ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಅವರ ಶತಕಗಳ ನೆರವಿನಿಂದ 255 ರನ್‌ಗಳ ಮುನ್ನಡೆ ಸಾಧಿಸಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ನೀಡಿದ 218 ರನ್‌ಗಳಿಗೆ ಉತ್ತರವಾಗಿ ಟೀಂ ಇಂಡಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 120 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 473 ರನ್‌ಗಳನ್ನು ಕಲೆ ಹಾಕಿತು.
164 ರನ್‌ಗಳ ಎರಡನೇ ವಿಕೆಟ್ ಜೊತೆಯಾಟವಾಡಿದ ಶುಭಮನ್‌ಗಿಲ್ ಹಾಗೂ ರೋಹಿತ್ ಶರ್ಮಾ ಶತಕವನ್ನು ಪೂರೈಸಿದರು. ಗಿಲ್ 110(12 ಬೌಂಡರಿ, 5 ಸಿಕ್ಸರ್) ಹಾಗೂ ರೋಹಿತ್ ಶರ್ಮಾ 103(13 ಬೌಂಡರಿ ಮೂರು ಸಿಕ್ಸರ್) ರನ್ ಬಾರಿಸಿದರು.
ಮೊದಲ ದಿನದಲ್ಲಿ ಯಶಸ್ವಿ ಜೈಸ್ವಾಲ್ ಅರ್ಧ ಶತಕ ಗಳಿಸಿದ್ದರೆ, ಎರಡನೇ ದಿನದಲ್ಲಿ ದೇವದತ್ ಪಡಿಕ್ಕಲ್, ಸರ್ಪರಾಜ್ ಖಾನ್ ಅರ್ಧ ಶತಕ ಪೂರೈಸಿದರು. 56(8 ಬೌಂಡರಿ, 1 ಸಿಕ್ಸರ್) ರನ್‌ಗಳೊಂದಿಗೆ ತಮ್ಮ ಮೂರನೇ ಟೆಸ್ಟ್‌ನಲ್ಲಿ ಸರ್ಪರಾಜ್ ಖಾನ್ ಮೂರನೇ ಅರ್ಧ ಶತಕ ಗಳಿಸಿದರು.
ಈ ಸುದ್ದಿ ಓದಿದ್ದೀರಾ? ಒಂದು ನೆನಪು | ಲಂಕೇಶರಿಗೆ ‘ಪತ್ರಿಕೆ’ ಜೀವನ್ಮರಣದ ಪ್ರಶ್ನೆಯಾಗಿತ್ತೇ?
ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಆಡಿದ ಕರ್ನಾಟಕದ ಆಟಗಾರ ದೇವದತ್ ಪಡಿಕ್ಕಲ್ ಮೊದಲ ಪಂದ್ಯದಲ್ಲಿಯೇ ಅರ್ಧ ಶತಕ ಸಿಡಿಸಿದರು. 103 ಚೆಂಡುಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್‌ನೊಂದಿಗೆ 65 ರನ್ ಕಲೆ ಹಾಕಿದರು.
45 ರನ್‌ಗಳ ಒಂಭತ್ತನೆ ವಿಕೆಟ್ ಜೊತೆಯಾಟದೊಂದಿಗೆ ಆಟವಾಡುತ್ತಿರುವ ಕುಲ್‌ದೀಪ್ ಯಾದವ್ (27) ಹಾಗೂ ಜಸ್‌ಪ್ರೀತ್ ಬುಮ್ರಾ(19) ಕ್ರೀಸ್‌ನಲ್ಲಿ ಉಳಿದಿದ್ದಾರೆ
ರೋಹಿತ್ ಹಲವು ದಾಖಲೆಗಳು
ಟೆಸ್ಟ್ ಮಾದರಿಯಲ್ಲಿ 12ನೇ ಶತಕಗಳನ್ನು ಪೇರಿಸಿರುವ ನಾಯಕ ರೋಹಿತ್ ಹಲವು ದಾಖಲೆಗಳನ್ನು ತಮ್ಮ ಮಡಿಲಿಗೆ ಸೇರಿಸಿಕೊಂಡರು. ಇಂಗ್ಲೆಂಡ್ ಪರ ಆರಂಭಿಕ ಆಟಗಾರನಾಗಿ 4 ಶತಕ ಗಳಿಸಿ ಸುನಿಲ್ ಗವಾಸ್ಕರ್ ದಾಖಲೆಯನ್ನು ಸರಿಗಟ್ಟಿದರು.
ಆರಂಭಿಕ ಆಟಗಾರನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 43 ಶತಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲೆರಡು ಸ್ಥಾನದಲ್ಲಿ ಡೇವಿಡ್ ವಾರ್ನರ್(49) ಹಾಗೂ ಸಚಿನ್ ತೆಂಡೂಲ್ಕರ್(45) ಇದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ಪರ ಶೋಹೇಬ್ ಬಷೀರ್ 164/4, ಟಾಮ್ ಹಾರ್ಟಲಿ 122/2 ಹಾಗೂ ಜೇಮ್ಸ್ ಆಂಡರ್‌ಸನ್ ಮತ್ತು ನಾಯಕ ಬೆನ್ ಸ್ಟೋಕ್ಸ್ ತಲಾ ಒಂದು ವಿಕೆಟ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಮೊದಲ ಇನಿಂಗ್ಸ್ 218
ಭಾರತ ಮೊದಲ ಇನಿಂಗ್ಸ್ 473/8
