ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರ ಔಟ್ ಬಗ್ಗೆ ಮೂರನೇ ಅಂಪೈರ್ ನೀಡಿರುವ ವಿವಾದಾತ್ಮಕ ತೀರ್ಪಿನ ಬಗ್ಗೆ ಕ್ರಿಕೆಟ್ ಲೋಕದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಉತ್ತಮವಾಗಿ ಆಡುತ್ತಿದ್ದ ಶುಭಮನ್ ಗಿಲ್ 18 ಗಳಿಸಿದ್ದಾಗ 8ನೇ ಓವರ್ ಬೌಲಿಂಗ್ ಮಾಡಿದ ಸ್ಕಾಟ್ ಬೋಲೆಂಡ್ ಎಸೆತದಲ್ಲಿ ಬ್ಯಾಟ್ ಬೀಸಿದಾಗ ಸ್ಲಿಪ್‌ನಲ್ಲಿದ್ದ ಕ್ಯಾಮೆರಾನ್ ಗ್ರೀನ್ ಎಡಗೈನಲ್ಲಿ ಚೆಂಡನ್ನು ಹಿಡಿದರು. ಆದರೆ, ಚೆಂಡನ್ನು ಮೇಲೆತ್ತುವ ಸಮಯದಲ್ಲಿ ನೆಲಕ್ಕೆ ತಗುಲಿಸಿರುವುದು ವಿಡಿಯೋ ರೀಪ್ಲೇನಲ್ಲಿ ಕಾಣುತ್ತಿತ್ತು. ಈ ವೇಳೆ ಗೊಂದಲಕ್ಕೆ ಒಳಗಾದ ಫೀಲ್ಡ್ ಅಂಪೈರ್, ಮೂರನೇ ಅಂಪೈರ್ ಸಹಾಯ ಪಡೆದರು. ಅಂದರಂತೆ ಮೂರನೇ ಅಂಪೈರ್ ಐದಾರು ಬಾರಿ ವಿಡಿಯೋ ರೀಪ್ಲೇ ವೀಕ್ಷಿಸಿದರು. ಅಂತಿಮವಾಗಿ ಅವರು ಔಟ್ ತೀರ್ಮಾನವನ್ನು ದೊಡ್ಡ ಪರದೆಯ ಮೇಲೆ ಪ್ರಕಟಿಸಿದರು.
ವಿಡಿಯೋದಲ್ಲಿ ಚೆಂಡು ನೆಲಕ್ಕೆ ತಾಕಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ಮೂರನೇ ಅಂಪೈರ್ ವಿವಾದಾತ್ಮಕವಾಗಿ ಔಟ್ ನೀಡಿದರು. ಅಂಪೈರ್ ತೀರ್ಪಿನ ಬಗ್ಗೆ ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಮೈದಾನದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದರು. ಶುಭಮನ್ ಬೇಸರದೊಂದಿಗೆ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಇದರ ಬೆನ್ನಲ್ಲೆ ವೀರೇಂದ್ರ ಸೆಹ್ವಾಗ್, ರವಿ ಶಾಸ್ತ್ರಿ ಸೇರಿದಂತೆ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಮೂರನೇ ಅಂಪೈರ್ ವಿರುದ್ಧ ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕುತೂಹಲ ಘಟ್ಟದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್!
ಟ್ವಿಟರ್‌ನಲ್ಲಿ ಬರೆದುಕೊಂಡಿರುವ ವೀರೇಂದ್ರ ಸೆಹ್ವಾಗ್ ಕಣ್ಣಿಗೆ ಬಟ್ಟೆ ಕಟ್ಟಿರುವ ಫೋಟೋವನ್ನು ಹಂಚಿಕೊಂಡಿದ್ದು, “ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಂಪೈರ್ ತೀರ್ಪು ನೀಡುತ್ತಿದ್ದಾರೆ. ಔಟಿನ ಬಗ್ಗೆ ಯಾವುದೇ ಪುರಾವೆ ಇಲ್ಲ. ನಿಮಗೆ ಅನುಮಾನವಿದ್ದರೆ ನಾಟ್ ಔಟ್ ನೀಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೀ ವಿರಾಮದ ವೇಳೆ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಮಾತನಾಡಿ, “ಫೀಲ್ಡ್ ಅಂಪೈರ್ ಮೊದಲು ಔಟ್ ನೀಡಿದ ಬಳಿಕ, ಮೂರನೇ ಅಂಪೈರ್ ಅದನ್ನು ರದ್ದುಗೊಳಿಸಬೇಕೆಂದರೆ ನಿರ್ದಿಷ್ಟ ಸಾಕ್ಷಿ ಒದಗಿಸಬೇಕು” ಎಂದು ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿದರು.
“ಒಂದು ವೇಳೆ ಶುಭಮನ್ ಗಿಲ್ ಸ್ಥಾನದಲ್ಲಿ ಸ್ಟೀವನ್ ಸ್ಮಿತ್ ಇದ್ದಿದ್ದರೆ, ಮೂರನೇ ಅಂಪೈರ್ ಖಂಡಿತವಾಗಲೂ ನಾಟ್‌ಔಟ್ ನೀಡುತ್ತಿದ್ದರು” ಎಂದು ರವಿ ಶಾಸ್ತ್ರಿ ಕಾಮೆಂಟರಿ ವೇಳೆ ತಿಳಿಸಿದ್ದರು.
“ನೀವು ಇದನ್ನು ಹೇಗೆ ನೋಡುತ್ತೀರಿ ಎಂಬುದು ಇದಾಗಿದೆ. ಕ್ಯಾಮೆರಾನ್ ಗ್ರೀನ್ ತಮ್ಮ ಕೈಬೆರಳುಗಳಿಂದ ಚೆಂಡನ್ನು ಅದರ ಕೆಳ ಭಾಗದಿಂದ ಹಿಡಿದಿದ್ದರು. ಚೆಂಡಿನ ಯಾವುದೇ ಭಾಗ ನೆಲಕ್ಕೆ ತಾಗಿದ್ದರೆ, ಆಗ ನೆಲ ಚೆಂಡನ್ನು ಕೈಯಲ್ಲಿ ಉಳಿಯುವಂತೆ ಮಾಡುತ್ತದೆ. ಇದನ್ನು ಗಮನಿಸಿದ ಅಂಪೈರ್ ಸಹಜವಾಗಿ ನಾಟ್ ಔಟ್ ನೀಡಬೇಕಾಗುತ್ತದೆ” ಎಂದು ಕಾಮೆಂಟರಿ ಬಾಕ್ಸ್‌ನಲ್ಲಿ ಕುಳಿತಿದ್ದ ಶ್ರೀಲಂಕಾ ಮಾಜಿ ಆಟಗಾರ ಕುಮಾರ ಸಂಗಕ್ಕಾರ ಹೇಳಿದ್ದಾರೆ.
ಶುಭಮನ್ ಗಿಲ್ ಸ್ವತಃ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ನೆಲಕ್ಕೆ ತಾಕಿರುವ ಭಾವಚಿತ್ರದೊಂದಿಗೆ ಬೇಸರದ ಚಿಹ್ನೆಯನ್ನು ಪ್ರಕಟಿಸಿಕೊಂಡಿದ್ದಾರೆ.
ಭಾರತ ತಂಡ 40 ಓವರ್‌ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ. ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ವಿರಾಟ್ ಕೊಹ್ಲಿ (44*) ಹಾಗೂ ಅಜಿಂಕ್ಯ ರಹಾನೆ (20*) ಕ್ರೀಸ್‌ನಲ್ಲಿದ್ದಾರೆ. ಕೊನೆಯ ದಿನದಲ್ಲಿ ಪಂದ್ಯವನ್ನು ಗೆಲ್ಲಲು ಭಾರತ ಟೆಸ್ಟ್ ಚಾಂಪಿಯನ್ ಪಟ್ಟವೇರಲು 444 ಗುರಿಯೊಂದಿಗೆ ಇನ್ನೂ 280 ರನ್‌ಗಳು ಬೇಕಿದೆ. ಏಳು ವಿಕೆಟ್‌ಗಳು ಬಾಕಿಯಿವೆ.