- ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ನಡೆದಿದ್ದ ಭಾರತ-ಪಾಕ್ ಪಂದ್ಯದಲ್ಲಿ ‘ಕಮೆಂಟರಿ’ಯಾಗಿ ಮಾಜಿ ಕ್ರಿಕೆಟಿಗ
- ‘ಅತ್ಯಂತ ನಾಚಿಕೆಯಿಲ್ಲದ ವ್ಯಕ್ತಿ ಗೌತಮ್ ಗಂಭೀರ್’ ಎಂದ ನೆಟ್ಟಿಗ
ಕೆಲವು ವಾರಗಳ ಹಿಂದೆ ‘ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯಕೂಡದು’ ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದ ಬಿಜೆಪಿ ಸಂಸದ, ಮಾಜಿ ಟೀಮ್ ಇಂಡಿಯಾ ಬ್ಯಾಟರ್ ಗೌತಮ್ ಗಂಭೀರ್, ನಿನ್ನೆಯ ಪಂದ್ಯದಲ್ಲಿ ‘ಕಮೆಂಟರಿ’ಯಾಗಿ ಪ್ರತ್ಯಕ್ಷಗೊಂಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್‌ಗೊಳಗಾಗಿದ್ದಾರೆ.
“ಪಾಕಿಸ್ತಾನದೊಂದಿಗಿನ ಸಮಸ್ಯೆಗಳು ಬಗೆಹರಿಯುವವರೆಗೆ ಭಾರತದ ತಂಡ ಪಾಕ್ ಜೊತೆ ಯಾವುದೇ ಕ್ರೀಡಾಕೂಟದಲ್ಲಿ ಭಾಗಿಯಾಗಬಾರದು. ಯಾವುದೇ ಕಾರ್ಯಕ್ರಮವಾಗಲಿ, ಕ್ರಿಕೆಟ್ ಪಂದ್ಯವೇ ಆಗಲಿ ನಮ್ಮ ಸೈನಿಕರ ಪ್ರಾಣಕ್ಕಿಂತ ಮಿಗಿಲಾದದ್ದು ಅಲ್ಲ. ಯಾವುದೇ ಘಟನೆಯು ದೇಶಕ್ಕಿಂತ ದೊಡ್ಡದಲ್ಲ. ಪಾಕಿಸ್ತಾನದೊಂದಿಗಿನ ಪಂದ್ಯವನ್ನು ರದ್ದುಗೊಳಿಸಬೇಕು” ಎಂದು ಮೂರು ವಾರಗಳ ಹಿಂದೆ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು.
ಬಿಜೆಪಿಯ ಸಂಸದರೂ ಆಗಿರುವ ಗೌತಮ್ ಗಂಭೀರ್, ನೀಡಿದ್ದ ಈ ಹೇಳಿಕೆ ಸಾಕಷ್ಟು ಸುದ್ದಿಯಾಗಿತ್ತು. ಆದರೆ, ಇದೀಗ, ಹೇಳಿಕೆ ನೀಡಿದ ಕೆಲವಾರಗಳಾಗಿಲ್ಲ, ಪಲ್ಲೆಕೆಲೆಯಲ್ಲಿ ನಿನ್ನೆ ನಡೆದ ಭಾರತ-ಪಾಕಿಸ್ತಾನದ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರನಾಗಿ ಪ್ರತ್ಯಕ್ಷಗೊಂಡಿದ್ದಾರೆ.
ಏಷ್ಯಾ ಕಪ್ 2023ರ ಮೂರನೇ ಪಂದ್ಯ ಭಾರತ ಮತ್ತು ಪಾಕಿಸ್ತಾನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಆದರೆ, ಈ ಪಂದ್ಯಕ್ಕಾಗಿ, ಮಾಜಿ ಕ್ರಿಕೆಟಿಗರಾದ ರವಿಶಾಸ್ತ್ರಿ ಮತ್ತು ಗೌತಮ್ ಗಂಭೀರ್ ಭಾರತದ ಕಡೆಯಿಂದ ‘ಕಮೆಂಟರಿ ಪ್ಯಾನೆಲ್’ನ ಭಾಗವಾಗಿದ್ದರು.
ಗೌತಮ್ ಗಂಭೀರ್ ಅವರು ಹೇಳಿಕೆಯನ್ನು ಉಲ್ಲೇಖಿಸಿ, ನೆಟ್ಟಿಗರು ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡಿದ್ದಾರೆ.
ರೋಶನ್ ರೈ ಎಂಬವರು ಟ್ವೀಟ್ ಮಾಡಿ, “ಇದು ಬಿಜೆಪಿಯ ಸಂಸದ ಗೌತಮ್ ಗಂಭೀರ್. ಕೆಲವು ವಾರಗಳ ಹಿಂದೆ, ಭಾರತವು ಪಾಕಿಸ್ತಾನದೊಂದಿಗೆ ಆಡುವುದನ್ನು ಅವರು ತೀವ್ರವಾಗಿ ಆಕ್ಷೇಪಿಸಿದ್ದಲ್ಲದೇ, ಭಾರತ ಮತ್ತು ಪಾಕಿಸ್ತಾನದ ಪಂದ್ಯವನ್ನು ರದ್ದುಗೊಳಿಸಬೇಕು ಎಂದು ಹೇಳಿಕೆ ನೀಡಿದ್ದರು. ಇಂದು ಕಮೆಂಟರಿ ಬಾಕ್ಸ್‌ನಲ್ಲಿ ಕುಳಿತಿದ್ದಾರೆ. ದೇಶದ ಅತ್ಯಂತ ನಾಚಿಕೆಯಿಲ್ಲದ ವ್ಯಕ್ತಿ ಈ ಗೌತಮ್ ಗಂಭೀರ್” ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದಕ್ಕೆ ಹಲವರು ಕಮೆಂಟ್ ಮಾಡಿದ್ದು, “ಬಿಜೆಪಿಯವರು ಎಂದರೆ ಹಾಗೇನೇ. ಹೇಳೋದೊಂದು, ಮಾಡುವುದು ಇನ್ನೊಂದು” ಎಂದು ಟೀಕಿಸಿದ್ದಾರೆ.