- ಎಲ್ಲ 10 ವಿಕೆಟ್‌ಗಳು ಪಾಕಿಸ್ತಾನದ ವೇಗಿಗಳ ಪಾಲು; ವಿಶಿಷ್ಟ ದಾಖಲೆ
- ಮಳೆಯಿಂದಾಗಿ ರದ್ದಾದ ಪಂದ್ಯದಲ್ಲಿ ಭಾರತ 48.5 ಓವರ್‌ಗಳಲ್ಲಿ 266 ರನ್
ಏಷ್ಯಾಕಪ್ 2023ರಲ್ಲಿ ಶನಿವಾರ ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಪೂರ್ಣಗೊಳ್ಳದೆ ಮಳೆಯಿಂದಾಗಿ ರದ್ದಾಯಿತು.
ಟೀಮ್ ಇಂಡಿಯಾದ ಬ್ಯಾಟಿಂಗ್ ಇನ್ನಿಂಗ್ಸ್ ಮುಕ್ತಾಯದ ಬಳಿಕ ಶುರುವಾದ ಮಳೆ ನಿಲ್ಲಲೇ ಇಲ್ಲ. ಕೆಲ ಹೊತ್ತು ಕಾದರೂ ಪಾಕಿಸ್ತಾನಕ್ಕೆ ಟಾರ್ಗೆಟ್ ಬೆನ್ನಟ್ಟಲು ಮಳೆ ಅವಕಾಶ ನೀಡಲಿಲ್ಲ. ಹೀಗಾಗಿ ಅಂತಿಮವಾಗಿ ಪಂದ್ಯವನ್ನು ರದ್ದು ಮಾಡಲಾಯಿತು.
ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗಿದೆ. ಹೀಗಾಗಿ ಭಾರತ ಒಂದು ಅಂಕ ಸಂಪಾದಿಸಿದ್ದರೆ, ಉದ್ಘಾಟನಾ ಪಂದ್ಯದಲ್ಲಿ ನೇಪಾಳದ ವಿರುದ್ಧ ಗೆದ್ದಿದ್ದ ಕಾರಣಕ್ಕೆ ಪಾಕಿಸ್ತಾನ ಒಟ್ಟು ಮೂರು ಪಾಯಿಂಟ್ ಸಂಪಾದಿಸಿದೆ. ಈ ಮೂಲಕ ಬಾಬರ್ ಆಝಂ ಪಡೆ ಸೂಪರ್-4 ಹಂತಕ್ಕೂ ತೇರ್ಗಡೆ ಆಗಿದೆ.
ಇದೀಗ ಕೇವಲ ಒಂದು ಅಂಕ ಹೊಂದಿರುವ ಭಾರತ, ಸೂಪರ್ ಫೋರ್ ಹಂತಕ್ಕೆ ತೇರ್ಗಡೆಯಾಗಲು ಸೆ.4 ರಂದು ತನ್ನ ಮುಂದಿನ ಪಂದ್ಯದಲ್ಲಿ ನೇಪಾಳವನ್ನು ಸೋಲಿಸಬೇಕಿದೆ.
ಈ ನಡುವೆ ಇದೇ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಆಲೌಟ್ ಮಾಡಿದ್ದ ಪಾಕಿಸ್ತಾನ ಬೌಲರ್‌ಗಳು ಹೊಸ ದಾಖಲೆ ಬರೆದಿದ್ದಾರೆ.
ಶನಿವಾರದ ಏಷ್ಯಾಕಪ್ ಮುಖಾಮುಖಿಯಲ್ಲಿ ಪಾಕಿಸ್ತಾನದ ವೇಗಿಗಳಾದ ಶಾಹೀನ್ ಶಾ ಅಫ್ರಿದಿ, ಹಾರಿಸ್ ರವೂಫ್ ಮತ್ತು ನಸೀಮ್ ಶಾ ಅವರು ಎಲ್ಲ 10 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಪಂದ್ಯಾವಳಿಯಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.
ರೋಹಿತ್ ಪಡೆಯನ್ನು 266 ಕ್ಕೆ ನಿರ್ಬಂಧಿಸಿದ್ದ ಈ ಮೂವರು ವೇಗಿಗಳು, ಏಷ್ಯಾ ಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಇನ್ನಿಂಗ್ಸ್‌ನ ಎಲ್ಲ 10 ವಿಕೆಟ್‌ಗಳು ಕೇವಲ ವೇಗಿಗಳ ಪಾಲಾಗಿದೆ. ಕೇವಲ ವೇಗಿಗಳೇ ಮಾತ್ರ ಎಲ್ಲ ವಿಕೆಟ್ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಪಾಕ್‌ನ ಮೂವರು ಸ್ಪಿನ್ನರ್‌ಗಳು ಬೌಲಿಂಗ್ ನಡೆಸಿದ್ದಾರಾದರೂ, ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು.
ನಿನ್ನೆಯ ಪಂದ್ಯದಲ್ಲಿ ಪಾಕ್ ಪರ ಬೌಲಿಂಗ್‌ನಲ್ಲಿ ವೇಗಿಗಳಾದ ಶಾಹೀನ್ ಅಫ್ರಿದಿ 35 ರನ್ ನೀಡಿ 4 ವಿಕೆಟ್ ಗಳಿಸಿ ಯಶಸ್ವಿಯಾದರೆ, ಹಾರಿಸ್ ರವೂಫ್ ನಸೀಂ ಶಾ ತಲಾ ಮೂರು ವಿಕೆಟ್‌ಗಳನ್ನು ಪಡೆಯುವಲ್ಲಿ ಸಫಲರಾಗಿದ್ದರು.