ಐಸಿಸಿ ಏಕದಿನ ವಿಶ್ವಕಪ್ 2023ರ 14ನೇ ಆವೃತ್ತಿಯ 13ನೇ ಪಂದ್ಯದಲ್ಲಿಯೇ ಅಚ್ಚರಿ ನಡೆದಿದೆ. ಕಳೆದ ಬಾರಿಯ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಐಸಿಸಿ 9 ನೇ ರ‍್ಯಾಂಕಿಂಗ್‌ನಲ್ಲಿರುವ ಅಫ್ಘಾನಿಸ್ತಾನ ಆಘಾತ ನೀಡಿದೆ.
ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ನೀಡಿದ 285 ರನ್‌ಗಳ ಸವಾಲನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 40.3 ಓವರ್‌ಗಳಲ್ಲಿ 215 ರನ್ನುಗಳಿಗೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು.
ಸಂಘಟಿತ ಬೌಲಿಂಗ್ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಮುಜೀಬ್ ಉರ್ ರೆಹಮಾನ್ 51/3, ರಶೀದ್ ಖಾನ್ 37/3, ಮೊಹಮ್ಮದ್ ನಬಿ 16/2 ವಿಕೆಟ್ ಕಬಳಿಸಿ ಅಫ್ಘಾನ್ 69 ರನ್‌ಗಳ ಅಂತರದಲ್ಲಿ ಗೆಲುವು ಗಳಿಸಲು ಪ್ರಮುಖ ರೂವಾರಿಗಳಾದರು.
ಮಧ್ಯಮ ಕ್ರಮಾಂಕದ ಆಟಗಾರ ಹ್ಯಾರಿ ಬ್ರೂಕ್ (66) ಬಿಟ್ಟರೆ ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಹೊರಬರಲಿಲ್ಲ.
ಮೂರು ಪಂದ್ಯಗಳಾಡಿರುವ ಇಂಗ್ಲೆಂಡ್‌ಗೆ ಇದು ಎರಡನೇ ಸೋಲಾಗಿದೆ. ಈ ಮೊದಲು ನ್ಯೂಜಿಲೆಂಡ್ ಪಂದ್ಯದಲ್ಲಿ ಮೊದಲ ಸೋಲು ಅನುಭವಿಸಿತ್ತು. ಅಫ್ಘಾನಿಸ್ತಾನ ಮೂರು ಪಂದ್ಯಗಳಲ್ಲಿ ಮೊದಲ ಗೆಲುವು ಗಳಿಸಿದೆ.
ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ 2023 | ಜಯ್ ಶಾ ಪ್ರತಿಷ್ಠೆಯಿಂದ ಪ್ರೇಕ್ಷಕರಿಲ್ಲದ ಕ್ರೀಡಾಂಗಣಗಳು, ಕಳೆಗುಂದಿದ ಕ್ರಿಕೆಟ್
ಈ ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇನ್ನಿಂಗ್ಸ್ ಆರಂಭದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ತಾನ, ಕೊನೆಯಲ್ಲಿ ಇಂಗ್ಲೆಂಡ್ ದಾಳಿಗೆ ತತ್ತರಿಸಿತು.
ಇಬ್ರಾಹಿಂ ಜರ್ದಾನ್ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದರೆ, ರೆಹಮಾನುಲ್ಲಾ ಗುರ್ಬಾಜ್ ಮಾತ್ರ ಆಕ್ರಮಣಕಾರಿ ಆಟದ ಮೂಲಕ ಸ್ಫೋಟಕ ಅರ್ಧಶತಕ ಸಿಡಿಸಿದರು. ಕೇವಲ 57 ಎಸೆತಗಳಲ್ಲಿ 4 ಸಿಕ್ಸರ್, 8 ಬೌಂಡರಿಯೊಂದಿಗೆ 80 ರನ್ ಸಿಡಿಸಿದರು. ಈ ನಡುವೆ 48 ಎಸೆತಗಳಲ್ಲಿ 28 ರನ್ ಗಳಿಸಿದ್ದ ಜದ್ರಾನ್, ಆದಿಲ್ ರಶೀದ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
INNINGS CHANGE 🔁
After being put into bat first, #AfghanAtalan have managed to put 284/10 in the first inning, with major contributions coming from @RGurbaz_21 (80), @IkramAlikhil15 (58) and @Mujeeb_R88 (28). 👍
Time for our bowlers to do the job for us…!#CWC23 | #AFGvENG pic.twitter.com/UFVbpag9l0
— Afghanistan Cricket Board (@ACBofficials) October 15, 2023
ತಂಡದ ಮೊತ್ತ 122 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಆರಂಭಿಕ 3 ವಿಕೆಟ್ ಬೆನ್ನಲ್ಲೇ ಮಧ್ಯಮ ಕ್ರಮಾಂಕದ ಆಟಗಾರರು ತಂಡಕ್ಕೆ ಚೇತರಿಕೆ ನೀಡಲು ಯತ್ನಿಸದೆ ಔಟಾದರು.
ಸತತ ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಇಕ್ರಮ್ ಅಲಿಖಿಲ್ ಆಸರೆಯಾದರು. ಅಲಿಖಿಲ್ ಮಹತ್ವದ ಅರ್ಧಶತಕ (58) ಸಿಡಿಸಿದರು. ಅಲಿಖಿಲ್ಗೆ ರಶೀದ್ ಖಾನ್ (23), ಮುಜೀಬ್ ಉರ್ ರೆಹಮಾನ್ (28) ಜೊತೆ ನೀಡಿದ ಪರಿಣಾಮ ಅಫ್ಘಾನಿಸ್ತಾನ 49.5 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 285 ರನ್ ಗಳಿಸಿತು.