ಐಸಿಸಿ ಏಕದಿನ ವಿಶ್ವಕಪ್ 2023ರ 14ನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ತಂಡ ಸಂಘಟನಾತ್ಮಕ ಬೌಲಿಂಗ್ ದಾಳಿ ಹಾಗೂ ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿ ಟೂರ್ನಿಯಲ್ಲಿ ಗೆಲುವಿನ ಮೊದಲ ಖಾತೆ ತೆರೆಯಿತು.
ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 210 ರನ್‌ಗಳ ಕಡಿಮೆ ಮೊತ್ತದ ಸವಾಲನ್ನು ಬೆನ್ನಟ್ಟಿದ ಆಸೀಸ್ ಪಡೆ 35.2 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಜಯಗಳಿಸಿತು. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸಿಂಹಳಿ ಪಡೆಗೆ ಇದು ಮೂರನೇ ಸೋಲಾಗಿದೆ.
ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ (58), ಮಾರ್ನಸ್ ಲ್ಯಾಬುಸ್ಚಾಗ್ನೆ(40), ಮಿಚೆಲ್ ಮಾರ್ಷ್(52) ಶಿಸ್ತುಬದ್ಧಿನ ಆಟ ಹಾಗೂ ಆಡಮ್ ಝಂಪಾ(47/4),ಪ್ಯಾಟ್ ಕಮ್ಮಿನ್ಸ್(32/2),ಮಿಚೆಲ್ ಸ್ಟಾರ್ಕ್(43/2) ಅವರ ಮಾರಕ ಬೌಲಿಂಗ್‌ನಿಂದ ಶ್ರೀಲಂಕಾ ತಂಡವನ್ನು ಮಣಿಸಿ ಜಯದ ರೂವಾರಿಗಳೆನಿಸಿದರು.
ಟೂರ್ನಿಯಲ್ಲಿ ಮೂರನೇ ಸೋಲು ಕಂಡಿರುವ ಶ್ರೀಲಂಕಾ ಸೆಮಿಫೈನಲ್ ಪ್ರವೇಶಿಸಲು ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಸುದ್ದಿ ಓದಿದ್ದೀರಾ? ಭಾರತೀಯ ಕ್ರಿಕೆಟ್ ಪ್ರಿಯರಿಗೆ ಶುಭಸುದ್ದಿ: 2028ರ ಒಲಿಂಪಿಕ್ಸ್‌ಗೆ ಟಿ20 ಕ್ರಿಕೆಟ್ ಸೇರ್ಪಡೆ
ಇದಕ್ಕೂ ಮೊದಲು ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್ ಬ್ಯಾಟಿಂಗ್ ಆಯ್ದುಕೊಂಡರು. ಕಾಂಗರೂ ಪಡೆ ಬೌಲಿಂಗ್ ದಾಳಿಗೆ ತತ್ತರಿಸಿದ ಲಂಕನ್ನರು 43.3 ಓವರ್‌ಗಳಲ್ಲಿ 209 ರನ್ಗಳಿಗೆ ಸರ್ವಪತನ ಕಂಡರು.
An emphatic win in Lucknow helps Australia open their account in the #CWC23 🤩#AUSvSL 📝: https://t.co/nOE42M6VZW pic.twitter.com/vbBfkTDmGI
— ICC (@ICC) October 16, 2023
ಆರಂಭಿಕರಾಗಿ ಕಣಕ್ಕಿಳಿದ ಪಾತುಂ ನಿಸ್ಸಾಂಕ (61) ಮತ್ತು ಕುಸಾಲ್ ಪೆರೇರಾ(78) ಅದ್ಭುತ ಆಟದ ಮೂಲಕ ಕಾಂಗರೂ ಬೌಲರ್ಗಳನ್ನು ವಿಕೆಟ್ಗಾಗಿ ಪರದಾಡುವಂತೆ ಮಾಡಿದರು. ವಿಶ್ವಶ್ರೇಷ್ಠ ಬೌಲಿಂಗ್ ಪಡೆ ಎದುರು ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ಮೊದಲ ವಿಕೆಟ್ಗೆ 125 ರನ್ಗಳನ್ನು ಪೇರಿಸಿತು.
ನಿಸ್ಸಾಂಕ 67 ಎಸೆತಗಳಲ್ಲಿ 8 ಬೌಂಡರಿ ಸಹಿತ 61 ರನ್ ಸಿಡಿಸಿದರು. 82 ಎಸೆತಗಳಲ್ಲಿ 12 ಬೌಂಡರಿ ಸಹಿತ 78 ರನ್ ಗಳಿಸಿ ಔಟಾದರು. ಇವರಿಬ್ಬರು ಔಟಾದ ಬಳಿಕ ಯಾರೂ ಕ್ರೀಸ್ ಕಚ್ಚಿ ನಿಲ್ಲಲಿಲ್ಲ. ಆರಂಭಿಕರು ವಿಕೆಟ್ ಒಪ್ಪಿಸಿದ ಬೆನ್ನಲ್ಲೇ ಶ್ರೀಲಂಕಾ ತಂಡದ ಪತನ ಆರಂಭವಾಯಿತು.
ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕುಸಾಲ್ ಮೆಂಡೀಸ್ (9) ಮತ್ತು ಸದೀರ ಸಮರ ವಿಕ್ರಮ (8) ಬೇಗನೇ ವಿಕೆಟ್ ಒಪ್ಪಿಸಿ ತಂಡದ ಕುಸಿತಕ್ಕೆ ಕಾರಣರಾದರು. ಇಬ್ಬರನ್ನೂ ಆ್ಯಡಂ ಜಂಪಾ ಪೆವಿಲಿಯನ್‌ಗೆ ಅಟ್ಟಿದರು.
ಎರಡು ವಿಕೆಟ್ ಪಡೆದು ಮಿಂಚಿದ್ದ ಜಂಪಾ, ತಮ್ಮ ಸ್ಪಿನ್ ಮೋಡಿಯನ್ನು ಮತ್ತೆ ಮುಂದುವರೆಸಿದರು. ಚಮಿಕಾ ಕರುಣಾರತ್ನೆ (2), ಮಹೀಶ ತೀಕ್ಷಣರನ್ನು (0) ಎಲ್ಬಿ ಬಲೆಗೆ ಬೀಳಿಸಿ 4 ವಿಕೆಟ್ ಕಬಳಿಸಿದರು.
ಅಂತಿಮವಾಗಿ ಶ್ರೀಲಂಕಾ 43.3 ಓವರ್‌ಗಳಲ್ಲಿ 209 ರನ್ಗಳಿಗೆ ಸರ್ವಪತನ ಕಂಡಿತು. ಆಸೀಸ್ ಪರ ಜಂಪಾ 4, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ತಲಾ 2, ಮ್ಯಾಕ್ಸ್ವೆಲ್ 1 ವಿಕೆಟ್ ಪಡೆದು ಮಿಂಚಿದರು.