ಬರ ಮತ್ತು ಬೇಸಿಗೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಎಲ್ಲ ಕೆರೆಗಳು ಖಾಲಿಯಾಗಿವೆ. ಬೆಳೆ ಬೆಳೆಯುವ ರೈತನಿಗೆ ತೊಂದರೆ ಆಗಿದ್ದರೆ, ಕೆರೆಯಲ್ಲಿ ಗೋಡು ಮಣ್ಣು ಇರುವುದು ಬಹಳ ಜನರಿಗೆ ವರದಾನವಾಗಿ ಪರಿಣಮಿಸಿದೆ.
ಹಿಂದೆ ಎತ್ತಿನಗಾಡಿ ಇದ್ದ ಕಾಲದಲ್ಲಿ ಬೇಸಿಗೆ ಅಥವಾ ಬರಗಾಲ ಬಂದಂಥ ಸಂದರ್ಭದಲ್ಲಿ ವ್ಯವಸಾಯಗಾರರಿಗೆ ಬಿಡುವಿರುತ್ತಿತ್ತು. ಅವರು ತಮ್ಮ ಎತ್ತಿನಗಾಡಿ ಬಳಸಿ ಮೇಲ್ಮೈನಲ್ಲಿ ಇದ್ದ ಗೋಡು ಮಣ್ಣನ್ನು ತಮ್ಮ ಗದ್ದೆಗಳಿಗೆ ಸಾಗಿಸಿಕೊಳ್ಳುತ್ತಿದ್ದರು. ಇದರಿಂದ ಗದ್ದೆ ಫಲವತ್ತತೆ ಹೆಚ್ಚಾಗುತ್ತಿತ್ತು. ಕೆರೆ ಊಳುಗಳು ಕಡಿಮೆಯಾಗುತ್ತಿತ್ತು. ಇದರಿಂದ ಕೆರೆ ಮತ್ತು ಗದ್ದೆ ಎರಡಕ್ಕೂ ಅನುಕೂಲವಾಗುತ್ತಿತ್ತು. ಈ ಹಿಂದೆ ಇಂತಹ ಪದ್ದತಿ ಇತ್ತು.
ಈ ಬಾರಿಯೂ ಬೇಸಿಗೆ, ಬರಗಾಲ ಬಂದಿತ್ತು. ಇದರಿಂದ ಕೆರೆಗಳೆಲ್ಲಾ ಖಾಲಿಯಾಗಿವೆ. ಆದರೆ ರೈತರ ಬಳಿ ಎತ್ತುಗಳು ಗಾಡಿಗಳು ಇಲ್ಲ. ಹಾಗಾಗಿ ಎತ್ತು-ಗಾಡಿಗಳ ನಿರ್ವಹಣೆ ತುಂಬಾ ದುಬಾರಿಯಾಗಿರುವುದರಿಂದ, ವ್ಯವಸಾಯ ಲಾಭದಾಯಕ ಆಗದಿರುವುದರಿಂದ ಬಹಳಷ್ಟು ಮಂದಿ ರೈತರು ಗೋಡು ಮಣ್ಣು, ಮೇಲ್ಮೈ ಮಣ್ಣನ್ನು ತಮ್ಮ ಗದ್ದೆಗಳಿಗೆ ಸಾಗಿಸಲು ಸಿದ್ಧರಿಲ್ಲ.
ಜಮೀನುಗಳಿಗೆ ಕೆರೆಮಣ್ಣು ಸಾಗಿಸಬೇಕೆನ್ನುವ ಮನಸ್ಸಿರುವವರಿಗೆ ಅವರ ಹತ್ತಿರ ಹಣ ಒದಗಿಸುವಷ್ಟು ಸಾಮರ್ಥ್ಯವಿಲ್ಲ. ಆ ಕಾರಣದಿಂದ ಇವತ್ತು ಎಲ್ಲ ಕೆರೆಗಳಲ್ಲಿ ಮಣ್ಣು ಜಾಸ್ತಿಯಾಗಿದೆ. ಇವತ್ತು ಕೆರೆ ಆಸುಪಾಸಿನಲ್ಲಿ ಇರುವ ಎಲ್ಲ ಭತ್ತದ ಗದ್ದೆಗಳು ನಿವೇಶನವಾಗಿ ಪರಿವರ್ತನೆಯಾಗುತ್ತಿವೆ. ಕಾರಣ ಇಷ್ಟೇ, ರಸ್ತೆ ಬದಿಯಲ್ಲಿ ಇದ್ದ ಭತ್ತದ ಗದ್ದೆ ಯಾವಾಗಲೂ ಜೌಗುನಿಂದ ತುಂಬಿರುತ್ತಿತ್ತು. ಮಣ್ಣು ಹೊಡೆಯಲು ಸಮಯ ಸಿಗುತ್ತಿರಲಿಲ್ಲ. ಮಣ್ಣು ಹೊಡೆಯಲು ಈಗಿನ ರೀತಿಯ ಯಂತ್ರಗಳೂ ದೊರೆಯುತ್ತಿರಲಿಲ್ಲ.
ರಸ್ತೆ ಬದಿಯ ಜಮೀನುಗಳಿಗೆ ಬೆಲೆ ಜಾಸ್ತಿ ಇರುವುದರಿಂದ, ಇದೇ ಸಮಯಕ್ಕೆ ಕೆರೆ ಒಣಗಿರುವುದರಿಂದ ಈಗಾಗಲೇ ಜೆಸಿಬಿಗಳು, ಟ್ರ್ಯಾಕ್ಟರ್‌ಗಳ ಒಂದು ಜಾಲ ನಿರ್ಮಾಣ ಆಗಿರುವುದರಿಂದ ಟ್ರಾಕ್ಟರಿಗಿಷ್ಟು, ಟಿಪ್ಪರಿಗಿಷ್ಟು ಅಂತ ಹಣ ಕೊಟ್ಟರೆ ಸಾಕು, ಭರ್ತಿ ಒಟ್ಟೊಟ್ಟಿಗೆ ಆಗುವುದರಿಂದ ಜನ ಸಾಲ ಸೋಲ ಮಾಡಿಯಾದರೂ ತಮ್ಮ ಜಮೀನುಗಳಿಗೆ ಮಣ್ಣು ಭರ್ತಿ ಹಾಕಿಕೊಂಡು ಭತ್ತ, ಕಬ್ಬು ಹಾಗೂ ತೆಂಗು ಬೆಳೆಯುವ ನಿವೇಶನಗಳಾಗಿ ಪರಿವರ್ತನೆ ಹೊಂದಿವೆ. ಇದು ಕೃಷಿ ಭೂಮಿಯ ವಿಸ್ತೀರ್ಣ ಮತ್ತಷ್ಟು ಕಡಿಮೆಯಾಗಲು ಕಾರಣವಾಗಿದೆ.
ಕೆರೆಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿ, ಗುರುತ್ವಬಲ ಬಳಸಿ ನೀರು ಓಡೋಡಿ ಬಂದು ಆಚೆ ಹೋಗುವಂತೆ ಕೆರೆ ನಿರ್ಮಾಣ ಮಾಡಿದ್ದರು. ಅದರ ಜತೆಗೆ ಕೆರೆಗಳು ನಿರ್ಮಾಣ ಆದಾಗ ಕೆಳಗಿನ ಪದರದಲ್ಲಿ ಜಿಗಟು ಮಣ್ಣು ಇರುವಂತೆ ನೋಡಿಕೊಂಡಿದ್ದರು. ಜಿಗಟು ಮಣ್ಣು ಇಲ್ಲವೇ ಗೋಡು ಮಣ್ಣು ಇದ್ದರೆ ನೀರು ಇಂಗುವುದಿಲ್ಲ. ಹೆಚ್ಚುಕಾಲ ಇಂಗದೆ ಅಲ್ಲೇ ಉಳಿಯುತ್ತಿತ್ತು.
ಇದೀಗ ಮಣ್ಣನ್ನು ತೆಗೆಯಲು ಹಲವು ರೀತಿಯ ಯಂತ್ರಗಳನ್ನು ಬಳಸುತ್ತಿದ್ದಾರೆ. ಕೆರೆಯಲ್ಲಿ ಮಣ್ಣಿದೆ, ನೆಲ ಒಣಗಿದೆ ಆ ಮಣ್ಣು ಸಾಗಿಸಿದರೆ ಒಂದಿಷ್ಟು ಹಣ ಸಿಗುತ್ತೆಂದು ಹಳ್ಳಿಗಾಡಿನ ನಿರುದ್ಯೋಗಿ ಯುವಕರೇ ಜೆಸಿಬಿ, ಹಿಟಾಚಿ ಬಳಸಿ ಮಣ್ಣು ಹೊಡೆಯುವ ಕಾಮಗಾರಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಅಚ್ಚುಕಟ್ಟುದಾರನಿಗೆ ನಮ್ಮೂರ ಕೆರೆ ಆಳವಾಗುತ್ತಿದೆ. ಮತ್ತಷ್ಟು ನೀರು ಸಂಗ್ರಹವಾಗುತ್ತದೆ. ಬೇಸಿಗೆಗೆ ಒಂದು ವಾಯಿದೆ ಜಾಸ್ತಿ ನೀರು ಸಿಗುತ್ತೆ ಎನ್ನುವ ಆಸೆ. ಆದರೆ ವಾಸ್ತವದಲ್ಲಿ ಕೆರೆ ತೂಬಿಗಿಂತ ಆಳವಾದರೆ, ಕೆರೆ ಏರಿಗೂ ಬಾಧಕವಾಗಿ ಮುಂದೆ ಬೇಸಿಗೆಯಲ್ಲಿ ಕೆರೆ ಏರಿ ಸೋರಿಕೆಯಾಗುವ ಅಪಾಯವಿದೆ. ಮತ್ತೊಂದು ಕಡೆ ಒಂದು ಪದರ ಜಿಗಟು ಮಣ್ಣು ಹೋಗಿ ಸಾದ ಮಣ್ಣು ಸಿಕ್ಕಿದರೆ ನೀರು ಹಿಂಗಿ, ಹೆಚ್ಚು ನೀರು ನಿಲ್ಲದಿರುವ ಅಪಾಯವೂ ಇದೆ.
ಒಂದೇ ಸಮಕ್ಕೆ ಮಣ್ಣು ತೆಗೆಯದೆ ಇರುವುದರಿಂದ ಅವರಿಗೆ ಅಗತ್ಯವಿರುವ ಕಡೆ ಅಲ್ಲಲ್ಲೇ ಗುಂಡಿ ತೆಗೆದಿರುವುದರಿಂದ ಬೇಸಿಗೆಯಲ್ಲಿ ಹೆಚ್ಚು ಕಾಲ ಗುಂಡಿಯಲ್ಲಿ ನೀರು ನಿಂತು ಸೊಳ್ಳೆಗಳು ಮತ್ತಿತರ ಕೀಟಗಳು ರೋಗಗಳನ್ನು ಹರಡುತ್ತವೆ. ಮುಖ್ಯವಾಗಿ ಬೇಸಿಗೆಯಲ್ಲಿ ನೀರು ಖಾಲಿಯಾಗುವುದಿಲ್ಲ. ನೀರು ನಿಂತು ರೋಗ ಹರಡುವ ಸಾಧ್ಯತೆ ಜಾಸ್ತಿ ಇದೆ.
ಮಂಡ್ಯ ನಗರದ ಪಕ್ಕದಲ್ಲಿರುವ ಮಂಡ್ಯ, ಮದ್ದೂರು, ರಾಮನಗರ, ಚನ್ನಪಟ್ಟಣದಂತಹ ಪೇಟೆ ಪಕ್ಕದಲ್ಲಿರುವ ಕೆರೆಗಳು ನಗರೀಕರಣದ ಪ್ರಭಾವದಿಂದಾಗಿ ಯುಜಿಡಿಯಿಂದ ಹರಿಯುವ ನೀರು ಕೆರೆಗಳಿಗೆ ಸೇರುತ್ತದೆ. ಈ ಕೆರೆಗಳಲ್ಲಿ ಗುಂಡಿಯಾಗಿರುವುದರಿಂದ ಸರಾಗವಾಗಿ ನೀರು ಹರಿಯದೆ ನೀರು ದೀರ್ಘ ಕಾಲ ನಿಲ್ಲುವುದರಿಂದ ಮತ್ತಷ್ಟು ಕೆರೆಗಳು ಬೆಂಗಳೂರಿನ ಕೆರೆಗಳ ರೀತಿಯಲ್ಲಿ ಮಲಿನವಾಗುವ ಅಪಾಯ ಹೆಚ್ಚಿದೆ.
ಈ ಎಲ್ಲ ಅಪಾಯಗಳನ್ನು ನೀರಾವರಿ ಇಲಾಖೆ, ಕಂದಾಯ ಇಲಾಖೆಗಳು ಹಾಗೂ ಪಂಚಾಯಿತಿ ಈ ಮೂರು ಇಲಾಖೆಗಳು ಸರ್ಕಾರಗಳು, ಸ್ಥಳೀಯ ಆಡಳಿತ, ಸ್ಥಳೀಯ ಸಂಸ್ಥೆಗಳು ಕಂಡೂ ಕಾಣದಂತೆ ತಮ್ಮ ತಮ್ಮ ಕೆಲಸಗಳನ್ನು, ತಮ್ಮ ತಮ್ಮ ದಿನಗಳನ್ನು ದೂಡೋ ಕಡೆ ಗಮನ ಹರಿಸುತಿದ್ದಾರೆಯೇ ಹೊರತು ದೂರದೃಷ್ಟಿಯಿಂದ ನಾಳೆ ನಮ್ಮ ಕೆರೆಗಳು ಉಳಿಯಬೇಕು, ಅಚ್ಚುಕಟ್ಟುದಾರ ಉಳಿಯಬೇಕು, ಆರೋಗ್ಯ ಉಳಿಯಬೇಕು ಎನ್ನುವ ಹಿನ್ನೆಲೆಯಲ್ಲಿ ಯಾರೂ ಕೂಡ ಯೋಚನೆ ಮಾಡುತ್ತಿಲ್ಲ.
ಕೆರೆ ಆಳ ಆದರೆ ಹೆಚ್ಚು ನೀರು ಸಿಗುತ್ತೆ ಅನ್ನೋ ಅಚ್ಚುಕಟ್ಟುದಾರ, ಕಡಿಮೆ ದುಡ್ಡಿನಲ್ಲಿ ಮಣ್ಣು ಸಿಗುತ್ತೆ ಎನ್ನುವ ನಿವೇಶನದಾರ, ಕೆರೆಯಲ್ಲಿ ಮಣ್ಣು ತೆಗೆದರೆ ಒಂದಿಷ್ಟು ಹಣ ಸಿಗುತ್ತೆ ಎನ್ನುವ ಮಣ್ಣು ಹೊಡೆಯುವ ಕಾಮಗಾರಿಗಳಲ್ಲಿ ತೊಡಗಿರುವ ಒಂದಷ್ಟು ಹುಡುಗರ ತಂಡ ಇವರೆಲ್ಲರೂ ತಮ್ಮ ತಮ್ಮ ದೈನಂದಿನ ಜೀವನೋಪಾಯದ ಕಡೆ ಯೋಚನೆ ಮಾಡುತ್ತಿದ್ದರೆ, ಇಲಾಖೆಗಳು ತಿಂಗಳ ಪಗಾರ ಎಣಿಸುವುದರಲ್ಲಿ ನಿರತರಾಗಿದ್ದಾರೆ. ದೂರದೃಷ್ಟಿಯ ಕೊರತೆಯ ಕಾರಣದಿಂದ ಇದೆಲ್ಲಾ ಜರುಗುತ್ತಿದೆ. ಕೆರೆಗಳ ವೈಜ್ಞಾನಿಕ ರಚನೆಗೆ ಧಕ್ಕೆಯಾಗುತ್ತಿದ್ದರೂ ಯಾರೂ ಸೊಲ್ಲೆತ್ತುತ್ತಿಲ್ಲ.
ಕೆರೆ ನೀರಿನ ನಿರ್ವಹಣೆಗೆ ಬೇಕಾಗಿ ಕೆರೆ ನೀರು ಬಳಕೆದಾರರ ಸಂಘಗಳು ನಿರ್ಮಾಣ ಆಗಿದ್ದು, ಕೆರೆ ನೀರಿನ ಹಂಚಿಕೆ ತೂಬುವಾರು ಕಮಿಟಿಗಳು ರಚನೆ ಆಗಬೇಕು. ಕೆರೆ ನೀರಿನ ತೆರಿಗೆ ಸಂಗ್ರಹ ಮಾಡಬೇಕೆನ್ನುವ ಅಧಿಕಾರ ನೀರು ಬಳಕೆದಾರರ ಸಂಘಕ್ಕೆ ಇತ್ತು, ಇಂದು ನೀರು ಬಳಕೆದಾರರ ಸಂಘಗಳು ನಿಷ್ಕ್ರಿಯವಾಗಿವೆ. ರಾಜಕೀಯ ಪಕ್ಷಗಳ ಪ್ರಭಾವದ ಕಾರಣಕ್ಕಾಗಿ ಬಹಳ ಕಡೆ ನೀರು ಬಳಕೆದಾರರ ಸಂಘ ಇದ್ದೂ ಇಲ್ಲದಂತಾಗಿದೆ. ಬಹಳಷ್ಟು ಕಡೆ ಕೆರೆ ನೀರು ಬಳಕೆದಾರರ ಸಂಘಗಳು ಅಸ್ತಿತ್ವದಲ್ಲೇ ಇಲ್ಲ.
ಕೆರೆ ನೀರು ಬಳಕೆದಾರರ ಸಂಘಗಳನ್ನು ಅಸ್ತಿತ್ವಕ್ಕೆ ತಂದರೆ ನೀರು ಬಳಕೆದಾರರ ಸಂಘಕ್ಕೆ ನಮ್ಮ ಕೆರೆ, ನಮ್ಮ ನೀರು ಅನ್ನುವ ಅರಿವು ಮೂಡಿಸುವುದರಲ್ಲಿ ಸರ್ಕಾರಗಳು, ಇಲಾಖೆಗಳು ಈವರೆಗೆ ಕೆಲಸ ಮಾಡುತ್ತಾ ಬಂದಿದ್ದರೆ ಆ ಅಚ್ಚುಕಟ್ಟುದಾರ ಸಂಘಗಳು ಈ ಕೆರೆಯ ಉಳಿವಿಗಾಗಿ ಯೋಚನೆ ಮಾಡುತ್ತಿದ್ದವು. ಈಗ ಅವುಗಳೂ ಯೋಚನೆ ಮಾಡುತ್ತಿಲ್ಲ.
ಈ ಸುದ್ದಿ ಓದಿದ್ದೀರಾ? ಬೀದರ್ | ಈ ಊರಿನ ಮಕ್ಕಳಿಗೆ ಲಕ್ಷ್ಮಿ ದೇವಸ್ಥಾನವೇ ಶಾಲೆ!
ಇನ್ನಾದರೂ ನೀರು ಬಳಕೆದಾರರ ಸಂಘಗಳನ್ನು ಎಚ್ಚರಿಸುವಂತಹ ಕೆಲಸಗಳು ಆಗಬೇಕು. ಇಲ್ಲದಿದ್ದರೆ ಕೆರೆಗಳ ಸಂಪೂರ್ಣ ಸಂರಚನೆ ಹಾಳಾಗಿ ಮುಂದೆ ನೀರಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ. ಈ ನೆಲೆಯಲ್ಲಿ ಸರ್ಕಾರಗಳು ಯೋಚನೆ ಮಾಡಬೇಕು. ರೈತರು ಯೋಚನೆ ಮಾಡಬೇಕು. ನೀರು ಬಳಕೆದಾರರ ಸಂಘಗಳ ಹೊಣೆ ಹೊತ್ತಿರುವ ಇಲಾಖೆಗಳು ಯೋಚನೆ ಮಾಡಬೇಕು. ಇದಾಗದ ಹೊರತು ಕೆರೆಗಳು ಸಂಪೂರ್ಣ ಹಾಳಾಗುತ್ತವೆ.
