ವಿಶ್ವ ಟೆನಿಸ್ ಯುಗದಲ್ಲಿ ಮತ್ತೊಂದು ಹೊಸದೊಂದು ಪ್ರತಿಭೆ ಪ್ರಜ್ವಲಿಸುತ್ತಿದೆ. 21 ವರ್ಷದ ಯುವ ಟೆನಿಸ್ ಆಟಗಾರ ಕಾರ್ಲೋಸ್ ಅಲ್ಕರಾಜ್ ಟೆನಿಸ್ ಕ್ರೀಡೆಯಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಲಂಡನ್‌ನ ಸೆಂಟರ್ ಕೋರ್ಟ್‌ನಲ್ಲಿ ಭಾನುವಾರ (ಜುಲೈ 14) ನಡೆದ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 7 ಬಾರಿ ಚಾಂಪಿಯನ್ ಆಗಿದ್ದ ನೋವಾಕ್ ಜೊಕೊವಿಚ್ ವಿರುದ್ಧ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್, 6-2, 6-2, 7-6 ನೇರ ಸೆಟ್‌ಗಳಿಂದ ಪರಾಭವಗೊಳಿಸುವ ಮೂಲಕ ಸತತ ಎರಡನೇ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.
ಇದು ಕಾರ್ಲೋಸ್ ಅಲ್ಕರಾಜ್ ಅವರ ನಾಲ್ಕನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ. 2023ರಲ್ಲಿ ಮೊದಲ ಬಾರಿಗೆ, ಕಾರ್ಲೋಸ್ ಅಲ್ಕರಾಜ್ ನೊವಾಕ್ ಜೊಕೊವಿಚ್ ಅವರನ್ನು ಸೋಲಿಸುವ ಮೂಲಕ ತಮ್ಮ ಮೊದಲ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ವಿಂಬಲ್ಡನ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಚ್ ಅವರನ್ನು ಸೋಲಿಸುವ ಮೂಲಕ 2024ರ ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಈ ಗೆಲುವಿನೊಂದಿಗೆ ಕಾರ್ಲೋಸ್ ಅಲ್ಕರಾಜ್ ಮತ್ತೊಮ್ಮೆ ವಿಶ್ವದ ನಂಬರ್ ಒನ್ ಆಟಗಾರ ಎನಿಸಿಕೊಂಡಿದ್ದಾರೆ. ಈ ವರ್ಷ ಅಲ್ಕರಾಜ್ ಅವರು ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸುವ ಮೂಲಕ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದರು.
ಈ ಸುದ್ದಿ ಓದಿದ್ದೀರಾ? ಜೊಕೊವಿಚ್ ಮಣಿಸಿದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್‌ಗೆ ವಿಂಬಲ್ಡನ್ ಕಿರೀಟ
ಈ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಕಾರ್ಲೋಸ್ ಅಲ್ಕರಾಜ್ ಪಾತ್ರರಾಗಿದ್ದಾರೆ. ಈ ಮೂಲಕ 21 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನಲ್ಲೇ ಅತಿ ಹೆಚ್ಚು ಗ್ರ್ಯಾನ್ ಸ್ಲ್ಯಾಮ್‌ಗಳನ್ನು ಗೆದ್ದ ಓಪನ್ ಎರಾ ದಾಖಲೆಯನ್ನು ಸರಿಗಟ್ಟಿದ್ದಾರೆ. ಟೆನಿಸ್ ಇತಿಹಾಸದಲ್ಲಿ ಈ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಕಾರ್ಲೋಸ್ ಅಲ್ಕರಾಜ್ ಪಾತ್ರರಾಗಿದ್ದಾರೆ.
ರಾಫೆಲ್ ನಡಾಲ್ ನಂತರ, ಕಾರ್ಲೋಸ್ ಅಲ್ಕರಾಜ್ ಒಂದಕ್ಕಿಂತ ಹೆಚ್ಚು ಬಾರಿ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಸ್ಪೇನ್‌ನ ಎರಡನೇ ಆಟಗಾರರಾಗಿದ್ದಾರೆ.
1968ರಲ್ಲಿ ಟೆನಿಸ್‌ನಲ್ಲಿ ಓಪನ್ ಯುಗ ಆರಂಭವಾದ ಮೇಲೆ 21 ವರ್ಷ ವಯಸ್ಸಿನೊಳಗೇ ಅತಿ ಹೆಚ್ಚು (ತಲಾ ನಾಲ್ಕು) ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದು ದಾಖಲೆ ಸ್ಥಾಪಿಸಿದ ಮೂವರು ಮಹಾನ್ ಆಟಗಾರರ ಸಾಲಿಗೆ ಈಗ ಅಲ್ಕರಾಜ್ ಸೇರ್ಪಡೆಯಾದರು. ಉಳಿದ ಮೂವರು ಜರ್ಮನಿಯ ಬೋರಿಸ್ ಬೆಕರ್, ಸ್ವೀಡನ್‌ನ ಬ್ಯೋನ್ ಬೋರ್ಗ್ ಮತ್ತು ಮ್ಯಾಟ್ಸ್ ವಿಲಾಂಡರ್.
ಟೆನಿಸ್ ಕುಟುಂಬದಲ್ಲಿ ಬೆಳೆದ ಹುಡುಗ
2003ರ ಮೇ 5ರಂದು ಸ್ಪೇನ್‌ನ ವಿಲ್ಲೇನಾದ ಎಲ್ ಪಾಮರ್‌ನಲ್ಲಿ ಮಾಜಿ ವೃತ್ತಿಪರ ಟೆನಿಸಿಗ ಗೊಂಝಾಲೆಸ್ ಹಾಗೂ ಗೃಹಿಣಿ ವರ್ಜೇನಿಯಾ ಗಾರ್ಫಿಯಾ ಎಸ್ಕಾಂಡನ್ ದಂಪತಿಗಳ ನಾಲ್ವರು ಮಕ್ಕಳಲ್ಲಿ ಎರಡನೆಯವನಾಗಿ ಜನಿಸಿದವರು ಕಾರ್ಲೋಸ್ ಅಲ್ಕರಾಜ್. ತಂದೆ ಟೆನಿಸ್ ಆಟಗಾರರಾದ ಕಾರಣ ಅಲ್ಕರಾಜ್‌ಗೆ ನಾಲ್ಕನೇ ವಯಸ್ಸಿಗೆ ಟೆನಿಸ್ ನಂಟು ಬೆಸೆದುಕೊಂಡಿತು. ತಂದೆ ಕಾರ್ಲೋಸ್ ಅಲ್ಕರಾಜ್ ಗೊಂಝಾಲೆಸ್ ಮಾಜಿ ವೃತ್ತಿಪರ ಟೆನಿಸಿಗ. 1990ರಲ್ಲಿ ಸ್ಪೇನ್‌ನ 40 ಪ್ರಮುಖ ಆಟಗಾರರಲ್ಲಿ ಅವರೂ ಒಬ್ಬರಾಗಿದ್ದರು. ತಂದೆಯೇ ಜೂನಿಯರ್ ಅಲ್ಕರಾಜ್ ಅವರ ಮೊದಲ ಮಾರ್ಗದರ್ಶಕ.
ವಿಶ್ವದ ಮಾಜಿ ಆಟಗಾರನ ಬಳಿ ತರಬೇತಿ
ಮನೆಯಲ್ಲಿ ಟೆನಿಸ್ ವಾತಾವರಣ ಇದ್ದ ಕಾರಣ 15ನೇ ವಯಸ್ಸಿನಲ್ಲಿ ಕಾರ್ಲೋಸ್ ಅಲ್ಕರಾಜ್ ವಿಶ್ವದ ಮಾಜಿ ನಂಬರ್ ಒನ್ ಟೆನಿಸ್ ಆಟಗಾರ ಫೆರೆರೊ ಅವರ ‘ಇಕ್ವೆಲೈಟ್ ಜೆಸಿ ಫೆರೆರೊ ಸ್ಪೋರ್ಟ್ಸ್ ಅಕಾಡೆಮಿ’ಗೆ ಸೇರ್ಪಡೆಯಾದರು. ಒಂದು ಕಾಲದಲ್ಲಿ ಸ್ಪೇನ್‌ನ ಸ್ಟಾರ್ ಆಗಿದ್ದ ಫೆರೆರೊ, ಕಾರ್ಲೋಸ್ ಟೆನಿಸ್ ಪ್ರತಿಭೆಯನ್ನು ಅನಾವರಣಗೊಳಿಸಲು ಯಶಸ್ವಿಯಾದರು. ಪರಿಣಾಮ, 21ರ ಹರೆಯದಲ್ಲೇ ನಾಲ್ಕನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಕಾರ್ಲೋಸ್ ಅಲ್ಕರಾಜ್‌ಗೆ ಬಾಲ್ಯದಲ್ಲಿದ್ದ ಬಹು ದೊಡ್ಡ ಕನಸೆಂದರೆ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಗೆಲ್ಲುವುದು. ರೋಜರ್ ಪೆಡರರ್ ಇವರ ಟೆನಿಸ್ ಬದುಕಿನ ಸ್ಪೂರ್ತಿ. 2019ರ ವಿಂಬಲ್ಡನ್ ಕ್ವಾರ್ಟರ್ ಫೈನಲ್ ವೇಳೆ ಫೆಡರರ್ ಆಟ ವೀಕ್ಷಿಸುವ ಅವಕಾಶ ಇವರಿಗೆ ಲಭಿಸಿತ್ತು. ಆಗ ಜುವಾನ್ ಕಾರ್ಲೋಸ್ ಫೆರೆರೊ ಸ್ಪೇನ್ ತಂಡದ ಕೋಚ್ ಆಗಿದ್ದರು. ಆಗ ಅಲ್ಕರಾಜ್ ಅವರನ್ನು ಗಮನಿಸಿದ ಫೆಡರರ್, ಈತನಿಗೆ ಉತ್ತಮ ಕೋಚಿಂಗ್ ನೀಡಿ ಎಂದು ಹೇಳಿದ್ದರಂತೆ. ಇವೆಲ್ಲ ಪ್ರೇರಣೆಯೊಂದಿಗೆ ನಾಲ್ಕು ಗ್ರ್ಯಾನ್ ಸ್ಲಾಮ್ ಗೆಲ್ಲುವುದರೊಂದಿಗೆ ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.