ನೊವಾಕ್ ಜೊಕೊವಿಕ್ ಟೆನಿಸ್‌ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಭಾನುವಾರ ನಡೆದ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಗೆಲ್ಲುವ ಮೂಲಕ, 23ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಟೆನಿಸ್ ಇತಿಹಾಸದಲ್ಲಿ ಅತಿಹೆಚ್ಚು ಗ್ರ್ಯಾಂಡ್ ಸ್ಲಾಮ್ ಕಿರೀಟ ಗೆದ್ದ ದಾಖಲೆ (22), ಇದುವರೆಗೂ ಸ್ಪೇನ್‌ನ ರಾಫೆಲ್ ನಡಾಲ್ ಹೆಸರಿನಲ್ಲಿತ್ತು. ಇದೀಗ 35 ವರ್ಷ ವಯಸ್ಸಿನ ಸರ್ಬಿಯಾದ ದಿಗ್ಗಜ ಆಟಗಾರ ಜೊಕೊವಿಕ್, ನಡಾಲ್‌ರನ್ನು ಹಿಂದಿಕ್ಕಿದ್ದಾರೆ.
ರೋಲಂಡ್ ಗ್ಯಾರೋಸ್‌ನ ಫಿಲಿಪ್ ಚಾಟ್ರಿಯರ್ ಕೋರ್ಟ್‌ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ನಾರ್ವೆಯ 4ನೇ ಶ್ರೇಯಾಂಕದ ಕ್ಯಾಸ್ಪರ್ ರುಡ್ ಅವರನ್ನು ಜೊಕೊವಿಕ್ ನೇರ ಸೆಟ್‌ಗಳ (7-6, 6-3, 7-5) ಅಂತರದಲ್ಲಿ ಮಣಿಸಿದರು.
3 ಗಂಟೆ 13 ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಕ್ಯಾಸ್ಪರ್ ರುಡ್, ಜೊಕೊವಿಕ್‌ಗೆ ಪ್ರಬಲ ಸವಾಲೊಡ್ಡಿದ್ದರು. ಮೊದಲ ಸೆಟ್ ಟೈ ಬ್ರೇಕರ್‌ಗೆ ಸಾಗಿತ್ತು. ಎರಡನೇ ಸೆಟ್‌ನಲ್ಲಿ ಜೊಕೊವಿಕ್ ಸ್ಪಷ್ಟ ಮೇಲೂಗೈ ಸಾಧಿಸಿದ್ದರು. ಅಂತಿಮ ಮತ್ತು ನಿರ್ಣಾಯಕ ಸೆಟ್‌ನಲ್ಲೂ ಜೊಕೊವಿಕ್ ಕೈ ಮೇಲಾಯಿತು.
14 ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ಆಗಿರುವ, ʻಆವೆ ಮಣ್ಣಿನ ಅಂಗಳದ ಒಡೆಯʼ ಖ್ಯಾತಿಯ ರಾಫೆಲ್ ನಡಾಲ್, ಗಾಯದ ಕಾರಣದಿಂದ ಇದೇ ಮೊದಲ ಬಾರಿ ಟೂರ್ನಿಯಿಂದ ಹಿಂದೆ ಸರಿದಿದ್ದರು. ಇದು ಜೊಕೊವಿಕ್ ದಾಖಲೆಯ ಹಾದಿಯನ್ನು ಸುಗಮಗೊಳಿಸಿತ್ತು.
3ನೇ ಫ್ರೆಂಚ್ ಓಪನ್ ಕಿರೀಟ ಗೆಲ್ಲುವ ಮೂಲಕ ಜೊಕೊವಿಕ್, ಎಲ್ಲಾ 4 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಕನಿಷ್ಠ ಮೂರು ಬಾರಿ ಗೆದ್ದ ಮೊದಲ ಆಟಗಾರ ಎಂಬ ದಾಖಲೆಯನ್ನೂ ತನ್ನದಾಗಿಸಿಕೊಂಡರು. ತಮ್ಮ ಕೊನೆಯ 7 ಗ್ರ್ಯಾಂಡ್ ಸ್ಲ್ಯಾಮ್ ಫೈನಲ್‌ಗಳ ಪೈಕಿ ಆರರಲ್ಲೂ ದಿಗ್ವಿಜಯ ಸಾಧಿಸಿರುವ ಜೊಕೊವಿಕ್, ಕನಿಷ್ಠ 25 ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವುದು ಬಹುತೇಕ ಖಚಿತವಾಗಿದೆ.
ಮಹಿಳಾ ಸಿಂಗಲ್ಸ್‌ನಲ್ಲಿ 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳೊಂದಿಗೆ ನಿವೃತ್ತಿ ಘೋಷಿಸಿದ್ದ ಟೆನಿಸ್ ದಂತಕಥೆ ಸೆರೆನಾ ವಿಲಿಯಮ್ಸ್ ಸಾಧನೆಯನ್ನು ಜೊಕೊವಿಕ್ ಸರಿಗಟ್ಟಿದ್ದಾರೆ.
ರೋಜರ್ ಫೆಡರರ್ 2010 ರಲ್ಲಿ 16 ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಾಗ, ನಡಾಲ್ 9 ಮತ್ತು ಜೊಕೊವಿಕ್ ಕೇವಲ 1 ಗ್ರ್ಯಾಂಡ್ ಸ್ಲಾಮ್ ಕಿರೀಟವನ್ನು ಹೊಂದಿದ್ದರು. ಇದೀಗ 13 ವರ್ಷಗಳ ಬಳಿಕ ಜೊಕೊವಿಕ್, 25 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆಲ್ಲುವ ಅವಕಾಶ ಹೊಂದಿದ್ದಾರೆ.