ಯುರೋಪ್‌ನ ಅತಿ ದೊಡ್ಡ ಫುಟ್ಬಾಲ್ ಪಂದ್ಯಾವಳಿ ಯೂರೋ ಕಪ್ ಪ್ರಶಸ್ತಿಯನ್ನು ಸ್ಪೇನ್ ನಾಲ್ಕನೇ ಬಾರಿ ಮುಡಿಗೇರಿಸಿಕೊಂಡಿತು. ಈ ಮೂಲಕ ಅತೀ ಹೆಚ್ಚು ಬಾರಿ ಯೂರೋ ಕಪ್ ಗೆದ್ದ ತಂಡವಾಗಿ ಹೊರಹೊಮ್ಮಿತು.
ಭಾನುವಾರ ಜುಲೈ 14ರ ತಡರಾತ್ರಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆದ 2024ರ ಯುರೋ ಫೈನಲ್ ಪಂದ್ಯದಲ್ಲಿ ಸ್ಪೇನ್ 2-1 ಗೋಲುಗಳ ಅಂತರದಿಂದ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಸೋಲಿಸಿ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು.
47ನೇ ನಿಮಿಷದಲ್ಲಿ ಸ್ಪೇನ್‌ನ ನಿಕೊ ವಿಲಿಯಮ್ಸ್ ಆರಂಭಿಕ ಗೋಲು ಗಳಿಸಿದರೆ, ಇಂಗ್ಲೆಂಡ್‌ನ ಕೋಲ್ ಪಾಮರ್ ಇಂಗ್ಲೆಂಡ್ ತಂಡಕ್ಕೆ ಗೋಲುಗಳಿಸಿ ಸಮಬಲ ಸಾಧಿಸಲು ನೆರವಾದರು. ಕೊನೆಯ ಹಂತದ 86ನೇ ನಿಮಿಷದಲ್ಲಿ ಮೈಕೆಲ್ ಒಯಾರ್ಜಾಬಲ್ ಗೋಲು ಬಾರಿಸಿ ಸ್ಪೇನ್ ತಂಡಕ್ಕೆ ಗೆಲುವು ತಂದುಕೊಟ್ಟರು. ಯುರೋ 2024ರ ಫೈನಲ್‌ನಲ್ಲಿ ಸ್ಪೇನ್ ಗೆದ್ದು ಬೀಗಲು ಬದಲಿ ಆಟಗಾರ ಮೈಕೆಲ್ ಒಯಾರ್ಜಾಬಲ್ ನಾಟಕೀಯವಾಗಿ ಪಂದ್ಯ ವಿಜೇತರೆನಿಸಿದರು.
ಆರು ದಶಕಗಳಲ್ಲಿ ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸಿದರೂ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವ ತಮ್ಮ ಎದುರಾಳಿಗಳ ಕನಸನ್ನು ನುಚ್ಚುನೂರು ಮಾಡಿದರು. 2021ರಲ್ಲಿಯೂ ಇಂಗ್ಲೆಂಡ್ ಫೈನಲ್‌ನಲ್ಲಿ ಎಡವಿತ್ತು. ಮೂರು ಬಾರಿ ಫೈನಲ್ ಪ್ರವೆಶಿಸಿದರೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ.
ಈ ಸುದ್ದಿ ಓದಿದ್ದೀರಾ? ಜೊಕೊವಿಚ್ ಮಣಿಸಿದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್‌ಗೆ ವಿಂಬಲ್ಡನ್ ಕಿರೀಟ
ಮೊದಲಾರ್ಧದಲ್ಲಿ ಸ್ಪೇನ್ ಪ್ರಭಾವಿ ಮಿಡ್‌ಫೀಲ್ಡರ್ ರೊಡ್ರಿ ಗಾಯಗೊಂಡು ಹೊರನಡೆದರು. ಆದರೆ ಎರಡು ನಿಮಿಷಗಳಲ್ಲಿ ಮರುಪ್ರಾರಂಭಿಸಿದಾಗ ನಿಕೊ ವಿಲಿಯಮ್ಸ್ ಮೂಲಕ ಮೊದಲ ಮುನ್ನಡೆ ಸಾಧಿಸಿತು. ನಂತರ ಇಂಗ್ಲೆಂಡ್‌ನ ಬದಲಿ ಆಟಗಾರ ಕೋಲ್ ಪಾಲ್ಮರ್ 73ನೇ ನಿಮಿಷದಲ್ಲಿ ಗೋಲು ಬಾರಿಸಿ ಇಂಗ್ಲೆಂಡ್ ಪುನರಾಗಮನ ಮಾಡಿತು.
ಹೋರಾಟಕ್ಕೆ ಪ್ರವೇಶಿಸಿದ ಕೆಲವೇ ನಿಮಿಷಗಳ ನಂತರ, ಮೈಕೆಲ್ ಒಯಾರ್ಜಾಬಲ್ 86ನೇ ನಿಮಿಷದಲ್ಲಿ ಬಾರಿಸಿದ ಗೋಲು ಸ್ಪೇನ್‌ಗೆ ದಾಖಲೆಯ ನಾಲ್ಕನೇ ಯುರೋಪಿಯನ್ ಚಾಂಪಿಯನ್‌ಶಿಪ್ ಕಿರೀಟ ಪಡೆಯಲು ಸಹಾಯ ಮಾಡಿತು.
ಈ ಗೆಲುವಿನೊಂದಿಗೆ ಸ್ಪೇನ್ ತಂಡ ನಾಲ್ಕನೇ ಯುರೋ ಪ್ರಶಸ್ತಿಯನ್ನು ಗೆದ್ದು ಜರ್ಮನಿಗಿಂತ ಮುಂದಿದೆ. ಇದು ಕಳೆದ ಐದು ಆವೃತ್ತಿಗಳಲ್ಲಿ ಸ್ಪೇನ್‌ಗೆ ಮೂರನೇ ಯುರೋ ಪ್ರಶಸ್ತಿಯಾಗಿದೆ. 2012ರಲ್ಲಿ ಯುರೋ ಗೆದ್ದ ನಂತರ ಸ್ಪೇನ್‌ಗೆ ಯುರೋಪಿಯನ್ ವಿಜಯೋತ್ಸವದ ವೈಭವವು 12 ವರ್ಷಗಳ ನಂತರ ಬಂದಿದೆ.
ಅತ್ಯಂತ ಹೆಚ್ಚು ಯೂರೋ ಕಪ್ ಪ್ರಶಸ್ತಿ ಪಡೆದ ದೇಶಗಳಲ್ಲಿ 4 ಗೆಲುವಿನೊಂದಿಗೆ ಸ್ಪೇನ್ ಮೊದಲ ಸ್ಥಾನದಲ್ಲಿದೆ. ಮೂರು ಬಾರಿ ಜಯಗಳಿಸಿರುವ ಜರ್ಮನಿ ಎರಡನೇ ಸ್ಥಾನದಲ್ಲಿದೆ. ಇಟಲಿ ಮತ್ತು ಫ್ರಾನ್ಸ್ ತಲಾ ಎರಡು ಬಾರಿ ಗೆದ್ದಿದ್ದರೆ, ರಷ್ಯಾ, ಜೆಕ್ ರಿಪಬ್ಲಿಕ್, ಪೋರ್ಚುಗಲ್ , ಸ್ಲೋವಾಕಿಯಾ, ಡೆನ್ಮಾರ್ಕ್,ನೆದರ್ಲ್ಯಾಂಡ್ಸ್ ಗ್ರೀಸ್ ತಲಾ ಒಮ್ಮೆ ಯೂರೋ ಕಪ್ ಗೆದ್ದಿವೆ.
