ದಿಗ್ಗಜ ಫುಟ್‌ಬಾಲ್ ಆಟಗಾರ, ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.
ಮಂಗಳವಾರ ರಾತ್ರಿ ಲೌಗರ್ಡಲ್ಸ್ವೊಲ್ಲೂರ್‌ನಲ್ಲಿ ನಡೆದ ಯೂರೋ-2024ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪೋರ್ಚುಗಲ್ ತಂಡ, ಆತಿಥೇಯ ಐಸ್‌ಲ್ಯಾಂಡ್ ವಿರುದ್ಧ 1-0 ಗೋಲುಗಳ ರೋಚಕ ಗೆಲುವು ಸಾಧಿಸಿದೆ.
200ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಖ್ಯಾತ ಆಟಗಾರ ರೊನಾಲ್ಡೊ, ಪಂದ್ಯದ 89ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ತಂಡಕ್ಕೆ ಮಹತ್ವದ ಜಯ ತಂದುಕೊಟ್ಟರು. ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ರೊನಾಲ್ಡೊ ದಾಖಲಿಸಿದ 123ನೇ ಗೋಲು ಇದಾಗಿತ್ತು. ಆ ಮೂಲಕ ಅರ್ಜೆಂಟಿನಾದ ನಾಯಕ ಲಿಯೋನೆಲ್ ಮೆಸ್ಸಿ (103), ಜೊತೆಗಿನ ಗೋಲುಗಳ ಅಂತರವನ್ನು (20) ಮತ್ತಷ್ಟು ಹೆಚ್ಚಿಸಿದ್ದಾರೆ.
ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಕಾಣಿಸಿಕೊಂಡ ಆಟಗಾರ ಎಂಬ ದಾಖಲೆ ನಿರ್ಮಿಸಿದ ರೊನಾಲ್ಡೊ, ಪಂದ್ಯ ಪ್ರಾರಂಭವಾಗುವುದಕ್ಕೂ ಮುನ್ನ ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣಪತ್ರ ಸ್ವೀಕರಿಸಿದರು.
2016ರಲ್ಲಿ ಪೋರ್ಚುಗಲ್ ತಂಡ ಚೊಚ್ಚಲ ಯೂರೊ ಕಪ್ ಪ್ರಶಸ್ತಿ ಗೆಲ್ಲುವಲ್ಲಿಯೂ ರೊನಾಲ್ಡೊ ಪ್ರಮುಖ ಪಾತ್ರ ವಹಿಸಿದ್ದರು.
ಅಂತಿಮ ನಿಮಿಷದಲ್ಲಿ ಗೋಲು!
ಐಸ್‌ಲ್ಯಾಂಡ್ ಮತ್ತು ಪೋರ್ಚುಗಲ್ ತಂಡಗಳ ನಡುವಿನ ಪಂದ್ಯ ಸಮಬಲದ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಪಂದ್ಯದ ಪೂರ್ಣಾವಧಿಯ ಅಂತಿಮ ನಿಮಿಷದಲ್ಲಿ (89) ರೊನಾಲ್ಡೊ ಗೋಲು ದಾಖಲಿಸಿದ್ದರು. ಆದರೆ ಎದುರಾಳಿ ತಂಡದ ಆಟಗಾರರು ಆಫ್‌ಸೈಡ್ ಮನವಿ ಮಾಡಿದ್ದ ಕಾರಣ ವಿಡಿಯೋ ರಿಪ್ಲೆ (ವಿಎಆರ್) ಮೂಲಕ ರೆಫ್ರಿ ಗೋಲು ಪರಿಶೀಲಿಸಿದ ಬಳಿಕವಷ್ಟೇ ಪೋರ್ಚುಗಲ್ ತಂಡಕ್ಕೆ ಗೋಲು ಅನುಮತಿಸಿದರು.
ಐಸ್‌ಲ್ಯಾಂಡ್ ಆಟಗಾರನಿಗೆ ರೆಡ್‌ಕಾರ್ಡ್
ಅರ್ಹತಾ ಸುತ್ತಿನ ಪಂದ್ಯದ 80ನೇ ನಿಮಿಷದಲ್ಲಿ ಐಸ್‌ಲ್ಯಾಂಡ್ ತಂಡದ ಆಟಗಾರ ವಿಲ್ಲಮ್ ವಿಲ್ಲಮ್ಸನ್ ಕೆಂಪು ಕಾರ್ಡ್ ಪಡೆದ ಪರಿಣಾಮ ಮೈದಾನದಿಂದ ಹೊರನಡೆಯಬೇಕಾಯಿತು. ಹೀಗಾಗಿ ಅಂತಿಮ 10 ನಿಮಿಷಗಳ ಕಾಲ ಆತಿಥೇಯ ತಂಡವು 10 ಮಂದಿ ಆಟಗಾರರೊಂದಿಗೆ ಆಡಬೇಕಾಯಿತು. ಅದಾಗಿಯೂ ಪಂದ್ಯದುದ್ದಕ್ಕೂ ಪೋರ್ಚುಗಲ್ ತಂಡಕ್ಕೆ ಐಸ್‌ಲ್ಯಾಂಡ್ ಕಠಿಣ ಪೈಪೋಟಿ ಒಡ್ಡಿತ್ತು. ಹೀಗಾಗಿ ರೊನಾಲ್ಡೊ ಸಾರಥ್ಯದ ತಂಡಕ್ಕೆ ಕೇವಲ ಮೂರು ಶಾಟ್ ಆನ್ ಟಾರ್ಗೆಟ್ ಮಾತ್ರ ದಾಖಲಿಸಲು ಸಾಧ್ಯವಾಯಿತು.