓವರ್ ಇರುತ್ತದೆ. ಸೂಪರ್ ಓವರ್ ಟೈ ಆಗಿದ್ದರೆ, ವಿಜೇತರನ್ನು ಘೋಷಿಸುವವರೆಗೆ ಸತತ ಸೂಪರ್ ಓವರ್ಗಳನ್ನು ಆಡಲಾಗುತ್ತದೆ. ಜೂನ್ 26 ಮತ್ತು 27 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯಗಳಲ್ಲಿ ದಿನದ ಅಂತ್ಯಕ್ಕೆ 60 ನಿಮಿಷಗಂತೆ 190 ನಿಮಿಷಗಳು ಲಭ್ಯವಿದ್ದು, ಎರಡೂ ಸೆಮಿಫೈನಲ್ಗಳಿಗೆ ಐಸಿಸಿ ಒಟ್ಟು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ನಿಗದಿಪಡಿಸಿದೆ.
ಜೂನ್ 29 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಜೂನ್ 30 ಅನ್ನು ಮೀಸಲು ದಿನವನ್ನಾಗಿ ಇರಿಸಲಾಗಿದೆ. ಫೈನಲ್ ಪಂದ್ಯಕ್ಕೆ ಮಳೆ ಅಥವಾ ಇನ್ನಿತರ ಘಟನೆ ಸಂಭವಿಸಿ ಅಡ್ಡಿಯಾದರೆ ಮೀಸಲು ದಿನದಲ್ಲಿ ಆಡಸಲಾಗುತ್ತದೆ.
ಬಹುಮಾನ ಮೊತ್ತ
2024ರ ಟಿ20 ವಿಶ್ವಕಪ್ನ ನಗದು ಬಹುಮಾನದ ಮೊತ್ತವನ್ನು ಐಸಿಸಿ ಇನ್ನೂ ಖಚಿತಪಡಿಸಿಲ್ಲ. ಆದರೆ ಕಳೆದ ಆವೃತ್ತಿಯ ಒಟ್ಟು ನಗದು ಬಹುಮಾನ ಅಂದಾಜು 5.6 ಮಿಲಿಯನ್ ಡಾಲರ್ ಇತ್ತು. ಟೂರ್ನಿಯಲ್ಲಿ ಭಾಗವಹಿಸಿದ ಎಲ್ಲ 16 ತಂಡಗಳಿಗೆ ಬಹುಮಾನ ನೀಡಲಾಗಿತ್ತು. ಟಿ20 ವಿಶ್ವಕಪ್ 2022ರ ಚಾಂಪಿಯನ್ ಇಂಗ್ಲೆಂಡ್ ತಂಡ 1.6 ಮಿಲಿಯನ್ (ಅಂದಾಜು 13 ಕೋಟಿ ರೂ.) ಅನ್ನು ಬಹುಮಾನವಾಗಿ ಪಡೆದರೆ, ರನ್ನರ್ ಅಪ್ ಪಾಕಿಸ್ತಾನವು 800,000 (ಅಂದಾಜು 6.5 ಕೋಟಿ ರೂ.) ಪಡೆದಿತ್ತು.
ವಿಶ್ವಕಪ್ ನಡೆಯುವ ಸ್ಥಳಗಳು
ಲೀಗ್ ಹಂತದ ಕೆಲ ಪಂದ್ಯಗಳಿಗೆ ಯುಎಸ್ಎ ಆತಿಥ್ಯವಹಿಸಿದರೆ, ಸೂಪರ್ 8 ಹಂತದ ಎಲ್ಲ ಪಂದ್ಯಗಳು ವೆಸ್ಟ್ ಇಂಡೀಸ್ನಲ್ಲಿ ಜರುಗಲಿದೆ.
ವೆಸ್ಟ್ ಇಂಡೀಸ್ ಕ್ರೀಡಾಂಗಣಗಳು
1) ಕೆನ್ಸಿಂಗ್ಟನ್ ಓವಲ್, ಬ್ರಿಡ್ಜ್ಟೌನ್, ಬಾರ್ಬಡೋಸ್
2) ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ನಾರ್ತ್ ಸೌಂಡ್, ಆಂಟಿಗುವಾ
3) ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ತರುಬಾ, ಟ್ರಿನಿಡಾಡ್ ಮತ್ತು ಟೊಬಾಗೊ
4) ಅರ್ನೋಸ್ ವೆಲ್ ಗ್ರೌಂಡ್, ಆರ್ನೋಸ್ ವೆಲ್, ಸೇಂಟ್ ವಿನ್ಸೆಂಟ್
5) ಡ್ಯಾರೆನ್ ಸ್ಯಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ, ಗ್ರೋಸ್ ಐಲೆಟ್, ಸೇಂಟ್ ಲೂಸಿಯಾ
ಅಮೆರಿಕಾ ಕ್ರೀಡಾಂಗಣಗಳು
1) ನಸ್ಸೌ ಕೌಂಟಿ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂ, ನ್ಯೂಯಾರ್ಕ್
2) ಬ್ರೋವರ್ಡ್ ಕೌಂಟಿ ಸ್ಟೇಡಿಯಂ, ಸೆಂಟ್ರಲ್ ಬ್ರೋವರ್ಡ್ ಪಾರ್ಕ್, ಫ್ಲೋರಿಡಾ
3) ಗ್ರ್ಯಾಂಡ್ ಪ್ರೈರೀ ಕ್ರಿಕೆಟ್ ಸ್ಟೇಡಿಯಂ, ಡಲ್ಲಾಸ್
